Sunday, April 20, 2014

ಶ್ರೀಮತಿ ಕೆನಡಿ ಶ್ರೀಮತಿ ಓನಾಸಿಸ್ ಆಗುವ ತನಕ.... (ಭಾಗ - ೨)

(ಹಿಂದಿನ ಭಾಗ -೧ ಇಲ್ಲಿದೆ)

ಜಾಕಿ ಕೆನಡಿ, ಅಮೇರಿಕಾದ ಪ್ರಥಮ ಮಹಿಳೆ, ಅಧ್ಯಕ್ಷರ ಪತ್ನಿ, ಮನೆ ಬಿಟ್ಟು ಓಡಿ ಹೋಗಿ, ಅಲ್ಲಿ ದೂರದ ಗ್ರೀಸ್ ದೇಶದ ಶ್ರೀಮಂತ ಅರಿಸ್ಟಾಟಲ್  ಓನಾಸಿಸ್ ನ ಹಡಗಿನಲ್ಲಿ ಝೇಂಡಾ ಹೊಡೆದಿದ್ದಾರೆ ಅನ್ನೋ ಸುದ್ದಿ ಅಮೇರಿಕಾದಲ್ಲಿ ಅಂತೂ ಹರಡಿತು. ಈಗಿನ ಹಾಗೆ ಮಿಂಚಿನಂತೆ ಸುದ್ದಿ ಹರಡುವ ಕಾಲ ಅದಲ್ಲ. ರಾಜಧಾನಿ ವಾಷಿಂಗ್ಟನ್ ನಲ್ಲಿ ಸುಮಾರು ಸುದ್ದಿ ಆಯಿತು. ಅಯ್ಯೋ ಬಿಡ್ರೀ! ಕೆನಡಿ ಸಾಹೇಬ್ರೇನು ಶ್ರೀರಾಮಚಂದ್ರನೆ? ಅವರ ಕಚ್ಚೆಹರಕುತನಕ್ಕೆ ಬೇಸರಗೊಂಡು ಅಮ್ಮಾವರು ಹೋಗಿಬಿಟ್ಟಿದ್ದಾರೆ, ಅಂತ ಜನ ಮಾತಾಡಿಕೊಂಡು ಸುಮ್ಮನಾಗುತ್ತಿದ್ದರೋ ಏನೋ. ಆದರೆ.......

ಆದರೆ ಯೂರೋಪಿನ ಪಾಪರಾಜಿ ಫೋಟೋಗ್ರಾಫರ್ ಮುಂಡೆ ಮಕ್ಕಳು ಬಿಡಬೇಕಲ್ಲ? ಓನಾಸಿಸ್ ನ ಹಡಗಿನ ಹತ್ತಿರವೇ ದೋಣಿಗಳಲ್ಲಿ ಹೋಗಿ, ಮೇಲಿಂದ ಹೆಲಿಕಾಪ್ಟರ್ ನಲ್ಲಿ ಹೋಗಿ, ಹಡಗಿನ ಡೆಕ್ ಮೇಲೆ, ಕೇವಲ ಈಜುಡುಗೆ ಧರಿಸಿ, ಎಲ್ಲರಿಗೆ ಸಕಲವನ್ನೂ ಧರ್ಮದರ್ಶನ ಮಾಡಿಸುತ್ತ ಮಲಗಿದ್ದ ಜಾಕಿ ಕೆನಡಿ ಮೇಡಂ ಅವರ ಹಲವಾರು ಚಿತ್ರಗಳನ್ನು ತೆಗೆದುಕೊಂಡು ಬಂದು ಪ್ರಪಂಚದ ಎಲ್ಲ ಪತ್ರಿಕೆಗಳಿಗೆ ಮಾರಿ ಬಿಟ್ಟರು. 'ಶಿಪ್ಪಿಂಗ್ ಟೈಕೂನ್ ಜೊತೆ ಅಮೇರಿಕಾದ ಪ್ರಥಮ ಮಹಿಳೆಯ ಜಮ್ಮ ಚಕ್ಕ' ಅನ್ನುವ ಅರ್ಥದಲ್ಲಿ ಪತ್ರಿಕೆಗಳಲ್ಲಿ ಫೋಟೋ, ವರದಿ ಎಲ್ಲ ಬಂದು ಬಿಟ್ಟಿತು.

