Sunday, January 20, 2013

ಮಂಗಳಮುಖಿಯೊಬ್ಬಳ ಆತ್ಮಚರಿತೆ


ಒಂದಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಯಾರಾದರು ಗಿರಾಕಿ ಸಿಕ್ಕಾರಾ ಅಂತ ನೋಡುತ್ತ ನಿಂತಿದ್ದೆ. ಒಂದು ಪೋಲೀಸ್ ವ್ಯಾನ್ ಬಂದು ಬಿಟ್ಟಿತು. ಏನಾಯಿತು ಅಂತ ತಿಳಿಯುವದರಲ್ಲಿ ಪೋಲೀಸ್ ಒಬ್ಬ ನನ್ನನ್ನು ಒಳಗೆ ತಳ್ಳಿದ್ದ. ವ್ಯಾನ್ ಹೊರಟಿತ್ತು ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಶನ್ ಗೆ.

ಏನು ಜೋರ್ ದಂಧಾ ಮಾಡ್ತೀಯಾ? ಎಲ್ಲಿಂದ ಬಂದೆ? - ಅಂತ ಕೇಳಿದ ಪೊಲೀಸ್.

ಅಯ್ಯೋ....ಸಾಮಿ....ನಾವು ತಮಿಳ್ನಾಡಿಂದ ಬಂದವವರು. ಇನ್ನೊಮ್ಮೆ ಈಕಡೆ ಬರಾಕಿಲ್ಲ. ಬಿಟ್ಬಿಡಿ ಸಾಮಿ - ಅಂತ ಅಂಗಾಲಾಚಿ ಕೇಳಿಕೊಂಡೆ.

ಥತ್ ನಿನ್ನಾ....ನೀನು ಖೋಜಾನಾ? - ಅಂತ ಕೇಳಿದ ಪೊಲೀಸನ ದನಿಯಲ್ಲಿ ಅಸಹ್ಯ ತುಂಬಿದ ತಿರಸ್ಕಾರವಿತ್ತು.

ಹೌದು....ಸಾಮಿ....ನಾವು ಪೊಟ್ಟೈಗಳು. ಅಂದ್ರೆ ನಿಮ್ಮ ಪ್ರಕಾರ ಖೋಜಾಗಳು. ಹಿಜರಾ ಅಂತ ಕೂಡ ಅಂತಾರೆ - ಅಂದು ಸುಮ್ಮನಾದೆ.

ಹಂ....ಓಕೆ....ಓಕೆ...ದರಿದ್ರ ಮುಂಡೇವಾ. ಇಲ್ಲೇಕೆ ಬಂದು ದಂಧಾ ಮಾಡುತ್ತೀರಿ? ನಿಮ್ಮ ಕೊಂಗರ ನಾಡಿನಲ್ಲೇ ಇದ್ದು ಮಾಡಬಹುದಲ್ಲ? ನಮಗೆ ತಲೆ ಬಿಸಿ ನಿಮ್ಮಿಂದ. ಅಲ್ಲಲ್ಲಿ ಹೋಗೋದು. ಕಾಸ್ ಕೇಳೋದು. ಕೊಟ್ಟಿಲ್ಲ ಅಂದ್ರೆ ಲಂಗಾ ಎತ್ತಿ ಎಲ್ಲರಿಗೆ ಅಸಹ್ಯ ಮಾಡೋದು. ಇದೇ ಆಗೋಯ್ತು ನಿಮ್ಮದು. ನಮ್ಮ ದೊಡ್ಡ ಸಾಹೇಬರು ನಂತರ ಬರ್ತಾರೆ. ಅವರು ಬಂದ ಮ್ಯಾಲೆ ನಿನ್ನ ಬಿಡೋದಾ ಇಲ್ಲವ ಅಂತ ವಿಚಾರ ಮಾಡ್ತಾರೆ. ಅಲ್ಲಿ ತನಕ ಇಲ್ಲೇ ಬಿದ್ದಿರು. ಖೋಜಾ ನನ್ಮಗನೇ....- ಅಂದ ಪೋಲೀಸಪ್ಪ ಗಾಯಬ್ ಆದ.

