Monday, October 27, 2014

ಪ್ರಯಾಣದಲ್ಲಿ ಪವಾಡಗಳೊಂದಿಗೆ ಶುರುವಾಗುವ 'ಶ್ರೀ ಏಕನಾಥ ಈಶ್ವರನ್' ಎಂಬ ಶ್ರೇಷ್ಠ ದಾರ್ಶನಿಕರ ಜೀವನ ಚರಿತ್ರೆ

೧೯೫೯ ರ ಸಮಯ. ಆವಾಗೆಲ್ಲ ಭಾರತದಿಂದ ಅಮೇರಿಕಾಗೆ ಹೋಗಿ ಬಂದು ಮಾಡುವದೆಲ್ಲ ಹೆಚ್ಚಾಗಿ ಹಡಗಿನಲ್ಲಿಯೇ. ಹಾಗೇ ಹೊರಟವರು ಒಬ್ಬರು ಯೂನಿವರ್ಸಿಟಿ ಪ್ರೊಫೆಸರರು. ಅವರಿಗೆ ಪ್ರತಿಷ್ಠಿತ ಫುಲ್ ಬ್ರೈಟ್ ಸ್ಕಾಲರ್ಷಿಪ್ ಸಿಕ್ಕಿತ್ತು. ಅದರ ಸಲುವಾಗಿ ಅಮೇರಿಕಾಗೆ ಹೊರಟಿದ್ದರು.

ಮುಂಬೈ ಬಿಟ್ಟಿದ್ದೇ ಬಿಟ್ಟಿದ್ದು, ಅರಬ್ಬೀ ಸಮುದ್ರದಲ್ಲಿ ಸಿಕ್ಕಾಪಟ್ಟೆ ಚಂಡಮಾರುತ. ಎಲ್ಲರ ಚಂಡೆ ಬಾರಿಸಿ ಹೋಯಿತು. ಹಡಗು ಸಿಕ್ಕಾಪಟ್ಟೆ ಹೊಯ್ದಾಡುತ್ತಿತ್ತು. ದೊಡ್ಡ ಹಡಗಾಗಿದ್ದರಿಂದ ಮುಳುಗುವ ಅಪಾಯವಿರಲಿಲ್ಲ. ಆದರೆ ಪ್ರಯಾಣಿಕರು ಮಾತ್ರ ತತ್ತರಿಸಿಹೋದರು. ಎಲ್ಲ ಸರಿಯಾಗಿದ್ದರೂ, ಹಡಗಿನ ಸಾಮಾನ್ಯ ಹೊಯ್ದಾಟದಿಂದಲೇ ಜನರಿಗೆ sea sickness ಆಗಿ, ತುಂಬ ತೊಂದರೆಯಾಗುತ್ತದೆ. ಇನ್ನು ಈ ರೀತಿಯಾದ ಚಂಡಮಾರುತ ಎದ್ದರೆ ಕೇಳಬೇಕೇ? ಒಬ್ಬರ ಹೊಟ್ಟೆಯಲ್ಲಿ ಒಂದು ಅಗುಳು ಊಟ ನಿಲ್ಲಲಿಲ್ಲ. ಅಡುಗೆ ಮಾಡಬೇಕಾದವರೇ ಹೊಟ್ಟೆ ಹಿಡಿದುಕೊಂಡು, ವಾಂತಿ ಮಾಡುತ್ತ, ಹಡಗಿನ ರೈಲಿಂಗ್ ಮೇಲೆ ವಾಲಿಕೊಂಡು ನಿಂತಿದ್ದರು.

ಹೀಗಿದ್ದಾಗ ಒಂದು ದಿವಸ ಮುಂಜಾನೆ ನಮ್ಮ ಪ್ರೊಫೆಸರ್ ಸಾಹೇಬರು ಎಂದಿನಂತೆ ಬೆಳಗಿನ ಉಪಹಾರಕ್ಕೆ ಬಂದು ಕೂತರು. ಹಡಗಿನ ಅಡಿಗೆ ಭಟ್ಟ ವಿಚಿತ್ರವಾಗಿ ನೋಡಿದ. ಇತರೆ ಪ್ರಯಾಣಿಕರೆಲ್ಲರ ಹೊಟ್ಟೆ ಅದ್ಯಾವ ರೀತಿಯಲ್ಲಿ ತೊಳೆಸಿ, ಸಿಕ್ಕಾಪಟ್ಟೆ sea sickness ಆಗಿ, ಏನೂ ತಿನ್ನಲು, ಉಣ್ಣಲು ಆಗದೇ, ಬಲವಂತದಿಂದ ಏನಾದರೂ ಹೊಟ್ಟೆಗೆ ಹಾಕಿಕೊಂಡರೆ ಒಂದು ಅಗುಳೂ ನಿಲ್ಲದೆ, ಎಲ್ಲರೂ, 'ತಿಂಡಿ ಬೇಡ. ಊಟ ಬೇಡ. ಕೇವಲ ನೀರು, ಎಳನೀರು, ಸೂಪು ಅದು ಇದು ಕೊಡಿ,' ಅಂತ ಬೊಬ್ಬೆ ಹೊಡೆಯುತ್ತಿದ್ದರೆ, ಈ ಮಹಾನುಭಾವ ಪ್ರೊಫೆಸರ್ ಮಾತ್ರ ಬೆಳಿಗ್ಗೆ ಬರೋಬ್ಬರಿ ಏಳು ಘಂಟೆಗೆ ಹಡಗಿನ ಉಪಾಹಾರ ಗೃಹಕ್ಕೆ ಬಂದು, 'ಎಲ್ರೀ ಬ್ರೇಕ್ ಫಾಸ್ಟ್? ತುಂಬ ಹಸಿವೆಯಾಗಿದೆ. ಬೇಗ ಕೊಡ್ರೀ,' ಅನ್ನೋ ರೀತಿ ಕೂತು ಬಿಟ್ಟಿದ್ದಾನೆ. ಇವನಿಗೇನು sea sickness ಅಂತ ಏನೂ ಆಗುವದೇ ಇಲ್ಲವೇ? ಯಾವ ತರಹದ ವಿಚಿತ್ರ ಮನುಷ್ಯ ಇವನು? ಅಂತ ಅಚ್ಚರಿಪಟ್ಟುಕೊಂಡು, ಸರಿಯಾದ ಬ್ರೇಕ್ ಫಾಸ್ಟ್ ತಯಾರು ಮಾಡಿ, ತಿನ್ನಿಸಿ ಕಳಿಸಿದ ಹಡಗಿನ ಅಡುಗೆ ಭಟ್ಟ.

ಹೋಗೋಕಿಂತ ಮೊದಲು ಪ್ರೊಫೆಸರ್ ಸಾಹೇಬರನ್ನು ಒಂದು ಮಾತು ಕೇಳಬೇಕು ಅನ್ನಿಸಿತು ಅಡುಗೆಯವನಿಗೆ. 'ಸಾರ್, ಒಂದು ಪ್ರಶ್ನೆ. ಅದ್ಯಾವ ತರಹದ medication ತೆಗೆದುಕೊಳ್ಳುತ್ತೀರಿ? ನಿಮಗೆ sea sickness ಏನೂ ಆದ ಹಾಗೆ ಕಾಣುವದೇ ಇಲ್ಲವಲ್ಲ. ಏನು ನಿಮ್ಮ ರಹಸ್ಯ?' ಅಂತ ಕೇಳಿಬಿಟ್ಟ. ಪ್ರೊಫೆಸರ್ ಸಾಹೇಬರು ನಕ್ಕು ಹೇಳಿದರು, 'medication ಅಲ್ಲಯ್ಯ meditation. ಎಲ್ಲ ಧ್ಯಾನದ ಪ್ರಭಾವ,' ಅಂತ ಹೇಳಿ, ಕಣ್ಣು ಹೊಡೆದು ಹೋಗಿಬಿಟ್ಟರು. ಆ ಪ್ರೊಫೆಸರರು ಹಡಗಿನಲ್ಲಿದ್ದಾಗಲೂ ತಮ್ಮ ಮುಂಜಾನೆಯ ಧ್ಯಾನ, ಯೋಗ ಇತ್ಯಾದಿಗಳನ್ನು ಮಾತ್ರ ಬಿಡುತ್ತಿದ್ದಿಲ್ಲ. ತಮ್ಮ ಕ್ಯಾಬಿನ್ ನಲ್ಲಿ ಸ್ವಲ್ಪ ಗದ್ದಲ, ಸ್ಥಳದ ಅಭಾವ ಅಂತ ಹೇಳಿ ಬೆಳಿಗ್ಗೆ ಐದು ಘಂಟೆಗೆ ಎದ್ದು, ಖಾಲಿಯಿರುತ್ತಿದ್ದ, ಪೂರ್ತಿ ಶಾಂತವಿರುತ್ತಿದ್ದ ಹಡಗಿನ ಡೆಕ್ಕಿನ ಮೇಲೆ, ಒಂದು ಮೂಲೆಯಲ್ಲಿದ್ದ ಟೆನಿಸ್ ಕೋರ್ಟಿನಲ್ಲಿ ತಮ್ಮ ಬೆಳಗಿನ ಕೋಟಾ ಆದ ಎರಡು ಘಂಟೆ ಧ್ಯಾನ, ಯೋಗ ಎಲ್ಲ ಮುಗಿಸಿಕೊಂಡು ಬಂದು ಬಿಡುತ್ತಿದ್ದರು. ಅದೇ ಅವರನ್ನು sea sickness ನಿಂದ ಬಚಾವ್ ಮಾಡಿತ್ತು. ಹಾಗಂತ ಅವರ ಅಚಲ ನಂಬಿಕೆ. ಅದನ್ನೇ ಹಡಗಿನ ಅಡುಗೆ ಭಟ್ಟನಿಗೆ ಹೇಳಿ ಹೊರಟಿದ್ದರು. ಯಾವ medication ಅಂತ ಕೇಳಿದರೆ meditation ಅನ್ನುವ ಪ್ರೊಫೆಸರರನ್ನು,'ಇದು ಯಾರೋ ತಲೆ ಪಿರ್ಕಿ ಗಿರಾಕಿ,' ಅನ್ನುವಂತೆ ನೋಡಿ ಕಳಿಸಿರಬೇಕು ಬಿಡಿ ಆ ಅಡುಗೆ ಭಟ್ಟ.

