Thursday, August 08, 2013

ನಾಗರ ಪಂಚಮಿಗೆ TNT ಮಾಡಿದ ತಂಬಿಟ್ಟು


ಅಂತೂ ಇಂತೂ ನಾಗರ ಪಂಚಮಿ ಹಬ್ಬ ಮುಗೀತು ಅಂತ ಆತು. ಎಲ್ಲಾ ಕಡೆ ನಾಗ ಪಂಚಮಿ ಅಂದ್ರ ನಮ್ಮ ಧಾರವಾಡ ಕಡೆ ಒಂದು 'ರ' ಕಾರದ ಎಕ್ಸಟ್ರಾ ಫಿಟ್ಟಿಂಗ್ ಇಟ್ಟು ನಾಗ'ರ' ಪಂಚಮಿ ಅಂತ ಯಾಕ ಅಂತಾರೋ ಗೊತ್ತಿಲ್ಲ? ರಂಗ ಪಂಚಮಿಗೆ ರಂಗರ ಪಂಚಮಿ ಅನ್ನೋದಿಲ್ಲ. ಮತ್ತ ನಾಗ ಪಂಚಮಿಗೆ ಯಾಕ ನಾಗರ ಪಂಚಮಿ ಯಾಕ? ನಾಗಪ್ಪಗ ಆಗಲೇ ಬೇಕಾದಷ್ಟು ಎಕ್ಸಟ್ರಾ ಫಿಟ್ಟಿಂಗ್ ಅವ. ಅದರಾಗ ರ ಕಾರದ ರಾರಾ ರಾರಾ ಅನ್ನೋ ಎಕ್ಸಟ್ರಾ ಫಿಟ್ಟಿಂಗ್ ಬ್ಯಾರೆ. ಅಥವಾ ಆಪ್ತಮಿತ್ರ ಸಿನೆಮಾದಾಂಗ, ರಾ ರಾ ಪೂಜೆಗು ರಾ ರಾ, ರಾ ರಾ ನಾಗಪ್ಪಾ ರಾ ರಾ, ಅಂತ ಹಾವನ್ನು ಪೂಜೆಗೆ ಕರೆಯೋಣ ಅಂತ ನಾಗ'ರ' ಪಂಚಮಿ ಅಂತ ಮಾಡಿಕೊಂಡ್ರೋ ಏನೋ? ಯಾರಿಗ್ಗೊತ್ತ?!

ನಾನು ಮತ್ತ ಕರೀಂ ನಮ್ಮ ಖಾಯಂ ಅಡ್ಡಾ ಆದ ಭೀಮ್ಯಾನ ಚುಟ್ಟಾ ಅಂಗಡಿ ಮುಂದ ಹಾಳ ಹರಟಿ ಹೊಡಕೋತ್ತ ನಿಂತಿದ್ದಿವಿ. ಆವಾಗ ಕಂಡ ನಮ್ಮ ಇನ್ನೊಬ್ಬ ದೋಸ್ತ  ಚೀಪ್ಯಾ ಉರ್ಫ್ ಶ್ರೀಪಾದ ರಾವ್. ಚೀಪ್ಯಾ ಎರಡೂ ಕೈಯಾಗ ರೇಶನ್ ಚೀಲದಂತಹ ಚೀಲ ಹಿಡಕೊಂಡು ಭರಾ ಭರಾ ಅಂತ ಹೊಂಟಿದ್ದು ನೋಡಿದರ ಗೊತ್ತಾತು - ಇವ ನಾಗರ ಪಂಚಮಿ ಮರು ದಿವಸ ಅವರ ಬಳಗ, ಸಂಬಂಧಿಕರ ಮನೆಗಳಿಗೆ ಪರಾಳ ಕೊಟ್ಟು ಬರಲಿಕ್ಕೆ ಹೊಂಟಾನ ಅಂತ. ನಮಗೂ ಬೇಕಲಾ ಪರಾಳ? ನಾವು ಬಳಗದವರು ಅಲ್ಲದಿದ್ದರ ಏನಾತು? ದೋಸ್ತರು ಅದರಕಿಂತ ಹೆಚ್ಚು!