ಸುಮ್ಮನೆ ಪೋಲೀಸ್ ಸ್ಟೇಶನ್ ನಲ್ಲಿ ಕೂತಿದ್ದೆ. ರಾತ್ರಿಯಾದ ಮ್ಯಾಲೆ ಯಾರ್ಯಾರೋ ಬಂದರು. ಹೋದರು. ಬಿಡುವ ಸೂಚನೆ ಕಾಣಲಿಲ್ಲ.

ನಂತರ ಬಂದ ನೋಡಿ ಒಬ್ಬ ಕಿರಾತಕ ಪೋಲೀಸ್ ಪೇದೆ.

ಬಂದವನೇ ನನಗೆ ನಾಕು ಹಾಕಿದ. ಒದ್ದ. ನಾನು ಕಿರುಚಿತ್ತಿದ್ದರೆ ಅವನಿಗೇನೋ ಆನಂದ.

ನಡಿ - ಅಂದ.

ಎಲ್ಲಿ ಸಾರ್? - ಅಂತ ಕೇಳಿದೆ.

ನಡಿಯೋ....ಹಲ್ಕಾ ನನ್ಮಗನೇ....- ಅಂದವನೇ ಆ ಕಡೆ ತಳ್ಳಿದ.

ಆ ಕಡೆ ಲಾಕಪ್ ಇತ್ತು. ಒಳಗೆ ಒಬ್ಬ ಕೊರಮ ಇದ್ದಂಗೆ ಇದ್ದ ಕೈದಿಯಿದ್ದ.

ಅವನಿಗೆ ನನ್ನ ಆರ್ಪಣೆ ಮಾಡಿ ಬಿಡುತ್ತಾನ? ಅಂತ ಚಿಂತೆ ಆಯಿತು. ಲಾಕಪ್ ನಲ್ಲಿ ಇದ್ದ ಕೈದಿಗಳು ಕಾಸ್ ಕೊಟ್ಟರೆ ಅವರಿಗೆ ಸಕಲ ಸೌಲಭ್ಯ ಪೊಲೀಸರು ಒದಗಿಸುತ್ತಾರೆ ಎಂಬುದು ಗೊತ್ತಿತ್ತು.

ಬಿಚ್ಚು ಬಟ್ಟೆ - ಅಂದ ಪೋಲೀಸ್ ಪೇದೆ.

ಸಾರ್...ಸಾರ್....ಬೇಡ ಸಾರ್....- ಅಂತ ಬೇಡಿಕೊಂಡೆ.

ನಿನ್ನಮ್ಮನ್ ......ಬಟ್ಟೆ ಬಿಚ್ಚು ಅಂದ್ರೆ ಬಿಚ್ಚತಾ ಇರ್ಬೇಕು. ಇಲ್ಲಾಂದ್ರೆ ನೋಡಿಲ್ಲಿ. ಲಾಠಿ. ಚುಚ್ಚಬಾರದ ಜಾಗದಲ್ಲಿ ಚುಚ್ಚಿ ಬಿಡ್ತೀನಿ. ಅಷ್ಟೇ. ತಿಳೀತಾ? - ಅಂದ ಪೇದೆ ಫುಲ್ ಆವಾಜ್ ಹಾಕಿದ.

ಮುಂದೆ ಲಾಕಪ್. ಅಲ್ಲಿದ್ದ ಕೈದಿ ಬಿಟ್ಟ ಕಣ್ಣು ಬಿಡದೆ ನೋಡುತ್ತಿದ್ದ.

ಬೇರೆ ವಿಧಿಯಿಲ್ಲದೆ ಬಟ್ಟೆ ಕಳಚಿದೆ. ಫುಲ್ ಕಳಚಿದೆ. ಒಂದೂ ಬಟ್ಟೆ ಮೈಮೇಲೆ ಇರಲಿಲ್ಲ.