ಮುಂದೆ ಹಡಗು ಯುರೋಪ್ ತಲುಪಿತು. ಅಲ್ಲಿಂದ ಮತ್ತೆ ಬೇರೆ ಹಡಗಿನಲ್ಲಿ ಪಯಣ. ಮುಂದಿನ ಪ್ರಯಾಣ ಬೇರೆ ಯಾವದೋ ಒಂದು ಬಂದರಿನಿಂದ. ಹೋಗಿ ಮುಟ್ಟಿದ ಬಂದರು ನಗರದಿಂದ ಟ್ರೈನ್ ನಲ್ಲಿ ಎಲ್ಲ ಪ್ರಯಾಣಿಕರನ್ನು ಬೇರೆ ನಗರಕ್ಕೆ ಕಳುಹಿಸಲಾಯಿತು. ಜೊತೆಗೆ ಅವರ ಸಾಮಾನುಗಳನ್ನೂ ಸಹ. ಪ್ರತಿ ಪ್ರಯಾಣಿಕರ ಸಾಮಾನುಗಳನ್ನು ಒಂದೊಂದು ಟ್ರಂಕ್ ತರಹದ ದೊಡ್ಡ ಪೆಟ್ಟಿಗೆಗಳಲ್ಲಿ ಹಾಕಿ, ಸಾಮಾನು ಸಾಗಾಣಿಕೆ ರೈಲ್ವೆ ಬೋಗಿಗಳಲ್ಲಿ ಹಾಕಿ ಕಳಿಸಲಾಯಿತು. ಟ್ರೈನ್ ನಿಂದ ಸೀದಾ ಹಡಗಿಗೆ ಸಾಮಾನು ರವಾನೆ. ಪ್ರಯಾಣಿಕರು ಮಾತ್ರ ರೈಲಿನಿಂದ ಇಳಿದು, ತಮ್ಮ ಪಾಸ್ಪೋರ್ಟ್, ವೀಸಾ ಇತ್ಯಾದಿ ತೋರಿಸಿ ಹಡಗು ಹತ್ತಿದರೆ, ಮುಂದೆ ಇಳಿಯುವದು ಸೀದಾ ನ್ಯೂಯಾರ್ಕ್ ನಗರದ ಬಂದರಿನಲ್ಲಿ. ಅದಕ್ಕೇ  ಅಂತಲೇ ಹೇಳಿದ್ದರು, 'ನಿಮ್ಮ ಪಾಸ್ಪೋರ್ಟ್, ವೀಸಾ ಇತ್ಯಾದಿಗಳನ್ನು ನಿಮ್ಮ ಜೊತೆಯೇ ಇಟ್ಟುಕೊಂಡಿರಿ. ಬಾಕಿ ಎಲ್ಲ ಸಾಮಾನುಗಳನ್ನು ಪೆಟ್ಟಿಗೆಯೊಳಗೆ ಹಾಕಬಹದು. ಆದರೆ ಅವುಗಳಲ್ಲಿ ಹಾಕಿದ ಯಾವದಾದರೂ ಸಾಮಾನು ನಂತರ ಬೇಕು ಅಂದರೆ ಸಿಗುವದಿಲ್ಲ. ಎಚ್ಚರಿಕೆ!' ಅಂತ.

ಹೇಳಿ ಕೇಳಿ absent minded ಪ್ರೊಫೆಸರ್ ಸಾಹೇಬರು. ಮೇಲಿಂದ ಮೊದಲನೇ ಸಲ ವಿದೇಶ ಪ್ರಯಾಣ. ಯಾವದೋ ಪೊರಪಾಟಿನಲ್ಲಿ ತಮ್ಮ ಎಲ್ಲ ಸಾಮಾನು including ಪಾಸ್ಪೋರ್ಟ್, ವೀಸಾ ಎಲ್ಲವನ್ನೂ ದೊಡ್ಡ ಸರಕು ಸಾಗಾಣಿಕೆ ಟ್ರಂಕ್ ತರಹದ ಬಾಕ್ಸಿನಲ್ಲಿ ಹಾಕಿ ರೈಲು ಹತ್ತಿಬಿಟ್ಟಿದ್ದರು. ಶಿವನೇ ಶಂಭುಲಿಂಗ!

ಪ್ರಯಾಣದ ನಂತರ ಬೇರೆ ಶಹರ ಬಂತು. ಅಲ್ಲಿಂದಲೇ ಅಮೇರಿಕಾಗೆ ಹೋಗುವ ಹಡಗು ಹತ್ತಬೇಕು. ಅದಕ್ಕಿಂತ ಮೊದಲು ಪಾಸ್ಪೋರ್ಟ್, ವೀಸಾ ಎಲ್ಲ ಪರಿಶೀಲನೆ ಆಗಬೇಕು. ಅದರ ಪ್ರಕಾರ ಅಲ್ಲಿಯ ವಲಸೆ ಅಧಿಕಾರಿ ಬಂದು, ನಮ್ಮ ಪ್ರೊಫೆಸರ್ ಅವರ ಹತ್ತಿರ, 'ಪಾಸ್ಪೋರ್ಟ್, ವೀಸಾ ಕೊಡಿ' ಅಂದ. ಆವಾಗಲೇ ಅವರಿಗೆ ಅರ್ಥವಾಗಿದ್ದು, 'ಓಹೋ! ಈಗ ವೀಸಾ, ಪಾಸ್ಪೋರ್ಟ್ ಎಲ್ಲ ತೋರಿಸಬೇಕು. ಆದರೆ ನನ್ನ ಪಾಸ್ಪೋರ್ಟ್, ವೀಸಾ ಎಲ್ಲ ಸರಕು ಸಾಗಾಣಿಕೆ ಬಾಕ್ಸಿನಲ್ಲಿ ಹೋಗಿಬಿಟ್ಟಿವೆ,' ಅಂತ. ಅದನ್ನೇ ಆ ಅಧಿಕಾರಿಗೆ ಹೇಳಿಕೊಂಡರು. ಅವನೇನು ಮಾಡಿಯಾನು? 'ನೋಡಿ ಸರ್! ಒಂದೇ ತರಹದ ಸಾವಿರಾರು ಬಾಕ್ಸುಗಳಿವೆ. ಮತ್ತೆ ಇಲ್ಲಿ ಅವನ್ನೆಲ್ಲವನ್ನೂ ತೆಗೆದು, ನಿಮ್ಮ ಬಾಕ್ಸ್ ಯಾವದು ಅಂತ ಹುಡುಕಿಕೊಡುವ ಯಾವದೇ ವ್ಯವಸ್ಥೆ ಇಲ್ಲ. ಅದಕ್ಕೇ ಪ್ರಯಾಣಿಕರಿಗೆ ಸೂಚನೆ ಕೊಟ್ಟಿದ್ದೆವು. ನಿಮಗೆ ಅವಶ್ಯವಾದ ವಸ್ತುಗಳನ್ನು ಸರಕಿನ ಬಾಕ್ಸಿನಲ್ಲಿ ಹಾಕದೇ ಜೊತೆಗೇ ಇಟ್ಟುಕೊಳ್ಳಿ ಅಂತ. ನೀವು ಹಾಗೆ ಮಾಡದೇ ಈಗ ಪಾಸ್ಪೋರ್ಟ್, ವೀಸಾ ಜೊತೆಗೆ ಇಲ್ಲ ಅನ್ನುತ್ತೀದ್ದೀರಿ. ಏನೂ ಮಾಡಲು ಸಾಧ್ಯವಿಲ್ಲ. ನೀವು ಮುಂದಿನ ಹಡಗಿಗೆ ಕಾಯಬೇಕಾಗುತ್ತದೆ ಅಥವಾ ವಾಪಸ್ ಇಂಡಿಯಾಕ್ಕೆ ಹೋಗಬೇಕಾಗುತ್ತದೆ. ಅದರ ವ್ಯವಸ್ಥೆ ಬಗ್ಗೆ ಯೋಚನೆ ಮಾಡಿ,' ಅಂತ ಹೇಳಿದ ಅಧಿಕಾರಿ ಒಂದು ತರಹದ ಸಂತಾಪ ಸೂಚಿಸಿದ.

ಪ್ರೊಫೆಸರ್ ಬಿಟ್ಟು ಬೇರೆ ಯಾರೋ ಆಗಿದ್ದರೆ, 'ನಮ್ಮ ಕರ್ಮ. ಏನು ಮಾಡೋದು? ಮುಂದಿನ ಸಲ ಹೋದರಾಯಿತು,' ಅಂತ ಅಂದುಕೊಂಡು, ಕೈ ಚೆಲ್ಲಿ, ತಲೆ ಹಿಡಿದುಕೊಂಡು, ಮುಂದೆ ಏನಾಗುತ್ತದೆಯೋ ಅದು ಆಗಲಿ ಅನ್ನುವ ತರಹ, ಶಿವಾ! ಅಂತ ಕೂತು ಬಿಡುತ್ತಿದ್ದರೋ ಏನೋ. ಆದರೆ ಇವರು ಮಹಾನ್ ಖತರ್ನಾಕ್ ಪ್ರೊಫೆಸರ್. ಆ ಅಧಿಕಾರಿ ಜೊತೆ ಮಾತುಕತೆ ಶುರು ಹಚ್ಚಿಕೊಂಡರು.

'ಹೌದು. ನನ್ನಿಂದ ತಪ್ಪಾಗಿದೆ. ನೀವು ಕೊಟ್ಟಿದ್ದ ಸೂಚನೆ ಗಮನಿಸಲೇ ಇಲ್ಲ. ಆದರೆ ತಾವು ಈಗ ಒಂದು ಸಹಾಯ ಮಾಡಬಹುದೇ?' ಅಂತ ಒಂದು ಫಿಟ್ಟಿಂಗ್ ಇಟ್ಟರು ಪ್ರೊಫೆಸರ್.

'ಏನು?????' ಅಂದ ಆ ಅಧಿಕಾರಿ.

'ನೋಡಿ. ನನ್ನ ಸಾಮಾನುಗಳೆಲ್ಲ ಆ ಬಾಕ್ಸಿನಲ್ಲಿ ಇವೆ. ಬಾಕ್ಸುಗಳೆಲ್ಲ ಇದೇ ರೈಲು ಗಾಡಿಯಲ್ಲಿ ಬಂದಿವೆ. ನನ್ನ ಬಾಕ್ಸನ್ನು ಹೊರಗೆ ತೆಗೆದು ಕೊಡಿಸಿ ಬಿಟ್ಟರೆ, ನಾನು ನಿಮಗೆ ಚಿರಋಣಿಯಾಗಿರುತ್ತೇನೆ. ಒಂದು ಸಲ ನನ್ನ ಬಾಕ್ಸ್ ಸಿಕ್ಕಿದರೆ ಸಾಕು. ಅದರಲ್ಲಿ ನನ್ನ ಪಾಸ್ಪೋರ್ಟ್, ವಿಸಾ ಎಲ್ಲ ಇದೆ. ನನ್ನ ಬಾಕ್ಸ್ ಸ್ವಲ್ಪ ತೆಗೆಸಿ ಕೊಡ್ತೀರಾ?' ಅಂತ ರಿಕ್ವೆಸ್ಟ್ ಮಾಡಿಕೊಂಡರು ಪ್ರೊಫೆಸರ್.

'ರೀ ಸ್ವಾಮೀ. ಅದೆಲ್ಲ ಆಗೋ ಮಾತಲ್ಲ ಅಂತ ಹೇಳಿದೆ. ಹೇಳಿದ್ದು ತಿಳಿಯೋದಿಲ್ಲವೇ ನಿಮಗೆ? ಯಾವ ಬಾಕ್ಸ್ ನಿಮ್ಮದು ಅಂತ ತೆಗೆಸಿಕೊಡೋಣ? ಎಲ್ಲ ಒಂದೇ ಮಾದರಿಯ ಬಾಕ್ಸಗಳಲ್ಲಿ ಎಲ್ಲರ ಸಾಮಾನು ಹಾಕಲಾಗಿದೆ. ಬಾಕ್ಸ್ ಮೇಲೆ ಹೆಸರು, ವಿಳಾಸ ಎಲ್ಲ ಇದೆ ಬಿಡಿ. ಆದರೆ ಸಾವಿರಾರು ಬಾಕ್ಸುಗಳನ್ನು ಒಂದರಮೇಲೊಂದರಂತೆ ಪೇರಿಸಿ ಇಡಲಾಗಿದೆ. ಹಾಗಿರುವಾಗ ಒಂದೊಂದೇ ಬಾಕ್ಸ್ ತೆಗೆದು, ಅದು ನಿಮ್ಮದು ಹೌದೋ ಅಲ್ಲವೋ ಅಂತ ನೋಡುತ್ತ ಕೂಡಲು ಟೈಮ್ ಇಲ್ಲ. ಮತ್ತೆ ಅದೆಲ್ಲ ಮಾಡಲು ಕೆಲಸಗಾರರಿಲ್ಲ. ಮತ್ತೆ ಅದು ನಮ್ಮ ಪದ್ದತಿಯೂ ಅಲ್ಲ. ನೀವು ಸುಮ್ಮನೆ ವಾಪಸ್ ಇಂಡಿಯಾಕ್ಕೆ ಹೋಗುವದನ್ನೋ ಅಥವಾ ಎಲ್ಲರ ಬಾಕ್ಸ್ ಹಡಗಿಗೆ ಶಿಫ್ಟಾದ ಮೇಲೆ ಇಲ್ಲೇ ಉಳಿವ ನಿಮ್ಮ ಬಾಕ್ಸ್ ಬಿಡಿಸಿಕೊಂಡು, ಮುಂದಿನ ಹಡಗಲ್ಲಿ ಅಮೇರಿಕಾಗೆ ಹೋಗುವ ಬಗ್ಗೆಯೋ ವಿಚಾರ ಮಾಡಿ. ತಿಳೀತಾ?' ಅಂತ ಕರ್ಟ್ ಆಗಿ ಹೇಳಿ ಹೊರಟ.