ಕೆನಡಿ ಸರ್ಕಾರಕ್ಕೆ ದೊಡ್ಡ ಮುಜುಗರ. ಕೆನಡಿ ಕುಟುಂಬಕ್ಕೆ ಇನ್ನೂ ದೊಡ್ಡ ಮುಜುಗರ. ರಾಜಕೀಯವಾಗಿ ತುಂಬ ಮಹತ್ವಾಕಾಂಕ್ಷಿ ಆ ಕುಟುಂಬದ ಹಿರಿಯ ಜೋಸೆಫ್ ಕೆನಡಿ. ಹಿರಿ ಸೊಸೆ ಹೀಗೆ ಮಾಡಿದ್ದು ಅವರಿಗೆ ದೊಡ್ಡ ಇರುಸು ಮುರುಸು. ಮನೆತನದ ಮರ್ಯಾದೆಕಿಂತ ಕುಟುಂಬದ ರಾಜಕೀಯ ಭವಿಷ್ಯದ ಮೇಲೆ ಇದು ಹೇಗೆ ಪರಿಣಾಮ ಬೀರಬಹದು ಅಂತ ತಲೆ ಕೆಡೆಸಿಕೊಂಡು ಕೂತರು ಜೋ ಕೆನಡಿ.

ಏ! ಮೇಡಂ ಸುಮ್ಮನೆ ವಿಹಾರಕ್ಕೆ ಹೋಗಿದ್ದಾರೆ. ಅಧ್ಯಕ್ಷರು ತುಂಬಾ ಬಿಜಿ ಇದ್ದರಿಂದ ಮೇಡಂ ಅವರಿಗೆ ಒಬ್ಬರೇ ಹೋಗಿ ಬಾ ಅಂತ ಕಳಿಸಿದ್ದಾರೆ, ಅಂತ ಶ್ವೇತ ಭವನದ ವಕ್ತಾರರು ಭೋಂಗು ಬಿಟ್ಟರು. ಕೆಲ ಪತ್ರಿಕೆಗಳು ಕೊಟ್ಟ ಪ್ರಸಾದ ತೆಗೆದುಕೊಂಡು ತಿಪ್ಪೆ ಸಾರಿಸಿದರೆ, ಕೆಲವು ಕೆನಡಿ ವಿವಾಹ ಅವಸಾನಕ್ಕೆ ಬಂದು ನಿಂತಿದೆ ಅಂತ ಬರೆದು ಬಿಟ್ಟು, ಅಧ್ಯಕ್ಷರ ರೇಟಿಂಗ್ ಕಮ್ಮಿ ಮಾಡಿಬಿಟ್ಟವು. ಜೋ ಕೆನಡಿ ಅವರಿಗೆ ಮತ್ತೂ ದೊಡ್ಡ ಚಿಂತೆ.