ಥತ್....ಹೊಲಸ್ ನನ್ಮಗನೇ....ಗಂಡಸಾಗಿ ಹುಟ್ಟಿ, "ಅದನ್ನೇ" ಕಟ್ ಮಾಡಿಸ್ಕೊಂಡು ಖೋಜಾ ಆಗಿದಿಯಲ್ಲೋ? ಕರ್ಮ....ಕರ್ಮ....ದಂಧಾ ಹೇಗೆ? ಬ್ಯಾಕ್ ಡೋರಾ ? - ಅಂದ ಪೇದೆ ಗಹಗಹಿಸಿ ನಕ್ಕ.

ಹ್ಯಾಂಗೆ ಅನ್ನುವಂತೆ ಲಾಕಪ್ ಒಳಗೆ ಇದ್ದ ಕೈದಿಯ ಕಡೆ ನೋಡಿದ ಪೇದೆ.

ಪೇದೆಗೆ ಇಲ್ಲದ ಮಾನ ಮರ್ಯಾದೆ ಒಳಗಿದ್ದ ಕಳ್ಳನಿಗೆ ಇದೆ ಅನ್ನಿಸಿತು. ನನ್ನ ಯಾತನೆ ನೋಡಲಾಗದೆ ಆ ಕೈದಿ ಮೋರೆ ಆ ಕಡೆ ತಿರಿಗಿಸಿಕೊಂಡ.

ತನ್ನ ಲಾಠಿಯಿಂದ ಮುಟ್ಟಬಾರದ ಜಾಗ (ಅಂದ್ರೆ ಮರ್ಮಾಂಗ ಎಲ್ಲ) ಎಲ್ಲ ತಿವಿದು, ತಿವಿದು ಮುಟ್ಟಿದ ಪೇದೆ, ವಿಕೃತ ಆನಂದ ಅನುಭವಿಸಿ, ಬಟ್ಟೆ ಹಾಕ್ಕೋ, ಅಂತ ಹೇಳಿ ಹೋದ.

ಇಷ್ಟಕ್ಕೆ ಮುಗೀತಲ್ಲ, ಅಂತ ಸಮಾಧಾನ ಪಟ್ಟೆ.

ಲಾಕಪ್ ಕಡೆ ನೋಡಿದರೆ, ಕೈದಿಯ ಕಣ್ಣಲ್ಲಿ ಒಂದು ತರಹದ ವಿಷಾದವೋ, ದುಃಖವೋ ಅನ್ನುವಂತಹ ಭಾವನೆ. ಗೊತ್ತಾಗಲಿಲ್ಲ.

ಮರುದಿವಸ ಕೋರ್ಟಿಗೆ ಅಂತ ಕರ್ಕೊಂಡು ಹೋದರು. ದಾರಿಯಲ್ಲೇ ಕಾಸು ಕಿತ್ತುಕೊಂಡು, ಓಡು ನನ್ಮಗನೇ, ಅಂತ ಬೈದು ಓಡಿಸಿದರು. ಬದುಕಿದೆಯಾ ಬಡ ಜೀವವೇ ಅಂತ ಅಂದುಕೊಂಡು ನಮ್ಮ ಹೈದರಾಬಾದಿ ಹಮಾಮ್ ಗೆ ಬಂದು ಮುಟ್ಟಿದೆ. ನಮ್ಮ ಗುರುವನ್ನು ಅಪ್ಪಿಕೊಂಡು ಗೊಳೋ ಅಂತ ಅತ್ತೆ. ಗುರು ಸಂತೈಸಿದರು.

ಹೀಗಂತ ತಮ್ಮ ಆತ್ಮಕಥೆಯಂತಿರುವ - Truth about Me: A Hijra Life Story - ಪುಸ್ತಕದಲ್ಲಿ ಬರೆಯುತ್ತ ಹೋಗುವವರು ರೇವತಿ ಅಲಿಯಾಸ್ ದೊರೈಸಾಮಿ.