'ಸರ್, ಒಂದು ನಿಮಿಷ. ಒಂದೇ  ನಿಮಿಷ. ಇನ್ನೊಂದೇ ಮಾತು. ಪ್ಲೀಸ್ ಕೇಳಿ,' ಅಂದರು ಪ್ರೊಫೆಸರ್ ಸಾಹೇಬರು. 'ಇದೇ ಆಖ್ರೀ ರಿಕ್ವೆಸ್ಟ್. ಇದರ ಮೇಲೆ ಮತ್ತೇನೂ ಕೇಳುವದೇ ಇಲ್ಲ,' ಅನ್ನುವ ರೀತಿಯಲ್ಲಿ ಕೇಳಿಕೊಂಡರು.

ಆ ವಲಸೆ ಅಧಿಕಾರಿಗೆ ಏನೋ ಕರುಣೆ ಬಂದಿರಬೇಕು. ಸ್ವಲ್ಪ ಕರಗಿದ. 'ಏನು ಹೇಳಿ?' ಅನ್ನೋ ಲುಕ್ ಕೊಟ್ಟು ನಿಂತ.

'ಆಕಸ್ಮಾತ್ ಇಲ್ಲಿರುವ ಸಾವಿರಾರು ಬಾಕ್ಸುಗಳಲ್ಲಿ ನನ್ನ ಬಾಕ್ಸ್ ಯಾವದು ಅಂತ ನಾನು ಗುರುತಿಸಿ ಹೇಳಬಲ್ಲೆ ಅಂತಾದರೆ ನೀವು ನನ್ನ ಬಾಕ್ಸ್ ಹೊರಗೆ ತೆಗೆಸಿಕೊಡುತ್ತೀರಾ ಸರ್?' ಅಂತ ಒಂದು ಚಾಲೆಂಜ್ ಒಗೆದರು ಪ್ರೊಫೆಸರ್ ಸಾಹೇಬರು.

ಅಧಿಕಾರಿ ಈಗ ಬೆರಗಾದ. ಒಂದೇ ನಮೂನಿಯ ಸಾವಿರಾರು ಬಾಕ್ಸುಗಳಿವೆ. ಅವುಗಳಲ್ಲಿ ತಮ್ಮ ಬಾಕ್ಸ್ ಯಾವದು ಅಂತ ನಿಖರವಾಗಿ ತೋರಿಸುತ್ತೇನೆ ಅನ್ನುತ್ತಿದ್ದಾರೆ ಈ ಆಸಾಮಿ. ಇವರೇನು ಪವಾಡ ಪುರುಷರೇ? ಮತ್ತೆ ಒಂದೇ ಒಂದು ಚಾನ್ಸ್ ಕೇಳುತ್ತಿದ್ದಾರೆ. ಎಲ್ಲ ಬಾಕ್ಸ್ ತೆಗೆಸುವ ತಲೆಬಿಸಿಯಂತೂ ಇಲ್ಲವೇ ಇಲ್ಲ. ಬಾಕ್ಸ್ ರಾಶಿ ಇರುವ ಜಾಗಕ್ಕೆ ಕರೆದುಕೊಂಡು ಹೋದರಾಯಿತು. ಅವರ ಬಾಕ್ಸ್ ಯಾವದು ಅಂತ ತೋರಿಸುತ್ತಾರೆ. ತೋರಿಸಿದ ಒಂದೇ ಬಾಕ್ಸನ್ನು ರಾಶಿಯಿಂದ ತೆಗೆಸಿದರಾಯಿತು. ಅದು ಅವರದ್ದೇ ಆಗಿದ್ದರೆ ಒಳ್ಳೆಯದು. ಇಲ್ಲವೆಂದರೆ ವಾಪಸ್ ಕಳುಹಿಸಿ ಬಿಟ್ಟರಾಯಿತು ಅಂತ ಅಂದುಕೊಂಡ ಆ ಅಧಿಕಾರಿ. ವಲಸೆ ಅಧಿಕಾರಿಯಾದರೇನು? ಒಮ್ಮೊಮ್ಮೆ ಅವರೂ ಮನುಷ್ಯತ್ವದಿಂದ ವರ್ತಿಸುತ್ತಾರೆ ನೋಡಿ.

ಆಯಿತು. ಪ್ರೊಫೆಸರ್ ಸಾಹೇಬರನ್ನು ಕರೆದುಕೊಂಡು ಹೊರಟ. ರೈಲಿನಲ್ಲಿ ಬಂದಿದ್ದ ಎಲ್ಲ ಬಾಕ್ಸುಗಳನ್ನು ಒಂದು ದೊಡ್ಡ ರಾಶಿ ಮಾಡಿ ಪೇರಿಸಿಟ್ಟಿದ್ದರು. ಹಡಗಿಗೆ ಸಾಗಿಸುವ ಪ್ರಕ್ರಿಯೆ ಆರಂಭವಾಗಲಿತ್ತು.

'ನಿಮ್ಮ ಬಾಕ್ಸ್ ಯಾವದು ಅಂತ ತೋರಿಸಿ. ಒಂದೇ ಅವಕಾಶ. ಓನ್ಲಿ ಒನ್ ಚಾನ್ಸ್,' ಅಂದ ಅಧಿಕಾರಿ.

ಹಡಗಿನ ಸಂಸ್ಥೆಯ generic ಬಾಕ್ಸುಗಳು. ಎಲ್ಲ ಒಂದೇ ತರಹ ಇದ್ದವು. ಅದೂ ಸಾವಿರಾರು ಸಂಖ್ಯೆಯಲ್ಲಿ. ಅವುಗಳಲ್ಲಿ ತಮ್ಮದು ಯಾವದು ಅಂತ ಪ್ರೊಫೆಸರ್ ತಮ್ಮ ಬಾಕ್ಸ್ ಕಂಡು ಹಿಡಿದು ಕೊಡಬೇಕು.

ಪ್ರೊಫೆಸರ್ ಕಣ್ಣು ಮುಚ್ಚಿ ಒಂದು ಕ್ಷಣ ಧ್ಯಾನಸ್ಥರಾದರು. ಕಣ್ಣು ತೆರೆದವರೇ, ಪೂರ್ತಿ ವಿಶ್ವಾಸದಿಂದ, ಒಂದು particular ಬಾಕ್ಸ್ ತೋರಿಸಿ, 'ಅದೇ ನನ್ನ ಬಾಕ್ಸ್. ಅದನ್ನು ಪ್ಲೀಸ್ ಕೆಳಗಿಸಿಕೊಡಿ,' ಅಂದು ಮತ್ತೆ ಕಣ್ಣು ಮುಚ್ಚಿದರು. ಅವರನ್ನು ನೋಡಿದರೆ ದೇವರನ್ನು ಪ್ರಾರ್ಥಿಸುತ್ತಿದ್ದಾರೋ ಅನ್ನುವ ಹಾಗಿತ್ತು.

ಅಧಿಕಾರಿ, 'ಇದೆಲ್ಲ ಆಗೋ ಹೋಗೋ ಮಾತೇ?' ಅನ್ನುವ ರೀತಿಯಲ್ಲಿ ತಲೆ ಅಡ್ಡಡ್ಡ ಆಡಿಸುತ್ತ, ಅಲ್ಲಿದ್ದ ಪೋರ್ಟರ್ ಒಬ್ಬನ ಹತ್ತಿರ ಪ್ರೊಫೆಸರ್ ತೋರಿಸಿದ್ದ ಆ ಬಾಕ್ಸನ್ನು ಇಳಿಸಿ, ಈಕಡೆ ತರುವಂತೆ ಹೇಳಿದ. ಅದರಂತೆ ಪೋರ್ಟರ್ ಬಾಕ್ಸ್ ಇಳಿಸಿ, ತಂದು ಕೊಟ್ಟ.

ನೋಡಿದರೆ ಅದು ಪ್ರೊಫೆಸರ್ ಸಾಹೇಬರ ಬಾಕ್ಸೇ ಆಗಿರಬೇಕೇ!! ಒನ್ ಇನ್ ಮಿಲಿಯನ್ ಚಾನ್ಸ್ ಅಂದರೆ ಇದೇ ಇರಬೇಕು!

ಮೇಲಿದ್ದ ಹೆಸರು, ವಿಳಾಸ ಇತ್ಯಾದಿ ನೋಡಿದ ಪ್ರೊಫೆಸರ್ ಸಾಹೇಬರು, 'Yes! ಇದು ನಂದೇ!' ಅಂತ ಉದ್ಗರಿಸಿದರು. ಓಪನ್ ಮಾಡಿ, ಬೇಗ ಬೇಗನೆ ತಮ್ಮ ಪಾಸ್ಪೋರ್ಟ್, ವೀಸಾ ಇತ್ಯಾದಿಗಳನ್ನು ತೆಗೆದುಕೊಳ್ಳತೊಡಗಿದರು.

ವಲಸೆ ಅಧಿಕಾರಿ ಅಚ್ಚರಿಯಿಂದ 'ಹಾಂ!' ಅಂತ ತೆರೆದ ಬಾಯಿ ಮುಚ್ಚಲಿಲ್ಲ. ಪ್ರೊಫೆಸರ್ ಸಾಹೇಬರೇ ಅವನ ಮುಖದ ಮುಂದೆ ಕೈಯಾಡಿಸಿ, 'ಸರ್, ತುಂಬ ಥ್ಯಾಂಕ್ಸ್. ನನ್ನ ಪಾಸ್ಪೋರ್ಟ್, ವೀಸಾ ಎಲ್ಲ ತೆಗೆದುಕೊಂಡೆ ಸರ್. ನೀವು ಈಗ ಬೇಕಾದರೆ ಆ ಬಾಕ್ಸ್ ಬಂದ್  ಮಾಡಿಸಿ, ಹಡಗಿಗೆ ಸಾಗಿಸಬಹುದು. ನನ್ನ ಪಾಸ್ಪೋರ್ಟ್, ವೀಸಾ ಸ್ಟ್ಯಾಂಪ್ ಮಾಡಿಕೊಟ್ಟು ಬಿಟ್ಟರೆ ನಾನೂ ಸಹ ಹೋಗಿ ಹಡಗು ಹತ್ತಿಕೊಳ್ಳುತ್ತೇನೆ. ಮತ್ತೊಮ್ಮೆ ನಿಮಗೆ ಬಹಳ ಬಹಳ ಥ್ಯಾಂಕ್ಸ್!' ಅಂದರು.

