Friday, April 14, 2017

ಪೊಲೀಸರ ಫಜೀತಿಗಳು

ಮೊನ್ನೆ ಯಾವದೋ ಕನ್ನಡ ಪತ್ರಿಕೆಯಲ್ಲಿ ಓದಿದ ನೆನಪು. ಪೊಲೀಸರೊಬ್ಬರು ತಮಗೆ ಕೊಟ್ಟಿರುವ ಪುರಾತನ ಕಾಲದ,  ಶಿಲಾಯುಗದ ಕಾಲದ ೩೦೩ ಬಂದೂಕಿನ ಬಗ್ಗೆ ಅಲವತ್ತುಕೊಂಡಿದ್ದರು. ಎಪ್ಪತ್ತು ವರ್ಷಗಳ ಹಿಂದೆ, ಎರಡನೆಯ ಮಹಾಯುದ್ಧದ ಕಾಲದಲ್ಲೇ ಹಳೆಯದು ಎಂದು ಬ್ರಾಂಡ್ ಆಗಿದ್ದ ಆ ಮಣಭಾರದ ೩೦೩ ಬಂದೂಕು ಹೇಗೆ ಇಂದಿನ ದಿನಗಳಲ್ಲಿ ಅಪ್ರಸ್ತುತ, ಅನುಪಯೋಗಿ ಮತ್ತು ಮೇಲಾಗಿ ಒಂದು ಶುದ್ಧ ಹೊರೆ ಎಂದು ಅವರ ಅಳಲು.

ಪೊಲೀಸರ ಫಜೀತಿಗೆ ಇದು ಒಂದು ಉದಾಹರಣೆ ಅಷ್ಟೇ. ಪೊಲೀಸರ ತೊಂದರೆಗಳು ಒಂದೇ ಎರಡೇ. ಜೊತೆಗೆ ಕೆಲವು ಸಾರ್ವಜನಿಕರೂ ಒಳ್ಳೆ ಶನಿಗಳಂತೆ ಕಾಡುತ್ತಾರೆ. ಅದರಲ್ಲೂ ವಿದ್ಯಾವಂತರು, ಗಣ್ಯರು ಅಥವಾ ಹಾಗೆಂದುಕೊಂಡವರು ಒಮ್ಮೊಮ್ಮೆ ಕೊಡುವ ಕಿರಿಕಿರಿಗಳಿಂದ ಪೊಲೀಸರು ರೋಸಿಹೋಗುತ್ತಾರೆ.

ನಮ್ಮ ಪರಿಚಿತರೊಬ್ಬರಿದ್ದರು. ಒಂದಿನ ಸೀದಾ ಠಾಣೆಗೆ ಹೋಗಿ ದೂರು ನೀಡಿಬಿಟ್ಟರು. ದೂರಿನ ಸಾರಾಂಶ ಇಷ್ಟು. 'ನಿನ್ನೆ ರಾತ್ರಿ ಕಳ್ಳನೊಬ್ಬನನ್ನು ನೋಡಿದೆ. ಹಿಡಿಯಲು ಹೋದೆ. ಹಾಥಾಪಾಯಿ ಆಯಿತು. ಕಳ್ಳ ತಪ್ಪಿಸಿಕೊಂಡು ಹೋದ. ಕಳ್ಳನ ಜೊತೆ ನಡೆದ ಘರ್ಷಣೆಯಲ್ಲಿ ನನಗೆ ಗಾಯವಾಗಿದೆ. ಕೈ ಮುರಿದಿದೆ,' ಎಂದು ದೂರು ಕೊಟ್ಟರು. ಜೊತೆಗೆ ಮುರಿದ ಕೈಗೆ ಹಾಕಿದ್ದ ಪ್ಲಾಸ್ಟರ್ ತೋರಿಸಿದರು. ಎತ್ತೆತ್ತಿ ತೋರಿಸಿದರು.

'ಲಗೂನ ಕಳ್ಳರನ್ನು ಹಿಡೀರಿ. ನಮ್ಮ ಓಣ್ಯಾಗ ಕಳ್ಳರ ಪ್ರಾಬ್ಲಮ್ ಎಷ್ಟು ಅದ ಅಂತ ನಿಮಗ ಗೊತ್ತದನೋ ಇಲ್ಲೋ?? ನಾನೇ ರಗಡ ಸರೆ ಕಂಪ್ಲೇಂಟ್ ಕೊಟ್ಟೇನಿ. ಏನೂ ಉಪಯೋಗಿಲ್ಲ. ಎಂಥಾ ಪೊಲೀಸರು ನೀವು?? ಈಗ ನೋಡ್ರಿ. ಕಳ್ಳ ನನ್ನ ಕೈ ಮುರಿದುಹೋದ. ಯಾವಾಗ ಹಿಡಿಯವರು ನೀವು? ನನ್ನ ಖೂನ್ ಆದ ಮ್ಯಾಲೇ ಏನು ನೀವು ಕಳ್ಳರನ್ನ ಹಿಡಿಯೋದು??' ಅಂತೆಲ್ಲ ರೇಗಾಡಿಬಿಟ್ಟರು. ನೋಡಿದವರು ಅಹುದೌದು ಅನ್ನುವಂತಿತ್ತು ಆ ದೃಶ್ಯ.