ಹುಟ್ಟಿದ್ದು ಗಂಡಿನ ದೇಹ ಹೊತ್ತು. ಬೆಳೆದಂತೆ ಒಳಗಿನ ಭಾವನೆಗಳು, ಸಂವೇದನೆಗಳು ಎಲ್ಲ ಪೂರ್ತಿ ಹೆಣ್ಣಿನವು. ಇದು ದೊರೈಸಾಮಿಯ ದ್ವಂದ್ವ. ದೇಹ ಮನಸ್ಸು ಹೊಂದಿಕೊಳ್ಳದೆ ತಲೆ ಮೊಸರು ಗಡಿಗೆ. ಹೆಣ್ಣಿನ ರೀತಿಯಲ್ಲಿ ವಸ್ತ್ರ ಹಾಕುವಾಸೆ, ಗಂಡಿನ ಕಂಡರೆ ಏನೇನೋ ಆಸೆ. ಆದ್ರೆ ಈಡೇರಿಸಿಕೊಳ್ಳುವದು ಹೇಗೆ? ಮನಸ್ಸಿದ್ದಲ್ಲಿ ಮಾರ್ಗವಿದೆ. ಹಿಜರಾಗಳು ಇದ್ದಾರೆ. ಅವರದೇ ಆದ ಸಂಸ್ಕೃತಿಯಿದೆ. ಮನೆಗಳಿವೆ. ಪರಂಪರೆಯಿದೆ. ಎಲ್ಲ ಇದೆ. ಮತ್ತೇನು? ದೊರೈಸಾಮಿ ಮನೆ ಬಿಟ್ಟು ಓಡಿ ಬಿಡುತ್ತಾನೆ.

ಮೊದಲು ತಮಿಳ್ನಾಡಿನ ಹಿಜಾರಗಳ ಸಂಗ್ತಿಗೆ, ನಂತರ ಡೆಲ್ಲಿಗೆ, ನಂತ್ರ ಮುಂಬೈಗೆ ಹೋಗುವ ದೊರೈಸಾಮಿಗೆ ಮುಂಬೈನಲ್ಲಿ ಒಬ್ಬ ಹಿಜರಾ ಗುರು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಲು ಮುಂದಾಗುತ್ತಾರೆ.

ಆದ್ರೆ ಪರಿಪೂರ್ಣ ಹಿಜ್ರಾ ಆಗಬೇಕು ಅಂದ್ರೆ "ಆಪರೇಶನ್" ಆಗಬೇಕು. ಗಂಡಸ್ತನದ ಬಾಹ್ಯದ ಕುರುಹು ಯಾವದೇ ಮಾರ್ಕ್ ಬಿಡದೆ ಹೋಗಿ ಬಿಡಬೇಕು. ಅದಕ್ಕೆ ಇರುವ ವಿಧಾನ ಅಂದ್ರೆ ಎರಡೇ. ಒಂದೋ ಇನ್ನೊಬ್ಬ ಪಳಗಿದ ಹಿಜರಾ ತರಕಾರಿ ಕತ್ತರಿಸುವ ಕತ್ತಿಯಿಂದ, ಯಾವದೇ ಅರವಳಿಕೆ ಇಲ್ಲದೆ ಮಾಡುವ ದೇಸಿ ಆಪರೇಶನ್. ಇಲ್ಲವೋ ಪಳಗಿದ ಸರ್ಜನ್ ಮಾಡುವ ಆಪರೇಶನ್. ಯಾವದು ಸರಿ ದೊರೈಸಾಮಿಗೆ?

ದೊರೈಸಾಮಿಯ ಸೂಕ್ಷ್ಮ ಸ್ವಭಾವ ನೋಡಿದ ಗುರುವಿಗೆ ಅನ್ನಿಸುತ್ತದೆ, ಈ ಪ್ರಾಣಿ ದೇಸಿ ಆಪರೇಶನ್ ತಡೆದುಕೊಳ್ಳಲಾರ. ಇವನಿಗೆ ನುರಿತ ಸರ್ಜನ್ ಮಾಡುವ ಆಪರೇಷನ್ನೇ ಸರಿ.