ಲೇ....ಚೀಪ್ಯಾ.....ನಿಂದ್ರಪಾ. ಏನು ಭಯಂಕರ ಗಡಿಬಿಡಿ ಒಳಗ  ಹೊಂಟಿ? ಏನು ಪರಾಳ ಕೊಡಲಿಕ್ಕೆ? ಹಾಂ? ನಮಗ? ಇಲ್ಲ? ಹಾಂ? ಲೇ.... ಮಂಗ್ಯಾನಿಕೆ....ನಾನು, ಕರೀಮ ನಿನ್ನ ಪ್ರಾಣ ಸ್ನೇಹಿತರು. ಅಂದ್ರ ನಮಗೂ ಒಂದೊಂದು ಡಬ್ಬಿ ಪರಾಳ ಕೊಡಲಿಲ್ಲ ಅಂದ್ರ ಪ್ರಾಣನ ತೆಗೆದುಬಿಡುವಂತಹ ಪ್ರಾಣ ಮಿತ್ರರು. ಕೊಡಲೇ!!! - ಅಂತ ಪ್ರೀತಿ ಭರಿತ ಧಮಕಿ ಹಾಕಿದಿವಿ.

ಏ....ಕೊಡೋಣ ಕೊಡೋಣ....ನಿಮಗ್ಯಾಕ ಡಬ್ಬಿಯೊಳಗ ಕೊಡೋಣ? ಕೂಡಿಸಿ, ತಿನ್ನಿಸಿ, ಛಾ ಸಹಿತ ಕುಡಿಸಿ ಕಳಸೋಣ. ಮನಿಗೆ ಬರ್ರಿಲೇ. ನಾ ಈಗ ಹೋಗಬೇಕು. ಬರಲೀ? - ಅಂತ ತಪ್ಪಿಸಿಕೊಳ್ಳಲಿಕ್ಕೆ ಹೊಂಟ.

ಏನು ಚೀಪ್ಯಾ ಭಾಯ್! ಭಾಳಾ ಜಲ್ದಿ ಮೇ ಹೈ ಕ್ಯಾ? ಏನೇನು ಮಾಡಿದಿರಿ ನಾಗಾದು ಪಂಚಮಿಗೆ? ಸಾಂಪ್ ಗೆ ಹಿಡಕೊಂಡು ಬಂದು ಬಿಟ್ಟಿ ಪೂಜಿಗೆ ಮಾಡಿದಿರಿ ಕ್ಯಾ? - ಅಂತ ಕೇಳಿಬಿಟ್ಟ ಕರೀಂ.

ಎಲ್ಲಿ ಸಾಂಪ್ ಲೇ ಮಾರಾಯ!? ಮಣ್ಣಿನ ಹಾವಿನ ಮೂರ್ತಿಗೆ ಪೂಜಿ ಮಾಡಿದಳು ನಮ್ಮ ಹೆಂಡ್ತೀ. ಅಷ್ಟೇ - ಅಂದ ಚೀಪ್ಯಾ.

ಏನು ಮಂದೀರಿ ನೀವು? ನಾಗರ ಪಂಚಮಿ ಅಂತ ಹೆಸರು ಇಟ್ಟುಗೊಂಡು ಜಿಂದಾ ಸಾಂಪ್ ಗೆ ತರೋದು ಇಲ್ಲ ಕ್ಯಾ? ನಮ್ಮದು ನೋಡಿ. ಬಕ್ರೀದ ಅಂತ ಹೆಸರು ಇದೆ. ಅದಕ್ಕೆ ನಾವು ಬಕ್ರೀದ್ ಹಬ್ಬಕ್ಕೆ ಬಕ್ರೀ ಅಂದ್ರೆ ಟಗರು, ಆಡು ತಂದು ಬಿಟ್ಟಿ, ಪೂಜಾ ಮಾಡ್ಬಿಟ್ಟಿ, ಕುರ್ಬಾನಿ ಮಾಡ್ಬಿಟ್ಟಿ, ಬಿರ್ಯಾನಿ ಮಾಡಿ ತಿಂತೇವೆ. ನಿಮ್ಮದು ನೋಡಿದರೆ ಹಾವಿಂದು ಮೂರ್ತಿಗೆ ಪೂಜಾ ಮಾಡೋದು ಕ್ಯಾ? ಜಿಂದಾ ಸಾಂಪ್ ತೊಗೊಂಡು ಬನ್ನೀ ಸಾಬ್! - ಅಂತ ಇಲ್ಲದ ಉದ್ರಿ ಉಪದೇಶ ಕರೀಮನಿಂದ.