ಅವರ ಮನೆಯಿದ್ದ ಏರಿಯಾದಲ್ಲಿ ಕಳ್ಳರ ಹಾವಳಿ ಬಹಳವಾಗಿತ್ತಂತೆ. ಮೊದಲೂ ಕಂಪ್ಲೇಂಟ್ ಕೊಟ್ಟಿದ್ದರಂತೆ. ಏನೂ ಉಪಯೋಗವಾಗಿರಲಿಲ್ಲ. ಹಾಗಾಗಿ ಈ ಸಲ ಹೆಚ್ಚಿನ ಜೋಷ್ ಕಂಪ್ಲೇಂಟ್ ಕೊಡಲು.

ಪೋಲೀಸರಿಗೆ ಈಗ ಕಿರ್ಕಿರಿ. ಮೊದಲೆಲ್ಲ ಕಳ್ಳತನದ ದೂರು ಕೊಡಲು ಬರುತ್ತಿದ್ದ ಈ ಮಹಾನುಭಾವರು ಈ ಸಲ ಕಳ್ಳ ಸಿಕ್ಕಿದ್ದ, ಹೊಡೆದಾಟವಾಯಿತು, ಕಳ್ಳ ಕೈ ಮುರಿದು ಹೋದ ಎಂದು ಬೇರೆ ಹೇಳುತ್ತಿದ್ದಾರೆ. ನೋಡಿದರೆ ವಿದ್ಯಾವಂತರು. ಸಣ್ಣ ಪ್ರಮಾಣದ  ದೊಡ್ಡ ಮನುಷ್ಯರು ಬೇರೆ. ಈಗ ಸ್ವಲ್ಪ ಜಾಸ್ತಿ ಆಸ್ಥೆ  ವಹಿಸಿ ಕೆಲಸ ಮಾಡಲೇಬೇಕು. ಇಲ್ಲವಾದರೆ ಈ ಪುಣ್ಯಾತ್ಮ ತನ್ನ ಮುರಿದಿರುವ ಕೈಯನ್ನು ಪ್ಲಾಸ್ಟರ್ ಸಮೇತ ಮಾಧ್ಯಮದವರ ಮುಂದೆ ಹಿಡಿದ ಅಂದರೆ ಮಾಧ್ಯಮಗಳು ಪೊಲೀಸ್ ಇಲಾಖೆಯ ಮಾನ ಹರಾಜಿಗಿಡುತ್ತವೆ ಎಂದು ಪೊಲೀಸರು ವಿಚಾರ ಮಾಡಿದರು.

'ಸರ್ರಾ, ಹೀಂಗಾತೇನ್ರೀ? ಛೇ! ಎಂತಾ ಕಳ್ಳ ಸೂಳಿಮಗಾರೀ ಆವಾ?? ಕಳ್ಳತನ ಮಾಡಲಿಕ್ಕೆ ಬಂದವ ನಿಮ್ಮ ಕೈ ಮುರಿದು ಹ್ವಾದ್ನ?' ಎಂದು ಪೊಲೀಸರು ಓಪನಿಂಗ್ ಮಾಡಿದ್ದಾರೆ.

ದೂರು ಕೊಡಲು ಹೋದವರು, 'ಹೌದು. ಹಾಗೇ  ಆಗಿದ್ದು. ಏನು ಕಣಿ ಕೇಳ್ತೀರಿ?? ಲಗೂನೇ ಕಾರಾವಾಹಿ ಮಾಡಿ. ಕಳ್ಳನ್ನ ಹಿಡಿಯಿರಿ,' ಅನ್ನುವ ಲುಕ್ ಕೊಟ್ಟಿದ್ದಾರೆ. ಮುಖದಲ್ಲಿ ಫುಲ್ ಅಸಹನೆ. ಅತೃಪ್ತಿ.