ಹಾಗಾಗಿ ಒಂದಿಷ್ಟು ಕಾಸು ಕೊಟ್ಟು ದೊರೈಸಾಮಿಯನ್ನು ತಮಿಳ್ನಾಡಿನ ಒಬ್ಬ ಡಾಕ್ಟರ್ ಹತ್ತಿರ ಕಳಿಸಲಾಗುತ್ತದೆ. ಆ ಡಾಕ್ಟರ್ ಲಿಂಗ ಕತ್ತರಿಸುವ ಆಪರೇಶನ್ ಮಾಡುವ ಸ್ಪೆಷಲಿಸ್ಟ್. ಎಷ್ಟೋ ಜನರಿಗೆ ಮಾಡಿ ಹಿಜರಾ ಸ್ಪೆಷಲಿಸ್ಟ್ ಅಂತಲೇ ಫೇಮಸ್ ಆಗಿದ್ದನಂತೆ. ಆದ್ರೆ ಎಲ್ಲವೂ ಗುಪ್ತ ಗುಪ್ತ.

ಒಟ್ಟಿನಲ್ಲಿ ಲಿಂಗ ಕತ್ತರಿಸ್ಕೊಂಡು ಬಂದ ದೊರೈಸಾಮಿ ರೇವತಿಯಾಗಿ ಚಲಾವಣೆಗೆ ಬರುತ್ತಾಳೆ.

ಹಿಜರಾಗಳಿಗೆ ಅವರದ್ದೇ ಆದ ಒಂದು ಸಂಸ್ಕೃತಿಯಿದೆ. ಅವರದ್ದೇ ಆದ ಪಂಗಡಗಳಿವೆ. ಗುರುಗಳಿದ್ದಾರೆ. ಶಿಷ್ಯ ಪರಂಪರೆಯಿದೆ. ರೀತಿ ರೀವಾಜುಗಳಿವೆ. ಅದೆಲ್ಲವನ್ನೂ ಬರೆಯುತ್ತಾರೆ ರೇವತಿ ತಮ್ಮ ಆತ್ಮ ಕಥೆಯಲ್ಲಿ.

ಗಂಡಿನ ದೇಹದಲ್ಲಿ ಹೆಣ್ಣಾಗಿ ಬದುಕಲಾಗದೆ ಲಿಂಗ ಕತ್ತರಿಸ್ಕೊಂಡು ಹಿಜರಾ ಅಂತ ಆಗಿದ್ದು ಏನೋ ಆಯಿತು. ಆದ್ರೆ ಮುಂದಿನ ಜೀವನ ಹೇಗಿತ್ತು? ಗುರು ಶಿಷ್ಯ ಪರಂಪರೆ ನಿಭಾಯಿಸಲು ಆಯಿತಾ? ಕುಟುಂಬ ಕೊಟ್ಟ ಕಷ್ಟಗಳೇನು? ಪ್ರೊಫೆಶನಲ್ ಹಜಾರ್ಡ್ಸ್ (professional hazards) ಏನು? ಈ ತರಹದ ಜನರಿಗೆ ಜೀವನ ಸಂಗಾತಿ ಸಿಗುತ್ತಾನ ಹೇಗೆ?

ಇದೆಲ್ಲ ಪ್ರಶ್ನೆಗಳಿಗೆ ತಮ್ಮ ಜೀವನದ ಕಥೆಯ ಮೂಲಕ ಒಂದು ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ ರೇವತಿ ಉರ್ಫ್ ದೊರೈಸಾಮಿ.

ಲೈಂಗಿಕ ಅಲ್ಪಸಂಖ್ಯಾತರು ಅಂದು ಗುರುತಿಸಿಕೊಂಡು, ಸಂಗಮ ಅನ್ನುವ ಸಂಸ್ಥೆ ಮಾಡಿಕೊಂಡು, ತಮ್ಮ ಹಕ್ಕುಗಳಿಗೆ ಬಡಿದಾಡುತ್ತಿದ್ದಾರೆ ರೇವತಿ ಮತ್ತು ಅವರ ಸಂಗಡಿಗರು.

ಇತ್ತೀಚಿಗೆ ಓದಿದ ಪುಸ್ತಕಗಳಲ್ಲಿ ತುಂಬ ಮನಕಲಕಿದ ಪುಸ್ತಕ ಅಂದ್ರೆ ಇದೇ ಇರಬೇಕು. ಇಷ್ಟವಾದಲ್ಲಿ ಓದಿ.