ಹಿಂದನ ವರ್ಷ ಬಕ್ರೀದಕ್ಕ ತಂದ ಕರೀಮನ ಟಗರು ಚೀಪ್ಯಾನ ಕುಂಡಿಗೆ ಗುದ್ದಿ ಚೀಪ್ಯಾ ಟಗರ್ಮಂಗೋಲಿ ಆಗಿದ್ದು ಚೀಪ್ಯಾಗ ನೆನಪಾಗಿ ನಡ ಸವರಿಕೊಂಡ. ಇನ್ನೂ ಸ್ವಲ್ಪ ನೋವು ಇದ್ದವರಾಂಗ ಮಸಡಿ ಮಾಡಿದ.

ಲೇ ಕರೀಮಾ! ಜಿಂದಾ ಸಾಂಪ್ ತರಲಿಕ್ಕೆ ಅದು ನಿಮ್ಮ ಆಡು, ಟಗರಿನ ಹಾಂಗ ಸಾಧು ಪ್ರಾಣಿ ಅಲ್ಲಪಾ. ಅದು ನಾಗರ ಹಾವು. ಕಚ್ಚಿತಂದ್ರ ಮುಗೀತು ಕಥಿ. ಜೀವಂತ ಹಾವು ತಂದು ಪೂಜಿ ಮಾಡಬೇಕಂತ! ಅಂತಾನ ನೋಡು ಹ್ಯಾಂಗ ಮಂಗ್ಯಾನಿಕೆ! - ಅಂತ ಬೈದ ಚೀಪ್ಯಾ.

ಹಾಗೆ ಕ್ಯಾ? ಹ್ಯಾಗೆ ನಿಮ್ಮ ಬೇಗಂ ನಿಮ್ಮ ನಾಗಪ್ಪಾಗೆ ಪೂಜಿ ಮಾಡಿದರು? - ಅಂತ ಇನ್ನೋಸೆಂಟ್ ಆಗಿ ಕರೀಮಾ ಕೇಳಿದ.

ಒಮ್ಮೊಮ್ಮೆ ಸಹಜ ಕೇಳಿದ ಪ್ರಶ್ನೆ ಸಹ ಬಹಳ ನಗಿ ತರ್ಸ್ತಾವ. ಈ ಹಾಪಾ ಕರೀಮ, ಚೀಪ್ಯಾನ ಕಡೆ ಅವನ ಹೆಂಡ್ತಿ ಚೀಪ್ಯಾನ ನಾಗಪ್ಪನ್ನ ಹ್ಯಾಂಗ ಪೂಜಿ ಮಾಡಿದಳು ಅಂತ ಕೇಳಲಿಕತ್ತಾನ. ಭಾಳ ಅಪಾರ್ಥ ಬರ್ತದ.

ಲೇ!!! ಕರೀಮಾ!!! ನೋಡಿಕೊಂಡು ಮಾತಾಡಪಾ!!! ಅಕಿ ನನ್ನ ನಾಗಪ್ಪನ್ನ ಪೂಜಿ ಮಾಡಲಿಲ್ಲ. ನಾನು ತಂದು ಕೊಟ್ಟ ಮಣ್ಣಿನ ನಾಗಪ್ಪನ ಪೂಜಿ ಮಾಡಿದಳೋ ಮಾರಾಯಾ! ಅಂತ ಕರೆಕ್ಟ್ ಮಾಡಿದ ಚೀಪ್ಯಾ. ಅವಂಗೂ ನಗು ಬಂತು.

ಲೇ ಚೀಪ್ಯಾ!!! ಹಸಿವಿ ಆಗ್ಲಿಕತ್ತದ. ಒಂದು ಫರಾಳದ ಡಬ್ಬಿ ತೆಗಿಲೇ, ಅಂತ ಅಂದೆ. ಚೀಪ್ಯಾ ಮಿಜಿ ಮಿಜಿ ಮಾಡಿದ. ಏನಲೇ!!ಪ್ರಾಣ ಮಿತ್ರರ ಪ್ರಾಣ ಹಸಿವಿಯಿಂದ ಹೋಗಲಿಕತ್ತದ. ಅಂತಾದ್ರಾಗ ಡಬ್ಬಿ ತೆಗೆದು ಸ್ವಲ್ಪ ಪರಾಳ ಕೊಡಪಾ ಅಂದ್ರ ಮಿಜಿ ಮಿಜಿ ಮಾಡ್ತಿಯಲ್ಲಲೇ?! ಅಂತ ಅಂದೆ.

