Friday, October 30, 2015

ಅಮೇರಿಕನ್ ದೆವ್ವ! (A Halloween ghost thriller)

ಸಾರಾಂಶ: ಇಂದು ಇಲ್ಲಿ ಅಮೇರಿಕಾದಲ್ಲಿ ಹ್ಯಾಲೋವೀನ್. ದೆವ್ವಗಳ ಹಬ್ಬ. ಬರೋಬ್ಬರಿ ಹದಿನೆಂಟು ವರ್ಷಗಳ ಹಿಂದಿನ ಹ್ಯಾಲೋವೀನ್ ನನ್ನ ಮೊತ್ತ ಮೊದಲ ಹ್ಯಾಲೋವೀನ್. ಆಗ ಮಾತ್ರ ಅಮೇರಿಕಾಗೆ ಬಂದಿದ್ದೆ. ಹ್ಯಾಲೋವೀನ್ ಅಂದರೆ ದೆವ್ವಗಳ ಹಬ್ಬ ಅಂತ ಕೇಳಿದ್ದೆ. ಅಂದೇ ದೆವ್ವದ ದರ್ಶನವೂ ಆಗೇಬಿಟ್ಟಿತು. ಅದನ್ನು ನೆನಪಿಸಿಕೊಂಡರೆ ಇವತ್ತೂ ಮೈ ಝುಮ್ ಅನ್ನುತ್ತದೆ. ಬೆನ್ನು ಹುರಿಯಲ್ಲೊಂದು ಭಯ ಸಳಕ್ ಅಂತ ನುಗ್ಗಿ ಬರುತ್ತದೆ.

ಆವತ್ತು ಮನೆಗೆ ಬಂದವಳು ಒಬ್ಬ ಸಹೋದ್ಯೋಗಿ. ಒಂದು ಕಪ್ ಚಹಾ ಮಾಡಿ ತರೋಣ ಅಂತ ಅಡುಗೆಮನೆ ಹೊಕ್ಕೆ. ಚಹಾ ಮಾಡಿಕೊಂಡು ಬರುವಷ್ಟರಲ್ಲಿ ಆಕೆ ಆಕೆಯಾಗಿ ಉಳಿದಿರಲಿಲ್ಲ. ಒಂದು ಭಯಾನಕ ದೆವ್ವವಾಗಿ ಬದಲಾಗಿಹೋಗಿದ್ದಳು! ಮುಂದೆ ಎರಡು ತಾಸು ಮಾತ್ರ ಫುಲ್ ಭೂತ ದರ್ಶನ, ಪ್ರೇತ ಬಾಧೆ! ಸತ್ತು ಸತ್ತು ಬದುಕಿ ಬಂದೆ.

***

ಅಂದಿನ ತಾರೀಕು ಬರೋಬ್ಬರಿ ನೆನಪಿದೆ. ೩೧ ಅಕ್ಟೋಬರ್ ೧೯೯೭. ಬರೋಬ್ಬರಿ ಹದಿನೆಂಟು ವರ್ಷಗಳ ಹಿಂದೆ. ಅಂದು ಶುಕ್ರವಾರ. ಶುಕ್ರವಾರ ಎಂದರೆ ಏನೋ ಉತ್ಸಾಹ. ಮಧ್ಯಾನ ನಾಲ್ಕು ಘಂಟೆ ಹೊತ್ತಿಗೆ ಆಫೀಸಿನಿಂದ ಫೇರಿ ಕಿತ್ತೇಬಿಡುವದು. ವೀಕೆಂಡ್ ಶುರು ಮಾಡಬೇಕಲ್ಲ ಮಾರಾಯರೇ!?

ಅಮೇರಿಕಾಗೆ ಬಂದು ಇನ್ನೂ ಕೇವಲ ನಾಲ್ಕು ಚಿಲ್ಲರೆ ತಿಂಗಳು ಮಾತ್ರ ಆಗಿತ್ತು. ಇನ್ನೂ ಪೂರ್ತಿ ಸೆಟಲ್ ಆಗಿರಲಿಲ್ಲ. ಬಾಸ್ಟನ್ ನಗರದ ಆಸುಪಾಸಿನ ಊರಿನ ಕಂಪನಿಯೊಂದರಲ್ಲಿ ಕಂಪ್ಯೂಟರ್ ಕೂಲಿ ಕೆಲಸ. ಕೆಲಸವೂ ಜಾಸ್ತಿ ಇರಲಿಲ್ಲ. ಏನೋ ಒಂದು ತರಹದಲ್ಲಿ ಕಂಪ್ಯೂಟರ್ ಕೂಲಿ ನಾಲಿ ಮಾಡಿಕೊಂಡಿದ್ದೆ.

ಮನೆ ಅಂತ ಒಂದು ಅಪಾರ್ಟ್ಮೆಂಟ್ (ಫ್ಲಾಟ್) ಭಾಡಿಗೆಗೆ ಹಿಡಿದಾಗಿತ್ತು. ಮೊದಲು ಒಂದು ತಿಂಗಳು ಒಬ್ಬ ರೂಮ್ಮೇಟ್ ಇದ್ದ. ನಂತರ ಅವನೂ ಕಳಚಿಕೊಂಡ. ಒಬ್ಬನೇ ಈಗ. ಅದೇ ಬೇಕಾಗಿತ್ತು ಅನ್ನಿ. ಹೇಳಿಕೇಳಿ ಸರ್ಟಿಫೈಡ್ ಒಂಟಿ ಸಲಗ ನಾನು. ಕೆಲವು ಕುಹಕಿಗಳು ಒಂಟಿ ಗೂಬೆ ಅಂತ ಕೂಡ ಅನ್ನುತ್ತಾರೆ. ಅದೆಲ್ಲ ಅವರವರ ಭಾವಕ್ಕೆ ಭಕುತಿಗೆ ಬಿಟ್ಟಿದ್ದು.

ಇನ್ನೂ ಕಾರು ಖರೀದಿ ಮಾಡಿರಲಿಲ್ಲ. ಅಮೇರಿಕಾದಲ್ಲಿ ಕಾರಿಲ್ಲ ಅಂದರೆ ಕಾಲೇ ಇಲ್ಲ. ಹಾಗಾಗಿ ಓಡಾಟ ಮನೆ ಮತ್ತು ಆಫೀಸಿಗೆ ಅಷ್ಟೇ ಸೀಮಿತ. ಬೆಳಿಗ್ಗೆ ಮತ್ತು ಸಂಜೆ ಟ್ಯಾಕ್ಸಿಯಲ್ಲಿ ಹೋಗಿ ಬಂದು ಮಾಡುವದು. ಆಫೀಸ್ ಒಂದು ಮೂರು ಮೈಲು ದೂರದಲ್ಲಿ ಇತ್ತು. ಹೋಗಲಿಕ್ಕೆ ಒಂದು ಹತ್ತು ಡಾಲರ್ ಮತ್ತು ವಾಪಸ್ ಬರಲಿಕ್ಕೆ ಮತ್ತೊಂದು ಹತ್ತು ಡಾಲರ್. ಅಲ್ಲಿಗೆ ದಿನಕ್ಕೆ ಇಪ್ಪತ್ತು ಡಾಲರ್ ಶಿವಾಯ ನಮಃ! ಏನು ಮಾಡುವದು? ಯಾರೂ ಪರಿಚಯದವರೂ ಇರಲಿಲ್ಲ. ಆಫೀಸಿನಲ್ಲಿ ಕಂಡ ದೇಸಿ ಮುಂಡೆಮಕ್ಕಳಲ್ಲಿ ಮುಖ ತಿರುಗಿಸಿಕೊಂಡು ಹೋದವರೇ ಹೆಚ್ಚು. ಸಹಾಯ ಮಾಡುವದು ದೂರದ ಮಾತು. ನಾವೂ ಅಷ್ಟೇ. ಮೊದಲೇ ಅಂತರ್ಮುಖಿ. ಹಾಗಾಗಿ ಜನರ ಗುರ್ತು ಪರಿಚಯ ಮಾಡಿಕೊಳ್ಳುವದೂ ಇಲ್ಲ. ಬೇಕಾಗಿಯೂ ಇಲ್ಲ. 'ಅಹಂ ಬ್ರಹ್ಮಾಸ್ಮಿ' ಟೈಪಿನ ಜನ ನಾವು.

ಅಪಾರ್ಟ್ಮೆಂಟ್ ಭಾಡಿಗೆ, ಡೆಪಾಸಿಟ್ ಅಡ್ವಾನ್ಸ್ ಕೊಡಲಿಕ್ಕೆ, ಮನೆಗೆ ಬೇಕಾದ ಒಂದೆರೆಡು ಸಾಮಾನು ತೆಗೆದುಕೊಳ್ಳುವಷ್ಟರಲ್ಲಿ ಭಾರತದಿಂದ ತಂದಿದ್ದ ರೊಕ್ಕವೆಲ್ಲ ಖರ್ಚಾಗಿ ಹೋಯಿತು. ಮಗ ದೂರದ ಅಮೇರಿಕೆಗೆ ಹೊರಟಿದ್ದಾನೆ ಅಂತ ಏನೋ ಒಂದಿಷ್ಟು ಸಾವಿರ ರೂಪಾಯಿಗಳನ್ನು ಡಾಲರಿಗೆ ಬದಲಾಯಿಸಿ ಕೊಟ್ಟುಕಳಿಸಿದ್ದರು ಮನೆಯವರು. ಅದು ಅಷ್ಟಕ್ಕೆ ಸರಿ ಹೋಯಿತು. ಈಗ ಏನಾದರೂ ರೊಕ್ಕ ಕಾಣಬೇಕು ಅಂದರೆ ಪಗಾರ್ ಬರುವ ತನಕ ಕಾಯಬೇಕು. ಎರಡು ವಾರಕ್ಕೆ ಒಂದು ಬಾರಿ ಪಗಾರ್ ಬರುತ್ತದೆ. ಅದು ಒಳ್ಳೆಯದೇ.

ಬಂದ ಪಗಾರಿನಲ್ಲಿ ಉಳಿಯುತ್ತಿದ್ದ ಅಲ್ಪ ಸ್ವಲ್ಪ ರೊಕ್ಕದಲ್ಲಿ ಮೊದಲ ತಿಂಗಳು ಒಂದು ಟೀವಿ ತಂದೆ. ಕೇಬಲ್ ಹಾಕಿಸಿದೆ. ಏನೋ ಒಂದು ತರಹದ ಟೈಮ್ ಪಾಸ್. ಭಾರತದಿಂದ ತಂದಿದ್ದ ಒಂದು ಅರ್ಧ ಡಜನ್ ಪುಸ್ತಕ, ಒಂದು ಡಜನ್ ಮ್ಯೂಸಿಕ್ ಕ್ಯಾಸೆಟ್ಟುಗಳು ಇದ್ದವು. ಟೀವಿ ನೋಡಿ, ಓದಿದ ಪುಸ್ತಕ ಮತ್ತೆ ಮತ್ತೆ ಓದಿ, ಕೇಳಿದ ಸಂಗೀತವನ್ನೇ ಮತ್ತೆ ಮತ್ತೆ ಕೇಳಿ ಟೈಮ್ ಪಾಸ್ ಮಾಡುತ್ತಿದ್ದೆ. ಲೈಫ್ ಒಂದು ತರಹದ ಬೋರೇ ಅನ್ನಿ. ಓಂ ಶ್ರೀ ಬೋರಲಿಂಗಾಯ ನಮಃ!

ಎರಡನೇ ತಿಂಗಳು ಉಳಿಸಿದ ರೊಕ್ಕದಿಂದ ಒಂದು VCR ತಂದೆ. ಈಗ ಮತ್ತೂ ಮಜಾ ಬಂತು. ಯಾವಾಗಲಾದರೂ ನಮ್ಮ ಭಾರತದ ಸಾಮಾನುಗಳನ್ನು ಮಾರುವ ದೇಸಿ ಅಂಗಡಿಗಳಿಗೆ ಹೋದಾಗ ಅಲ್ಲಿ ಸಿಗುವ ಹಿಂದಿ ಸಿನೆಮಾದ ವೀಡಿಯೊಗಳನ್ನು ತಂದು ನೋಡಬಹುದು. ಅದು ಪರಮಾನಂದ. ೧೯೭೦, ೧೯೮೦ ರ ದಶಕದ ಎಷ್ಟೆಷ್ಟೋ ಒಳ್ಳೊಳ್ಳೆ ಮೂವಿಗಳನ್ನು ನೋಡಿಯೇ ಇರಲಿಲ್ಲ. ಈಗ ಅವನ್ನೆಲ್ಲ ಪಟ್ಟಾಗಿ ಕುಳಿತು ನೋಡುವ ಸೌಭಾಗ್ಯ. ಆದರೆ ದೇಸಿ ಅಂಗಡಿಗೆ ಹೋಗಲೂ ಕಾರು ಬೇಕು. ನಮ್ಮ ಕಡೆ ಇನ್ನೂ ಕಾರು ಬಂದಿಲ್ಲ. ಮತ್ತೆ ಟ್ಯಾಕ್ಸಿ.

ಇನ್ನೊಂದು ತಿಂಗಳು ಹೋದರೆ at least ಒಂದು ಒಳ್ಳೆ ಸೆಕೆಂಡ್ ಹ್ಯಾಂಡ್ ಕಾರು ಕೊಳ್ಳಲು ಬೇಕಾಗುವಷ್ಟು ಡಿಪಾಸಿಟ್ ಕಾಸು ಉಳಿತಾಯ ಆಗಿರುತ್ತದೆ. ಉಳಿದ ಮೊತ್ತ ಫೈನಾನ್ಸ್ ಮಾಡಿಸುವದು. ಅದೂ ಸುಲಭವಾಗಿ ಸಿಗುವದಿಲ್ಲ ಅಂತ ಗೊತ್ತೇ ಇದೆ. ಯಾಕೆಂದರೆ ನಾವು ಈ ದೇಶದಲ್ಲಿ ಇನ್ನೂ ಹೊಸ ಅಬ್ಬೇಪಾರಿ. ಕ್ರೆಡಿಟ್ ಹಿಸ್ಟರಿ ಇಲ್ಲ. ಆತ್ಮೀಯ ದೋಸ್ತನೊಬ್ಬ ಕಾರಿನ ಸಾಲಕ್ಕೆ ಗ್ಯಾರಂಟಿ, surety ಹಾಕುತ್ತೇನೆ ಅಂದಿದ್ದಾನೆ. ಅದೆಲ್ಲ ಸರಿಯಾಗಿ ವರ್ಕ್ ಔಟ್ ಆಗಿ, ಮುಂದಿನ ತಿಂಗಳು ಒಂದು ಕಾರು ತೆಗೆದುಕೊಂಡುಬಿಟ್ಟರೆ ಒಂದು ಮಟ್ಟದಲ್ಲಿ ಅಮೇರಿಕಾದಲ್ಲಿ ಸೆಟಲ್ ಆದಂತೆಯೇ. ಒಮ್ಮೆ ಕಾರು ಬಂದು, ಲೈಬ್ರರಿ, ಸಿನಿಮಾ, ಅಲ್ಲಿ, ಇಲ್ಲಿ ಹೋಗಲಿಕ್ಕೆ ಸಾಧ್ಯವಾಗಿಬಿಟ್ಟರೆ ನಮಗೆ ಬೇರೆ ಏನೂ ಚಿಂತೆ ಇಲ್ಲ ಮಾರಾಯರೇ. ಈಗ ಓದಲಿಕ್ಕೆ ಪುಸ್ತಕ ಇಲ್ಲ. ಓಡಾಡಲಿಕ್ಕೆ ಕಾಲು ಇಲ್ಲ ಅಂದರೆ ಕಾರು ಇಲ್ಲ ಅನ್ನೋದೇ ದೊಡ್ಡ ಬೇಸರ.

ಹೀಗೆಲ್ಲ ವಿಚಾರ ಮಾಡುತ್ತ ಆ ದಿನದ ಲಾಸ್ಟ್ ಕಾಫಿ ಕುಡಿದು ಮುಗಿಸಿದೆ. ಟೈಮ್ ನೋಡಿದರೆ ನಾಲ್ಕೂ ಕಾಲು. ಚಳಿಗಾಲ ಒಂದು ಮಟ್ಟದಲ್ಲಿ ಶುರುವಾಗೇ ಹೋಗಿದೆ. ನಾಲ್ಕು ಘಂಟೆಗೇ ಸುಮಾರು ಕತ್ತಲಾಗಿಬಿಡುತ್ತದೆ. ಮೇಲಿಂದ ಚಳಿ ಬೇರೆ.

ಟ್ಯಾಕ್ಸಿಗೆ ಫೋನ್ ಮಾಡಿದೆ. ಪಕ್ಕದಲ್ಲೇ ಇದೆ ಟ್ಯಾಕ್ಸಿ ಸ್ಟಾಂಡ್. ಐದು ನಿಮಿಷದಲ್ಲಿ ಬಂದಿರುತ್ತದೆ. ಕಂಪ್ಯೂಟರ್ ಆಫ್ ಮಾಡಿ, ಕಾಫಿ ಕಪ್ ತೊಳೆದಿಟ್ಟು, ಕೆಳಗೆ ಹೋಗುವ ತನಕ ಟೈಮಿಂಗ್ ಸರಿಯಾಗುತ್ತದೆ.

ಅದಿಷ್ಟು ಮಾಡಿ ಕೆಳಗೆ ಬಂದು ನೋಡಿದರೆ ಟ್ಯಾಕ್ಸಿ ಬಂದು ನಿಂತಿತ್ತು. ಸದಾ ಬರುವ ಟ್ಯಾಕ್ಸಿ ಡ್ರೈವರ್ ಜಿಮ್ ಅನ್ನುವವನೇ ಬಂದಿದ್ದ. ನನ್ನನ್ನು ನೋಡಿ ದೊಡ್ಡ ನಗೆ ನಕ್ಕ. ಈಗ ನಾಲ್ಕು ತಿಂಗಳಿಂದ ಅವನ ಖಾಯಂ ಗಿರಾಕಿಯಾಗಿದ್ದೇನೆ ನೋಡಿ. ಹಾಗಾಗಿ ಏನೋ ಒಂದು ತರಹದ ಆತ್ಮೀಯತೆ, ದೋಸ್ತಿ ಬಂದಿದೆ. ಏನೇನೋ ಪ್ರಶ್ನೆಗಳನ್ನು ಕೇಳುತ್ತಾನೆ. ನಾನು ಅವನ ಪ್ರಶ್ನೆಗಳಿಗೆ ಹೇಳುವ ಉತ್ತರ, ನನ್ನ accent ಎಲ್ಲ ಅವನಿಗೆ ಮಜಾ ಅನ್ನಿಸುತ್ತದೆ. ಪೆಕಪೆಕಾ ಅಂತ ನಗುತ್ತಲೇ ಡ್ರೈವ್ ಮಾಡುತ್ತಾನೆ. ಒಳ್ಳೆಯವನು ಜಿಮ್.

'ಎಲ್ಲಿಗೆ? ಸೀದಾ ಮನೆಗೇನು?' ಅಂತ ಕೇಳಿದ ಜಿಮ್.

'ಮನೆ ಪಕ್ಕದ ಸೂಪರ್ ಮಾರ್ಕೆಟ್ಟಿಗೆ ಬಿಟ್ಟುಬಿಡು. ಒಂದಿಷ್ಟು ದಿನಸಿ, ಅದು ಇದು ಸಾಮಾನು ಖರೀದಿ ಮಾಡಬೇಕು. ಅಲ್ಲಿಂದ ಮನೆ ಕಾಲು ಮೈಲು ಅಷ್ಟೇ. ನಂತರ ಮನೆಗೆ ನಡೆದು ಹೋಗುತ್ತೇನೆ,' ಅಂದೆ.

'ಸರಿ,' ಎಂದ ಜಿಮ್ ಗಾಡಿ ಬಿಟ್ಟ. ಮುಂದಿನ ಹತ್ತು ನಿಮಿಷದಲ್ಲಿ ಸೂಪರ್ ಮಾರ್ಕೆಟ್ ಎದುರಿಗೆ ಗಾಡಿ. ಎಂದಿನಂತೆ ಟ್ಯಾಕ್ಸಿ ಮೀಟರ್ ಒಂಬತ್ತು ಡಾಲರ್ ತೋರಿಸಿತು. ಹತ್ತರ ಒಂದು ನೋಟು ಕೊಟ್ಟು ಇಳಿದೆ. ಅದು ಸ್ಟ್ಯಾಂಡರ್ಡ್. ಒಂದು ಡಾಲರ್ ಟಿಪ್. ಆದರೆ ಜಿಮ್ ಒಳ್ಳೆಯವನು. ಈಗಿತ್ತಲಾಗೆ ಟಿಪ್ ಬೇಡ ಅನ್ನುತ್ತಾನೆ. ಒಂದು ಡಾಲರ್ ಹಿಂತಿರುತಿಗಿಸಿ ಬಿಡುತ್ತಾನೆ. ನಮ್ಮಂತಹ ಬಡಪಾಯಿ ಅಬ್ಬೇಪಾರಿ ದೇಸಿ ಆದ್ಮಿ ದಿನವೂ ಟ್ಯಾಕ್ಸಿಗೆ ಅಂತಲೇ ಇಪ್ಪತ್ತು ಡಾಲರುಗಳನ್ನು ತೆತ್ತುವದನ್ನು ಅವನಿಂದಲೂ ನೋಡಲಾಗುತ್ತಿಲ್ಲ ಅಂತ ಕಾಣುತ್ತದೆ. ದೇವರು ಅವನನ್ನು ಚೆನ್ನಾಗಿ ಇಟ್ಟಿರಲಿ. ಮೊದಲೇ ನಾವು ಕಂಪ್ಯೂಟರ್ ಕೂಲಿ ನಾಲಿ ಕೆಲಸ ಮಾಡಿಕೊಂಡಿದ್ದೇವೆ. ರೊಕ್ಕಕ್ಕೆ ಕಡ್ಕಿ. ಅದರಲ್ಲೂ ಪೈ ಪೈ ಜೋಡಿಸಬೇಕಾಗಿದೆ. ರೊಕ್ಕ ಕೂಡಿಸಿ ಕಾರ್ ತೊಗೋಬೇಕ್ರೀ! ಹಾಗಾಗಿ ಟಿಪ್ ರೊಕ್ಕ ಜಿಮ್ ವಾಪಸ್ ಕೊಟ್ಟರೆ ದೂಸರಾ ಮಾತಿಲ್ಲದೆ ಕಿಸೆಯೊಳಗೆ ಇಳಿಸಿದೆ. ಹನಿ ಹನಿ ಕೂಡಿದರೆ ಹಳ್ಳ. ಕೂಡಲಿಲ್ಲ ಅಂದರೆ ಹಳ್ಳ ಹಿಡಿಯುತ್ತದೆ ನಮ್ಮ ಆರ್ಥಿಕ ಪರಿಸ್ಥಿತಿ.

ಸೂಪರ್ ಮಾರ್ಕೆಟ್ ಒಳ ಹೊಕ್ಕೆ. ಆಹಾ! ಒಳ್ಳೆ ಇಂದ್ರನ ಅರಮನೆ. ಬೀದಿ ಮೂಲೆಯಲ್ಲಿನ ಶೆಟ್ಟರ ಕಿರಾಣಿ ಅಂಗಡಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲೋ, ರದ್ದಿ ಹಾಳೆಯ ಪುಡಿಕೆಯಲ್ಲೋ ದಿನಸಿ, ಕಿರಾಣಿ ಸಾಮಾನು ತಂದವರು ನಾವು. ಜಾಸ್ತಿ ತಂದಿರಲೂ ಇಲ್ಲ ಬಿಡಿ. ಅದೆಲ್ಲ ಮನೆ ಹೆಂಗಸರ ಕೆಲಸ. ಮನೆಯಲ್ಲಿದ್ದಾಗ ಹಾಗಾಯಿತು. ಹಾಸ್ಟೇಲಿನಲ್ಲಿ ಇದ್ದಾಗ ಅಂತೂ ಯಾವದೇ ತಲೆಬಿಸಿಯಿರಲಿಲ್ಲ. ಹಾಗಾಗಿ ಅಮೇರಿಕಾಗೆ ಬಂದ ಮೇಲೆ ಸೂಪರ್ ಮಾರ್ಕೆಟ್ ಹೊಕ್ಕುಬಿಟ್ಟರೆ ಅದೇ ಒಂದು ದೊಡ್ಡ ಮಾತು. ಒಂದಿಷ್ಟು ಹಾಲು, ಬ್ರೆಡ್, ಒಂದಿಷ್ಟು ತರಕಾರಿ ಅದು ಇದು ಮಾತ್ರ ಬೇಕು. ಇಲ್ಲಿ ನೋಡಿದರೆ ಅಬಬಬಬಾ! ಏನು ಕೇಳ್ತೀರಿ!? ಚಿತ್ರ ವಿಚಿತ್ರ ಸಾಮಾನುಗಳ ದುನಿಯಾ.

ಹೊಸದಾಗಿ ಅಮೇರಿಕಾಗೆ ಬಂದಿದ್ದು. ಇನ್ನೂ ಎಲ್ಲದರ ರುಚಿ ಕೂಡ ನೋಡಿಲ್ಲ. ಬ್ರೆಡ್ ಅಂದರೆ ಒಂದು ಐವತ್ತು ಟೈಪಿನ ಬ್ರೆಡ್. ಮತ್ತೊಂದು ಇಪ್ಪತ್ತು ಮಾದರಿಯ ಬನ್ಸ್. ಸಾವಿರ ರೀತಿಯ ಜಾಮ್. ಆಯ್ಕೆಗಳೋ ಆಯ್ಕೆಗಳು. ತಲೆ ಕೆಟ್ಟು ಹೋಗಬೇಕು. ಮೇಲಿಂದ ಮಂಗ್ಯಾನ ಮನಸ್ಸಿಗೆ ಕಂಡಿದ್ದೆಲ್ಲ ಬೇಕು. ಅಯ್ಯೋ! ಎಲ್ಲದರ ರುಚಿ ನೋಡೋದು ಬೇಡವೇ!? ಅಡುಗೆ ಮಾಡಲಿಕ್ಕೆ ಬರದಿದ್ದರೂ ಏನೇನೋ ಹುಚ್ಚ ಅಡುಗೆ ಐಡಿಯಾ ತಲೆಗೆ ಬರುತ್ತವೆ. ಸಾವಿರ ರೀತಿಯ ಚಿತ್ರವಿಚಿತ್ರ ವ್ಯಂಜನಗಳು ಕಾಣುತ್ತವೆ. ಒಂದೊಂದೇ ತೆಗೆದು ಶಾಪಿಂಗ್ ಕಾರ್ಟಿಗೆ ಹಾಕುತ್ತಾ ಬಂದೆ. ಕಾರ್ಟ್ ತುಂಬುತ್ತಾ ಬಂತು. ಹಣ್ಣು ಹಂಪಲು ಕೂಡ ತೆಗೆದುಕೊಳ್ಳಬೇಕು. ಹಾಂ! ಜೇನುತುಪ್ಪ ಬೇಕು. ಮೇಲಿಂದ ಒಂದಿಷ್ಟು ಬಾದಾಮಿ, ಒಣ ದ್ರಾಕ್ಷೆ ಎಲ್ಲ ಬೇಕು. ಮೊಟ್ಟೆ ಮರೆತೇಬಿಟ್ಟೆ. ನಾಳೆ ಶನಿವಾರ. ಬೆಳಿಗ್ಗೆ ಗಡಿಬಿಡಿಯಿಲ್ಲ. ಮಸಾಲೆ ಆಮ್ಲೆಟ್ ಮಾಡೋಣ.

ಹೀಗೆಲ್ಲ ವಿಚಾರ ಮಾಡುತ್ತ, ಇಡೀ ಸೂಪರ್ ಮಾರ್ಕೆಟ್ ಓಡಾಡಿ, ಬೇಕಾಗಿದ್ದು ಬೇಡಾಗಿದ್ದು ಎಲ್ಲವನ್ನೂ ಶಾಪಿಂಗ್ ಕಾರ್ಟಿಗೆ ತುಂಬುವ ತನಕ ಸಾಕಷ್ಟು ಸಾಮಾನಾಗಿಬಿಟ್ಟಿತು. ಚೆಕ್ಔಟ್ ಕೌಂಟರಿಗೆ ಬಂದು ಸಾಮಾನುಗಳನ್ನು ಸುರುವಿದೆ. ಚೆಕ್ಔಟ್ ಕೌಂಟರಿನಲ್ಲಿದ್ದ ಹುಡುಗಿ ನಗುನಗುತ್ತ ಎಲ್ಲ ಸಾಮಾನುಗಳನ್ನು ಸ್ಕ್ಯಾನ್ ಮಾಡಿ ಮಾಡಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಯೇ ತುಂಬಿದಳು. ಎಂಟತ್ತು ಚೀಲಗಳಾಗಿ ಹೋಯಿತು. ಎಲ್ಲ ಪ್ಲಾಸ್ಟಿಕ್ ಚೀಲಗಳನ್ನು ಮತ್ತೆ ಶಾಪಿಂಗ್ ಕಾರ್ಟಿನಲ್ಲಿ ಇಟ್ಟುಕೊಂಡು, ಕಾಸು ಕೊಟ್ಟು, ಕಾರ್ಟ್ ದೂಡಿಕೊಂಡು ಹೊರಬಿದ್ದಾಗಲೇ ತಲೆಗೆ ಹೊಳೆದಿದ್ದು. ಆಗ ವಿಚಾರ ಬಂತು. ಶಿವನೇ  ಶಂಭುಲಿಂಗ! ಎಂಟತ್ತು ಪ್ಲಾಸ್ಟಿಕ್ ಚೀಲಗಳಾಗಿ ಬಿಟ್ಟಿವೆ. ಮನೆ ಕಮ್ಮಿ ಕಮ್ಮಿಯಂದರೂ ಕಾಲು ಮೈಲು ದೂರವಿದೆ. ಇಷ್ಟೆಲ್ಲಾ ಸಾಮಾನು ಒಮ್ಮೆಲೇ ಕೈಯಲ್ಲಿ ಎತ್ತಿಕೊಂಡು, ಹಿಡಿದುಕೊಂಡು ನಡೆದು ಹೋಗಲು ಸಾಧ್ಯವೇ ಇಲ್ಲ. ಏನೋ ಒಂದು ಹತ್ತು ಹೆಜ್ಜೆ ಅಂದರೆ ಮ್ಯಾನೇಜ್ ಮಾಡಬಹುದಿತ್ತೇನೋ. ಕಮ್ಮಿ ಕಮ್ಮಿ ಅಂದರೂ ಎರಡು ಫರ್ಲಾಂಗ್ ದೂರವಿದೆ ಮನೆ. ಈಗ ಏನು ಮಾಡಲಿ? ಮತ್ತೆ ಫೋನ್ ಮಾಡಿ ಟ್ಯಾಕ್ಸಿ ಕರೆಯಲೇ? ಇದೊಂದು ದೊಡ್ಡ ತಲೆಬಿಸಿಯಾಯಿತು ಮಾರಾಯರೇ. ಹೆಚ್ಚಿನ ಸಾಮಾನು ಇಲ್ಲೇ ಇಟ್ಟು, ಆದಷ್ಟೇ ಸಾಮಾನುಗಳನ್ನು ಮನೆಗೆ ತೆಗೆದುಕೊಂಡು ಹೋಗಿ,  ಮನೆಯಲ್ಲಿಟ್ಟು, ವಾಪಸ್ ಬರಲೇ? ಇಲ್ಲಿ ಎಲ್ಲಿಟ್ಟು ಹೋಗಲಿ? ಇಟ್ಟು ಹೋದರೆ ಬರುವ ತನಕ ಸಾಮಾನು ಇಲ್ಲೇ ಇರಬೇಕಲ್ಲ? ಯಾರಾದರೂ ನೋಡಿ ಅನಾಥ ಸಾಮಾನೆಂದು ಕಸದ ಬುಟ್ಟಿಗೆ ಎಸೆದಿರುತ್ತಾರೆ. ಇಷ್ಟೆಲ್ಲ ಖರೀದಿ ಮಾಡಿದ್ದು ಶಿವಾಯ ನಮಃ ಆಗಿಬಿಡುತ್ತದೆ. ಇಂತಹ ಪರಿಸ್ಥಿತಿ ಮೊದಲೆಂದೂ ಬಂದಿರಲಿಲ್ಲ. ಇವತ್ತು ಅದ್ಯಾವದೋ ಹುರುಪಿನಲ್ಲಿ ಸಿಕ್ಕಾಪಟ್ಟೆ ಸಾಮಾನುಗಳನ್ನು ಖರೀದಿ ಮಾಡಿ ಮಂಗ್ಯಾ ಆಗಿಬಿಟ್ಟಿದ್ದೇನೆ. ಹೀಗೆ ವಿಚಾರ ಮಾಡಿ ಮಳ್ಳು ಮುಖ ಮಾಡಿಕೊಂಡು ನಿಂತಿದ್ದೆ. ಹೊರಗೆ ಕತ್ತಲು ಜೋರಾಗಿ ಕವಿಯುತ್ತಿತ್ತು. ಸೂಪರ್ ಮಾರ್ಕೆಟ್ಟಿನ ಬಾಗಿಲು ತೆಗೆದಾಗೊಮ್ಮೆ ತಣ್ಣನೆಯ ಕುರ್ಗಾಳಿ ನುಗ್ಗಿ ಬರುತ್ತಿತ್ತು. ಮತ್ತೂ ಟೆನ್ಶನ್ ಹೆಚ್ಚಾಗುತ್ತಿತ್ತು. ಆವಾಗ ನನ್ನ ಪಾಲಿನ ಭಾಗ್ಯದೇವತೆ ಪ್ರತ್ಯಕ್ಷಳಾದಳು.

'ಹಾಯ್ ಮಹೇಶ್!' ಅಂತ ಶುದ್ಧ ಅಮೇರಿಕನ್ ಶೈಲಿಯಲ್ಲಿ ಉಲಿಯುತ್ತ, ದೊಡ್ಡ ಗಲಗಲ ನಗೆ ನಗುತ್ತ ಬಂದಾಕೆ ಜೆನ್ನಿಫರ್. ನಮ್ಮ ಆಫೀಸಿನಲ್ಲೇ ಕೆಲಸ ಮಾಡುತ್ತಾಳೆ. Human Resources ವಿಭಾಗದಲ್ಲಿ ಮ್ಯಾನೇಜರ್. ಕಂಪನಿಗೆ ಹೊಸದಾಗಿ ಸೇರಿಕೊಂಡ ಭಾರತೀಯರನ್ನು ಸೆಟಲ್ ಮಾಡಿಸುವ ಪ್ರಾಥಮಿಕ ಕೆಲಸಗಳನ್ನೆಲ್ಲ ಆಕೆಯೇ ಮಾಡಿಸಿಕೊಡುತ್ತಾಳೆ. ನಾನು ಕೆಲಸಕ್ಕೆ ಸೇರಿ ಮಾತ್ರ ಕೆಲವೇ ತಿಂಗಳಾಗಿತ್ತು. ವಾರಕ್ಕೆ ಒಮ್ಮೆಯಾದರೂ ಆಕೆಯ ಹತ್ತಿರ ನನ್ನದು ಏನಾದರೂ ಕೆಲಸ ಇದ್ದೇ ಇರುತ್ತಿತ್ತು. ಮತ್ತೆ ಆಕೆ ತುಂಬಾ ಸ್ನೇಹಜೀವಿ. ಎಲ್ಲರ ಜೊತೆ ತಮಾಷೆ ಮಾಡಿಕೊಂಡು, ಜೋಕ್ ಹೊಡೆದುಕೊಂಡು ಇರುತ್ತಿದ್ದಳು. ಅದೂ ದೇಶ ಬಿಟ್ಟು ಬಂದು, ಪರದೇಶದಲ್ಲಿ ಅಬ್ಬೇಪಾರಿಯಾಗಿ, ಇನ್ನೂ ಲೈಫ್ ಕಟ್ಟಿಕೊಳ್ಳುತ್ತಿರುವ ನಮ್ಮಂತವರನ್ನು ಕಂಡರೆ ಆಕೆಗೆ ಏನೋ ಹೆಚ್ಚಿನ ಅನುಕಂಪ, ಪ್ರೀತಿ, ಮಮತೆ, ಆತ್ಮೀಯತೆ. ಎಷ್ಟೋ ಸಲ ಅವಳೇ ಮನೆ ತನಕ ತನ್ನ ಕಾರಿನಲ್ಲೇ ಡ್ರಾಪ್ ಕೂಡ ಕೊಟ್ಟಿದ್ದಾಳೆ. ಒಂದು ಬಾರಿ ಅವಳ ಮನೆಗೂ ಕರೆದಿದ್ದಳು. ಆಕೆಯ ಗಂಡ ಮೈಕ್ ಕೂಡ ಸ್ನೇಹಜೀವಿ. ವಾರಾಂತ್ಯದಲ್ಲಿ ಬೇಸ್ಬಾಲ್ ಆಡಲು, ಅದಕ್ಕೆ ಇದಕ್ಕೆ ಕರೆದಿದ್ದ. ನಾನೇ ಹೋಗಿರಲಿಲ್ಲ.

ಫುಲ್ ತುಂಬಿದ ನನ್ನ ಶಾಪಿಂಗ್ ಕಾರ್ಟ್, ನನ್ನ ಮಂಗ್ಯಾನ ಮುಖ ಎಲ್ಲ ನೋಡಿದ ಕೂಡಲೇ ಅವಳಿಗೆ ಗೊತ್ತಾಗಿಯೇ ಹೋಯಿತು. ನಾನು ಮಾಡಿಕೊಂಡು ಕೂತಿದ್ದ ಯಬಡತನ, ಯಡವಟ್ಟನ್ನು ನಾನು ಬಾಯಿ ಬಿಟ್ಟು ಹೇಳಬೇಕಾಗಿ ಬರಲಿಲ್ಲ.

'ಏನು? ಸಕತ್ ಗ್ರೋಸರಿ ಶಾಪಿಂಗ್ ಆದ ಹಾಗಿದೆ. ಒಂದು ನಿಮಿಷ ಇರು. ನನಗೆ ಐದೇ ನಿಮಿಷದ ಕೆಲಸವಿದೆ. ಬಂದೇಬಿಟ್ಟೆ. ನಂತರ ನಿನಗೆ ನಿನ್ನ ಮನೆ ತನಕ ಡ್ರಾಪ್ ಕೊಡ್ತೀನಿ. ಓಕೆ?' ಅಂದವಳೇ ನನ್ನ ಉತ್ತರಕ್ಕೂ ಕಾಯದೇ ಒಳಗೆ ಹೋದಳು. ನಾನು ಅಲ್ಲೇ ನಿಂತಿದ್ದೆ.

ಹೇಳಿ ಹೋದಂತೆ ಐದು ನಿಮಿಷದ ಒಳಗೇ ಹಾಜರಾದಳು. ಶಾಪಿಂಗ್ ಕಾರ್ಟ್ ದೂಡಿಕೊಂಡು ಹೊರಗೆ ಬಂದೆ. ಮುಂದೆ ನಡೆಯುತ್ತಿದ್ದ ಜೆನ್ನಿಫರಳನ್ನು ಹಿಂಬಾಲಿಸಿದೆ. ಆಕೆಯ ಕಾರಿನ ಹಿಂದಿನ ಡಿಕ್ಕಿ ತೆಗೆದಳು. ದೊಡ್ಡ ಅಮೇರಿಕನ್ ಕಾರಿನ ಮಹಾ ದೊಡ್ಡ ಡಿಕ್ಕಿ.  ಸಾಮಾನು ತುಂಬಿದ್ದ ಪ್ಲಾಸ್ಟಿಕ್ ಚೀಲಗಳನ್ನು ಎತ್ತೆತ್ತಿ ಒಳಗೆ ಇಟ್ಟೆ. ಆಕೆಯೂ ಸಹಾಯ ಮಾಡಿದಳು. ಮುಂದೆ ಹೋಗಿ ಕೂತಳು. ನನಗಾಗಿ ಕಾರಿನ ಡೋರ್ ತೆಗೆದಳು. ಹೋಗಿ ಕೂತು ಸೀಟ್ ಬೆಲ್ಟ್ ಹಾಕಿಕೊಂಡೆ. ಅವಳ ಕಾರಿನಲ್ಲಿ ಸಾಕಷ್ಟು ಸಲ ಕೂತಿದ್ದೇನೆ. ಯಾವದೂ ಹೊಸದಲ್ಲ.

ಕಾರ್ ಸ್ಟಾರ್ಟ್ ಮಾಡಿದ ನಂತರ ಕಾರ್ ರೇಡಿಯೋದಲ್ಲಿ ಏನೋ ಸುದ್ದಿ ತೇಲಿ ಬಂತು. ರೇಡಿಯೋ ಆಫ್ ಮಾಡಿದಳು. ನನ್ನ ಮನೆ ಕಡೆ ಗಾಡಿ ಬಿಟ್ಟಳು. ಒಂದು ಐದು ನಿಮಿಷದ ಹಾದಿ. ನಿಧಾನಕ್ಕೆ ಬಂದು ಮುಟ್ಟಲು ಒಂದು ಹತ್ತು ನಿಮಿಷವೇ ಆಯಿತು.

'ನೀನು ಹೋಗು ಜೆನ್ನಿಫರ್. ಥ್ಯಾಂಕ್ ಯು ವೆರಿ ಮಚ್,' ಅಂದು ಇಳಿದೆ. ಹಿಂದೆ ಬಂದು ಡಿಕ್ಕಿಯಿಂದ ಸಾಮಾನುಗಳನ್ನು ಇಳಿಸಲು ಮುಂದಾದೆ. ಗಾಡಿ ಆಫ್ ಮಾಡಿದ ಆಕೆಯೂ ಇಳಿದು ಬಂದಳು. 'ಇರ್ಲಿ ಬಿಡಪ್ಪಾ. ಇಷ್ಟೆಲ್ಲಾ ಸಾಮಾನುಗಳಿವೆ. ನಿನ್ನ ಅಪಾರ್ಟ್ಮೆಂಟ್ ಬೇರೆ ಐದನೇ ಮಹಡಿಯಲ್ಲಿದೆ. ಮತ್ತೆ ಮತ್ತೆ ಮೇಲೆ ಕೆಳಗೆ ಏನು ಟ್ರಿಪ್ ಹೊಡೆಯುತ್ತೀಯೇ? ನಾಲ್ಕು ಚೀಲ ನೀನು ತೊಗೋ. ಉಳಿದಿದ್ದು ನಾನು ತರ್ತೀನಿ. ನಡಿ. ಲೆಟ್ಸ್ ಗೋ!' ಅಂದುಬಿಟ್ಟಳು. 'ಎಷ್ಟು ಒಳ್ಳೆಯವಳು ಈ ಜೆನ್ನಿಫರ್. ಥೇಟ್ ಅಕ್ಕನ ಹಾಗೆ. ಅದೆಷ್ಟು ಆತ್ಮೀಯತೆ, empathy ಎಲ್ಲ ಇದೆ ಈಕೆಗೆ,' ಅಂತ ಅನ್ನಿಸಿತು. ಮತ್ತೆ ಮತ್ತೆ ಥ್ಯಾಂಕ್ಸ್ ಹೇಳುತ್ತ ಸಾಮಾನು ತೆಗೆದುಕೊಂಡೆ. ಜೆನ್ನಿಫರ್ ಕೂಡ ಸಾಮಾನು ತೆಗೆದುಕೊಂಡಳು. ಮೇಲೆ ಹೋಗಲು ಇದ್ದ ಲಿಫ್ಟಿನತ್ತ ಹೊರಟೆವು.

ಮೇಲೆ ಬಂದು ಮುಟ್ಟಿದೆವು. ಬೀಗ ತೆಗೆದು ಒಳಗೆ ಹೋದೆ. ನನ್ನ ಹಿಂದೆಯೇ ಜೆನ್ನಿಫರ್ ಬಂದಳು. ಸೀದಾ ಅಡುಗೆ ಮನೆಗೇ ನುಗ್ಗಿದೆ. ಫ್ರಿಜ್ ಇರುವದು ಅಲ್ಲೇ ತಾನೇ? ನನ್ನ ಹಿಂದೆಯೇ ಜೆನ್ನಿಫರ್ ಬಂದಳು. ಸಾಮಾನುಗಳನ್ನು ಇಟ್ಟಳು. ಮತ್ತೆ ಥ್ಯಾಂಕ್ಸ್ ಅಂದೆ. 'ನಾನು ಹೊರಡುತ್ತೇನೆ, ಮಹೇಶ್. ಬಾಯ್! ಟೇಕ್ ಕೇರ್!' ಅಂದಳು ಜೆನ್ನಿಫರ್.

'ಜೆನ್ನಿಫರ್, ಇಲ್ಲೇ ಊಟ ಮಾಡಿ ಹೋಗಬಹುದಲ್ಲ? ಅಡಿಗೆ ಎಲ್ಲ ರೆಡಿ ಇದೆ. ಬಿಸಿ ಮಾಡಿಬಿಟ್ಟರೆ ಆಯಿತು,' ಅಂತ ಸುಮ್ಮನೇ ಪೇಡಿದೆ. ಆಕೆ ನನ್ನ ಅಪಾರ್ಟ್ಮೆಂಟಿಗೆ ಸಾಕಷ್ಟು ಸಲ ಬಂದು ಹೋಗಿದ್ದಾಳೆ ಬಿಡಿ. ಅಪಾರ್ಟ್ಮೆಂಟ್ ಕೊಡಿಸಿದವಳೇ ಅವಳು. ಹೊಸದಾಗಿ ಬಂದಾಗ ಒಂದು ವಾರ ಹಾಟೆಲ್ಲಿನಲ್ಲಿ ಇದ್ದೆ. ಹೊಸದಾಗಿ ಬಂದವರ ಫುಲ್ ದೇಖರೇಖಿ ಜೆನ್ನಿಫರಳದ್ದೇ. ಹಾಗಾಗಿ ನನ್ನನ್ನು ಸೆಟಲ್ ಮಾಡುವ ಪೂರ್ತಿ ಜವಾಬ್ದಾರಿ ಆಕೆಯೇ ವಹಿಸಿಕೊಂಡಿದ್ದಳು. ನಾನು ಅಂತ ಅಲ್ಲ. ಹೊಸದಾಗಿ ಯಾರೇ ಬಂದರೂ ಅವಳೇ ಮಾಡಿಕೊಡುತ್ತಾಳೆ. ಸುತ್ತುಮುತ್ತಲಿದ್ದ ನಾಲ್ಕಾರು ಅಪಾರ್ಟ್ಮೆಂಟುಗಳಿಗೆ ಕರೆದುಕೊಂಡು ಹೋಗಿ, ತೋರಿಸಿ, ಅಲ್ಲಿನ ಫಾರ್ಮು ಇತ್ಯಾದಿಗಳನ್ನು ಹೇಗೆ ತುಂಬುವದು ಅಂತ ತೋರಿಸಿ, ಬ್ಯಾಂಕ್ ಅಕೌಂಟ್ ಇತ್ಯಾದಿ ಮಾಡಿಸಿಕೊಟ್ಟು, ಅಪಾರ್ಟಮೆಂಟ್ ಅವಳೇ ಕೊಡಿಸಿದ್ದಳು. ಹಾಟೆಲ್ಲಿಂದ ಸಾಮಾನುಗಳನ್ನು ಅವಳ ಕಾರಿನಲ್ಲೇ ತಂದು ಕೊಟ್ಟಿದ್ದಳು. ನಂತರ ಟೀವಿ ಕೊಂಡಾಗ, VCR ಕೊಳ್ಳುವಾಗ ಎಲ್ಲ ಅವಳೇ ಬಂದಿದ್ದಳು. ಖರೀದಿ ಮಾಡಿಸಿ, ಅವಳದ್ದೇ ಕಾರಲ್ಲಿ ಮನೆ ತನಕ ಡೆಲಿವರಿ ಕೊಟ್ಟು ಹೋಗಿದ್ದಳು. ಆವಾಗಲೂ ಊಟ ಮಾಡಿ ಹೋಗು, ಚಹಾ ಕುಡಿದು ಹೋಗು ಅಂತೆಲ್ಲ ಹೇಳಿದ್ದೆ. ನಾಲ್ಕು ಸಲ ಬಂದರೆ ಒಂದು ಸಲ ಚಹಾ ಕುಡಿದು ಹೋಗಿದ್ದಳು ಅಷ್ಟೇ. ಅದು ಬಿಟ್ಟರೆ, 'ಮತ್ತೊಮ್ಮೆ ಬರ್ತೀನಿ. ಥ್ಯಾಂಕ್ಸ್ ಮಹೇಶ್!' ಅಂತ ಹೇಳಿ ಉದ್ದುದ್ದ ಕಾಲು ಹಾಕುತ್ತ ಓಡಿಯೇಬಿಡುತ್ತಾಳೆ ಜೆನ್ನಿಫರ್. ಸುಮಾರು ನಲವತ್ತೈದು, ಐವತ್ತು ವರ್ಷದ ಬಿಳಿಯ ಮಹಿಳೆ ಜೆನ್ನಿಫರ್.

