Sunday, February 05, 2017

ಸಂಸಾರದ ತಾಪತ್ರಯ.....ಯಾರನ್ನೂ ಬಿಟ್ಟಿಲ್ಲ

ಸಂಸಾರದ ತಾಪತ್ರಯ ಅಂತ ತಲೆಕೆಡಿಸಿಕೊಳ್ಳಬೇಡಿ. ಈ ಸಂಸಾರದ  ತಾಪತ್ರಯ ಅನ್ನುವದು ದೇವರನ್ನೇ ಬಿಟ್ಟಿಲ್ಲ ಅಂದ ಮೇಲೆ ಹುಲುಮಾನವರದ್ದೇನು ದೊಡ್ಡ ಮಾತು ಬಿಡಿ.

ಮಹಾದೇವನಾದ ಶಿವನನ್ನೇ ತೆಗೆದುಕೊಳ್ಳಿ. ಅವನ ವಾಹನ ನಂದಿ. ಶಿವನ ಪತ್ನಿ ಪಾರ್ವತಿಯ ವಾಹನ ಹುಲಿ. ಹುಲಿ ನಂದಿಯ ಮೇಲೆ ಎರಗಿ ಬೇಟೆಯಾಡಲು ನೋಡುತ್ತದೆ. ಹುಲಿಯಿಂದ ನಂದಿಯನ್ನು ಕಾಪಾಡುವಷ್ಟರಲ್ಲಿ ಶಿವ ಪಾರ್ವತಿಯರ ತಲೆ ಹನ್ನೆರಡಾಣೆಯಾಗುತ್ತದೆ.

ಇಂತಹ ದೇವ ದಂಪತಿಗಳ ಮಕ್ಕಳು ಗಣೇಶ ಮತ್ತು ಕಾರ್ತಿಕೇಯ (ಷಣ್ಮುಖ). ಗಣೇಶನ ವಾಹನ ಇಲಿ. ಶಿವನ ಕೊರಳಲ್ಲಿದೆ ಹಾವು. ಆ ಹಾವಿಗೆ ಗಣೇಶನ ಇಲಿಯ ಮೇಲೆಯೇ ಕಣ್ಣು. ಗಣೇಶ ನೈವೇದ್ಯವನ್ನು ಗುಳುಂ ಮಾಡುತ್ತಿದ್ದರೆ ಹಾವಿಗೆ ಇಲಿಯನ್ನು ಗುಳುಂ ಮಾಡುವ ಆಸೆ. ಶಿವನ ಹಾವಿನಿಂದ ಗಣೇಶನ ಇಲಿಯನ್ನು ಪಾರುಮಾಡುವಷ್ಟರಲ್ಲಿ ಸಾಕೋಬೇಕಾಗುತ್ತದೆ. ತನ್ನ ಇಲಿಯನ್ನೆಲ್ಲಿ ಹಾವು ಸ್ವಾಹಾ ಮಾಡಿಬಿಡುತ್ತದೆಯೇನೋ ಎಂಬ ಚಿಂತೆಯಲ್ಲಿ ಗಣೇಶ ಒಂದೆರೆಡು ಕಿಲೋ ಸಣ್ಣಗಾಗಿಬಿಡುತ್ತಾನೆ.

ಕಾರ್ತಿಕೇಯನ ವಾಹನ ನವಿಲು. ಆ ನವಿಲಿಗೆ ಶಿವನ ಕೊರಳಲ್ಲಿರುವ ಹಾವಿನ ಮೇಲೆ ಕಣ್ಣು. ಒಂದು ಅವಕಾಶ ಸಿಕ್ಕರೆ ಹಾವನ್ನು ಕಾಲಿನ ಕೆಳಗೆ ಹಾಕಿಕೊಂಡು ತುಳಿತುಳಿದು ಕುಕ್ಕಿ ಕುಕ್ಕಿ ತಿನ್ನುವಾಸೆ. ಮಗನಾದ ಕಾರ್ತಿಕೇಯನ ನವಿಲಿನಿಂದ ಶಿವನ ಹಾವನ್ನು ಬಚಾವ್ ಮಾಡುವದು ಶಿವಪಾರ್ವತಿಯರಿಗೆ ಮತ್ತೊಂದು ಚಾಲೆಂಜ್.

ಹೀಗೆ ಶಿವನ ಕುಟುಂಬದಲ್ಲೂ ಎಲ್ಲರ ಕುಟುಂಬದಲ್ಲಿರುವಂತೆ ಕಿರ್ಕಿರಿ ಇರಬಹುದೇನೋ. ಒಂದೈದು ಕೇಜಿ ಜಾಸ್ತಿಯೇ ಇರಬಹುದು. ಹಾಗಾಗಿ ಸಂಸಾರದ ತಾಪತ್ರಯ ಅನ್ನಿಸಿದಾಗೆಲ್ಲ, ಶಿವಸ್ಮರಣೆ ಮಾಡಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ.

