Saturday, September 02, 2017

ಏ ಜೀ! ಏ ಜೀ! (A G) ಎಂದು ಗಂಡನನ್ನು ಕೂಗುವದರ ಹಿಂದಿನ ಕಥೆ

ಒಂದಾನೊಂದು ಕಾಲದಲ್ಲಿ ಪತ್ನಿಯೊಬ್ಬಳು ಗಂಡನಿಗೆ ನೂರು ಬೆಳ್ಳಿ ವರಹಗಳನ್ನು ಕೊಟ್ಟು, 'ರೀ, ಪೇಟೆಗೆ ಹೋಗಿ ಮೂರು ಕತ್ತೆಗಳನ್ನು ಕೊಂಡು ತನ್ನಿ,' ಎಂದು ಹೇಳಿದಳು.

'ಮೂರೇ ಕತ್ತೆ ಮತ್ತೆ. ಒಂದು ಹೆಚ್ಚು ಅಥವಾ ಒಂದು ಕಮ್ಮಿ ತರಬೇಡಿ,' ಎಂದು ಎಚ್ಚರಿಸಲು ಮರೆಯಲಿಲ್ಲ.

ಏಕೆ? ಏನು? ಕತ್ತೆಯೇ ಯಾಕೆ? ಕುದುರೆ ಏಕಾಗಬಾರದು? ಅಂತೆಲ್ಲ ತಲೆಹರಟೆ ಪ್ರಶ್ನೆ ಕೇಳಲು ಗಂಡ ಹೋಗಲಿಲ್ಲ. ಶಾಣ್ಯಾ ಮನುಷ್ಯ.

ಪೇಟೆಗೆ ಹೋದ. ಏನೇನೋ ಚೌಕಾಸಿ ವ್ಯವಹಾರ ಮಾಡಿ ನೂರು ವರಹಗಳಿಗೆ ಬರೋಬ್ಬರಿ ಮೂರು ಕತ್ತೆಗಳನ್ನು ಕೊಂಡ. ಅವುಗಳನ್ನು ಮನೆಯತ್ತ ಹೊಡೆದುಕೊಂಡು ಹೊರಟ.

ಮನೆ ಹತ್ತಿರ ಬಂದಾಗ ನೋಡಿದರೆ ಎರಡೇ ಕತ್ತೆಗಳಿದ್ದವು! ಒಂದು ಕತ್ತೆ ಗಾಯಬ್! ಅತ್ತಿತ್ತ ನೋಡಿದ. ಆದರೆ ಮೂರನೇ ಕತ್ತೆ ಎಲ್ಲೂ ಕಾಣಲಿಲ್ಲ. ಇನ್ನು ಮನೆಗೆ ಹೋದ ಮೇಲೆ ಹೆಂಡತಿ ಕೈಯಲ್ಲಿ ಬರೋಬ್ಬರಿ ಮಂಗಳಾರತಿ, ಪೂಜೆ ಎಲ್ಲ ಇದೆ ಎಂದು ತಿಳಿದು, ಮುಂದಾಗಲಿರುವ ಅನಾಹುತವನ್ನು ಎದುರಿಸಲು ತಯಾರಾದ.

ಮನೆಗೆ ಹೋದವನೇ, ಹೆಂಡತಿ ಏನು ಎತ್ತ ಎಂದು ಕೇಳುವ ಮೊದಲೇ ಎಲ್ಲ ಹೇಳಿಕೊಂಡುಬಿಟ್ಟ.

'ನೀನು ಮೂರು ಕತ್ತೆಗಳನ್ನು ಕೊಂಡು ತಾ ಅಂದಿದ್ದೆ. ಅದರ ಪ್ರಕಾರವೇ ಮೂರು ಕತ್ತೆಗಳನ್ನು ಕೊಂಡುಕೊಂಡೆ. ದಾರಿಯಲ್ಲಿ ಬರುವಾಗ ಒಂದು ಕತ್ತೆ ತಪ್ಪಿಸಿಕೊಂಡಿದೆ. ಎಷ್ಟು ಹುಡುಕಿದರೂ ಸಿಗಲಿಲ್ಲ. ಪ್ಲೀಸ್ ಕ್ಷಮಿಸು!' ಎಂದವನೇ ಹೆಂಡತಿ ಕಾಲಿಗೆ ಡೈವ್ ಹೊಡೆಯಲು ಪೋಸ್ ರೆಡಿ ಮಾಡಿಕೊಂಡ.