ಅಷ್ಟರಾಗ ಕರೀಮ ಇನ್ನೊಂದು ಕಡೆಯಿಂದ ಚೀಪ್ಯಾನ ಚೀಲದಾಗ ಕೈ ಬಿಟ್ಟು ಒಂದು ಡಬ್ಬಿ ತೆಗೆದುಬಿಟ್ಟ. ಡಬ್ಬಿ ಮುಚ್ಚಳ ತೆಗೆದು ಒಳಗಿರೋದು ನೋಡಿ ದಂಗಾಗಿ ಥಂಡಾ ಹೊಡೆದ ಕರೀಂ!

ಸಾಬ್!!! ಏನಿದು ಒಳ್ಳೆ ಗರ್ನಾಲ್ ಗ್ರೆನೇಡ್ ಬಾಂಬ್ ಮಾಫಿಕ್ ಇವೆ? ರೌಂಡ್ ರೌಂಡ್! ತೆಗೆದು ಒಗೆದು ಬಿಟ್ಟರೆ ಬ್ಲಾಸ್ಟ್ ಆಗ್ತದೆ ಕ್ಯಾ? - ಅಂತ ತಂಬಿಟ್ಟು ನೋಡಿಕೋತ್ತ, ಕೈಯಾಗ ಗ್ರೆನೇಡು ತಿರಿಗಿಸಿದಾಂಗ ಗಿರಿ ಗಿರಿ ತಿರಿಗಿಸ್ಕೋತ್ತ ಅಂದ. ಅವಂಗ ಗೊತ್ತಿಲ್ಲ ತಂಬಿಟ್ಟು ಅಂದ್ರ ಏನು ಅಂತ.

ಅದು ತಂಬಿಟ್ಟು ಅಂತ ಮಾರಾಯ! ಗರ್ನಾಲೂ ಅಲ್ಲ, ಗ್ರೆನೇಡೂ ಅಲ್ಲ. ಉಂಡಿ ತರಹ. ತಿಂದು ನೋಡು. ಒಂದೆರಡು ತಿಂದ್ರ ತೊಂದ್ರಿ ಇಲ್ಲ. ಭಾಳ ತಿಂದ್ರ ಮಾತ್ರ ತಿಂದವರು ಹೊಡಿಬಾರದ ಜಗಾದಿಂದ ಢಂ ಢಾಂ ಡೂಸ್ ಗರ್ನಾಲ್ ಹೊಡೆದಾರು! - ಅಂತ ಅಂದೆ.


ಕ್ಯಾ? ತಂಬಿ ಹಿಟ್ಟು? ಇದು ತಂಬಿ ಮಂದಿ ಡಿಶ್ ಕ್ಯಾ? ತಂಬಿ ಮಂದಿ ಅಂದ್ರೆ ತಮಿಳ್ ಮಂದಿ. ಅವರದ್ದು ತಿಂಡಿ ನಮ್ಮದು ಕನ್ನಡಿ ಮಂದಿ ಕಡೆ ಹೇಗೆ ಬಂತು? ಕ್ಯಾ ಚೀಪ್ಯಾ? ಭಾಬಿ ಜಾನ್ ಅಂದ್ರೆ ನಿಮ್ಮದೂಕಿ ಬೇಗಂ ಮದ್ರಾಸಿ ಕ್ಯಾ? ಕ್ಯಾ? - ಅಂತ ಕೇಳಿಬಿಟ್ಟ ಕರೀಮ. ತಂಬಿಟ್ಟು ಅಂದ್ರ ತಂಬಿ ಹಿಟ್ಟು ಅಂತ!!!