ವಲಸೆ ಅಧಿಕಾರಿ ಗರಬಡಿದವನಂತೆ ನಿಂತೇ ಇದ್ದ. 'ಇದ್ದ ಸಾವಿರಾರು, ಒಂದೇ ತರಹದ, ಬಾಕ್ಸುಗಳಲ್ಲಿ ತಮ್ಮ ಬಾಕ್ಸ್ ಯಾವದು ಅಂತ ಅದೆಂಗೆ ಕಂಡು ಹಿಡಿದರು? ಅದೂ ಮೊದಲನೇ ಸಲವೇ ಕರೆಕ್ಟಾಗಿ,' ಅಂತ ಅವನಿಗೆ ತಿಳಿಯಲಿಲ್ಲ. 'ಹೆಂಗ್ರೀ????' ಅಂತ ಪ್ರೊಫೆಸರ್ ಕಡೆ ನೋಡಿದರೆ ಅವರು ತುಂಟ ನಗೆ ನಗುತ್ತ ನಿಂತಿದ್ದರು.

ವಲಸೆ ಅಧಿಕಾರಿ ತನ್ನ ಕೆಲಸ ಮುಗಿಸಿ, ಶುಭ ಪ್ರಯಾಣ ಕೋರಿ, ಪ್ರೊಫೆಸರ್ ಸಾಹೇಬರನ್ನು ಕಳಿಸಿಕೊಟ್ಟ. ಕಳಿಸುವ ಮುಂಚೆ ಕೇಳೇ ಬಿಟ್ಟ. 'ಅದೆಂಗೆ ನಿಮ್ಮ ಬಾಕ್ಸ್ ಅಷ್ಟು ನಿಖರವಾಗಿ ಕಂಡುಹಿಡಿದಿರಿ? ನಿಮಗೇನು ಅತೀಂದ್ರಿಯ ಶಕ್ತಿಗಳಿವೆಯೇ? ಅಷ್ಟೊಂದು ಒಂದೇ ತರಹದ ಬಾಕ್ಸುಗಳಿದ್ದವು. ಹೆಂಗ್ರೀ? ಸ್ವಲ್ಪ ಹೇಳಿ' ಅಂತ ಕೇಳಿದ. 'ಪ್ಲೀಸ್ ಹೇಳಿ ಹೋಗಿ,' ಅನ್ನುವ ಲುಕ್ ಕೊಟ್ಟ.

'ಎಲ್ಲ ಶ್ರೀಕೃಷ್ಣನ ಮಹಿಮೆ. ಅವನದೇ ಕೃಪೆ. ಅವನು ಎಂದೂ ನನ್ನ ಕೈಬಿಟ್ಟಿಲ್ಲ. ಬಿಡುವದೂ ಇಲ್ಲ. ಅಷ್ಟಿದೆ ಅವನ ಮೇಲೆ ನನ್ನ ನಂಬಿಕೆ. ಸರಿ ಈಗ ಬರ್ಲಾ? ಮತ್ತೊಮ್ಮೆ ತುಂಬ ಥ್ಯಾಂಕ್ಸ್' ಅಂತ ಹೇಳಿ ಹಡಗು ಹತ್ತಲು ಹೊರಟೇ ಬಿಟ್ಟರು.

'ಶ್ರೀ....ಕೃಷ್.... ನಾ. ಏನಪ್ಪಾ ಹೇಳ್ತಾನೆ ಈ ಆಸಾಮಿ. ತಲೆ ಬುಡವಿಲ್ಲ. ಆದರೂ ಸಕತ್ ಇದ್ದಾನೆ,' ಅಂದುಕೊಂಡ ವಲಸೆ ಅಧಿಕಾರಿ ಅವರನ್ನು ಅಭಿನಂದಿಸಿ ಕಳುಹಿಸಿಕೊಟ್ಟ.

ಹೀಗೆ ತಮಾಷೆಯಾಗಿ ತಮ್ಮ ಪ್ರಥಮ ವಿದೇಶಪ್ರಯಾಣದ ಬಗ್ಗೆ ಹೇಳಿಕೊಂಡವರು ಶ್ರೀ ಏಕನಾಥ ಈಶ್ವರನ್. ಇಪ್ಪತ್ತನೇ ಶತಮಾನದ ಒಬ್ಬ ಪ್ರಮುಖ ದಾರ್ಶನಿಕರು, ಮಹತ್ವದ philosopher, ಧ್ಯಾನದ (Meditation) ಹಿರಿಯ ಶಿಕ್ಷಕರು, ಅಧ್ಯಾತ್ಮದ ಉನ್ನತ ಚಿಂತಕರು, ಜಗತ್ತಿನ ಎಲ್ಲ ಪ್ರಮುಖ ಧರ್ಮಗ್ರಂಥಗಳ ಮೇಲೆ ಭಾಷ್ಯ ಬರೆದ ಖ್ಯಾತ ಲೇಖಕರು. ಕೇರಳದಲ್ಲಿ ಹುಟ್ಟಿ, ನಾಗಪುರ್ ಯೂನಿವರ್ಸಿಟಿಯಲ್ಲಿ ಇಂಗ್ಲೀಶ್ ಪ್ರೊಫೆಸರ್ ಆಗಿದ್ದವರು. ಐವತ್ತರ ದಶಕದಲ್ಲಿ ಭಾರತದಲ್ಲಿ ಅಂಕಣಕಾರರಾಗಿ, ಭಾಷಣಕಾರರಾಗಿ ಸುಮಾರು ಪ್ರಸಿದ್ಧರಾಗಿದ್ದವರು. ಆದರೆ ಅವರು ದಾರ್ಶನಿಕ, spiritual teacher, philosopher ಅಂತ ಹೊರಹೊಮ್ಮಿದ್ದು, ಪ್ರಸಿದ್ಧರಾಗಿದ್ದು ಅಮೇರಿಕಾದಲ್ಲಿ.

ಶ್ರೀ ಏಕನಾಥ ಈಶ್ವರನ್
ಶ್ರೀ ಏಕನಾಥ ಈಶ್ವರನ್ ಅವರು ಅಮೇರಿಕಾಗೆ ಫುಲ್ ಬ್ರೈಟ್ ಸ್ಕಾಲರ್ಷಿಪ್ ಮೇಲೆ ಬಂದರು. ಸ್ಯಾನ್ ಫ್ರಾನ್ಸಿಸ್ಕೋ ಏರಿಯಾದಲ್ಲಿರುವ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕ್ಲೀ, ಇಂಗ್ಲೀಶ್ ವಿಭಾಗದಲ್ಲಿ ತಮ್ಮ ಕಾರ್ಯ ನಿರ್ವರ್ಹಿಸುತ್ತಿದ್ದರು. ಆಹೊತ್ತಿಗಾಗಲೇ ಅವರಿಗೆ ವೇದ, ಉಪನಿಷತ್ತು, ಭಗವದ್ಗೀತೆ, ಪತಂಜಲಿಯ ಯೋಗ ಸೂತ್ರಗಳು, ವೇದಾಂತ, ಬೌದ್ಧರ ಧರ್ಮ ಗ್ರಂಥವಾದ ಧಮ್ಮಪಾದ, ಸೂಫಿ ಕವಿಗಳ ಕವಿತೆಗಳು ಎಲ್ಲದರ ಮೇಲೆ ಅಗಾಧ ಪಾಂಡಿತ್ಯವಿತ್ತು. ನಿರಂತರ ಸಾಧನೆಯಿತ್ತು. ಸಂಸ್ಕೃತ, ಇಂಗ್ಲೀಶ್ ಎರಡೂ ಭಾಷೆಗಳ ಮೇಲೆ ಒಳ್ಳೆ ಹಿಡಿತವಿತ್ತು. ಮತ್ತೆ ಆಗಲೇ ಸುಮಾರು ಹದಿನೈದು ವರ್ಷಕ್ಕಿಂತಲೂ ಹೆಚ್ಚಿನ ಅಧ್ಯಾತ್ಮಿಕ ಸಾಧನೆಯಿತ್ತು. ಹೀಗಾಗಿ spirituality / ಅಧ್ಯಾತ್ಮದ ಬಗ್ಗೆ ಆಸಕ್ತಿಯಿದ್ದ ವಿದ್ಯಾರ್ಥಿಗಳು ಅವರ ಸುತ್ತ ಕಲೆಯತೊಡಗಿದರು. ಅದ್ಭುತ ಇಂಗ್ಲೀಶ್ ಪ್ರೊಫೆಸರ್ ಅಂತ ಖ್ಯಾತರಾಗಿಯೇ ಇದ್ದರು. ಈಗ ಅಮೇರಿಕಾದಲ್ಲಿ ಅದ್ಭುತ ದಾರ್ಶನಿಕ, ಅತ್ಯುತ್ತಮ ಅಧ್ಯಾತ್ಮಿಕ ಶಿಕ್ಷಕ ಅಂತ ಹೊರಹೊಮ್ಮ ತೊಡಗಿದರು. ಇದಕ್ಕಾಗಿ ಅವರು ಮಾಡಿದ್ದು ಏನೂ ಇಲ್ಲ. ಕೇವಲ ತಮ್ಮ ಜ್ಞಾನ, ಅದಕ್ಕಿಂತ ಹೆಚ್ಚಾಗಿ ಸ್ವಂತ ಅನುಭವಗಳಿಂದ ಪರಿಪಕ್ವಗೊಂಡಿದ್ದ ಜ್ಞಾನವನ್ನು ಯಾವದೇ ಪ್ರತಿಫಲದ ಆಸೆಯಿಲ್ಲದೆ ಎಲ್ಲರೊಂದಿಗೆ ಹಂಚಿಕೊಂಡಿದ್ದು. ಅಲ್ಲಿಂದ ಶುರುವಾದ ಅವರ ಯಶೋಗಾಥೆ ಮುಂದುವರೆಯುತ್ತಲೇ ಇದೆ.

ಅವರ ಇಂಗ್ಲೀಶ್ ಕ್ಲಾಸಿಗಿಂತ ಅವರ ಮನೆಯಲ್ಲಿಯೇ ಜಾಸ್ತಿ ವಿದ್ಯಾರ್ಥಿಗಳು ಸೇರತೊಡಗಿದರು. ದಿನಾ ಸಂಜೆ informal ಆಗಿ ಪ್ರವಚನ ನೀಡಲು ಶುರುವಿಟ್ಟುಕೊಂಡರು ಶ್ರೀ ಈಶ್ವರನ್. ಅದ್ಯಾವ ರೀತಿಯ response ಬಂತು ಅಂದರೆ ಪ್ರೊಫೆಸರ್ ಸಾಹೇಬರ ಸಣ್ಣ ಬ್ಯಾಚುಲರ್ apartment ಯಾವದಕ್ಕೂ ಸಾಲಲಿಲ್ಲ. ಪ್ರವಚನಗಳನ್ನು ಬೇರೆ ಕಡೆ ಪಬ್ಲಿಕ್ ಜಾಗಗಳಿಗೆ ಶಿಫ್ಟ್ ಮಾಡಬೇಕಾಯಿತು. ಪ್ರವಚನಗಳು ತುಂಬಿ ತುಳುಕತೊಡಗಿದವು. ಸನಾತನ ಧರ್ಮದ ತಿರುಳನ್ನು ಸರಳ ಭಾಷೆಯಲ್ಲಿ ಹೇಳುವ ಅವರ ಶೈಲಿಗೆ ಇಲ್ಲಿಯ ಜನ ಫುಲ್ ಫಿದಾ. ಮತ್ತೆ ಅವರ ಪ್ರವಚನಗಳು ಫುಲ್ ಪ್ರಾಕ್ಟಿಕಲ್. ದಿನನಿತ್ಯದ ಬದುಕಿಗೆ ಅಳವಡಿಸಿಕೊಳ್ಳಲು ಅನುಕೂಲವಾಗುವ ಹಾಗೆಯೇ ಇರುತ್ತಿದ್ದವು. ಅವರ ಪ್ರವಚನಗಳಲ್ಲಿ ಒಣ ವೇದಾಂತ, ಮಣ್ಣು ಮಶಿ ಇಲ್ಲವೇ ಇಲ್ಲ, ಕೇಳಲೇಬೇಡಿ.