ಅಧ್ಯಕ್ಷ ಜಾನ್ ಕೆನಡಿ ಅವರ ಹತ್ತಿರ ಮಾತಾಡೋಣ ಅಂದ್ರೆ ಅವರು ಕ್ಯೂಬಾ, ರಶಿಯನ್ ಕ್ಷಿಪಣಿ ಸಂಘರ್ಷ, ಫೀಡೆಲ್ ಕ್ಯಾಸ್ಟ್ರೋ, ಅದು ಇದು ಅಂತ ತುಂಬ ತಲೆಬಿಸಿಯಲ್ಲಿ ಇದ್ದರು. ಮತ್ತೆ ಅಧ್ಯಕ್ಷರು ಹಾಗೆಲ್ಲ ಹೋಗಿ ಹೆಂಡತಿ ಕರಕೊಂಡು ಬರೋದು ಅಂದ್ರೆ ತಮಾಷೆಯಲ್ಲ. ಅವರ ತಮ್ಮ ಬಾಬ್ಬಿ ಕೆನಡಿ ಕಳಿಸೋಣ ಅಂದ್ರೆ ಅವರು ಅದೇ ಸರ್ಕಾರದಲ್ಲಿ ಅಟಾರ್ನಿ ಜನರಲ್. ಮತ್ತೆ ಅರಿಸ್ಟಾಟಲ್ ಓನಾಸಿಸ್ ಎಂಬ ಶಿಪ್ಪಿಂಗ್ ಟೈಕೂನನನ್ನು ತಡವಿಕೊಂಡು ಕೇಸ್ ಹಾಕಿದ್ದರು. ದುಡ್ಡು ಮಾಡುವ ಅಬ್ಬರದಲ್ಲಿ ಓನಾಸಿಸ್ ಅಮೇರಿಕಾದ ಕಾಯಿದೆ ಮುರಿದಿದ್ದ ಅಂತ ನೆಪ. ಪಮೇಲಾ ಚರ್ಚಿಲ್ಲ ಎಂಬ ಮಹಿಳಾಮಣಿ ಓನಾಸಿಸ್ ನ ಕಡುವೈರಿಯ ರಖಾವು ಆಗಿ, ಕೆನಡಿ ಮೇಲೆ ಪ್ರಭಾವ ಬೀರಿ ಕೇಸ್ ಹಾಕಿಸಿದ್ದಳು ಅಂತಲೂ ಸುದ್ದಿ ಇತ್ತು. ಹಾಗಾಗಿ ಬಾಬ್ಬಿ ಕೆನಡಿಯವರನ್ನು ಕಳಿಸಿ ಪ್ರಥಮ ಮಹಿಳೆಯನ್ನು ವಾಪಸ್ ಕರೆದುಕೊಂಡು ಬಾ ಅನ್ನುವ ಹಾಗಿಲ್ಲ. ಹಾಗಿದ್ದರೆ ಯಾರನ್ನು ಕಳಿಸುವವದು? ಅಂತ ಹಿರಿಯ ಜೋಸೆಫ್ ಕೆನಡಿ ತಲೆ ಓಡಿಸಿದರು.

ಉಂಡಾಡಿ ಗುಂಡನ ಹಾಗಿದ್ದ ಚಿಕ್ಕ ಮಗ ಟೆಡ್ ಕೆನಡಿ ಕಂಡ. ಹಾರ್ವರ್ಡ್ ಯೂನಿವರ್ಸಿಟಿಗೆ ಡೊನೇಷನ್ ಕೋಟಾದಲ್ಲಿ ಒಂದು ಸೀಟ್ ಕೊಡಿಸಿ ಅಡ್ಮಿಶನ್ ಮಾಡಿಸಿದ್ದರು. ಈ ಯಬಡೇಶಿ ಟೆಡ್ ಅನ್ನುವ ಚಿಕ್ಕ ಮಗ ಪರೀಕ್ಷೆಯಲ್ಲಿ ಕಾಪಿ ಮಾಡಲು ಹೋಗಿ ಸಿಕ್ಕು ಬಿದ್ದ. ಒಂದು ಸೆಮಿಸ್ಟರ್ ಮನೆಗೆ ಹೋಗಿ ಬಾರಪ್ಪ, ಅಂತ ಹಾರ್ವರ್ಡ್ ವಿವಿ ಮನೆಗೆ ಕಳಿಸಿತ್ತು. ಇವನನ್ನು ಗ್ರೀಸ್ ದೇಶಕ್ಕೆ ಕಳಿಸಿದರೆ ಹೇಗೆ? ಅಂತ ವಿಚಾರ ಬಂತು.

ಏ! ಟೆಡ್! ಗ್ರೀಸ್ ದೇಶಕ್ಕೆ ಹೋಗಿ ನಿಮ್ಮ ಅತ್ತಿಗೆಯನ್ನು ಕರೆದುಕೊಂಡು ಬಾ, ಅಂತ ಅಪ್ಪಣೆ ಮಾಡಿದರು ಜೋ ಕೆನಡಿ.