'ನಿನ್ನ ಮನೆಗೆ ಊಟಕ್ಕೆ ಮತ್ತೊಮ್ಮೆ ಬರೋಣ ಮಾರಾಯಾ. ನೋಡೋಣ ಏನೇನು ಅಡಿಗೆ ಮಾಡಿ ಹಾಕುತ್ತೀಯಾ ಅಂತ. ನನ್ನ ಗಂಡ ಮೈಕನನ್ನೂ ಕರೆದುಕೊಂಡು ಬರ್ತೀನಿ. ನಿಮ್ಮ ಇಂಡಿಯನ್ ಫುಡ್ ನಮಗಿಬ್ಬರಿಗೂ ತುಂಬಾ ಇಷ್ಟ. ಇವತ್ತು ಬೇಡ. ನಾ ಬರಲೇ?' ಅಂತ ಮತ್ತೆ ಹೊರಡಲು ಸಿದ್ಧಳಾದಳು ಜೆನ್ನಿಫರ್.

'At least ಒಂದು ಕಪ್ ಚಹಾ ಅಥವಾ ಕಾಫಿ ಜೆನ್ನಿಫರ್. ನನಗೂ ಸಂಜೆಯ ಚಹಾ ಮಾಡಿಕೊಳ್ಳಬೇಕು. ನಿನಗೆ ಚಹಾನೋ ಅಥವಾ ಕಾಫಿನೋ? ಎರಡೂ ಇದೆ,' ಅಂತ ಹೇಳಿದೆ.

'ಚಹಾನೇ ಮಾಡು. ನಿನ್ನ ಮಸಾಲಾ ಚಾಯ್ ಸೊಗಸಾಗಿರುತ್ತದೆ,' ಅಂದಳು ಜೆನ್ನಿಫರ್. ಇಷ್ಟೆಲ್ಲಾ ಸಹಾಯ ಮಾಡಿದ ಜೆನ್ನಿಫರ್ ಚಹಾಕ್ಕೆ ನಿಂತಳು ಅಂತ ಖುಷಿಯಾಯಿತು.

'ಮಾಡೇಬಿಟ್ಟೆ. ಐದೇ ನಿಮಿಷ. ಕೂತಿರು. ಟೀವಿ ನೋಡು. ಒಂದೆರೆಡು ಮ್ಯಾಗಜಿನ್ ಇವೆ. ನ್ಯೂಸ್ ಪೇಪರ್ ಮಾತ್ರ ಇಲ್ಲ. ಎಲ್ಲ online ಓದಿಬಿಡ್ತೀನಿ,' ಅಂದು, 'ಹೇ, ಹೇ'  ಅಂತ ನಕ್ಕೆ.

'ಗೊತ್ತು ಮಾರಾಯಾ. ನೀವೆಲ್ಲ ದೇಸಿ ಜನ ಸಂಜೆ ನಾಲ್ಕರ ನಂತರ ನಿಮ್ಮ ಇಂಡಿಯಾ ನ್ಯೂಸ್ ಪೇಪರ್ ವೆಬ್ ಸೈಟ್ ತೆಗೆದು, ಓದುತ್ತ ಕೂಡ್ತೀರಾ. ಸರಿ, ನಾನು ಲಿವಿಂಗ್ ರೂಮಲ್ಲಿ ಕೂತಿರ್ತೀನಿ,' ಅಂತ ಹೇಳುತ್ತಾ ಜೆನ್ನಿಫರ್ ಆಕಡೆ ಹೋದಳು.

ನಮ್ಮದು ದೇಸಿ ಚಹಾ ಮಾಡುವ ಪದ್ಧತಿ. ಹಾಲು, ನೀರು ಕೂಡಿಸಿ ಒಲೆ ಮೇಲೆ ಇಟ್ಟೆ. ಸಕ್ಕರೆ ಹಾಕಬಾರದು. ಯಾಕೆಂದರೆ ಆ ಜೆನ್ನಿಫರ್ ಪುಣ್ಯಾತ್ಗಿತ್ತಿ ಸಕ್ಕರೆ ಇಲ್ಲದ ಚಹಾ, ಕಾಫಿ ಕುಡಿಯುವಾಕೆ. ನಾನು ಮೇಲಿಂದ ಹಾಕಿಕೊಂಡರಾಯಿತು. ಮಸಾಲೆ ಚಹಾಕ್ಕೆ ಮಸಾಲೆ ಅರೆಯುವ ಕೆಲಸವಿಲ್ಲ. ರೆಡಿಮೇಡ್ ಮಸಾಲೆ ಸಿಗುತ್ತದೆ. ಇನ್ನು ಜೊತೆಗೆ ಹಳದಿರಾಮ ಚೂಡಾ ಅಂತೂ ಇದೆ. ಚಹಾದ ಜೋಡಿ ಚೂಡಾ. ಜೊತೆಗೆ ಚೂಡಾ ಇಲ್ಲ ಅಂದರೆ ಅದು ಚಹಾ ಅಲ್ಲವೇ ಅಲ್ಲ.

ಆಕಡೆ ಏನೋ ಟೀವಿ ಶಬ್ದ ಕೇಳಿತು. ಜೆನ್ನಿಫರ್ ಟೀವಿ ಆನ್ ಮಾಡಿಕೊಂಡು ಕೂತಿರಬೇಕು. ಅಡುಗೆಮನೆಯಿಂದಲೇ ಹಣಿಕಿ ನೋಡಿದೆ. ಹೌದು. ಟೀವಿ ಮೇಲೆ ಯಾವದೋ ಬಾಸ್ಕೆಟ್ ಬಾಲ್ ಪಂದ್ಯ ಬರುತ್ತಿದೆ. ಆಕೆಗೆ ಅದು ಬಹಳ ಇಷ್ಟ.

ಹಳದಿರಾಮ ಚೂಡಾ ಪ್ಯಾಕಿನಿಂದ ಒಂದಿಷ್ಟು ಚೂಡಾ ತೆಗೆದು ಕಾಗದದ ಪ್ಲೇಟ್ ಒಂದಕ್ಕೆ ಹಾಕಿದೆ. ಎರಡು ಸ್ಪೂನ್ ಇಟ್ಟೆ. ಅಷ್ಟರಲ್ಲಿ ಹಾಲು-ನೀರಿನ ಮಿಶ್ರಣ ಉಕ್ಕಿ ಬಂತು. ಅದೇ ಹೊತ್ತಿಗೆ ಒಮ್ಮೆಲೇ ಟೀವಿ ಶಬ್ದ ನಿಂತುಬಿಟ್ಟಿತು. ಲಿವಿಂಗ್ ರೂಮಿನಲ್ಲಿದ್ದ ದೀಪ ಕೂಡ ಸಡನ್ನಾಗಿ ಆರಿಹೋಯಿತು. 'ಅರೇ ಇದೇನಾಯಿತು!' ಅಂದುಕೊಂಡೆ. 'ಹೋಗಿ ನೋಡಿಬರಲೇ?' ಅಂದುಕೊಳ್ಳುವಷ್ಟರಲ್ಲಿ  ಒಲೆ ಮೇಲೆ ಕುದಿಯುತ್ತಿದ್ದ ಹಾಲು-ನೀರು ಉಕ್ಕಿ ಮೇಲೆ ಬಂದುಬಿಡ್ತು. ಕ್ರಿಟಿಕಲ್ ಮೊಮೆಂಟ್. ಈಗ ಬರೋಬ್ಬರಿ ಚಹಾ ಪುಡಿ, ಚಹಾ ಮಸಾಲೆ ಹಾಕಬೇಕು. ನಂತರ ಅದು ಉಕ್ಕಿ ಇನ್ನೇನು ಒಲೆ ಮೇಲೆಲ್ಲ ಚೆಲ್ಲಿಬಿಡುತ್ತದೆ ಅಂತಂದಾಗ ಅದನ್ನು ಇಕ್ಕಳದಿಂದ ಎತ್ತಿ, ಪಕ್ಕಕ್ಕೆ ಇಡಬೇಕು. ಮೇಲೊಂದು ಪ್ಲೇಟ್ ಮುಚ್ಚಿ, ಸ್ವಲ್ಪ ಸಮಯ ಕಾಯಬೇಕು. ಅದು ಚಹಾ ಮಾಡುವ ದೇಸಿ ಪದ್ಧತಿ. ಅಲ್ಲವೇ?

ಮುಕ್ಕಾಲು ನಿಮಿಷ ಅದರ ಮೇಲೊಂದು ಪ್ಲೇಟ್ ಮುಚ್ಚಿಟ್ಟೆ. ಚಹಾ, ಚೂಡಾ ತೆಗೆದುಕೊಂಡು ಹೋಗಬೇಕು. ನಮ್ಮ ಹತ್ತಿರ tray ಇಲ್ಲ. ಒಂದು ಊಟದ ಸ್ಟೀಲ್ ತಟ್ಟೆಯನ್ನೇ ತೆಗೆದೆ. ಧೂಳು ಕೂತಿತ್ತು. ಊಟಕ್ಕೆ, ತಿಂಡಿಗೆ ಎಲ್ಲ disposable ಪೇಪರ್ ತಟ್ಟೆ ಉಪಯೋಗಿಸುವದರಿಂದ ಸ್ಟೀಲ್ ಪ್ಲೇಟಿನ ಉಪಯೋಗವೇ ಇಲ್ಲ. ಪಾತ್ರೆ ತೊಳೆಯೋದು ಮಹಾ ದೊಡ್ಡ ಕರ್ಮ. ಅದೇನು ಡಿಶ್ ವಾಷರ್ ಇದ್ದರೂ ಅದು ಮಹಾ ಬೋರಿಂಗ್ ಕೆಲಸ. ಹಾಗಾಗಿ ನಮ್ಮದು ಎಲ್ಲ use and throw ಪೇಪರ್ ತಾಟು, ಪೇಪರ್ ಕಪ್ಪು. ಸರ್ವಂ ಪೇಪರ್ ಮಯಂ!

ತಯಾರಾದ ಚಹಾವನ್ನು ಎರಡು ಕಪ್ಪಿಗೆ ಸೋಸಿ ಸುರಿದೆ. ಸ್ವಲ್ಪೇ ಸ್ವಲ್ಪ ಹಾಲು ಬಿಟ್ಟೆ. ಏಕ್ದಂ ಕೆಂಪು ಬಣ್ಣದ ಸುಡು ಸುಡು ಚಹಾ ರೆಡಿ. ಅವಳಿಗಂತೂ ಸಕ್ಕರೆ ಬೇಡ. ನಾನೂ ಇವತ್ತು ಅದೇ ಟ್ರೈ ಮಾಡುತ್ತೇನೆ. ಎರಡು ಕಪ್ಪುಗಳನ್ನು ಮತ್ತು ಚೂಡಾದ ಪ್ಲೇಟನ್ನು ಇಟ್ಟುಕೊಂಡು, ಟ್ರೇ ಎತ್ತಿ ಹಿಡಿದುಕೊಂಡೆ. ಅದೇಕೋ ಗೊತ್ತಿಲ್ಲ. ಚಹಾದ ಟ್ರೇ ಹಿಡಿದುಕೊಂಡು ಕೂಡಲೇ ಸ್ವಲ್ಪ ಸೊಂಟ ಬಳುಕಿಸಿ, ನಕ್ಕು ಮಂಗ್ಯಾತನ ಮಾಡಬೇಕು. ಧಾರವಾಡದ ಮನೆಯಲ್ಲಿದ್ದರೆ ಅಮ್ಮ ಬಯ್ಯುತ್ತಿದ್ದಳು, 'ಹೋಗಿ, ಚಹಾ ಕೊಟ್ಟು ಬಾರೋ. ಅದೇನು ಟ್ರೇ ಹಿಡಕೊಂಡು ಕುಣೀತಿ?' ಅಂತ. ಇಲ್ಲಿ ಬಯ್ಯುವವರು ಇಲ್ಲ. ನಗು ಮಾತ್ರ ಬಂತು.

ಅಡುಗೆಮನೆಗೆ ತಾಕಿಕೊಂಡೇ ಇದೆ ಲಿವಿಂಗ್ ರೂಂ. ನಡು ಒಂದು ಸಣ್ಣ ಗೋಡೆ ಇರುವದರಿಂದ ಪೂರ್ತಿ ಕಾಣುವದಿಲ್ಲ. ಸುತ್ತಿ ನಾಲ್ಕು ಹೆಜ್ಜೆ ಹಾಕಿದೆ. ಲಿವಿಂಗ್ ರೂಂ ಎಂಟರ್ ಆದೆ. ಅಲ್ಲಿನ ಮಾಹೋಲ್ ಏನೋ ಒಂದು ತರಹ ವಿಚಿತ್ರವಾಗಿತ್ತು.

ರೂಮಿನಲ್ಲಿ ಕತ್ತಲೆ. ಬಂದಾಗ ಲೈಟ್ ಹಾಕಿದ್ದೆ. ಈಗ ಇಲ್ಲ. ಬಲ್ಬ್ ಸುಟ್ಟು ಹೋಗಿರಬೇಕು. ಲಿವಿಂಗ್ ರೂಮಿನ ಕಿಡಕಿಗೆ ಹಾಕಿದ ಪರದೆಯ ಮೂಲಕ ಒಂದು ತರಹದ ಬೆಳಕು ಇತ್ತು. ಸಂಜೆ ಐದರ ಸಮಯ. ಬೆಳಕು ಭಾಳ ಕಮ್ಮಿ.

ಲಿವಿಂಗ್ ರೂಂ ಮೂಲೆಯಲ್ಲಿದ್ದ ಟೀವಿ ಮೇಲೆ ಕೇವಲ ಗೆರೆ ಗೆರೆ ಚಿತ್ರ. transmission ಇಲ್ಲದಾಗ ಟೀವಿ ಹಚ್ಚಿದರೆ ಬರುತ್ತದೆ ನೋಡಿ, ಆ ತರಹ ಇತ್ತು. ಜೊತೆಗೆ ಗಸ್ ಗಸ್ ಅನ್ನುವ ಟಿಪಿಕಲ್ ಟೀವಿ ಶಬ್ದ. ಅರೇ ಇಸ್ಕಿ! ಈಗ ಒಂದೆರೆಡು ನಿಮಿಷದ ಹಿಂದೆ ಮಾತ್ರ ಅಷ್ಟು ಜೋರಾಗಿ ಬಾಸ್ಕೆಟ್ ಬಾಲ್ ಪಂದ್ಯ ಬರುತ್ತಿತ್ತು. ಈಗ ನೋಡಿದರೆ ಇಲ್ಲ. ಮತ್ತೂ ವಿಚಿತ್ರವೆನಿಸಿತು.

ಟೀವಿ ನೋಡಲು ಅನುಕೂಲವಾಗುವ ಹಾಗೆ ಟೀವಿ ಎದುರಿಗೆ ಇದೆ ನನ್ನ ರಾಕಿಂಗ್ ಚೇರ್ (rocking chair). ಆರಾಮ್ ಖುರ್ಚಿ. ಅದನ್ನು ಹಿಂದೆ ಮುಂದೆ ರಾಕಿಂಗ್ ಕೂಡ ಮಾಡಿಕೊಳ್ಳಬಹುದು. ಜೆನ್ನಿಫರ್ ಅದರ ಮೇಲೆ ಕೂತಿದ್ದಾಳೆ. ಖುರ್ಚಿ ಹಿಂದೆ  ಮುಂದೆ ರಾಕಿಂಗ್ ಆಗುತ್ತಿದೆ. ಆಕೆ ಸ್ವಲ್ಪ ದೊಡ್ಡ ಸೈಜಿನ ಮಹಿಳೆ ಬೇರೆ. ಆಕೆ ಹಿಂದೆ ಮುಂದೆ ರಾಕಿಂಗ್ ಮಾಡುತ್ತಿದ್ದರೆ ಆ ಖುರ್ಚಿ ಕಿರ್ರ್ ಕಿರ್ರ್ ಅಂತ ಅವಾಜ್ ಮಾಡುತ್ತಿದೆ.

ಥೋ! ಬಲ್ಬೇ ಹೋಗಿದ್ದರೆ ಬೇರೆ ಬಲ್ಬು ಇಲ್ಲ. ಕಿಡಕಿಗೆ ಇಳಿಬಿಟ್ಟ ಪರದೆಯನ್ನೇ ಸರಿಸಿ, ಮುಸ್ಸಂಜೆಯ ಸ್ವಲ್ಪೇ ಸ್ವಲ್ಪ ಉಳಿದಿರುವ ಬೆಳಕನ್ನು ಒಳಗೆ ಬರಮಾಡಿಕೊಳ್ಳಬೇಕು. ಇಲ್ಲವಾದರೆ ಜೆನ್ನಿಫರಳನ್ನು ಒಳಗೆ ಕರೆಯಬೇಕು. ಅಡುಗೆಮನೆಯಲ್ಲಿಯೇ ಚಹಾ, ಚೂಡಾ ಮುಗಿಸಬೇಕು.

'ಜೆನ್ನಿಫರ್, ಜೆನ್ನಿಫರ್, ಚಹಾ ರೆಡಿ. ಏನಿದು ಕತ್ತಲಲ್ಲಿ ಕೂತಿದ್ದೀಯೇ? ಬಲ್ಬ್ ಸುಟ್ಟು ಹೋಯಿತೇ? ಟೀವಿಗೇನಾಯಿತು? ಮ್ಯಾಚ್ ಮುಗಿಯಿತೇ? ಬೇರೆ ಚಾನಲ್ ಹಾಕಲಿಲ್ಲವೇ?' ಅಂದೆ.

ಫುಲ್ ಸೈಲೆನ್ಸ್. ಜೆನ್ನಿಫರ್ ಕಡೆಯಿಂದ ಉತ್ತರವಿಲ್ಲ. ಕೂತಲ್ಲಿ ಕೂತೇ ಇದ್ದಾಳೆ. ನನ್ನ ಕಡೆ ಬೆನ್ನು ಹಾಕಿದ್ದಾಳೆ. ದೊಡ್ಡ ಸೈಜಿನ ರಾಕಿಂಗ್ ಚೇರ್ ಅದು. ಹಾಗಾಗಿ ಏನೂ ಕಾಣುತ್ತಿಲ್ಲ.

ಉತ್ತರ ಬರಲಿಲ್ಲ. ಆದರೆ ಜೆನ್ನಿಫರ್ ಕೂತಿದ್ದ ರಾಕಿಂಗ್ ಚೇರಿನ ಕುಲುಕಾಟ, ಅಲುಗಾಟ ಮಾತ್ರ ಜೋರಾಯಿತು. ಅರೇ ಇಸ್ಕಿ! ಇದೇನು ನಾಗರ ಪಂಚಮಿ ಜೋಕಾಲಿ ಅಂತ ತಿಳಿದಳೋ ಏನು? ಒಳ್ಳೆ ಜೋಕಾಲಿ ತರಹ ಜೀಕುತ್ತಿದ್ದಾಳೆ? ಆ ಖುರ್ಚಿ ಮತ್ತೂ ಜೋರಾಗಿ ಕಿರ್ರ್ ಕಿರ್ರ್ ಅನ್ನುತ್ತಿದೆ. ಗೋಡೆ ಮೇಲೆ ನೆರಳು ವಿಚಿತ್ರವಾಗಿ ಕದಲುತ್ತಿದೆ. ಮಾತಿಲ್ಲ ಕತೆಯಿಲ್ಲ. ಟೀವಿಯ ಗೊರ ಗೊರ ಶಬ್ದ. ನಡುನಡುವೆ ಸಳಕ್ ಸಳಕ್ ಅಂತ ಮಿಂಚಿನಂತೆ ಮೂಡುವ ಬೆಳ್ಳಿ ಗೆರೆಗಳು. ಎಲ್ಲ ಒಂದು ತರಹದ ವಿಚಿತ್ರ.

'ಜೆನ್ನಿಫರ್, ಜೆನ್ನಿಫರ್!' ಅಂದೆ. ನನಗೆ ಏನೋ ಒಂದು ತರಹದ ಫೀಲಿಂಗ್. ಹೆದರಿಕೆ, ಆತಂಕ, uncertainty ಗಳ ಮಿಶ್ರಣ.

ಈಗಲೂ ಉತ್ತರವಿಲ್ಲ. ರಾಕಿಂಗ್ ಖುರ್ಚಿಯ ಜೀಕುವಿಕೆ ಮಾತ್ರ ಮೊದಲಿನ ಹಾಗೆಯೇ ನಡೆದಿದೆ. ಕಿರ್ರ್ ಕಿರ್ರ್.

ಅರೇ ಇಸ್ಕಿ! ಏನಾಯಿತು ಜೆನ್ನಿಫರಳಿಗೆ? ಮನೆಗೆ ಬಂದಳು. ಟೀವಿ ನೋಡುತ್ತಾ ಕೂತಳು. ಈಗ ನೋಡಿದರೆ ಮಾತೇ ಇಲ್ಲ. ಒಂದು ತರಹದ ಮಂದಗತ್ತಲೆ ಬೇರೆ. ರಾಕಿಂಗ್ ಖುರ್ಚಿ ಮೇಲೆ ಕೂತು ಜೀಕುತ್ತಿದ್ದಾಳೆ. ಎಲ್ಲಿಯಾದರೂ ಕೂತಲ್ಲೇ ಸತ್ತೇಹೋದಳೋ ಹೇಗೆ? ಸಾವು ಹೇಳಿ ಕೇಳಿ ಬರುವದಿಲ್ಲ ನೋಡಿ. ಛೇ! ಖುರ್ಚಿ ಆ ಪರಿ ಹಿಂದೆ ಮುಂದೆ ಆಗುತ್ತಿದೆ. ಸತ್ತು ಹೋಗಿರಲು ಹೇಗೆ ಸಾಧ್ಯ? ಪ್ರಾಣ ಹೋಗುವಾಗ ದೇಹ ಭಾಳ ಜರ್ಕ್ ಹೊಡೆಯುತ್ತದೆಯಂತೆ. ಜೀವಕ್ಕೆ ದೇಹವನ್ನು ಬಿಟ್ಟು ಹೋಗುವ ಮನಸ್ಸೇ ಇರುವದಿಲ್ಲವಂತೆ. ಆದರೆ ಯಮದೂತರು ಎಳೆದುಕೊಂಡು ಹೋಗುವಾಗ ಸಿಕ್ಕಾಪಟ್ಟೆ ರಂಪ ಮಾಡುತ್ತದೆಯಂತೆ. ಆವಾಗ ಇಡೀ ದೇಹ violent ಆಗಿ ಜರ್ಕ್ ಹೊಡೆಯುತ್ತದೆಯಂತೆ. ಹಾಗೇನಾದರೂ ಆಗಿಹೋಗಿದೆಯೇ? ಖುರ್ಚಿ ಮೇಲೆ ಕೂತ ಜೆನ್ನಿಫರಳ ಜೀವ ಹೋಗುತ್ತಿದೆಯೇ?

ಏನು ಮಾಡಲಿ? ಮೊದಲು ಸ್ವಲ್ಪ ಬೆಳಕು ಮಾಡಿಕೊಳ್ಳಬೇಕು. ಚಹಾ, ಚೂಡಾ ಇದ್ದ ತಟ್ಟೆಯನ್ನು ಅಲ್ಲೇ ಕಿಚನ್ ಕೌಂಟರ್ ಮೇಲೆ ಇಟ್ಟೆ.

ಲಿವಿಂಗ್ ರೂಮಿನ ಒಂದು ಕೊನೆಯಲ್ಲಿತ್ತು ದೊಡ್ಡ ಕಿಟಕಿ. ಪೂರ್ತಿ ಗೋಡೆಯನ್ನು ಆವರಿಸಿಕೊಂಡಿತ್ತು. ಅದರ ಮೇಲೆ ಮುಚ್ಚಿದೆ ಕ್ಯಾನ್ವಾಸ್ ಬಟ್ಟೆಯ ಪರದೆ. ಪರದೆಯನ್ನು ಸರಿಸಬೇಕು ಅಂತ ಹೊರಟೆ. ಮಧ್ಯದಲ್ಲೇ ರಾಕಿಂಗ್ ಚೇರ್ ಇದೆ. ಅದರ ಮೇಲೆ ಕುಳಿತಿದ್ದಾಳೆ ಜೆನ್ನಿಫರ್.

ಆ ಕಡೆ ಹೆಜ್ಜೆ ಹಾಕಿದೆ. ಜೆನ್ನಿಫರ್ ಕುಳಿತಿದ್ದ ಖುರ್ಚಿ ಮುಂದೆ ಬಂದಾಗ ಮಾತ್ರ ಎದೆ ಧಸಕ್ ಅನ್ನುವ ದೃಶ್ಯ ನೋಡಿ ಅಲ್ಲೇ ನಿಂತುಬಿಟ್ಟೆ. freeze ಆಗಿಬಿಟ್ಟೆ. ಅಲ್ಲಿ ತನಕ ಕೂತಿದ್ದ ಜೆನ್ನಿಫರ್ ಧಡಕ್ಕನೆ ಒಮ್ಮೆಲೇ ಎದ್ದು ನಿಂತು ಬಿಟ್ಟಳು. ಖುರ್ಚಿ ಮಾತ್ರ ಹಿಂದೆ ಮುಂದೆ ಆಗುತ್ತಿತ್ತು. ಕರ್ರ್! ಕರ್ರ್! ಅನ್ನುವ ಕರ್ಕಶ ಆವಾಜ್ ಬೇರೆ.

ರಾಕಿಂಗ್ ಚೇರ್ ಮೇಲೆ ಕೂತಿದ್ದ ದೆವ್ವ

ಎದ್ದು ನಿಂತವಳು ಜೆನ್ನಿಫರ್ ಆಗಿರಲೇ ಇಲ್ಲ. ಅದೊಂದು ಅಕರಾಳ ವಿಕರಾಳ ಆಕೃತಿ. ನನಗೇ ಗೊತ್ತಿಲ್ಲದಂತೆ ಭೀಕರ ಚೀತ್ಕಾರವೊಂದು ಎದೆಯಾಳದಲ್ಲಿ ಹುಟ್ಟಿತು. ಬಾಯಿಗೆ ಬರುವಷ್ಟರಲ್ಲಿ ಮಟಾಶ್ ಆಗಿಹೋಯಿತು. ನನ್ನ ಧ್ವನಿ ಫುಲ್ ಖಲಾಸ್.

ಜೆನ್ನಿಫರ್ ಜಾಗದಲ್ಲಿ ಕಂಡ ಭೀಕರ ಆಕೃತಿಯ ವೇಷ ಭೂಷಣ ಕೂಡ ಎಲ್ಲ ಬದಲಾಗಿ ಬಿಟ್ಟಿತ್ತು. ಬರುವಾಗ ಎಂದಿನಂತೆ ಜೀನ್ಸ್ ಪ್ಯಾಂಟ್, ಮೇಲೊಂದು ಟಾಪ್, ಅದರ ಮೇಲೊಂದು ಜಾಕೆಟ್ ಹಾಕಿಕೊಂಡಿದ್ದಳು. ಈಗ ನೋಡಿದರೆ ಒಂದು ವಿಚಿತ್ರ ನಿಲುವಂಗಿ. ಮುಖವಂತೂ ಸಿಕ್ಕಾಪಟ್ಟೆ ಖರಾಬಾಗಿದೆ. ಕಣ್ಣಲ್ಲಿ ಕೆಂಪು ದೀಪದಂತಹದು ಗರಗರ ಸುತ್ತುತ್ತಿದೆ. ಕೂದಲು ಅಕರಾಳ ವಿಕರಾಳವಾಗಿ ಮುಖದ ಮೇಲೆಲ್ಲಾ ಹರಡಿದೆ. ನಾಲಿಗೆ ಇಷ್ಟುದ್ದ ಹೊರಚಾಚಿದೆ. ಕಣ್ಣಿನಿಂದ ಹೊರಹೊಮ್ಮುತ್ತಿರುವ ಪಿಕಿ ಪಿಕಿ ಕೆಂಪು ಬೆಳಕಿನಲ್ಲಿ ನಾಲಿಗೆ ಸಿಕ್ಕಾಪಟ್ಟೆ ಖರಾಬಾಗಿ ಕಾಣುತ್ತಿದೆ. ಮುಖದ ಚರ್ಮ ಸುಕ್ಕು ಸುಕ್ಕಾಗಿ ಪದರು ಪದರಾಗಿ ಜೋತು ಬಿದ್ದಿದೆ. ಮೂಗು ವಾಕಡಾ ಆಗಿದೆ. ಇದೆಲ್ಲ ನೋಡುತ್ತ ಚಡ್ಡಿ ಒದ್ದೆ ಮಾಡಿಕೊಳ್ಳುತ್ತಿದ್ದರೆ ಅಷ್ಟರಲ್ಲಿ ಆ ಆಕೃತಿಯ ಕೈಗಳು ಮುಂದೆ ಬಂದವು.

ರಕ್ತಸಿಕ್ತ ಗೌನ್ ಹಾಕಿತ್ತು ದೆವ್ವ

ಅಬ್ಬಾ! ಇಷ್ಟಿಷ್ಟು ಉದ್ದನೆಯ ಉಗುರುಗಳು. ಚೂಪಾದ ಚಾಕುವಿನಂತಿವೆ. ಚುಚ್ಚಿದರೆ ಅಷ್ಟೇ ಮತ್ತೆ. ಅಂತಹ ಕೈಗಳನ್ನು ಆ ಆಕೃತಿ ನನ್ನ ಕುತ್ತಿಗೆಯ ಹತ್ತಿರ ತಂದುಬಿಟ್ಟಿತು. ಅಯ್ಯೋ ಸಿವನೇ! ಏನು ಮಾಡಲಿ ಈಗ? ಬಾಗಿಲು ಆಕಡೆ ಇದೆ. ಈ ದೆವ್ವ ಆಟಕಾಯಿಸಿಕೊಂಡು ನಿಂತುಬಿಟ್ಟಿದೆ. ಮತ್ತೊಂದು ಕಡೆ ಬಾಲ್ಕನಿ ಏನೋ ಇದೆ ನಿಜ. ಆಕಸ್ಮಾತ ಆಕಡೆ ಓಡಿ, ಬಾಲ್ಕನಿಯ ಸ್ಲೈಡಿಂಗ್ ಬಾಗಿಲನ್ನು ತೆಗೆದೆ ಅಂತಲೇ ಇಟ್ಟುಕೊಳ್ಳೋಣ. ಮುಂದೆ? ಇರುವದು ಐದನೇ ಮಹಡಿಯಲ್ಲಿ. ಕೆಳಗೆ ಜಿಗಿದರೆ ಫುಲ್ ಫ್ಲಾಟ್ ಆಗಿ ಚಪಾತಿಯಾಗುವದರಲ್ಲಿ ಸಂಶಯವಿಲ್ಲ. ಯಾವ ಸಾವು ಹಿತ? ಈ ದೆವ್ವದ ಕೈಯಲ್ಲಿ ಸಾಯುವದೋ ಅಥವಾ ರಿಸ್ಕ್ ತೆಗೆದುಕೊಂಡು ಆಕಡೆ ಓಡಿ, ಬಾಲ್ಕನಿಯಿಂದ ಜಿಗಿದು ಸಾಯುವದೋ?

ಇಷ್ಟೆಲ್ಲ ವಿಚಾರ ಬಂದಿದ್ದು ಒಂದು ಕ್ಷಣದಲ್ಲಿ. fraction of a second. ಅಷ್ಟರಲ್ಲಿ ವಿಚಿತ್ರವಾಗಿ ಕೀರಲು ಧ್ವನಿ ಮಾಡುತ್ತ, ವಿಕಾರವಾಗಿ ಮುಖ ತಿರಿಚುತ್ತ, ಆ ದೆವ್ವ ಕೈ ಮತ್ತೂ ಮುಂದೆ ಚಾಚಿತು. ಅದರ ಉದ್ದನೆಯ ಚೂಪಾದ ಉಗುರುಗಳು ನನ್ನ ಕುತ್ತಿಗೆಗೆ ತಾಕಿದವು. ಕಚಗುಳಿ ಇಟ್ಟಂತಾಯಿತು. ಏನು ಇದು ರಕ್ತ ಕುಡಿಯುವ ದೆವ್ವವೇ? ಕುತ್ತಿಗೆಯ ರಕ್ತನಾಳಗಳಿಗೆ ಚೂಪಾದ ಉಗುರುಗಳನ್ನು ನುಗ್ಗಿಸಿ ರಕ್ತ ಕುಡಿಯುವ ವ್ಯಾಂಪೈರ್ ದೆವ್ವವೇ ಇದು? ಇವಳು ಜೆನ್ನಿಫರಳೋ ಅಥವಾ ಬೇರೆ ಯಾರೋ?

'ಧಡ್! ಧಡ್!' ಬಾಗಿಲು ತಟ್ಟುವ ಶಬ್ದ.

ಅಷ್ಟರಲ್ಲಿ ಯಾರೋ ಬಾಗಿಲು ಬಡಿದರು. ಯಾರೂ ಹಾಗೆಲ್ಲ ಬಾಗಿಲು ಬಡಿಯುವದೇ ಇಲ್ಲ. ಕೆಳಗೆ ಮೇನ್ ಡೋರಿಗೆ ಡಬಲ್ ಎಂಟ್ರಿ ಲಾಕ್ ಸಿಸ್ಟಮ್ ಇದೆ. ಅಪರಿಚಿತರು ಯಾರಾದರು ಮೇಲೆ ಬರಬೇಕು ಅಂತಿದ್ದರೆ ಮೊದಲು ಅಲ್ಲಿರುವ ಇಂಟರ್ನಲ್ ಟೆಲಿಫೋನಿಂದ ಮನೆಗೆ ಫೋನ್ ಮಾಡುತ್ತಾರೆ. ಬರಲಿಕ್ಕೆ ಅಡ್ಡಿಯಿಲ್ಲ ಅಂತಾದರೆ ಒಂದು ಬಟನ್ ಇಲ್ಲಿ ಒತ್ತುತ್ತೇವೆ. ಆಗ ಕೆಳಗಿನ ಬಾಗಿಲು ತೆಗೆಯುತ್ತದೆ. ನಂತರ ಅವರು ಮೇಲೆ ಬರುತ್ತಾರೆ. ಈಗ ಯಾರಿಗೂ ಬರಲು ಅವಕಾಶ ಮಾಡಿಕೊಟ್ಟಿಲ್ಲ. ಹಾಗಿದ್ದಾಗ ಇದ್ಯಾರು ನನ್ನ ಮನೆ ಬಾಗಿಲು ತಟ್ಟುತ್ತಿರುವವರು? ಬೇರೆ ಯಾರದೋ ಮನೆಗೆ ಬಂದವರು by mistake ನನ್ನ ಮನೆ ಬಾಗಿಲು ತಟ್ಟುತ್ತಿದ್ದಾರೋ ಹೇಗೆ?

ಬಾಗಿಲು ತಟ್ಟುತ್ತಿರುವವರು ಮತ್ತೆ ಮತ್ತೆ ತಟ್ಟಿದರು. ಕುಟ್ಟಿ ಕುಟ್ಟಿ ತಟ್ಟಿದರು. ಏನೋ ಕೂಗಿದರು. ಅರ್ಥವಾಗಲಿಲ್ಲ. ಮಕ್ಕಳ ಕೂಗು. ಯಾವ ಮಕ್ಕಳು ಬಂದಿದ್ದಾರೆ? ಮನೆಯಲ್ಲಿ ಇರುವವನು ನಾನೊಬ್ಬನೇ. ಹಾಗಾಗಿ ಆ ಮಕ್ಕಳ ದೋಸ್ತರಾರೂ ಇಲ್ಲಿ ಇರಲಿಕ್ಕೆ ಸಾಧ್ಯವಿಲ್ಲ. ಹಾಗಿದ್ದಾಗ ಇದ್ಯಾವ ಮಕ್ಕಳು? ಯಾಕೆ ಬಾಗಿಲು ತಟ್ಟುತ್ತಿದ್ದಾರೆ? ಮತ್ತೆ ಏನು ಕೂಗುತ್ತಿದಾರೆ? ಯಾಕೆ ಕೂಗುತ್ತಿದ್ದಾರೆ? ತಲೆ ಫುಲ್ ಮೊಸರು ಗಡಿಗೆ. ಒಂದು ಕಡೆ ದೆವ್ವ. ಮತ್ತೊಂದು ಕಡೆ ಬಾಗಿಲು ತಟ್ಟುತ್ತ, ಏನೋ ಕೂಗುತ್ತಿರುವ ಮಕ್ಕಳು. ಶಿವನೇ ಶಂಭುಲಿಂಗ!

ಎದುರಿಗೆ ನಿಂತಿದ್ದ ದೆವ್ವ ಗಹಗಹಿಸಿ ವಿಕೃತವಾಗಿ ನಕ್ಕಿತು. ನಿಲುವಂಗಿಯ ಅಡಿಯಲ್ಲಿದ್ದ ಕೈಗಳನ್ನು ಆಚೀಚೆ ಅಲ್ಲಾಡಿಸಿತು. ಬಾವಲಿ ರೆಕ್ಕೆಗಳನ್ನು ರಪ್ ರಪ್ ಅಂತ ಝಾಡಿಸಿದಂತೆ ತೋರಿಬಂತು. ದೆವ್ವ ಒಂದೆರೆಡು ಹೆಜ್ಜೆ ಹಿಂದೆ ಸರಿಯಿತು.

'ಏ! ಖಬರ್ದಾರ್! ಅಲ್ಲೇ ಇರು. ನಿನ್ನನ್ನು ನಂತರ ವಿಚಾರಿಸಿಕೊಳ್ಳುತ್ತೀನಿ. ಬಾಗಿಲಲ್ಲಿ ಮಕ್ಕಳು ಬಂದ ಹಾಗಿದೆ. ಒಳ್ಳೆದೇ ಆಯಿತು. ಅವರನ್ನೂ ಆಹುತಿ ತೆಗೆದುಕೊಂಡು ಬಿಡ್ತೀನಿ. ಬೋನಸ್ ಬಲಿ ನನಗೆ ಇವತ್ತು,' ಅಂತ ಅಬ್ಬರಿಸಿತು ಆ ಆಕೃತಿ. ಧ್ವನಿ ಮಾತ್ರ ಜೆನ್ನಿಫರಳದ್ದೇ ಅನ್ನಿಸಿತು. ಸ್ವಲ್ಪ ಗೊಗ್ಗರು ಗೊಗ್ಗರಾಗಿತ್ತು. ಅದು ಬಿಟ್ಟರೆ ಅವಳದ್ದೇ ಧ್ವನಿ. ಹಾಗಿದ್ದರೆ ಜೆನ್ನಿಫರ್ ಮೈಯಲ್ಲಿ ದೆವ್ವ ಹೊಕ್ಕಿದೆಯೇ? ದೆವ್ವ ಹೊಕ್ಕಿದ್ದರೆ ವೇಷ ಭೂಷಣ ಎಲ್ಲ ಹೇಗೆ ಬೇರೆಯಾಯಿತು? ಮುಖವಂತೂ ಆಕೆಯದ್ದು ಅಲ್ಲವೇ ಅಲ್ಲ. ಏನಿದು ವಿಚಿತ್ರ?

ನನ್ನ ಮೇಲೆ ಒಂದು ಕಣ್ಣಿಟ್ಟೇ ಆಕಡೆ ಸರಿಯಿತು ಆ ಜೆನ್ನಿಫರ್ ದೆವ್ವ. ಒಂದೆರೆಡು ಹೆಜ್ಜೆ  ಅಷ್ಟೇ. ಈಗ ಅದು ಬಾಗಿಲನ ಹಿಂದೆ ನಿಂತಿತ್ತು. ಅಲ್ಲೇ ಅವಳ ಬ್ಯಾಗ್ ಸಹಿತ ಇತ್ತು. ಹೆಂಗಸರ ವ್ಯಾನಿಟಿ ಬ್ಯಾಗ್. ಆ ಬ್ಯಾಗ್ ತೆಗೆದು ಕೈಯಲ್ಲಿ ಹಿಡಿದುಕೊಂಡಿತು. ಆಕಡೆಯಿಂದ ಮಕ್ಕಳು ಬಾಗಿಲು ಬಡಿಯುತ್ತಲೇ ಇದ್ದರು. ಏನೋ ಕೂಗುತ್ತಲೇ ಇದ್ದರು.

ಜೆನ್ನಿಫರ್ ದೆವ್ವ ಬಾಗಿಲು ತೆಗೆಯಿತು. 'ಘೌ! ಘೌ!' ಅಂತ ಒದರಿ ಮಕ್ಕಳನ್ನು ಹೆದರಿಸಿತು. ಹೊರಗೆ ನೋಡಿದರೆ ಎರಡು ಮಕ್ಕಳು. ಹೊರಗಿನ ಕಾರಿಡಾರಿನಲ್ಲಿ ಬೇಕಾದಷ್ಟು ಬೆಳಕಿತ್ತು. ಮಕ್ಕಳು ಸರಿಯಾಗಿ ಕಂಡರು. ಒಂದು ಹುಡುಗ, ಒಂದು ಹುಡುಗಿ. ಇಬ್ಬರೂ ಏನೋ ವಿಚಿತ್ರ ದೆವ್ವಗಳ ವೇಷಭೂಷಣ ಧರಿಸಿದ್ದರು. ಏನಪ್ಪಾ ಇದು ಇವತ್ತು ದೆವ್ವಗಳ ದಿವಸವೇ ಹೇಗೆ? ಇಲ್ಲಿ ನೋಡಿದರೆ ಇವಳು ದೆವ್ವವಾಗಿ ಬದಲಾಗಿ ಬಿಟ್ಟಿದ್ದಾಳೆ. ಹೊರಗೆ ಯಾರೋ ಬಾಗಿಲು ಬಡಿಯುತ್ತಾರೆ. ತೆಗೆದು ನೋಡಿದರೆ ಎರಡು ಚಿಕ್ಕ ದೆವ್ವಗಳು. ದೆವ್ವಗಳ ಮೆಹಫಿಲ್ ಜಮಾ ಆಗಿಬಿಟ್ಟಿದೆ! ಹೊಸದಾಗಿ ಮನೆಗೆ ಬಂದ ಮೇಲೆ ಒಂದು ಶಾಂತಿಯನ್ನಾದರೂ ಮಾಡಿಸಬೇಕಿತ್ತು. ಎಲ್ಲಿಯ ಶಾಂತಿ? ಕ್ಯಾಬರೆ ಡಾನ್ಸ್ ಹೊಡೆಯುತ್ತಿದ್ದ ಡಿಸ್ಕೋ ಶಾಂತಿಯ ಐಟಂ ನಂಬರುಗಳನ್ನು ನೋಡುತ್ತ ಎಲ್ಲ ಮರೆತುಬಿಟ್ಟಿದ್ದೆ.

ವಿಚಿತ್ರ ನೋಡಿ! ಆ ಮಕ್ಕಳು ದೆವ್ವದ ರೂಪದ ಜೆನ್ನಿಫರಳನ್ನು ನೋಡಿ ಬೆಚ್ಚಿ ಬೀಳಲಿಲ್ಲ. ಬದಲಿಗೆ ಚಪ್ಪಾಳೆ ತಟ್ಟಿ ತಟ್ಟಿ, ಕೇಕೆ ಹಾಕಿ ಹಾಕಿ ಸಂಭ್ರಮಿಸಿದವು. ಎಲ್ಲ ಒಂದೇ ದೆವ್ವದ ಬಿರಾದರಿಯವರು ಅನ್ನಿಸುತ್ತದೆ. ಜೆನ್ನಿಫರ್ ದೆವ್ವ ಕೂಡ ಆ ಸಂತಸದಲ್ಲಿ ಭಾಗಿಯಾಯಿತು. ಮುಂದೆ ಆಗಿದ್ದು ಮಾತ್ರ ಫುಲ್ ವಿಚಿತ್ರ.

ಆ ಮರಿ ದೆವ್ವಗಳು ವಿಚಿತ್ರವಾಗಿ ಏನೋ ಕೂಗಿದವು. ಜೆನ್ನಿಫರ್ ಕೈಯಲ್ಲಿ ಏನೋ ಒಂದು ಪ್ಯಾಕೆಟ್. ಅದರಿಂದ ಏನೋ ತೆಗೆದು ಅವರಿಗೆ ಕೊಟ್ಟಳು. ಥ್ಯಾಂಕ್ಸ್ ಹೇಳಿದ ಮರಿ ದೆವ್ವಗಳು ಅಲ್ಲಿಂದ ಹೊರಟವು. ಅಲ್ಲಿ ಏನಾಗುತ್ತಿದೆ? ಆ ಮರಿ ದೆವ್ವಗಳು ಎಲ್ಲಿ ಹೋಗಲಿವೆ? ಹೋಗುವ ಮುಂಚೆ ಆ ಮರಿ ದೆವ್ವಗಳಿಗೆ ಮಬ್ಬು ಕತ್ತಲಲ್ಲಿ, ಲಿವಿಂಗ್ ರೂಮಿನ ಮಧ್ಯೆ ಗಡಗಡ ನಡುಗುತ್ತ ನಿಂತ ನಾನು ಕಂಡಿರಬೇಕು. ಒಳಗೆ ಹಣಿಕಿ ಹಾಕಿದವು. ಒಳಗೆ ಬಂದುಬಿಟ್ಟರೆ ಕಷ್ಟ. ಮೊದಲೇ ಒಂದು ದೆವ್ವವಿದೆ. ಇವೂ ಎರಡು ಬಂದುಬಿಟ್ಟರೆ ಏನು ಮಾಡುತ್ತವೋ!? ಭಗವಂತಾ! ಅಮೇರಿಕಾಗೆ ಬಂದು ಕೇವಲ ನಾಲ್ಕೇ ತಿಂಗಳಾಗಿದೆ. ಆಗಲೇ ಮೇಲೆ ಹೋಗುವ ಟಿಕೆಟ್ ಕೊಟ್ಟೇಬಿಟ್ಟೆಯೇ ತಂದೆ? ಹಾಂ? ಅದೂ ದೆವ್ವದ ಕೈಯಲ್ಲಿ ಭಯಂಕರ ಸಾವು. ಏನು ಮಾಡಲಿ ಈಗ? ಏನೂ ತೋಚುತ್ತಿಲ್ಲ

ಮನೆಯ ಲ್ಯಾಂಡ್ ಲೈನ್ ಫೋನ್ ಪಕ್ಕದಲ್ಲಿ ಕಂಡಿತು. ಒಂದು ಐಡಿಯಾ ಬಂತು. ೯೧೧ ಎಮರ್ಜೆನ್ಸಿ ಸಹಾಯವಾಣಿ ನಂಬರ್ ಒತ್ತಿಬಿಟ್ಟರೆ ಆಯಿತು. ಮಾತಾಡುವ ಜರೂರತ್ತೂ ಇಲ್ಲ. ಕಾಲರ್ ಐಡಿ ನೋಡಿ, ನನ್ನ ಮನೆಯ ಅಡ್ರೆಸ್ ಟ್ರ್ಯಾಕ್ ಮಾಡಿ, ಪೋಲೀಸರನ್ನು ಕಳಿಸಿಯೇ ಬಿಡುತ್ತಾರೆ. ಆ ಮಟ್ಟದ ಸಿಸ್ಟಮ್ ಅಮೇರಿಕಾದಲ್ಲಿ ಇದೆ. ಅದೇ ಒಂದು ಉಳಿದ ಮಾರ್ಗ. ಜೆನ್ನಿಫರ್ ದೆವ್ವ ಇನ್ನೂ ಬಾಗಿಲಲ್ಲೇ ಇದೆ. ಚಿಕ್ಕ ದೆವ್ವಗಳನ್ನು ಕಳಿಸಿ ಕಾರಿಡಾರಿನಲ್ಲಿ ಬಗ್ಗಿ ಬಗ್ಗಿ ನೋಡುತ್ತಿದೆ. ಇನ್ನು ಒಂದೆರಡೇ ಕ್ಷಣಗಳಲ್ಲಿ ಬಾಗಿಲು ಹಾಕಿಕೊಂಡು ವಾಪಸ್ ಬರಲಿದೆ. ನಂತರ ನನ್ನ ರಕ್ತ ಹೀರಲಿದೆ. ಅಷ್ಟರಲ್ಲಿ ೯೧೧ ಒತ್ತೇ ಬಿಡಬೇಕು. ಒತ್ತಿದ ನಂತರವೂ ಬಚಾವಾಗುವದರ ಬಗ್ಗೆ ಖಾತ್ರಿಯಿಲ್ಲ. ಆದರೆ ಪೊಲೀಸರು ಸಮಯಕ್ಕೆ ಸರಿಯಾಗಿ ಬಂದರೆ ದೆವ್ವಕ್ಕೆ ಬರೋಬ್ಬರಿ ಬತ್ತಿ ಇಟ್ಟರೂ ಇಟ್ಟಾರು. ದೆವ್ವ ಪೊಲೀಸರಿಗೆ ಹೆದರುತ್ತದೆಯೇ? ಅಥವಾ ಮೊದಲಿನ ವೇಷ ಧರಿಸಿ ಮಾಯವಾಗಿಬಿಡುತ್ತದೆಯೋ? ಅಥವಾ ಮತ್ತೇನೋ ತಂತ್ರ ಮಾಡುತ್ತದೆಯೋ? ದೇವರಿಗೇ ಗೊತ್ತು. ದೆವ್ವಕ್ಕೇ ಗೊತ್ತು.