ಧ್ಯಾನದ (Meditation) ಮೇಲೆ ಆಪರಿ ಆಸಕ್ತಿಯನ್ನು ಗಮನಿಸಿದ ಶ್ರೀ ಏಕನಾಥ ಈಶ್ವರನ್ ಬರ್ಕ್ಲೀ ಯೂನಿವರ್ಸಿಟಿಗೆ ಒಂದು ಐತಿಹಾಸಿಕ ಪ್ರಪೋಸಲ್ ಇಟ್ಟರು. 'ಮೆಡಿಟೇಶನ್ ಅಂದರೆ ಧಾನ್ಯವನ್ನೂ ಸಹ ಇತರೆ ವಿಷಯಗಳಂತೆ ಪಾಠ ಮಾಡುತ್ತೇನೆ. ಅನುಮತಿ ಕೊಡಿ,' ಅಂತ. ಬರ್ಕ್ಲೀ ವಿಶ್ವವಿದ್ಯಾಲಯ ಅಂತಹ ಹೊಸ ಪ್ರಯೋಗಗಳಿಗೆ ಯಾವಾಗಲೂ ತೆರೆದುಕೊಳ್ಳುವಂತಹ radical ಯೂನಿವರ್ಸಿಟಿ. 'ಆಯಿತು  ಮಾಡಿಕೊಳ್ಳಿ. ಮೊದಲು syllabus, textbook ಇತ್ಯಾದಿಗಳ ಬಗ್ಗೆ ಮಾಹಿತಿ ಕೊಡಿ. ಕೊಟ್ಟ ನಂತರ ಧ್ಯಾನದ ಕೋರ್ಸಿಗೆ ಅನುಮತಿ ಸಿಗುತ್ತದೆ. ಮುಂದಿನ ಸೆಮಿಸ್ಟರ್ ನಿಂದ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು, ನಿಮ್ಮ ಕೋರ್ಸ್ ಸೇರಬಹುದು. ಅದರಲ್ಲಿ ಗಳಿಸುವ ಕ್ರೆಡಿಟ್ (ಅಂಕಗಳು) ಡಿಗ್ರಿಗಾಗಿ ಉಪಯೋಗಿಸಬಹುದು' ಅಂತ ಹೇಳಿತು ಯೂನಿವರ್ಸಿಟಿ.

ಜಗತ್ತಿನ ವಿಶ್ವವಿದ್ಯಾಲಯವೊಂದು ಧ್ಯಾನದ ಮೇಲೆ ಕ್ರೆಡಿಟ್ ಕೋರ್ಸ್ ಶುರು ಮಾಡಿದ್ದು ಅದೇ ಮೊದಲು. ಇದೆಲ್ಲ ೧೯೬೦ ರ ಸುಮಾರಿನ ಮಾತು.

ಅಲ್ಲಿಯವರೆಗೆ ತಮ್ಮ ಪಾಡಿಗೆ ತಮ್ಮ ಧ್ಯಾನ, ಅಧ್ಯಾತ್ಮ ಅಧ್ಯಯನ, ಅಧ್ಯಾಪನ ಮಾಡಿಕೊಂಡಿದ್ದ ಶ್ರೀ ಏಕನಾಥ ಈಶ್ವರನ್ ಈಗ ಕ್ರಮಬದ್ಧವಾಗಿ ಒಂದು spiritual framework ಅಭಿವೃದ್ಧಿ ಮಾಡಲು ಕುಳಿತರು. ಅದರ ಪರಿಣಾಮವಾಗಿ ತಯಾರಾಗಿದ್ದೇ Passage Meditation & 8 Points Program.

ಬರ್ಕ್ಲೀ ಯೂನಿವರ್ಸಿಟಿಯಲ್ಲಿ ಕಿಕ್ಕಿರಿದ ತರಗತಿಗೆ ಮೆಡಿಟೇಶನ್ ಪಾಠ ಮಾಡುತ್ತಿರುವ ಪ್ರೊಫೆಸರ್ ಈಶ್ವರನ್

ಬರ್ಕ್ಲೀ ಯೂನಿವರ್ಸಿಟಿಯಲ್ಲಿ ಧ್ಯಾನ / meditation ಅನ್ನುವ ಕೋರ್ಸಿಗೆ ಅಭೂತಪೂರ್ವ ಯಶಸ್ಸು ಸಿಕ್ಕಿತು. ಮುಂದೆ ಹಲವು ವರ್ಷಗಳ ಕಾಲ ಬರ್ಕ್ಲೀ ಯೂನಿವರ್ಸಿಟಿಯಲ್ಲಿ ಆ ಕೋರ್ಸ್ ಮತ್ತು ಇತರ ಸಂಬಂಧಿತ ಕೋರ್ಸುಗಳನ್ನು ಶ್ರೀ ಏಕನಾಥ ಈಶ್ವರನ್ ಮತ್ತು ಅವರಿಂದ ತಯಾರಾದ ಶಿಷ್ಯರು ಪಾಠ ಮಾಡಿದರು. ಸಾವಿರಾರು ಜನ ವಿದ್ಯಾರ್ಥಿಗಳು ಧ್ಯಾನವನ್ನು ಪದ್ಧತಿ ಪ್ರಕಾರ ಕಲಿತು ಜೀವನ ಹಸನು ಮಾಡಿಕೊಂಡರು. 'ವಾರಕ್ಕೊಮ್ಮೆ ತರಗತಿಯ ನಂತರ ಧ್ಯಾನದ ನೆಪದಲ್ಲಿ ಕಣ್ಣು ಮುಚ್ಚಿ ಕೂತು, ಸೆಮಿಸ್ಟರ್ ಕೊನೆಗೆ ಒಂದು ಪ್ರಬಂಧ ಬರೆದು ಕೊಟ್ಟರೆ ಒಂದಿಷ್ಟು ಮಾರ್ಕ್ಸ್ ಸಿಗುತ್ತದೆ. ಡಿಗ್ರಿಗೆ ಒಂದು ಸಹಾಯವಾಗುತ್ತದೆ,' ಅಂತ ಅಂದುಕೊಂಡು, ಅಷ್ಟೇ ಮಾಡಿ, ಎದ್ದು ಹೋದವರೂ ಇದ್ದರು ಬಿಡಿ.

ಧ್ಯಾನದ ಬಗ್ಗೆ, ಅಧ್ಯಾತ್ಮದ ಬಗ್ಗೆ, spirituality ಬಗ್ಗೆ, philosophy ಬಗ್ಗೆ, metaphysics ಬಗ್ಗೆ ಬೇಕಾದಷ್ಟು ಪುಸ್ತಕಗಳಿದ್ದವು. ಅವನ್ನೆಲ್ಲ ಕಲಿಸಿಕೊಡುವ ಗುರುಗಳೂ ಇದ್ದರು. ಅದೆಲ್ಲ ಸರಿ. ಆದರೆ ಇಷ್ಟು ಸರಳವಾಗಿ, practical ಆಗಿ, systematic ಆಗಿ, methodical ಆಗಿ, ಒಂದು integrated approach ರೀತಿಯಲ್ಲಿ, ಭಾರತೀಯ ಸನಾತನ ಸಂಪ್ರದಾಯಕ್ಕೆ ಚ್ಯುತಿ ಬರದಂತೆ, ಧ್ಯಾನ / meditation ಹೇಳಿಕೊಟ್ಟವರಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಶ್ರೀ ಏಕನಾಥ ಈಶ್ವರನ್.

ವಿಶ್ವವಿದ್ಯಾಲದ ಒಳಗೆ ಮತ್ತು ಹೊರಗೆ ಅವರು ನೀಡುತ್ತಿದ್ದ ಪ್ರವಚನಗಳಿಂದ ಪ್ರಭಾವಿತರಾದ, ತುಂಬ ಶ್ರದ್ಧಾವಂತರಾದ ಒಂದಿಷ್ಟು ಶಿಷ್ಯರ ದಂಡು ಅವರ ಸುತ್ತ ಬೆಳೆಯತೊಡಗಿತು. ಎಲ್ಲರೂ ಬೇರೆ ಬೇರೆ ಕೆಲಸ, ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡವರೇ. ಮತ್ತೆ ಈಶ್ವರನ್ ಹೇಳಿದ್ದು ಸಹ ಅದನ್ನೇ. 'ಅಧ್ಯಾತ್ಮ, spirituality ಯಲ್ಲಿ ಸಾಧನೆಯನ್ನು ಜೀವನದ ಯಾವದೇ ಘಟ್ಟದಲ್ಲಿ, ನಾವಿರುವ ಜೀವನದ context ನಲ್ಲಿಯೇ ಮಾಡಬಹುದು. ಮತ್ತೆ ಅದರಲ್ಲೇ ಮಾಡುವದು ಸಹಜ ಧರ್ಮ. ಅಧ್ಯಾತ್ಮ ಸಾಧನೆಗಾಗಿ ಚಿತ್ರ ವಿಚಿತ್ರ ವೇಷ ಭೂಷಣ, ತರೇವಾರಿ ಆಚರಣೆ ಎಲ್ಲದರ ಜರೂರತ್ತೇ ಇಲ್ಲ. ಮುಖ್ಯವಾಗಿ ಸಮಾಜದ ಮುಖ್ಯವಾಹಿನಿಗೆ ಬೆನ್ನು ಹಾಕುವ ಅವಶ್ಯಕತೆಯಂತೂ ಇಲ್ಲವೇ ಇಲ್ಲ,' ಅಂತ ಈಶ್ವರನ್ ಉವಾಚ. ಅವರು ಇದ್ದಿದ್ದು ಸಹ ಹಾಗೆಯೇ. ಧ್ಯಾನದ, ಅಧ್ಯಾತ್ಮದ ಶಿಕ್ಷಕರೇ ಆದರೂ ಟಿಪಿಕಲ್ ಪ್ರೊಫೆಸರ್ ಹಾಗೆ ಯಾವಾಗಲೂ ನೀಟಾಗಿ ಸೂಟ್ ಅಥವಾ ಬಿಸಿನೆಸ್ ಕ್ಯಾಶುಯಲ್ ಡ್ರೆಸ್ ಹಾಕಿಕೊಳ್ಳುತ್ತಿದ್ದರು. ಯಾವದೇ ತರಹದ ನಾಮ, ವಿಭೂತಿ, ಜುಟ್ಟ, ಗಿಟ್ಟ ಅಂತ ಯಾವದೇ ತರಹದ ಎಕ್ಸಟ್ರಾ ಫಿಟ್ಟಿಂಗ್ ಗಿಟ್ಟಿಂಗ್ ಇಲ್ಲ. ಡಂಬಾಚಾರ ಕೇಳಲೇಬೇಡಿ.