ಇದು ತಂಬಿಟ್ಟು ಅಂತಪಾ!! ತಂಬಿ ಹಿಟ್ಟು ಅಲ್ಲ. ತಮಿಳುನಾಡಿನ ತಂಬಿಗಳಿಗೆ, ಅಣ್ಣೈಗಳಿಗೆ ಏನೂ ಸಂಬಂಧ ಇಲ್ಲ. ಆದರೂ ಈ ತಿಂಡಿ, ಅದೂ ಶುದ್ಧ ಧಾರವಾಡ ಕಡೆ ತಿಂಡಿ, ಹೆಸರಿನ್ಯಾಗ ತಂಬಿ ಅನ್ನೋ ತಮಿಳ ವರ್ಡ್ ಎಲ್ಲಿಂದ ಬಂತು? ವಿಚಾರ ಮಾಡುವಂತಹ ವಿಷಯ. ಕವಿವಿ ಕನ್ನಡ ಡಿಪಾರ್ಟಮೆಂಟ್ ಮಂದಿ ಕಡೆ ಕೇಳಿ ನೋಡು, ಅಂತ ಹೇಳಿದೆ.

ಏನಲೇ ಚೀಪ್ಯಾ, ತಂಬಿಟ್ಟು ಯಾರು ಮಾಡಿದ್ರು? ರೂಪಾ ವೈನಿನೋ ಅಥವಾ....... - ಅಂತ ಕೇಳಿದೆ.

ಅಕಿನೇ ಮಾಡಿದ್ದು ಮಾರಾಯಾ. ಆವಾ ತೂತ್ ನಾಗ್ಯಾ ಬಂದು ಹಾವು ಬಿಟ್ಟ, ಇಕಿ TNT ತಂಬಿಟ್ಟು ಮತ್ತೊಂದು ಮಾಡಿ ಅವನ್ನ ಖುಷಿ ಮಾಡಿದಳು. ಮನಿಹಾಳ ಸೂಳೆಮಗ ಆಗಾಗ ಬಂದು ಬತ್ತಿ ಇಡ್ತಾನೋ. ನನ್ನ ಕರ್ಮ! ಕರ್ಮ! - ಅಂತ ಚೀಪ್ಯಾ ಯಾವದರದ್ದೋ ಬಗ್ಗೆ ವಿಷಾದ ವ್ಯಕ್ತಪಡಿಸಿದ.

ಹಾಂ!!! TNT ತಂಬಿಟ್ಟು!!! TNT ಅಂದ್ರ ದೊಡ್ಡ ಸ್ಪೋಟಕ ವಸ್ತು ಮಾರಾಯ! TNT ಹಾಕಿ ತಂಬಿಟ್ಟು ಮಾಡಿಬಿಟ್ಟಾಳ ರೂಪಾ ವೈನಿ? ತಿಂದವರು ಢಂ ಅನ್ನಬೇಕು ಏನು? ಏನಲೇ ಮುಂದಿನ ಸಲೇ RDX ಅನ್ನೋ ಇನ್ನೂ ದೊಡ್ಡ ಸ್ಪೋಟಕ ಹಾಕಿಸಿ ತಂಬಿಟ್ಟು ಮಾಡಿಸಿಬಿಡು. TNT ತಂಬಿಟ್ಟು ಅಂತ! ಏನಲೇ TNT ತಂಬಿಟ್ಟು ಅಂದ್ರ?! - ಅಂತ ಘಾಬ್ರಿಲೆ ಕೇಳಿದೆ.

ಹಂಗೇನೂ ಇಲ್ಲಪಾ. ರೆಗ್ಯುಲರ್ ತಂಬಿಟ್ಟು. ಪುಠಾಣಿ, ಶೇಂಗಾ, ಅದು ಇದು ಹಾಕಿ ಮಾಡಿದ್ದು. ಏನೂ ಡೇಂಜರ್ ಇಲ್ಲ. TNT ಅಂದ್ರ 'ತೂತ ನಾಗ್ಯಾನ ತಂಗಿ' ಅಂತಪಾ, ಅಂತ ಏನೋ ಹೊಸದು ಹೇಳಿ ಬಿಟ್ಟ.

TNT ಅಂದ್ರ ತೂತ ನಾಗ್ಯಾನ ತಂಗಿ ಅಂತ ಏನು? ಯಾರಪಾ ಅಕಿ? ಅಕಿ ಯಾಕ ತಂಬಿಟ್ಟು ಮಾಡಿದಳು? ಮಾಡಿ ನಿನಗ ಯಾಕ ಕೊಟ್ಟಳು? ಹಾಂ? ಹಾಂ? -ಅಂತ ಕೇಳಿದೆ.