ಬೇಗ ಆಕ್ಷನ್ ತೆಗೆದುಕೊಳ್ಳಬೇಕು. ಒಂದು ಹೆಜ್ಜೆ ಪಕ್ಕಕ್ಕೆ ಸರಿದೆ. ಕಾಲ ಕೆಳಗಿದ್ದ ಪ್ಲೈವುಡ್ ನೆಲ ಕಿರ್ರ ಅಂತು. ಜೆನ್ನಿಫರ್ ದೆವ್ವ ಸಟಾಕ್ ಅಂತ ತಿರುಗಿ ನೋಡಿತು. ಅದಕ್ಕೆ ಏನೋ ಸೂಟು ಹೊಡೆದಿರಬೇಕು. ಸಂಶಯ ಬಂದಿರಬೇಕು. ಧಡಾಕ್! ಅಂತ ಬಾಗಿಲು ಮುಚ್ಚಿತು. ವಿಕಾರವಾಗಿ ನಕ್ಕಿತು. ಇಷ್ಟುದ್ದದ ನಾಲಿಗೆ ವಿಕಾರವಾಗಿ ಹೊರಗೆ ಚಾಚಿಕೊಂಡಿತು. ಕಣ್ಣಲ್ಲಿ ಮತ್ತೆ ಕೆಂಪು ದೀಪ. ಪಕ್ ಪಕ್ ಕೆಂಪು ದೀಪದಡಿಯಲ್ಲಿ ಭೀಕರ ಆಕೃತಿ. ಬಾವಲಿಯ ರೆಕ್ಕೆಗಳಂತೆ ಕೈಗಳನ್ನು ಅಲ್ಲಾಡಿಸುತ್ತ, ಉದ್ದ ಉದ್ದ ಹೆಜ್ಜೆ ಹಾಕುತ್ತ, ಕೈಗಳನ್ನು ಮುಂದೆ ಮುಂದೆ ತರುತ್ತ, ಹೂಂಕರಿಸುತ್ತ ಮತ್ತೆ ನನ್ನ ಕಡೆ ನಿಧಾನವಾಗಿ ಬರತೊಡಗಿತು. ಈಗ ನನಗೆ 'ಮಾಡು ಇಲ್ಲವೇ ಮಡಿ' ಕ್ಷಣ. ಇನ್ನು ಕ್ಷಣಾರ್ಧದಲ್ಲಿ ಅದರ ಕೈಗಳು ನನ್ನ ಕುತ್ತಿಗೆಯ ಮೇಲಿರುತ್ತವೆ. ಉದ್ದನೆಯ ಚೂಪಾದ ಉಗುರುಗಳು ರಕ್ತನಾಳಗಳನ್ನು ಛೇದಿಸಿ ರಕ್ತದ ಪೈಪ್ ತೆರೆದುಬಿಡುತ್ತವೆ. ರಕ್ತ ಕಾರಂಜಿಯಂತೆ ಚಿಮ್ಮುತ್ತದೆ. ನನ್ನ ಹಲಾಲ್ ಆಗಿಯೇಬಿಡುತ್ತದೆ. ೯೧೧ ಒತ್ತಲೇಬೇಕು. ಸಾವು ಕಣ್ಣ ಮುಂದೇ ಇದೇ. ಆದರೆ ಅಬ್ಬೇಪಾರಿಯಂತೆ ಸಾಯಬಾರದು.

'ಜೈ ಬಜರಂಗ ಬಲಿ! ಅಂತ ಅಬ್ಬರಿಸಿಯೇ ಡೈವ್ ಹೊಡೆಯೋಣ ಅಂತ ಮಾಡಿದೆ. ಧ್ವನಿ ಸತ್ತು ಹೋಗಿದೆ. ದೆವ್ವವನ್ನು ನೋಡಿದಾಗಿಂದ ಧ್ವನಿಯೇ ಇಲ್ಲ. ಫುಲ್ ಪೋಯಾಚ್ಚ.

ದೆವ್ವ ನನ್ನಿಂದ ನಾಲ್ಕು ಹೆಜ್ಜೆ ದೂರವಿದೆ ಅಂದಾಗ ಫೋನ್ ಕಡೆ ಡೈವ್ ಹೊಡೆದೆ. ಉಟ್ಟಿದ್ದ ಲುಂಗಿಯ ಪುಂಗಿ ಬಾರಿಸಿಹೋಯಿತು. ಪುಣ್ಯಕ್ಕೆ ಒಳಗೆ ಇರಬೇಕಾಗಿದ್ದಿದ್ದು ಇತ್ತು. ಹಾಗಾಗಿ ಕೇವಲ ಕ್ವಾರ್ಟರ್ (೧/೪) ಗೋಮಟೇಶ್ವರ ಆಗಿಹೋದೆ. 'ಇದೊಂದು ಸಲ ಕಾಪಾಡಿಬಿಡು ತಂದೆ. ಮುಂದೆ ಎಂದೂ ಲುಂಗಿ ಉಡುವದಿಲ್ಲ. ಚೊಣ್ಣಕ್ಕೆ ಶಿಫ್ಟ್ ಆಗಿಬಿಡುತ್ತೇನೆ. ಸದಾ ಚೊಣ್ಣವನ್ನೇ ಧರಿಸುವ ಚೊಣ್ಣಾ ಹಜಾರೆ ಆಗಿಬಿಡುತ್ತೇನೆ. ಕಾಪಾಡು ತಂದೆ!' ಅಂತ ಹರಕೆ ಹೇಳಿಕೊಳ್ಳುವ ಮಾದರಿಯಲ್ಲಿ ದೇವರನ್ನು ನೆನೆಯುತ್ತ ಫೋನಿನತ್ತ ಡೈವ್ ಹೊಡೆದೆ.

ಇದನ್ನು ಜೆನ್ನಿಫರ್ ದೆವ್ವ ನಿರೀಕ್ಷೆ ಮಾಡಿರಲಿಲ್ಲ. ಅದಕ್ಕೆ ಒಂದು ತರಹದ ಗೊಂದಲವಾಯಿತು. ನನ್ನ ಕಡೆ ಧಾವಿಸುತ್ತಿದ್ದ ದೆವ್ವ ಅಲ್ಲೇ ನಿಂತಿತು. ನನಗೆ ಒಳ್ಳೆಯದೇ ಆಯಿತು. ದೆವ್ವ ಕೂಡ ಪೈಪೋಟಿ ಮೇಲೆ ಡೈವ್ ಹೊಡೆದು ಫೋನ್ ಕಿತ್ತುಕೊಳ್ಳುತ್ತದೆ ಅಥವಾ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತದೆ ಅಂದುಕೊಂಡಿದ್ದೆ. ಆದರೆ ದೆವ್ವ ಏನೂ ಮಾಡಲಿಲ್ಲ. ನಿಂತಲ್ಲೇ ನಿಂತು ಬಿಟ್ಟಿತು. ಪ್ರತಿಯೊಂದು ದೆವ್ವಕ್ಕೂ ಒಂದೊಂದು ವಸ್ತುಗಳ ಭಯಂಕರ ಭಯವಿರುತ್ತದೆ ಅಂತ ಕೇಳಿದ್ದೆ. ಕೆಲವು ದೆವ್ವಗಳು ತ್ರಿಶೂಲಕ್ಕೆ ಹೆದರುತ್ತವೆ. ಕೆಲವು ಕ್ರೈಸ್ತರ ಕ್ರಾಸ್ ನೋಡಿದರೆ ಎದ್ದು ಬಿದ್ದು ಓಡುತ್ತವೆ. 'ಎಲ್ಲಿ ಈ ಜೆನ್ನಿಫರ್ ದೆವ್ವಕ್ಕೆ ಟೆಲಿಫೋನ್ ಅಂದರೆ ಭಯವೋ ಹೇಗೆ?' ಅಂತ ವಿಚಾರ ಫ್ಲಾಶ್ ಆಯಿತು. ಆದರೆ ಮಾಡಬೇಕಾದ ಕೆಲಸ ಇನ್ನೂ ಬಾಕಿಯಿತ್ತು.

ಫೋನ್ ಹ್ಯಾಂಡ್ಸೆಟ್ ಕೈಗೆ ಸಿಕ್ಕಿದ ಕ್ಷಣವೇ ೯೧೧ ಒತ್ತಿಬಿಟ್ಟೆ. ನಂತರ Talk ಬಟನ್ ಅದುಮಿಬಿಟ್ಟೆ. Done. ಗಡಿಬಿಡಿಯಲ್ಲಿ ಸ್ಪೀಕರ್ ಬಟನ್ ಕೂಡ ಒತ್ತಿಬಿಟ್ಟಿದ್ದು ನನಗೇ ಗೊತ್ತಿರಲಿಲ್ಲ. ಆಕಡೆಯಿಂದ ೯೧೧ ಆಪರೇಟರ್ ಧ್ವನಿ ಸ್ಪೀಕರ್ ಮೂಲಕ ಕೇಳಿ ಬಂದಾಗಲೇ ಈ ಲೋಕಕ್ಕೆ ಬಂದೆ. ನಾನು ಇನ್ನೂ ಜೀವಂತವಾಗಿದ್ದೆ. ದೆವ್ವ ದಾಳಿ ಮಾಡಿರಲಿಲ್ಲ. ಅದು ಅಲ್ಲೇ ನಿಂತಿತ್ತು. ಅದರ ವಿಚಿತ್ರ ತರಹದ ಕೂಗಾಟ ನಿಂತಿತ್ತು. ಕೈಗಳು ಉದ್ದಕ್ಕೆ ಚಾಚಿಕೊಂಡೇ ಇದ್ದವು. ಕಣ್ಣುಗಳಲ್ಲಿ ಕೆಂಪು ದೀಪ ನೆತ್ತರನ್ನು ಕಾರುತ್ತಲೇ ಇತ್ತು.

'What's your emergency?' ಅಂತ ೯೧೧ ಆಪರೇಟರ್ ಹೆಂಗಸಿನ ಧ್ವನಿ ಸ್ಪೀಕರ್ ಮೂಲಕ ಕೇಳಿಬಂತು. ಧ್ವನಿಯಲ್ಲಿ ಏರಿಲ್ಲ, ಇಳಿತವಿಲ್ಲ. ಶುದ್ದ ವೃತ್ತಿಪರರ ನಿರ್ಭಾವುಕ ಧ್ವನಿ.

ಏನು ಹೇಳಲಿ? ಬಾಯಿ ಎಲ್ಲ ಫುಲ್ ಬಂದ್!

ಮತ್ತೆ ಅದೇ ಪ್ರಶ್ನೆ. ಈಗ ಒಂದು ಎಕ್ಸಟ್ರಾ ಫಿಟ್ಟಿಂಗ್ ಬೇರೆ!

'What's your emergency? Are you able to speak? Hegade household. Correct?' ಅಂತ ಕೇಳಿದಳು ೯೧೧ ಆಪರೇಟರ್.

ಗುಡ್. ವೆರಿ ಗುಡ್. ಏನು ಸಿಸ್ಟಮ್ ಮಡಗಿದ್ದಾರೆ ಈ ಮಂದಿ! ಶಬಾಶ್! ನನ್ನ ಫೋನ್ ನಂಬರ್ ನೋಡಿ ನನ್ನ ಹೆಸರು, ವಿಳಾಸ ಎಲ್ಲ ಪತ್ತೆ ಮಾಡಿದ್ದಾರೆ. ಗುಡ್! ಗುಡ್!

ಈಗಲೂ ಮಾತು ಹೊರಡಲಿಲ್ಲ. ನಾನು ಜೆನ್ನಿಫರ್ ದೆವ್ವವನ್ನೇ ನೋಡುತ್ತ ನಿಂತಿದ್ದೆ. ಅತಿ ವಿಚಿತ್ರ ಎಂಬಂತೆ ಆ ದೆವ್ವ ಅಲ್ಲೇ ನಿಂತಿತ್ತು. ಕಾಡಿಸಿ ಪೀಡಿಸಿ ಕೊಲ್ಲುವ ದೆವ್ವವೇ ಇದು? sadistic ದೆವ್ವ!?

'Help is on the way. You can hang up now. Be safe as much you can,' ಅಂದಿತು ೯೧೧ ಆಪರೇಟರ್ ಧ್ವನಿ. ಅದು ಅವರ ಸ್ಟ್ಯಾಂಡರ್ಡ್ ಪದ್ಧತಿ. ೯೧೧ ಗೆ ಫೋನ್ ಮಾಡುವದು ದೊಡ್ಡ ಸಂಕಷ್ಟದಲ್ಲಿದ್ದಾಗ. ಅಂತಹ ಸಂದರ್ಭದಲ್ಲಿ ಫೋನ್ ಮಾಡಿದರೂ ಒಮ್ಮೊಮ್ಮೆ ಮಾತಾಡಲು ಅವಕಾಶವಿರುವದಿಲ್ಲ. ಪ್ರಾಣಾಪಾಯವಿರುತ್ತದೆ. ಹಾಗಾಗಿ ಮಾತಿಲ್ಲದ ಸೈಲೆಂಟ್ ಫೋನ್ ಕರೆಗಳು ಅವರಿಗೆ ಏನೂ ಹೊಸದಲ್ಲ. ೯೧೧ ಎಮರ್ಜೆನ್ಸಿಗೆ ಫೋನ್ ಮಾಡಿ ಮಾತಾಡಲಿಲ್ಲ ಅಂದರೆ ಅಪಾಯ ಹೆಚ್ಚೇ ಇದೆ ಅಂತ ಅವರ ಲೆಕ್ಕಾಚಾರ. ಆಗಿಂದಾಗಲೇ ಪೋಲೀಸ್ ಕಾರನ್ನು ಕಳಿಸಿಯೇ ಬಿಡುತ್ತಾರೆ. ಇದನ್ನೆಲ್ಲ ಕೇಳಿದ್ದೆ. ಈಗ ನನ್ನ ಮುಂದೆಯೇ ಎಲ್ಲ ತೆರೆದುಕೊಳ್ಳುತ್ತಿದೆ. ಆದರೆ ಅದೆಲ್ಲ ಉಪಯೋಗವಾಗುತ್ತದೆಯೋ ಇಲ್ಲವೋ? Will it all be too little too late?

ಜೆನ್ನಿಫರ್ ದೆವ್ವ ಈಗ ಗಹಗಹಿಸಿ ನಕ್ಕಿತು. ಅರೇ ಇಸ್ಕಿ! ಇಲ್ಲಿ ತನಕ ವಿಚಿತ್ರವಾಗಿ ಹೂಂಕರಿಸುತ್ತಿದ್ದ ದೆವ್ವ ಈಗ ನಗುತ್ತಿದೆ. ಒಂದು ವಿಷಯವನ್ನು ಮಿಸ್ ಮಾಡಿಕೊಳ್ಳುವಂತೆಯೇ ಇರಲಿಲ್ಲ. ಈಗ ಜೆನ್ನಿಫರಳ ಸಹಜ ಧ್ವನಿಯಲ್ಲೇ ನಗುತ್ತಿದೆ. ಅದು ಅವಳ unmistakable ನಗೆ. ಆ ನಗೆಯಲ್ಲಿಯೇ ಅನುಕಂಪ, ಸ್ನೇಹ, ಮಮತೆ, ಆತ್ಮೀಯತೆ ಎಲ್ಲ ಇದೆ. ಇದು ಹೇಗೆ ಸಾಧ್ಯ? ದೆವ್ವ ಜೆನ್ನಿಫರಳ ದೇಹವನ್ನು ಬಿಟ್ಟು ತೊಲಗುತ್ತಿದೆಯೋ ಹೇಗೆ? ದೇವರೇ ಇದೇನು ಆಗುತ್ತಿದೆ?

ಜೆನ್ನಿಫರ್ ದೆವ್ವ ಎರಡು ಹೆಜ್ಜೆ ಹಾಕಿತು. ನನ್ನ ಕಡೆಯಲ್ಲ. ಸೈಡಿಗೆ ಎರಡು ಹೆಜ್ಜೆ ಹಾಕಿತು. ಅಲ್ಲಿ ದೀಪವಿತ್ತು. ಅದೇ ಬಲ್ಬ್ ಸುಟ್ಟುಹೋದ ದೀಪ. ಅದರ ಕೆಳಗೆ ಕೈಹಾಕಿ ಸ್ವಿಚ್ಚನ್ನು ಕಳಕ್ ಅಂತ ಆನ್ ಮಾಡಿತು. ದೀಪ ಒಮ್ಮೆಲೇ ಹೊತ್ತಿ ಉರಿಯಿತು. ಅಂದರೆ ಬಲ್ಬ್ ಸುಟ್ಟಿರಲಿಲ್ಲವೇ? ಅಥವಾ ದೆವ್ವದ ಹತ್ತಿರ ಅತೀಂದ್ರಿಯ ಶಕ್ತಿಗಳು ಏನಾದರೂ ಇವೆಯೋ? ಅವುಗಳ ಮೂಲಕ ಸುಟ್ಟ ಬಲ್ಬಿನ ಮುಖಾಂತರವೂ ದೀಪ ಹೊತ್ತಿಸಿತೆ ದೆವ್ವ?

ಈಗ ಲಿವಿಂಗ್ ರೂಂ ತುಂಬಾ ಫುಲ್ ಬೆಳಕು. ಫುಲ್ ಬೆಳಕಿನಲ್ಲಿ ದೆವ್ವ ಮತ್ತೂ ಖರಾಬಾಗಿ ಕಂಡಿತು. ಉದ್ದವಾಗಿ ಚಾಚಿಕೊಂಡ ಕಪ್ಪು ಬಣ್ಣದ ನಾಲಿಗೆ ಮೇಲೆ ಹೆಪ್ಪು ಗಟ್ಟಿದ ರಕ್ತ. ಓಹ್! ಮೈ ಗಾಡ್! ಕತ್ತಲಲ್ಲಿ ಸರಿಯಾಗಿ ಕಂಡಿರಲಿಲ್ಲ. ಹಾಕಿಕೊಂಡಿದ್ದ ನಿಲುವಂಗಿ ಮೇಲೂ ರಕ್ತ. ರಾಮಾ ರಕ್ತ. ದೆವ್ವ ಕೈ ಮುಂದೆ ಚಾಚಿ ಗಹಗಹಿಸಿ ನಕ್ಕಿತು. ಉಗುರಿನ ಸಂದಿಗಳಲ್ಲೂ ರಕ್ತ, ರಾಮಾ ರಕ್ತ. ದೆವ್ವ ಮುಂದೆ ಹೆಜ್ಜೆ ಹಾಕಿತು.

ಈಗ ದೆವ್ವ ನನ್ನ ಕಡೆ ಬಂತು. ಮಧ್ಯೆ ಅಂತರ ಒಂದು ಅಡಿ ಇದ್ದಾಗ ನಿಂತಿತು. 'ಘೌ!ಘೌ!' ಅಂತ ಹೂಂಕರಿಸಿತು. ಏನು ಮಾಡಲಿ? ಎಲ್ಲಿ ಓಡಲಿ? ಸಾವು ಕಣ್ಣ ಮುಂದೆ ಬಂದು ನಿಂತಿದೆ. ಸಾವನ್ನು ನೋಡುವದು ಕಷ್ಟ. ನನ್ನ ಕಣ್ಣುಗಳು ಮುಚ್ಚಿಹೋದವು. ಕೈಯಲ್ಲಿ ಫೋನ್ ಹ್ಯಾಂಡ್ಸೆಟ್ ಹಿಡಿದುಕೊಂಡು ನಿಂತೇ ಇದ್ದೆ. ದೆವ್ವದ ಚೂಪಾದ ಉಗುರುಗಳು ಯಾವಾಗ ಕುತ್ತಿಗೆಯ ರಕ್ತನಾಳಗಳನ್ನು ಛಿದ್ರ ಮಾಡಲಿವೆಯೋ!? ಶಿವಾಯ ನಮಃ! ಆ ಕ್ಷಣ ಬಂದೇಬಿಟ್ಟಿತು. ದೇವರನ್ನು ಸ್ಮರಿಸಿಕೊಂಡೆ. ದೆವ್ವದ ಕೈಯಲ್ಲಿ ಸಾಯಲು ಸಿದ್ಧನಾದೆ.

ಆದರೆ ಹಾಗೇನೂ ಆಗಲಿಲ್ಲ. ಒಂದು ಕ್ಷಣದ ನಂತರ ಕಣ್ಣು ಬಿಟ್ಟು ನೋಡಿದೆ. ಭಯಂಕರ ಆಶ್ಚರ್ಯ. ಜೆನ್ನಿಫರ್ ದೆವ್ವ ಹೋಗಿ ಮತ್ತೆ ರಾಕಿಂಗ್ ಚೇರ್ ಮೇಲೆ ಕೂತುಬಿಟ್ಟಿದೆ. ಜೋಕಾಲಿಯಂತೆ ಜೀಕುತ್ತಿದೆ. ಮತ್ತದೇ ಕರ್ರ್! ಕರ್ರ್! ಏನೋ ಗುಣುಗುಣು ಅನ್ನುತ್ತಿದೆ ದೆವ್ವ. ಧ್ವನಿ ಮಾತ್ರ ಜೆನ್ನಿಫರಳದ್ದೇ. ದೆವ್ವದ ರೂಪ, ವೇಷ ಮಾತ್ರ ಹಾಗೇ ಇದೆ. ದೆವ್ವದ ಕೈಯಲ್ಲಿ ಟೀವಿ ರಿಮೋಟ್ ಕಂಟ್ರೋಲ್. ಟೀವಿ ಮೇಲೆ ಮಾತ್ರ ಮತ್ತೆ ಅವೇ transmission ಇಲ್ಲದಾಗ ಮೂಡಿ ಬರುವ ಬೆಳ್ಳಿ ಗೆರೆಗಳು. ಕೊಲ್ಲುವ ಮೊದಲು ಟೀವಿ ನೋಡಬೇಕೇ ದೆವ್ವಕ್ಕೆ!?

ದೆವ್ವ ಟೀವಿ ರಿಮೋಟ್ ಅದುಮಿತು. ಟೀವಿ ಚಾನೆಲ್ ಬದಲು ಮಾಡುತ್ತದೆಯೋ ಅಂದುಕೊಂಡರೆ ದೆವ್ವ ಟೀವಿ ಆಫ್ ಮಾಡಿಬಿಟ್ಟಿತು. ದೆವ್ವಕ್ಕೆ ಪೂರ್ತಿ ಸೈಲೆನ್ಸ್ ಇಷ್ಟ ಅಂತ ಕಾಣುತ್ತದೆ. ಪೂರ್ತಿ ಶಾಂತಿಯಲ್ಲಿ ನನ್ನ ಕೊಲ್ಲಲಿದೆಯೇ ದೆವ್ವ!?

'ಮಹೇಶ್!' ಅಂತ ಕರೆಯಿತು ದೆವ್ವ. ಸಹಜವಾಗಿ ಹೇಳಿತು. ಧ್ವನಿ ಜೆನ್ನಿಫರಳದ್ದೇ. ೯೧೧ ಸಹಾಯವಾಣಿಗೆ ಫೋನ್ ಮಾಡಿದ್ದೇ ಮಾಡಿದ್ದು ದೆವ್ವದ ಬೇರೇನೂ ಬದಲಾಗದಿದ್ದರೂ ಮೊದಲಿನ ಧ್ವನಿ ಮಾತ್ರ ಮರಳಿ ಬಂದಿದೆ. ಅಷ್ಟರಮಟ್ಟಿಗೆ ದೆವ್ವ ಜೆನ್ನಿಫರಳನ್ನು ಬಿಟ್ಟು ಹೋಗಿದೆ.

ಅವಳು ಕರೆದಿದ್ದು ಕೇಳಿತು. 'ಏನು ಜೆನ್ನಿಫರ್?' ಅಂತ ಕೇಳಲು ಧ್ವನಿ ಹೊರಡಲಿಲ್ಲ.

'ಮತ್ತೊಮ್ಮೆ ೯೧೧ ಗೆ ಫೋನ್ ಮಾಡು ಮಹೇಶ್! immediately! ಈಗೇ ಮಾಡು!' ಅಂತ ಜೆನ್ನಿಫರ್ ದೆವ್ವ ಗಡಿಬಿಡಿ ಆಜ್ಞೆ ಮಾಡಿತು.

ಇದ್ಯಾಕೆ ಮತ್ತೆ ೯೧೧ ಗೆ ಫೋನ್ ಮಾಡು ಅನ್ನುತ್ತಿದ್ದಾಳೆ? ಯಾಕೆ?

ಸುಮ್ಮನೆ ನಿಂತಿದ್ದೆ. ರಾಕಿಂಗ್ ಖುರ್ಚಿ ಮೇಲೆ ಕುಳಿತಿದ್ದ ದೆವ್ವ ಮತ್ತೂ ಜೋರಾಗಿ ಜೀಕಿತು. 'ಅದು ರಾಕಿಂಗ್ ಚೇರ್. ಜೋಕಾಲಿಯಲ್ಲ,' ಅಂತ ಹೇಳಬೇಕು ಅಂತ ವಿಚಾರ ಬಂತು. ಮಾತು ಬರಲಿಲ್ಲ.

ನಾನು ಅದರ ಆಜ್ಞೆ ಪಾಲಿಸಲಿಲ್ಲ ಅಂತ ದೆವ್ವಕ್ಕೆ ಸಿಟ್ಟು ಬಂತೋ ಏನೋ. ರಾಕಿಂಗ್ ಚೇರ್ ಮೇಲೆ ಕೂತು ಜೀಕುತ್ತಿದ್ದ ದೆವ್ವ ಒಮ್ಮೆಲೇ ಛಲಾಂಗ್ ಹೊಡೆಯಿತು. ಮುಂದಿನ ಕ್ಷಣ ನನ್ನ ಎದುರಲ್ಲಿ. ಮುಖದ ಮುಂದೆಯೇ. ಮುಗೀತು ಕಥೆ! ಇದೇ ಫೈನಲ್ ಮೊಮೆಂಟ್ ಇರಬೇಕು. ಅಂತಿಮ ಕ್ಷಣ! ಅಲ್ವಿದಾ! ಖುದಾ ಹಾಫಿಜ್ ! ಸೈತಾನ್ ಹಾಫಿಜ್! ಗುಡ್ ಬೈ! ಹೋಗುತ್ತೇನೆ. ಮುಂದೆ? ಮುಂದೆ ಏನ್ರೀ? ದೆವ್ವದ ಕೈಯಲ್ಲಿ ಸತ್ತವರು ಮತ್ತೇನಾಗುತ್ತಾರೆ? ದೆವ್ವವೇ ಆಗುತ್ತಾರೆ. ಶಿವಾ! ಮುಂದಿನ ಜನ್ಮ ದೆವ್ವದ ಲೈಫ್ ನನಗೆ!

ಆದರೆ ಹಾಗೇನೂ ಆಗಲಿಲ್ಲ. ಎದುರಿಗೆ ನಿಂತ ಜೆನ್ನಿಫರ್ ದೆವ್ವ ನಕ್ಕಿತು. ಬಿದ್ದು ಬಿದ್ದು ನಕ್ಕಿತು. ನಗುತ್ತ ನಗುತ್ತ, ಬಗ್ಗಿ ಬಗ್ಗಿ, ಕೈಗಳನ್ನು ಮೇಲೆ ಕೆಳಗೆ ಝಾಡಿಸಿತು. ಹಾಕಿದ್ದ ರಕ್ತಸಿಕ್ತ ನಿಲುವಂಗಿ ಕೆಳಗೆ ಬಿದ್ದು ಬಿಟ್ಟಿತು.

ಪರಮಾಶ್ಚರ್ಯ! ಈಗ ನೋಡಿದರೆ ಮೊದಲಿನ ಜೆನ್ನಿಫರ್! ಅದೇ ಜೀನ್ಸ್ ಪ್ಯಾಂಟ್, ಅದೇ ಕೆಂಪು ಟಾಪ್, ಅದೇ ಜಾಕೆಟ್. ಅರೇ ಇಸ್ಕಿ!? ಏನಾಗುತ್ತಿದೆ? ಇದೆಂತಹ ಭ್ರಮೆ ಗುರುವೇ!?

ಜೆನ್ನಿಫರ್ ದೆವ್ವ ಮಾತ್ರ ನಗುತ್ತಲೇ ಇದ್ದಳು. ಮುಖ ಮಾತ್ರ ಭೀಕರವಾಗಿಯೇ ಇತ್ತು. ಬಿಚ್ಚಿ ಎಸೆದ ನಿಲುವಂಗಿ ಜೊತೆಗೆ ಆ ಉಗುರುಗಳು ಹೋಗಿಬಿಟ್ಟಿವೆ. ಅಂದರೆ ಆ ಚೂಪನೆಯ ಉಗುರುಗಳು......???

ಜೆನ್ನಿಫರ್ ದೆವ್ವ ತಿರುಗಿದಳು. ನನ್ನ ಕಡೆ ಬೆನ್ನು ಹಾಕಿ ನಿಂತಳು. ಶಿವನೇ, ಈ ದೆವ್ವ ರಿವರ್ಸ್ ಗೇರ್ ಗಿರಾಕಿಯೇ? ಕೊಲ್ಲುವಾಗ ತನ್ನ ಬಲಿಯನ್ನು ನೋಡುವದಿಲ್ಲವೇ?

ಜೆನ್ನಿಫರ್ ದೆವ್ವ ಕೈಗಳನ್ನು ಹಿಂದೆ ತಂದಳು. ನನ್ನ ಕುತ್ತಿಗೆಗೆ ತರಲಿಲ್ಲ. ತನ್ನ ಕುತ್ತಿಗೆಗೆ ತೆಗೆದುಕೊಂಡು ಹೋದಳು. ಕುತ್ತಿಗೆಯ ಹಿಂದೆ ಏನೋ ಮಾಡಿದಳು. ಸರಿಯಾಗಿ ಗೊತ್ತಾಗಲಿಲ್ಲ. ಏನೋ ಎತ್ತಿದಳು. ಎಲ್ಲೋ ಜಿಪ್ಪರ್ ಒಂದನ್ನು 'ಪರ್' ಅಂತ ಎಳೆದ ಶಬ್ದವಾಯಿತು. ಒಂದೇ smooth movement ನಲ್ಲಿ ಆ ಕೈಗಳು ಹಾಕಿದ ಮುಖವಾಡವನ್ನು ಎತ್ತಿಬಿಟ್ಟವು. ಸರಾಕ್! ಅಂತ ಹಿಮ್ಮಡದ ಮೇಲೆ ನನ್ನ ಕಡೆ ತಿರುಗಿದ ದೆವ್ವವನ್ನು ನೋಡಿ ನಾ ಬೆಚ್ಚಿದೆ! ಆ ಮುಖ ನೋಡಿ ನಾ ಬಿಚ್ಚಿ ಬಿದ್ದು ನೆಲಕ್ಕೆ ಕುಸಿದೆ. ತಣ್ಣನೆಯ ನೆಲ ತಾಗಬಾರದ ಜಾಗಕ್ಕೆ ತಾಗಿ ತಂಪುತಂಪಾಗಿ ಫೀಲ್ ಆಯಿತು. ಡೈವ್ ಹೊಡೆದಾಗ ಲುಂಗಿ ಕಳಚಿ ಬಿದ್ದುಹೋಗಿದ್ದು ಆವಾಗ ನೆನಪಾಯಿತು.

ಈಗ ನನ್ನ ಮುಂದೆ ನಿಂತಿದ್ದು ದೆವ್ವವಾಗಿರಲಿಲ್ಲ. ಒರಿಜಿನಲ್ ಜೆನ್ನಿಫರ್! ಕೈಯಲ್ಲಿ ದೆವ್ವದ ಮುಖವಾಡ! ಮುಖದ ಮೇಲೆ ದೊಡ್ಡ ನಗೆ!

'ಜೆನ್ನಿಫರ್.....ಜೆನ್ನಿಫರ್.....ನೀನು.....? ಏನು....? ಇದೆಲ್ಲಾ.... ???' ಅಂತ ತೊದಲಿದೆ. ಅವಳ ಪರಿಚಿತ, ಸ್ನೇಹಮಯಿ ಮುಖವನ್ನು ನೋಡಿದಾಗ ಸತ್ತಿದ್ದ ನನ್ನ ಧ್ವನಿ ಮತ್ತೆ ಹುಟ್ಟಿ ಬಂತು.

ಜೆನ್ನಿಫರ್ ಬಿದ್ದು ಬಿದ್ದು ನಕ್ಕಳು.

'ಮಹೇಶ್, ಎಲ್ಲ ಹೇಳೋಣ, ಮಾತಾಡೋಣ. ಅರ್ಜೆಂಟ್ ಆಗಿ ಎರಡು ಕೆಲಸ  ಮಾಡು. ನಿನ್ನ ಲುಂಗಿ 'ಬುದ್ಧಂ ಶರಣಂ ಬಿಚ್ಚಾಮಿ' ಆಗಿದೆ. ತಾವು ಮೊದಲು ಲುಂಗಿ ಉಟ್ಟುಕೊಳ್ಳಿ. ನಂತರ ಎರಡನೇ ಕೆಲಸ ಹೇಳುತ್ತೇನೆ,' ಅಂತ ಹೇಳಿದಳು ಜೆನ್ನಿಫರ್. ಆಕೆಯ ಕೀಟಲೆ ಮಾಡುವಂತಹ ನಗು ಮಾತ್ರ ನಿರಂತರ.

ಗಡಬಡಾಯಿಸಿ ಲುಂಗಿ ಸುತ್ತಿಕೊಂಡೆ. ಸರಿಯಾಗಿ ಉಟ್ಟುಕೊಳ್ಳಲು ಇನ್ನೂ ನಡುಕ ನಿಂತಿರಲಿಲ್ಲ. ದೆವ್ವದ ರೂಪದ ಧರಿಸಿದಾಕೆ ಈಗ ಮಾತ್ರ ಸರಿಯಾಗಿದ್ದಾಳೆ. ಮತ್ತೆ ಮುಂದಿನ ರೂಪ ಯಾವುದೋ? ಪಿಶಾಚಿ ರೂಪವೋ? ಬ್ರಹ್ಮರಾಕ್ಷಸಿಯ ರೂಪವೋ? ದೇವರೇ ಬಲ್ಲ.

'೯೧೧ ಗೆ ಮತ್ತೊಮ್ಮೆ ಫೋನ್ ಮಾಡು ಮಾರಾಯಾ. ಅವರಿಗೆ ಹೇಳು, 'ಏನೂ ತೊಂದರೆಯಿಲ್ಲ. ಯಾವದೇ ಅಪಾಯವೂ ಇಲ್ಲ. by mistake ಫೋನ್ ಮಾಡಿಬಿಟ್ಟೆ,' ಅಂತ. ಇಲ್ಲವಾದರೆ ಒಂದಿಷ್ಟು ಪೊಲೀಸರು, ಫೈರ್ ಇಂಜಿನ್, ಆಂಬುಲೆನ್ಸ್ ಎಲ್ಲ ಬಂದೇಬಿಡುತ್ತವೆ. ಆಗಲೇ ಹೊರಟುಬಿಟ್ಟಿವೆಯೋ ಏನೋ!?' ಅಂದಳು. ಮತ್ತೆ ಅದೇ ಕಿಲಾಡಿ ನಗು. ಖತರ್ನಾಕ್ ಇದ್ದಾಳೆ. ಜೆನ್ನಿಫರ್ ಆದರೂ ಸರಿ ದೆವ್ವವಾದರೂ ಸರಿ, ಮಹಾ ಕಿಲಾಡಿ.

ಅರೇ ಇಸ್ಕಿ! ಇದೇನು ದೆವ್ವದ ಹೊಸಾ ಸ್ಕೀಮೇ? ೯೧೧ ಕರೆ ಮಾಡಿದ್ದಕ್ಕೆ ಸಹಾಯ ಬರಲಿದೆ ಅಂತ ದೆವ್ವಕ್ಕೆ ಗೊತ್ತಾಗಿದೆ. ಒಮ್ಮೆ ಸಹಾಯಕ್ಕೆ ಪೊಲೀಸರು ಬಂದರೆ ಈ ದೆವ್ವದ ಕಾರ್ನಾಮೆಗಳಿಗೆ ತೊಂದರೆಯಾಗುತ್ತದೆ ಅಂತ ತಿಳಿದು ನನಗೆ ಮತ್ತೊಮ್ಮೆ ೯೧೧ ಗೆ ಫೋನ್ ಮಾಡಿ, 'ಎಲ್ಲ ಸರಿಯಿದೆ. ಏನೂ ತೊಂದರೆಯಿಲ್ಲ. ಸಹಾಯದ ಜರೂರತ್ತಿಲ್ಲ,' ಅಂತ ಹೇಳು ಅಂತ ನನ್ನನ್ನು ಪುಸಲಾಯಿಸುತ್ತಿದೆಯೇ ದೆವ್ವ? ಈ ದೆವ್ವದ ಮಾತು ನಂಬಿ, ನಾ ಮಂಗ್ಯಾ ಆಗಿ, ೯೧೧ ಗೆ ಮತ್ತೆ ಫೋನ್ ಮಾಡಿ, ಅವರನ್ನೂ ಮಂಗ್ಯಾ ಮಾಡಿಬಿಟ್ಟರೆ ಮತ್ತೆ ದೆವ್ವದ ರೂಪಕ್ಕೆ ಬದಲಾವಣೆಗೊಂಡು ರಾತ್ರಿಯಿಡೀ ನನ್ನನ್ನು ಸಣ್ಣಗೆ ಕೀಮಾ ಮಾಡಿಕೊಂಡು ಆಹುತಿ ತೆಗೆದುಕೊಳ್ಳುವ ಖತರ್ನಾಕ್ ಸಂಚು ಮಾಡಿದೆಯೇ ಈ ದೆವ್ವ? ಕೆಲವು ದೆವ್ವಗಳು ಇಚ್ಛಾಧಾರಿ ಇರುತ್ತವೆ ಅಂತ ಕೇಳಿದ್ದೆ. ಬೇಕಾದಾಗ ಬೇಕಾದ ರೂಪ ಧರಿಸುತ್ತವೆ. ಇದೂ ಕೂಡ ಇಚ್ಛಾಧಾರಿ ದೆವ್ವವೇ? ಈ ಇಚ್ಛಾಧಾರಿ ದೆವ್ವದ ಮನೆ ಹಾಳಾಗ. ಈ ಇಚ್ಛಾಧಾರಿ ದೆವ್ವ ಈ ಕಚ್ಛಾಧಾರಿ ಮನುಷ್ಯನನ್ನೇಕೆ ಕಾಡುತ್ತಿದೆ? ಈಗ ಮೈಮೇಲೆ ಲುಂಗಿ ಬಂತು ಬಿಡಿ. ಆಗೊಂದಿಷ್ಟು ಹೊತ್ತು ಲುಂಗಿ ಉದುರಿಸಿಕೊಂಡು ಫುಲ್ ಕಚ್ಛಾಧಾರಿ ಪೈಲ್ವಾನ್ ಆಗಿ ನಿಂತಿದ್ದೆನಲ್ಲ. ಎಲ್ಲ ಈ ದೆವ್ವದ ಕೃಪೆ.

ಅಷ್ಟರಲ್ಲಿ ಯಾರೋ ಮನೆಯ ಬಾಗಿಲನ್ನು ಅದ್ಯಾವ ರೀತಿಯಲ್ಲಿ ಗುದ್ದಿದರು ಅಂದರೆ ಬಾಗಿಲು ಮುರಿದು ಬೀಳದಿದ್ದದ್ದು ದೊಡ್ಡ ಮಾತು. ಹಿಂದಿನಿಂದಲೇ ಕೇಳಿಬಂತು ದೊಡ್ಡ ಆವಾಜ್!

'ಪೋಲೀಸ್! ಬಾಗಿಲು ತೆಗೆಯಿರಿ. ಇಲ್ಲವಾದರೆ ಬಾಗಿಲು ಮುರಿದುಕೊಂಡು ಒಳಗೆ ಬರಬೇಕಾಗುತ್ತದೆ! ಪೋಲೀಸ್!' ಅಂತ ಹೊರಗಿನಿಂದ ಆವಾಜ್ ಹಾಕಿದರು.

ನಗುವದನ್ನು ನಿಲ್ಲಿಸಿದ ಜೆನ್ನಿಫರ್ ತಾನೇ ಹೋಗಿ ಬಾಗಿಲು ತೆಗೆದಳು. ಎದುರಿಗೆ ಗನ್ ಹಿರಿದು ನಿಂತಿದ್ದ ನಾಲ್ಕು ದೈತ್ಯಾಕಾರದ ಅಮೇರಿಕನ್ ಪೊಲೀಸರು.

ನಾನು ಮಾತ್ರ 'ಹ್ಯಾಂ!' ಅಂತ ನೋಡುತ್ತಲೇ ಇದ್ದೆ.

ಆ ಪೋಲೀಸರ ತಂಡದ ನಾಯಕನಿಗೆ ಜೆನ್ನಿಫರಳ ಪರಿಚಯ ಇತ್ತು ಅಂತ ಕಾಣುತ್ತದೆ. ಸಣ್ಣ ಊರು. ಲೋಕಲ್ ಪೋಲೀಸ್. ಹಾಗಾಗಿ ಪರಿಚಯ ಇದ್ದರೂ ಇರಬಹುದು.

'ಹಾಯ್ ಜೆನ್ನಿಫರ್! ನೀನು ಇಲ್ಲಿ? ಅದು ಹೇಗೆ? ಏನಾಯಿತು? ಇಲ್ಲಿಂದಲೇ ೯೧೧ ಗೆ ಕರೆ ಬಂತು. ಮಾಡಿದವರು ಏನೂ ಮಾತಾಡಲಿಲ್ಲ. 'ಹಿನ್ನೆಲೆಯಲ್ಲಿ ಏನೋ ವಿಚಿತ್ರ ಶಬ್ದ ಕೇಳಿಬಂತು. ಯಾರೋ ವಿಕೃತವಾಗಿ ನಕ್ಕ ಹಾಗಿತ್ತು,' ಅಂತ ೯೧೧ ಆಪರೇಟರ್ ಹೇಳಿದ. ತಕ್ಷಣ ಓಡಿ ಬಂದೆವು. ಕೆಳಗಿನ ಬಾಗಿಲಿನ ಮಾಸ್ಟರ್ ಕೋಡ್ ಇರುತ್ತದೆ ನಮ್ಮ ಹತ್ತಿರ. ಹಾಗಾಗಿ ಮೇಲೆ ಬರಲು ಏನೂ ತೊಂದರೆಯಾಗಲಿಲ್ಲ. Is anything wrong here? ಇಲ್ಲಿ ಮಿಸ್ಟರ್ ಹೆಗೇಡ್ ಯಾರು?' ಅಂತ ಕೇಳಿದ ಆ ಪೋಲೀಸ್. ಕೈಯಲ್ಲಿನ ಗನ್ ಕವಚದ ಒಳಗೆ ಸೇರಿತ್ತು.

ಹಾಂ!? ಜೆನ್ನಿಫರ್ ದೆವ್ವ ಈ ಪೋಲೀಸಪ್ಪನನ್ನೂ ಮಂಗ್ಯಾ ಮಾಡಿಬಿಟ್ಟಿತೇ? ಹಾಗಿದ್ದರೆ ಇಲ್ಲಿಗೆ ಫುಲ್ ಶಿವಾಯ ನಮಃ! ಈ ದೆವ್ವಕ್ಕೆ ಸ್ಪೆಷಲ್ ವಶೀಕರಣ ಶಕ್ತಿ ಇರಬೇಕು. ಹಾಗಾಗಿ ಪೊಲೀಸರೂ ಮಂಗ್ಯಾ ಆಗಿಹೋಗುತ್ತಾರೆ. ಏನು ಮಾಡಲಿ ಈಗ? 'ಯೋ ಪೋಲಿಸ್! ಇದು ದೆವ್ವ ಕಣಪ್ಪಾ. ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗು. ಇಲ್ಲವಾದರೆ ನೀನು ಹೋದ ಮರುಕ್ಷಣ ಮತ್ತೆ ದೆವ್ವದ ಆಕಾರ ತಾಳಿ ನನ್ನನ್ನು ಕೊಲ್ಲಲಿದೆ ಈ ಜೆನ್ನಿಫರ್ ದೆವ್ವ!' ಅಂತ ಪೊಲೀಸರಿಗೆ ಹೇಳಲೇ? ಮಾತು ಹೊರಡಲಿಲ್ಲ.

'ಏ, ಬಾಬ್! ನಿನಗೆ ಎಲ್ಲ ಹೇಳುತ್ತೇನೆ ಬಾಬ್! ಬಾಬ್!' ಅಂತ ಕಷ್ಟಪಟ್ಟು ಹೇಳಿದಳು ಜೆನ್ನಿಫರ್. ಅವಳಿಗೆ ಮಾತಾಡಲೂ ಆಗುತ್ತಿಲ್ಲ. ಅಷ್ಟು ನಗೆ ಬರುತ್ತಿದೆ. ಹೊಟ್ಟೆ ಒತ್ತಿಕೊಂಡು ಬಿದ್ದು ಬಿದ್ದು ನಗುತ್ತಿದ್ದಾಳೆ.

'ಜೆನ್ನಿಫರ್, ಏನಾಯಿತು? ಯಾಕಿಷ್ಟು ನಗು? ಈ ಮನೆಯಲ್ಲಿ ಏನೋ ದೊಡ್ಡ ಲಫಡಾ ಆಗಿದೆ ಅಂತ ಬಂದರೆ ಇಲ್ಲಿ ನೀನು. ಅದು ದೊಡ್ಡ ಆಶ್ಚರ್ಯ. ಮತ್ತೆ ಏನೂ ಆಗಿಲ್ಲ ಅಂದೆ. ಎಲ್ಲ ಸರಿಯಿದೆ ಅಂದೆ. ಏನಿದೆಲ್ಲಾ ಜೆನ್ನಿಫರ್!?' ಅಂತ ಕೇಳಿದ ಬಾಬ್ ಅನ್ನುವ ಆ ಪೋಲೀಸ್.

'ಬಾಬ್, ಇವತ್ತು ಹ್ಯಾಲೋವೀನ್ (Halloween) ತಾನೇ? ಕೆಲಸ ಮುಗಿಸಿ ಮನೆಗೆ ಹೊರಟಿದ್ದೆ. ಇಲ್ಲಿ ನಿಂತಿರುವ ಮಿಸ್ಟರ್ ಹೆಗೇಡ್ ಅಲ್ಲಲ್ಲ ಮಿಸ್ಟರ್ ಹೆಗಡೆ ನನ್ನ ಸಹೋದ್ಯೋಗಿ ಅಲ್ಲಿ ಸುಪರ್ ಮಾರ್ಕೆಟ್ಟಿನಲ್ಲಿ ಸಿಕ್ಕ. ಮನೆ ತನಕ ಡ್ರಾಪ್ ಕೊಟ್ಟೆ. ಹೋಗುವ ಮುಂಚೆ ಪಾಪದ ಹುಡುಗನ ಕಾಲೆಳೆದು, ಸ್ವಲ್ಪ ತಮಾಷೆ ಮಾಡಿ ಹೋಗೋಣ ಅಂದುಕೊಂಡೆ. ಅದೇ ಈ ಲಫಡಾಕ್ಕೆ ಕಾರಣ,' ಅಂತ ಹೇಳಿದ ಜೆನ್ನಿಫರ್ ಮತ್ತೆ ಮತ್ತೆ ನಕ್ಕಳು. ಉಳ್ಳಾಡಿ ಉಳ್ಳಾಡಿ ನಗಬೇಕು ಅಂತ ಬಹಳ ಅನ್ನಿಸುತ್ತಿರಬೇಕು ಆಕೆಗೆ. ಅಷ್ಟೇ ಉಳ್ಳಾಡಿ ನಗಲಿಲ್ಲ.