ಅವರಡಿಯಲ್ಲಿ ಶ್ರದ್ಧೆಯಿಂದ ಸಾಧನೆ ಶುರು ಮಾಡಿಕೊಂಡಿದ್ದ ಅವರ ಶಿಷ್ಯರಿಗೆ ಅನ್ನಿಸಿದ್ದು, 'ನಮ್ಮದೇ ಒಂದು ಅಧ್ಯಾತ್ಮಿಕ ಸಮುದಾಯ (spiritual community) ಮಾಡಿಕೊಂಡರೆ ಹೇಗೆ?' ಅಂತ. ಬರ್ಕ್ಲೀ ಕ್ಯಾಂಪಸ್ ನಂತಹ ಜನಜಂಗುಳಿ ಇರುವ ಪ್ರದೇಶಕ್ಕಿಂತ, ಸ್ವಲ್ಪ ದೂರದಲ್ಲಿ, ಊರ ಹೊರಗೆ, ಶಾಂತಿಯಿಂದ ಇರುವ, ನಿಸರ್ಗದ ಮಡಿಲಲ್ಲಿರುವ ಪ್ರದೇಶ ಸಿಕ್ಕರೆ ಒಳ್ಳೆಯದು ಅನ್ನುವ ಭಾವನೆ ಎಲ್ಲರಿಗೂ ಬರಲು ಆರಂಭವಾಗಿತ್ತು. ಅಂತಹ ಆಸೆಗೆ ದೇವರೇ ತಥಾಸ್ತು ಅನ್ನುವಂತೆ ಸಿಕ್ಕಿದ್ದು ಇನ್ನೂರೈವತ್ತು ಎಕರೆಗಳ ಸುಂದರ ಕೃಷಿ ಪ್ರದೇಶ. ಒಳ್ಳೆ ಭಾರತದ ಆಶ್ರಮಗಳ ಸೆಟ್ಟಿಂಗ್ ಇತ್ತು. ಆ ಕಾಲದಲ್ಲಿ ತುಂಬ ಚೀಪಲ್ಲೇ ಸಿಕ್ಕಿತ್ತಂತೆ. ಸ್ಯಾನ್ ಫ್ರಾನ್ಸಿಸ್ಕೋ ನಗರದಿಂದ ಉತ್ತರಕ್ಕೆ ಒಂದು ಎಪ್ಪತ್ತು ಮೈಲಿ ದೂರ. ತುಂಬ ಸುಂದರ ಸ್ಥಳ. ನಿಸರ್ಗ ರಮಣೀಯ. ಎಕರೆಗಟ್ಟಲೆ ಹುಲ್ಲುಗಾವಲು. ಹಾಯಾಗಿ ಓಡಾಡಿಕೊಂಡಿರುವ ಕಾಡು ಜಿಂಕೆ, ಮೊಲ, ಹಂಸ, ಇತ್ಯಾದಿ. ಸಣ್ಣ ತೊರೆ. ಇವರದ್ದೇ ಆದ ಗದ್ದೆ. ಹಸುಗಳಿರುವ ಕೊಟ್ಟಿಗೆ. ಒಂದು ಸಣ್ಣ ಹಳ್ಳಿಯ ಹಾಗೆ. ಎರಡು ಮೈಲಿ ದೂರದಲ್ಲಿ ಸುಂದರ ಡಿಲ್ಲನ್ ಬೀಚ್. ಅಂತಹ ಜಾಗದಲ್ಲಿ ಶುರುವಾದದ್ದೇ 'ರಾಮಗಿರಿ ಆಶ್ರಮ'. ಇದು ಮುಂದೆ ಶ್ರೀ ಈಶ್ವರನ್ ಮತ್ತು ಅವರ ಖಾಸ್ ಶಿಷ್ಯರ ಖಾಯಂ ನೆಲೆಯಾಯಿತು. ಟಿಪಿಕಲ್ ಗುರುಕುಲದ ಮಾದರಿಯ ಸೆಟಪ್. ವ್ಯತ್ಯಾಸ ಅಂದರೆ ಗುರುಕುಲದ ಸೆಟ್ಟಿಂಗ್ ಆದರೂ ಹೊರಗಡೆ ಹೋಗಿ ಕೆಲಸ ಮಾಡುವವರು, ವಿದ್ಯಾಭ್ಯಾಸ ಮಾಡುವವರು, ಸಂಸಾರಸ್ಥರೂ ಎಲ್ಲ ಇದ್ದರು. ಇನ್ನು ಕೆಲವರು ಆಶ್ರಮದ ಫುಲ್ ಟೈಮ್ ಕೆಲಸಗಾರರಾದರು. ಯಾಕೆಂದರೆ ಆವಾಗಲೇ 'ನೀಲಗಿರಿ ಧ್ಯಾನ ಕೇಂದ್ರ' (Blue Mountain Center of Meditation) ಅನ್ನುವ ಸಂಸ್ಥೆಯನ್ನು ಶ್ರೀ ಈಶ್ವರನ್ ಮತ್ತು ಶಿಷ್ಯರು ಸ್ಥಾಪಿಸಿ, ಪುಸ್ತಕಗಳ ಪ್ರಕಟಣೆ, ಧ್ಯಾನದ ಕ್ಯಾಂಪ್ ಗಳನ್ನು ನಡೆಸುವದು ಇತ್ಯಾದಿ ಶುರುಮಾಡಿಕೊಂಡಿದ್ದರು. ನೀಲಗಿರಿ ಅನ್ನುವ ಹೆಸರು ಏಕನಾಥ ಈಶ್ವರನ್ ಅವರ ಮೂಲ ಸ್ಥಳದಿಂದ ಪ್ರಭಾವಿತ. ಅವರು ಹುಟ್ಟಿದ್ದು, ಬೆಳೆದಿದ್ದು ಎಲ್ಲ ಕೇರಳದ ನೀಲಗಿರಿ ಬೆಟ್ಟದ ತಪ್ಪಲಲ್ಲೇ.

ನಿಸರ್ಗದ ಮಡಿಲಲ್ಲಿ ರಾಮಗಿರಿ ಆಶ್ರಮ

ಸುಮಾರು ೧೯೬೫ ರ ಹೊತ್ತಿಗೆ ಶ್ರೀ ಏಕನಾಥ ಈಶ್ವರನ್ ಪೂರ್ಣ ಪ್ರಮಾಣದ ಧ್ಯಾನದ ಶಿಕ್ಷಕ, ಪ್ರವಚನಕಾರ, ಲೇಖಕ  ಅಂತ ಬದಲಾದರು. ಇಂಗ್ಲೀಶ್ ಅಧ್ಯಾಪನ ನಿಂತಿತು. full time ಅಧ್ಯಾತ್ಮದ ಅಧ್ಯಾಪನ ಶುರುವಾಯಿತು. ಅವರೇ ಹೇಳುವಂತೆ, 'Earlier I used to teach skills to make a living. Now I teach skills to make a life' ಅನ್ನುವ ಮಾದರಿಯಲ್ಲಿ ತಮ್ಮ professional direction ಬದಲು ಮಾಡಿಕೊಂಡರು. ಅವರ ಪ್ರಕಾರ ಎಲ್ಲವನ್ನೂ ಶ್ರೀಕೃಷ್ಣ ಮಾಡಿಸಿದ. ಶ್ರೀಕೃಷ್ಣ ಅವರ ಆರಾಧ್ಯ ದೈವ. ಅವರ ಅಜ್ಜಿ (ತಾಯಿಯ ತಾಯಿ) ಅವರ ಅಧ್ಯಾತ್ಮಿಕ ಗುರು.

ಅವರ ಪ್ರವಚನಗಳನ್ನು ಆಧಾರಿಸಿ ಅನೇಕ ಪುಸ್ತಕಗಳನ್ನು ಬರೆದು ಪ್ರಕಟಮಾಡಿದರು. ಅವುಗಳಲ್ಲಿ ಭಗವದ್ಗೀತೆ ಭಾಷ್ಯ, ಉಪನಿಷತ್ತುಗಳ ಭಾಷ್ಯ, ಧಮ್ಮಪಾದದ ಭಾಷ್ಯ, ಮತ್ತಿತರ ಪುಸ್ತಕಗಳು ಬಹಳ ಪ್ರಖ್ಯಾತವಾದವು. ಬೇರೆ ಧರ್ಮಗಳ ಅನೇಕ ಗ್ರಂಥಗಳ ಮೇಲೂ ಸಾಕಷ್ಟು ಪುಸ್ತಕ ಬರೆದರು. ತಾವು ತುಂಬ ಇಷ್ಟಪಡುತ್ತಿದ್ದ ಗಾಂಧಿ, ಗಡಿನಾಡ ಗಾಂಧಿ ಬಾದಶಾ ಖಾನ್ ಮೇಲೂ ಪುಸ್ತಕ ಬರೆದರು. ಅವೆಲ್ಲ ತುಂಬ ಪಾಪ್ಯುಲರ್ ಆದವು. ಮಾರುಕಟ್ಟೆಯಲ್ಲಿ ಯಶಸ್ವಿಯೂ ಆದವು. ಇಂದೂ ಸಹ ಅನೇಕ ಪುಸ್ತಕಗಳು ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿವೆ. ಅಂತಹ ಪುಸ್ತಕಗಳು ಅನೇಕ ಭಾಷೆಗಳಿಗೆ ತರ್ಜುಮೆಗೊಂಡು ಅಮೇರಿಕಾದ ಹೊರಗೂ ಶ್ರೀ ಈಶ್ವರನ್ ಅವರಿಗೆ ಅನುಯಾಯಿಗಳು ಸಿಕ್ಕರು. ಧ್ಯಾನದ ಕ್ಯಾಂಪುಗಳಿಗೆ (Meditation Retreats) ಜಗತ್ತಿನ ಬೇರೆ ಬೇರೆ ಕಡೆಯಿಂದ ಜನರು ಬರಲು ಶುರು ಮಾಡಿ ಅಮೇರಿಕಾದ ಹೊರಗೂ ಈಶ್ವರನ್ ಖ್ಯಾತರಾದರು.

ಇಷ್ಟೆಲ್ಲ ಸಾಧನೆ ಮಾಡಿದರೂ ಶ್ರೀ ಏಕನಾಥ ಈಶ್ವರನ್ publicity ಹಿಂದೆ, ಪ್ರಚಾರದ ಹಿಂದೆ ಎಂದೂ ಓಡಲಿಲ್ಲ. ತಮ್ಮ ಶಿಷ್ಯ ಸಮುದಾಯದ ಅಭ್ಯುದಯವೇ ತಮ್ಮ ಮುಖ್ಯ ಗುರಿ ಅನ್ನುವ ಮಾದರಿಯಲ್ಲಿ, ಟಿಪಿಕಲ್ ಗುರುಕುಲದ ಪರಮಗುರುವಿನ ಹಾಗೆ, ತಮ್ಮ ಶಿಷ್ಯರನ್ನು, ಅವರ ಅಧ್ಯಾತ್ಮ ಸಾಧನೆಯನ್ನು ಗಮನಿಸುತ್ತ, ಅಗತ್ಯವಿದ್ದಲ್ಲಿ ತಿದ್ದುತ್ತ, ಸತತವಾಗಿ ಸುಮಾರು ನಲವತ್ತು ವರ್ಷ ಪ್ರತಿನಿತ್ಯ ಪ್ರವಚನ ಕೊಡುತ್ತ, ಪುಸ್ತಕ ಬರೆಯುತ್ತ, ತಮ್ಮದೇ ಪ್ರಕಾಶನದ ಮೂಲಕ ಅವನ್ನು ಪ್ರಕಟಿಸುತ್ತ, ತಮ್ಮ ಜೀವನ ಸವೆಸಿದರು ಶ್ರೀ ಏಕನಾಥ ಈಶ್ವರನ್. ಮಹಾನ್ ವ್ಯಕ್ತಿ. ಅದರ ಬಗ್ಗೆ ದೂಸರಾ ಮಾತಿಲ್ಲ.