ಸರಿ. ಬರಿ ಕಳ್ಳತನವಾಗಿದ್ದರೆ ದೂರು ದಾಖಲಿಸಿಕೊಂಡು ಕಳಿಸಬಹುದಿತ್ತು. ಈಗ ನೋಡಿದರೆ ದೈಹಿಕ ದಾಳಿ ಬೇರೆ ಆಗಿದೆ ಅನ್ನುತ್ತಿದ್ದಾರೆ. ಈಗ ಅದು attempt to murder ಕೇಸ್. ಕಾನೂನಿನ ಖಡಕ್ ಸೆಕ್ಷನ್. ಆ ಸೆಕ್ಷನ್ನಿನಲ್ಲಿ ಕೇಸ್ ರಿಜಿಸ್ಟರ್ ಮಾಡಿಕೊಳ್ಳಬೇಕು ಅಂದರೆ ದೂರುದಾರನ ವೈದ್ಯಕೀಯ ತಪಾಸಣೆ ಮಾಡಿಸಬೇಕು. ಅದು ಮತ್ತೂ ಹೆಚ್ಚಿನ ಕೆಲಸ. 'ಕಳ್ಳತನ ಮಾಡಲು ಬಂದ ಮಂಗ್ಯಾನಮಗ ಈ ಪುಣ್ಯಾತ್ಮನ ಕೈ ಯಾಕೆ ಮುರಿದುಹೋದ? ನಮಗೆ ದೊಡ್ಡ ತೊಂದರೆ ತಂದಿಟ್ಟ. ಮುಂದೊಮ್ಮೆ ಕಳ್ಳ ಸಿಕ್ಕರೆ ಅವನ ಕಾಲು, ಕೈ ಎರಡನ್ನೂ ಮುರಿಯಬೇಕು,' ಅಂದುಕೊಂಡ ಪೊಲೀಸರು ಮುಂದಿನ ಕ್ರಿಯೆಗೆ ರೆಡಿ ಆಗಿದ್ದಾರೆ.

'ಸರ್ರಾ, ಸಿವಿಲ್ ಹಾಸ್ಪಿಟಲ್ಲಿಗೆ ಹೋಗಿ ಬರೋಣ. ನಡ್ರಿ,' ಅಂದಿದ್ದಾರೆ ಪೊಲೀಸರು.

'ಯಾಕ!!?? ನಾ ಆಗಲೇ ಡಾಕ್ಟರ್ ಕಡೆ ಹೋಗಿ ಪ್ಲಾಸ್ಟರ್ ಹಾಕಿಸಿಕೊಂಡು ಬಂದೇನಲ್ಲಾ? ಬೇಕಾದ್ರ ಅವರ ಕಡೆನೇ ಸರ್ಟಿಫಿಕೇಟ್ ತೊಗೊಂಡು ಬರಲೇನು?' ಅಂದಿದ್ದಾರೆ ದೂರು ಕೊಡಲು ಹೋದವರು. ಅವರು ನಸುಗುನ್ನಿಯಂತೆ ಮಿಸುಕಾಡಿದ್ದನ್ನು, ಧ್ವನಿಯಲ್ಲಿನ ಅಳುಕನ್ನು ಪೊಲೀಸರು ಗಮನಿಸಿದರೋ? ಗೊತ್ತಿಲ್ಲ.

'ಏ, ಅದೆಲ್ಲಾ ನಡೆಯಂಗಿಲ್ಲಾ. ಸಿವಿಲ್ ಹಾಸ್ಪಿಟಲ್ಲಿಗೆ ಹೋಗಾಕs ಬೇಕು. ಅಲ್ಲೇ ಮೆಡಿಕಲ್ ಎಜ್ಜಾಮಿನೇಷನ್ ಮಾಡಿಸಲೇಬೇಕು. ನಡ್ರಿ. ಹೋಗಿ ಬರೋಣ,' ಎಂದು ಹೇಳಿ, ಅವರನ್ನು ಒಂದರ್ಥದಲ್ಲಿ ಎತ್ತಾಕಿಕೊಂಡು ಪೊಲೀಸ್ ಜೀಪಿನಲ್ಲಿಯೇ ಸಿವಿಲ್ ಹಾಸ್ಪಿಟಲ್ಲಿಗೆ ಕರೆದುಕೊಂಡು ಹೋಗಿದ್ದಾರೆ.

ಮೊದಲು ಪೊಲೀಸ್ ಸ್ಟೇಷನ್ ಆಯಿತು. ಈಗ ಸಿವಿಲ್ ಹಾಸ್ಪಿಟಲ್. ಅಲ್ಲಿಯ ವೈದ್ಯ ಸರ್ಕಾರಿ ವೈದ್ಯ. ಅವನಾದರೂ ಸುಮ್ಮನೆ ಮೇಲ್ಮೆಲಿಂದ ನೋಡಿ, ಇವರು ಹೇಳಿದ್ದೆಲ್ಲವನ್ನೂ ನಂಬಿ, ಸರ್ಟಿಫಿಕೇಟ್ ಕೊಟ್ಟು ಕಳಿಸುತ್ತಾನೆಯೇ? ಹರ್ಗೀಸ್ ಇಲ್ಲ. ಹಾಗೆ ಮಾಡಿದರೆ ಅದು ತಪ್ಪಾಗುವದಿಲ್ಲವೇ? ಹಾಗಾಗಿ ಸರ್ಕಾರಿ ವೈದ್ಯನೂ ಏಕ್ದಂ ಖಡಕ್ ಆಗಿ ಮೆಡಿಕಲ್ ಎಕ್ಸಾಮಿನೇಷನ್ ಮಾಡಲು ನಿಂತಿದ್ದಾನೆ.