ಇದೆಲ್ಲ ತಮಾಷೆಯೇ? ಹ್ಯಾಂ? ಅಥವಾ ತಮಾಷೆ ಅಂತ ಹೇಳುವದೂ ಸಹ ದೆವ್ವದ ಒಂದು ಸ್ಕೀಮೇ? ಯಾರಿಗೆ ಗೊತ್ತು ದೆವ್ವ ಏನೇನು ಸ್ಕೀಮ್ ಹಾಕಿದೆಯೋ!?

'ಹ್ಯಾಲೋವೀನ್ ಸಂಜೆ ದೆವ್ವದ ವೇಷ ಹಾಕುವದು ಪದ್ಧತಿ. ಅದು ನಿನಗೂ ಗೊತ್ತು ಬಾಬ್. ಸಂಜೆ ಮನೆಗೆ ಹೋಗಿ ದೆವ್ವದ ವೇಷ ಹಾಕೋಣ ಅಂತ ಕಾಸ್ಟ್ಯೂಮ್ ಖರೀದಿ ಮಾಡಿದ್ದೆ. ಜಾಸ್ತಿ ಏನಿಲ್ಲ. ಒಂದು ನಿಲುವಂಗಿ ಮತ್ತು ಒಂದು ಮುಖವಾಡ. ಇಲ್ಲಿ ಕೂತಿದ್ದೆ. ಟೀ ಮಾಡಲು ಇವನು ಆಕಡೆ ಹೋಗಿದ್ದ. ಆವಾಗ ಸುಮ್ಮನೆ ಹಾಕಿಕೊಂಡೆ. ಭೀಕರ ರೂಪಕ್ಕೆ ಬದಲಾದೆ. ಈ ನಮ್ಮ ದೋಸ್ತ ಬೇಗನೆ ಕಂಡುಹಿಡಿಯಬಹದು ಅಂದುಕೊಂಡರೆ ತುಂಬಾ ಹೆದರಿಕೊಂಡುಬಿಟ್ಟ. ಹ್ಯಾಲೋವೀನ್ ಸಂಜೆ ಮನೆ ಮನೆ ಸುತ್ತಿ, ಚಾಕಲೇಟ್, ಮಿಠಾಯಿ ಸಂಗ್ರಹಿಸುವ ಚಿಕ್ಕ ಮಕ್ಕಳು ಕೂಡ ಆವಾಗಲೇ ಬಂದು ಬಾಗಿಲು ತಟ್ಟಿದರು. ಅವಕ್ಕೆ ಚಾಕಲೇಟ್, ಕ್ಯಾಂಡೀಸ್ ಕೊಟ್ಟು ಕಳಿಸಿದೆ. As usual ಅವೂ ದೆವ್ವದ ವೇಷ ಹಾಕಿಕೊಂಡು ಬಂದಿದ್ದವು. ಅದನ್ನು ನೋಡಿದ ಮೇಲಂತೂ ಇವನು ಫುಲ್ ಘಾಬರಿಯಾಗಿಬಿಟ್ಟ. ದೊಡ್ಡ ಸಂಕಷ್ಟದಲ್ಲಿದ್ದೇನೆ ಅಂತ ತಿಳಿದುಕೊಂಡು ೯೧೧ ಒತ್ತಿಬಿಟ್ಟ. ಈಗ ಮಾತ್ರ ಹೇಳುತ್ತಿದ್ದೆ, '೯೧೧ ಗೆ ಮತ್ತೊಮ್ಮೆ ಫೋನ್ ಮಾಡಿ ಹೇಳಪ್ಪಾ,' ಅಂತ. ಅಷ್ಟರಲ್ಲಿ ನೀನು ಬಂದೆ ಬಾಬ್. ಇಷ್ಟೇ ಆಗಿದ್ದು!' ಅಂತ ಫುಲ್ ವಿವರಣೆ ಕೊಟ್ಟ ಜೆನ್ನಿಫರ್ ಬಿದ್ದು ಬಿದ್ದು ನಕ್ಕಳು.

ಪೋಲೀಸ್ ನಾಯಕ ಬಾಬ್ ದೇಶಾವರಿ ನಗೆ ನಕ್ಕ. ಅವನ sense of humor ಬೇರೆನೇ ಇರಬೇಕು. ಮತ್ತೆ ಡ್ಯೂಟಿ ಮೇಲೆ ಇದ್ದ. ವಾಪಸ್ ಹೊರಟ. ಆದರೆ ಇಲ್ಲಿನ ಪೋಲೀಸರಂತೆ ಇವನೂ ಶುದ್ಧ ವೃತ್ತಿಪರ.

'ಮಿಸ್ಟರ್ ಹೆಗೇಡ್!' ಅಂತ ಗೌರವದಿಂದ ಮಾತಾಡಿಸಿದ.

ಅಯ್ಯೋ! ಅದು ಹೆಗಡೆ ಅಂತ ಮಾರಾಯ. ಕುಮಟಾ ತಾಲೂಕಿನ ಒಂದು ಹಳ್ಳಿ. ನಮ್ಮ ಮೂಲ ವಂಶಜರು ಅಲ್ಲಿಯವರು ಅಂತ ನಮಗೆಲ್ಲ ಹೆಗಡೆ ಅಂತ ಹೆಸರು. ಅದು ಬಿಟ್ಟು ಅದೇನು ಹೆಗೇಡ್ ಹೆಗೇಡ್ ಅಂತಿಯೋ!? ಅಂತ ಹೇಳೋಣ ಅನ್ನಿಸಿತು. ಪಾಪ ಅವನಾದರೂ ಏನು ಮಾಡಿಯಾನು? ನಮ್ಮ ಅಡ್ಡೆಸರಿನ ಸ್ಪೆಲ್ಲಿಂಗ್ Hegade. ಅದು ಇದ್ದಂತೆ ಹೇಳಿದ್ದಾನೆ.

ನಾನು ಮಾತಾಡಲಿಲ್ಲ. ದಂಗು ಬಡಿದಿತ್ತು. ಇನ್ನೂ ದೆವ್ವ ದರ್ಶನದ ಅಘಾತದಿಂದ ಹೊರಗೆ ಬಂದಿರಲಿಲ್ಲ. ಒಂದು ತರಹದ trans ಸ್ಥಿತಿಯಲ್ಲಿದ್ದೆ.

ಈಗ ಪೋಲೀಸಪ್ಪ ನಡೆದು ನನ್ನ ಕಡೆ ಬಂದ. ಮುಖದ ಮುಂದೆಯೇ ನಿಂತ. ಮುಖದ ಮುಂದೆ ಚಿಟಿಕೆ ಹೊಡೆದು 'ಹಲೋ!' ಅನ್ನಲಿಲ್ಲ ಅಷ್ಟೇ. ಮತ್ತೊಮ್ಮೆ  'ಮಿಸ್ಟರ್ ಹೆಗೇಡ್!' ಅಂದ.

'ಯಸ್ ಸರ್!' ಅಂತ ತೊದಲಿದೆ. ನಾವು ಕೇವಲ ಭಾರತದ ಯಮಕಿಂಕರರಂತಹ ಪೋಲೀಸರನ್ನು ಮಾತ್ರ ನೋಡಿದವರು. ಬರೇ ನೋಡಿದ್ದು ಅಷ್ಟೇ. ಅವರೊಂದಿಗೆ ಡೀಲ್ ಮಾಡಿಲ್ಲ. ಯಾವಾಗಲೋ ಒಮ್ಮೆ ತಡೆದು ನಿಲ್ಲಿಸಿದಾಗ ಲೈಸೆನ್ಸ್ ತೋರಿಸಿ, ಅದಕ್ಕಿಂತ ಹೆಚ್ಚು ಗೌರವ ತೋರಿಸಿ, ವಾಪಸ್ ಅವರ ಅಸಡ್ಡೆಯನ್ನು ಸ್ವೀಕರಿಸಿ ಬಂದಿದ್ದು ನೆನಪಾಯಿತು. ಇಲ್ಲಿಯ ಪೊಲೀಸರು ಹೇಗೋ ಏನೋ. ಅದಕ್ಕೇ 'ಸರ್!' ಅಂದುಬಿಟ್ಟೆ. ಬಾಬ್ ಎಂಬ ಅಮೇರಿಕನ್ ಪೋಲೀಸಪ್ಪ ನಕ್ಕ. ಇಲ್ಲೆಲ್ಲಾ ತದ್ವಿರುದ್ಧ. ಪೊಲೀಸರು ಜನರಿಗೆ ವಿಪರೀತ ಗೌರವ ಕೊಡುತ್ತಾರೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಜನ ಪೋಲೀಸರನ್ನು ಬೆಂಡೆತ್ತುತ್ತಾರೆ. ಕೇಸ್ ಜಡಿಯುತ್ತಾರೆ. ವಿಚಿತ್ರ ದೇಶ.

'ಸರ್! ಜೆನ್ನಿಫರ್ ಮೇಡಂ ಎಲ್ಲ ಹೇಳಿದರು. ಅವರು ಏನೋ ತಮಾಷೆ ಮಾಡಿದರಂತೆ. ಅದು ನಿಮಗೆ ಅರ್ಥವಾಗಿಲ್ಲ. ಇವತ್ತು ಹ್ಯಾಲೋವೀನ್. ದೆವ್ವಗಳ ವೇಷ ಹಾಕಿಕೊಂಡು ಸಂಭ್ರಮಿಸುವ ಹಬ್ಬ. ಹೊರದೇಶದವರಾದ ನಿಮಗೆ ಗೊತ್ತಿರಲಿಕ್ಕಿಲ್ಲ. ಅದಕ್ಕೇ ಗಾಬರಿಯಾಗಿದ್ದೀರಿ. ಈಗ ನಿಮಗೆ ಎಲ್ಲ ಅರ್ಥವಾಗಿರಬಹುದು ಅಂತ ಭಾವಿಸುತ್ತೇನೆ. ೯೧೧ ಗೆ ಫೋನ್ ಬಂದಿದ್ದು ನಿಮ್ಮ ಇದೇ ಮನೆಯಿಂದ. ನಿಮ್ಮ ಹೆಸರಲ್ಲೇ ಫೋನ್ ಇದೆ. ಮನೆಯಲ್ಲಿ ಇರುವವರು ನೀವೊಬ್ಬರೇ ಅಂತ ಕೂಡ ದಾಖಲೆ ಇದೆ. ಹಾಗಾಗಿ ನೀವು ಎಲ್ಲ ಸರಿಯಿದೆ ಅಂತ ಹೇಳಿದರೆ ನಾವು ಕೇಸ್ ಕ್ಲೋಸ್ ಮಾಡಿಕೊಂಡು ಹೋಗಬಹುದು. ಇಲ್ಲಿ ಒಂದು ಸಹಿ ಮಾಡಿ. ಏನಾದರೂ ಶಂಕೆ, ಸಂಶಯ ಇದ್ದರೆ ಹೇಳಿ ಸರ್. ನಿಮಗೆ ಫುಲ್ ಸುರಕ್ಷೆ, ಸಮಾಧಾನ ಸಿಗಬೇಕು. ಅದೇ ನಮ್ಮ ಪೋಲೀಸ್ ತಂಡದ ಗುರಿ!' ಅಂದುಬಿಟ್ಟ ಬಾಬ್.

ಸಹಿ ಹಾಕಿಬಿಡಲೇ? ಜೆನ್ನಿಫರ್ ಏನೋ ವಿವರಣೆ ಕೊಟ್ಟಿದ್ದಾಳೆ. ಹ್ಯಾಲೋವೀನ್ ಬಗ್ಗೆ ಏನೋ ಅಲ್ಲಿಲ್ಲಿ ಅಷ್ಟಿಷ್ಟು ಓದಿದ್ದೆ. ವಿಚಿತ್ರ ಹಬ್ಬ ಅನ್ನಿಸಿತ್ತು. ಇದು ಮೊದಲನೇ ಸಲ ನೋಡಿದ್ದು. ಬಂದಿದ್ದೇ ಈಗ ನಾಲ್ಕು ತಿಂಗಳ ಹಿಂದೆ ಅಷ್ಟೇ. ಸಹಿ ಹಾಕಿಕೊಟ್ಟೆ ಅಂದರೆ ಮುಗಿಯಿತು. ಕೇಸ್ ಮುಚ್ಚಿ ಹೊರಡುತ್ತಾನೆ ಪೋಲೀಸ್. ಅವರು ಹೋದ ನಂತರ ಜೆನ್ನಿಫರ್ ಮತ್ತೆ ದೆವ್ವವಾಗಿಬಿಟ್ಟರೇ!? Then what to do? ಏನು ಮಾಡಲಿ ಈಗ? ಸಹಿ ಹಾಕಲೋ ಬೇಡವೋ? ದೊಡ್ಡ ಗೊಂದಲ.

ಜೆನ್ನಿಫರಳಿಗೆ ನನ್ನ ಗೊಂದಲ ಅರ್ಥವಾಯಿತು ಅಂತ ಕಾಣುತ್ತದೆ. ನಮ್ಮಂತಹ ಅದೆಷ್ಟು ಮಂದಿ ಹೊಸದಾಗಿ ಬಂದ fresh of the boat ಯಬಡರೊಂದಿಗೆ ಆಕೆ ಹೆಣಗಾಡಿದ್ದಾಳೋ ಏನೋ? ಎಷ್ಟು ಮಂದಿಯನ್ನು ಹೀಗೆಯೇ ಮಂಗ್ಯಾ ಮಾಡಿದ್ದಾಳೋ ಏನೋ!?

'ಯೋ, ಮಹೇಶ್! ನಾ ಜೆನ್ನಿಫರ್ ಮಾರಾಯಾ. ದೆವ್ವ ಅಲ್ಲ. ಇಲ್ಲಿ ನೋಡು.... ಇಲ್ಲಿ ನೋಡು.... ' ಅನ್ನುತ್ತ ಏನೋ ಕಾಗದ ತೆಗೆದು ತಂದಳು. 'ನೋಡು, ನೋಡು, ಈಗ ಸ್ವಲ್ಪ ಸಮಯದ ಹಿಂದೆ ಅದೇ ಸೂಪರ್ ಮಾರ್ಕೆಟ್ಟಿನಲ್ಲಿ ಈ ದೆವ್ವದ ಕಾಸ್ಟ್ಯೂಮ್, ಮುಖವಾಡ ಎಲ್ಲ ಖರೀದಿ ಮಾಡಿದ ರಸೀದಿ. ಸಂಜೆ ಮನೆಯಲ್ಲಿ ಹಾಕಲು ಬೇಕು ಅಂತ ಖರೀದಿ ಮಾಡಿದೆ. ಅಲ್ಲಿ ನೀನು ಕಂಡೆ. ನಿನ್ನ ಮನೆಗೆ ಬಂದೆವು. ಈಗ ಮಾತ್ರ ಹೊಸದಾಗಿ ನಮ್ಮ ದೇಶಕ್ಕೆ ಬಂದಿರುವೆ. ನಿನಗೆ ಹ್ಯಾಲೋವೀನ್ ಬಗ್ಗೆ ಪರಿಚಯ ಮಾಡಿಕೊಡೋಣ ಅಂತ ವಿಚಾರ ಬಂತು. ಅದಕ್ಕೇ ಒಂದು ಸಣ್ಣ ಟ್ರಿಕ್ ಮಾಡಿದೆ ಮಾರಾಯಾ,' ಅಂದವಳೇ ಬಿದ್ದೂ ಬಿದ್ದೂ ನಕ್ಕಳು. ಪೋಲಿಸ್ ಆಫೀಸರ್ ಬಾಬ್ ಕೂಡ ನಕ್ಕ. ಸುಮಾರು ಆರೂವರೆ ಅಡಿ ಎತ್ತರ, ನೂರೈವತ್ತು ಕೇಜಿಯ ಧಡಿಯ ಪೋಲೀಸ್. ನೆಲ ಅಲುಗಾಡಿತು.

ಜೆನ್ನಿಫರ್ ತೋರಿಸಿದ ರಸೀದಿ ಪಸೀದಿ ಎಲ್ಲ ನೋಡಿದ ಮೇಲೆ ಅನುಮಾನ ದೂರವಾಯಿತು. ಆದರೂ ಎಲ್ಲೋ ಒಂದು ಚೂರು ಅಳುಕು ಇತ್ತು. ಜೀವನ ಪೂರ್ತಿ ದೆವ್ವದ ಕಥೆ ಓದಿದರೆ ಮತ್ತೇನಾಗಬೇಕು?

'ಸರಿ. ಎಲ್ಲ ಓಕೆ,' ಅಂತ ಸಹಿ ಮಾಡಿಕೊಟ್ಟೆ. ಥ್ಯಾಂಕ್ಸ್ ಹೇಳಿದ ಪೋಲೀಸಪ್ಪ ಅವನ ತಂಡ ಕರೆದುಕೊಂಡು ಹೊರಟ. ಅವರ ಸಂಪ್ರದಾಯದಂತೆ ಜೆನ್ನಿಫರಳನ್ನು ಅಪ್ಪಿ, ಕೆನ್ನೆ ಮೇಲೊಂದು ಸೈಡ್ ಕಿಸ್ ಹೊಡೆದು, ಎಲ್ಲರಿಗೂ 'Have a great evening. Happy Halloween!' ಅಂದು ತನ್ನ ತಂಡದೊಂದಿಗೆ ವಾಪಸ್ ಹೋದ.

ಪೋಲಿಸ್ ಹೋದ ತಕ್ಷಣ ತಾಪಡ್ತೋಪ್ ಬಾಗಿಲು ಹಾಕಿಬಿಟ್ಟಳು ಜೆನ್ನಿಫರ್. ನಾನು ಘಾಬರಿಯಾದೆ. ಮುಚ್ಚಿದ ಬಾಗಿಲಿಗೆ ಬೆನ್ನು ಹಾಕಿ ನಿಂತ ಜೆನ್ನಿಫರ್ ಮಾತಾಡಲಿಲ್ಲ. ಮುಖ ಫುಲ್ ನಿರ್ಭಾವುಕ. ಜೆನ್ನಿಫರ್ ಮತ್ತೆ ದೆವ್ವವಾಗಿ ಬದಲಾಗುವವಳಿದ್ದಾಳೆಯೇ!? ಮತ್ತೆ ೯೧೧ ಒತ್ತಲೇ? ಎಲ್ಲಿಂದ ಒತ್ತಲಿ? 'ಸಹಿ ಮಾಡು,' ಅಂತ ಪೋಲಿಸ್ ಅಂದಾಗ ಫೋನ್ ಎಸೆದೆ. ಅದು ಹೋಗಿ ರಾಕಿಂಗ್ ಚೇರ್ ಮೇಲೆ ಕೂತಿದೆ. ಜೆನ್ನಿಫರ್ ಕಡೆ ನೋಡಿದೆ. ಹಾಗೇ ನಿಂತಿದ್ದಳು. ಮಾತಿಲ್ಲ, ಕತೆಯಿಲ್ಲ. ಮತ್ತೆ ದೆವ್ವವಾಗಲು ಎಷ್ಟೊತ್ತು ಬೇಕು ಈಕೆಗೆ?

ಘೊಳ್! ಅಂತ ನಕ್ಕಳು ಜೆನ್ನಿಫರ್. ಅವಳ ಸಹಜ, ತುಂಟ, ತುಂಬು ನಗೆ.

'ಥೋ ಮಾರಾಯಾ! ಟೆನ್ಶನ್ ತೊಗೋಬೇಡ. ನಿನ್ನ ತಲೆಯಲ್ಲಿ ಏನು ಓಡುತ್ತಿದೆ ಅಂತ ಊಹಿಸಬಲ್ಲೆ. 'ಮತ್ತೆ ಎಲ್ಲಿಯಾದರೂ ಈ ಜೆನ್ನಿಫರ್ ದೆವ್ವವಾಗಿಬಿಡುವಳೇ?!' ಅಂತ ತಾನೇ ನಿನ್ನ ಆತಂಕ? ಇಲ್ಲ ಮಾರಾಯಾ. ಮಜಾಕ್ ಎಲ್ಲ ಮುಗಿಯಿತು. ನಾ ಹೊರಟೆ ಇನ್ನು,' ಅಂತ ನಗುತ್ತ ಎದ್ದು ಬಂದಳು. ತನ್ನ ದೆವ್ವದ ಕಾಸ್ಟ್ಯೂಮ್ ಮುಖವಾಡ ಎಲ್ಲ ಜೋಡಿಸಿ ಚೀಲದಲ್ಲಿ ತುಂಬಿಕೊಂಡು ಹೊರಟಳು. ಆಗ ಒಂದು ವಿಷಯ ನೆನಪಾಯಿತು. ಚಹಾ ಮಾಡಿದ್ದೆ. ಆದರೆ ಚಹಾ ಕೊಡುವ ಮೊದಲೇ ದೆವ್ವದ ದರ್ಶನವಾಗಿ ಚಹಾ ಸಮಾರಾಧನೆ ನಿಂತುಹೋಗಿತ್ತು.

'ಜೆನ್ನಿಫರ್, ಚಹಾ? ಮತ್ತೊಮ್ಮೆ ಮಾಡಿಬಿಡುತ್ತೇನೆ. ಜಸ್ಟ್ ಎರಡು ನಿಮಿಷ ಸಾಕು. ಪ್ಲೀಸ್. ಕೂತ್ಗೋ,' ಅಂದೆ.

'ಥ್ಯಾಂಕ್ಸ್. ಚಹಾ ಬೇಡ. ಮತ್ತೊಮ್ಮೆ ಬರ್ತೀನಿ. ಆಗಲೇ ಲೇಟ್ ಆಗಿದೆ. ಮನೆಯಲ್ಲಿ ನನ್ನ ಗಂಡ ಮೈಕ್ ಬೇರೆ ಇಲ್ಲ. ಹ್ಯಾಲೋವೀನ್ ಹಬ್ಬದ ಅಂಗವಾಗಿ trick or treat ಅಂದರೆ ಚಾಕಲೇಟ್, ಕ್ಯಾಂಡಿ ಕೇಳಲು ಗಲ್ಲಿಯ ಚಿಕ್ಕ ಮಕ್ಕಳು ಬರುತ್ತವೆ. ಹಾಗಾಗಿ ನಾ ಹೊರಟೆ,' ಅಂದಳು.

ಅರೇ! ಅಂಗಡಿಯಿಂದ ಸಾಮಾನು ತಂದುಕೊಡಲು ಸಹಾಯ ಮಾಡಿದ್ದಾಳೆ. ಖತರ್ನಾಕ್ ಮಜಾಕ್ ಮಾಡಿ ಹ್ಯಾಲೋವೀನ್ ಹಬ್ಬದ ಪರಿಚಯ ಮಾಡಿಕೊಟ್ಟಿದ್ದಾಳೆ. ಅದೂ ಎಂತಹ ಪರಿಚಯ ಅಂತೀರಿ? ಜನ್ಮದಲ್ಲಿ ಮರೆಯಲಿಕ್ಕೆ ಸಾಧ್ಯವಿಲ್ಲ. ಅಂತವಳಿಗೆ ಒಂದು ಕಪ್ ಚಹಾ ಕೂಡ ಕೊಟ್ಟು ಕಳಿಸಲಿಲ್ಲ ಅಂದರೆ ಹೇಗೆ? ಅತಿಥಿ ದೆವ್ವೋ ಭವ! ಅತಿಥಿಯಾಗಿ ಬಂದು ದೆವ್ವವಾಗಿ ಈಗ ಮತ್ತೆ ದೇವತೆಯಾಗಿದ್ದಾಳೆ ಜೆನ್ನಿಫರ್.

'ಏ, ಒಂದು ಕಪ್ ಚಹಾ ಅಷ್ಟೇ, ಜೆನ್ನಿಫರ್. ಪ್ಲೀಸ್. ಎರಡೇ ನಿಮಿಷ,' ಅಂದು ಅವಳ ಉತ್ತರಕ್ಕೂ ಕಾಯದೇ ಅಡಿಗೆಮನೆ ಹೊಕ್ಕೆ. ಜೆನ್ನಿಫರ್ ಹೋಗಿ ಮತ್ತೆ ರಾಕಿಂಗ್ ಚೇರ್ ಮೇಲೆ ಕೂತಳು ಅಂತ ಕಾಣುತ್ತದೆ. ಟೀವಿ ಆನ್ ಅದ ಶಬ್ದ ಕೇಳಿತು.

ಎರಡೇ ನಿಮಿಷದಲ್ಲಿ ಫ್ರೆಶ್ ಮಸಾಲಾ ಚಹಾ ರೆಡಿ. ಹಳೆ ಚಹಾವನ್ನು ಸಿಂಕಲ್ಲಿ ಚೆಲ್ಲಿ, ಹೊಸ ಚಹಾ ತುಂಬಿಸಿಕೊಂಡು ಮತ್ತೆ ಬಂದೆ. ಹಳದಿರಾಮನ ಚೂಡಾ ಅಂತೂ ಇತ್ತು.

'ಜೆನ್ನಿಫರ್, ಚಹಾ ರೆಡಿ!' ಅನ್ನುತ್ತ ಟ್ರೇ ಹಿಡಿದುಕೊಂಡು ಜೆನ್ನಿಫರ್ ಕುಳಿತಿದ್ದ ರಾಕಿಂಗ್ ಚೇರ್ ಕಡೆ ಬಂದೆ. ಜೆನ್ನಿಫರ್ ತಲೆ ತಿರುಗಿಸಿದಳು. ಮತ್ತೊಮ್ಮೆ ಭೀಕರ ಚೀತ್ಕಾರ ಆಟೋಮ್ಯಾಟಿಕ್ ಆಗಿ ಹೊರಬಿತ್ತು. ಜೆನ್ನಿಫರ್ ಮತ್ತೊಮ್ಮೆ ದೆವ್ವವಾಗಿ ಬದಲಾಗಿಬಿಟ್ಟಿದ್ದಳು! ಈ ಸಲ ಬೇರೆಯೇ ಮುಖವಾಡ. ನಿಲುವಂಗಿ ಇರಲಿಲ್ಲ ಅಷ್ಟೇ. ಮೈ ಗಾಡ್! ಏನಾಗುತ್ತಿದೆ ಇಲ್ಲಿ?

ಮುಂದಿನ ಕ್ಷಣದಲ್ಲಿ ಆ ದೆವ್ವದ ಮುಖವಾಡ ಕಿತ್ತು ಬಂತು. ಹಿಂದೆಯೇ ಒರಿಜಿನಲ್ ಜೆನ್ನಿಫರಳ ಘೊಳ್ ಅನ್ನುವ ನಗೆ.

'ಏನಿದು ಜೆನ್ನಿಫರ್!? ನನಗೆ ಒಮ್ಮೆ ಹಾರ್ಟ್ ಅಟ್ಯಾಕ್ ಆಗಿಬಿಟ್ಟಿತ್ತು. ಸಿಕ್ಕಾಪಟ್ಟೆ ಖರಾಬಾಗಿದೆ!' ಅಂದೆ. ಪುಣ್ಯಕ್ಕೆ ಬೇಗನೆ ಮುಖವಾಡ ತೆಗೆದಿದ್ದಳು. ಇಲ್ಲವಾದರೆ ಚಹಾ ಕೆಳಗೆ ಬಿದ್ದು ಹರೋಹರವಾಗಿಬಿಡುತ್ತಿತ್ತು.

'ಎರಡು ದೆವ್ವದ ಮುಖವಾಡ ಕೊಂಡಿದ್ದೆ. ರಸೀದಿ ಕೊಟ್ಟಿದ್ದೆ. ನೋಡಲಿಲ್ಲವೇ ನೀನು? ನೀನು ನೋಡಿರಬಹುದು, ಹೇಗೂ ನಿನಗೆ ಗೊತ್ತಾಗಿರಬಹುದು, ಈ ಸಾರೆ ಹೆದರಲಿಕ್ಕಿಲ್ಲ ಅಂತ ಭಾವಿಸಿ ಮತ್ತೊಂದು ಮುಖವಾಡವನ್ನೂ ಟ್ರೈ ಮಾಡಿದೆ. ಮತ್ತೆ ಹೆದರಿಬಿಟ್ಟೆಯಲ್ಲ ಮಾರಾಯಾ? ಏನು ಸಿಕ್ಕಾಪಟ್ಟೆ ದೆವ್ವದ ಕಥೆ ಓದುತ್ತೀಯೋ ಹೇಗೆ? By the way, ಮಹೇಶ್, ಒಂದು ಮಾತು ಹೇಳು.... ' ಅಂದ ಜೆನ್ನಿಫರ್ ಚಹಾ ಹೀರಿದಳು. ಹಳದಿರಾಮನ ಚೂಡಾ ಪ್ಲೇಟ್ ಮುಂದೆ ಮಾಡಿದೆ. ಬೇಡವೆಂದಳು.

'ಏನು ಜೆನ್ನಿಫರ್?' ಅಂತ ಕೇಳಿದೆ.

'ಈ ಎರಡು ಮುಖವಾಡಗಳಲ್ಲಿ ಯಾವದು ಹೆಚ್ಚು ಭಯಾನಕವಾಗಿದೆ? ಯಾವದನ್ನು ಹಾಕಿಕೊಂಡರೆ ಜನರಿಗೆ ಹೆಚ್ಚು  ಭಯವಾಗಬಹುದು? ಹ್ಯಾಲೋವೀನ್ ದಿನ ಹೆಚ್ಚು ಭಯಾನಕವಾದಷ್ಟೂ ಜನರಿಗೆ ಖುಷಿ. ಗೊತ್ತೇ?' ಅಂದುಬಿಟ್ಟಳು.

ಶಿವನೇ ಶಂಭುಲಿಂಗ! ಹೆಚ್ಚು ಭಯಾನಕವಾದಷ್ಟೂ ಜನರಿಗೆ ಇಷ್ಟವಂತೆ. ಖುಷಿಯಂತೆ! ವಿಚಿತ್ರ ದೇಶ, ವಿಚಿತ್ರ ಜನ.

'ಜೆನ್ನಿಫರ್ ಒಂದು ಕೆಲಸ ಮಾಡು. ಒಂದು ಮುಖವಾಡ ಮುಂದೆ ಹಾಕಿಕೋ. ಮತ್ತೊಂದನ್ನ ಹಿಂದೆ ಹಾಕಿಕೋ. ಸಿಕ್ಕಾಪಟ್ಟೆ ಖರಾಬಾಗಿರುತ್ತದೆ. ದೆವ್ವದ ಕಥೆಗಳಲ್ಲಿ ಬರುತ್ತದೆ ನೋಡು. ದೆವ್ವಗಳ ಪಾದಗಳು ಉಲ್ಟಾ ಇರುತ್ತವೆ. ಮುಖ ಹಿಂದೆ ಮುಂದೆ ಆಗಿರುತ್ತದೆ ಅಂತೆಲ್ಲ. ಹಾಗೆ,' ಅಂತ ಏನೋ ಒಂದು ಉದ್ರಿ ಉಪದೇಶ ಮಾಡಿದೆ.

'ಎಕ್ಸಲೆಂಟ್ ಐಡಿಯಾ! ಟ್ರೈ ಮಾಡಿ ನೋಡಬಹುದು!' ಅನ್ನುತ್ತ ಜೆನ್ನಿಫರ್ ಎದ್ದಳು. ಚಹಾ ಮುಗಿದಿತ್ತು. ಕಪ್ ಇಸಿದುಕೊಂಡೆ.

'ಹೇ, ಮಹೇಶ್, ಮುಂದಿನ ಶನಿವಾರ ವಾರ ಫ್ರೀ ಇಟ್ಟುಕೋ. ನನ್ನ ಗಂಡ ಮೈಕನ ಬರ್ತ್ ಡೇ. ಸಂಜೆ ನಮ್ಮ ಮನೆಗೆ ಬಾ. ಇನ್ನೂ ನಾಲ್ಕಾರು ಜನರನ್ನು ಕರೆದಿದ್ದೇವೆ. ಪ್ಯೂರ್ ಇಂಡಿಯನ್ ಊಟ ತರಿಸುತ್ತೇವೆ. ಗೊತ್ತಲ್ಲ ನಿನಗೆ ನಮಗೆ ಇಂಡಿಯನ್ ಫುಡ್ ಅಂದರೆ ಎಷ್ಟು ಇಷ್ಟ ಅಂತ? ಒಂದೆರೆಡು ಬಾಲಿವುಡ್ ಸಿನೆಮಾ ಕೂಡ ಇರುತ್ತದೆ. It's gonna be an awesome Indian night. ಪ್ಲೀಸ್ ಬಾ,' ಅಂತ ಆಹ್ವಾನ ಕೊಟ್ಟ ಜೆನ್ನಿಫರ್ ಎದ್ದು ಹೊರಟಳು.

ಎಷ್ಟು ಒಳ್ಳೆಯವಳು ಈಕೆ! ಎಷ್ಟು ಒಳ್ಳೆಯವನು ಈಕೆಯ ಪತಿ ಮೈಕ್! ಎಲ್ಲಿಂದಲೋ ಬಂದು ಈ ವಿದೇಶದಲ್ಲಿ ಪಕ್ಕಾ ಪರದೇಶಿ ದರವೇಶಿಗಳಾಗಿರುವ ನಮ್ಮ ಮೇಲೆ ಅದೇನು ಮಮತೆ, ಪ್ರೀತಿ! ಎದೆ ತುಂಬಿ ಬಂತು. ಇವರೆಲ್ಲ ಯಾವ ಜನ್ಮದಲ್ಲಿ ಯಾವ ಬಂಧುಗಳಾಗಿದ್ದರೋ ಅಂತ ವಿಚಾರ ಮಾಡುತ್ತ ಹೃದಯ ತುಂಬಿ ಬಂತು.

'ಖಂಡಿತ ಜೆನ್ನಿಫರ್. ಬಂದೇ ಬರುತ್ತೇನೆ. Thank you very much!' ಅಂದೆ.

ಬಂಗಾರದ ಬಣ್ಣದ ತನ್ನ ಬಾಬ್ ಮಾಡಿದ ಕೂದಲನ್ನು ಸರಾಕ್ ಅಂತ ಸರಿಸಿದ ಜೆನ್ನಿಫರ್ ಹೊರಟಳು. ಗುಡ್ ಬೈ, ಗುಡ್ ನೈಟ್ ಎಲ್ಲ ಹೇಳಾಯಿತು. ಬಾಗಿಲು ಹಾಕಿಕೊಂಡು ಬಂದೆ.

'ಹುಸ್!' ಅಂತ ರಾಕಿಂಗ್ ಚೇರ್ ಮೇಲೆ ಕೂತೆ. ಎರಡು ಘಂಟೆಗಳಲ್ಲಿ ಏನೆಲ್ಲಾ ಆಗಿಹೋಯಿತು ಶಿವನೇ!

'ಧಡ್! ಧಡ್! ಧಡ್!' ಯಾರೋ ಬಾಗಿಲು ಬಡಿದರು.

ಎದ್ದು ಹೋಗಿ 'ಯಾರೂ?' ಅಂದೆ. ಬಾಗಿಲ ಕಿಂಡಿಯಲ್ಲಿ ಹಣಿಕಿ ನೋಡಿದೆ.

'trick or treat!' ಅಂತ ಮಕ್ಕಳ ಧ್ವನಿ ಕೇಳಿಸಿತು. ನೋಡಿದರೆ ಮತ್ತೆ ದೆವ್ವ ಸ್ವರೂಪಿ ಮಕ್ಕಳು. ಹ್ಯಾಲೋವೀನ್ ವೇಷ ಹಾಕಿಕೊಂಡು ಬಂದಿವೆ. ಪೀಡೆಗಳು!

ಬಾಗಿಲು ತೆಗೆದು ನಿಂತೆ. 'ಏನು?' ಅನ್ನುವಂತೆ ನೋಡಿದೆ.

'trick or treat???' ಅಂತ ಮತ್ತೆ ಉಲಿದವು. ಚಾಕಲೇಟ್, ಟಾಫಿ, ಕ್ಯಾಂಡಿ ಸಂಗ್ರಹಿಸಿದ್ದ ಬುಟ್ಟಿಯನ್ನು ಎದುರಿಗೆ ಹಿಡಿದವು. ಅದರಲ್ಲಿ ನಾನೂ ಕೂಡ ಕ್ಯಾಂಡಿ, ಚಾಕಲೇಟ್ ಹಾಕಬೇಕು ಅನ್ನುವ ಲುಕ್ ಕೊಟ್ಟವು.

ಅಯ್ಯೋ! ಎಲ್ಲಿಯ ಕ್ಯಾಂಡಿ ಹಾಕೋಣ? ಎಲ್ಲಿಯ ಚಾಕಲೇಟ್ ಹಾಕೋಣ? ನಮ್ಮ ಮನೆಯಲ್ಲಿ ಏನೂ ಇಲ್ಲ ಮಾರಾಯ. ಬೇಕಾದರೆ ಮಾಣಿಕ್ ಚಂದ ಗುಟ್ಕಾ ಚೀಟಿಯಿದೆ. ಬಾಬಾ ಜರ್ದಾ ಇದೆ. ಚಾಲಿ ಅಡಿಕೆಯಿದೆ. ಹಳದಿರಾಮನ ಚೂಡಾ ಇದೆ. ಅದ್ಯಾವದೂ ಈ ಮಕ್ಕಳಿಗೆ ಉಪಯೋಗವಿಲ್ಲ.

ಆ ಮಕ್ಕಳು ನಾನು ಏನು ಮಾಡಲಿದ್ದೇನೆ? ಯಾವ ಚಾಕಲೇಟ್, ಕ್ಯಾಂಡಿ ಕೊಡಲಿದ್ದೇನೆ? ಅಂತ ನೋಡುತ್ತಾ ನಿಂತಿದ್ದವು. ಆಗ ನಾನು ಅನಾಹುತ ಕೆಲಸವೊಂದನ್ನು ಮಾಡಿಬಿಟ್ಟೆ.

ದೆವ್ವದ ಮುಖವಾಡ, ವೇಷ ಇಲ್ಲದಿದ್ದರೇನಾಯಿತು? ದೆವ್ವಕ್ಕಿಂತ ಖರಾಬ್ ಕೆಲಸ ಮಾಡಿಬಿಟ್ಟೆ.

ಗಹಗಹಿಸಿ ನಕ್ಕೆ. ದೆವ್ವದ ಹಾಗೆ ನಕ್ಕೆ. ಇದು ಹ್ಯಾಲೋವೀನ್ ದೆವ್ವದ ನಗೆ ಅಂತ ಆ ಮಕ್ಕಳು ತಿಳಿದುಕೊಂಡು ತಾವೂ ನಕ್ಕರು. ಮುಂದಿನದ್ದನ್ನು ಮಾತ್ರ ಅವರು ಊಹಿಸಿಯೇ ಇರಲಿಲ್ಲ.

ಆ ಇಬ್ಬರು ಮಕ್ಕಳ ಚಾಕಲೇಟ್ ಬುಟ್ಟಿಗೇ ಕೈಹಾಕಿಬಿಟ್ಟೆ. ಆಗ ಮಕ್ಕಳು ಬೆದರಿದವು. ಇಬ್ಬರ ಬುಟ್ಟಿಯಿಂದಲೂ ಒಂದೊಂದು ಮುಷ್ಠಿ ಚಾಕಲೇಟ್, ಕ್ಯಾಂಡಿಗಳನ್ನು ಗೆಬರಿಕೊಂಡುಬಿಟ್ಟೆ. ಮತ್ತೆ ಅಟ್ಟಹಾಸ ಮಾಡಿದೆ.

ಈಗ ಮಕ್ಕಳು ನಿಜವಾಗಿ ಹೆದರಿದವು. 'ಇದ್ಯಾವದೋ ವಿಚಿತ್ರ ಪ್ರಾಣಿ. ನಮಗೆ ಚಾಕಲೇಟ್, ಕ್ಯಾಂಡಿ ಕೊಡುವ ಬದಲಾಗಿ ನಮ್ಮಿಂದಲೇ ಸುಲಿಗೆ ಮಾಡುತ್ತಿದೆ. ಇದೇ ನಿಜವಾದ ದೆವ್ವವಿರಬೇಕು!' ಅಂತ ವಿಚಾರ ಮಾಡಿರಬೇಕು. ಬೆಚ್ಚಿ ಬಿದ್ದಿರಬೇಕು.

'ಹೋ! ಹೋ! Run!!' ಅಂತ ಘಾಬರಿ ಬಿದ್ದು ಕೂಗುತ್ತ ಅಲ್ಲಿಂದ ಓಡಿದವು ಆ ಚಿಕ್ಕ ಪೀಡೆಗಳು. ಜೀವನ ಪೂರ್ತಿ ಈ ಹ್ಯಾಲೋವೀನ್ ಮರೆಯುವದಿಲ್ಲ ಅವು. ಅಂತಹ ಟ್ರೀಟ್ಮೆಂಟ್ ಕೊಟ್ಟು ಕಳಿಸಿದ್ದೆ. ಹ್ಯಾಲೋವೀನ್ ದಿನ ಮಕ್ಕಳ ಬುಟ್ಟಿಯಿಂದ ಕ್ಯಾಂಡಿ ಎಬ್ಬಿಸಿದರೆ ಮತ್ತೇನು? ದೆವ್ವದಾಟವೇ ಇರಬೇಕು ತಾನೇ?

ಬಾಗಿಲು ಹಾಕಿಕೊಂಡು ಬಂದು ಕೂತೆ. ರಾಕಿಂಗ್ ಚೇರ್ ಮೇಲೆ ಕೂತು ಹಾಯಾಗಿ ರಾಕಿಂಗ್ ಮಾಡುತ್ತ ಆಚೀಚೆ ಕೈಯಾಡಿಸಿದೆ. ಕೈಗೆ ಏನೋ ಸಿಕ್ಕಿತು. ಎತ್ತಿಕೊಂಡು ನೋಡಿದರೆ ಮತ್ತೊಂದು ದೆವ್ವದ ಮುಖವಾಡ! ಹಾಂ! ಈ ದೆವ್ವದ ಮುಖವಾಡ ಇಲ್ಲಿ ಹೇಗೆ ಬಂತು? ಮತ್ತೆ ಇದು ಬೇರೆಯೇ ಮುಖವಾಡ. ಜೆನ್ನಿಫರ್ ಹಾಕಿದ್ದ ಎರಡು ಮುಖವಾಡಗಳಿಗಿಂತ ಭಿನ್ನವಾಗಿದೆ. ಮತ್ತೂ ಖರಾಬಾಗಿದೆ! ಕೈಯಲ್ಲಿ ಹಾವು ಹಿಡಿದವನಂತೆ ಆಕಡೆ ಬಿಸಾಡಿದೆ. ಏನೋ ಒಂದು ಕಾಗದ ಕೆಳಗೆ ಬಿತ್ತು. ಆಶ್ಚರ್ಯವೆನಿಸಿತು.

ನೋಡಿದರೆ ಒಂದು ಗ್ರೀಟಿಂಗ್ ಕಾರ್ಡ್. ಹ್ಯಾಲೋವೀನ್ ಗ್ರೀಟಿಂಗ್ ಕಾರ್ಡ್. ಒಳಗಿನ ಬರವಣಿಗೆ ನೋಡಿ ಹೃದಯ ತುಂಬಿ ಬಂತು.

'ಡಿಯರ್ ಮಹೇಶ್,

ಹ್ಯಾಪಿ ಹ್ಯಾಲೋವೀನ್!

ಈ ಮುಖವಾಡ ನಿನಗೆ ಅಂತ ಕೊಂಡುಕೊಂಡೆ. ಇಷ್ಟವಾಯಿತೇ?

ಹಾಕಿಕೊಂಡು ಸಕತ್ ಎಂಜಾಯ್ ಮಾಡು.

ನಿನ್ನ ಪ್ರೀತಿಯ ಸ್ನೇಹಿತೆ,

-- ಜೆನ್ನಿಫರ್'

ಈ ಜೆನ್ನಿಫರ್ ಎಷ್ಟು ಒಳ್ಳೆಯವಳು! ತಾನು ಸೂಪರ್ ಮಾರ್ಕೆಟ್ಟಿನಲ್ಲಿ ಹ್ಯಾಲೋವೀನ್ ಮುಖವಾಡ, ಕಾಸ್ಟ್ಯೂಮ್ ಎಲ್ಲ ಕೊಂಡಾಗ ನನ್ನ ಸಲುವಾಗಿಯೂ ಒಂದು ಮುಖವಾಡ ಕೊಂಡಿದ್ದಾಳೆ. ಅಷ್ಟೇ ಅಲ್ಲ ಒಂದು ಹ್ಯಾಲೋವೀನ್ ಗ್ರೀಟಿಂಗ್ ಕಾರ್ಡ್ ಕೂಡ ಕೊಂಡಿದ್ದಾಳೆ. ಯಾವಾಗ ಅದರ ಮೇಲೆ ಅಷ್ಟು ಆತ್ಮೀಯವಾಗಿ ಬರೆದಳೋ ಗೊತ್ತಿಲ್ಲ. It is so nice of you, Jennifer. Thank you.

ಮುಖವಾಡ ಹಾಕಿಕೊಂಡು ಕನ್ನಡಿಯಲ್ಲಿ ನೋಡಿಕೊಂಡೆ. ಚೀತ್ಕಾರವೊಂದು ಹುಟ್ಟಿ ಅಲ್ಲೇ ಶಮನವಾಯಿತು. ಕಾಣುತ್ತಿರುವದು ನನ್ನದೇ ಮುಖ ಅಂತ ನೆನಪಾಯಿತು. ಇಲ್ಲವೆಂದರೆ ಆ ಮುಖವಾಡ ಅಷ್ಟು ಖರಾಬಾಗಿತ್ತು.

ಜೆನ್ನಿಫರ್ ನನಗೆಂದು ತಂದು ಕೊಟ್ಟಿದ್ದ ಹ್ಯಾಲೋವೀನ್ ಮುಖವಾಡ!


ಹ್ಯಾಲೋವೀನ್ ಹಬ್ಬಕ್ಕೆ ಮುಖವಾಡವೂ ಸಿಕ್ಕಿತು. ಇನ್ನು ಯಾರಾದರೂ ಚಿಳ್ಳೆ ಪಿಳ್ಳೆ ಬರಲಿ ನೋಡೋಣ. ಮುಖವಾಡ ಹಾಕಿ ಬರೋಬ್ಬರಿ ಹೆದರಿಸುತ್ತೇನೆ. ಕೊಡಲು ಚಾಕಲೇಟ್? ಅದು ಇಲ್ಲ. ನಾಸ್ತಿ.

'ಮುಖವಾಡ ಕೊಟ್ಟು ಹೋದ ಜೆನ್ನಿಫರ್ ಒಂದು ಚೀಲದಲ್ಲಿ ಒಂದಿಷ್ಟು ಚಾಕಲೇಟ್, ಕ್ಯಾಂಡಿ ಸಹಿತ ಕೊಟ್ಟು ಹೋಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು?' ಅಂತ ಯೋಚಿಸಿತು ಮನಸ್ಸು. ಲೋಭಿ ಮನಸ್ಸು.

ಆಗ ಮತ್ತೆ ಯಾರೋ ಬಾಗಿಲು ಬಡಿದರು. ಮತ್ತೆ ಅದೇ ರಾಗ. Trick or treat?

ಮತ್ತೆ ಆ ಮಕ್ಕಳ ಬುಟ್ಟಿಯಿಂದಲೇ ಚಾಕಲೇಟ್ ಹಾರಿಸಲು ರೆಡಿಯಾದೆ. ಈ ಬಾರಿ ಸ್ಪೆಷಲ್ ಎಫೆಕ್ಟ್ ಗೆ ಜೆನ್ನಿಫರ್ ಕೊಟ್ಟ ಮುಖವಾಡ ಕೂಡ ಇತ್ತು.