ಮೊದಲೇ ಹೇಳಿದಂತೆ ಶ್ರೀ ಏಕನಾಥ ಈಶ್ವರನ್ ಅವರದು holistic approach to spirituality. ಹಾಗಾಗಿಯೇ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು, ತಮ್ಮ ಶಿಷ್ಯ ಸಮುದಾಯವನ್ನು ತೊಡಗಿಸಿಕೊಂಡರು. ಆಫ್ರಿಕಾದ ಆನೆಗಳ ಸಂರಕ್ಷಣೆ ಬಗ್ಗೆ ಮಾಡಿದ ಕೆಲಸಕ್ಕೆ ಯುನೈಟೆಡ್ ನೇಶನ್ಸ್ ಪ್ರಶಸ್ತಿ ಬಂತು. ಅಮೇರಿಕಾದಲ್ಲಿ ಸಸ್ಯಾಹಾರವನ್ನು ಒಂದು ಚಳುವಳಿ  ಮಾದರಿಯಲ್ಲಿ ಬೆಳಸಿದವರೇ ಅವರು. ಅವರ ಶಿಷ್ಯೆ, ನಮ್ಮ ಆತ್ಮೀಯ ಹಿರಿಯ ಭಗಿನಿ, ಲಾರೆಲ್ ರಾಬರ್ಟ್ಸನ್ ಬರೆದ ಸಸ್ಯಾಹಾರಿ ಅಡುಗೆಯ ಪುಸ್ತಕ ಇಂದಿಗೂ ಬೆಸ್ಟ್ ಸೆಲ್ಲರ್. ಈಶ್ವರನ್ ಅಂತಹ ಮಹನೀಯರು ಮಾಡಿದ ಕೆಲಸಗಳಿಂದಲೇ ಇಂದು ಸಸ್ಯಾಹಾರ ಅಮೇರಿಕಾದಲ್ಲಿ ಪ್ರಸಿದ್ಧವಾಗಿ, ಜನರಿಗೆ ಸಸ್ಯಾಹಾರದ ಮಹತ್ವ ತಿಳಿದದ್ದು.

ಶಿಷ್ಯರೆಂದರೆ ಕೇವಲ ಮನುಷ್ಯರಷ್ಟೇ ಅಲ್ಲ. ಶ್ವಾನ ಶಿಷ್ಯರಾದ ಮೂಕಾ ಮತ್ತು ಗಣೇಶರೊಂದಿಗೆ ಗುರುಗಳು

೧೯೫೯ ರಲ್ಲಿ, ತಮ್ಮ ಐವತ್ತನೇ ವಯಸ್ಸಿನಲ್ಲಿ, ಕೇವಲ ಎರಡು ವರ್ಷದ ಮಟ್ಟಿಗೆ ಅಂತ ಅಮೇರಿಕಾಗೆ ಬಂದಿದ್ದರು ಶ್ರೀ ಈಶ್ವರನ್. ಆದರೆ ಆ ಭಗವಂತ ಹಾಕಿದ ಯೋಜನೆ ಬೇರೇನೋ ಇತ್ತು. ಅದಕ್ಕೇ ಇಂಗ್ಲೀಶ್ ಮಾಸ್ತರರು ಅಧ್ಯಾತ್ಮದ ಮಾಸ್ತರರಾಗಿ ಬದಲಾದರು. ಎರಡು ವರ್ಷಕ್ಕೆ ಬಂದವರು ಅಖಂಡ ನಲವತ್ತೂ ಚಿಲ್ಲರೆ ವರ್ಷ ಇಲ್ಲೇ ಇದ್ದರು. ೧೯೯೯ ರಲ್ಲಿ ತಮ್ಮ ತೊಂಬತ್ತನೇ ವಯಸ್ಸಿನಲ್ಲಿ ಸಮಾಧಿ ಹೊಂದಿದರು. ಹಲವಾರು ಶ್ರೇಷ್ಠ ಪುಸ್ತಕಗಳಿಂದ, ಪ್ರವಚನಗಳ ಸಾವಿರಾರು ಘಂಟೆಗಳ ಆಡಿಯೋ ವೀಡಿಯೊ ರೆಕಾರ್ಡಿಂಗ್ ಗಳಿಂದ ಇವತ್ತಿಗೂ ಆಸಕ್ತಿಯುಳ್ಳವರಿಗೆ ಮಾರ್ಗದರ್ಶನ ಮಾಡುತ್ತಲೇ ಇದ್ದಾರೆ ಶ್ರೀ ಈಶ್ವರನ್. ಮುಂದೆಯೂ ಇರುತ್ತಾರೆ.

ಶ್ರೀ ಏಕನಾಥ ಈಶ್ವರನ್ ಅವರ ಮಹಾ ಸಮಾಧಿಯ ನಂತರ ಅವರ ಪತ್ನಿ ಶ್ರೀಮತಿ ಕ್ರಿಸ್ಟಿನ್ ಈಶ್ವರನ್ ಮತ್ತು ಅವರ ಮೊದಲನೇ ತಲೆಮಾರಿನ ಶಿಷ್ಯರು ಅವರ ಕೆಲಸವನ್ನು Blue Mountain Center of Meditation ಮುಖಾಂತರ ಮುಂದುವರೆಸಿದ್ದಾರೆ. ಶ್ರೀಮತಿ ಈಶ್ವರನ್ ಅವರಿಗೆ ಈಗ ೯೪ ರ ತುಂಬು ಹರೆಯ. ಹೆಚ್ಚೆಂದರೆ ಅರವತ್ತು ವರ್ಷದ ಮಹಿಳೆಯ ಹಾಗೆ ಕಾಣುವ ಅವರು ತುಂಬ ಚಟುವಟಿಕೆಯಿಂದ ಇದ್ದಾರೆ. ಹೋದವರನ್ನೆಲ್ಲ ತುಂಬ ಪ್ರೀತಿಯಿಂದ ಮಾತಾಡಿಸುತ್ತ, ಈಶ್ವರನ್ ಅವರ ಸಂದೇಶವನ್ನು ಸಾರುತ್ತ, ಓದುತ್ತ, ಬರೆಯುತ್ತ, ಚಟುವಟಿಕೆಯ ಚಿಲುಮೆಯಂತೆ ಇದ್ದಾರೆ. ಎಲ್ಲ ಅವರ ಅರವತ್ತು ಚಿಲ್ಲರೆ ವರ್ಷಗಳ ಅಖಂಡ ಸಾಧನೆಯ ಫಲ. ಈಶ್ವರನ್ ಅವರ ಮೊದಲನೇ ತಲೆಮಾರಿನ ಉಳಿದ ಶಿಷ್ಯರೂ ಅಷ್ಟೇ. ಎಲ್ಲರಿಗೂ ಎಪ್ಪತ್ತರ ಹತ್ತಿರ ವಯಸ್ಸು. ಆದರೆ ಅವರ energy level ನೋಡಿದರೆ ನಮ್ಮಂತವರು ದಂಗು ಹೊಡೆಯಬೇಕು. ಎಲ್ಲ ಹಲವಾರು ವರ್ಷಗಳ ಸಾಧನೆಯ ಫಲ. ಶಿಸ್ತು ಬದ್ಧ ಜೀವನ ಶೈಲಿ. ಮುಖ್ಯವಾಗಿ integrated & holistic approach to spirituality. ಅದೇ ಮುಖ್ಯ ಕಾರಣ. ಎದ್ದು ನಾಕು ಹೆಜ್ಜೆ ಇಡಲು ಆಗದೇ, ಪಲ್ಲಕ್ಕಿ ಏರುವ ಸ್ವಾಮಿಗಳೇ ಜಾಸ್ತಿಯಾಗಿರುವ ಸಮಯದಲ್ಲಿ ಇಲ್ಲಿನ ರಾಮಗಿರಿಯ ಸಂತರು ತುಂಬ ವಿಶಿಷ್ಟರಾಗಿ ಕಾಣುತ್ತಾರೆ. ಅವರು ತಮ್ಮನ್ನು ಸಂತರು, ಸ್ವಾಮಿಗಳು ಅಂತೆಲ್ಲ ಬ್ರಾಂಡ್ ಮಾಡಿಕೊಳ್ಳುವದೇ ಇಲ್ಲ. ಆ ಮಾತು ಬೇರೆ.

ಈಗಲೂ ಅಷ್ಟೇ. ಶ್ರೀ ಈಶ್ವರನ್ ಸ್ಥಾಪಿಸಿದ ಸಂಸ್ಥೆಗೆ ಪ್ರಚಾರದ ಹಪಾಹಪಿಯಿಲ್ಲ. ಹುಯ್ಯಂತ ದೊಡ್ಡ ಪ್ರಮಾಣದಲ್ಲಿ ಬೆಳೆಸುವ ಆಲೋಚನೆಯಂತೂ ಇಲ್ಲವೇ ಇಲ್ಲ. ಎಷ್ಟರ ಮಟ್ಟಿಗೆ ಅಂದರೆ ಆಶ್ರಮಕ್ಕೆ ಒಂದು ಸರಿಯಾದ ಬೋರ್ಡ್ ಸಹ ಇಲ್ಲ. ರಸ್ತೆಯ ಮೇಲೆಯೇ ಇದ್ದರೂ, ಅದರ ಬಗ್ಗೆ ಗೊತ್ತಿಲ್ಲದವರಿಗೆ, ಇಲ್ಲಿಯೇ ರಾಮಗಿರಿ ಆಶ್ರಮ ಇದೆ ಅಂತ ಗೊತ್ತೂ ಆಗುವದಿಲ್ಲ. ದೇವಸ್ಥಾನದಂತೆ ಮಾಡಿಕೊಂಡು, ಉತ್ಸವಮೂರ್ತಿಗಳಂತೆ ಆಗಿ, ಮಾಡುವ ಮುಖ್ಯವಾದ ಕೆಲಸ ಬಿಟ್ಟು, ಸುಮ್ಮನೆ ಕೆಲಸವಿಲ್ಲ ಅಂತ ಆಶ್ರಮಕ್ಕೆ ಬಂದು ಹಾಳು ಹರಟೆ ಹೊಡೆಯುವವರ ಕಿರಿಕಿರಿ ಬೇಡ ಅಂತಲೇ ಹಾಗೆ ಮಾಡಿಟ್ಟುಕೊಂಡು ಇರಬೇಕು ಅವರು. ಯಾಕೆಂದರೆ ತುಂಬ ಚಿಕ್ಕ ಸೆಟಪ್ ಅವರದು. ಆದರೆ ಕೆಲಸ ಬಹಳ. ನಿಜವಾದ ಆಸಕ್ತರು ಹೋದರೆ ತುಂಬ ಪ್ರೀತಿಯಿಂದ ಆಶ್ರಮ ತೋರಿಸಿ, ಎಲ್ಲ ವಿವರಣೆ ನೀಡಲು ಅಲ್ಲಿನವರು ಸದಾ ಸಿದ್ಧ.

ಈಗಲೂ ಆಶ್ರಮದಲ್ಲಿ ಸುಮಾರು ಮೂವತ್ತು ಜನರಿದ್ದಾರೆ. ಶ್ರೀ ಈಶ್ವರನ್ ಹಾಕಿ ಕೊಟ್ಟ ಮಾರ್ಗದಲ್ಲಿಯೇ ಸಾಧನೆ ಮಾಡಿಕೊಂಡಿದ್ದಾರೆ. spiritual retreats ಗಳ ಮೂಲಕ, ಇಂಟರ್ನೆಟ್ ವೆಬಿನಾರ್ ಗಳ ಮೂಲಕ, ಪುಸ್ತಕಗಳ ಮೂಲಕ, ಉಚಿತ ಸೆಮಿನಾರ್ ಗಳ ಮೂಲಕ ಆಸಕ್ತರಿಗೆ, ಸಾಧಕರಿಗೆ ಮಾರ್ಗದರ್ಶನ ಮಾಡುತ್ತಾರೆ. ಆದರೆ ಪರಮಗುರು ಮಾತ್ರ ಶ್ರೀ ಈಶ್ವರನ್ ಅವರೇ. ಎಲ್ಲವೂ ಅವರು ಸ್ಥಾಪಿಸಿದ ಪದ್ಧತಿ ಮೇಲೇ ಆಧಾರಿತ. ಮತ್ತೆ ಅದರಲ್ಲಿ ಎಂದಿಗೂ ಬದಲಾವಣೆ ಇರುವದಿಲ್ಲ.