TNT ಉರ್ಫ್ ತೂತ ನಾಗ್ಯಾನ ತಂಗಿ ಅಂದ್ರ ನಿಮ್ಮ ರೂಪಾ ವೈನಿ ಮಾರಾಯ. ಅಕಿ ಅಣ್ಣನ ನಾಗರಾಜ ರಾವ್. ಭುಸ್ ಭುಸ್ ನಾಗಪ್ಪ! ಲಗ್ನದಾಗಿಂದ ನನ್ನ ಕಾಡಲಿಕತ್ತಾನ ನೋಡೋ. ಅವನಿಂದ ಯಾವಾಗ ಮುಕ್ತಿ ಅನ್ನೋದು ಗೊತ್ತಿಲ್ಲಪಾ. ನಿಮ್ಮ ರೂಪಾ ವೈನಿಗಂತೂ ಅಕಿ ನಾಗಣ್ಣ ಅಂದ್ರ ಮುಗೀತು. ಅಕಿ ನಾಗಣ್ಣನ ಮುಂದ ನಾನು ನಗಣ್ಯ. ಆಗಾಗ ಬರ್ತಾನ. ಅಣ್ಣಾ ತಂಗಿ ಕೂಡಿ ಮಸ್ತ ಮಜಾ ಮಾಡಿ, ನನಗ ಹ್ಯಾಂಗ ಬತ್ತಿ ಇಡಬೇಕು ಅಂತ ಅಕಿಗೆ ಹೇಳಿಕೊಟ್ಟು ಮತ್ತ ಹೋಗ್ತಾನ. ಈಗೂ ಮನಿಯೊಳಗ ತೂತ್ ನಾಗ್ಯಾಂದು ಮತ್ತ ಅವನ ತಂಗಿ TNT ದು ನೆಡದದ ಹರಟಿ, ನಗೋದು ಮತ್ತೊಂದು. ಅದಕಾ ಈ ಹಾಳಾದ ಪಳಾರ ಹಂಚಿ ಬರೋ ದರಿದ್ರ ಕೆಲಸ ನನ್ನ ಮ್ಯಾಲೆ ಬಿದ್ದದ, ಅಂತ ಹೇಳಿದ ಚೀಪ್ಯಾ.

ನೆನಪಾತು. ಚೀಪ್ಯಾನ ಬ್ರದರ್ ಇನ್ ಲಾ ನಾಗ್ಯಾ ಉರ್ಫ್ ತೂತ ನಾಗ್ಯಾ ಉರ್ಫ್ ನಾಗರಾಜ ರಾವ್. ಖಂಡಾಪಟ್ಟೆ ಕಿರಿಕ್ ಮನುಷ್ಯಾ. ಕಿರಿ ಕಿರಿ ಮಾಡ್ಕೋತ್ತ ಇರ್ತಾನ. ಬತ್ತಿ ಇಟ್ಟುಹೋದ ಅಂದ್ರ ಮುಗೀತು. ಬ್ಯಾಕ್ ಸೈಡ್  ಬ್ಲಾಸ್ಟ್ ಗ್ಯಾರಂಟಿ.

ಅಲ್ಲಲೇ ಚೀಪ್ಯಾ, ನಿಮ್ಮ ಬ್ರದರ್ ಇನ್ ಲಾ ನಾಗ್ಯಾ ಲಗ್ನಾದಾಗಿಂದಲೂ ನಿನ್ನ ಕಾಡ್ಲಿಕತ್ತಾನ ಅಂತೀ. ಏನು ಮಾಡಿದ ತೂತಾ? - ಅಂತ ಕೇಳಿದೆ.

ಖರೆ ಹೇಳಬೇಕು ಅಂದ್ರ ಲಗ್ನಾದಾಗಿಂದ ಅಲ್ಲ, ಅದಕೂ ಮೊದಲಿಂದ ಜೀವಾ ತಿನ್ನಲಿಕತ್ತಾನೋ. ಮದ್ವಿ ನಿಶ್ಚಿತಾರ್ಥ ಒಳಗ ನನಗ ಇಟ್ಟಿದ್ದ ಬತ್ತಿ ಮಂಗ್ಯಾನ ಮಗ ತೂತ್ ನಾಗ್ಯಾ, ಅಂದ ಚೀಪ್ಯಾ.