ಮನೆಯಲ್ಲಿ ಕೂತು ಓತ್ಲಾ ಹೊಡೆಯುವದರಕಿಂತ ಯುರೋಪ್ ಸುತ್ತಿ, ಸಾಧ್ಯವಾದರೆ ಮುನಿಸಿಕೊಂಡು ಹೋಗಿರುವ ಅತ್ತಿಗೆಯನ್ನು ಕರೆದುಕೊಂಡು ಬರೋಣ ಅಂತ ಟೆಡ್ ಕೆನಡಿ ಹೊರಟ.

ಟೆಡ್ ಬರುತ್ತಿರುವ ವಿಚಾರ ತಿಳಿದ ಓನಾಸಿಸ್ ಥ್ರಿಲ್ಲೆದ್ದು ಹೋದ. ಒಂದರ ಮೇಲೊಂದು ಕೆನಡಿ ಮಿಕಗಳು ಬಂದು ಬಲೆಗೆ ಬೀಳುತ್ತಿವೆಯಲ್ಲ ಅಂತ ಒಂದು ತರಹದ ವಿಕೃತ ಖುಷಿ ಅವನಿಗೆ. ತನ್ನ ಮೇಲೆ ಕೇಸ್ ಹಾಕಿದ್ದ ಬಾಬ್ಬಿ ಕೆನಡಿ ಮೇಲೆ ಒಂದು ತರಹದ ಸೇಡು ತೀರಿಸಿಕೊಂಡ ಫೀಲಿಂಗ್.

ಗ್ರೀಸ್ ದೇಶಕ್ಕೆ ಬಂದಿಳಿದ ಟೆಡ್ ಕೆನಡಿಯನ್ನು ಸಹ ಅರಿಸ್ಟಾಟಲ್ ಓನಾಸಿಸ್ ತನ್ನ ಐಶಾರಾಮಿ ಹಡಗಿಗೆ ಕರೆಸಿಕೊಂಡು ಬಿಟ್ಟ. ಅಲ್ಲಿಗೆ ಮುಗೀತು ಕಥೆ! ಅವನ ಇಂದ್ರನ ಅರಮನೆಯಂತೆ ಇದ್ದ ಹಡಗು, ಅಲ್ಲಿದ್ದ ಗುಂಡು, ತುಂಡು, ಮಾಲುಗಳನ್ನು ನೋಡಿ ಟೆಡ್ ತಾನು ಯಾಕೆ ಬಂದಿದ್ದೇನೆ ಅನ್ನುವದನ್ನೇ ಮರೆತ. ಮೇಲಿಂದ ಶಿಪ್ಪಿಂಗ್ ಟೈಕೂನನ ರಾಜೋಪಚಾರ ಬೇರೆ!

ಟೆಡ್ ಕೆನಡಿಯವರೇ, ಹಡಗಿನ ಹಿಂದಿನ ಭಾಗದಲ್ಲಿ ತಮಗೆ ಗುಂಡು, ತುಂಡು ಎಲ್ಲ ವ್ಯವಸ್ಥೆ ಮಾಡಿದ್ದೇವೆ. ತನು, ಮನ ಹಗುರ ಮಾಡಲು ದೇಶ ವಿದೇಶಗಳ ಸುಂದರಿ ಮಾಲುಗಳು ಬಂದು ಹೋಗಿ ಮಾಡುತ್ತಿರುತ್ತವೆ. ಎಲ್ಲ ಎಂಜಾಯ್ ಮಾಡಿ. ಇಷ್ಟು ಬೇಗ ಹೋಗುವ ವಿಚಾರ ಮಾಡಲೇ ಬೇಡಿ, ಅಂದವನೇ ಓನಾಸಿಸ್ ಟೆಡ್ ಕೆನಡಿಗೂ ಅಮೃತಾಂಜನ ಹಚ್ಚಿ ತಲೆ ತಿಕ್ಕೇ ಬಿಟ್ಟ. ಅತ್ತಿಗೆಯನ್ನು ಕರೆದೊಯ್ಯಲು ಬಂದ ಮೈದುನನ್ನು ಕರೆದೊಯ್ಯಲು ಇನ್ನು ಯಾರು ಬರಬೇಕೋ ಅನ್ನುವ ರೀತಿಯಲ್ಲಿ ಟೆಡ್ ಸಿಕ್ಕ ಬಿಟ್ಟಿ ತುಂಡು, ಗುಂಡು, ಸುಂದರಿಯರ ಮೇಲೆ ಹರಕೊಂಡು ಬಿದ್ದು ತಾತ್ಕಾಲಿಕವಾಗಿ ಕಳೆದೇ ಹೋದ. ಕೆನಡಿಗಳಿಗೆ ಟಾಂಗ್ ಕೊಟ್ಟ ಖುಷಿಯಲ್ಲಿ ಓನಾಸಿಸ್ ವಿಕೃತ ನಗೆ ನಕ್ಕ.

