Tuesday, February 27, 2018

ಗುಣತ್ರಯಗಳು

ವ್ಯಾಪಾರಿಯೊಬ್ಬ ಕಾಡಿನಲ್ಲಿ ಹೋಗುತ್ತಿದ್ದ. ಮೂವರು ಕಳ್ಳರು ಅವನ ಮೇಲೆ ದಾಳಿ ಮಾಡಿದರು. ವ್ಯಾಪಾರಿಯ ಬಳಿ ಇದ್ದ ಎಲ್ಲವನ್ನೂ ದೋಚಿದರು.

ಮೊದಲನೇ ಕಳ್ಳ ಹೇಳಿದ - ಇವನನ್ನು ಕೊಂದುಬಿಡೋಣ. ಜೀವಂತ ಬಿಟ್ಟರೆ ನಮಗೇ ಕಷ್ಟ.

ಎರಡನೇ ಕಳ್ಳ ಹೇಳಿದ - ಇವನನ್ನು ಕೊಲ್ಲುವದು ಬೇಡ. ಮರಕ್ಕೆ ಕಟ್ಟಿಹಾಕಿ ಹೋಗೋಣ. ನೀರು, ಆಹಾರ ಸಿಗದೇ ತಂತಾನೇ ಸಾಯುತ್ತಾನೆ. ಅಥವಾ ಕಾಡುಪ್ರಾಣಿಗಳು ತಿಂದುಮುಗಿಸುತ್ತವೆ. ಇವನನ್ನು ಕೊಲ್ಲುವ ರಗಳೆ ನಮಗ್ಯಾಕೆ?

ಮೂರನೇಯ ಕಳ್ಳ ಏನೋ ವಿಚಾರ ಮಾಡಿದ. ಆದರೆ ಏನೂ ಹೇಳಲಿಲ್ಲ. ಎರಡನೇ ಕಳ್ಳ ಹೇಳಿದಕ್ಕೆ ಒಪ್ಪಿಗೆ ಸೂಚಿಸಿದ. ಮೊದಲನೇ ಕಳ್ಳ ಆಗಲೂ ಆ ವ್ಯಾಪಾರಿಯನ್ನು ಕೊಂದೇಬಿಡೋಣ ಎಂದು ಒತ್ತಾಯಿಸಿದ. ಆದರೆ ಉಳಿದಿಬ್ಬರು ಒಪ್ಪದ ಕಾರಣ ಮನಸ್ಸಿಲ್ಲದೇ ಒಪ್ಪಿದ.

ವ್ಯಾಪಾರಿಯನ್ನು ಮರಕ್ಕೆ ಕಟ್ಟಿಹಾಕಿ ಕಳ್ಳರು ಹೊರಟುಹೋದರು.

ಅತಿ ದೊಡ್ಡ ಆಶ್ಚರ್ಯವೆಂಬಂತೆ ಎಷ್ಟೋ ಘಂಟೆಗಳ ನಂತರ ಮೂರನೇ ಕಳ್ಳ ವಾಪಸ್ ಬಂದ. ಮರಕ್ಕೆ ಕಟ್ಟಲ್ಪಟ್ಟಿದ್ದ ವ್ಯಾಪಾರಿಯನ್ನು ಬಂಧಮುಕ್ತಗೊಳಿಸಿದ. ವ್ಯಾಪಾರಿಗೆ ಮನೆಗೆ ಹೋಗುವ ದಾರಿ ಗೊತ್ತಿಲ್ಲ ಎಂದು ಕಳ್ಳನಿಗೆ ಗೊತ್ತಿತ್ತು. ಹಾಗಾಗಿ ವ್ಯಾಪಾರಿಯನ್ನು ಅವನ ಊರಿನ ತನಕ ಕರೆದುಕೊಂಡು ಬಂದ.