ಏನು? ನಿಶ್ಚಿತಾರ್ಥ ಒಳಗೇ ಬತ್ತಿ ಇಟ್ಟಿದ್ದನಾ ನಾಗ್ಯಾ? ಹ್ಯಾಂಗ? - ಅಂತ ಕೇಳಿದೆ.

ನಿಶ್ಚಿತಾರ್ಥ ಒಳಗ  ಪುರೋಹಿತರು ವರಾ ಅಂದ್ರ ನನಗ ಕೊಡಬೇಕಾದ ಸಾಮಾನುಗಳ ಪಟ್ಟಿ ಮಾಡ್ಲಿಕತ್ತಿದ್ದರು ಏನಪಾ. ನಮ್ಮ ಮಾವಾ ರೇಶ್ಮಿ ಧೋತ್ರಾ ಅಂತ ಹೇಳಿದ. ಪುರೋಹಿತರು, ಒಂದು ರೇಷ್ಮೆ ಧೋತ್ರ, ವರನಿಗೆ ವಧುವಿನ ಕಡೆಯಿಂದ, ಅಂತ ಬರಕೊಂಡರು. ಇವಾ ತೂತಾ ಅಡ್ಡ ಬಾಯಿ ಹಾಕಿದ. ರೇಶಮೀ ಧೋತ್ರಾ ಯಾಕ್ರೀ? ಕಾಟನ್ ಧೋತ್ರ ಕೊಡಿಸಿ ಒಗೀರಿ ಅಳಿಯಂದ್ರಿಗೆ, ಅಂತ ಅಡ್ಡಬಾಯಿ ಹಾಕಬೇಕಾ ಈ ನಾಗ್ಯಾ? - ಅಂತ ಚೀಪ್ಯಾ ಅವನ ಮದ್ವಿ ಎಂಗೇಜ್ಮೆಂಟ್ ಫ್ಲಾಶ್ ಬ್ಯಾಕಿಗೆ ಹೋದ.

ಕೊಡೋದು ಒಂದು ಧೋತ್ರ, ಅದೂ ಒಂದು ಸರೆ. ರೇಶಮೀ ಧೋತ್ರ. ಕೊಡವ ನಿಮ್ಮ ಮಾವಾ. ಮಾವನs  ರೇಶಮೀ ಧೋತ್ರಾ ಅಂದಾಗ ಈ ಭಾವಂದು ಏನಂತೋ? ಮಾವ ಕೊಟ್ಟರೂ ಭಾವ ಕೊಡಲಿಲ್ಲ ಅಂದಂಗ ಆತು ಇದು. ರೇಶಮೀ ಧೋತ್ರ ನಿನಗ ಕೊಟ್ಟರ ತೂತ ನಾಗ್ಯಾಂದೇನು ಗಂಟು ಹೋಗತಿತ್ತಂತ ? ಹಾಂ? ಹಾಂ? - ಅಂತ ಕೇಳಿದೆ.

ಯಾಕ್ರೀ ರೇಶಮೀ ಧೋತ್ರಾ ಅಳಿಯಂದರಿಗೆ? ರೇಶ್ಮಿ ಮಾಡೋವಾಗ ಎಷ್ಟು ರೇಶ್ಮಿ ಹುಳ ಬಿಸಿನೀರಿನ್ಯಾಗ ವಿಲಿವಿಲಿ ಒದ್ದಾಡಿ ಸಾಯತಾವ. ಗೊತ್ತದ ಏನು!? ಪ್ರಾಣಿಹಿಂಸೆ ಮಹಾಪಾಪಾ! ಅದೂ ಲಗ್ನದ ಟೈಮ್ ಒಳಗ ಅಂತಾ ಪಾಪದ ಕೆಲಸಾ ಮಾಡೋದ? ಅಂತಾ ಪಾಪಾ ಮಾಡಿದರ ನೋಡ್ಕೊರೀ ಶ್ರೀಪಾದ ರಾವ್ ಮುಂದ ಆಗೋ ಪಾಪಗಳಿಗೆ ನೀವs ಜವಾಬ್ದಾರಿ, ಅಂತ ಅಂದು ಬಿಟ್ಟನಂತ ನಾಗ್ಯಾ.

ಮದುಮಗ ನಮ್ಮ ಚೀಪ್ಯಾ ಫುಲ್ ಥಂಡಾ ಹೊಡೆದ  ಅಂತ.