ಈ ಕಡೆ ಕೆನಡಿ ಮೇಡಂ ಅಂತೂ ಓನಾಸಿಸ್ ಮಾಡಿದ ಉಪಚಾರಗಳಿಂದ ಫುಲ್ ಖುಷ್. ಅವನ ಆಸ್ತಿ, ಪಾಸ್ತಿ, ಸಂಪತ್ತು, ಅದನ್ನು ನೀರಿನಂತೆ ಖರ್ಚು ಮಾಡುವ ಸ್ಟೈಲ್ ನೋಡಿ ಅಮ್ಮಾವರು ಫುಲ್ ಖುಷ್. ಜೊತೆಗೆ ಗಂಡನ ಮೇಲೆ ಕೋಪ ಬೇರೆ. ಮತ್ತೆ ಚಲ್ಲಾಟದ ಸ್ವಭಾವ. ಬಿಂದಾಸ್ ವಾತಾವರಣ. ಹೇಳುವರು ಕೇಳುವರು ಯಾರೂ ಇಲ್ಲ. ಹಾದಿ ತಪ್ಪಲಿಕ್ಕೆ ಇನ್ನೇನು ಬೇಕು? ಇದಕ್ಕೇ ಕಾಯುತ್ತಿದ್ದ ಪ್ಲೇಬಾಯ್ ಕಾಮಣ್ಣ ಅರಿಸ್ಟಾಟಲ್ ಓನಾಸಿಸ್.

ಒಂದು ರಾತ್ರಿ ಕೆನಡಿ ಮೇಡಂ ಅವರನ್ನು ಓನಾಸಿಸ್ ಪಟಾಯಿಸಿಯೇ ಬಿಟ್ಟ. ಲಂಚ ಕೊಟ್ಟಾಗಿತ್ತು. ಮೇಡಂ ಮಂಚ ಹತ್ತಿದರು. ಇನ್ನೊಬ್ಬ ತ್ರಿಪುರ ಸುಂದರಿಯನ್ನು ತಿಂದು ಮುಗಿಸಿದೆ ಅಂತ ಓನಾಸಿಸ್ ತನ್ನ ಡೈರಿಯಲ್ಲಿ ಜಾಕಿ ಕೆನಡಿಯ ಹೆಸರಿನ ಮೇಲೆ ಟಿಕ್ ಮಾಡಿದ.
ಜಾಕಿ ಕೆನಡಿ & ಅರಿಸ್ಟಾಟಲ್ ಓನಾಸಿಸ್

ಮಂಚ ಇಳಿದ ಕೆನಡಿ ಮೇಡಂ ಹಗುರ ಹಗುರ. ಗಂಡ ಅಧ್ಯಕ್ಷ ಕೆನಡಿ ತೋರಿಸದ ಪ್ರೀತಿ, ಒಲುಮೆ, ಮತ್ತೊಂದು ಮಗದೊಂದು ಪ್ರಿಯಕರ ಅರಿಸ್ಟಾಟಲ್ ಓನಾಸಿಸ್ ತೋರಿಸಿದ್ದ. ಮತ್ತೆ ಅವನ ಆಗಿನ ಕಾಲದ ಬಿಲಿಯನ್ ಗಟ್ಟಲೆ ಸಂಪತ್ತು ಕಣ್ಣು ಕೊರೈಸಿತ್ತು. ಕೆನಡಿಗಳು, ಜಾಕಿಯ ತವರಿನ ಕಡೆಯವರೂ ಎಲ್ಲ ಶ್ರೀಮಂತರೇ. ಆದ್ರೆ ಎಲ್ಲ ಮಿಲಿಯನ್ ಲೆಕ್ಕದಲ್ಲಿ ಮಾತಾಡುವರು. ಓನಾಸಿಸ್ ಆಗಲೇ ಬಿಲಿಯನಿಯರ್.