ಇವನು ಕಳ್ಳನಾಗಿದ್ದರೂ ಒಳ್ಳೆ ಮನಸ್ಸಿರುವ ಕಳ್ಳ ಅಂದುಕೊಂಡ ವ್ಯಾಪಾರಿ ಮನೆಗೆ ಬಂದು ಅತಿಥಿಸತ್ಕಾರ ಸ್ವೀಕರಿಸುವಂತೆ ಕೇಳಿಕೊಂಡ. ಕಳ್ಳ ಒಪ್ಪಲಿಲ್ಲ. ಊರ ಒಳಗೆ ಬಂದರೆ ಪೊಲೀಸರು ಬಂಧಿಸಿಯಾರು ಎಂಬ ಹೆದರಿಕೆಯಿಂದ ವ್ಯಾಪಾರಿಯ ಮನೆಗೆ ಬರದೇ ಹಾಗೇ ಹೋಗಿಬಿಟ್ಟ.

ವ್ಯಾಪಾರಿ ಧನಕನಕ ಕಳೆದುಕೊಂಡಿದ್ದ. ಆದರೆ ಜೀವ ಉಳಿದಿತ್ತು.

'ಕೊಂದು ಬಿಡೋಣ' ಅಂದಿದ್ದ ಮೊದಲನೇ ಕಳ್ಳ ತಾಮಸಿಕ ಗುಣ.

'ಕೊಲ್ಲುವದೇನೂ ಬೇಡ. ಮರಕ್ಕೆ ಕಟ್ಟಿಹಾಕಿ ಹೋಗೋಣ' ಅಂದಿದ್ದ ಎರಡನೇ ಕಳ್ಳ ರಾಜಸಿಕ ಗುಣ.

ಕೊಲ್ಲದೇ ಕಟ್ಟಿಹಾಕಿ ಹೋದ ಮೇಲೂ ವಾಪಸ್ ಬಂದು, ಬಂಧನದಿಂದ ಬಿಡಿಸಿ, ಮನೆಮುಟ್ಟಿಸಿ ಹೋದ 'ಒಳ್ಳೆಯ' ಕಳ್ಳ ಸಾತ್ವಿಕ ಗುಣ.

ಮಾನವಗುಣಗಳಲ್ಲಿ ಸಾತ್ವಿಕ ಗುಣ ಶ್ರೇಷ್ಠ ಎನ್ನುತ್ತಾರೆ. ಆದರೆ ಮುಕ್ತಿ ಬೇಕಾದವರು ಎಲ್ಲ ಗುಣಗಳನ್ನೂ ಮೀರಬೇಕು. ಗುಣಾತೀತರಾಗಬೇಕು. ಏಕೆಂದರೆ ಕಳ್ಳ ಅದೆಷ್ಟೇ ಒಳ್ಳೆಯವನಾದರೂ ಕಳ್ಳನೇ. ಆತ್ಮಜ್ಞಾನವನ್ನು ಕದ್ದುಬಿಡುತ್ತಾನೆ.

ರಾಮಕೃಷ್ಣ ಪರಮಹಂಸರ ಶಿಷ್ಯರೊಬ್ಬರ ಹೆಸರು ಸ್ವಾಮಿ ತ್ರಿಗುಣಾತೀತಾನಂದ ಅಂತಿತ್ತು. ಅಂದರೆ ಮೂರೂ ಗುಣಗಳನ್ನೂ ಮೀರಿದವನು ಎಂದರ್ಥ.

ತಾಮಸಿಕ, ರಾಜಸಿಕ ಮತ್ತು ಸಾತ್ವಿಕ ಗುಣಗಳನ್ನು ಸರಳವಾಗಿ ವಿವರಿಸಿದ ಮತ್ತು ಮೂರೂ ಗುಣಗಳನ್ನು ಮೀರುವ ಅಗತ್ಯವನ್ನು ತಿಳಿಸುವ  ಈ ನೀತಿಕಥೆ ಇಷ್ಟವಾಯಿತು. ನಿಮಗೆ?

ಮೂರೂ ಬಿಟ್ಟವರು ಊರಿಗೇ ದೊಡ್ಡವರು. ಅದು ನಿಜ. ಈ ಅರ್ಥದಲ್ಲಿ ನೋಡಿದಾಗ. :)

3 comments:

sunaath said...