'ಸರ್ರಾ, ಮೊದಲೇ ಇಲ್ಲಿ ಬರಬೇಕೋ ಬ್ಯಾಡೋ!? ಈಗ ನೋಡ್ರೀ....' ಎಂದು ಎಳೆದಿದ್ದಾನೆ ವೈದ್ಯ.

ಪೋಲೀಸ್ ಠಾಣೆಗೆ ಹೋಗಿ, ದೂರು ಕೊಟ್ಟು, ತ್ವರಿತವಾಗಿ ವಾಪಸ್ ಬಂದರಾಯಿತು ಅಂತ ಸ್ಕೀಮ್ ಹಾಕಿಕೊಂಡು ಬಂದಿದ್ದ ಮಹಾನುಭಾವರು ಈಗ ಫುಲ್ ಸುಸ್ತಾಗಿ ಹೋಗಿದ್ದಾರೆ. ಪೊಲೀಸರು ಒತ್ತಾಯ ಮಾಡಿದರು ಅಂತ ಸರ್ಕಾರಿ ಆಸ್ಪತ್ರೆಗೆ ಬಂದರೆ ಇಲ್ಲಿ ಮತ್ತೆ ಅದು ಇದು ಅಂತ ಹೇಳಿ ವೇಳೆ ಖೋಟಿ ಮಾಡುತ್ತಿದ್ದಾರೆ. ಬೇಗಬೇಗನೆ ಒಂದು ಸರ್ಟಿಫಿಕೇಟ್ ಕೊಟ್ಟು ಕಳಿಸಬಾರದೇ? ಎಂದು ಮನದಲ್ಲಿ ಅಂದುಕೊಂಡಿದ್ದಾರೆ. ಆದರೆ ಅಂದುಕೊಂಡಿದ್ದು ಆಗಬೇಕಲ್ಲ!!??

'ಈಗ ನೋಡ್ರಿ, ನಿಮ್ಮ ಕೈ ಮುರದೈತಿ ಅಂತ ಖಾತ್ರಿ ಮಾಡಿಕೊಳ್ಳಾಕ ನಿಮ್ಮ ಪ್ಲಾಸ್ಟರ್ ತೆಗಿಬೇಕಾಗತೈತಿ ನೋಡ್ರಿ. ತೊಂದ್ರಿ ಇಲ್ಲ. ನಾವೇ ಪ್ಲಾಸ್ಟರ್ ತೆಗೆದು, x-ray ಮಾಡಿ, ಕೈ ಹ್ಯಾಂಗ ಮುರದೈತಿ, ಎಲ್ಲೆ ಮುರದೈತಿ ಎಲ್ಲಾ ನೋಡಿ, ನಿಮಗ ಮತ್ತೊಮ್ಮೆ ಬರೋಬ್ಬರಿ ಪ್ಲಾಸ್ಟರ್ ಹಾಕ್ತೇವಿ. ಚಿಂತಾ ಮಾಡಬ್ಯಾಡ್ರೀ. ಈಗ ಪ್ಲಾಸ್ಟರ್ ತೆಗೆಯೋಣರ್ಯಾ!?!?' ಅಂದುಬಿಟ್ಟಿದ್ದಾನೆ ಸರ್ಕಾರಿ ವೈದ್ಯ. ಪ್ಲಾಸ್ಟರ್ ಕತ್ತರಿಸುವ ಚಿಕ್ಕ ಕರಗಸವನ್ನು ಮುಖದ ಮುಂದೆಯೇ ತಂದು ಹಿಂದೆ ಮುಂದೆ ಆಡಿಸಿದ್ದಾನೆ.

ಅಲ್ಲಿಗೆ ಶಿವಾಯ ನಮಃ!