***
 
ಸಲಹೆ ಸೂಚನೆಗಳಿಗೆ ಸದಾ ಸ್ವಾಗತ. ಕಥೆಯಲ್ಲಿನ horror element ನ್ನು ಹೇಗೆ ಹೆಚ್ಚಿಸಬಹುದು? ಐಡಿಯಾಗಳು ಇದ್ದರೆ ತಿಳಿಸಿ. ಅಡ್ವಾನ್ಸ್ ಧನ್ಯವಾದ

***

ಹಿಂದೆ ಬರೆದಿದ್ದ ದೆವ್ವದ ಕಥೆ 'ಲಿಂಗವ್ವನ ದೆವ್ವ' ಓದಿ ಮೆಚ್ಚಿದ್ದ ನಮ್ಮ ಅಣ್ಣಾಜಿ ಅವರು, 'ಹ್ಯಾಲೋವೀನ್ ಹಬ್ಬಕ್ಕೆ ಸರಿಯಾಗಿ ಮತ್ತೊಂದು ದೆವ್ವದ ಕಥೆ ಬರೆಯಬೇಕು ನೋಡು!' ಅಂದಿದ್ದರು. ಒಂದು ವಿಷಯ ಕೊಟ್ಟು, ಈ ತಾರೀಕಿಗೆ ಸರಿಯಾಗಿ ಒಂದು ಲೇಖನ ತಯಾರು ಮಾಡಬೇಕು ಅಂತ ಖಡಕ್ ಕಂಡೀಶನ್ ಬಿತ್ತು ಅಂತಾದರೆ ನಮ್ಮ ಪೆನ್ನು ಮುಂದೆ ಓಡುವದೇ ಇಲ್ಲ. ಯಾವ ದೈವದ ಅಥವಾ ದೆವ್ವದ ಅನುಗ್ರಹವಾಯಿತೋ ಗೊತ್ತಿಲ್ಲ. ವೇಳೆಗೆ ಸರಿಯಾಗಿ ಒಂದು ದೆವ್ವದ ಕಥೆ ಮನಸ್ಸಿನಲ್ಲಿ ಮೂಡಿಬಂತು. ಬರೆದೆ. :)

***

ವಿ. ಸೂ: ಇದೊಂದು ಕಾಲ್ಪನಿಕ ಕಥೆ. ಅಮೇರಿಕಾಗೆ ಹೋದ ಹೊಸತಿನಲ್ಲಿ ಆದ ನನ್ನ ಕೆಲವು ಸ್ವಂತ ಅನುಭವಗಳನ್ನು ಕಥೆಗೆ ಹೊಂದುವಂತೆ ಬಳಸಿದ್ದೇನೆ. ದೆವ್ವ, ಗಿವ್ವ ಎಲ್ಲ ಕಲ್ಪನೆ ಮಾತ್ರ.

Saturday, October 24, 2015

ಸನ್ಯಾಸದಿಂದ ಸಂಸಾರದ ತನಕ...ಒಂದು ಅಪಚಾರ ಉಪಚಾರವಾದ ಕಥೆ

ತಪ್ಪೇ ಮಾಡದವರು ಯಾರವರೇ? ತಪ್ಪೇ ಮಾಡದವರು ಎಲ್ಲವರೇ?

ಬಹಳ ಹಿಂದೆ ಮಾಡಿದ್ದ ತಪ್ಪೊಂದು, ಅಪಚಾರವೊಂದು ಬಹು ದೊಡ್ಡ ಉಪಚಾರವಾಗಿ ಹೊರಹೊಮ್ಮಿದ್ದನ್ನು ಕೇಳಿದಾಗ, ನೋಡಿದಾಗ ಬಹಳ ಸಂತೋಷವಾಯಿತು. ಶುದ್ಧ ಧಾರವಾಡ ಆಡುಭಾಷೆಯಲ್ಲೊಂದು ಕಥೆ.

***

ಹೋದ ಸರೆ ಇಂಡಿಯಾಕ್ಕೆ ಹೋದವ ಸಿರ್ಸಿಗೆ ಹೋಗಿದ್ದೆ. ಸಿರ್ಸಿ ಹತ್ತಿರ ನಮ್ಮ ಅಜ್ಜಿಮನಿ ಅದ. ಸಿರ್ಸಿಯಿಂದ ಸ್ವಾಧಿ ಮಠದ ಕಡೆ ಹೋಗೋ ರೋಡಿನ್ಯಾಗ ಒಂದು ಐದು ಮೈಲು ದೂರದಾಗ ಅದ. ನಿಸರ್ಗದ ಮಡಿಲಾಗ ತಲೆಯಿಟ್ಟು ಮಲಗಿರುವ ಚಂದದ ಹಳ್ಳಿ.

ಮುಂಜಾನೆ ಲಗೂ ಧಾರವಾಡದಿಂದ ಸಿರ್ಸಿ ಬಸ್ ಹಿಡದೆ. ಏನು ಒಂದು ಮೂರು ತಾಸಿನ್ಯಾಗ ಅಂದ್ರ ಸಿರ್ಸಿ ಮುಟ್ಟಿಬಿಟ್ಟೆ. ಬಸ್ ಸ್ಟಾಂಡಿಗೆ ಬಂದು ಕರಕೊಂಡು ಹೋಗ್ತೇನಿ ಅಂತ ಮಾಮಾನ ಮಗ ಹೇಳಿದ್ದ. ಆದರೆ ಆ ಆಸಾಮಿ ಅಲ್ಲೆಲ್ಲೂ ಕಾಣಲಿಲ್ಲ. ಫೋನ್ ಹಚ್ಚಿ, 'ಎಲ್ಲಿದ್ದೀಪಾ ಹೀರೋ?' ಅಂದೆ. 'ಈಗ ಬಂದೆ. ಹುಲಿಯಪ್ಪನ ಕಟ್ಟೆ ದಾಟಿದೆ. ಬಂದೇಬಿಟ್ಟೆ,' ಅಂದ. 'ಇಂವಾ ಬರಲಿಕ್ಕೆ ಇನ್ನೂ ಒಂದು ಹತ್ತು ಹದಿನೈದು ನಿಮಿಷವಾದರೂ ಬೇಕು. ಏನು ಮಾಡಲಿ?' ಅಂತ ವಿಚಾರ ಮಾಡಿದೆ

ಸಿರ್ಸಿ ಊರ ನಡು ನಿಂತು 'ಏನು ಮಾಡಲಿ?' ಅಂತ ಯಾರರೆ ಕೇಳ್ತಾರೇನು? ಇಲ್ಲ. ಕೆಲಸ ಇರಲಿ ಬಿಡಲಿ. ಅದು ಬೇಕಾಗಿರಲಿ ಬ್ಯಾಡಾಗಿರಲಿ. ಒಟ್ಟಿನಾಗ ಒಂದು ಕವಳ ಹಾಕಿಬಿಡೋದು. ಕವಳ ಅಂದ್ರ ನಮ್ಮ ಸಿರ್ಸಿ ಭಾಷಾದಾಗ ಎಲಿಅಡಿಕಿ ಅಂತ. ನಾನೂ ಅದನ್ನೇ ಮಾಡಿದೆ. ಒಂದು ಜರ್ದಾ ೪೨೦ ಪಾನ್ ಆರ್ಡರ್ ಮಾಡಿದೆ. ಮಸ್ತಾಗಿ ಮಾಡಿಕೊಟ್ಟ. ಹಾಕ್ಕೊಂಡು ಒಂದೆರೆಡು ಪಿಚಕಾರಿ ಪಚಕ್ ಅಂತ ಹಾರಿಸಿ, ಅಲ್ಲೇ ಆಕಡೆ ಈಕಡೆ ನೋಡಿಕೋತ್ತ ನಿಂತಿದ್ದೆ. ಆವಾಗ ಆತು ನೋಡ್ರಿ ನನ್ನ ಮ್ಯಾಲೆ ಅಟ್ಯಾಕ್! ಫುಲ್ ಗ್ಯಾಂಗ್ ಅಟ್ಯಾಕ್!

ಯಾರೋ ಒಬ್ಬವ ಬಂದು ನನ್ನ ಮುಂದ ನಿಂತ. ಅವನ ಹಿಂದ ಒಬ್ಬಾಕಿ. ಅವನ ಹೆಂಡ್ತಿನೇ ಇರಬೇಕು. ಜೊತಿಗೆ ಮೂರು ಮಕ್ಕಳು. ಒಂದು ಹೆಣ್ಣು, ಎರಡು ಗಂಡು.

ನನ್ನ ಮತ್ತ ಮತ್ತ ನೋಡಿದ. ಪಿಕಿಪಿಕಿ ನೋಡಿದ. ಮ್ಯಾಲಿಂದ ಕೆಳಗಿನವರೆಗೆ ಸ್ಕ್ಯಾನಿಂಗ್ ಮಾಡಿದ. ಡೀಪ್ ಸ್ಕ್ಯಾನಿಂಗ್ ಮಾಡಿದ. 'ಇವ ಅವನೇ ಹೌದೋ ಅಲ್ಲವೋ?' ಅನ್ನುವ ತರಹ ಕಣ್ಣು ದೊಡ್ಡದು ಮಾಡಿ, ಸಣ್ಣದು ಮಾಡಿ ನೋಡೇ ನೋಡಿದ. ನನಗ ಸ್ವಲ್ಪ ಘಾಬರಿ ಆತು. ಹೊಸಾ ಊರಾಗ ಹೀಂಗ ಒಮ್ಮೆಲೇ ಒಂದು ಸಂಸಾರ ಬಂದು ಅಟ್ಯಾಕ್ ಮಾಡಿಬಿಟ್ಟರೆ ಹ್ಯಾಂಗ್ರೀ? ಹಾಂ?

'ಏ, ಯಾರೋ ನೀನು? ಏನು?' ಅಂತ ಮಾತಾಡೋಣ ಅಂತ ಬಾಯಿ ಬಿಟ್ಟೆ. ಕವಳ ಹಾಕಿದ್ದು ಮರ್ತೇ ಬಿಟ್ಟಿದ್ದೆ. ಕವಳದ ರಸ ಕಟಬಾಯಿಂದ ಇಳೀತು. ಇನ್ನೇನು ನನ್ನ ಶರ್ಟ್ ಮ್ಯಾಲೆ ಚಿತ್ತಾರ ಮೂಡಿಸಬೇಕು ಅನ್ನೋದ್ರಾಗ ಪಿಚಕ್ ಅಂತ ಒಂದು ಸಿಕ್ಸರ್ ಪಿಚಕಾರಿ ಹಾರಿಸಿದೆ. ಮುಂದೆ ನಿಂತವ ಜಿಗಿದು ಬಾಜೂಕ ಸರಿದ. ಅವನೂ ಕವಳದ ಕೇಸೇ ಇದ್ದ. ಹಾಂಗಾಗಿ ಅವಂಗ ರೂಢಿ ಇತ್ತು. ನಾ ಮಾತಾಡುವ ಪರಿಸ್ಥಿತಿ ಬರಲೇ ಇಲ್ಲ. ಮೊದಲು ಮಾನಸಿಕ ಅಟ್ಯಾಕ್ ಆಗಿತ್ತು. ಈಗ ದೇಹದ ಮೇಲೆ ಕೂಡ ಅಟ್ಯಾಕ್ ಆಗೇಬಿಡ್ತು.

'ಮಹೇಶಣ್ಣಾ! ಮಹೇಶಣ್ಣಾ!!' ಅಂದವನೇ ಆ ಆದ್ಮಿ ನನ್ನ ಕೈ ಹಿಡಿದುಕೊಂಡುಬಿಟ್ಟ.

ನಾ ಫುಲ್ ದಂಗಾಗಿಬಿಟ್ಟೆ. ಮತ್ತೇನ್ರೀ? ಯಾರೋ ಗುರುತಿಲ್ಲದ ಮನುಷ್ಯಾ ಒಮ್ಮೆಲೇ ಹಿಂಗ ಮಾಡಿದರೆ!? ಹಾಂ?

ಕೈಯಂತೂ ಹಿಡಕೊಂಡೇಬಿಟ್ಟಿದ್ದ. ಈಗ ನನ್ನ ಎರಡೂ ಕೈ ತೊಗೊಂಡು ಅವನ ಕಣ್ಣಿಗೆ ಒತ್ತಿಕೊಂಡ. ನನ್ನ ಕೈ ತೊಗೊಂಡು ಹೋಗಿ ಅವನ ಜೋಡಿ ಇದ್ದ ಹೆಂಗಸಿನ ಕಣ್ಣಿಗೂ ಒತ್ತಿಸಿಬಿಟ್ಟ. ಶೀ! ಒಂದು ನಮೂನಿ ಅಸಹ್ಯ ಫೀಲ್ ಆತು. ಮಕ್ಕಳಿಗೆ ನನ್ನ ಕಾಲಿಗೆ ಡೈವ್ ಹೊಡೆದು ನಮಸ್ಕಾರ ಮಾಡ್ರಿ ಅಂದ. ಮೂರೂ ಮಕ್ಕಳು ಅದೇ ರೀತಿ ಮಾಡಿದವು. ಅವು ನನ್ನ ಕಾಲಿಗೆ ಹೀಂಗ ಡೈವ್ ಹೊಡೆದವು ಅಂದ್ರ ಅವರು ಡೈವ್ ಹೊಡೆದ ಅಬ್ಬರಕ್ಕೆ ನನ್ನ ಬ್ಯಾಲೆನ್ಸ್ ತಪ್ಪಿ ನಾನು ಡೈವ್ ಹೊಡೆಯೋ ಹಾಂಗ ಆಗಿತ್ತು. ಪುಣ್ಯಕ್ಕೆ ಕೆಳಗೆ ಬೀಳಲಿಲ್ಲ.

ಸುಧಾರಿಸಿಕೊಂಡು ನೋಡಿದರೆ ಆ ಮನುಷ್ಯಾನ ಕಣ್ಣಾಗ ನೀರು. ಸಂತೋಷದ ಕಣ್ಣೀರು. ಮತ್ತ ಮತ್ತ ನನ್ನ ಕೈಗಳನ್ನು ಕಣ್ಣಿಗೆ ಒತ್ತಿಕೊಂಡ. ಅವನ ಕಣ್ಣೀರಿನಿಂದ ನನ್ನ ಕೈಯೆಲ್ಲಾ  ಒದ್ದಿ ಒದ್ದಿ.

'ಮಹೇಶಣ್ಣಾ, ಮಹೇಶಣ್ಣಾ, ನೀ ನನ್ನ ಭಾಗ್ಯದ ದೇವರು. ನೀನೇ ನನ್ನ ಭಾಗ್ಯದ ದೇವರು. ನಿನ್ನ ಉಪಕಾರ ಹ್ಯಾಂಗ ಮರೀಲಿ? ಅಣ್ಣಾ, ಅಣ್ಣಾ!' ಅನ್ಕೋತ್ತ ಕಾಲಿಗೆ ಬಿದ್ದುಬಿಟ್ಟ. ಅವನ ಜೋಡಿ ಇದ್ದ ಹೆಂಗಸೂ ಕಾಲಿಗೆ ಬಿದ್ದಳು. ಕೆಟ್ಟ embarrassing ಬಿಡ್ರಿ. ಅಸಹ್ಯ! ಗೊತ್ತಿಲ್ಲದ ಊರಿನ್ಯಾಗ ಯಾರ್ಯಾರೋ ಕೈ ಹಿಡಿದು ಕಣ್ಣಿಗೆ ಒತ್ತಿಕೊಳ್ಳೋದು, ಕಾಲಿಗೆ ಬೀಳೋದು! ಹಾಂ? What's this nonsense, I say!

ಈ ಮನುಷ್ಯಾ ಎಲ್ಲರೆ ಹುಚ್ಚ ಇರಬಹುದೇನೋ ಅಂತ ಅನ್ನಿಸ್ತು. ಆದ್ರ ಹುಚ್ಚರು ಅಕೇಲಾ ಇರ್ತಾರ. ಇಂವಾ ಪೂರ್ತಿ ಸಂಸಾರದ ಜೋಡಿ ಇದ್ದಾನ. ಎಲ್ಲರೆ ಪೂರ್ತಿ ಸಂಸಾರ ಹುಚ್ಚ ಅದೇನು ಮತ್ತ? ಅಂತ ಏನೇನೋ ವಿಚಾರ ಬಂತು.

'ಮಹೇಶಣ್ಣಾ!  ನಾನು, ನಾನು, ಎಸ್. ಎಸ್. ಭಟ್. ಗೊತ್ತಾಗಲಿಲ್ಲ?' ಅಂತ ಕೇಳಿಬಿಟ್ಟ.

ಆಂವಾ ಏನೋ ಎಸ್. ಎಸ್. ಭಟ್ ಅಂದಾ. ನಾನು ಮಾತ್ರ ನೋ ನೋ ಭಟ್ ಆಗೇ ಇದ್ದೆ. ಯಾರಿವಾ ಅಂತ ಒಟ್ಟೇ ತಲಿಗೆ ಹೊಳಿವಲ್ಲತು. Who is this S.S. Bhat?

'ನಾನು, ನಾನು, ಸಣ್ಣ ಸ್ವಾಮಿ. ನಿನ್ನ ಜೋಡಿ ಮಠದಾಗ ಇದ್ದೆ. ನೆನಪಾತೇನೋ ಮಹೇಶಣ್ಣಾ? ಸಣ್ಣ ಸ್ವಾಮಿ,' ಅಂತ ಕೇಳಿಬಿಟ್ಟ ನೋಡ್ರಿ. ಆವಾಗ ಮಾತ್ರ ದೊಡ್ಡ ಝಟಕಾ ಶಾಕ್ ಹೊಡೀತು ನನಗ.

ಇಂವಾ ನಮ್ಮ ಮಾಜಿ ಸಣ್ಣ ಸ್ವಾಮಿನೇ? ಮತ್ತ ಎಸ್. ಎಸ್. ಭಟ್ ಅಂತಾನ? ಏನು ಇದರ ಅರ್ಥ?

ನಾನು ಒಂದು ಡೀಪ್ ಫ್ಲಾಶ್ ಬ್ಯಾಕಿಗೆ ಹೋದೆ. ಇಪ್ಪತ್ತೇಳು ವರ್ಷದ ಹಿಂದಕ್ಕೆ ಹೋದೆ. ಸಿರ್ಸಿ ಬಸ್ಟಾಂಡಿನಲ್ಲಿ ಸಿಕ್ಕಿದ್ದ ಎಸ್. ಎಸ್. ಭಟ್ ಮಾತ್ರ ಕೈ ಹಿಡಿದುಕೊಂಡೇ ಇದ್ದ. ಅವನ ಕಣ್ಣಲ್ಲಿ ಆನಂದಭಾಷ್ಪ. ಅದು ನಿರಂತರ.

***

ಅದು ೧೯೮೮ ರ ಮಾತು. ಆಗ ಮಾತ್ರ ಮೆಟ್ರಿಕ್ ಮುಗಿಸಿದ್ದೆ. ನಾ ಗಳಿಸಿದ್ದ ಜಸ್ಟ್ ಥರ್ಡ್ ಕ್ಲಾಸ್ ಮಾರ್ಕ್ಸು, ಆಗಿನ ನನ್ನ ವೇಷ, ಭೂಷಣ, ಹಾವ ಭಾವ, ನಡವಳಿಕೆ, ಚಟಗಳು, ಇತ್ಯಾದಿ ನೋಡಿದ ನಮ್ಮ ಮನಿ ಮಂದಿ ವಿಚಾರ ಮಾಡಿದರು. 'ಇಂವಾ ಪೂರ್ತಿ ಕೆಟ್ಟು ಕೆರಾ ಹಿಡಿದು ಹೋಗ್ಯಾನ. ಪಿಯೂಸಿಗೆ ಹಾಕೋದು ಸುಮ್ಮನೇ ರೊಕ್ಕ ದಂಡ. ಇಲ್ಲೇ ಧಾರವಾಡದಾಗೇ ಇದ್ದರೆ ಇನ್ನೂ ಕೆಟ್ಟು, ಮಂದಿನೂ ಕೆಡಿಸಿ ಇಡ್ತಾನ. ಎಲ್ಲದರಕಿಂತ ಹೆಚ್ಚಾಗಿ ನಮ್ಮ ಜೀವಾ ತಿಂದು ತಿಂದು ತೇಗಿಬಿಡ್ತಾನ. ಹಾಂಗಾಗಿ ಈ ಉಡಾಳ, ಚಾಂಡಾಲ ಹುಡುಗನ್ನ ಬ್ಯಾರೆ ಎಲ್ಲರೆ ಇಡಬೇಕು,' ಅಂತ ವಿಚಾರ ಮಾಡಿದರು.

'ಎಲ್ಲಿಡಬೇಕು??' ಅಂತ ಮುಂದಿನ ಪ್ರಶ್ನೆ ಬಂತು ಮನಿ ಮಂದಿ ತಲ್ಯಾಗ.

'ಹ್ಯಾಂಗೂ ಇಂವಾ ಕಾಲೇಜಿಗೆ ಹೋಗಲಿಕ್ಕೆ ಉಪಯೋಗಿಲ್ಲ. ನೀವು ಜಗ್ಗೆ ರೊಕ್ಕಾ ಖರ್ಚು ಮಾಡಿ ಕಾಲೇಜಿಗೆ ಹಾಕಿದರೂ ಇಂವಾ ಏನೂ ಪಾಸ್ ಆಗೋದಿಲ್ಲಾ. ಬದಲಿಗೆ ಕಾಲೇಜ್ ಬಾಗಿಲಾ ಮುಚ್ಚಿಸೇ ಬರ್ತಾನ. ಹಾಂಗಾಗಿ ಯಾವದರೆ ಮಠದಾಗ ಇಟ್ಟು ಬರ್ರಿ ಇವನ್ನ. ಅಲ್ಲಿ ಸ್ವಾಮಿಗಳ ಸೇವಾ ಮಾಡಿಕೊಂಡು, ಏನೋ ಇವನ ನಸೀಬದಾಗ ಇದ್ದರೆ ಒಂದು ಚೂರು ವೇದಾ, ಮಂತ್ರಾ, ಅದು ಇದು ಕಲಿತು ಸುಧಾರಿಸಬಹುದು. ಮಠದಾಗ ಒಗೆದು ಬರ್ರಿ ನಿಮ್ಮ ಉಡಾಳ ಹೊನಗ್ಯಾ ಹುಡುಗನ್ನ,' ಅಂತ ಊರ ಮಂದಿ ಉದ್ರಿ ಉಪದೇಶ ಕೊಟ್ಟರು. ಇನ್ನೊಬ್ಬರ ಮಕ್ಕಳನ್ನ ಭಾವಿಗೆ ತಳ್ಳಲಿಕ್ಕೆ ಮಂದಿ ಹ್ಯಾಂಗ ತುದಿಗಾಲ ಮ್ಯಾಲೆ ನಿಂತಿರ್ತಾರ ನೋಡ್ರಿ.

ನನಗೇನು? ಮನಿನೂ ಒಂದೇ ಮಠಾನೂ ಒಂದೇ. ದಿವಸಕ್ಕೆ ನಾಲ್ಕು ಹೊತ್ತು ಪುಷ್ಕಳ ತಿಂಡಿ, ಊಟ ಸಿಗಬೇಕು. ಮ್ಯಾಲಿಂದ ನನ್ನ ಸಣ್ಣ ಪುಟ್ಟ ಚಟಗಳಿಗೆ ಸಣ್ಣ ಪ್ರಮಾಣದ ರೊಕ್ಕ ಇದ್ದರೆ ಸಾಕು. ಆ ರೊಕ್ಕಾ ನಾ ಹ್ಯಾಂಗರೆ ಮಾಡಿ ಜುಗಾಡ್ ಮಾಡಿಕೋತ್ತೇನಿ ಬಿಡ್ರೀ. 'ಚಟವೇ ಚಟುವಟಿಕೆಯ ಮೂಲವಯ್ಯಾ' ಅಂತ ನಮ್ಮ ನಂಬಿಕೆ. ಚಟ ಅಂದ್ರ ಹೆಚ್ಚು ಏನಿಲ್ಲಾ. ದಿನಕ್ಕ ಒಂದು ಹತ್ತು ಗುಟ್ಕಾ ಚೀಟಿ, ಊಟಾದ ಮ್ಯಾಲೆ ಒಂದು ಜರ್ದಾ ಪಾನ್, ಮತ್ತ ವಾರಕ್ಕೆ ನಾಲ್ಕಾರು ಸರೆ ಸಂಜಿ ಮುಂದ ನಮ್ಮ ವಿಜಯ್ ಮಲ್ಯಾ ಸಾಹೇಬರ ತೀರ್ಥ ಅಂದ್ರ ಬಿಯರ್. ಅದೂ ಒಂದು ನಾಲ್ಕೇ ಬಾಟಲಿ ಅಷ್ಟೇ. ಇಷ್ಟು ಬಿಟ್ಟು ಸಿಗರೇಟ್, ನಾನ್ವೆಜ್, ಡ್ರಗ್ಸ್, ಮೂಗಬಟ್ಟು ಇತ್ಯಾದಿ ಯಾವ ಚಟಾನೂ ಇಲ್ಲ ನೋಡ್ರಿ.

ನನ್ನ ಮಠದಾಗ ಬಿಡೋದು ಅಂತ ನಿರ್ಧಾರ ಆತು. ಅದರ ಪ್ರಕಾರ ನನ್ನ ತೊಗೊಂಡು ಹೋಗಿ ಮಠದಾಗ ಬಿಟ್ಟು ಬಂದರು. ನನಗೂ ಮನಿಯಾಗ ಇದ್ದು ಇದ್ದು ಸಾಕಾಗಿ ಹೋಗಿತ್ತು. ಪ್ರತಿ ದಿನ ಮನಿ ಮಂದಿ ಕಡೆ ಬೈಸಿಕೊಳ್ಳೋದು. ಅವರಿಗೆ ತಿರುಗಿ ಬೈಯೋದು. ಬರೇ ಜಗಳ. ಕಡೀಕ್ಕ ಅವರಿಗೇ ಸಾಕಾಗಿ, ಅವರು ನನಗ ಸೆಂಟಿಮೆಂಟಲ್ ಫಿಟ್ಟಿಂಗ್ ಇಟ್ಟು, ನನಗೇ ನನ್ನ ಬಗ್ಗೆ ಕೆಟ್ಟ ಅನಿಸುವಂತೆ ಮಾಡೋದು. ಇದೆಲ್ಲಾ ತಲಿಬ್ಯಾನಿ ಯಾವಂಗ ಬೇಕ್ರೀ? ಇದರಕಿಂತ ಮಠದಾಗ ಇರೋದು ಬೆಟರ್. ಮತ್ತ ಮಠದ ಊಟ ಮನಿ ಊಟಕ್ಕಿಂತ ರುಚಿ ಇರ್ತದ. ಮತ್ತ ದಿನಾ ಎರಡೂ ಹೊತ್ತೂ ಊಟಕ್ಕೆ ಏನರೆ ಸ್ವೀಟ್ ಮಾಡೇ ಮಾಡಿರ್ತಾರ. ಮತ್ತ ನಾನೂ ಒಂದು ಜನಿವಾರ ಹಾಕ್ಕೊಂಡು, ಮೈತುಂಬಾ ಭಸ್ಮಾ ಬಳಕೊಂಡು, ಈಗ ಇರುವ ಉದ್ದ ಕೂದಲಾನೇ ಪೋನಿಟೇಲ್ ಗತೆ ಕಟ್ಟಿಕೊಂಡು, ಅದೇ ಚಂಡ್ಕಿ ಅಂತ ಪೋಸ್ ಕೊಟ್ಟುಬಿಟ್ಟೆ ಅಂದ್ರ ನೋಡಿದ ಮಂದಿ, 'ಇದು ಯಾವದೋ ಭಯಂಕರ ಬ್ರಾಹ್ಮಣ ಬ್ರಹ್ಮಚಾರಿ ಇದ್ದಂಗ ಅದ. ಇದಕ್ಕೂ ಒಂದಿಷ್ಟು ದಕ್ಷಿಣಾ ಕೊಡಬೇಕು,' ಅಂದುಕೊಂಡು ನಮಗೂ ರೊಕ್ಕಾ ಕೊಡ್ತಾರ. ಅಂತ ನಮ್ಮ ಆಶಾ. ಹಾಂಗ ರೊಕ್ಕ ಬಂದ್ರ ಅದು ನಮ್ಮ ಚಟಕ್ಕ ಸಾಕು. ಇಲ್ಲಂದರೂ ನಮ್ಮ ಅಪ್ಪಾ ಕೊಡ್ತಾರ ಬಿಡ್ರಿ. ನಮ್ಮವ್ವನ ಕಣ್ಣು ತಪ್ಪಿಸಿ ನನ್ನ ಚಟದ maintenance ಮಾಡವರು ಇಬ್ಬರು. ಒಬ್ಬರು ನಮ್ಮ ಅಪ್ಪಾ. ಇನ್ನೊಬ್ಬವಾ ಅಂದ್ರ ನಮ್ಮ ಅಜ್ಜ. ಅವ್ವನ ಅಪ್ಪ. ಸಿರ್ಸಿ ಕಡೆ ಇರತಾನ. ಧಾರವಾಡ ಕಡೆ ಬಂದಾಗೊಮ್ಮೆ ಪ್ರೀತಿ ಮೊಮ್ಮಗ ಉರ್ಫ್ ನನ್ನ ಕೈಯಾಗ ಒಂದಿಷ್ಟು ರೊಕ್ಕಾ, ಸೂಪರ್ ಕ್ವಾಲಿಟಿ ಮನಿಯಾಗ ಬೆಳೆದ ಅಡಿಕಿ, ಒಂದೆರೆಡು ಜರ್ದಾ ಡಬ್ಬಿ ಕೊಟ್ಟೇ ಹೋಗ್ತಾನ. ಅವನೇ ದೊಡ್ಡ ಚಟ ಸಾರ್ವಭೌಮ. ನಾ ಅವನ ಮೊಮ್ಮಗ. ಕೇಳಬೇಕೇ ಇನ್ನು?

ಹೀಂಗ ವಿಚಾರ ಮಾಡಿ ನಾನೂ ಮಠಕ್ಕೆ ಹೋಗಿ ಇರಲಿಕ್ಕೆ ತಯಾರಾದೆ. ಸ್ವಾಮಿಗಳೂ ಪರ್ಮಿಷನ್ ಕೊಟ್ಟರು. ನಮ್ಮ ಅಜ್ಜಾ ಮಠದ ಸ್ವಾಮಿಗಳ ಕಡೆ ಭಾಳ ವಶೀಲಿ ಹಚ್ಚಿದ್ದ ಅಂತ ಕಾಣಿಸ್ತದ. ಅವನ ಮಾತು ಹೆಂಗ ತೆಗೆದು ಹಾಕಿಯಾರು ಸ್ವಾಮಿಗಳು? ಅವರನ್ನ ಸ್ವಾಮಿಗಳನ್ನಾಗಿ ಮಾಡಿದವನೇ ನಮ್ಮ ಅಜ್ಜಾ. ಹೆಚ್ಚು ಕಮ್ಮಿ ಮಾತಾಡಿದರೆ ಅವರ ಕಾವಿ ಬಿಚ್ಚಿ ಕೋವಿ ತೋರಿಸಿ ಓಡಸ್ತಾನ ನಮ್ಮ ಅಜ್ಜ. ಅಷ್ಟು ಜೋರ್ ಇದ್ದಾನ. ಕೋವಿ ಅಂತೂ ಇಟ್ಟೇ ಬಿಟ್ಟಾನ ಮನಿಯಾಗ. ಅದೂ ದೊಡ್ಡ ಕಾರ್ತೂಸ್ ಹಾಕ್ಕೊಂಡು ಆನೆ, ಹುಲಿ ಬೇಟೆಯಾಡೋ ಕೋವಿ.

ನನ್ನ ಮಠದಾಗ ತಂದು ಬಿಟ್ಟರು. ಮಠದಾಗ ಸೆಟಲ್ ಆದೆ. ಏ, ಮಠದಾಗ ಲೈಫ್ ಭಾಳ ಮಸ್ತಿತ್ತು ಬಿಡ್ರಿ. ಕೆಲಸ ಇಲ್ಲ ಬೊಗಸಿ ಇಲ್ಲ. ಮಸ್ತಾಗಿ ಊಟ ಕಟದು, ಬೇಕಾದಾಗ ಗಡದ್ದ ನಿದ್ದಿ ಹೊಡದು, ಅಲ್ಲೇ ಹತ್ತಿರ ಇದ್ದ ನದಿಯಾಗ ಮಸ್ತ ಈಜು ಹೊಡೆದು, ಸುತ್ತಮುತ್ತಲಿನ ಅಡವಿಯಾಗ ಅಲದಾಡಿಕೊಂಡು ಆರಾಮ ಇದ್ದೆ. ಮ್ಯಾಲಿಂದ ಯಾರದ್ದೂ ಕಿರಿಕಿರಿ ಪಿರಿಪಿರಿ ಇಲ್ಲ. ನಮ್ಮ ಅವ್ವನ nonstop ಕ್ಯಾಂ! ಕ್ಯಾಂ! ಅಂತ ಬೈಯೋದಂತೂ ಇಲ್ಲವೇ ಇಲ್ಲ. ಮಸ್ತಾಗಿತ್ತು ಲೈಫ್.

'ಏ, ಮಾಣಿ, ವೇದ ಪಾಠಶಾಲಾಕ್ಕ ಹೋಗಿ ಕೂಡೋ! ಒಂದು ನಾಲ್ಕು ಮಂತ್ರಾ ಕಲಿ!' ಅಂತ ಒಂದು ದಿನ ಸ್ವಾಮಿಗಳು ನನಗ ಜೋರ್ ಮಾಡಿದರು. ಹಾಂಗ ಜೋರ್ ಮಾಡಿದ ಮುಂದಿನ ವಾರನೇ ನಮ್ಮ ಅಜ್ಜ ಮಠಕ್ಕ ಬಂದಿದ್ದ. ಅಲ್ಲೇ ಹತ್ತಿರದ ಹಳ್ಯಾಗ ಇರ್ತಾನ. ಅವಂಗ ಕಂಪ್ಲೇಂಟ್ ಹೇಳಿದೆ. 'ನೋಡಜ್ಜಾ, ಸ್ವಾಮಿಗಳು ನನಗ ಜೋರ್ ಮಾಡ್ತಾರ. ಮಂತ್ರಾ ಗಿಂತ್ರಾ ಕಲಿ ಅಂತಾರ,' ಅಂತ ಹೇಳಿದೆ ನೋಡ್ರಿ ಅಷ್ಟೇ. ನಮ್ಮಜ್ಜ ಸ್ವಾಮಿಗಳಿಗೆ ಅದೇನು ಗಜ್ಜು ಕೊಟ್ಟು ಬಂದನೋ ಗೊತ್ತಿಲ್ಲ. ನಂತರ ನನ್ನ ಸುದ್ದಿಗೆ ಮಾತ್ರ ಯಾರೂ ಬರಲಿಲ್ಲ. ಮತ್ತ ಸಿರ್ಸಿ ಟೌನ್ ಅಲ್ಲೇ ಹತ್ತಿರ. ಭಾಳ ಅಂದ್ರ ಒಂದು ಐದಾರು ಕಿಲೋಮೀಟರ್. ಹಾಂಗಾಗಿ ನಮ್ಮ ಸಂಜೆ ವೇಳೆಯ 'ತೀರ್ಥಯಾತ್ರೆ'ಗೆ ಏನೂ ತೊಂದ್ರಿ ಇರಲಿಲ್ಲ. ಸಿರ್ಸಿ ಟೌನಿನ್ಯಾಗ ಬಾರಿನಾಗ ಕೂತು ಮಸ್ತ ಪಾರ್ಟಿ ಮಾಡಿ ರಾತ್ರಿ ಎಷ್ಟೇ ಹೊತ್ತಿಗೆ ಮಠಕ್ಕ ಬಂದರೂ ನಮ್ಮ ಸಲುವಾಗಿ ಒಂದು ದೊಡ್ಡ ಗಂಗಾಳದಾಗ ಊಟ ಅಂತೂ ರೆಡಿ ಇರ್ತಿತ್ತು. ಗೋಪಾಲಕೃಷ್ಣ ಹೆಗಡೆ ಅವರ ಮೊಮ್ಮಗ ಅಂದ್ರ ಸುಮ್ಮನೇ ಏನು? ನಮ್ಮ ಅಜ್ಜ ಎಲ್ಲಾರಿಗೂ ಹೇಳಿ, ಎಲ್ಲ ಬರೋಬ್ಬರಿ ವ್ಯವಸ್ಥಾ ಮಾಡಿ ಇಟ್ಟಿದ್ದ. ಅಷ್ಟು ಪ್ರೀತಿ ನನ್ನ ಮ್ಯಾಲೆ.

ಅದೇ ವೇಳ್ಯಾದಾಗ ಆ ಮಠದಾಗ ಒಬ್ಬ ಜೂನಿಯರ್ ಸ್ವಾಮಿ ಇದ್ದ. ನಮ್ಮ ವಯಸ್ಸಿನವನೇ. ಅವಂಗ ಆಗಲೇ ಸನ್ಯಾಸ ದೀಕ್ಷಾ ಆಗಿಬಿಟ್ಟಿತ್ತು. ಏನು ಒಂದು ಹದಿನೆಂಟು ಇಪ್ಪತ್ತು ವರ್ಷ ಇರಬೇಕು ಪಾಪ. ಲೈಫ್ ಎಂಜಾಯ್ ಮಾಡುವ ವಯಸ್ಸಿನ್ಯಾಗ ಪಾಪ ಆ ಸಣ್ಣ ಮಾಣಿಗೆ ತಲಿ ಬೋಳಿಸಿ, ಕಾವಿ ಹಾಕಿ ಕೂಡಿಸೇಬಿಟ್ಟಾರ. ಹಿರಿಯ ಸ್ವಾಮಿಗಳು ತೀರಿ ಹೋದ ನಂತರ ಅವನೇ ಅಂತ ಮುಂದ. ಹಾಂಗಾಗಿ ಅವಂದು ಟ್ರೈನಿಂಗ್ ನಡೆದಿತ್ತು.

ಅದೇನು ಯೋಗಾಯೋಗವೋ ಗೊತ್ತಿಲ್ಲ. ನನಗ ಮತ್ತ ಆ ಜೂನಿಯರ್ ಸ್ವಾಮಿಗೆ ಭಾಳ ದೋಸ್ತಿಯಾಗಿಬಿಡ್ತು. ಪಾಪ ಒಳ್ಳೆ ಹುಡುಗ ಅದು. ನನ್ನ ಗತೆನೇ ಕೊಬ್ಬಿದ ಹೋರಿಯಾಂಗೇ ಇದ್ದ ಅವನೂ. ಅಷ್ಟ ಬೀಜಾ ಬಡಿದ ಎತ್ತಿನ ಗತೆ ಮಾಡಿ ಸನ್ಯಾಸ  ದೀಕ್ಷಾ ಕೊಟ್ಟು ಕೂಡಿಸಿಬಿಟ್ಟಾರ. ಆಮೇಲೆ ಗೊತ್ತಾತು ಅವಂಗ ಸನ್ಯಾಸ ಒಟ್ಟೇ ಮನಸ್ಸಿಲ್ಲ ಅಂತ. ಒಂದು ಚಹಾ ಕುಡಿಯೋಹಾಂಗಿಲ್ಲ. ಒಂದು ಎಲಿ ಅಡಿಕಿ, ಗುಟ್ಕಾ, ಜರ್ದಾ ಪಾನ್ ಹಾಕೋ ಹಾಂಗಿಲ್ಲ. ಕಲರ್ ಕಲರ್ ಬಟ್ಟೆ ಸಹಿತ ಇಲ್ಲ. ಇನ್ನು ಸಿನೆಮಾ, ಬ್ಲೂಫಿಲ್ಮ್ ಅಂತೂ ಇಲ್ಲೇ ಇಲ್ಲ. ಅವೆಲ್ಲಾ ಎಲ್ಲರೆ ಕನಸಿನ್ಯಾಗ ಕಂಡ್ರೆ ನೋಡಿಕೊಂಡು ಜಟಕಾ ಹೊಡ್ಕೋಬೇಕು ಅಷ್ಟೇ. ಬಿಯರ್ ಗಿಯರ್ ಅಂತೂ ಇಲ್ಲೇ ಇಲ್ಲ ಬಿಡ್ರಿ. ಆ ಸಣ್ಣ ಸ್ವಾಮಿನ್ನ ಮಠ ಬಿಟ್ಟು ಹೊರಗೆ ಕೂಡ ಬಿಡ್ತಿದ್ದಿಲ್ಲ.

ಅಂತಾ repressed ಪರಿಸ್ಥಿತಿಯಲ್ಲಿದ್ದ ಸಣ್ಣ ಸ್ವಾಮಿ ನನ್ನ ದೋಸ್ತಿ ಮಾಡಿಬಿಟ್ಟ. ಮುಗೀತು ಅವನ ಕಥಿ. ನನ್ನ ಎಲ್ಲಾ ಚಟಗಳನ್ನೂ ಆಂವಾ ಕಲಿತುಬಿಟ್ಟ. ಕದ್ದು ಮುಚ್ಚಿ ಎಲ್ಲಾ ಮಾಡಲಿಕ್ಕೆ ಶುರುಮಾಡಿಬಿಟ್ಟ. ನಾ ಸಿಗರೇಟ್ ಸೇದ್ತಿದ್ದಿಲ್ಲ. ನಾನ್ವೆಜ್ ತಿಂತಿದ್ದಿಲ್ಲ. ಆ ಸಣ್ಣ ಸ್ವಾಮಿ ಸೂಳಿಮಗ್ಗ ಅವೂ ಬೇಕು. ಅವನ ಪ್ರಾಬ್ಲಮ್ ಅಂದ್ರ ಮಠ ಬಿಟ್ಟು ಹೊರಗ ಬರೋ ಹಾಂಗಿಲ್ಲ. ಹಾಂಗಾಗಿ ನಾ ದಲಾಲ್ ಆಗಿಬಿಟ್ಟೆ. ಸ್ವಾಮಿ ಕಡೆ ಒಂದಕ್ಕೆ ನಾಲ್ಕು ಪಟ್ಟು ರೊಕ್ಕಾ ತೊಗೊಳ್ಳೋದು, ಆಮೇಲೆ ಸಿರ್ಸಿ ಪಟ್ಟಣಕ್ಕೆ ಬಂದು ಎಲ್ಲಾ ತೊಗೊಂಡು ಹೋಗಿ ಅವಂಗ ಕೊಡೋದು. ಮ್ಯಾಲಿಂದ ಅವಂಗ ಅವನ್ನೆಲ್ಲ ಕದ್ದು ಮುಚ್ಚಿ ಮಾಡಲಿಕ್ಕೆ ಎಲ್ಲ ಅನುಕೂಲ ಮಾಡಿಕೊಡೋದು. ಆ ದಲ್ಲಾಳಿ ದಂಧೆದಾಗ ಖರೇ ಅಂದ್ರೂ ಒಂದಿಷ್ಟು ರೊಕ್ಕಾ ಮಾಡಿಕೊಂಡೆ ಬಿಡ್ರಿ. ಸುಳ್ಳು ಹೇಳಂಗಿಲ್ಲ.

ನನ್ನ ಸಹವಾಸದಿಂದ ಜೂನಿಯರ್ ಸ್ವಾಮಿ ಕೆಟ್ಟು ಕೆರಾ ಹಿಡಿದು ಹೋದ. ಆ ಹುಚ್ಚ ಸೂಳಿಮಗ್ಗ ರೂಮಿನ್ಯಾಗ ಒಂದು ಟೀವಿ ಮತ್ತು ಒಂದು ವೀಡಿಯೊ ಹಾಕಿಸಿ ಕೊಟ್ಟಿದ್ದರು ದೊಡ್ಡ ಸ್ವಾಮಿಗಳು. ದೊಡ್ಡ ಸ್ವಾಮಿಗಳು ಮಾಡಿದ ಪ್ರವಚನದ ವೀಡಿಯೊ ಟೇಪ್ ಸಹಿತ ಕೊಟ್ಟಿದ್ದರು. ಅವನ್ನೆಲ್ಲ ನೋಡಿ ಸಣ್ಣ ಸ್ವಾಮಿ ಛಲೋತ್ನಾಗಿ ವೇದಾಧ್ಯಯನ ಮಾಡಲಿ ಅಂತ ಅವರ ಉದ್ದೇಶ. ನಾ ಮಸ್ತ ಮಸ್ತ ಬ್ಲೂಫಿಲ್ಮ್ ವೀಡಿಯೊ ತಂದು ಕೊಟ್ಟುಬಿಟ್ಟೆ. ಮೂರೂ ಹೊತ್ತು ಅದನ್ನೇ ನೋಡಿಕೋತ್ತ ಕೂತು ಬಿಡ್ತಿತ್ತು ಆ ಹಾಪ್ ಸ್ವಾಮಿ.

ಒಮ್ಮೆ ಮಟ ಮಟ ಮಧ್ಯಾನ ಖಬರಿಲ್ಲದೇ ಬಿಯರ್ ಕುಡದು, ಬ್ಲೂಫಿಲ್ಮ್ ವೀಡಿಯೊ ಹಾಕಿಕೊಂಡು ನೋಡಿಕೋತ್ತ ಕೂತು ಬಿಟ್ಟಾನ ನಮ್ಮ ಸಣ್ಣ ಸ್ವಾಮಿ. ನಾ ಅಲ್ಲಿ ಇರಲಿಲ್ಲ. ನಾ ಆಗ ಮಾತ್ರ ಹೊರಗ ಹೋಗಿದ್ದೆ. 'ಜವಾನಿ ಕಿ ಕಹಾನಿ' ಅಂತ ಒಂದು ಖತರ್ನಾಕ್ ಬ್ಲೂಫಿಲ್ಮ್ ಹಾಕಿಕೊಟ್ಟುಬಿಟ್ಟಿದ್ದೆ. ಅದನ್ನು ನೋಡಿಕೋತ್ತ ಕೂತಾನ ಸಣ್ಣ ಸ್ವಾಮಿ. ಮತ್ತ ಕುಡಿದ ನಾಲ್ಕು ಬಾಟಲಿ ಕಿಂಗ್ ಫಿಷರ್ ಸ್ಟ್ರಾಂಗ್ ಬಿಯರ್ ಮಸ್ತ ಕಿಕ್ ಬ್ಯಾರೆ ಕೊಟ್ಟದ. ಪೀಠದ ಮ್ಯಾಲೆ ಅಡ್ಡ ಬಿದ್ದವನೇ ಕಾವಿ ಎತ್ತಿದವನೇ ಒಳಗಿನ ಕೋವಿ ಕೈಯಾಗ ತೊಗೊಂಡು ಜಟಕಾ ಹೊಡಕೋತ್ತ ಕಳೆದುಹೋಗ್ಯಾನ. ಆಗ ಆತು ಘಾತ!

ಜೂನಿಯರ್ ಸ್ವಾಮಿ ಕೋಣೆ ಬಾಜೂಕೇ ದೊಡ್ಡ ಸ್ವಾಮಿಗಳ ನಿವಾಸ. ಅವರೂ ಪಾಪ ಮಧ್ಯಾನ ಏನೋ ಒಂದು ಸಣ್ಣ ವಿಶ್ರಾಂತಿ ಮಾಡಲಿಕ್ಕೆ ಅಂತ ಹಾಂಗೇ ಸ್ವಲ್ಪ ಅಡ್ಡಾಗ್ಯಾರ. ಬಾಜೂಕಿನ ಸಣ್ಣ ಸ್ವಾಮಿ ರೂಮಿನಿಂದ ಕೆಟ್ಟ ಕೆಟ್ಟ ಅಸಹ್ಯ ಸೌಂಡ್ ಬರ್ಲಿಕತ್ತಿದ್ದು ಅವರಿಗೆ ಕೇಳ್ಯದ. ಮಠದಾಗ ಏನು ಬಂತು ಮನಿಯೊಳಗ ಸುದಾ ಗಂಡಾ ಹೆಂಡತಿ ಬೆಡ್ರೂಮ್ ಬಿಟ್ಟು ಎಲ್ಲೂ ಅಂಥಾ ಸೌಂಡ್ ಕೇಳಿ ಬರಲೇಬಾರದು. ಅಂತಾದ್ರಾಗ ಜೂನಿಯರ್ ಸ್ವಾಮಿ ರೂಮಿನಿಂದ ಅಂಥಾ ಸೌಂಡ್ ಬರ್ಲಿಕತ್ತದ! ಚೆಕ್ ಮಾಡೋಣ ಅಂತ ಎದ್ದು ಬಂದಾರ ದೊಡ್ಡ ಸ್ವಾಮಿಗಳು.