ಹಿಜರಾಗಳಿಗೆ ಮಂಗಳಮುಖಿ ಅಂತ 'ಗೌರವಾನ್ವಿತ' ಹೆಸರು ಕನ್ನಡದಲ್ಲಿ ಯಾರೋ ಕೊಟ್ಟಿದ್ದಾರೆ.

ತಮಿಳಿನಲ್ಲಿ ಅರವಾಣಿ (ಅರವನ್ ಅನ್ನುವ ಅರ್ಜುನನ ಮಗನ ಹೆಂಡತಿಯರು) ಅಂತ ಒಳ್ಳೆಯ ಹೆಸರನ್ನು ಅಲ್ಲಿನ ಪೋಲೀಸ್ ಅಧಿಕಾರಿಯೊಬ್ಬರು ಕೊಟ್ಟಿದ್ದಾರಂತೆ. ಹಿಜರಾಗಳು ತಾವು ಅರವನ್ ಹೆಂಡತಿಯರು ಅಂತ ಭಾವಿಸುತ್ತಾರೆ. ಅರವನ್ ಅರ್ಜುನ ಮತ್ತು ನಾಗಲೋಕದ ರಾಜಕುಮಾರಿಯ ಮಗ. ಮಹಾಭಾರತ ಯುದ್ಧದಲ್ಲಿ ಪಾಂಡವರಿಗೆ ಗೆಲುವಾಗಲಿ ಅಂತ ಸ್ವಂತ ತನ್ನನ್ನೇ ತಾನು ಬಲಿಕೊಟ್ಟ ಧೀರ.

ಪುಸ್ತಕ ಓದಿ ಮುಗಿಸಿದಾಗ ಮಂಗಳಮುಖಿಯರೊಂದಿಗೆ ನನ್ನ ಅನುಭವಗಳು ನೆನಪಿಗೆ ಬಂದವು.

೧೯೯೦-೯೪ ರಾಜಸ್ಥಾನದ ಪಿಲಾನಿಯಲ್ಲಿ ಓದುತ್ತಿದ್ದ ಟೈಮ್. ಡೆಲ್ಲಿಗೆ ಹೋಗಿ ಅಲ್ಲಿಂದ ಹೋಗಬೇಕು. ಧಾರವಾಡದಿಂದ ಡೆಲ್ಲಿಗೆ ಹೋಗುವದು ವಯಾ ಪುಣೆ. ಪುಣೆ ರೇಲ್ವೆ ಸ್ಟೇಶನ್ ನಲ್ಲಿ ಒಬ್ಬ ದೈತ್ಯನಂತಹ ಮಂಗಳಮುಖಿ. ಎರಡು ರುಪಾಯಿಗಿಂತ ಕಡಿಮೆ ಕೊಟ್ಟವರಿಗೆ ಕೆಟ್ಟದಾಗಿ ಬಯ್ಯುತ್ತಿದ್ದ. ಹಾಗಾಗಿ ಆ ಪುಣ್ಯಾತ್ಮನಿಗೆ ತಪ್ಪದೇ ಎರಡು ರೂಪಾಯಿ ಕೊಟ್ಟು ಕೈ ಮುಗಿಯುತ್ತಿದ್ದೆ. ನಾಕು ವರ್ಷದಲ್ಲಿ ಹದಿನಾರು ಸಲ ಪುಣೆ ಮೇಲೆ ಹೋಗಿರಬಹುದು. ಮೊದಲು ಮೂರು ವರ್ಷ ಕಂಡ ಆ ಮಂಗಳಮುಖಿ ನಂತರ ಕಾಣಲಿಲ್ಲ. ಎಲ್ಲಿ ಹೋದನೋ/ ಹೋದಳೋ?