ಇವರು ಮತ್ತೂ ಜೋರಾಗಿ ಮಿಸುಕಾಡಿದ್ದಾರೆ. ಹಾಗೇ ಮೇಲ್ಮೆಲಿಂದ ತಪಾಸಣೆ ಮಾಡಿ ಸರ್ಟಿಫಿಕೇಟ್ ಕೊಡಲು ಕೇಳಿದ್ದಾರೆ. ಅದಕ್ಕೆ ಪೊಲೀಸರೂ ಒಪ್ಪಿಲ್ಲ. ಸರ್ಕಾರಿ ವೈದ್ಯರೂ ಒಪ್ಪಿಲ್ಲ. ಅದು ಹಲ್ಲೆ ಪ್ರಕರಣ. ಹಾಗಾಗಿ ಮೆಡಿಕಲ್ ತಪಾಸಣೆ ಆಗಲೇಬೇಕು ಅಂತ ಪೊಲೀಸರ ಒತ್ತಾಯ. ಮೆಡಿಕಲ್ ಆಗಬೇಕು ಅಂದರೆ ಎಲ್ಲ ಫುಲ್ ಬಿಚ್ಚಾಮಿ ಮಾಡಿಯೇ ಆಗಬೇಕು ಅಂತ ಸರ್ಕಾರಿ ವೈದ್ಯನ ವರಾತ. ಇದೆಲ್ಲ ಕಾರಾಣಗಳಿಂದ ಇವರ ನಸೀಬ್ ಮಾತ್ರ ಸುಡುಗಾಡಿಗೆ ಶರಣಂ ಗಚ್ಚಾಮಿ ಆಗುತ್ತಿದೆ. ಪ್ರಾರಬ್ಧ!

ದೂರುದಾರರು ಈಗ ಪ್ಲೇಟ್ ಬದಲಾಯಿಸಲು ನೋಡಿದ್ದಾರೆ. ತಾವು ತಮ್ಮ ದೂರನ್ನು ಬದಲಾಯಿಸಿ ಕೊಡುತ್ತೇನೆ ಅಂದಿದ್ದಾರೆ. 'ಕೇವಲ ಕಳ್ಳತನದ ದೂರು ಕೊಡುತ್ತೇನೆ. ಕಳ್ಳ ಬಂದಿದ್ದು, ನನ್ನ ಮತ್ತು ಕಳ್ಳನ ನಡುವೆ ಝಟಾಪಟಿ ಆಗಿದ್ದು ಎಲ್ಲವನ್ನೂ ಬಿಟ್ಟುಬಿಡೋಣ. ಸುಮ್ಮನೆ ನಿಮಗೂ ಕಷ್ಟ,' ಅಂತೆಲ್ಲ ಹೇಳಿ ಏನೋ ಸ್ಕೀಮ್ ಹಾಕಿದ್ದಾರೆ.

ಅವರು ಹೇಳಿಕೇಳಿ ಪೊಲೀಸರು. ಸುಖಾಸುಮ್ಮನೆ ಖಾಕಿ ಬಟ್ಟೆ ಧರಿಸಿ ಬರಲು ಅವರು ಆಟೋ ಡ್ರೈವರೋ, ಬಸ್ ಕಂಡಕ್ಟರೋ ಅಲ್ಲ. ಅದೆಷ್ಟು ಕೆರೆಗಳ ನೀರು, ಅದೆಷ್ಟು ಬಾರುಗಳ ಬೀರು ಕುಡಿದು ಬಂದವರೋ ಏನೋ ಅವರು. ಅವರಿಗೆ ಒಮ್ಮೆಲೆ ಏನೋ intuition ಹೊಳೆದಿದೆ. ಅದರಲ್ಲೂ ಈ ಆಸಾಮಿ ಮೊದಲು ಠಾಣೆಗೆ ಬಂದು ಅಷ್ಟೆಲ್ಲ ಸಿಕ್ಕಾಪಟ್ಟೆ ರೋಪ್ ಹಾಕಿದವ ಈಗ ನೋಡಿದರೆ ಯಾಕೋ ಫುಲ್ ಉಲ್ಟಾ ಹೊಡೆಯುತ್ತಿದ್ದಾನೆ. ನಸುಗುನ್ನಿಯಂತೆ ಮಿಸುಕಾಡುತ್ತಿದ್ದಾನೆ. ತೊಡೆ ಮಧ್ಯೆ ಎರಡೂ ಕೈಗಳನ್ನು ಉಜ್ಜಿ ಉಜ್ಜಿ ಒಂದು ತರಹದ ಸಂಕೋಚ, ಅಪರಾಧಿಪ್ರಜ್ಞೆ ಅನುಭವಿಸುತ್ತಿದ್ದಾನೆ. ಈಗ ಏನೂ ಬೇಡ, ನಿಮಗ್ಯಾಕೆ ಸುಮ್ಮನೆ ತೊಂದರೆ ಅನ್ನುತ್ತಿದ್ದಾನೆ. ಏನನ್ನೋ ಮುಚ್ಚಿಡುತ್ತಿದ್ದಾನೆ. ಏನಿರಬಹುದು? ಯಾಕೆ? ಅಂತೆಲ್ಲ ಪೊಲೀಸರ ತಲೆ ಓಡಿದೆ. ಅವರು ಈಗ ಫಾರ್ಮಿಗೆ ಬಂದಿದ್ದಾರೆ. ಕೊಂಚ ಖಡಕ್ ಆಗಿದ್ದಾರೆ. ಮಾತಾಡುವ ಟೋನ್ ಬದಲಾಗಿದೆ. ಮಾತಿನಲ್ಲಿ ಕೊಂಚ ಗಡಸುತನ ನುಸುಳಿದೆ. ವಿಚಾರಣೆಗೆ ನಿಂತಿದ್ದಾರೆ.