ಗಡಿಬಿಡಿಯಲ್ಲಿ ಜಾನ್ ಕೆನಡಿಯನ್ನು ಮದುವೆಯಾಗಿ ತಪ್ಪು ಮಾಡಿದೆನಾ ಅಂತ ಜಾಕಿಗೆ ಅನ್ನಿಸಿತ್ತಾ? ಯಾರಿಗೆ ಗೊತ್ತು.

ಹೀಗೆ ಗಂಡನ ಮೇಲೆ ಮುನಿದು ಮನೆ ಬಿಟ್ಟು ಹೋಗಿದ್ದ ಅಮೇರಿಕಾದ ಅಂದಿನ ಪ್ರಥಮ ಮಹಿಳೆ ಜಾಕಿ ಕೆನಡಿಗೆ ಅಚಾನಕ್ ಆಗಿ ಒಬ್ಬ ಹೊಸ ಪ್ರಿಯಕರ ಸಿಕ್ಕು ಬಿಟ್ಟಿದ್ದ. ಮುನಿಸು ಮುಗಿದಿತ್ತು. ಅನುರಾಗ ಚಿಮ್ಮಿತ್ತು....ಗಂಡನ ಮೇಲಲ್ಲ....ಓನಾಸಿಸ್ ಎನ್ನುವ ಪ್ಲೇಬಾಯ್ ಬಿಲಿಯನಿಯರ್ ಮೇಲೆ.

ಎಷ್ಟು ದಿವಸ ಅಂತ ಅದೇ ಹಡಗಿನ ಮೇಲೆ ಅಂತ ಇರೋದು? ಮನಸ್ಸಿಲ್ಲದಿದ್ದರೂ ವಾಪಸ್ ಹೊರಡಲೇ ಬೇಕಾಗಿತ್ತು. ಹೇಳಿ ಕೇಳಿ ಅಮೇರಿಕಾದ ಅಧ್ಯಕ್ಷರ ಧರ್ಮಪತ್ನಿ. ಆ ಧರ್ಮ ನಿಭಾಯಿಸಲಿಕ್ಕಾದರೂ ವಾಪಾಸ್ ಹೋಗಲೇ ಬೇಕಾಗಿತ್ತು. ಇಲ್ಲದ ಮನಸ್ಸಿನಿಂದ, ಬರ್ತೀನಿ ಡಾರ್ಲಿಂಗ್, ಮತ್ತೆ ಸಿಗೋಣ, ಅಂತ ಮುದುಕ ಓನಾಸಿಸ್ ಗೆ ಆಖರೀ ಚುಮ್ಮಾ ಮತ್ತೊಂದು ಕೊಟ್ಟು ಜಾಕಿ ಕೆನಡಿ ಮತ್ತು ಆಕೆಯ ತಂಗಿ ವಾಪಸ್ ಹೊರಟು ನಿಂತರು.