ಓರ್ವ ವ್ಯಕ್ತಿಯ ಗುಣಗಳು,ಬಹುತೇಕವಾಗಿ, ಆತನ social conditioning ಮೂಲಕ ನಿರ್ಧರಿಸಲ್ಪಡುತ್ತವೆ ಎಂದು ನನ್ನ ಭಾವನೆ. ಎರಡನೆಯದಾಗಿ ಓರ್ವ ವ್ಯಕ್ತಿಯನ್ನು ಇಂತಹವನೆಂದು ಹೇಳುವುದೂ ಸಹ, ಹೇಳುವವನ conditioning ಮೇಲೆ ಅವಲಂಬಿಸಿರುತ್ತದೆ ಎಂದು ನಾನು ಭಾವಿಸುತ್ತೇನೆ. Wolfgang Kohler ಎನ್ನುವ ಪ್ರಾಣಿವರ್ತನಾ ವಿಜ್ಞಾನಿಯು ಚಿಂಪಾಂಜಿಗಳ ವರ್ತನೆಯನ್ನು ಅಭ್ಯಸಿಸುತ್ತಿದ್ದನು. ಆತನು ಗಮನಿಸಿದ ಒಂದು ಸಂಗತಿ ಹೀಗಿದೆ: ಅಲ್ಲಿ ಇದ್ದಂತಹ ಚಿಂಪಾಂಜಿಗಳಲ್ಲಿ ಅತ್ಯಂತ ಒಳ್ಳೆಯ ಚಿಂಪಾಂಜಿಯು ಒಂದು ಅತ್ಯಂತ ದಡ್ಡ ಹೆಣ್ಣು ಚಿಂಪಾಂಜಿಯಾಗಿತ್ತು.

Of course, ಒಳ್ಳೆಯ ವ್ಯಕ್ತಿಯಾಗಿರುವದರ ಸಾಮಾಜಿಕ ಅವಶ್ಯಕತೆಯನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಸಮಾಜವು ನಮಗೆ ಅತ್ಯವಶ್ಯವಾದ ಸಂಘಟನೆ. ಅದು ಉಳಿದರೆ ನಾವು ಉಳಿಯುತ್ತೇವೆ. ಆದುದರಿಂದ, ಅನಿವಾರ್ಯವಾಗಿ ನಾವು ಒಳ್ಳೆಯವರಾಗಿ ಇರೋಣ. ಆದರೆ ನಮ್ಮ ಸಮಾಜವನ್ನು ಬಾಹ್ಯ ಶತ್ರುಗಳಿಂದ ಉಳಿಸಲು, ನಮ್ಮಲ್ಲಿ ಕ್ರೂರತೆ ಇರುವ ರಕ್ಷಣಾಪಡೆ ಬೇಕಾಗುತ್ತದೆ. ಈ ಕ್ರೂರ ಪಡೆಗೆ ನಾವು ತಾಮಸಿಕ conditioning ಮಾಡುವುದು ಅನಿವಾರ್ಯ. ಆದುದರಿಂದ, ಸಾತ್ವಿಕ, ರಾಜಸಿಕ ಹಾಗು ತಾಮಸಿಕ ವ್ಯಕ್ತಿಗಳು ಸಮಾಜಕ್ಕೆ ಬೇಕೇ ಬೇಕೇನೊ?

sunaath said...

ನಿಮ್ಮ ‘ಶ್ರೀದೇವಿ’ post, ನಿಮ್ಮ blogನಲ್ಲಿ ಕಾಣುತ್ತಿಲ್ಲ. ದಯವಿಟ್ಟು ಮತ್ತೆ ಪ್ರಕಟಿಸಿ.

Mahesh Hegade said...

ಉತ್ತಮ ವಿಶ್ಲೇಷಣೆ ಸುನಾಥ್ ಸರ್. ವಿಚಾರ ಮಾಡಲು ಹಚ್ಚುತ್ತದೆ.

ಶ್ರೀದೇವಿ ಬ್ಲಾಗ್ ಪೋಸ್ಟ್ ಅಪೂರ್ಣವಾಗಿತ್ತು. by mistake ಪ್ರಕಟವಾಗಿತ್ತು. ಮುಂದೆ ಪೂರ್ಣಗೊಳಿಸಿ ಪ್ರಕಟಿಸುತ್ತೇನೆ.

ಧನ್ಯವಾದಗಳು.