ಕೊಂಚ ಧ್ವನಿ ಎತ್ತರಿಸಿ ದಬಾಯಿಸಿ ಮಾತಾಡಿದರೋ ಇಲ್ಲವೋ ಅಷ್ಟಕ್ಕೇ ಈ ದೂರುದಾರ ಮಟಾಷ್. ಗೊಳೋ ಅಂದುಬಿಟ್ಟಿದ್ದಾನೆ.

ನೋಡಿದರೆ.....ದೊಡ್ಡ ಖದೀಮ ಇವನು. ಕಳ್ಳರೂ ಬಂದಿಲ್ಲ. ಸುಳ್ಳರೂ ಬಂದಿಲ್ಲ. ಹೊಡೆದಾಟ, ಮಣ್ಣುಮಸಿ ಏನೂ ಆಗಿಲ್ಲ. ಸುಖಾಸುಮ್ಮನೆ ಕೈಗೆ ಪ್ಲಾಸ್ಟರ್ ಹಾಕಿಸಿಕೊಂಡು ಠಾಣೆಗೆ ಬಂದಿದ್ದಾನೆ. ಕಥೆ ಕಟ್ಟಿ ಪಂಟು ಹೊಡೆದಿದ್ದಾನೆ! ಅಕಟಕಟಾ!

ಪೊಲೀಸ್ ಪದ್ಧತಿಯಲ್ಲಿ ಕೊಂಚ ಬಿಸಿ ಮಾಡಿದರೆ ಈಗ ಎಲ್ಲ ಹೇಳುತ್ತಿದ್ದಾನೆ.

ಯಾಕಯ್ಯಾ ಹೀಗೆಲ್ಲ ಮಾಡಿದೆ!? ಅಂದರೆ ಏನು ಹೇಳಿದ ಗೊತ್ತೇ?

ನಮ್ಮ ಏರಿಯಾದಲ್ಲಿ, ನಮ್ಮ ಓಣಿಯಲ್ಲಿ ಕಳ್ಳರ ಹಾವಳಿ ತುಂಬಾ ಜಾಸ್ತಿಯಾಗಿದ್ದು ಹೌದು. ಹಿಂದೆ ಅನೇಕ ದೂರುಗಳನ್ನು ಕೊಟ್ಟಿದ್ದೂ ಹೌದು. ಆದರೆ ಏನೂ ಉಪಯೋಗವಾಗಲಿಲ್ಲ. ಪೊಲೀಸರು ಹೆಚ್ಚಿನ ಆಸ್ಥೆ ವಹಿಸಿ ತನಿಖೆ ಮಾಡಿದಂತೆ ಕಾಣಲಿಲ್ಲ. ಪೊಲೀಸರು ಸಿಕ್ಕಾಪಟ್ಟೆ ಶ್ರಮ ವಹಿಸಿ, top priority ಕೊಟ್ಟು ತನಿಖೆ ಮಾಡಲಿ ಅಂತ ಕಥೆ ಕಟ್ಟಿದೆ. ಕಳ್ಳ, ಕಳ್ಳನ ಜೊತೆ ಹೊಡೆದಾಟ, ಅದರಲ್ಲಿ ಕೈ ಮುರಿದಿದೆ ಅಂತೆಲ್ಲ ಛೋಡಿದೆ ಎಂದು ಫುಲ್ ತಪ್ಪು ಒಪ್ಪಿಕೊಂಡ.

ಕೇಳಿ ಭಗಭಗ ಉರಿದುಕೊಂಡ ಪೊಲೀಸರು ಅವನ ವಿರುದ್ಧ ದೊಡ್ಡ ಮಟ್ಟದ ಕಾರಾವಾಹಿ ಮಾಡಲು ಸಿದ್ಧರಾಗಿದ್ದರು. ಹಾಗೇನಾದರೂ ಆಗಿದ್ದರೆ ಒಳಗೆ ಹೋಗಿರುತಿದ್ದ. ಬೇಗ ಜಾಮೀನ್ ಕೂಡ ಸಿಗುತ್ತಿರಲಿಲ್ಲ. ಆದರೆ ಹಾಗೇನೂ ಆಗಲಿಲ್ಲ.