ಆವಾಗ ನೆನಪಾಯಿತು. ಓಹೋ! ನಮ್ಮನ್ನು ವಾಪಸ್ ಕರೆಯಲು ಬಂದಿದ್ದನಲ್ಲ, ಅವನೇ ಚಿಕ್ಕ ಮೈದುನ, ಟೆಡ್ ಕೆನಡಿ. ಅವನೆಲ್ಲಿ? ಆ ಉಂಡಾಡಿ ಗುಂಡ, ಓನಾಸಿಸ್ ತೋರಿಸಿದ, ಸ್ಪೆಷಲ್ ಕೋಣೆ ಹೊಕ್ಕವನು, ಹೊರಗಿನ ಖಬರಿಲ್ಲದೆ ಕುಡಿದು, ತಿಂದು, ಸುಂದರಿಯರ ಮಧ್ಯೆ ಕಳೆದು ಹೋಗಿದ್ದ. ಅತ್ತಿಗೆ ಜಾಕಿ ಕೆನಡಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಮೈದುನನನ್ನು ಜಾಕಿಯೇ ಖುದ್ದಾಗಿ ಎಬ್ಬಿಸಿ ಕರೆದುಕೊಂಡು ಹೋಗಬೇಕಾಯಿತು. ಓನಾಸಿಸ್ ಒಳೊಳಗೇ ನಕ್ಕ. ಜಾನ್ ಕೆನಡಿ, ಅಟಾರ್ನೀ ಜನರಲ್ ಬಾಬ್ಬಿ ಕೆನಡಿಗಳಿಗೆ ಸರಿಯಾಗೇ ಟಾಂಗ್ ಕೊಟ್ಟಿದ್ದ. ಅತ್ತ ಕೆನಡಿಗಳು ಅಮೇರಿಕಾದಲ್ಲಿ ಓನಾಸಿಸ್ ಮೇಲೆ ಕೋರ್ಟಿನಲ್ಲಿ ಕೇಸ್ ಜಡಿದು ಹೋರಾಡುತ್ತಿದ್ದರೆ, ಅವರಿಗೆ ಸರಿಯಾಗಿ ಮುಜುಗರ ಉಂಟು ಮಾಡುವಂತೆ ಉಳಿದ ಕೆನಡಿಗಳು ಓನಾಸಿಸ್ ನ ಆತಿಥ್ಯ ಸ್ವೀಕರಿಸಿ ಅವನ ತಿಂಡಿ ತೀರ್ಥದಲ್ಲಿ ಮುಳುಗೆದ್ದು ಹೊರಟಿದ್ದರು. ಇದಕ್ಕಿಂತ ದೊಡ್ಡ ವಿಪರ್ಯಾಸ ಉಂಟೆ?

ಗ್ರೀಸ್ ಬಿಟ್ಟು ಅಮೇರಿಕಾಕ್ಕೆ ವಾಪಸ್ ವಿಮಾನ ಹತ್ತಿದ್ದ ಜಾಕಿ ಕೆನಡಿ ಮನಸ್ಸಿನಲ್ಲಿ ಕೇವಲ ಓನಾಸಿಸ್ ನದೇ ಧ್ಯಾನ. ಎಷ್ಟೋ ಮಂದಿ ಪುರುಷರನ್ನು ದುಂಬಿಗಳಂತೆ ಆಕರ್ಷಿಸಿದ್ದ ಜಾಕಿಯೇ ಫುಲ್ ಫಿದಾ ಆಗಿ ಹೋಗಿದ್ದರು. ಹಾಗಿತ್ತು ರಾಯಲ್ ಉಪಚಾರ.

ಇದೇ ಒಲುಮೆ ಮುಂದೊಂದು ದಿವಸ ಜಾಕಿ ಕೆನಡಿ ಅರಿಸ್ಟಾಟಲ್ ಓನಾಸಿಸ್ ನನ್ನು ವಿವಾಹವಾಗುವಂತೆ ಪ್ರೇರೆಪಿಸಿತಾ? ಅದಕ್ಕಾಗಿ ಏನೇನು ಅವಘಡಗಳಾದವು? ಅದಕ್ಕೋಸ್ಕರ ಕೆನಡಿ ಕುಟುಂಬದಲ್ಲಿ ಒಂದು ಭಯಾನಕ ಕೊಲೆಯೂ ಆಗಿಹೋಯಿತಾ? ಅದರ  ಹಿಂದೆ ಪ್ಲೇಬಾಯ್ ಓನಾಸಿಸ್ ನ ಕೈವಾಡವಿತ್ತಾ?

(ಮುಂದುವರಿಯಲಿದೆ) (ಮುಂದಿನ ಭಾಗ -೩ ಇಲ್ಲಿದೆ)

1 comment:

Vimarshak Jaaldimmi said...


Good continuation!

Did he get philosophy training from Aristotle?