ಹೆಂಡತಿ 'ಥಾಂಬಾ!' ಅಂದರೆ 'ಒಂದು ಕ್ಷಣ ನಿಲ್ಲು' ಅನ್ನುವಂತೆ ಕೈ ಮಾಡಿದಳು.

'ಏನು????' ಎನ್ನುವಂತೆ ನೋಡಿದ.

'ನನಗೆ ನಾಲ್ಕು ಕತ್ತೆಗಳು ಕಾಣುತ್ತಿವೆ!' ಅಂದಳು ಪತ್ನಿ.

'ನಾಲ್ಕೇ?? ಎಲ್ಲಿ?? ಹೇಗೆ??' ಎಂದು ಆಶ್ಚರ್ಯಚಕಿತನಾಗಿ ಕೇಳಿದ ಗಂಡ.

'ಎರಡು ಕತ್ತೆ ನಿನ್ನ ಮುಂದಿವೆ.... ' ಅಂದಳು ಪತ್ನಿ.

'ಸರಿ. ಮತ್ತೆರೆಡು ಎಲ್ಲಿವೆ??' ಎಂದು ಕೇಳಿದ ಪತಿ.

'ಮೂರನೆಯ ಕತ್ತೆಯ ಮೇಲೆ ಕೂತಿರುವ ನಾಲ್ಕನೇ ಕತ್ತೆ ನೀನೇ!' ಎಂದವಳೇ ಸಿಕ್ಕಾಪಟ್ಟೆ irritate ಆಗಿ ಒಂದು ಬಿಟ್ಟಳು.

ಅಂದಿನಿಂದ ಪತಿಯನ್ನು 'ಏ ಜೀ! ಏ ಜೀ!' ಎಂದು ಕರೆಯುವ ಪದ್ಧತಿ ಜಾರಿಯಲ್ಲಿ ಬಂತು.

ಏ ಜೀ = A G ಅಂದರೆ ಅಬೇ ಗಧೆ ಅಂದರೆ ಹೇ ಕತ್ತೆ!

ಮೂಲ: ಕತ್ತೆ ವ್ಯಾಪಾರದ ಕಥೆ ಮುಲ್ಲಾ ನಸ್ರುದ್ದೀನನ ಕಥೆ. ಸ್ವಾಮಿ ಸುಖಬೋಧಾನಂದರ 'Personal Excellence Through Bhagavadgita' ಪುಸ್ತಕದಲ್ಲಿ ಓದಿದ್ದು. A G = ಅಬೇ ಗಧೆ ಜೋಕ್ ಹೇಳಿದವರು ಸ್ವಾಮಿ ಅನುಭವಾನಂದ ಸರಸ್ವತಿ.

2 comments:

sunaath said...

ನನ್ನ ಹೆಂಡತಿ ನನ್ನನ್ನು ಯಾಕೆ ‘ಏಜೀ’ ಎಂದು ಕರೆಯುತ್ತಾಳೆ ಎನ್ನುವುದು ಇದೀಗ ತಿಳಿಯಿತು! ಧನ್ಯವಾದಗಳು, ಮಹೇಶ. ಇನ್ನು ಮೇಲೆ, ಅವಳು ನನ್ನನ್ನು ‘ಏಜೀ’ ಎಂದು ಕರೆದರೆ, ನಾನು ಅವಳನ್ನು ’ಏನೇ ಅರ್ಧಾಂಗಿನಿ!’ ಎಂದು ಕರೆಯುತ್ತೇನೆ.

Mahesh Hegade said...

ಧನ್ಯವಾದಗಳು, ಸುನಾಥ್ ಸರ್!