ನಾ ಆ ಜೂನಿಯರ್ ಸ್ವಾಮಿ ರೂಂ ಬಿಟ್ಟು ಹೋಗೋಕಿಂತ ಮೊದಲು ಹೇಳೇ ಹೋಗೇನಿ. 'ಲೇ, ಸ್ವಾಮೀ! ಟೀವಿ ವಾಲ್ಯೂಮ್ ಸಣ್ಣದಾಗಿ ಇಟ್ಟುಕೋಪಾ. ಮತ್ತ ಬಾಗಿಲಾ ಬರೋಬ್ಬರಿ ಹಾಕ್ಕೋ. ಚಿಲಕಾ ಹಾಕ್ಕೋ. ಆಮ್ಯಾಲೆ ಬೇಕಾದ್ರ ಒಳಗ ಏನರೆ ಮಾಡಿಕೋ' ಅಂತ. ಎಲ್ಲೆ ಲಕ್ಷ್ಯಇರಬೇಕು? ನಾ ಏನು ಬಾಗಿಲಾ ಮುಂದು ಮಾಡಿಕೊಂಡು ಬಂದಿದ್ದೆ ಅಷ್ಟೇ. ಹಾಂಗೇ ಅದ. ದೊಡ್ಡ ಸ್ವಾಮಿಗಳು ಬಂದು ಬಾಗಿಲಾ ಸ್ವಲ್ಪ ಹೀಂಗ ಲೈಟಾಗಿ ಒಳಗ ದುಗಿಸ್ಯಾರ. ಬಾಗಿಲಾ ತೆಗೆದದ. ಆವಾಗ ನಮ್ಮ ಸಣ್ಣ ಸ್ವಾಮಿಯ ವಿರಾಟರೂಪದ ವಿಶ್ವದರ್ಶನ ಆಗಿಬಿಟ್ಟದ!

ಧ್ಯಾನಕ್ಕೆ ಅಂತ ಇದ್ದ ಪೀಠದ ಮ್ಯಾಲೆ ಸಣ್ಣ ಸ್ವಾಮಿ ಅಸಡಾ ಬಸಡಾ ಬಿದ್ದುಕೊಂಡಾನ. ಮೈ ಮ್ಯಾಲಿನ ವಸ್ತ್ರಾ ಎಲ್ಲಾ ಎತ್ತರಪತ್ತರ. ಕೈಯಾಗ ಬಿಯರ್ ಬಾಟಲಿ. ಕಾವಿ ಲುಂಗಿ ಎತ್ತಿ, ಒಳಗಿನ ಕೋವಿ ಕೈಯಾಗ ಬ್ಯಾರೆ ಹಿಡಕೊಂಡು..... ರಾಮ ರಾಮ! ನಾ ಹೇಳಲಾರೆ ಮುಂದಿಂದು. ಫುಲ್ ಜಟಕಾ ಸೆಶನ್. ಎದುರಿಗೆ ಟೀವಿ ಮ್ಯಾಲೆ ಕೆಟ್ಟಾಕೊಳಕ ಬ್ಲೂಫಿಲ್ಮ್. ವೇದ, ಉಪನಿಷತ್ತು, ಭಗವದ್ಗೀತಾ,  ಬ್ರಹ್ಮಸೂತ್ರ, ಇತ್ಯಾದಿ ಇರಬೇಕಾದ ಪುಸ್ತಕದ ಸಣ್ಣ ಟೇಬಲ್ ಮ್ಯಾಲೆ ರತಿ ವಿಜ್ಞಾನ, ಸುರತಿ ಮುಂತಾದ 'ದೇವರ' ಪುಸ್ತಕಗಳು. ಜೂನಿಯರ್ ಸ್ವಾಮಿಗೆ ಮಾತ್ರ ಖಬರೇ ಇಲ್ಲ. ದೊಡ್ಡ ಸ್ವಾಮಿಗಳು ಅವನ ಹಿಂದೇ ಬಂದು ನಿಂತರೂ ಈ ಪುಣ್ಯಾತ್ಮ ಮಾತ್ರ  'ಆಹ್! ಆಹ್! ಒಹ್! ಆಹ್!' ಅಂತ ಸಂತೋಷದಿಂದ ಮುಲುಗಿಕೋತ್ತ ಕಾವಿಯೊಳಗಿನ ಕೋವಿ ಮರ್ದನದಲ್ಲಿ ಫುಲ್ ಕಳೆದು ಹೋಗ್ಯಾನ. ಅಂತ್ಯದಲ್ಲಿ ಫುಲ್ ಕ್ಲೈಮ್ಯಾಕ್ಸಿಗೆ ಹೋಗಿಬಿಟ್ಟಾನ. ಅದೇ ಹೊತ್ತಿಗೆ ನಾಲ್ಕು ಬಿಯರ್ ಕುಡಿದಿದ್ದು ಬರೋಬ್ಬರಿ ತಲಿಗೆ ಹತ್ಯದ. ನಿದ್ದಿ ಬಂದದ. ಹ್ಯಾಂಗೂ ಕಾವಿಯೊಳಗಿನ ಕೋವಿಯಿಂದ ಫೈರಿಂಗ್ ಆತು. ಕೋವಿಯಂತೂ ನಿತ್ರಾಣ ಆಗಿ ಮಲಕೊಂಡುಬಿಡ್ತು. ಇನ್ನು ತಾನೂ ಮಲ್ಕೋಳ್ಳೋಣ ಅಂತ ಟೀವಿ ಆಫ್ ಮಾಡಲಿಕ್ಕೆ ಎದ್ದಾನ. ಆವಾಗ ಕಂಡಾರ ದೊಡ್ಡ ಸ್ವಾಮಿಗಳು. ಮುಂದೆ ಯಮರಾಜನ ಗತೆ ನಿಂತುಬಿಟ್ಟಾರ. ಸಣ್ಣ ಸ್ವಾಮಿ ಫುಲ್ ಥಂಡಾ.

ಅಲ್ಲೇ ಅವನ್ನ ಹಾಕ್ಕೊಂಡು ಹಾಕ್ಕೊಂಡು ಒದ್ದಾರ ದೊಡ್ಡ ಸ್ವಾಮಿಗಳು. ಆ ಗದ್ದಲ ಕೇಳಿದ ಮಠದ ಮಂದಿಯೆಲ್ಲ ಬಂದಾರ. ಜೂನಿಯರ್ ಸ್ವಾಮಿ ರೂಂ ನೋಡಿದರೆ ಒಳ್ಳೆ ಸೂಳ್ಯಾರ ರೂಮು ಇದ್ದಂಗ ಇತ್ತು. ಹೊಲಸ್ ಹೊಲಸ್ ಪುಸ್ತಕ, ಹೊಲಸ್ ಹೊಲಸ್ ವೀಡಿಯೊ, ಶೆರೆ ಬಾಟಲಿ, ಗುಟ್ಕಾ ಚೀಟಿ, ಜರ್ದಾ ಡಬ್ಬಿ, ಸಿಗರೇಟ್, ತಿಂದು ಒಗೆದಿದ್ದ ಎಲುಬಿನ ಚೂರುಗಳು. ರಾಮಾ! ರಾಮಾ! ಯಾವ್ಯಾವ ವಸ್ತುಗಳು ಮಠದ ಹತ್ತಿರಕ್ಕೂ ಬರಬಾರದು ಅಂತದನೋ ಅಂತವೆಲ್ಲ ಸ್ವಾಮಿ ರೂಮಿನಾಗ ಬರಾಮತ್ತು ಆಗಿಬಿಟ್ಟಾವ. ಶಿವಾಯ ನಮಃ!

ಎಲ್ಲಾರೂ ಕೂಡಿ ಜೂನಿಯರ್ ಸ್ವಾಮಿಯನ್ನ ಕಟ್ಟಿ ಹಾಕಿ ದನಾ ಬಡದಾಂಗ ಬಡದಾರ. 'ಯಾರು ನಿನಗ ಈ ಎಲ್ಲಾ ಚಟಾ ಹಚ್ಚಿದರು? ಯಾರು ನಿನಗ ಇದೆಲ್ಲಾ ತಂದು ಕೊಟ್ಟರು? ಎಷ್ಟು ದಿವಸಗಳಿಂದ ಇದು ನಡೆದದ?' ಅಂತ ಜೂನಿಯರ್ ಸ್ವಾಮಿಯ ಫ್ರೆಶ್ ಆಗಿ ಬೋಳಿಸಿದ ಬುರುಡೆಗೆ ಹಾಕ್ಕೊಂಡು ತಟ್ಟಿ ತಟ್ಟಿ ಕೇಳ್ಯಾರ. ಕಟ್ಟಿ ಹಾಕಿ ಅಷ್ಟೆಲ್ಲಾ ಮಂದಿ ಹಾಕ್ಕೊಂಡು ನಾದಿದರೆ ಆಂವಾ ಆದರೂ ಏನು ಮಾಡಬೇಕು? ಅದೂ ತಪ್ಪು ಬ್ಯಾರೆ ಮಾಡಿ, ರೆಡ್ ಹ್ಯಾಂಡ್ ಆಗಿ ಸಿಕ್ಕೊಂಡು ಬಿದ್ದಾನ. ಚಟಾ ಮಾಡಲಿಕ್ಕೂ ಬುದ್ಧಿ ಬೇಕ್ರೀ. ನಾನೂ ಅವೆಲ್ಲಾ ಚಟ ಅಲ್ಲೇ ಮಠದಾಗೇ ಮಾಡಿಕೊಂಡೇ ಇದ್ದೆ. ನನ್ನ ಯಾರರ ಹಿಡದರೇನು? ಇಲ್ಲ.

ಆಪರಿ ಗಜ್ಜು ತಿಂದ ಸಣ್ಣ ಸ್ವಾಮಿ ಎಲ್ಲಾ ಒಪ್ಪಿಕೊಂಡು ಅಂಬೋ ಅಂದುಬಿಟ್ಟ. ನನ್ನ ಹೆಸರು ಹೇಳಿಬಿಟ್ಟ. ಪೂರ್ಣ ಹೆಸರು, ಕುಲ, ಗೋತ್ರ, ಪ್ರವರ ಎಲ್ಲ ಹೇಳಿಬಿಟ್ಟ. ಗುಡಿಯೊಳಗ ಭಟ್ಟಾ ನಿಮ್ಮ ಹೆಸರೀಲೆ ಅರ್ಚನಾ ಮಾಡುವಾಗ ಹೇಳ್ತಾನ ನೋಡ್ರಿ ಹಾಂಗ ನನ್ನ ಹೆಸರು ಹೇಳಿಬಿಟ್ಟ. ಆಗ ನಾನೂ ಶಿವಾಯ ನಮಃ ಆಗಿಹೋದೆ.

ಈಗ ದೊಡ್ಡ ಸ್ವಾಮಿಗಳಿಗೆ ತೊಂದ್ರಿಗೆ ಬಂತು. ಜೂನಿಯರ್ ಸ್ವಾಮಿ...ಅವನ್ನ ಬಿಡ್ರೀ, ಮಠದಿಂದ ಓಡಸ್ತಾರ. ರೆಡಿಯಾಗಿ ನಿಂತಿರುವ ಬೇರೆ ಬ್ರಹ್ಮಚಾರಿನ ಕರಕೊಂಡು ಬಂದು ದೀಕ್ಷಾ ಕೊಟ್ಟು ಮುಂದಿನ ಸ್ವಾಮೀನ ಹೊಸ್ತಾಗಿಂದ ತಯಾರು ಮಾಡಲಿಕ್ಕೆ ಕೂಡ್ತಾರ. ಮಠದವರ ಚಿಂತಿ ಅದಲ್ಲ. ನನ್ನ ಏನು ಮಾಡಬೇಕು? ಅದೇ ದೊಡ್ಡ ಚಿಂತಿ. ಯಾಕಂದ್ರ ಆದ ಅಷ್ಟೂ ಲಫಡಾಕ್ಕೆ ನಾನೇ ಕಾರಣ ಅಂತ ಗೊತ್ತಾಗಿಬಿಟ್ಟದ. ಆ ಹುಚ್ಚ ಸೂಳಿಮಗ ಸಣ್ಣ ಸ್ವಾಮಿ ನಮ್ಮ ಹೆಸರು, ಮಾಡಿದ ಕಾರ್ನಾಮಾ ಎಲ್ಲ ಹೇಳಿದ ಮ್ಯಾಲೆ ನಾವಾದರೂ ಏನು ಮಾಡೋಣ?

ದೊಡ್ಡ ಸ್ವಾಮಿಗಳಿಗೆ ನನ್ನನ್ನೂ ಮಠದಿಂದ ಓಡಿಸಬೇಕು ಅಂತ ಇಚ್ಛಾ. ಆದರೆ ನಮ್ಮಜ್ಜನ ನೆನಪಾತು. ಸ್ವಲ್ಪ ಥಂಡಾ ಹೊಡೆದರು. ಹಿಂದೊಮ್ಮೆ, 'ಪಾಠಶಾಲಾದಾಗ ಹೋಗಿ ಕೂಡು. ಮಂತ್ರಾ ಕಲಿ, ಅದು ಇದು,' ಅಂತ ನನ್ನ ಜಬರಿಸಿದಾಗ ನಮ್ಮಜ್ಜಗ ಚಾಡಿ ಹೇಳಿಕೊಟ್ಟಿದ್ದೆ. ನಮ್ಮಜ್ಜ ಸ್ವಾಮಿಗಳಿಗೆ ಸಣ್ಣದಾಗಿ ಬೆಂಡೆತ್ತಿ ಹೋಗಿದ್ದ. ಅಂತಾ ಖಡಕ್ ಅಜ್ಜನ ಬಿಂದಾಸ್ ಮೊಮ್ಮಗ ನಾನು. ಸಣ್ಣ ಸ್ವಾಮೀನ ಮಠ ಬಿಟ್ಟು ಓಡಿಸಿದಷ್ಟು ಸಸಾರ ಅಲ್ಲ ನನ್ನ ಮಠ ಬಿಟ್ಟು ಓಡಿಸೋದು.

ಇದಾದ ನಂತರ ನಮ್ಮ ಅಜ್ಜಗ, ಅಪ್ಪಗ ಮಠದಿಂದ ಬುಲಾವಾ ಹೋತು. 'ಲಗೂನ ಬರ್ರಿ. ನಿಮ್ಮ ಹುಡುಗನ ಬಗ್ಗೆ ಭಾಳ ಅರ್ಜೆಂಟ್ ಮಾತಾಡಬೇಕು. ಮಠದ ಮರ್ಯಾದಿ ಪ್ರಶ್ನೆ,' ಅಂತ ಹೇಳಿದರು. ನಮ್ಮ ಅಪ್ಪಗ ಫೋನ್ ಮಾಡಿದರು. ನಮ್ಮ ಅಜ್ಜ ಅಲ್ಲೇ ಹತ್ತಿರದ ಹಳ್ಳಿಯೊಳಗ ಇರೋದ್ರಿಂದ ಮಠದವರು ಯಾರೋ ಹೋಗಿ ಹೇಳಿಬಂದರು.

'ಅಲ್ಲಿ ಮಠದಾಗ ಏನು ಕೆತ್ತೆಬಜೆ ಕಾರ್ಬಾರ್ ಮಾಡಿ ಕೂತಾನೋ ಈ ಪುಣ್ಯಾತ್ಮ. ಲಗೂನೆ ಹೋಗಿ ನೋಡಿ ಬರ್ರಿ. ಹೇಳಿ ಕೇಳಿ ಹುಚ್ಚ ಹನುಮಂತ ಇದ್ದಂಗ ಇದ್ದಾನ 'ನಿಮ್ಮ' ಮಗಾ. ಎಲ್ಲರೆ ಮಠಕ್ಕೆ ಬೆಂಕಿ ಗಿಂಕಿ ಹಚ್ಚಿ ಕೂತಾನೋ ಏನೋ. ಲಗೂನ ಹೋಗಿ ಬರ್ರಿ,' ಅಂತ ನಮ್ಮವ್ವ ಬ್ಯಾರೆ ನಮ್ಮಪ್ಪನ ತಲಿ ತಿಂದಾಳ. ತಿನಲಿಕ್ಕೆ ತಲಿ ಏನೂ ಉಳಿದಿಲ್ಲ. ಆದರೂ ತಿಂತಾಳ. ನನ್ನ 'ಗುಣಗಾನ' ಮಾಡೋವಾಗೆಲ್ಲಾ 'ನಿಮ್ಮ ಮಗ' ಅಂತಾಳ ನೋಡ್ರಿ ನಮ್ಮವ್ವ. ಎಲ್ಲಾ ಅವ್ವಂದಿರೂ ಹಾಂಗs. ಅವರ ಪ್ರಕಾರ ಒಳ್ಳೆ ಕೆಲಸ ಮಾಡಿದಾಗ 'ನನ್ನ ಮಗ' ಅನ್ನೋದು, ಕೆಟ್ಟ ಕೆಲಸ ಮಾಡಿದಾಗ 'ನಿಮ್ಮ ಮಗ' ಅಂತ ಹೇಳಿ ಮಗನ್ನ, ಮಗನ ಅಪ್ಪನ್ನ ಇಬ್ಬರನ್ನೂ ಕೂಡೇ ಬೈದುಬಿಡೋದು. ಇದೇ ಆತು ಈ ಅವ್ವಂದಿರದ್ದು!

ಮರುದಿನವೇ ನಮ್ಮ ಅಜ್ಜ, ನಮ್ಮ ಅಪ್ಪ ಕೂಡೇ ಬಂದಾರ ಮಠಕ್ಕ. ದೊಡ್ಡ ಮಂದಿ. ಅವರಿಗೇನು ಭಾರಿ ಮರ್ಯಾದಿ ಬಿಡ್ರೀ. ಅವರಿಬ್ಬರನ್ನೂ ತಮ್ಮ ಪ್ರೈವೇಟ್ ಚೇಂಬರಿಗೆ ಕರೆಸಿಕೊಂಡ ದೊಡ್ಡ ಸ್ವಾಮಿಗಳು ಗೊಳೋ ಅಂದುಬಿಟ್ಟರು. 'ಹೆಗಡೆ ಅವರೇ, ಕೋತಿ ವನ ಕೆಡಿಸಿತು ಅಂದಂತೆ ನಿಮ್ಮ ಮಾಣಿ ನಮ್ಮ ಮಠ ಕೆಡಸ್ಲಿಕತ್ತದ. ಮಂಗ್ಯಾನ್ಕಿಂತ ದೊಡ್ಡ ಡೇಂಜರ್ ನಿಮ್ಮ ಮಾಣಿ. ಇನ್ನೂ ಅಂವಾ ಮಠದಾಗೇ ಉಳಿದುಕೊಂಡ ಅಂದ್ರ ಮುಂದಿನ ಸರೆ ನೀವು ಬರೋತನಕಾ ಮಠಾ ಇರಂಗಿಲ್ಲರಿ. ಒಳ್ಳೆ ಪೀಡಾ ತಂದು ನಮ್ಮ ಕೊರಳಾಗ ಕಟ್ಟುಬಿಟ್ಟಿರಲ್ಲರೀ......ಅಯ್ಯೋ! ಶಿವಾ! ಪರಮಾತ್ಮಾ! ಆದಿ ಶಂಕರಾ! ಹಾದಿ ಶಂಕರಾ! ಬೀದಿ ಶಂಕರಾ! ಹೆಗಡೆಯವರೇ ಎಲ್ಲಾ ನಿಮ್ಮ ಕೈಯಾಗ ಅದ. ನಿಮ್ಮ ಇಪ್ಪತ್ತು ತಲೆಮಾರಿನ ಹಿರಿಯರು ಕಟ್ಟಿ, ಬೆಳೆಸಿದ ಮಠ ಇದು. ನಿಮ್ಮದೇ ವಂಶದ ಕುಲದೀಪಕ ಮಾಣಿ ಇದನ್ನ ಸರ್ವನಾಶ ಮಾಡ್ಲಿಕತ್ತಾನ ನೋಡ್ರಿ. ಹೀಂಗಾದ್ರ ಸತ್ತು ಸ್ವರ್ಗ ಸೇರಿಕೊಂಡಿರುವ ನಿಮ್ಮ ಪೂರ್ವಜರಿಗೆ ಮುಕ್ತಿ ಸಿಗ್ತದ ಏನ್ರೀ? ನಿಮ್ಮ ಉಡಾಳ ಮಾಣೀನ ಇಲ್ಲಿಂದ ಕರಕೊಂಡು ಹೋಗ್ರಿಪಾ. ಇಲ್ಲಂದ್ರ ನಾನೇ ಪೀಠ ತ್ಯಾಗ ಮಾಡಿ ಎಲ್ಲರೆ ತಪಸ್ಸು ಮಾಡಲಿಕ್ಕೆ ಹೋಗಿಬಿಡ್ತೇನಿ,' ಅಂತ ಫುಲ್ ಗೊಳೋ ಅಂದು, ಸೆಂಟಿಮೆಂಟಲ್ ಫಿಟ್ಟಿಂಗ್ ಇಟ್ಟು, ಎಮೋಷನಲ್ ಬ್ಲಾಕ್ಮೇಲ್ ಮಾಡಿಬಿಟ್ಟಾರ.

ನಮ್ಮಜ್ಜ ನನ್ನ ಎಷ್ಟೇ ಪ್ರೀತಿ ಮಾಡತಿರಬಹುದು. ಆದ್ರ ಮಠದ ವಿಷಯ, ದೊಡ್ಡ ಸ್ವಾಮಿಗಳ ವಿಷಯ ಬಂತು ಅಂದ್ರ ಅವರು ಭಾಳ ಸೀರಿಯಸ್ ಆಗಿಯೇ ತೊಗೋತ್ತಾರ. ಮಠ ಕಟ್ಟಿ ಬೆಳಸಲಿಕ್ಕೆ ಭಾಳ ಶ್ರಮಾ ಪಟ್ಟಾರ. ದೊಡ್ಡ ಸ್ವಾಮಿಗಳು ಅಂದ್ರ ಅವರಿಗೆ ಖಾಸಾ ತಮ್ಮ ಇದ್ದಂಗ. ಹಾಂಗಾಗಿ ನನ್ನ ಮಠದಿಂದ ಕಮಾನೆತ್ತಿ ಎತ್ತಂಗಡಿ ಮಾಡೇಬಿಡಬೇಕು ಅಂತ ಅಲ್ಲೇ ಸ್ಪಾಟ್ ಡಿಸಿಷನ್ ತೊಗೊಂಡೇ ಬಿಟ್ಟಾರ. ನನಗ ಮಠ ಭಾಳ ಹಿಡಿಸಿಬಿಟ್ಟಿತ್ತು. ಜೂನಿಯರ್ ಸ್ವಾಮಿಗೆ ಎಲ್ಲಾ ಚಟಾ ಹಿಡಿಸಿ, ಅವಕ್ಕೆ  ಬೇಕಾಗೋ ಎಲ್ಲ ಸಾಮಾನುಗಳನ್ನು ಒಂದಕ್ಕೆರೆಡು ರೇಟ್ ಹಾಕಿ ತಂದುಕೊಟ್ಟು, ನಾನೂ ಸ್ವಲ್ಪ ರೊಕ್ಕಾ ಗಿಕ್ಕಾ ಮಾಡಿಕೊಂಡಿದ್ದೆ. ಹಾಂಗಿದ್ದಾಗ ಈ ಮಂಗ್ಯಾ ಸಣ್ಣ ಸ್ವಾಮಿ ಖಬರಿಲ್ಲದೇ ಮಾಡಿಕೊಂಡ ಲಫಡಾದಿಂದ ಎಲ್ಲಾ ಕುಲಗೆಟ್ಟು, ಹದಗೆಟ್ಟು ಹೋಗಿಬಿಟ್ಟದ. ಆ ಹಾಪನ ಕಾಲದಾಗ ನನ್ನನ್ನೂ ಮಠ ಬಿಟ್ಟು ಓಡಸಲಿಕತ್ತಾರ. ಛೇ! ಎಂತಾ ನಸೀಬಾ ನೋಡ್ರಿ.

ಏನು ಮಾಡಲಿಕ್ಕೆ ಬರ್ತದ? ಮಠ ಬಿಟ್ಟು ಬಂದೆ. ನಮ್ಮ ಅಜ್ಜ, ಅಪ್ಪನ ಜೋಡಿನೇ ಅವರು ಬಂದಿದ್ದ ಕಾರಿನಲ್ಲೇ ಹೊರಟೆ. ಮಠದ ದ್ವಾರದಲ್ಲೇ ಒಂದು ಫುಲ್ ಸ್ಕ್ರಾಪ್ ಆಗಿ ಮೋಡಕಾ ಆಗಿದ್ದ ಶರೀರ ಕಂಡು ಬಂತು. ನಮಗ ಒಮ್ಮೆಲೇ ಗುರ್ತೇ ಸಿಗಲಿಲ್ಲ. ಯಾರೋ ತಿಪ್ಪಿ ಕೆದರೋ ಹೇಮಾಮಾಲಿನಿ ಅಣ್ಣನೋ ತಮ್ಮನೋ ಕಂಡಂಗ ಕಂಡ. ನಮ್ಮ ಕಾರು ಹೊಂಟಿದ್ದು ನೋಡಿದ ಕೂಡಲೇ ಹುಚ್ಚನ ಗತೆ ಎತ್ತರ ಪತ್ತರ ಹೆಜ್ಜಿ ಹಾಕ್ಕೋತ್ತ ಓಡಿ ಬಂತು ಆ ಆಕೃತಿ. ನೋಡಿದರೆ ನಮ್ಮ ಹಳೆ ಸಣ್ಣ ಸ್ವಾಮಿ. ಮಠದಿಂದ ಒದ್ದು ಓಡಿಸಿ ಜಸ್ಟ್ ಒಂದು ದಿನಾ ಆಗ್ಯದ. ಏನು ಹಾಲತ್ ಮಾಡಿಕೊಂಡಾನ! ಅಬಬಬಬಾ! ನೋಡಿದರೆ ಸಾಕು. ಕಾಶಿಯೊಳಗ ಗಂಗಾ ನದಿಯೊಳಗ ಸ್ನಾನಾ ಮಾಡಿ ಬರ್ತಿದ್ದ ಶಂಕರಾಚಾರ್ಯರ ಕಣ್ಣಿಗೆ ದಿನಾ ಒಬ್ಬವ ಕೆಟ್ಟಾ ಕೊಳಕ ಹೇಶಿ ಚಾಂಡಾಲ ಕಂಡುಬರ್ತಿದ್ದನಂತ. ಅಂತಾ ಹೇಶಿ ಚಾಂಡಾಲ ಅವತಾರ ಮಾಡಿಕೊಂಡು ನಿಂತಿತ್ತು ನೋಡ್ರಿ ಆ ಸಣ್ಣ ಸ್ವಾಮಿ. ಆ ಕಾಶಿ ಚಾಂಡಾಲ ತನ್ನ ಜೋಡಿ ಒಂದು ನಾಲ್ಕು ಹೊಲಸ್ ನಾಯಿ ಬ್ಯಾರೆ ಹಿಡಕೊಂಡು ಅಡ್ಯಾಡ್ತಿದ್ದನಂತ. ನಮ್ಮ ಸಣ್ಣ ಸ್ವಾಮಿ ಸುತ್ತಮುತ್ತಲ ನಾಯಿಯೊಂದು ಇಲ್ಲ. ಇನ್ನೂ ಎರಡು ದಿವಸ ಇಂವಾ ಹಿಂಗೇ ಇದ್ದಾ ಅಂದ್ರ ಇವನೇ ನಾಯಿಯಾಗಿ ಹೋಗ್ತಾನ. ಶಂಕರಾಚಾರ್ಯರ ಕಥಿಯೊಳಗ ನೋಡಿದರೆ ಆ ಕಾಶಿ ಚಾಂಡಾಲ ದೇವರು ಶಿವಾ ಆಗಿದ್ದನಂತ. ಶಂಕರಾಚಾರ್ಯರನ್ನು ಪರೀಕ್ಷಾ ಮಾಡಲಿಕ್ಕೆ ಹೊಲಸ್ ಚಾಂಡಾಲನ ರೂಪಾ ಧರಿಸಿದ್ದಂತ. ಅದರ ಮ್ಯಾಲೆ ಆದಿ ಶಂಕರಾಚಾರ್ಯರು 'ಮನೀಷಾ ಪಂಚಕಂ' ಅಂತ ಐದೇ ಐದು ಶ್ಲೋಕದ ಸಣ್ಣ ಪುಸ್ತಕಾ ಬರೆದಾರ. ಅದರ ಅರ್ಥ - ದೇವರು ಯಾವದೇ ರೂಪದಲ್ಲಿ ಕಾಣಿಸಬಹುದು. ಯಾರನ್ನೂ ಮೇಲು ಕೀಳು ಅಂತ ಕಡೆಗಣಿಸಿಬಾರದು - ಅಂತ. ಹಾಂಗಾಗಿ ನಾವೂ ಎಲ್ಲರೆ ಈ ಹೇಶಿ ಸಣ್ಣ ಸ್ವಾಮಿ ದೇವರೇನೋ ಅಂತ ಗಾಡಿ ನಿಲ್ಲಿಸಿದಿವಿ. 

ಈ ಮಾಜಿ ಸಣ್ಣ ಸ್ವಾಮಿ ಆ ಪರಿ ಡಿಕ್ಕಿ ಹೊಡೆಯವರ ಗತೆ ಕಾರಿಗೆ ಅಡ್ಡ ಬರೋದು ನೋಡಿದ ಮ್ಯಾಲೆ ಗಾಡಿ ನಿಲ್ಲಿಸಲಿಕ್ಕೇ ಬೇಕಾತು. ನಿಲ್ಲಿಸಿದ ಕೂಡಲೇ ನಮ್ಮ ಅಜ್ಜ ಅವರ ಕಡೆ ಕಿಡಕಿ ಗಾಜು ಕೆಳಗ ಇಳಿಸಿದರು. ಹತ್ತಿರ ಬಂದ. 'ಘಂ!' ಅಂತ ಕೆಟ್ಟ ವಾಸನಿ ಹೊಡಿತು. ಮತ್ತ ಕಿಡಕಿ ಹಾಕಿದರು. ಆದ್ರ ಅವನ ಜೋಡಿ ಮಾತಾಡಬೇಕಿತ್ತು. ಏನು ಅಂತ ಕೇಳಬೇಕಿತ್ತು. ಅಜ್ಜನ ಪ್ರೀತಿಯ ಮೊಮ್ಮಗನಾದ ನನ್ನ ಕಾರಣದಿಂದ ಸಣ್ಣ ಸ್ವಾಮಿ ಈ ಪರಿಸ್ಥಿತಿಗೆ ಬಂದು ನಿಂತಾನ. moral obligation ಬಂತು ನಮ್ಮ ಅಜ್ಜಗ. ಮತ್ತಿ ಕಿಡಕಿ ಇಳಿಸಿದರು. ದೂರ ನಿಂತು ಮಾತಾಡು ಅಂದರು. ಆಂವಾ ಮಾತಾಡಲಿಲ್ಲ. ಗೊಳೋ ಅಂತ ಅತ್ತ.

'ಮಾಡೋದೆಲ್ಲ ಮಾಡಿ, ಮಠದಿಂದ ಒದ್ದು ಹೊರಗ ಹಾಕಿಸಿಕೊಂಡು ಈಗ್ಯಾಕ ಅಳ್ತಿಯೋ ಹುಚ್ಚ ಸೂಳಿಮಗನ???' ಅಂತ ಒದರಿದರು ನಮ್ಮ ಅಜ್ಜ. ಮೊದಲು ಏನು ಗೌರವ, ಏನು ಮರ್ಯಾದಿ ಕೊಟ್ಟು, ಕಾಲಿಗೆ ಬೀಳ್ತಿದ್ದರು. 'ಸಣ್ಣ ಸ್ವಾಮಿಗಳೇ!' ಅಂತ ಭಾಳ ಮರ್ಯಾದೆಯಿಂದ ಅನ್ನಿಸ್ಕೋತ್ತಿದ್ದವಾ ಒಂದೇ ದಿನದಾಗ 'ಹುಚ್ಚ ಸೂಳಿಮಗಾ!' ಆಗಿಬಿಟ್ಟ. ಶಿವನೇ ಶಂಭುಲಿಂಗ!

ಅವಂದು ಅತ್ತು ಮುಗಿವಲ್ಲತು. ನಮ್ಮ ಅಜ್ಜಗ ಸಿಟ್ಟು ಬಂತು. 'ನಡಿ ನೀ,' ಅಂದ್ರು ಕಾರ್ ಡ್ರೈವರಗ. ಕಾರು ಹೊಂಟು ಹೋಗ್ತದ ಅಂದ ಕೂಡಲೇ ಮಾಜಿ ಸಣ್ಣ ಸ್ವಾಮಿ ಅಳೋದು ನಿಲ್ಲಿಸಿ, ಗೊಸ್ ಗೊಸ್ ಅನ್ಕೋತ್ತ ಮಾತಾಡ್ಲಿಕ್ಕೆ ಶುರು ಮಾಡಿದ. ನಡು ನಡು ಜರ್ಕ್ ಹೊಡಿತಿದ್ದ. ನಿನ್ನೆ ಮಾತ್ರ ಎಷ್ಟು ಖುಷಿಂದ ಬಿಯರ್ ಕುಡಿದು, ನಾನ್ವೆಜ್ ತಿಂದು, ಬ್ಲೂಫಿಲಂ ನೋಡಿ, ಕಾವಿಯೊಳಗಿನ ಕೋವಿಗೆ ಜಟಕಾ ಹೊಡೆದು ಮಕ್ಕೊಂಡಿದ್ದ. ಇವತ್ತು ಭಿಕಾರಿಯಾಗಿ ರಸ್ತೆದಾಗ ತಿಪ್ಪಿ ಕೆಬರವರ ಅವತಾರ ಮಾಡಿಕೊಂಡು ಅಳ್ಳಿಕತ್ತಾನ. ಮ್ಯಾಲಿಂದ ಜರ್ಕ್ ಹೊಡಿಲಿಕತ್ತಾನ. ಸ್ವಲ್ಪ ಖಬರಿಟ್ಟುಕೊಂಡು ಜಟಕಾ ಹೊಡೆದಿದ್ದರೆ ಈ ಪರಿಸ್ಥಿತಿ ಬರ್ತಿದ್ದಿಲ್ಲ.

'ಗೋಪಾಲಕೃಷ್ಣ ಹೆಗಡೆರೇ, ನನ್ನ ಪಾಡು ನಾಯಿಪಾಡಾಗಿ ಹೋಗ್ಯದರೀ. ನಿಮ್ಮ ಮೊಮ್ಮಗನ ಕಾಲದಾಗ ನಾ ಹಾಳಾಗಿ ಹೋದೆ. ಎಷ್ಟು ದೊಡ್ಡ ಮಠದ ಪೀಠಾಧಿಪತಿ ಆಗಬೇಕಾದವ ನಾ ಆಗಿದ್ದೆ. ಈಗ ನೋಡ್ರಿ ನನ್ನ ಪರಿಸ್ಥಿತಿ. ನಿಮ್ಮ ಮೊಮ್ಮಗನಿಂದ ನಾ ಹಾಳಾಗಿ ಹೋದೆ ದೊಡ್ಡ ಹೆಗಡೆರೇ' ಅಂತ ಗೊಳೋ ಅಂದ.

ನಮ್ಮ ಅಜ್ಜ ಮತ್ತ ಅವಂಗ ಹಾಕ್ಕೊಂಡು ಚಡಾಬಡಾ ಅಂತ ಮಸ್ತ ಮಸ್ತ ಖಡಕ್ ಶಬ್ದ ಉಪಯೋಗಿಸಿ ಬಯ್ದರು. ಕೆಟ್ಟ ಮಾರಿ ಮಾಡಿಕೊಂಡು ಸ್ವಲ್ಪ ಸ್ವಲ್ಪ ಅಳುತ್ತ, ನಡು ನಡು ಗೊಸಕ್ ಗೊಸಕ್ ಅಂತ ಮೂಗಿನ್ಯಾಗಿನ ಗೊಣ್ಣಿ ಮ್ಯಾಲೆ ಎಳಕೋತ್ತ, ಜರ್ಕ್ ಹೊಡ್ಕೋತ್ತ ನಿಂತಿತ್ತು ಸಣ್ಣ ಸ್ವಾಮಿ. ಮಾಜಿ ಸಣ್ಣ ಸ್ವಾಮಿ.

ಸಂಸ್ಕೃತದಾಗ ಏನೋ ಹೇಳಿ ಜೋರಾಗಿ ಗೊಳೋ ಅಂದ. ನಮಗ್ಯಾರಿಗೂ ಇವಾ ಏನಂದಾ ಅಂತ ತಿಳಿಲಿಲ್ಲ.

'ಸೀದಾ ಸೀದಾ ಕನ್ನಡದಾಗ ಮಾತಾಡದೇ ಸಂಸ್ಕೃತ ಗಿಂಸ್ಕೃತ ಅಂತ ಬ್ಲೇಡ್ ಹಾಕಿದಿ ಅಂದ್ರ ನೋಡ್ಕೋ ಮತ್ತ. ಕೆಳಗಿಳಿದು ಬಂದು ಝಾಡಿಸಿ ಝಾಡಿಸಿ ಒದಿತೇನಿ ನೋಡು ಬೇವಕೂಫಾ! ಕನ್ನಡದಾಗ ಬೊಗಳು!' ಅಂತ ನಮ್ಮ ಅಜ್ಜಾ ಜೋರಾಗಿ ಆವಾಜ್ ಹಾಕಿದರು.

'ನಾ ಸಂಸ್ಕೃತ ಒಳಗ ಹೇಳಿದ್ದರ ಅರ್ಥ ಅಂದ್ರ ನಾ ಈಗ ದೋಭಿ ಕಾ ಕುತ್ತಾ ಆಗಿಬಿಟ್ಟೆ. ನ ಘರ್ ಕಾ ನ ಘಾಟ್ ಕಾ. ನಾನೂ ಹಾಂಗೆ. ಬ್ರಾಹ್ಮಣರ ಕುತ್ತಾ. ನ ಮಠ ಕಾ ನ ಗಾಂವ್ ಕಾ. ನಾಯಿಪಾಡು ಆತಲ್ಲರೀ ಹೆಗಡೆಯವರೇ! ನಂದು ದೋಭಿ ನಾಯಿಪಾಡು ಆತಲ್ಲರೀ. ನನ್ನ ಗತಿ ಏನ್ರೀ? ಮುಂದಿನ ಜೀವನ ಹ್ಯಾಂಗ್ರೀ? ವಿದ್ಯಾ ಕಲಿತಿಲ್ಲ. ನಾ ನಾಲ್ಕನೇ ಕ್ಲಾಸ್ ಫೇಲ್. ಮಠದಾಗೂ ಏನೂ ಮಂತ್ರಾ ಕಲಿಲಿಲ್ಲ. ಕಲಿಲಿಕ್ಕೆ ನಿಮ್ಮ ಮೊಮ್ಮಗ ಬಿಡಲಿಲ್ಲ. ಏನೇನೋ ತಂತ್ರ ಕಲಿಸಿಬಿಟ್ಟ. ಅದನ್ನೆಲ್ಲಾ ಕಲಿತ ನಾನು ನಾಲ್ಕೂ ಹೊತ್ತೂ ಬರೇ ನನ್ನ 'ಯಂತ್ರ' ಹಿಡಕೊಂಡು 'ಆಯುಧ ಪೂಜಾ' ಮಾಡಿಕೋತ್ತ ಕೂತುಬಿಟ್ಟೆ. ಮುಂದಿನ ಗತಿ ಏನ್ರೀ? ನಾ ಮೊದಲೇ ದಟ್ಟ ದರಿದ್ರ ಬ್ರಾಹ್ಮಣ. ಆಸ್ತಿ ಪಾಸ್ತಿ ಏನೂ ಇಲ್ಲ. ಅಪ್ಪ ಅವ್ವ ಇಲ್ಲದ ಅನಾಥ,' ಅಂತ ಹೇಳಿಕೋತ್ತ ಮತ್ತ ಕಾರಿನ ಹತ್ತಿರ ಬಂದ. ಕೆಟ್ಟ ಹೊಲಸ್ ನಾತ ಹೊಡಿತದ ಈ ಅನಾಥ ದೋಭಿ ಕುತ್ತಾ. 'ಏ, ದೂರ ನಿಂತು ಮಾತಾಡೋ ನಾತಾ ಹೊಡೆಯೋ ಅನಾಥಾ. ನಮ್ಮ ಮೂಗುಗಳನ್ನು ಅನಾಥ ಮಾಡಬ್ಯಾಡ ಹೇಶಿ ಸೂಳಿಮಗನೇ!' ಅಂತ ನಮ್ಮ ಅಜ್ಜಾ ಒದರಿದರು. ಸ್ವಲ್ಪ ಹಿಂದೆ ಸರಿದ. ತನ್ನ ಅಳಾಣ, ಗೊಸ್ ಗೊಸ್ ಅಂತ ಮೂಗು ಸೇದಾಣ ಮಾತ್ರ ಮುಂದುವರೆಸಿದ್ದ.

ಈಗ ನಮ್ಮ ಅಜ್ಜಗ ಭಾಳ ಕೆಟ್ಟ ಅನಿಸ್ತು. ಇದು ಫುಲ್ ಸ್ಕ್ರಾಪ್ ಕೇಸ್. ಜಾತಿಂದ ಬ್ರಾಹ್ಮಣ ಬ್ಯಾರೆ. ಅದೂ ಸನ್ಯಾಸ ದೀಕ್ಷಾ ತೊಗೊಂಡ ಬ್ರಾಹ್ಮಣ. ಮಾಡಬಾರದ್ದು ಮಾಡಿ ರೆಡ್ ಹ್ಯಾಂಡ್ ಸಿಕ್ಕೊಂಡು ಬಿದ್ದುಬಿಟ್ಟಾನ. ಮುಂದೆ ಯಾವ ದಾರಿಗಳೂ ಇಲ್ಲ. ಎಲ್ಲೇ ಹೋದರೂ ಮಂದಿ ಛೀ! ಥೂ! ಅಂತ ಬೈದು ಓಡಸ್ತಾರ. ಒಂದು ನಯೇ ಪೈಸೆ ರೊಕ್ಕ ಎಲ್ಲೂ ಹುಟ್ಟೋದಿಲ್ಲ. 'ಈ ಸೀಮೆ  ಬಿಟ್ಟು ದೂರ ಹೋಗಪಾ,' ಅಂತ ಹೇಳೋಣ ಅಂದರೆ ಈ ಪುಣ್ಯಾತ್ಮ ನಾಲ್ಕನೇತ್ತಾ ಫುಲ್ ಫೇಲಾಗಿಬಿಟ್ಟಾನ. ಮಂತ್ರ ಗಿಂತ್ರ ಬರೋದಿಲ್ಲ. ಬಂದರೂ ಬ್ರಾಹ್ಮಣರು ಇವನ್ನ ತಮ್ಮ ಕಂಪೌಂಡ್ ಒಳಗೂ ಬಿಟ್ಟುಕೊಳ್ಳೋದಿಲ್ಲ. ಒಳಗ ಕರೆದು, ಪೂಜಾ ಮಾಡಿಸಿ, ದಕ್ಷಿಣಾ ಕೊಡೋದು ದೂರ ಉಳೀತು. ಈ ಪಾಪಿ ಸೂಳಿಮಗನ ನೆರಳು ಬಿತ್ತು ಅಂದರೂ ಒಂದು ಟಂಕಿ ಪಂಚಗವ್ಯ ತರಿಸಿ ಇಡೀ ಮನಿ ಸ್ವಚ್ಛ ಮಾಡಸ್ತಾರ. ಅಂತಹ ಕರುಣಾಜನಕ ಸ್ಥಿತಿ ಪಾಪ ನಮ್ಮ ಸಣ್ಣ ಸ್ವಾಮಿದು.

'ಮನಿಗೆ ಬಂದು ನನ್ನ ಭೆಟ್ಟಿಯಾಗು. ನಿನಗ ಏನರೆ ಒಂದು ವ್ಯವಸ್ಥಾ ಮಾಡತೇನಿ. ನನ್ನ ಮೊಮ್ಮಗನ ಸಹವಾಸದಿಂದ ಇಂತಾ ಪರಿಸ್ಥಿತಿ ಬಂದದ ಅಂತಿ. ಅದನ್ನೇನೂ ನಾ ಪೂರ್ತಿ ನಂಬೋದಿಲ್ಲ. ಆದರೂ ನನ್ನ ಪ್ರೀತಿ ಮೊಮ್ಮಗನ ಮ್ಯಾಲೆ ಯಾವದೇ ಅಪವಾದ ಬರೋದು ಬ್ಯಾಡ. ನಿನಗ ಏನರೆ ಜುಗಾಡ್ ಮಾಡಿಕೊಡತೇನಿ. ಚಿಂತಿ ಮಾಡಬ್ಯಾಡ. ಮನಿಗೆ ಬಂದು ನನ್ನ ನೋಡು. ತಿಳಿತೇನೋ? ಹಾಂ?' ಅಂತ ಅಬ್ಬರಿಸಿದರು ನಮ್ಮ ಅಜ್ಜ.

ಆ ಹುಚ್ಚ ಮಾಜಿ ಸಣ್ಣ ಸ್ವಾಮಿಗೆ ನಂಬಿಕೆ ಬಂದಂಗ ಕಾಣಲಿಲ್ಲ. ಮುಂದಿನ ಸೀಟಿನ್ಯಾಗ ಕೂತಿದ್ದ ನನ್ನ ತಲಿ ಮ್ಯಾಲೆ ಕೈಯಿಟ್ಟರು ನಮ್ಮ ಅಜ್ಜಾ. ಅಜ್ಜನ ಕೈ ತಲಿ ಮ್ಯಾಲೆ ಬಂತು ಅಂದ್ರ ಭಾಳ ಖುಷಿ ಆಗ್ತದ. ಕೂಲಿಂಗ್ ಟಚ್ ಅದು. 'ಏ, ಹುಚ್ಚಾ! ಇಲ್ಲಿ ನೋಡು. ನನ್ನ ಪ್ರೀತಿ ಮಮ್ಮಗನ ತಲಿ ಮ್ಯಾಲೆ ಕೈಯಿಟ್ಟು ಹೇಳತೇನಿ. ನಿನಗ ವಚನಾ ಕೊಡತೇನಿ. ನಿನ್ನ ನಡು ನೀರಾಗ ನಾ ಕೈ ಬಿಡಂಗಿಲ್ಲ. ನೀ ಸಾಯೋ ತನಕಾ ಆರಾಮ್ ಇರಬೇಕು. ಹಾಂಗ ವ್ಯವಸ್ಥಾ ಮಾಡಿಕೊಡತೇನಿ. ಮನಿಗೆ ಬಾ!' ಅಂತ ಹೇಳಿದರು.

'ನಿಮ್ಮ ಉಡಾಳ, ಲಪುಟ, ೪೨೦, ಖತರ್ನಾಕ್ ಮಮ್ಮಗ ನನ್ನ ತಲಿ ಮ್ಯಾಲೆ ಭಸ್ಮಾಸುರನ ಗತೆ ಕೈಯಿಟ್ಟ. ನಾ ಸುಟ್ಟು ಭಸ್ಮ ಆದೆ. ಈಗ ನೀವು ನಿಮ್ಮ ಮಮ್ಮಗನ ತಲಿ ಮ್ಯಾಲೆ ಕೈಯಿಟ್ಟು ಆಣಿ ಮಾಡ್ಲಿಕತ್ತೀರಿ. ಎಂತಾ ಮಮ್ಮಗರೀ ನಿಮ್ಮ ಮಮ್ಮಗಾ?! ಅದೇನು ನನ್ನ ತಲಿ ಮ್ಯಾಲೆ ಕೈಯಿಟ್ಟನೋ ಅಥವಾ ವಾಮನ ಬಲಿ ಚಕ್ರವರ್ತಿ ತಲಿ ಮ್ಯಾಲೆ ಕಾಲಿಟ್ಟಂಗ ಕಾಲಿಟ್ಟು ಭೂಮ್ಯಾಗ ಹೂಳಿ ಬಿಟ್ಟನೋ ಗೊತ್ತಿಲ್ಲ. ಕೆಟ್ಟ ಕಿಡಿಗೇಡಿ ನಿಮ್ಮ ಮೊಮ್ಮಗ,' ಅನ್ನೋ ಲುಕ್ ಕೊಟ್ಟಗೋತ್ತ ನಿಂತಿತ್ತು ಆ ಹುಚ್ಚ. ನಾ ಪೆಕಪೆಕಾ ಅಂತ ನಕ್ಕುಬಿಟ್ಟೆ. ಕೆಟ್ಟ ಕಿಡಿಗೇಡಿ ನಾ.

'ಬಂದು ಭೆಟ್ಟಿ ಮಾಡು,' ಅಂತ ಮತ್ತೊಮ್ಮೆ ಹೇಳಿ ಗಾಡಿ ಬಿಡಲಿಕ್ಕೆ ಹೇಳಿದರು. ಆ ಹುಚ್ಚ ಮಾಜಿ ಸಣ್ಣ ಸ್ವಾಮಿ ಸುದಾ ನಮ್ಮ ಜೋಡಿ ಬರಲಿಕ್ಕೆ ಹೊಂಟುಬಿಟ್ಟಿತ್ತು. ಎರಡು ದಿವಸದಿಂದ ಕೇರ್ ಆಫ್ ಫುಟ್ಪಾತ್ ಆಗಿ ಕೆಟ್ಟ ನಾರ್ಲಿಕತ್ತದ ಹೇಶಿ. ನಮ್ಮ ಜೋಡಿ ಕಾರಿನ್ಯಾಗ ಬರಲಿಕ್ಕೆ ಹೊಂಟದ.