ಯಾಕಾಗಲಿಲ್ಲ ಅಂದರೆ ಮತ್ತದೇ ವಶೀಲಿಬಾಜಿ. ಇವನು ಹೇಳಿಕೇಳಿ ವಿದ್ಯಾವಂತ. ಸುಮಾರು ದೊಡ್ಡ ನೌಕರಿಯಲ್ಲಿ ಇದ್ದವ. ಅವನ ಬಾಸ್ ದೊಡ್ಡ ಅಧಿಕಾರಿ. ಅವರ ಕಾಲು ಹಿಡಿದ. ಅವರು ಇವನಿಂದ ಏನೇನು ಸೇವೆ ಮಾಡಿಸಿಕೊಂಡರೋ ಗೊತ್ತಿಲ್ಲ. ಎಷ್ಟು ಗುಂಜಿದರೋ ಗೊತ್ತಿಲ್ಲ. ಒಟ್ಟಿನಲ್ಲಿ ಪೊಲೀಸರಿಗೆ ಒಂದು ಮಾತು ಹೇಳಿದರು. ವಿನಂತಿ ಮಾಡಿಕೊಂಡರು. ತಮ್ಮ ಪ್ರಭಾವ ಬೀರಿದರು. ಮತ್ತೇನೇನು ದುವಾ ಸಲಾಮಿ ಮಾಡಿದರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರ ಮಾತಿಗೆ ಬೆಲೆ ಕೊಟ್ಟ ಪೊಲೀಸರು ಇವನ ಮೇಲೆ ಏನೂ ಕೇಸ್ ಮಾಡಲಿಲ್ಲ. ಸುಮ್ಮನೇ ದಬಾಯಿಸಿ ಕಳಿಸಿದರು.

ಇಷ್ಟೆಲ್ಲಾ ಆದರೂ ಕೈಗೆ ಹಾಕಿದ್ದ ಪ್ಲಾಸ್ಟರ್ ಮಾತ್ರ ತೆಗೆಯಲಿಲ್ಲ ಆ ಯಪ್ಪಾ. ಪದ್ಧತಿ ಪ್ರಕಾರ ಅದೆಷ್ಟು ವಾರ, ಅದೆಷ್ಟು ತಿಂಗಳು ಪ್ಲಾಸ್ಟರ್ ಹಾಕಿಕೊಂಡಿರಬೇಕೋ ಅಷ್ಟು ದಿವಸ ಹಾಕಿಕೊಂಡೇ ತಿರುಗಾಡಿದ. ಅದೆಂಗೆ ಅವಧಿಗೆ ಮೊದಲೇ ಪ್ಲಾಸ್ಟರ್ ತೆಗೆದಾನು? ನೆರೆಹೊರೆಯವರಿಗೆಲ್ಲ ದೊಡ್ಡ ಪ್ರಮಾಣದಲ್ಲಿ ತನ್ನ ಶೌರ್ಯದ, ಪರಾಕ್ರಮದ ಕಹಾನಿ ಹೇಳಿದ್ದ ನೋಡಿ. at least ಆ ಕಾರಣಕ್ಕಾದರೂ ಪ್ಲಾಸ್ಟರ್ ಹಾಕಿಕೊಂಡೇ ಇರಬೇಕಾಯಿತು. ಪ್ರಾರಬ್ಧ!

ಅಷ್ಟಕ್ಕೂ ಅವನಿಗೆ ಸುಳ್ಳು ಪ್ಲಾಸ್ಟರ್ ಯಾರು ಹಾಕಿದ್ದರು? ಖಾಸಗಿ ವೈದ್ಯರು ಹಾಗೆಲ್ಲ ಮಾಡುವದು ಕಮ್ಮಿ. ಎಲ್ಲಿ ಮನೆಯಲ್ಲಿ ಹೆಂಡತಿ ಕಡೆ ಪ್ಲಾಸ್ಟರ್ ಹಾಕಿಸಿಕೊಂಡು ಬಂದಿದ್ದನೋ ಅಂತ ನನಗೆ ಈಗ ಡೌಟ್. ಕೇಳೋಣ ಅಂದರೆ ಪುಣ್ಯಾತ್ಮ ಇದ್ದಾನೋ ಇಲ್ಲವೋ ಗೊತ್ತಿಲ್ಲ.