ಶಿವನ ತಲೆಯಲ್ಲಿ ಚಂದ್ರನಿದ್ದಾನೆ. ಜಟೆಯಿಂದ ಗಂಗೆ ಹರಿಯುತ್ತಾಳೆ. ಚಂದ್ರ ಶಾಂತಿಯ ಸಂಕೇತ. ಗಂಗೆ ಜ್ಞಾನದ ದ್ಯೋತಕ. ಸಂಸಾರಿಗಳು ಜ್ಞಾನವನ್ನು ಗಳಿಸಿದರೆ ತಾಪತ್ರಯಗಳಿಂದ ಶಾಂತಿ ಸಿಗುತ್ತದೆ. ಹಾಗಾಗಿಯೇ ಶಿವನ ಮುಖದಲ್ಲಿ ಸದಾ ಶಾಂತಿ. ಸದಾ ಮುಗುಳ್ನಗೆ.

ಮೂಲ: Shiva Sutras by Swami Sukhabodhananda

**

ಪಾರ್ವತಿಯೊಂದಿಗಿರುವ ಶಿವನ ಕೈಯಲ್ಲಿ ತ್ರಿಶೂಲವಿರುತ್ತದೆ. ಸೀತೆಯೊಂದಿಗಿರುವ ರಾಮನ ಕೈಯಲ್ಲಿ ಬಿಲ್ಲುಬಾಣ. ಅದೇ ರಾಧೆಯೊಂದಿಗಿರುವ ಕೃಷ್ಣನ ಕೈಯಲ್ಲಿ ಮಾತ್ರ ಕೊಳಲು. ತ್ರಿಶೂಲ, ಬಿಲ್ಲುಬಾಣ - ಆಯುಧಗಳು. ಕೊಳಲು - ಸಂಗೀತವಾದ್ಯ.

ನೀತಿ: ಪತ್ನಿಯೊಂದಿಗಿದ್ದಾಗ ಸ್ವರಕ್ಷಣೆಗೆ ಆಯುಧದ ಜರೂರತ್ತಿರುತ್ತದೆ. ಅದೇ ಸಖಿಯ (ಗರ್ಲ್ ಫ್ರೆಂಡ್) ಜೊತೆ ಇದ್ದಾಗ ಹಾಡಿ ಕುಣಿಯಲು ಸಂಗೀತ ವಾದ್ಯದ ಜರೂರತ್ತಿರುತ್ತದೆ.

ಕಿಡಿಗೇಡಿ ನೀತಿ: ಶಿವನ ತ್ರಿಶೂಲಕ್ಕೆ ಡಮರುವನ್ನು ಕಟ್ಟಿರುತ್ತಾರೆ. ಡಮರು ಸಂಗೀತ ವಾದ್ಯವಲ್ಲವೇ? ತ್ರಿಶೂಲ ಟೂ-ಇನ್-ಒನ್ ಆಯುಧವಿರಬಹುದು. ಸಂದರ್ಭಕ್ಕೆ ತಕ್ಕಂತೆ ಉಪಯೋಗಿಸಬಹುದು.

ಜೋಕ್ ಮೂಲ: ಸ್ವಾಮಿ ಅನುಭವಾನಂದ ಸರಸ್ವತಿ ಅವರ ಪ್ರವಚನ.

**

ಪ್ರಬುದ್ಧರಾಗುವದು ಅಂದರೆ ದೊಡ್ಡ ದೊಡ್ಡ ಮಾತುಗಳನ್ನಾಡುವದಲ್ಲ. ಸಣ್ಣ ಸಣ್ಣ ಮಾತುಗಳಲ್ಲಿರುವ ದೊಡ್ಡತನವನ್ನು ಗ್ರಹಿಸುವದೇ ಪ್ರಬುದ್ಧತೆ. ಅದಕ್ಕೆಯೇನೋ ಈಗಿತ್ತಲಾಗೆ ಇಂತಹ ಚುಟುಕುಗಳು ಇಷ್ಟವಾಗುತ್ತವೆ. ಅವುಗಳಲ್ಲಿರುವ 'ಅರ್ಥ' ತಿಳಿಯುತ್ತದೆ. :)

2 comments:

sunaath said...

ಅನರ್ಥದ ಉದಾಹರಣೆಗಳಲ್ಲೇ ಅರ್ಥವನ್ನು ತೋರಿಸಿದ್ದಿರಿ, ಮಹೇಶ. ಇನ್ನು ನನ್ನ ಬಾಳಿನಲ್ಲಾದ ಅನರ್ಥಗಳಿಂದ ನಾನು ಜ್ಞಾನವನ್ನು, ತನ್ಮೂಲಕ ಶಾಂತಿಯನ್ನು ಪಡೆಯಬಹುದು!
ವಿಶೇಷ ಟಿಪ್ಪಣಿ: ನಕ್ಕು ನಗಿಸುವ ಇಂತಹ ಲೇಖನಗಳು ಇನ್ನಷ್ಟು ಬರಲಿ.

Mahesh Hegade said...

Thanks, Sunaath Sir.