'ಏ, ಏ, ಅಲ್ಲೇ ದೂರ ನಿಂದ್ರು. ಮನಿಗೆ ಬಂದು ಭೆಟ್ಟಿಯಾಗು ಅಂದ್ರ ಈಗ ನಮ್ಮ ಜೋಡಿನೇ ಬಾ ಅಂತ ಅಲ್ಲ. ಆಮೇಲೆ ಯಾವಾಗ ಬೇಕಾದರೂ ಬಂದು ನೋಡು ಅಂತ. ಏನು ನಮ್ಮ ಗಾಡಿ ಹತ್ತಲಿಕ್ಕೆ ಬರ್ಲಿಕತ್ತಿಯಲ್ಲಾ? ಹಾಂ!? ನಾವು ಫುಲ್ ಮಡಿಯೊಳಗ ದೊಡ್ಡ ಸ್ವಾಮಿಗಳನ್ನು ನೋಡಿ, ಪ್ರಸಾದ ತೊಗೊಂಡು, ಮನಿಗೆ ಹೊಂಟೇವಿ. ನೀ ಬಂದು ಮೈಲಿಗಿ ಮಾಡಬ್ಯಾಡಾ ಪುಣ್ಯಾತ್ಮ!' ಅಂತ ಹೇಳಿದರು ನಮ್ಮಜ್ಜಾ.

ಈ ರೀತಿ ಕೆಟ್ಟದಾಗಿ ಬೈಸಿಕೊಂಡ ಆ ಹೇಶಿ ಮತ್ತ ಗೊಳೋ ಅಂತ ಅತ್ತಿತು.

'ಯಾಕೋ!? ಏನಾತು ಈಗ? ಹಾಂ?' ಅಂತ ಕೇಳಿದರು ಅಜ್ಜ.

'ನನ್ನ ಕಡೆ ಒಂದು ಪೈಸೆ ರೊಕ್ಕ ಇಲ್ಲರೀ. ನಿಮ್ಮ ಊರಿಗೆ, ಮನಿಗೆ ಹ್ಯಾಂಗ ಬರಲೀ ನಾ? ಒಂದು ದಮಡಿ ಸಹಿತ ರೊಕ್ಕಿಲ್ಲರಿ! ಬಸ್ ಚಾರ್ಜ್ ರೀ!' ಅಂತ ಗೊಳೋ ಅಂತು ಆ ಆಕೃತಿ.

'ಹೂಂ! ತೊಗೋ ಇಲ್ಲಿ,' ಅಂತ ನೂರು ರೂಪಾಯಿಯ ಒಂದು ಸಣ್ಣ ಗಡ್ಡಿ ಒಗೆದರು. ಆಸೆಬುರುಕ ಬೆಗ್ಗರ್ ಗತೆ ಬರೋಬ್ಬರಿ ಕ್ಯಾಚ್ ಹಿಡಿದ. ಥ್ಯಾಂಕ್ಸ್ ಅಂದುಬಿಟ್ಟ. ಅದೂ ಇಂಗ್ಲೀಷ್ನ್ಯಾಗ. ಅವಂಗ ಇಂಗ್ಲೀಷ್ ಒಳಗ ಬರುವ ಶಬ್ದ ಅದೊಂದೇ ಇರಬೇಕು. ಆವಾಗ ಸಂಸ್ಕೃತ ಒಳಗ ಏನೋ ಹೇಳಿದ ಈಗ ಇಂಗ್ಲೀಶ್ ಒಳಗ.

'ಹಾಂ! ಮತ್ತೊಂದು ಮಾತು. ಸ್ವಲ್ಪ ಸಿರ್ಸಿ ಪ್ಯಾಟಿ ಕಡೆ ಹೋಗಿ ಬಾ. ಪ್ಯಾಟ್ಯಾಗ ಒಂದು ಜೋಡಿ ಛಲೋ ಧೋತ್ರ, ಅಂಗಿ, ಚಪ್ಪಲ್ ಎಲ್ಲಾ ಖರೀದಿ ಮಾಡು. ನಮ್ಮನಿಗೆ ಬರುವಾಗ ಅವತಾರ ಸರಿಯಿರಬೇಕು. ತಿಳಿತೇನು???' ಅಂತ ಅವಾಜ್ ಹಾಕಿದರು. ನಮ್ಮ ಅಜ್ಜನ ಕಿತಬಿ ನೋಡ್ರಿ. ನನ್ನ ತಲಿ ತಟ್ಟಿ ಹೇಳಿದರು. 'ಇಂವಾ ಏನರೆ ಇದೇ ಅವತಾರ ಮಾಡಿಕೊಂಡು ನಮ್ಮನಿ ಕಡೆ ಸುಳಿದಾ ಅಂದ್ರ ಮುಗೀತು ಇವನ ಕಥಿ. ನಿಮ್ಮಜ್ಜಿ ಅಂದ್ರ ನನ್ನ ಹೇಣ್ತಿ ಅಂದ್ರ ನಿಮ್ಮವ್ವನ ಅವ್ವಾ ಇವನ ಹೆಣಾ ಹಾಕ್ತಾಳ ನೋಡು. ಇಂವಾ ಹ್ಯಾಂಗ ಬಂದರೂ ನಿಮ್ಮ ಅಜ್ಜಿ ಕಡೆ ಗಜ್ಜು ತಿನ್ನವಾ ಇದ್ದಾನ ತೊಗೋ. ಅದರೂ ಹೇಳಿದೆ. ನಿಮ್ಮಜ್ಜಿ ಅಂದ್ರ ಮಹಾಕಾಳಿ ಆಕಿ!' ಅಂತ ನಮ್ಮಜ್ಜಿ ಬಗ್ಗೆ ಹೇಳಿದರು. ಅದೇನು ತಮ್ಮ ಹೆಂಡ್ತಿ ಹೊಗಳಿದರೋ ಬೈದರೋ ಗೊತ್ತಾಗಲಿಲ್ಲ. ನಮ್ಮಜ್ಜಿಯ ಕೆಟ್ಟ ಖಡಕ್ ಸ್ವಭಾವ ನೆನಪಿಸಿಕೊಂಡು ನಕ್ಕೆ.

ನಾವು ಅಜ್ಜಿಮನಿ ಕಡೆ ಗಾಡಿ ಬಿಟ್ಟಿವಿ. ನಾನು ಮತ್ತ ನಮ್ಮಪ್ಪ ಅಜ್ಜಿಮನಿಯೊಳಗ ಒಂದು ನಾಲ್ಕು ದಿನಾ ಮಸ್ತ ಮಜಾ ಮಾಡಿ ಧಾರವಾಡಕ್ಕೆ ವಾಪಸ್ ಬಂದ್ವಿ. 'ಮಠದಾಗ ಆರು ತಿಂಗಳು ಇದ್ದು ಎಷ್ಟು ತೆಳ್ಳಗಾಗಿ ಬಿಟ್ಟದ ನನ್ನ ಮುದ್ದು ಕೂಸು!' ಅಂತ ಅಜ್ಜಿ ಪ್ರೀತಿ ಮಾಡಿ, ಖಾತಿರ್ದಾರಿ ಮಾಡಿ, ಸ್ಪೆಷಲ್ ಸ್ಪೆಷಲ್ ಅಡಿಗಿ ಮಾಡಿ, ಉಣ್ಣಿಸಿ, ತಿನ್ನಿಸಿ, ಪ್ರೀತಿ ಮಮ್ಮಗನಾದ ನನ್ನನ್ನು ಮತ್ತೂ ಹೊನಗ್ಯಾ ಮಾಡಿ ಕಳಿಸಿದಳು.

ಮಠದಿಂದ ಡಿಬಾರ್ ಆಗಿ ಕೇರ್ ಆಫ್ ಫುಟ್ಪಾತ್ ಆಗಿದ್ದ ಸ್ವಾಮಿ ಎರಡು ದಿವಸ ಬಿಟ್ಟು ಬಂದ. ಅವನ ಹೆಸರಿಗೆ ಅರ್ಧಾ ಎಕರೆ ಅಡಿಕಿ ತ್ವಾಟಾ, ಒಂದು ಎಕರೆ ಭತ್ತದ ಗದ್ದಿ ಬರೆದು ಕೊಟ್ಟರು ನಮ್ಮ ಅಜ್ಜಾ. ಅದು ಖಾಯಂ ಆಗಿಬಿಡಬೇಕು ಅಂತ ಹೇಳಿ ರಿಜಿಸ್ಟರ್ ಸಹಿತ ಮಾಡಿಸಿ, ಕಾಗದಪತ್ರ ಅವನ ಕೈಯಾಗ ಕೊಟ್ಟು, 'ಏ, ಜಾತಿ ಕೆಟ್ಟ ಬ್ರಾಹ್ಮಣಾ, ತೊಗೋ ನಿನ್ನ ದಕ್ಷಿಣಾ!' ಅಂತ ಹೇಳಿದರು. ಅರ್ಧಾ ಎಕರೆ ಅಡಿಕಿ ತ್ವಾಟಾ, ಒಂದು ಎಕರೆ ಭತ್ತದ ಗದ್ದಿ ಅಂದರ ಸಣ್ಣ ಮಾತೇನ್ರೀ?? ಒಂದು ಆರು-ಎಂಟು ಜನರ ಕುಟುಂಬ ಆರಾಮ ಇರಬಹುದು ಅದರಾಗ. ನೋಡಿದರೆ ಇಂವಾ ಅನಾಥ ಸೂಳಿಮಗ. ಸಿಂಗಲ್ ಆದ್ಮಿ. ಅಲ್ಲೇ ತ್ವಾಟದ ಮೂಲ್ಯಾಗ ಒಂದು ಸಣ್ಣ ಮನಿ ಬ್ಯಾರೆ ಕಟ್ಟಿಸಿಕೊಟ್ಟರು. ಅದು ಒಳ್ಳೆ ಪಕ್ಕಾ ಮನಿ ಮತ್ತ. ಛಲೋನೇ ಇತ್ತು. ಈ ರೀತಿ ನಮ್ಮ ಅಜ್ಜಾ ಕೊಟ್ಟ ಮಾತಿನಂತೆ ಮಾಜಿ ಸಣ್ಣ ಸ್ವಾಮೀನ ಜೀವನದಾಗ ಸೆಟಲ್ ಮಾಡಿಸಿಕೊಟ್ಟರು.

ಕೆಟ್ಟು ಕೆರಾ ಹಿಡಿದಿದ್ದ ಮಾಜಿ ಸಣ್ಣ ಸ್ವಾಮಿ ಎಲ್ಲಾ ಚಟಾ ಸ್ವಲ್ಪ ಲಿಮಿಟ್ ಒಳಗ ಇಟ್ಟುಕೊಂಡು ಒಳ್ಳೆ ರೀತಿಂದ ಕೆಲಸ ಮಾಡಿದ. ತ್ವಾಟಾ, ಗದ್ದಿ ಛಲೋತ್ನಾಗಿ ಸಾಗುವಳಿ ಮಾಡಿದ. ಸ್ವಲ್ಪ ರೊಕ್ಕ ಕಾಸು ಮಾಡಿಕೊಂಡ. ಆವಾಗ ಮತ್ತ ನಮ್ಮ ಅಜ್ಜನ ಮುಂದ ಬಂದು ನಿಂತ.

'ಏನೋ? ಈಗ ಏನೋ? ನಿನಗ ಎಲ್ಲಾ ಮಾಡಿ ಕೊಟ್ಟೇನಲ್ಲೋ? ಮತ್ತೇನು ಬೇಕು? ನನ್ನ ತಲಿ ಮ್ಯಾಲೆ ಹತ್ತಿ ಕೂಡಬೇಕೇನು?' ಅಂದ್ರು ನಮ್ಮ ಅಜ್ಜ. ಇವನ ಕಾಲದಾಗ ಸಾಕಾಗಿ ಹೋಗ್ಯದ ಅವರಿಗೆ.

ಅದಕ್ಕೆ ಉತ್ತರ ಆ ಮಾಜಿ ಸಣ್ಣ ಸ್ವಾಮಿ ಹೇಳಲಿಲ್ಲ. ಅಲ್ಲೇ ಇದ್ದ ನಮ್ಮ ಅಜ್ಜಿ ಹೇಳಿದರು.

'ಅವಂಗ ಒಂದು ಲಗ್ನಾ ಮಾಡಿ ಒಗೀರಿ. ಬೆದಿಗೆ ಬಂದ ಹೋರಿ ಆಗ್ಯಾನ. ಮಠದಾಗ ಏನೇನು ಮಾಡಿ ಬಂದಾನ ಅಂತ ಗೊತ್ತೇ ಅದ. ಹಾಂಗಿದ್ದಾಗ ಇಂತಾ ಗೂಳಿ ಸೂಳಿಮಗನ್ನ ಹಾಂಗೇ ಬಿಟ್ಟರೆ ನಮ್ಮೂರಿನ ಒಂದೇ ಒಂದು ಕನ್ಯಾ ಸೇಫ್ ಇಲ್ಲ ನೋಡ್ರಿ ಮತ್ತ. ನಮ್ಮನಿಯಾಗ ಯಾರೂ ಹೆಣ್ಣಮಕ್ಕಳು ಇರಲಿಕ್ಕಿಲ್ಲ. ಆದ್ರ ಊರಾಗ ಇದ್ದಾರ. ಯಾರದ್ದರೆ ಬಡವರ ಮನಿ ಒಂದು ಯಬಡ ಹುಡುಗಿ ತಂದು ಲಗೂನ ಕಟ್ಟಿಬಿಡ್ರಿ ಈ ಪಾಪಿ ಸೂಳಿಮಗ್ಗ! ಇಲ್ಲಾ ಅಂದ್ರ, 'ನಿಮ್ಮ ಮಮ್ಮಗನಿಂದ ನಾ ಹಾಳಾದೆ. ನಿಮ್ಮ ಮಮ್ಮಗ ನನಗ ಎಲ್ಲಾ ಚಟಾ ಹಚ್ಚಿಸಿ ಹಾಳುಮಾಡಿದಾ. ಅದಕss ನನ್ನ ಲಗ್ನ ಆಗವಲ್ಲತು,' ಅಂತ ನನ್ನ ಮುದ್ದು ಮಮ್ಮಗಗ ಶಾಪಾ ಹೊಡಿತದ ಈ ಹುಚ್ಚ. ಇವನ ಶಾಪ ಯಾಕ ನನ್ನ ಪ್ರೀತಿ ಮಮ್ಮಗಗ ತಟ್ಟಬೇಕು?' ಅಂತ ನಮ್ಮ ಅಜ್ಜಿ ಅವರ ಫಿಟ್ಟಿಂಗ್ ಇಟ್ಟರು. ಅಜ್ಜನಿಗೆ ಗೊತ್ತಿಲ್ಲದ ವಿಷಯ ಅಂದರೆ ಈ ಸಣ್ಣ ಸ್ವಾಮಿ ಅಜ್ಜಿ ಹೇಳಿದ ಕೆಲಸ ಎಲ್ಲ ಭಕ್ತಿಯಿಂದ ಮಾಡಿಕೊಟ್ಟು ಅಜ್ಜಿಯ ಫೇವರಿಟ್ ಆಗಿಬಿಟ್ಟಾನ ಅಂತ. ಮೊದಲು ಅಜ್ಜಿಗೆ ಹೋಗಿ 'ನನ್ನ ಲಗ್ನಾ ಮಾಡ್ರಿ,' ಅಂತ ಹೇಳ್ಯಾನ. ಅಜ್ಜಿ ಹೇಳ್ಯಾರ, 'ನೀ ಹೋಗಿ ನಮ್ಮ ಯಜಮಾನರ ಮುಂದ ಹೇಳು. ನಾ ನಿನ್ನ ಸಪೋರ್ಟ್ ಮಾಡತೇನಿ. ನಿನಗ ಒಂದು ಹುಡುಗಿ ಸಹಿತ ನೋಡಿಟ್ಟೇನಿ. ಅಕಿ ಜೋಡಿ ನಿನ್ನ ಲಗ್ನಾ ಮಾಡಿಸೇಬಿಡ್ತೇನಿ,' ಅಂತ. ಹೀಂಗ ಮೊದಲೇ ಮಾಮಲಾ ಫಿಟ್ ಆಗಿಬಿಟ್ಟದ.

ಎಲ್ಲರಿಗೂ ಅಜ್ಜಿ ಮಾತು ಒಪ್ಪಿಗಿ ಆಗ್ಯದ. ಸಿರ್ಸಿ ಸೀಮ್ಯಾಗ ಅಂತೂ ಈ ಹುಚ್ಚ ಸೂಳಿಮಗಗ ಯಾರೂ ಹೆಣ್ಣು ಕೊಡೋದಿಲ್ಲ. ಇಂವಾ ಒಂದು ಕಾಲದಾಗ ಸ್ವಾಮಿಯಾಗಿದ್ದಾ, ಮಾಡಬಾರದ್ದು ಮಾಡಿ ಡಿಬಾರ್ ಆಗಿ ಮಠದಿಂದ ಓಡಿ ಬಂದಾನ ಅಂತ ನೆನಪಾದ ಕೂಡಲೇ ಮಂದಿ ಕುಂಡಿ ತಟ್ಟಿಕೊಂಡು ನಗ್ತಾರ. ಹಾಂಗಿರೋವಾಗ ಹೆಣ್ಣು ಕೊಡೋದು ದೂರ ಉಳಿತು ಬಿಡ್ರೀ.

ಆದ್ರ ನಮ್ಮಜ್ಜಿ ಅಂದ್ರ ಅಕಿ ಭಾಳ resourceful ಮಹಿಳೆ. ಆ ಜೋಗ ಫಾಲ್ಸ್ ಕಡೆ ಲಿಂಗನಮಕ್ಕಿನೋ, ಮಂಗನಮಕ್ಕಿನೋ ಅಂತ ಒಂದು ಸೀಮೆ ಬರ್ತದ ನೋಡ್ರಿ. ಅಲ್ಲಿಂದ ಯಾವದೋ ಒಂದು ಕನ್ಯಾ ಹುಡುಕಿಕೊಂಡು ಬಂದುಬಿಟ್ಟಾಳ. ಪಾಪ ಬಡವರ ಮನಿ ಕನ್ಯಾ. ಅಪ್ಪಾ ದೇವರ ಗುಡಿ ಭಟ್ಟಾ. ಅಂತವಂಗ ಸಾಲಾಗಿ ಅರ್ಧಾ ಡಜನ್ ಹೆಣ್ಣುಮಕ್ಕಳನ್ನು ದೇವರು ದಯಪಾಲಿಸಿಬಿಟ್ಟಾನ. ಆ ಭಟ್ಟನ ಹಿರೇ ಮಗಳೇ ನಮ್ಮಜ್ಜಿ ಹುಡುಕಿದ ಕನ್ಯಾ. ವಯಸ್ಸು ಬ್ಯಾರೆ ಇಪ್ಪತ್ತರ ಮ್ಯಾಲೆ ಆಗಿಬಿಟ್ಟದ. ಆಗಲೇ ತಡಾ ಆಗಿಬಿಟ್ಟದ. ಹಾಂಗಾಗಿ ಆ ಲಿಂಗನಮಕ್ಕಿ ಭಟ್ಟಾ ಸಿಕ್ಕಿದ್ದೇ ವರಾ, ಅದೂ ಸಿರ್ಸಿ ಸೀಮ್ಯಾಗ ಬಂಗಾರದ ಬೆಳೆ ಬರೋ ಅರ್ಧಾ ಎಕರೆ ಅಡಿಕಿ ತ್ವಾಟದ ಮಾಲೀಕ ವರಾ ಸಿಕ್ಕಾನ ಅಂತ ಹೇಳಿ ಒಪ್ಪೇಬಿಟ್ಟಾನ. ಒಂದು ತಿಂಗಳದಾಗ ಎಲ್ಲಾ ಮಾತುಕತೆ ಮುಗಿದು ಲಗ್ನಾ ಮಾಡಿ ಢಾಂ ಢೂಮ್ ಢುಸ್ ಅನ್ನಿಸಿಬಿಟ್ಟಾರ.

ಲಗ್ನ ಆಗಿದ್ದೇ ಆಗಿದ್ದು 'ಜವಾನಿ ಕಿ ಕಹಾನಿ' ಅನ್ನೋ ಬ್ಲೂಫಿಲ್ಮ್ ನೋಡಿ ಕಲಿತ ಎಲ್ಲಾ ಕಲೆಗಳನ್ನೂ ಹಿಡಿದು ಬಿಡದೆ, ಹಗಲು ರಾತ್ರಿ ಅನ್ನೋ ಖಬರಿಲ್ಲದೇ ಸ್ವಾಮಿ ಪ್ರಯೋಗ ಮಾಡಿಬಿಟ್ಟಾನ. ತಿಂಗಳ ಅನ್ನೋದ್ರಾಗ ಫಸ್ಟ್ ಪ್ರೊಡಕ್ಷನ್ ಶುರು ಮಾಡೇಬಿಟ್ಟಾನ. ಲಗ್ನಾಗಿ ಹತ್ತೇ ತಿಂಗಳದಾಗ ಸಣ್ಣ ಸ್ವಾಮಿಗೆ ಒಬ್ಬ ಗಂಡು ಮಗಾ.

ಅದೇ ಪ್ರಕಾರ ಮುಂದ ಐದು ವರ್ಷದಾಗ ಮತ್ತೂ ಎರಡು ಪ್ರೊಡಕ್ಷನ್ ಮಾಡಿಕೊಂಡ ಮಾಜಿ ಸಣ್ಣ ಸ್ವಾಮಿ. ಅವೇ ಮೂರು ಮಕ್ಕಳನ್ನು ಕರಕೊಂಡು ಹೆಂಡ್ತಿ ಜೋಡಿ ಸಿರ್ಸಿಗೆ ಬಂದಾನ. ಆಗಲೇ ನಾ ಕಂಡುಬಿಟ್ಟೇನಿ. ನನಗಂತೂ ಅವನ ಗುರ್ತೇ ಸಿಕ್ಕಿಲ್ಲ ಬಿಡ್ರೀ. ಆಂವಾ ಮಾತ್ರ ಅದೆಂಗೊ ನನ್ನ ಗುರುತು ಹಿಡಿದುಬಿಟ್ಟಾನ. ನಾ ಮಾಡಿದ 'ಉಪಕಾರಗಳೆಲ್ಲ' ನೆನಪಾಗಿಬಿಟ್ಟಾವ. ಹಾಂಗಾಗಿ ಆ ರೀತಿ ನನ್ನ ಕೈ ಹಿಡಕೊಂಡು, ಆನಂದದ ಕಣ್ಣೀರು ಹಾಕ್ಕೋತ್ತ, ಸಂತೋಷದಾಗ ಮಾತಾಡ್ಲಿಕ್ಕೆ ಆಗದೇ, ಕಾಲಿಗೆ ಬಿದ್ದು ಬಿದ್ದು ಥ್ಯಾಂಕ್ಸ್ ಹೇಳಳಿಕತ್ತಾನ.

ಅಬ್ಬಾ! ನನಗೂ ಸಮಾಧಾನ ಆತು ಬಿಡ್ರೀ. ಅವಂಗ ಚಟಾ ಹಚ್ಚಿಸಿ, ಅವನ್ನ ಹಾಳು ಮಾಡಿಬಿಟ್ಟೆ ಅಂತ ನನಗೇನೂ guilty conscience ಆಗಿದ್ದಿಲ್ಲ. ಮತ್ತ ಮ್ಯಾಲಿಂದ ನಮ್ಮ ಅಜ್ಜ ಬ್ಯಾರೆ ಅವಂಗ ಎಲ್ಲಾ ವ್ಯವಸ್ಥಾ ಮಾಡಿಕೊಟ್ಟಾರ. ಅಜ್ಜಿ ಸಂಸಾರ ಮಾಡಿಸಿಕೊಟ್ಟಾರ. ಅದರೂ ನಾವು ಭಾಳ ಹಿಂದೆ ಮಾಡಿದ್ದ  ಕೆಲಸ ಪಾಪ ಆಗಲಿಲ್ಲ, ಬದಲಿಗೆ ಪುಣ್ಯವೇ ಆತು ಅಂತ ಸಂತೋಷ. ಇಲ್ಲಂದ್ರ ನೋಡ್ರಿ, ಈ ಹುಚ್ಚ ಸೂಳಿಮಗ ಮನಸ್ಸಿಲ್ಲದಿದ್ದರೂ ಸ್ವಾಮಿಯಾಗಿ ಬರೇ ಲಂಪಟ ಕೆಲಸ ಮಾಡಿಕೋತ್ತ, ಪೂಜಿ ಪುನಸ್ಕಾರ ಎಲ್ಲ ಬಿಟ್ಟು, ಧ್ಯಾನದಾಗ ಕೂತರೂ ಬರೇ ಸಂಸಾರದ ಸುಖಗಳ ಬಗ್ಗೆನೇ ವಿಚಾರ ಮಾಡಿಕೋತ್ತ ಪೀಠ ಹಾಳು ಮಾಡ್ತಿದ್ದ. useless fellow. ಎಲ್ಲ ಚಟ ಮಾಡಿದ. ಲಗೂನೇ ಕೆಟ್ಟ. ಕೆಟ್ಟು ಕೆರ ಹಿಡಿದ. ಸಿಕ್ಕೊಂಡು ಬಿದ್ದ. ಡಿಬಾರ್ ಆದ. ಒಳ್ಳೇದೇ ಆತು. ಮುಂದ ಅವಂಗೂ ಎಲ್ಲಾ ಒಳ್ಳೇದೇ ಆತು. ಹಾಂಗಾಗಿ ಸ್ವಾಮಿಯನ್ನು ನಾವಂತೂ ಕೆಡಿಸಿ ಹಾಳು ಮಾಡಲಿಲ್ಲ. ಆ ಪಾಪ ನಮಗ ತಾಗೋದಿಲ್ಲ. ಅಷ್ಟೇ ಸಾಕು.

ಒಂದೇ ಒಂದು ಕೆಟ್ಟದಾತು ಅಂತ ಅನ್ನಿಸ್ತದ. ಇಂವಾ ಕೆಟ್ಟು ಕೆರಾ ಹಿಡಿದು, ಎಲ್ಲಾ ಚಟಾ ಮಾಡಿ, ಮಠದಾಗ ಸಿಕ್ಕೊಂಡು ಬಿದ್ದಿದ್ದಿಲ್ಲಾ ಅಂದ್ರ ನಾವೂ ಮಠದಾಗೇ ಇರಬಹುದಿತ್ತು. I miss it very much. ಮಠ ಏನೂ ಅಷ್ಟು ಮಿಸ್ ಮಾಡಿಕೊಳ್ಳೋದಿಲ್ಲ ಬಿಡ್ರೀ. ಆದ್ರ ಮಠದ ಅಡಿಗಿ ರುಚಿ ಮಾತ್ರ ಮರಿಲಿಕ್ಕೆ ಆಗೋದಿಲ್ಲ. ಅದರಾಗೂ ಮಠದ ಹುಳಿ ಅದರಾಗೂ ಸ್ಪೆಷಲ್ ಬದನಿಕಾಯಿ ಹುಳಿ ಅಂದ್ರ ಮುಗೀತು. ಏನು ರುಚಿ ಅಂತೀರಿ! ಒಂದು ತಪ್ಪಲೆ ಬಿಸಿಬಿಸಿ ಅನ್ನದ ಮ್ಯಾಲೆ ಒಂದು ಕೊಳಗಾ ಹುಳಿ ಹಾಕಿಸಿಕೊಂಡು, ಮ್ಯಾಲಿಂದ ಅರ್ಧಾ ವಾಟಗಾ ಬಿಸಿ ತುಪ್ಪಾ ಹಾಕಿಸಿಕೊಂಡು, ಒಂದು ಇಪ್ಪತ್ತು ಹಲಸಿನಕಾಯಿ ಹಪ್ಪಳ ಕರಂ ಕುರಂ ಮಾಡಿ ತಿನ್ನಕೋತ್ತ, ವಾಸನಿ ಮಿಡಿ ಉಪ್ಪಿನಕಾಯಿ ನಂಜಿಕೋತ್ತ ಊಟ ಮಾಡಿ, ಒಂದು ಅರ್ಧಾ ಡಜನ್ ಕಾಯಿ ಹೋಳಿಗಿ ಕತ್ತರಿಸಿ, ಒಂದು ಲೀಟರ್ ಮಸಾಲಿ ಮಜ್ಜಿಗಿ ಕುಡಿದು, ಊಟ ಮುಗಿಸಿ, ಕಲಕತ್ತಾ ಎಲಿಯಾಗ ಬಾಬಾ ೧೬೦ ಕೇಸರಯುಕ್ತ ಜರ್ದಾ ಹಾಕಿ, ಮ್ಯಾಲಿಂದ ಹುರಿದ ಚಾಲಿ ಅಡಿಕಿ ಹಾಕಿದ ಪಾನ್ ಹಾಕ್ಕೊಳ್ಳೋದು ಅಂದ್ರ ಸ್ವರ್ಗ ಸುಖಾ ರೀ. ಅದು ಮಠದಾಗ ಇದ್ದಾಗ ಸಿಕ್ಕಿತ್ತು. ಈ ಹುಚ್ಚ ಸೂಳಿ ಮಗನ ಕಾಲಾದಾಗ ಆ ಸುಖ ನಮಗ ತಪ್ಪಿಹೋಗ್ಯದ. ಇವನದೇನು? ಆರಾಮ್ ಇದ್ದಾನ.

ಹಾಂ, ಈಗ ಗೊತ್ತಾಗಿರಬೇಕಲ್ಲಾ ಇವನ ಹೆಸರು ಎಸ್. ಎಸ್. ಭಟ್ ಯಾಕ ಅಂತ? ಅಯ್ಯೋ! ಸಣ್ಣ ಸ್ವಾಮಿ ಭಟ್ ಅಂತ. ಭಟ್ಟರ ಮನುಷ್ಯಾ. ಮೂಲ ಹೆಸರು ಸನ್ಯಾಸ ತೊಗೊಂಡಾಗ ಹೋತು. ನಂತರ ಎಲ್ಲರೂ ಸಣ್ಣ ಸ್ವಾಮಿ ಭಟ್ಟಾ ಅಂತಲೇ ಕರಿತಿದ್ದರು. ಮಾತಿಗೊಮ್ಮೆ ಸ್ವಾಮಿ ಸ್ವಾಮಿ ಅಂದಾಗೊಮ್ಮೆ ಹಳೇದೆಲ್ಲಾ ನೆನಪಾಗೋದು ಬ್ಯಾಡ ಅಂತ ಹೇಳಿ ಹಾಪ್ ಸೂಳಿಮಗಾ ಎಸ್. ಎಸ್. ಭಟ್ ಅಂತ ಮಾಡಿಕೊಂಡಾನ.

ಸ್ವಾಮಿಯೇ ಶರಣಂ ಅಯ್ಯಯಪ್ಪಾ!! ಸಣ್ಣ ಸ್ವಾಮಿಯೇ ಶರಣಂ ಅಯ್ಯಯಪ್ಪಾ!!!

ಅಷ್ಟರಲ್ಲಿ ಮಾಮಾನ ಮಗನ ಬುಲೆಟ್ ಪಟಪಟಿಯ ಸೌಂಡ್ ಕೇಳಿತು. ಫ್ಲಾಶ್ ಬ್ಯಾಕಿನಾಗ ಕಳೆದುಹೋಗಿದ್ದೆ. ಪಟಪಟಿ ಸೌಂಡ್ ಕೇಳಿ ಎದ್ದು ಹೊರಗ ಬಂದೆ. ಸಣ್ಣ ಸ್ವಾಮಿ ಭಟ್ಟನಿಗೆ ವಿದಾಯ ಹೇಳಿ ಅಜ್ಜಿಮನೆ ಕಡೆ ಹೊಂಟೆ.

***

ವಿ. ಸೂ: ಇದೊಂದು ಪೂರ್ತಿ ಕಾಲ್ಪನಿಕ ಕಥೆ. ಯಾವದೇ ವ್ಯಕ್ತಿಗಳಿಗಾದರೂ ಅಥವಾ ಯಾವದೇ ಘಟನೆಗಳಿಗಾದರೂ ಸಾಮ್ಯತೆ ಕಂಡುಬಂದಲ್ಲಿ ಅದು ಶುದ್ಧ ಕಾಕತಾಳೀಯವಷ್ಟೇ.

***

ಸ್ಪೂರ್ತಿ: 'ಮಠ' ಅನ್ನುವ ಕನ್ನಡ ಸಿನೆಮಾ.

Thursday, October 22, 2015

'Ash' ಹುಡುಕಿಕೊಂಡು ಹೋದವ Ash ಅಂದರೆ ಬೂದಿಯನ್ನೇ ಪಡೆದುಕೊಂಡಾಗ...

ಐಶ್ವರ್ಯಾ ರೈ

ಈ ಲೈಫ್ ಅಂದ್ರೆ ವಿಚಿತ್ರ. ಒಮ್ಮೊಮ್ಮೆ ಬಯಸಿದ್ದು ಸಿಕ್ಕಿಬಿಡುತ್ತದೆ. ಆದರೆ ಬಯಸಿದ ರೂಪದಲ್ಲಿ ಸಿಗುವದಿಲ್ಲ. ನೀರು ಬಯಸಿದರೆ ನೀರಿನ ರೂಪವೇ ಆದ ಆವಿ ಸಿಗುತ್ತದೆ. ಬೀರು ಬಯಸಿದರೆ ಬೀರಿನಲ್ಲಿರುವ ಬಾರ್ಲಿ ಸಿಗುತ್ತದೆ.  ಹಾಗೆಯೇ Ash ಬಯಸಿದರೆ ಒಮ್ಮೊಮ್ಮೆ ಬೂದಿ ಸಿಕ್ಕುಬಿಡುತ್ತದೆ.

Ash ಅಂದರೆ ಐಶ್ವರ್ಯಾ ರೈ ದೋಸ್ತಿ ಮಾಡಬೇಕು ಅಂತ ಹೋದವನಿಗೆ ನಿಜವಾದ Ash ಅಂದರೆ ಬೂದಿಯೇ ಸಿಕ್ಕರೆ ಹೆಂಗ್ರೀ!?

ಅದು ಇಸ್ವೀ ೨೦೦೦ ರ ಸಮಯ. ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ನಡುವೆ ಏನೋ ಜಮ್ಮ ಚಕ್ಕ, ಝಕ್ಕ ನಕ್ಕ ಅಂತ ಪತ್ರಿಕೆಗಳಲ್ಲಿ ಸುದ್ದಿಯೋ ಸುದ್ದಿ. ಎಲ್ಲ ತಾರೆಯರಂತೆ ಅವರೂ ನಿರಾಕರಿಸುತ್ತಲೇ, ನಖರಾ ಬಾಜಿ ಮಾಡುತ್ತಲೇ ಇದ್ದರು. ಕೇಳಿದರೆ, 'ಇಲ್ಲ. ಇಲ್ಲ. ನಾವಿಬ್ಬರೂ ಒಳ್ಳೆ ಫ್ರೆಂಡ್ಸ್ ಅಷ್ಟೇ!' ಅಂತ ಭೋಂಗು ಬಿಟ್ಟುಕೊಂಡು ಇದ್ದರು.

'ಹೇಗೂ ಐಶು ಬೇಬಿ (ಐಶ್ವರ್ಯಾ ರೈ) ಇನ್ನೂ ಸಿಂಗಲ್ (ಅವಿವಾಹಿತೆ) ಇದ್ದಾಳೆ. ನಮ್ಮದೂ ಲಕ್ ನೋಡಿಬಿಡೋಣ,' ಅಂತ ಪ್ರಯತ್ನ ಮಾಡಿದ ಪುರುಷಶ್ರೇಷ್ಠರೆಷ್ಟೋ!? ಆ ಲೆಕ್ಕ ದೇವರಿಗೇ ಗೊತ್ತು. ಅಂತಹದ್ದೇ ಗುಂಪಿಗೆ ಸೇರುವವರು ನಮ್ಮ ಗರಂ ಆದಮೀ ಸಬೀರ್ ಭಾಟಿಯಾ. ಅಯ್ಯೋ! ಗರಮ್ ಆದಮೀ ಅಂದರೆ Hotmail ಸ್ಥಾಪಿಸಿದಂತಹ hot male. ಅದೇ ಸಬೀರ್ ಭಾಟಿಯಾ. ಅವರೂ ಸಹ ಎಲ್ಲಿಯಾದರೂ Ash ಸಿಗಬಹುದೇ ಅಂತ ನೋಡುತ್ತಿದ್ದರು ಅಂತ ಸುದ್ದಿಯಾಗಿತ್ತು. ಮತ್ತೆ ಆ ಕಾಲದಲ್ಲಿ ಅವರು most eligible bachelor ಅಂತಲೇ ಪ್ರಸಿದ್ಧರಾಗಿದ್ದರು. ಆಗ ತಾನೇ ತಮ್ಮ Hotmail ಕಂಪನಿಯನ್ನು ಸುಮಾರು ೪೫೦ ಮಿಲಿಯನ್ ಡಾಲರಿಗೆ ಮೈಕ್ರೋಸಾಫ್ಟ್ ಕಂಪನಿಗೆ ಮಾರಿ, ಕಂಡಾಪಟ್ಟೆ ರೊಕ್ಕ ಝಣಝಣ ಎಣಿಸುತ್ತ, ಭಾರತದಲ್ಲಿ ಕೂಡ ಒಂದಿಷ್ಟು ಕಂಪನಿ ಸ್ಥಾಪಿಸಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ರೊಕ್ಕವಂತೂ ಝಣಝಣ. ಜೊತೆಗೆ ನೋಡಲೂ ಸುರಸುಂದರಾಂಗ. ಹೇಳಿಕೇಳಿ ಪಂಜಾಬಿ ಮುಂಡಾ. ಎತ್ತರಕ್ಕೆ, ಕೆಂಪಕೆಂಪಗೆ ಇರುತ್ತಾರೆ. ಇವರೂ ಇದ್ದರು. ಹೀಗೆ ಎಲ್ಲ ಅರ್ಹತೆಗಳು ಇದ್ದ most eligible bachelor ಸಬೀರ್ ಭಾಟಿಯಾ ಸಾಹೇಬರು ಹೆಚ್ಚಾಗಿ ಪೇಜ್-೩ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳತೊಡಗಿದರು. ಸುಂದರಿಯರ ಸಂಗ ಗಿಟ್ಟಬೇಕು ಅಂದರೆ ಪೇಜ್-೩ ಪಾರ್ಟಿಗಳಿಗೇ ಹೋಗಬೇಕು ತಾನೇ? ಅಂತಹದೇ ಯಾವದೋ ಪಾರ್ಟಿಯಲ್ಲಿ ಐಶು ಬೇಬಿಯನ್ನು ನೋಡಿ ಫುಲ್ ಫಿದಾ ಆಗಿಬಿಟ್ಟರು. ಪರಿಚಯ ಗಿರಿಚಯ ಕೂಡ ಸಣ್ಣ ಪ್ರಮಾಣದಲ್ಲಿ ಆಯಿತು ಅಂತ ಕಾಣುತ್ತದೆ.

ಸಬೀರ್ ಭಾಟಿಯಾ

ಐಶು ಬೇಬಿಗೆ ಸ್ನೇಹಕ್ಕೆ, ಡೇಟಿಂಗ್ ಅದಕ್ಕೆ ಇದಕ್ಕೆ ಆಹ್ವಾನ ಕೊಟ್ಟಿರಬೇಕು. ಅದು ಹೇಗೋ ಗರಂ ಖೋಪಡಿ ಸಲ್ಲು ಮಿಯಾ ಅಂದರೆ ಸಲ್ಮಾನ್ ಕಿವಿಗೂ ಬಿದ್ದಿರಬೇಕು. ಆಕಾಲದಲ್ಲಿ ಐಶು ಬೇಬಿ ಬಗ್ಗೆ ಸಿಕ್ಕಾಪಟ್ಟೆ possessive ಆಗಿದ್ದ ಸಲ್ಲೂ ಮಿಯಾ ಕೊತಕೊತ ಕುದ್ದು, 'ಲೋ ಭಾಟಿಯಾ, ಸಿಗು ಮಗನೇ! ಮಾಡ್ತೀನಿ ನಿನಗೆ!' ಅಂತ ಆಗಲೇ ಸ್ಕೆಚ್ ಹಾಕಿದ್ದನೇ? ಗೊತ್ತಿಲ್ಲ.

ಮುಂದೆ ಸ್ವಲ್ಪ ದಿವಸಗಳ ನಂತರ ಮತ್ತೆ ಯಾವದೋ ಅದೇ ತರಹದ ಪಾರ್ಟಿಯಲ್ಲಿ ಸಲ್ಮಾನ್, ಐಶ್ವರ್ಯಾ, ಸಬೀರ್ ಭಾಟಿಯಾ ಮೂವರು ಸೇರಿದ್ದಾರೆ. ತಮ್ಮ ತಮ್ಮ ಪಾಡಿಗೆ ತಾವಿದ್ದಾರೆ. ಸಬೀರ್ ಭಾಟಿಯಾನನ್ನು ಸಲ್ಮಾನ್ ಖಾನ್ ನೋಡಿದ್ದಾನೆ. ನೋಡಿದಾಕ್ಷಣ ಏನೆನ್ನಿಸಿತೋ ಏನೋ ಸೀದಾ ಹೋಗಿಬಿಟ್ಟಿದ್ದಾನೆ ಭಾಟಿಯಾ ಬಳಿ.

ಬಂದವನೇ, ಎದುರಲ್ಲಿ ನಿಂತು, 'ನಿನಗೆ Ash ಬೇಕಾ??'  ಅಂತ ಕೇಳಿದ್ದಾನೆ. ಒಮ್ಮೆಲೇ ಹಾಗೆ ಕೇಳಿದ್ದು ಸಬೀರ್ ಭಾಟಿಯಾಗೆ ಅದೆಷ್ಟು ಅರ್ಥವಾಯಿತೋ ಏನೋ ಗೊತ್ತಿಲ್ಲ. ಅವನು ಉತ್ತರಿಸುವ ಮೊದಲೇ ಸಲ್ಮಾನ್ ಖಾನ್ ಒಂದು ಖತರ್ನಾಕ್ ಕೆಲಸ ಮಾಡಿಬಿಟ್ಟಿದ್ದಾನೆ. ತಾನು ಸೇದುತ್ತಿದ್ದ ಸಿಗರೇಟ್ ಬಾಯಿಂದ ತೆಗೆದು, ಅದನ್ನು ಕುಡುಗಿ, ಸಬೀರ್ ಭಾಟಿಯಾ ಕೈಮೇಲೆ ಬೂದಿ (ash) ಉದುರಿಸಿದ್ದಾನೆ. ಖತರ್ನಾಕ್ ಡೈಲಾಗ್ ಹೊಡೆದಿದ್ದಾನೆ. 'Ash ಬೇಕು ಅಂದಿದ್ದೆಯೆಲ್ಲ? ತಗೋ Ash,' ಅಂದವನೇ ನಿಗಿನಿಗಿ ಉರಿಯುತ್ತಿದ್ದ ಸಿಗರೇಟನ್ನು ಸಬೀರ್ ಭಾಟಿಯಾನ ಅಂಗೈ ಮೇಲೆ ಒತ್ತಿಬಿಟ್ಟಿದ್ದಾನೆ. ಶಿವಾಯ ನಮಃ! ಭಾಟಿಯಾನ ಅಂಗೈ ಎಷ್ಟು ಸುಟ್ಟಿತೋ, ಎಷ್ಟು ಉರಿಯಿತೋ ಗೊತ್ತಿಲ್ಲ. ಚುರುಕ್ ಅಂದು ಕೈ ಹಿಂದೆಳೆದುಕೊಂಡಿದ್ದರೆ ಅಷ್ಟರ ಮಟ್ಟಿಗೆ ಬಚಾವ್. ತಾನು ಬಾಲಿವುಡ್ಡಿನ ಮಹಾ ದೊಡ್ಡ ಉಡಾಳ ಅಂತ ಸಲ್ಮಾನ್ ಮತ್ತೊಮ್ಮೆ ಸಾಬೀತು ಪಡಿಸಿದ್ದಾನೆ.

ಇದಾದ ನಂತರ ಮಾತ್ರ ಸಬೀರ್ ಭಾಟಿಯಾ ಐಶ್ವರ್ಯಾ ಸುದ್ದಿಗೆ ಹೋದ ಮಾಹಿತಿ ಇಲ. ಮೊದಲ ಸಲ ಭೆಟ್ಟಿಯಾದ ಸಲ್ಲೂ ಮಿಯಾ ಕೇವಲ ಕೈಯನ್ನು ಸುಟ್ಟು ಹೋದ. ಮುಂದಿನ ಸಲ ಮತ್ತೇನನ್ನಾದರೂ ಸುಟ್ಟುಬಿಟ್ಟರೆ ಕಷ್ಟ ಅಂದುಕೊಂಡು ಸುಮ್ಮನಾಗಿರಬೇಕು. ಅವರು Ash ಹುಚ್ಚನ್ನು ಅಷ್ಟಕ್ಕೇ ಬಿಟ್ಟು ಬೇರೆ ಯಾರೋ ಹಕ್ಕಿಗೆ ಕಾಳು ಹಾಕಲು ಹೋಗಿರಬೇಕು.

ಇವತ್ತು ಯಾವದೋ ಒಂದು ಹಳೆ ಇಂಟರ್ನೆಟ್ ಲಿಂಕಲ್ಲಿ ಈ ಸುದ್ದಿ ಸಿಕ್ಕಿತು. ಇಲ್ಲಿದೆ ನೋಡಿ ಆ ಲಿಂಕ್ - Sabeer Bhatia's got Ash on his hands.

ನಂತರ ಸಬೀರ್ ಭಾಟಿಯಾ ವಿವಾಹ ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಗೀತಾ ಒಬೆರೊಯ್ ಅನ್ನುವ ವಕೀಲೆ ಒಬ್ಬಳ ಜೊತೆಗೆ ನಿಶ್ಚಯವಾಗಿತ್ತು. ಆಗಲಿಲ್ಲ. ಮುರಿದುಬಿತ್ತು. ನಂತರ ಆಯುರ್ವೇದ ಔಷಧಗಳನ್ನು ತಯಾರು ಮಾಡುವ ಬೈದ್ಯನಾಥ ಕಂಪನಿಯ ಬಹು ಕೋಟ್ಯಾಧಿಪತಿ ಮಾಲೀಕರ ಮಗಳು ಟೀನಾರನ್ನು ವಿವಾಹವಾಗಿದ್ದಾರೆ ಅಂತ ಓದಿದ ನೆನಪು. ಈಗ ಅದು ಮುಗಿದು, ಡೈವೋರ್ಸಿನಲ್ಲಿ ಅಂತ್ಯ ಕಂಡು, ಸಬೀರ್ ಭಾಟಿಯಾ ಮತ್ತೆ ಬ್ಯಾಚುಲರ್.