ಪೊಲೀಸರ ಫಜೀತಿಗಳು ಹೇಗೆಲ್ಲ ಇರುತ್ತವೆ ನೋಡಿ. ಇಂತಹ ಸಾವಿರಾರು ಜನರನ್ನು ನೋಡಿ ನೋಡಿ ಪೊಲೀಸರು ರೋಸಿ ಹೋಗಿರುತ್ತಾರೆ ಅಂತ ಕಾಣುತ್ತದೆ. ಹಾಗಾಗಿ ನಿಜವಾಗಿ ಕಂಪ್ಲೇಂಟ್ ಕೊಡಲು ಹೋದವರನ್ನೂ ಅದು ಇದು ಅಂತ ಹೇಳಿ ಓಡಿಸಿಬಿಡಲು ನೋಡುತ್ತಾರೆ. 

ಎಲ್ಲರಲ್ಲಿ ಇರುವಂತೆ ಪೊಲೀಸರಲ್ಲೂ ಸಾಕಷ್ಟು ಜನ ಒಳ್ಳೆಯವರಿದ್ದಾರೆ. ಆದರೆ ಸಿಕ್ಕಾಪಟ್ಟೆ ಕೆಲಸದ ಒತ್ತಡ. ಕೆಲಸಕ್ಕೆ ಒಂದು ಟೈಮ್ ಅಂತಿಲ್ಲ. ಮೇಲಿಂದ ಅವರಿಗೆ ಇರುವ ಸವಲತ್ತುಗಳೂ ಅಷ್ಟಕಷ್ಟೇ. ಎಷ್ಟೇ ನಿಯತ್ತಿನಿಂದಿದ್ದರೂ ಜನರ ಹತ್ತಿರ ಲಂಚಕೋರರು ಅಂತ ಅನ್ನಿಸಿಕೊಳ್ಳಬೇಕಾದ ಕರ್ಮದ ಅನಿವಾರ್ಯತೆ. ಮೇಲಿಂದ ಇಂತಹ ಲಪೂಟ್ ದೂರುದಾರು. ಕಳ್ಳ, ಸುಳ್ಳ ಅಂತೆಲ್ಲ ಛೋಡುತ್ತ ಮಳ್ಳು ಮಾಡಲು ಬರುವವರು. ತಲೆ ಕೆಟ್ಟು ಹೋಗಲಿಕ್ಕೆ ಮತ್ತೇನು ಬೇಕು?

ಪೊಲೀಸರಿಗೆ ಒಳ್ಳೆಯದಾಗಲಿ. ಎಲ್ಲ ಅಡೆತಡೆ, ಕುಂದುಕೊರತೆಗಳ ಮಧ್ಯೆಯೂ ನಮ್ಮ ದೇಶ ಜಗತ್ತಿನಲ್ಲೇ ಒಂದು ಅತ್ಯಂತ safe ದೇಶವಾಗಿರಲು ಕಾರಣ ಒಳ್ಳೆ ಪೊಲೀಸರು ಮತ್ತು ಒಳ್ಳೆ ಜನ ಮತ್ತು ಅದಕ್ಕೆಲ್ಲ ಕಾರಣವಾದ ಸನಾತನ ಧರ್ಮ ಮತ್ತು ಸಂಸ್ಕೃತಿ. ಇವಷ್ಟಿದ್ದಿದ್ದಕ್ಕೆ ಬಚಾವು. ಇಲ್ಲವಾದರೆ ಬೇರೆಕಡೆಯಾಗಿದ್ದರೆ ಅದೆಷ್ಟು ರಕ್ತಕ್ರಾಂತಿಗಳಾಗಿ ಹೋಗುತ್ತಿದ್ದವೋ!

2 comments:

sunaath said...

ಮಹೇಶ,ಒಂದು ನಾಣ್ಯದ ಎರಡೂ ಮುಖಗಳನ್ನು ತೋರಿಸಿದ್ದೀರಿ. ಬಸವರಾಜ ಕಟ್ಟೀಮನಿಯವರು ‘ನಾನೂ ಪೋಲೀಸನಾಗಿದ್ದೆ’ ಎನ್ನುವ ಎರಡು ಭಾಗಗಳ ಕೃತಿಯನ್ನು ಬರೆದಿದ್ದಾರೆ. ಅವರ ತಂದೆಯೇ ಪೋಲೀಸರಾಗಿದ್ದರಿಂದ ಕೃತಿಯು ವಾಸ್ತವತೆಯನ್ನು ಆಧರಿಸಿದೆ. ನಿಮಗೆ ದೊರೆತರೆ ಓದಿರಿ.

Mahesh Hegade said...

ಬಸವರಾಜ ಕಟ್ಟಿಮನಿಯವರ ಪುಸ್ತಕದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು, ಸುನಾಥ್ ಸರ್. ಓದುವ ಪ್ರಯತ್ನ ಜರೂರ್ ಮಾಡುತ್ತೇನೆ.