ಈಗ ಸುಮಾರು ಹನ್ನೆರೆಡು ವರ್ಷಗಳಿಂದ Blue Mountain Center of Meditation ಜೊತೆಗೆ ಒಡನಾಟ ನನ್ನದು. ೨೦೦೧ ರಲ್ಲಿ ಭಗವದ್ಗೀತೆಯ ಮೇಲೆ ಯಾವದಾದರೂ ಒಳ್ಳೆಯ ಪುಸ್ತಕ ಓದೋಣ ಅಂತ ಹುಡುಕುತ್ತಿದ್ದಾಗ ಅಚಾನಕ್ ಆಗಿ ಕಣ್ಣಿಗೆ ಬಿದ್ದಿದ್ದು ಶ್ರೀ ಏಕನಾಥ ಈಶ್ವರನ್ ಬರೆದ ಮೂರು ಸಂಪುಟಗಳ ಅದ್ಭುತ ಗೀತಾ ಭಾಷ್ಯ. ಮುಂದೆ ಒಂದಕ್ಕೊಂದು ಆಯಿತು. ಅತೀ ಸರಳವೆನ್ನಿಸುವ ಅವರ spiritual system ಸುಮ್ಮನೆ ಟ್ರೈ ಮಾಡಿ ನೋಡಿದೆ. ಅದ್ಭುತ positive ಪರಿಣಾಮಗಳು ಮೂಡಿ ಬಂದವು. ಮುಖ್ಯವಾಗಿ stress ಕಮ್ಮಿಯಾಗಿ, vision ಶುಭ್ರವಾಗಿ, ಜೀವನದ ಆದ್ಯತೆಗಳು ಸ್ಪಷ್ಟವಾಗುತ್ತ ಹೋದವು. ಮುಂದೆ ಬೇರೆ ಏನೇನೋ ವೇದಾಂತ, ತತ್ವಜ್ಞಾನ, metaphysics ಎಲ್ಲ ಓದಿರಬಹುದು ಬಿಡಿ. ಆದರೆ ಅದ್ವೈತ ವೇದಾಂತದ ಹೆಚ್ಚಿನ ಅಧ್ಯಯನಕ್ಕೆ, ಸಾಧನೆಗೆ ಒಂದು ಫೌಂಡೇಶನ್ ಹಾಕಿ ಕೊಟ್ಟಿದ್ದು ಮಾತ್ರ ಶ್ರೀ ಈಶ್ವರನ್ ಮತ್ತು ಅವರ ಧ್ಯಾನದ ಪದ್ಧತಿ. ಅದಕ್ಕೆ ಚಿರಋಣಿ. ನಂತರ ಆಶ್ರಮದಲ್ಲಿ ನಡೆಯುವ ವಾರಾಂತ್ಯದ, ಪೂರ್ತಿ ವಾರದ spiritual retreats ಗೆ ಹೋಗುವದನ್ನು ಶುರು ಮಾಡಿದಾಗಿಂದ ಆಶ್ರಮದ ಜನರು ತುಂಬ ಆತ್ಮೀಯರಾದರು. ಅವರ extended family ಒಳಗೆ ನಮಗೂ ಒಂದು ಜಾಗ ಸಿಕ್ಕಿ, ಆಶ್ರಮದಲ್ಲಿ ಆಗುವ ಕಾರ್ಯಕ್ರಮಗಳಿಗೆ ಇತ್ಯಾದಿಗಳಿಗೆ ಆಹ್ವಾನ ಬರತೊಡಗಿತು. ಈಗ ಆರು ವರ್ಷಗಳ ಹಿಂದೆ ಸ್ಯಾನ್ ಫ್ರಾನ್ಸಿಸ್ಕೋ ಏರಿಯಾಗೆ ಬಂದ ನಂತರ ಅವರೆಲ್ಲರ ಜೊತೆ ಒಡನಾಟ ಇನ್ನೂ ಹೆಚ್ಚಾಯಿತು. ನಾವಿದ್ದ ಜಾಗದಿಂದ ಕೇವಲ ೯೦ ಮೈಲಿ ದೂರ. ಒಂದೂವರೆ ಘಂಟೆ ಸಾಕು ಕಾರಿನಲ್ಲಿ ಹೋಗಲು. ಇಷ್ಟು ಹತ್ತಿರದಲ್ಲಿ ಇಷ್ಟೆಲ್ಲ ಮಹಾನ್ ಸಾಧಕರ ಒಡನಾಟ ಸಿಕ್ಕಿದ್ದು ನಮ್ಮ ಪುಣ್ಯ, ಭಾಗ್ಯ. ನಾವು ಅಂತ ಅಲ್ಲ, ಎಲ್ಲರನ್ನೂ ಅದೇ ರೀತಿ ಆದರಿಸುವದು ಅವರ ರೂಢಿ.

ಮೊನ್ನೆ ಅಕ್ಟೋಬರ್ ೨೫ ರಂದು ಶ್ರೀ ಏಕನಾಥ ಈಶ್ವರನ್ ಅವರ ಹದಿನೈದನೇ ಪುಣ್ಯತಿಥಿಯನ್ನು ಆಚರಿಸಲಾಯಿತು. Attendance by invitation only. ಆಶ್ರಮಕ್ಕೆ ಆಪ್ತರಾದ ಸುಮಾರು ಒಂದು ನೂರು ಜನ ಆಮಂತ್ರಿತರಾಗಿದ್ದರು. ಅದರಲ್ಲಿ ಒಂದಿಷ್ಟು ತುಂಬ ಖಾಸ್ ಜನರಿಗೆ ವಾರಾಂತ್ಯದಲ್ಲಿ ಆಶ್ರಮದ ಪಕ್ಕದಲ್ಲಿರುವ retreat house ನಲ್ಲಿ ಉಳಿಯುವ ಅವಕಾಶ ಕಲ್ಪಿಸಿದ್ದರು. ನಮ್ಮ ಸೌಭಾಗ್ಯಕ್ಕೆ ನಮಗೂ ಆ ಅವಕಾಶ ಸಿಕ್ಕಿತ್ತು. ಆ ಸುಂದರ, ನಿಸರ್ಗ ರಮಣೀಯ ವಾತಾವರಣವಿರುವ ಆಶ್ರಮದ ಸೆಟಪ್ ನಲ್ಲಿ ಮೂರು ದಿವಸ ಇದ್ದು ಬರುವ ಭಾಗ್ಯ ನಮ್ಮದು. spiritual retreat ಅಂತ ಅಲ್ಲಿ ವರ್ಷಕ್ಕೆ ಎರಡು ಮೂರು ಸಲ ಹೋಗಿ, ಒಂದು ವಾರ ಇದ್ದು ಬರುವದು ಬೇರೆ. ಅದೆಲ್ಲ ಒಂದು ತರಹದ structured retreat ತರಹದ ಪ್ರೊಗ್ರಾಮ್. ಅದೇ ಬೇರೆ. ಈಗ ಪುಣ್ಯತಿಥಿ ಬಿಟ್ಟರೆ ಯಾವದೇ ನಿಶ್ಚಿತ ಕಾರ್ಯಕ್ರಮ ಇಲ್ಲದೆ, ಮಳೆಗಾಲದ ತಂಪು ಹವೆಯಲ್ಲಿ, ಸುಂದರ ನಿಸರ್ಗ ನೋಡುತ್ತ, ಎದ್ದು ಹೋದರೆ ಮೈಮೇಲೆ ಕೈಯಾಡಿಸುವಷ್ಟು ಹತ್ತಿರದಲ್ಲಿ ತಮ್ಮ ಪಾಡಿಗೆ ಇರುವ ಜಿಂಕೆಗಳನ್ನು ನೋಡುತ್ತ, ಒಂದಿಷ್ಟು ಪುಸ್ತಕ ಓದುತ್ತ, ಮೊಬೈಲ್, ಇಂಟರ್ನೆಟ್, ನ್ಯೂಸ್ ಪೇಪರ್ ಇತ್ಯಾದಿಗಳ ಜಂಜಡವಿಲ್ಲದೇ ನಾಕು ದಿವಸ ಆರಾಮಾಗಿ ಇದ್ದು ಬಂದಾಯಿತು. ನಂತರ ಬರೆದಿದ್ದೇ ಇದು.

ಇದನ್ನು ಓದಿದ ಕೆಲವರಾದರೂ ಶ್ರೀ ಈಶ್ವರನ್ ಅವರ website ನೋಡಿ, ಅವರ ಪ್ರವಚನದ  ವೀಡಿಯೊಗಳನ್ನು ವೀಕ್ಷಿಸಿ, ಅವರ ಪುಸ್ತಕಗಳನ್ನು ಓದಿ, ಅವುಗಳಿಂದ ಏನಾದರೂ ಉಪಯೋಗ ಪಡೆದುಕೊಂಡರೆ ಅದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ನಮಗೆ ಸಿಕ್ಕ ಭಾಗ್ಯ ತಮಗೂ ಸಿಗಲಿ. ಅಧ್ಯಾತ್ಮ ಸಾಧನೆಯಿಂದ (spiritual practice) ಎಲ್ಲರಿಗೂ ಒಳ್ಳೆಯದಾಗಲಿ. ಶುಭಂ ಅಸ್ತು।।

*******************
ಒಂದಿಷ್ಟು ಫೋಟೋಗಳು:

ರಾಮಗಿರಿ ಆಶ್ರಮ - ೧
ರಾಮಗಿರಿ ಆಶ್ರಮ - ೨
ರಾಮಗಿರಿ ಆಶ್ರಮದಲ್ಲಿ ಕಾಡು ಜಿಂಕೆಗಳು. 

*******************

http://www.easwaran.org/ -  ಭರಪೂರ ಮಾಹಿತಿಯಿಂದ ಕೂಡಿದ ಆಶ್ರಮದ website. ಆಸಕ್ತರಿಗೆ ಎಲ್ಲ ವಿವರಗಳೂ ಸಿಗುತ್ತವೆ. youtube ಮೇಲೆ, ಗೂಗಲ್ ಬುಕ್ಸ್ ಮೇಲೆ ಸಹ ಬೇಕಾದಷ್ಟು ಮಾಹಿತಿ ಇವೆ. ಆಸಕ್ತರು ಅವನ್ನೂ ನೋಡಬಹದು.

ಭಾರತದಲ್ಲಿ ಜೈಕೋ ಬುಕ್ಸ್ ಶ್ರೀ ಈಶ್ವರನ್ ಅವರ ಪುಸ್ತಕಗಳ ಲೋಕಲ್ ಎಡಿಷನ್ ಹೊರತರುತ್ತದೆ. ಭಾರತದ ಎಲ್ಲ ದೊಡ್ಡ ಪುಸ್ತಕದ ಅಂಗಡಿಗಳಲ್ಲಿ ಅವರ ಪುಸ್ತಕಗಳು ಲಭ್ಯ.

*******************

ಶ್ರೀ ಏಕನಾಥ ಈಶ್ವರನ್ ಅವರ ಪುಸ್ತಕಗಳು, ಪ್ರವಚನಗಳ ಮೇಲೆ ಆಧಾರಿತ ಹಳೆಯ ಬ್ಲಾಗ್ ಪೋಸ್ಟುಗಳು ಎಲ್ಲ ಇಲ್ಲಿವೆ. 

*******************

೨೦೦೫ ರಲ್ಲಿ ಮೊದಲ ಬಾರಿಗೆ ರಾಮಗಿರಿ ಆಶ್ರಮಕ್ಕೆ ಭೆಟ್ಟಿ ಕೊಟ್ಟು ಬಂದ ನಂತರ ಬರೆದ ಒಂದು ಹಳೆಯ ಬ್ಲಾಗ್ ಪೋಸ್ಟ್.

1 comment:

Vimarshak Jaaldimmi said...


Excellent!

Wonderful to see those Jummies there!!