ಐಶ್ ಕೂಡ ಸಲ್ಮಾನ್ ಖಾನನಿಂದ ದೂರವಾದರು. ಕೆಲಕಾಲ ನಟ ವಿವೇಕ್ ಒಬೆರೊಯ್ ಜೊತೆ ಅವರ ಹೆಸರು ಕೇಳಿಬಂತು. ನಂತರ ಎಲ್ಲರಿಗೂ ತುಂಬಾ ಆಶ್ಚರ್ಯವಾಗುವಂತೆ ಅಮಿತಾಭ್ ಬಚ್ಚನ್ನರ ಮಗ ಅಭಿಷೇಕ್ ಬಚ್ಚನ್ನರನ್ನು ಮದುವೆಯಾಗಿಬಿಟ್ಟರು. ವಿವೇಕ್ ಒಬೆರೊಯ್ ಕರ್ನಾಟಕದ ಕಲರ್ಫುಲ್ ಮಾಜಿ ರಾಜಕಾರಣಿ ದಿವಂಗತ ಜೀವರಾಜ್ ಆಳ್ವಾರ ಮಗಳನ್ನು ಮದುವೆಯಾದ. ಸಲ್ಮಾನ್ ಮಾತ್ರ ಅಜನ್ಮ ಬ್ರಹ್ಮಚಾರಿ ಹನುಮಾನನ ಭಕ್ತ. ಸಲ್ಮಾನ್, ಹನುಮಾನ್ ಮಸ್ತ ಪ್ರಾಸಬದ್ಧ ಕಾಂಬೋ. ಈಗ ಅವನು ಐವತ್ತರ ಮೇಲೆ ವಯಸ್ಸಾದ most eligible bachelor. ಅಂತವರಿಗೆಲ್ಲ ಬ್ರಹ್ಮಚಾರಿ ಅಂದರೆ ಖಡಕ್ ಬ್ರಹ್ಮಚಾರಿಗಳು ಎದ್ದು ಬಂದು ಎದೆಗೆ ಎಗಾದಿಗಾ ಒದ್ದುಬಿಟ್ಟಾರು. ಮಾಜಿ ಪ್ರಧಾನಿ ವಾಜಪೇಯಿ ಕೂಡ ತಾವು ಅವಿವಾಹಿತ ಮಾತ್ರ ಬ್ರಹ್ಮಚಾರಿ ಅಲ್ಲ ಅಂತಲೇ ಹೇಳಿಕೊಳ್ಳುತ್ತಿದ್ದರು ಅಂತ ಓದಿದ ನೆನಪು. ಖಡಕ್ ಬ್ರಹ್ಮಚರ್ಯದ ಡೆಫಿನಿಷನ್ ಈಗಿನ ಯಾವ ಅವಿವಾಹಿತರಿಗೂ, ಸಂಸಾರಸ್ಥರಿಗೂ ಅನ್ವಯವಾಗಲಿಕ್ಕಿಲ್ಲ. ಹಾಗೆ ನೋಡಿದರೆ ಬ್ರಹ್ಮಚರ್ಯ ಅನ್ನುವದು ಒಂದು elusive concept. ಕೇವಲ ದೇಹದ ಶುದ್ದಿಗೆ ಮಾತ್ರ ಸಂಬಂಧಿಸಿದ್ದಲ್ಲ ಅದು. ಚಿತ್ತ ಶುದ್ದಿಗೆ ಹೆಚ್ಚು ಮಹತ್ವ ಬ್ರಹ್ಮಚರ್ಯದಲ್ಲಿ. ಹಾಗಾಗಿ ಗೃಹಸ್ಥಾಶ್ರಮ ಸ್ವೀಕರಿಸಿ, ಅದನ್ನು ಶಾಸ್ತ್ರೋಕ್ತವಾಗಿ ಪಾಲಿಸುತ್ತ, ಅತಿ ಕಟ್ಟುನಿಟ್ಟಾಗಿ ಸಂಸಾರ ಮಾಡಿಕೊಂಡಿರುವವರಿಗೇ ಅದು ಅನ್ವಯವಾಗುವ ಚಾನ್ಸ್ ಜಾಸ್ತಿ ಅಂತ ತಿಳಿದವರು ಹೇಳುತ್ತಾರೆ. ಅಂತಹ ಗೃಹಸ್ಥರೂ ಬಹಳ ಕಮ್ಮಿ. ಹಾಗಾಗಿ ಹೆಚ್ಚಿನ ಮಂದಿ, ಸಂಸಾರಸ್ಥರೇ ಇರಬಹುದು, ಸಂಸಾರ ಇಲ್ಲದವರೇ ಇರಬಹುದು, non-ಬ್ರಹ್ಮಚಾರಿಗಳೇ. ಕನ್ನಡದ ಹಾಸ್ಯ ಬರಹಗಾರ ಎಮ್. ಪಿ. ಮನೋಹರ್ ಚಂದ್ರನ್ ತುಂಬಾ ಹಿಂದೆ ಎಲ್ಲೋ ಬರೆದುಕೊಂಡಿದ್ದರು. ಅರ್ಥ ಹೀಗಿತ್ತು. ಕೆಲವರು ಮಾತ್ರ ಬ್ರಹ್ಮಚಾರಿಗಳು. ಹೆಚ್ಚಿನವರು 'ಬ್ರಾ'ಹ್ಮಚಾರಿಗಳು!

ಸಬೀರ್ ಭಾಟಿಯಾ ಕೂಡ ನಾವು ಓದಿದ BITS, Pilani ವಿಶ್ವವಿದ್ಯಾಲಯದಲ್ಲೇ ಇಂಜಿನಿಯರಿಂಗ್ ಪದವಿಗೆ ಅಭ್ಯಾಸ ಶುರು ಮಾಡಿದ್ದರು. ಅವರದ್ದು ೧೯೮೬ - ೧೯೯೦ ರ ಬ್ಯಾಚ್. ತುಂಬಾ ಬುದ್ಧಿಶಾಲಿ, ಮೇಧಾವಿಯಾಗಿದ್ದ ಅವರು ಪಿಲಾನಿಯಲ್ಲಿ ಎರಡು ವರ್ಷ ಓದಿದ ನಂತರ ಇಡೀ ಜಗತ್ತಿನಲ್ಲೇ ನಂಬರ್ ಒನ್ ಇಂಜಿನಿಯರಿಂಗ್ ವಿಶ್ವವಿದ್ಯಾಲಯ ಅಂತ ಖ್ಯಾತಿ ಗಳಿಸಿರುವ ಅಮೇರಿಕಾದ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ  (Caltech) ಪ್ರವೇಶ ಪಡೆದುಕೊಂಡು, ಅಲ್ಲಿಗೆ ವರ್ಗಾವಣೆ ಮಾಡಿಸಿಕೊಂಡು, ತಮ್ಮ ಇಂಜಿನಿಯರಿಂಗ್ ಪದವಿಯನ್ನು ಅಲ್ಲಿಂದ ಮುಗಿಸಿದರು. ಅದು ಅತ್ಯಂತ ಮಹಾನ್ ಸಾಧನೆ ಅಂತಲೇ ಹೇಳಬಹುದು. ಆ ತರಹದ ಅಂತರಾಷ್ಟ್ರೀಯ ವರ್ಗಾವಣೆಗಳು, ಅದೂ Caltech ನಂತಹ ಅತ್ಯುನ್ನತ ಸಂಸ್ಥೆಗಳಿಗೆ, ಭಾರತೀಯ ವಿದ್ಯಾರ್ಥಿಗಳಿಗೆ ಸಿಗುವದು ತುಂಬಾ ತುಂಬಾ ವಿರಳ. ಆಕಸ್ಮಾತ ಸಿಕ್ಕಿತು, ಅದೂ ಪೂರ್ಣ ಶಿಷ್ಯವೇತನದೊಂದಿಗೆ ಸಿಕ್ಕಿತು, ಅಂದರೆ ಆ ವಿದ್ಯಾರ್ಥಿ ವಿಶ್ವದ ಅತಿ ದೊಡ್ಡ ಮೇಧಾವಿಗಳಲ್ಲಿ ಒಬ್ಬನಾಗಿರಲೇಬೇಕು. Must be within the top 1-2 % in the whole world among his / her  peers. ಆಯ್ಕೆಯ ಅರ್ಹತೆ ಇಷ್ಟು ಕಠಿಣವಿದ್ದಾಗ, ಅದನ್ನು ಪಡೆದುಕೊಂಡ ಸಬೀರ್ ಭಾಟಿಯಾ ಯಾವ ಮಟ್ಟದ ಮೇಧಾವಿಯಾಗಿರಬಹುದು ಅಂತ ವಿಚಾರ ಮಾಡಿ.

BITS, Pilani ಯಲ್ಲಿ ನಮ್ಮದು ೧೯೯೦ - ೧೯೯೪ ಬ್ಯಾಚ್. ಸಬೀರ್ ಭಾಟಿಯಾ ಅವರ ಕೆಲವು ಸಹಪಾಠಿಗಳು ನಮಗೆ ಸೂಪರ್ ಸೀನಿಯರ್ ರೂಪದಲ್ಲಿ ಇದ್ದರು. ಅವರೆಲ್ಲ ಭಾಟಿಯಾ ಜೊತೆಗೆ ೧೯೮೬ ರಲ್ಲಿ ಓದು ಶುರು ಮಾಡಿಕೊಂಡಿದ್ದರು. ಕೆಲವರು dual ಡಿಗ್ರಿ ಮಾಡುತ್ತಿದ್ದರಿಂದ ಅವರ ಶಿಕ್ಷಣ ಐದು ವರ್ಷದ್ದಾಗಿತ್ತು. ಹಾಗಾಗಿ ನಾವು ೧೯೯೦ ರಲ್ಲಿ ಸೇರಿಕೊಂಡಾಗ ಅವರೆಲ್ಲ ಅಲ್ಲೇ ಇದ್ದರು. ಅಂತಿಮ ವರ್ಷದಲ್ಲಿ ಓದುತ್ತಿದ್ದರು. ನನ್ನ ಹಿರಿಯ ಸಹೋದರ ಕೂಡ Caltech ನಲ್ಲಿಯೇ ಓದು ಮುಗಿಸಿದ್ದ. ರಾಗಿಂಗ್ (ragging) ಸಮಯದಲ್ಲಿ ಸೀನಿಯರ್ ಹುಡುಗರಿಗೆ intro ಅಂದರೆ ವಯಕ್ತಿಕ ಪರಿಚಯ ಒಪ್ಪಿಸುತ್ತಿದ್ದಾಗ, 'ನನ್ನ ಅಣ್ಣ ಕೂಡ ಪ್ರತಿಷ್ಠಿತ Caltech ನಲ್ಲಿ ಓದಿದ್ದಾನೆ,' ಅಂತ ಸಹಜವಾಗಿ ಹೇಳಿದಾಗ, ಸೀನಿಯರ್ ಹುಡುಗರು, 'ಓಹೋ! ಹಾಗೇನು? ನಮ್ಮ ಜೊತೆ ಕೂಡ ಒಬ್ಬ ಇದ್ದ. ಸಬೀರ್ ಭಾಟಿಯಾ ಅಂತ. ಎರಡು ವರ್ಷಗಳ ನಂತರ ವರ್ಗಾವಣೆ ಸಿಕ್ಕಿತು. ಅದೇ Caltech ಗೇ ಹೋದ. He was a genius!' ಅಂತ ಹೇಳುತ್ತಿದ್ದರು. ಆದರೆ ಆಗ ಭಾಟಿಯಾ ಅಷ್ಟು ಫೇಮಸ್ ಆಗಿರಲಿಲ್ಲ. ಯಾಕೆಂದರೆ Hotmail ಕಂಪನಿಯನ್ನು ಇನ್ನೂ ಸ್ಥಾಪಿಸಿರಲಿಲ್ಲ. ಮುಂದೆ ಅವರು Hotmail ಕಂಪನಿಯನ್ನು ಸ್ಥಾಪಿಸಿ, ದೊಡ್ಡ ಮಟ್ಟದಲ್ಲಿ ಬೆಳೆಸಿ, ಬೇಕು ಅಂದವರಿಗೆಲ್ಲ ಬೇಕು ಅಂದಷ್ಟು ಇಮೇಲ್ ಐಡಿಗಳನ್ನು ಪುಕ್ಕಟೆ ದಯಪಾಲಿಸಿದರು. ನಾವೆಲ್ಲಾ ಇಮೇಲ್ ಬಳಕೆ ಶುರು ಮಾಡಿದ್ದೇ Hotmail ಉಪಯೋಗಿಸಿಕೊಂಡು. ಅದೂ ೧೯೯೭ ರಲ್ಲಿ ಅಮೇರಿಕಾಗೆ ಬಂದ ಮೇಲೆ. ನಂತರ ಮೈಕ್ರೋಸಾಫ್ಟ್ ಕಂಪನಿ Hotmail ನ್ನು ಖರೀದಿ ಮಾಡಿದ ನಂತರ ತನ್ನ ದುರ್ಬುದ್ಧಿಯನ್ನು ಯಥಾ ಪ್ರಕಾರ ತೋರಿಸಿತು. Hotmail ಕೇವಲ ಅವರ Internet Explorer ಎಂಬ ವೆಬ್ ಬ್ರೌಸರ್ ನಲ್ಲಿ ಮಾತ್ರ ಸರಿಯಾಗಿ ಕೆಲಸ ಮಾಡುವಂತೆ ಅದನ್ನು ತಿರುಪಿಟ್ಟಿದ್ದರು. Netscape, Firefox ಮುಂತಾದ ಬ್ರೌಸರ್ ಗಳನ್ನು ಇಷ್ಟಪಡುವ ನಮ್ಮಂತವರಿಗೆ ಅದರಲ್ಲಿ Hotmail ಉಪಯೋಗಿಸಬೇಕು ಅಂದರೆ ಸಿಕ್ಕಾಪಟ್ಟೆ ಕಿರಿಕಿರಿ. ಅದೇ ಹೊತ್ತಿಗೆ ಗೂಗಲ್ ಕಂಪನಿಯ GMail ಬಂತು. ಬೇರೆ ಎಲ್ಲ ಉಚಿತ ಇಮೇಲ್ ಸೇವೆಗಳಿಗಿಂತ GMail ಸಾವಿರ ಪಟ್ಟು ಉತ್ತಮ ಅನ್ನಿಸಿತು. ಹಾಗಾಗಿ Hotmail ಗೆ ಸುಮಾರು ಹದಿಮೂರು - ಹದಿನಾಲ್ಕು ವರ್ಷಗಳ ನಂತರ ದೊಡ್ಡ ನಮಸ್ಕಾರ ಹಾಕಿ ಹೊರಗೆ ಬಂದೆವು.

Caltech ವಿಶ್ವವಿದ್ಯಾಲಯ ಅಂದಾಗ ನೆನಪಿಗೆ ಬರುವ ಮತ್ತೊಬ್ಬರು ಅಂದರೆ ಡಾ. ಶ್ರೀನಿವಾಸ ಕುಲಕರ್ಣಿ. ಮೂಲತಃ ಹುಬ್ಬಳ್ಳಿಯವರು. ವಿಶ್ವದ ಅತಿ ಶ್ರೇಷ್ಠ ಖಗೋಲ ಭೌತವಿಜ್ಞಾನಿಗಳಲ್ಲಿ (astrophysicist) ಒಬ್ಬರು. ಅವರೂ ಸಹ Caltech ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಧ್ಯಾಪಕರು. ಈ ಕುಲಕರ್ಣಿ ಯಾರು ಅಂದರೆ ಇನ್ಫೋಸಿಸ್ ಸ್ಥಾಪಕ ನಾಣಿ ಮಾಮಾ ಉರ್ಫ್ ನಾರಾಯಣ ಮೂರ್ತಿಗಳ ಪತ್ನಿ ಸುಧಾ ಮೂರ್ತಿಯವರ ಖಾಸಾ ಸಹೋದರ. ಇನ್ಫಿ ನಾರಾಯಣ ಮೂರ್ತಿ ನಮಗೆ ಅದೆಷ್ಟು ಇಷ್ಟ ಅಂದರೆ ಅವರ ವಯಕ್ತಿಕ ಪರಿಚಯವಿಲ್ಲದಿದ್ದರೂ ಅವರ ಸರಳತೆ, ಮುಗ್ಧತೆ, ಆ ನಯ ವಿನಯಗಳಿಂದ ಅವರು ನಮಗೆ ನಾಣಿ ಮಾಮಾ ಅಂತಲೇ ಆಪ್ತರೆನಿಸುತ್ತಾರೆ. ಮತ್ತೆ ಅವರ ಪತ್ನಿ ಸುಧಾ ಹುಬ್ಬಳ್ಳಿ - ಧಾರವಾಡದವರಾಗಿದ್ದರಿಂದ ನಾಣಿ ಮಾಮಾ ಕೂಡ ನಮ್ಮವರೇ.

ನೆನಪುಗಳೇ ಹೀಗೆ. ಎಲ್ಲೋ ಶುರುವಾಗಿದ್ದು ಈ ಬ್ಲಾಗ್ ಲೇಖನ. ಒಬ್ಬ ಸಬೀರ್ ಭಾಟಿಯಾ ನೆನಪಾಗಿ ಎಲ್ಲೆಲ್ಲೋ ಹೋಗಿಬಿಟ್ಟಿತು.

Monday, October 19, 2015

ಚಡ್ಯಾಗ ಏನೈತಿ? ಅಂಥಾದ್ದೇನೈತಿ?

ಈಗಂತೂ ಎಲ್ಲಾ ಕಡೆ ಬರೇ ಚಡ್ಡಿದೇ ಸುದ್ದಿ. ಯಾರರ ಮೇಲೆ ಕೇಸ್ ಹೆಟ್ಟಬೇಕು ಅಂದ್ರ ನಿಮ್ಮ ಕಡೆ ಏನಿಲ್ಲದಿದ್ದರೂ ಚಡ್ಡಿ ಮಾತ್ರ ಇರಬೇಕು ನೋಡ್ರಿ. ಬಡ್ಡಿಮಕ್ಕಳ ಕಾಲ ಮುಗಿತು. ಈಗ ಚಡ್ಡಿಮಕ್ಕಳ ಕಾಲ. ಚಡ್ಡಿಯಲ್ಲಿ ಕಡ್ಡಿಯಿರುವ 'ಕಡ್ಡಿ'ಮಕ್ಕಳಿಗೆ ಉರ್ಫ್ ಗಂಡುಮಕ್ಕಳಿಗೆ ಮಾತ್ರ ಕೆಟ್ಟಕಾಲ. ಎಲ್ಲಿಂದ, ಯಾರು, ಯಾವ ಚಡ್ಡಿ ತೋರಿಸಿ ಎಂತಹ ಕೇಸ್ ಜಡಿಯುತ್ತಾರೋ ಅಂತ ಹೇಳಲಿಕ್ಕೆ ಸಾಧ್ಯವಿಲ್ಲ. 

'ಚಡ್ಡಿ ಮಹಾತ್ಮೆ' ಹೀಂಗ ಇರಬೇಕಾದ್ರ ಒಮ್ಮೆ ಧಾರವಾಡದಾಗ ಜವಾರಿ ಮಂದಿ ತಲಿಕೆಡಿಸಿಕೊಂಡ್ರಂತ, 'ಅವನೌನ್! ಎಲ್ಲರೂ ಈ ಪರಿ ಚಡ್ಡಿ ತೋರಿಸಿ ತೋರಿಸಿ, ಹೆದರಿಸಿ, ಕಂಪ್ಲೇಂಟ್ ಜಡಿಯಾಕತ್ತಾರು. ಅಂದ ಮ್ಯಾಲೆ ಚಡ್ಯಾಗ ಏನೈತಿ? ಅಂಥಾದ್ದೇನೈತಿ? ಸೀರಿ ಒಳಗ ಇಲ್ಲದ್ದು. ಪರಕಾರ ಒಳಗ ಸಿಗದಿದ್ದು. ಪೋಲಕಾ ಒಳಗ ಕಾಣದ್ದು. ಜಂಪರ್ ಒಳಗ ದಕ್ಕದ್ದು. ಅಂಥಾದ್ದೇನೈತಿ? ಚಡ್ಯಾಗ ಏನೈತಿ?' ಅಂತ ಗುರ್ರಾಜ ಹೊಸಕೋಟಿ ಗತೆ, 'ಏನೈತಿ? ಒಳಗ ಏನೈತಿ? ಧಾರವಾಡದಾಗ ಇಲ್ಲದ್ದು. ಹುಬ್ಬಳ್ಳಿಯಾಗ ಸಿಗದ್ದು. ಗದಗದಾಗ ದೊರಕದ್ದು. ರೋಣದಾಗ ಇಲ್ಲದ್ದು. ಏನೈತಿ? ಉಣ್ಣಾಕ ಏನೈತಿ? ತಿನ್ನಾಕ ಏನೈತಿ?' ಅಂತ 'ಮಹಾ ಕ್ಷತ್ರಿಯ' ಚಿತ್ರದ ಹಾಡನ್ನು ಹಾಡಿ ಹಾಡಿ ಅವರನ್ನು ಅವರೇ ಕೇಳಿಕೊಂಡರಂತೆ.

'ಚಡ್ಯಾಗ ಡಿಎನ್ಎ ಇರತೈತಿ. ಹುಡುಕಿದರೆ ಸಿಗತೈತಿ,' ಅಂದ ಒಬ್ಬವ.

'ಏ, ಹಾಪ್ ಸೂಳಿಮಗನ! ಚಡ್ಯಾಗ ಡಿಎನ್ಎ ಬಿಟ್ಟು ಇನ್ನೂ ಭಾಳ ಭಾಳ ಸ್ಯಾಂಪಲ್ ಇರ್ತಾವ. ಚರ್ಮದ್ದು, ಕೂದಲದ್ದು, ಬೆವರಿಂದು, ರಕ್ತದ್ದು. ಅವನ್ನೆಲ್ಲ ಪೊಲೀಸರು ತೊಗೊಂಡು ಹೋಗಿ, ಪರೀಕ್ಷಾ ಮಾಡಿಸಿ ಕೇಸ್ ಹೆಟ್ಟತಾರ. ಗೊತ್ತೈತಿ???' ಅಂತ ಮತ್ತೊಬ್ಬವ ಅಂದ. ಏನೋ ಮರ್ತೆ ಅಂತ ಅವನೇ ಮತ್ತೆ ನೆನಪು ಮಾಡಿಕೊಂಡು, 'ಯಾರರೆ ನಿನ್ನಂತಾ ಹಲಕಟ್ ಎಲ್ಲರೆ ಚಡ್ಡಿ ಮ್ಯಾಲೆ ಇಂಜಿನ್ ಆಯಿಲ್ ಮಸ್ತಾಗಿ ಬಿಟ್ಟು ಬಂದಿದ್ದ ಅಂದ್ರ ಇಂಜಿನ್ ಎಣ್ಣಿ ಕಲಿನೂ ಇರತೈತಿ. ರಟ್ಟಿನ ಗತೆ ಆಗಿ ಕುಂತಿರತೈತಿ ಅಂತ ಕಾಣಸ್ತೈತಿ,' ಅಂದು ವಿಕಾರವಾಗಿ ನಕ್ಕ. ಮಷ್ಕಿರಿ ಸೂಳಿಮಕ್ಕಳು!

ನಮ್ಮ ಬಸು ಉರ್ಫ್ ಬಸವರಾಜ ಪಾಪ ಸ್ವಲ್ಪ ಲೇಟ್ ಆಗಿ ಹರಟಿ ಮಂಡಳಿ ಸೇರಿಕೊಂಡ. ಅವಂಗ ಏನೂ ಹಿನ್ನೆಲೆ ಗೊತ್ತೇ ಇಲ್ಲ. ಬರೆ ಇಷ್ಟೇ ಕೇಳಿಸಿಕೊಂಡಾನ, 'ಚಡ್ಯಾಗ ಏನೈತಿ? ಅಂಥಾದ್ದೇನೈತಿ?' ಅಷ್ಟೇ ವಿಷಯ ಅವನ ತಲಿಯಾಗ ಇಳಿದೈತಿ.

ಬಡ್ಡ  ತಲಿ ಮಬ್ಬ ಬಸೂಗ ಇರು ಒಂದೇ ಚಟಾ ಅಂದ್ರ ಕಂಡಲ್ಲಿ ಇಡೋದು. 'ನಂದೂ ಇಡ್ಲಿ?' ಅಂತ ಎಲ್ಲಾ ಕಡೆ 'ಇಟ್ಟೆ, ಇಟ್ಟೆ' ಅಂತ ಅನಕೋತ್ತ ಅಡ್ಯಾಡತಾನ ಹಾಪ್ ಬಸು.

ಇಲ್ಲೆ ಬ್ಯಾರೆ 'ಚಡ್ಯಾಗ ಏನೈತಿ?' ಅನ್ನೋ ವಿಷಯದ ಮ್ಯಾಲೆ ಭಾಳ ಮಹತ್ವದ ಅಧಿವೇಶನ ನಡದೈತಿ. ಹಾಂಗಿದ್ದಾಗ ಬಸು ತನ್ನ ಅಮೂಲ್ಯವಾದ ಸಂಶೋಧನೆಯನ್ನು ಮಂಡಿಸಲಿಲ್ಲ ಅಂದ್ರ ಹ್ಯಾಂಗ??? ಮಂಡಿಸಲಿಕ್ಕೇ ಬೇಕು.

'ಲೇ, ನಿಮ್ಮೌರ್! ನನಗ ಗೊತ್ತೈತಿ!' ಅಂದ ಬಸು.

'ಏನ ಗೊತ್ತೈತಲೇ ನಿನಗ ಬಸ್ಯಾ??' ಅಂತ ಕೇಳ್ಯಾರ ಎಲ್ಲರೂ.

'ಚಡ್ಯಾಗ ಏನೈತಿ, ಏನಿರತೈತಿ ಅಂತ ಬರೋಬ್ಬರಿ ಗೊತ್ತೈತಿ ನನಗ,' ಅಂದುಬಿಟ್ಟ ಬಸು. ಗುಂಡು ಹೊಡೆದಂಗ ಹೇಳ್ಯಾನ.

'ಚಡ್ಯಾಗ ಏನಿರತೈತಿ?? ಹೇಳು ನೋಡೋಣ,' ಅಂತ ಚಾಲೆಂಜ್ ಒಗೆದಾರ ದೋಸ್ತರು.

'ಮತ್ತೇನು ಇರತೈತ್ರೋ ನಿಮ್ಮಾಪರಾ!? ಎಲಾಸ್ಟಿಕ್ (elastic) ಇರತೈತಿ!' ಅಂದುಬಿಟ್ಟಾನ ಬಸು.

ಎಲ್ಲಾರೂ ಧಾರವಾಡದ KUD ಪಾರ್ಕಿನ ಹಳದಿ ಸಿಂಹದ ಮೂರ್ತಿ ಗತೆ ಇಷ್ಟು ದೊಡ್ಡ ಬಾಯಿ ಬಿಟ್ಟು, 'ಹ್ಯಾಂ???!!' ಅಂದು ಬೆಕ್ಕಸ ಬೆರಗಾಗಿಬಿಟ್ಟಾರ.

ಈ ದೋಸ್ತ ಮಬ್ಬ ಸೂಳಿಮಕ್ಕಳಿಗೆ ತಾನು ಹೇಳಿದ ಉತ್ತರ ಬರೋಬ್ಬರಿ ತಿಳಿದಿಲ್ಲ ಅಂತ ಗೊತ್ತಾದ ಬಸು clarification ಕೊಟ್ಟಾನ.

'ಮತ್ತೇನ್ರೋ!? ಚಡ್ಯಾಗ ಎಲಾಸ್ಟಿಕ್ ಇಲ್ಲದೇ ಮತ್ತೇನು ಇರಾಕ ಸಾಧ್ಯ? ಈಗ ಕಸಿ, ಲಾಡಿ ಇರೋ ಚಡ್ಡಿ ಯಾರೂ ಹಾಕೋದಿಲ್ಲಪಾ. ಹಾಂಗಾಗಿ ಈಗಿನ ಚಡ್ಯಾಗ ಎಲಾಸ್ಟಿಕ್ ಮಾತ್ರ ಇರತೈತಿ,' ಅಂದು, 'ಹ್ಯಾಂಗೈತಿ ನನ್ನ ಉತ್ತರ!!??' ಅಂತ ಲುಕ್ ಕೊಟ್ಟಾನ.

ಶುದ್ಧ ಲಾಡಿ, ಕಸಿ ಇದ್ದ ಪಟ್ಟಾಪಟ್ಟಿ ಚಡ್ಡಿ ಹಾಕ್ಕೊಂಡು ಕುಂತ ಧಾರವಾಡದ ಜವಾರಿ ಮಂದಿಯೆಲ್ಲ ಬಸೂನ್ನ ಅಲ್ಲೇ ಹಾಕಿಕೊಂಡು ಮಲಗಿಸಿ ಮಲಗಿಸಿ ಬಡದಾರ. ಉಳ್ಳಾಡಿಸಿ, ಉಳ್ಳಾಡಿಸಿ ಕಟದಾರ.

ಆಪರಿ ನಾದಿಸ್ಕೋತ್ತ ಬಸು ಒಂದೇ ಸವನೇ ಒಂದೇ ಮಾತು ಹೊಯ್ಕೊಳ್ಳಾಕತ್ತಾನ.....

'ನಿಮ್ಮೌರ್ ನಾ ಹೇಳಿದ್ದು ಹೆಂಗಸೂರ ಚಡ್ಡಿ ಬಗ್ಗೆ! ನಿಮ್ಮಂತಾ ಜವಾರಿ ಗಂಡಸೂರ ಚಡ್ಡಿ ಬಗ್ಗೆ ಅಲ್ಲರೋ! ಹೆಂಗಸೂರ ಚಡ್ಯಾಗ ಎಲಾಸ್ಟಿಕ್ ಮಾತ್ರ ಇರತೈತ್ರೋ. ಲಾಡಿ ಇರಂಗಿಲ್ಲರೋ. ಲಾಡಿ ಚಡ್ಡಿ ಯಾವ ಹೆಂಗಸೂರೂ ಹಾಕ್ಕೊಳ್ಳಂಗಿಲ್ಲರೋ! ಅದರಾಗೂ ಕೇಸ್ ಜಡಿಯುವ ಮಂದಿ ಅಂತೂ ಸಾಧ್ಯನೇ ಇಲ್ಲರೋ!' ಅಂತ ಹೊಯ್ಕೊಂಡಾನ.

'ಏ, ಸಾಕ್ರಿಲೇ ಹೆಟ್ಟಿದ್ದು. ಸಾಕ್ರಿಲೇ ಗಜ್ಜು ಕೊಟ್ಟಿದ್ದು. ಸೊಂಟಾ ಮುರಿಬ್ಯಾಡ್ರಿಲೇ. ನಂದಿನ್ನೂ ಲಗ್ನಾ ಆಗಿಲ್ಲ,' ಅನ್ನುವವರೆಗೆ ದೋಸ್ತರು ಬಸೂನ್ನ ಹಾಕ್ಕೊಂಡು ನಾದಿಬಿಟ್ಟಾರ. ನಂತರ ನಿಲ್ಲಿಸಿದ್ದಾರೆ.

ಬಸು ಎದ್ದು ನಿಂತು, ಸ್ಥಾನ ಪಲ್ಲಟವಾಗಿದ್ದ ತನ್ನ ಲುಂಗಿ ಸರಿಮಾಡಿಕೊಳ್ಳುವಾಗ ಹೊರಗ ಹಣಿಕಿ ಹಾಕೈತಿ ಅವನ ಎಲಾಸ್ಟಿಕ್ ಇರುವ VIP ಚಡ್ಡಿ. ತಾವೆಲ್ಲ ಲಾಡಿಯಿರುವ ಪಟ್ಟಾಪಟ್ಟಿ ಚಡ್ಡಿ ಹಾಕಿರುವಾಗ ತಮಗಿಲ್ಲದಂತಹ ಎಲಾಸ್ಟಿಕ್ ಚಡ್ಡಿ ಹಾಕ್ಯಾನ ಈ ಬಸ್ಯಾ ಅಂತ ಸಿಟ್ಟಿಗೆದ್ದ ಜವಾರಿ ದಾಂಡಿಗರು ತಮ್ಮ ತಮ್ಮ ಪಟ್ಟಾಪಟ್ಟಿಯ ಕಸೆ ಲಾಡಿಗಳನ್ನು ಟೈಟ್ ಮಾಡಿಕೊಂಡವರೇ ಮತ್ತೊಮ್ಮೆ ಬಸ್ಯಾನ ಮೇಲೆ ಬೀಳಲಿಕ್ಕೆ ಬಂದರೆ.......

'ಶಿವಾಯ ನಮಃ!' ಅಂದ ಬಸ್ಯಾ ಮಾತ್ರ, 'ಇವರು 'ಚಡ್ಯಾಗ ಏನೈತಿ? ಏನು ಇರತೈತಿ?' ಅಂತ ತಲಿಕೆಡಿಸಿಕೊಂಡು ಕುಂತಿದ್ದರು. ಎಲಾಸ್ಟಿಕ್ ಇರತೈತಿ ಅಂದ್ರ ಇಷ್ಟ್ಯಾಕ ಖುನ್ನಸ್, ಸಿಟ್ಟು ?' ಅಂತ ವಿಚಾರ ಮಾಡುತ್ತ  ಅಲ್ಲಿಂದ ಎಸ್ಕೇಪ್. ಗ್ರೇಟ್ ಎಸ್ಕೇಪ್!

Sunday, October 18, 2015

ಪ್ರಮೋಷನ್!

'ಏ! ನನಗ ಪ್ರಮೋಷನ್ ಸಿಕ್ಕದ!' ಅಂತ ಸಂಜೆ ಮನೆಗೆ ಬಂದ ಗಂಡ ಒದರಿದ.

ಒಂದು ಮೋಷನ್ ಇಲ್ಲ, ಮ್ಯಾಲಿಂದ ಇಮೋಷನ್ ಅಂತೂ ಇಲ್ಲೇ ಇಲ್ಲ, ಸದಾ ಲೂಸ್ ಮೋಷನ್ ಮಾದರಿ ಮಾರಿ ಮಾಡಿಕೊಂಡಿರುವ ಗಂಡ ಒಮ್ಮೆಲೇ ಪ್ರಮೋಷನ್ ಸಿಕ್ಕಿದೆ ಅಂತ ಡಂಗುರ ಬಾರಿಸಿದ್ದನ್ನು ಕೇಳಿದ ಹೆಂಡತಿ ಥ್ರಿಲ್ಲಾಗಿ ಬಿಟ್ಟಳು.

'ಹೌದ್ರೀ??!! ಕಾಂಗ್ರಾಟ್ಸ್. ಏನಂತ ಪ್ರಮೋಷನ್ ಸಿಕ್ಕದರೀ???' ಅಂತ ಕೇಳಿದಳು. ಬಗ್ಗಿದಳು. ಬಗ್ಗಿ ಬಾರಿಸಲಿಕ್ಕೆ ಅಲ್ಲ. ಬಿಚ್ಚಲಿಕ್ಕೆ. ಅಯ್ಯೋ! ಬೂಟು ಬಿಚ್ಚಲಿಕ್ಕೆ. ಗಂಡನ ಬೂಟು ಬಿಚ್ಚಿದಳು. ಒಂದು ವಾರದಿಂದ ಬದಲಾಯಿಸದೇ ಇದ್ದ ಸಾಕ್ಸ್ ಘಂ! ಅಂತ ಸುವಾಸನೆ ಹೊಡೆಯಿತು. ಮುಚ್ಚಿಕೊಂಡು ಅಂದರೆ ಮೂಗು ಮುಚ್ಚಿಕೊಂಡು ಸಾಕ್ಸ್ ಬಿಚ್ಚದೇ ಮತ್ತೇನಾದರೂ ಬಿಚ್ಚಲೇ ಅಂತ ಬಿಚ್ಚೋಲೆ ಗೌರಮ್ಮನ ಲುಕ್ ಕೊಟ್ಟಳು. ಸೆಲ್ಫ್ ಸರ್ವಿಸ್ ಗಂಡ ಬೇಡವೆಂದ.

'ನನಗ ವೀಪಿ ಅಂತ ಪ್ರಮೋಷನ್ ಸಿಕ್ಕದ!' ಅಂದ.

'ಪೀಪಿ ರೀ?? ಅದೆಂತಾ ಪ್ರಮೋಷನ್ ರೀ?? ಪೀಪಿ ಅನ್ಕೋತ್ತ! ಹಾಂ!??' ಅಂದು ಹಾಪ್ ಚಹಾ ಮಾಡಲು ಹೊರಟಳು.

'ನಿಮ್ಮೌನ್! ನೀ ಖರೆ ಅಂದರೂ ಹೆಬ್ಬೆಟ್ ಛಾಪ್ ನೋಡು! ಪೀಪಿ ಅಲ್ಲ. ವೀಪಿ. ಅಂದ್ರ ವೈಸ್ ಪ್ರೆಸಿಡೆಂಟ್!' ಅಂತ ಹೇಳಿದ ಗಂಡ.

'ಹಾಂಗ್ರೀ??? ವೈಸ್ ಪ್ರೆಸಿಡೆಂಟ್. ಅಷ್ಟರೀ???' ಅಂತ ಕೇಳಿದಳು.

'ಬರೇ ವೈಸ್ ಪ್ರೆಸಿಡೆಂಟ್ ಅಲ್ಲ. ವೈಸ್ ಪ್ರೆಸಿಡೆಂಟ್ ಆಫ್ ಕಿರಾಣಿ ಸಾಮಾನು ಪ್ಯಾಕಿಂಗ್!' ಅಂತ ಹೇಳಿದ ಗಂಡ. ಹುಚ್ಚ ಸೂಳಿಮಗ ತೊರಗಲ್ಲಮಠನ ಅಂಗಡ್ಯಾಗ ಕಿರಾಣಿ ಸಾಮಾನು ಕಟ್ಟತಾನ. ಆ ತೊರಗಲ್ಲಮಠ ಇವಂಗ ವೀಪಿ ಅಂತ ಪ್ರಮೋಷನ್ ಕೊಟ್ಟನಂತ. ಚೌಕ್ ಗುಳಗಿ ಉಳಸಲಿಕ್ಕೂ ಒಂದು ಲಿಮಿಟ್ ಇರಬೇಕು ನೋಡ್ರಿ.

ಅಲ್ಲಿಗೆ ಅಂದಿನ ಮಾತುಕತೆ ಅಲ್ಲಿಗೆ ಮುಗಿದಿದೆ.

ಮರುದಿನ. ಗಂಡ ಮತ್ತೆ ಕೆಲಸಕ್ಕೆ ಹೋಗಿದ್ದಾನೆ. ಹೆಂಡತಿಗೆ ಮೂಡ್ ಬಂದುಬಿಟ್ಟಿದೆ. ಅಯ್ಯೋ! ಗಂಡನ ಜೋಡಿ ಮಾತಾಡೋ ಮೂಡ್ರಿ. ಮೂಡ್ ಅಂದ ಕೂಡಲೇ ನಿಮ್ಮ ಮಾರಿಯ ಮೂಡಣ ದಿಕ್ಕು ಯಾಕ 'ಕೆಂಪಾದವೋ ಎಲ್ಲ ಕೆಂಪಾದವೋ!' ಆಗಿಬಿಡ್ತು!? ಹೇ! ಛೀ! ನಿಮ್ಮ! ಬರೇ ಅದೇ ವಿಚಾರ.

ಮೂಡ್ ಬಂದಾಕಿ ಸೀದಾ ಹಚ್ಚೇಬಿಟ್ಟಾಳ. ಫೋನ್ ಹಚ್ಚಿಬಿಟ್ಟಾಳ. ತೊರಗಲ್ಲಮಠನ ಕಿರಾಣಿ ಅಂಗಡಿಗೆ.

'ಹಲೋ! ಹೇಳ್ರೀ ಸರ್ರಾ!' ಅಂದಾನ ಆಕಡೆ ಫೋನ್ ಎತ್ತಿದ ತೊರಗಲ್ಲಮಠ. ಆತನಿಗೆ ಯಾರೇ ಫೋನ್ ಮಾಡಿದರೂ ಅವರು ಸರ್ ರೇ. ಸರ್ರೆ ಜಹಾನ್ ಸೆ ಅಚ್ಛಾ! ಧಾರವಾಡ ಸಿತಾ ಹಮಾರಾ! ಸರ್ರೆ ಜಹಾನ್ ಸೆ ಅಚ್ಛಾ! 'ಸರ್ರಾ' ಅನ್ನುವದು ನಮ್ಮ ಊರಿನ ಶಾನ್, ಮಾನ್, ಮೆಹಮಾನ್, ರಹಮಾನ್, ಹನುಮಾನ್, ಸುಲೇಮಾನ್, ಸಲ್ಮಾನ್ ಎಲ್ಲ. ಎಲ್ಲರಿಗೂ 'ಸರ್ರಾ' ಅಂದುಬಿಡೋದು.

'ನನಗ ವೀಪಿ ಅಂದ್ರ ವೈಸ್ ಪ್ರೆಸಿಡೆಂಟ್ ಅವರ ಜೋಡಿ ಮಾತಾಡಬೇಕಾಗಿತ್ತರೀ,' ಅಂದಳು ಇಕಿ.

'ಯಾವ ವೀಪಿ? ಭಾಳ ಮಂದಿ ವೀಪಿ ಅದಾರು ನಮ್ಮ ಕಡೆ. ಮೊನ್ನೆ ಎಲ್ಲಾರನ್ನೂ ವೀಪಿ ಮಾಡಿಬಿಟ್ಟೇನಿ. ಹೋಲ್ಸೇಲಿನ್ಯಾಗ ವೀಪಿ ಮಾಡಿ ಒಗೆದು ಬಿಟ್ಟೇನು. ಹಾಳಾಗಿ ಹೋಗ್ಲಿ ಮಂಗ್ಯಾ ಸೂಳಿ ಮಕ್ಕಳು!' ಅಂತ ತೊರಗಲ್ಲಮಠ ಅಜ್ಜ ತನ್ನ ಎಂದಿನ ಭಾಷೆಯಲ್ಲಿ ಹೇಳಿದ್ದಾನೆ. ಕಿರಾಣಿ ತೊರಗಲ್ಲಮಠ ಅಜ್ಜಾರ ಭಾಷಾ ಅಂದ್ರ ಅಷ್ಟು ಸಿವಿ. ಅತ್ಲಾಗ ಸಿಹಿನೂ ಅಲ್ಲ. ಇತ್ಲಾಗ ಸವಿನೂ ಅಲ್ಲ. ಸಿವಿ!

ಫೋನ್ ಮಾಡಿದ್ದ ಹೆಂಡತಿ ಗೊಂದಲಕ್ಕೆ ಬಿದ್ದಿದ್ದಾಳೆ.

'ವೀಪಿ ಅಂತ ಪ್ರಮೋಷನ್ ಬಂದದ ಅಂತ ಹೇಳಿದ್ದರು. ಹಾಂ! ನೆನಪಾತು! ವೈಸ್ ಪ್ರೆಸಿಡೆಂಟ್ ಆಫ್ ಕಿರಾಣಿ ಸಾಮಾನು ಪ್ಯಾಕಿಂಗ್. ಅವರೇ ನಮ್ಮನಿಯವರು. ಅವರನ್ನ ಕರೀರಿ,' ಅಂದಾಳ.

'ನೋಡ ಬೇ ಯವ್ವಾ!' ಅಂದ ತೊರಗಲ್ಲಮಠ ಅಜ್ಜ ದೀರ್ಘವಾಗಿ ಎಳಕೊಂಡಾರ. ಅಯ್ಯೋ! ಉಸಿರು ಎಳಕೊಂಡಾರ ಅಂತ.

'ನಮ್ಮ ಕಡೆ ಇಬ್ಬರು ವೈಸ್ ಪ್ರೆಸಿಡೆಂಟ್ ಆಫ್ ಕಿರಾಣಿ ಸಾಮಾನು ಪ್ಯಾಕಿಂಗ್ ಅದಾರ. ಯಾರು ಬೇಕು ನಿನಗ? ನಿನ್ನ ಗಂಡ ಯಾರು???' ಅಂತ ಕೇಳಿದರು ಕಿರಾಣಿ ಕಿಂಗ್ ತೊರಗಲ್ಲಮಠ.

'ಇಬ್ಬರು ಇದ್ದಾರೇನ್ರೀ? ಯಾರ್ಯಾರು ಹೇಳ್ರೀ?' ಅಂದಳು ವೀಪಿ ಸಾಹೇಬನ ಪೀಪಿ ಹೆಂಡತಿ.

'ನೋಡವಾ ತಂಗಿ. ಒಬ್ಬ ಮಂಗ್ಯಾನಮಗನ್ನ ವೈಸ್ ಪ್ರೆಸಿಡೆಂಟ್ ಆಫ್ ಕಿರಾಣಿ ಸಾಮಾನು ಪ್ಯಾಕಿಂಗ್, ಪ್ಲಾಸ್ಟಿಕ್ ಚೀಲಾ. ಮತ್ತೊಬ್ಬವನ್ನ ವೈಸ್ ಪ್ರೆಸಿಡೆಂಟ್ ಆಫ್ ಕಿರಾಣಿ ಸಾಮಾನು ಪ್ಯಾಕಿಂಗ್, ಹಾಳಿ ಪುಡಕಿ ಅಂದ್ರ ಪೇಪರ್ ಪುಡಕಿ ಅಂತ ನೇಮಕ ಮಾಡೇನಿ. ನಿನ್ನ ಗಂಡ ಯಾವ ಪೀಪಿ??? ಛೀ.... ಅಲ್ಲಲ್ಲ ಯಾವ ವೀಪಿ??' ಅಂತ ವಿವರಿಸಿದ್ದಾರೆ ಕಿರಾಣಿ ಕಿಂಗ್ ತೊರಗಲ್ಲಮಠ.

ಈಕಡೆ ಇವಳಿಗೆ ತಿಳಿದೇ ಇಲ್ಲ. ಫುಲ್ confuse.

'ಅಂದ್ರ ಏನ್ರೀ? ತಿಳಿಲಿಲ್ಲ ನನಗ,' ಅಂದಿದ್ದಾಳೆ.

'ನೋಡವಾ ತಂಗಿ. ಈಗ ಧಂದಾದ ವೇಳ್ಯಾ. ನನ್ನ ಟೈಮ್ ಖೋಟಿ ಮಾಡಬ್ಯಾಡ. ನಿನ್ನ ಗಂಡ ಏನು ಹೇಳಿದ? ಅವನಾಪನss.... ಪ್ಲಾಸ್ಟಿಕ್ ಚೀಲದಾಗ ಸಾಮಾನು ಕಟ್ಟತಾನಂತೋ ಅಥವಾ ಹಾಳಿ ಒಳಗ ಪುಡುಕಿ ಕಟ್ಟಿಕೊಡ್ತಾನಂತೋ? ದೌಡ್ ಹೇಳ ಬೇ ತಂಗಿ! ಯಾವದರಾಗ ಸಾಮಾನು ಕಟ್ಟತಾನ ನಿನ್ನ ಗಂಡ? ಎಲ್ಲಾ ವೈಸ್ ಪ್ರೆಸಿಡೆಂಟ್ ಮಂದಿನೇ ಅದಾರು ನನ್ನ ಕಡೆ. ಅವನೌನ್! ಬೆಲ್ಲದ ಪೆಂಟಿ ಒಡೆಯೋ ಭಾಡ್ಕೋ ಸೂಳಿಮಗನ್ನೂ ವೈಸ್ ಪ್ರೆಸಿಡೆಂಟ್ ಮಾಡಿ ಒಗೆದುಬಿಟ್ಟೇನಿ,' ಅಂದ ತೊರಗಲ್ಲಮಠ ಅಜ್ಜ, 'ಏ, ವೀಪಿ ಆಫ್ ಹಾಳಿ ಪುಡ್ಕಿ, ಏ, ಬಸೂ, ಒಂದು ಕೇಜಿ ಗ್ವಾಡಂಬಿ, ಒಂದು ಕೇಜಿ ಮನೂಕಾ, ಒಂದು ಕಿಲೋ ಬಾದಾಮಿ ಕಟ್ಟಪಾ. ನಮ್ಮ ಹೆಗಡೆ ಸ್ವಾಮಿಗಳು ಕೇಳಾಕತ್ತಾರು,' ಅಂದು ಮತ್ತೆ ವಾಪಸ್ ಲೈನಿಗೆ ಬಂದು, 'ನಿನ್ನ ಗಂಡ ಯಾವ ವೈಸ್ ಪ್ರೆಸಿಡೆಂಟ್??? ಪೇಪರ್ ಅಥವಾ ಪ್ಲಾಸ್ಟಿಕ್?' ಅಂದಿದ್ದಾರೆ.

'ಅಯ್ಯ ಇದರ! ಈ ಚಂದಕ್ಕೆ ಪ್ರಮೋಷನ್ ಬೇರೆ ಕೇಡು. ಕೆಲಸ ಮಾತ್ರ ಕಿರಾಣಿ ಸಾಮಾನು ಕಟ್ಟೋದು. ಟೈಟಲ್ ನೋಡಿದರೆ ಸಾಕು. ವೈಸ್ ಪ್ರೆಸಿಡೆಂಟ್ ಆಫ್ ಕಿರಾಣಿ ಸಾಮಾನು ಪ್ಯಾಕಿಂಗ್. ಸೂಡ್ಲಿ!' ಅಂದ ಹೆಂಡತಿ ಇಟ್ಟಿದ್ದಾಳೆ. ಫೋನು. ಸಂಜೆ ಮನೆಗೆ ಬರಲಿರುವ ಗಂಡನಿಗೆ ಇಡುವಳಿದ್ದಾಳೆ. ಅದೇ ಬತ್ತಿ!

*****
ಸ್ಪೂರ್ತಿ:

Tom was so excited about his promotion to Vice President of the company he worked for and kept bragging about it to his wife for weeks on end.

Finally she couldn't take it any longer, and told him, "Listen, it means nothing, they even have a Vice President of Grocery Bagging at the grocery store!".

"Really?" he said. Not sure if this was true or not, Tom decided to call the grocery store.

A clerk answers and Tom says "Can I please talk to the Vice President of Grocery Bagging?"

The clerk replies "Paper or Plastic?"

#TitleInflation