ಮುಂದೆ ೧೯೯೫ ಟೈಮ್ನಲ್ಲಿ ಬೆಂಗಳೂರ್ ಇಂದಿರಾನಗರದಲ್ಲಿ ಒಂದು ಸಣ್ಣ ಸ್ಟಾರ್ಟ್ ಅಪ್ (start up) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಒಂದು ದಿವಸ ಮಂಗಳಮುಖಿಯರ ಒಂದು ಹಿಂಡು ನಮ್ಮ ಆಫೀಸಿಗೆ ದಾಳಿ ಮಾಡಿಯೇ ಬಿಟ್ಟಿತು. ಇದ್ದ ಒಬ್ಬ ಸಣಕಲು ಸೆಕ್ಯೂರಿಟಿಯವನನ್ನು ಪಕ್ಕಕ್ಕೆ ತಳ್ಳಿದ ಅವರು ಸೀದಾ ಹೋಗಿದ್ದು CEO ಕ್ಯಾಬಿನ್ಗೆ.

CEO ಫುಲ್ ಹೈರಾಣ್.

ಕಾಸ್ ಕೊಡಯ್ಯಾ - ಅಂತ ಡಿಮ್ಯಾಂಡ್ ಮಾಡಿದೆ ಮಂಗಳಮುಖಿಯರ ಗುಂಪು.

CEO ಗೆ ಪೂರ್ತಿ ಉರಿದಿದೆ. ಸಿಟ್ಟು ಬಂದಿದೆ. ಉಗಿದಿದ್ದಾನೆ. ಹೋಗಿ, ಹೋಗಿ, ಅಂದಿದ್ದಾನೆ.

ಮಂಗಳಮುಖಿಯರಿಗೆ ಹೀಗೆ ಅನ್ನಿಸಿಕೊಳ್ಳುವದು ಹೊಸದಾ? ಅವರಿಗೆ ಕಾಸ್ ವಸೂಲಿ ಮಾಡುವ ರೀತಿ ಗೊತ್ತಿಲ್ಲವಾ?

ಲಂಗ, ಸೀರೆ, ಮತ್ತೊಂದು ಮೊಣಕಾಲ ಮೇಲೆ ಎತ್ತಿದವರೇ ಸರ್ವಾಂಗ ಪ್ರದರ್ಶನ ಮಾಡುತ್ತಾ CEO ಚೇಂಬರ್ ನಲ್ಲಿ ಅವರ ಹಿಜರಾ ಡ್ಯಾನ್ಸ್ ಮಾಡಿಯೇ ಬಿಟ್ಟರು. ಜೊತೆಗೆ ಹಿಜರಾ ಚಪ್ಪಾಳೆ, ಕ್ಯಾಕೆ ಹಾಕಿದ ನಗು ಬೇರೆ. CEO  ಚೇಂಬರ್ ಬಿಟ್ಟು ಹೊರಗೆ ಓಡಿದ. ನಂತರ ಬೇರೆ ಯಾರೋ ಕಾಸು ಅದು ಇದು ಕೊಟ್ಟು ಒಟ್ಟಿನಲ್ಲಿ ಅವರನ್ನು ಸಾಗಹಾಕಿದರು.

ಹೋದ ವರ್ಷ ಬೆಂಗಳೂರಿನ RT ನಗರದಲ್ಲಿರುವ ಕಾಫೀ ಡೇ ಗೆ ಹೋದರೆ, ಒಬ್ಬ ಮಂಗಳಮುಖಿ ಬಾಗಿಲು ತೆಗೆದು, ನಮಸ್ಕಾರ ಎಂದು ಸ್ವಾಗತ ಕೋರಬೇಕೆ?!! ಏನಪ್ಪಾ ಇದು? ಕಾಫೀ ಡೇ ಇವರನ್ನು ಸ್ವಾಗತಕಾರಿಣಿಯರು ಅಂತ ಇಟ್ಟುಕೊಂಡಿದೆಯೋ ಹೇಗೆ? ಅಂತ ಸಂಶಯ ಬಂತು. ಇಲ್ಲ. ಪೈಸಾ ವಸೂಲಿಗೆ ಬಂದವಳು ಇರಬೇಕು.

ನಾನಾ ಪಾಟೇಕರ್ ಮಂಗಳಮುಖಿಯೊಂದಿಗೆ ಇರುವ ಒಂದು ಕಾಮೆಡಿ ಸೀನ್ ನೋಡಿ.....