ಏನು ಪಾಪ ಪಾಪ ಅನ್ನಲಿಕತ್ತಾನ ಈ ನಾಗ್ಯಾ? ಇನ್ನೂ ಲಗ್ನನ ಆಗಿಲ್ಲ. ಹಾಂಗಿದ್ದಾಗ ಪಾಪಾ ಎಲ್ಲಿಂದ ಬಂತು? ಅಂತ ವಿಚಾರ ಮಾಡಿದ ಚೀಪ್ಯಾ ಕೇಳಿದ ಅಂತ. ಅಲ್ರೀ!! ಇನ್ನೂ ಲಗ್ನನ ಆಗಿಲ್ಲ. ಹಾಂಗಿದ್ದಾಗ ನಾನು ಪಾಪು ಮಾಡೋದು ಎಲ್ಲಿಂದ ಬಂತ್ರೀ? ಪಾಪು ಮಾಡೋದಕ್ಕೂ ರೇಶಮೀ ಧೋತ್ರಕ್ಕೂ ಏನು ಸಂಬಂಧರೀ? ರೇಷ್ಮೆ ಧೋತ್ರಾ ಉಟಗೊಂಡು ಲಗ್ನಾದ್ರ ಲಗೂನ ಪಾಪು ಅಂದ್ರ ಮಕ್ಕಳಾಗತಾವೇನ್ರೀ? - ಅಂತ ಕೇಳಿಬಿಟ್ಟ ಚೀಪ್ಯಾ!

ನೋಡ್ರೀ ನೋಡ್ರೀ!!! ಇನ್ನೂ ಲಗ್ನ ಆಗಿಲ್ಲ. ಇವನ್ನ ನೋಡ್ರೀ! ಈಗs ಪಾಪುಗಳನ್ನ ಮಾಡೋ ಬಗ್ಗೆ ವಿಚಾರ ಮಾಡ್ಲಿಕತ್ತಾನ. ನೋಡ್ರೀ ಅವನ್ನ. ರೇಶಮೀ ಅಂಗೀ ಹಾಕ್ಕೊಂಡು ಬಂದು ಕೂತಾನ ನಿಶ್ಚಿತಾರ್ಥಕ್ಕ. ಅದಕಾ ಈ ನಮೂನಿ ಕೆಟ್ಟ ವಿಚಾರ ತಲಿಯೊಳಗ ಬರ್ಲಿಕತ್ತಾವ, ಅಂತ ಝಾಡಿಸಿದ ತೂತ್ ನಾಗ್ಯಾ, ಶ್ರೀಪಾದ ರಾವ್, ನಾ ಹೇಳಿದ್ದು ಪಾಪ ಪುಣ್ಯದ ಪಾಪ. ನೀವು ತಿಳ್ಕೊಂಡಿರೋ ಹಾಂಗ ಪಾಪ ಅಂದ್ರ ಕೂಸು ಕುನ್ನಿ ಅಲ್ಲ. ತಲಿ ನೋಡ್ರೀ!! ಕೊಳೆತು ಗಬ್ಬೆದ್ದು ಹೋಗ್ಯದ! - ಅಂತ ಅಂದ ತೂತ ನಾಗ್ಯಾ ಎಂಗೇಜ್ಮೆಂಟ್ ಒಳಗೇ ಚೀಪ್ಯಾನಿಗೆ ಬತ್ತಿ ಇಟ್ಟು ಬಿಟ್ಟನಂತ. ಹೋಗ್ಗೋ!!! ಪಾಪ ಚೀಪ್ಯಾ!!!

ಹೋಗ್ಗೋ!!! ತೂತ್ ನಾಗ್ಯಾನ ತಂದು. ರೇಷ್ಮೆ ಮಾಡಬೇಕಾದರ ರೇಷ್ಮೆ ಹುಳ ಸಾಯೋದು ಖರೆ. ಅದನ್ನ ಪ್ರಾಣಿ ಹಿಂಸೆ ಅಂತ ಲೇಬಲ್ ಮಾಡಿ ನಿಮಗ ರೇಷ್ಮೆ ಧೋತ್ರ ತಪ್ಪಿಸಿ ಬಿಟ್ಟನಾ? ಭಾರಿ ಜಾಬಾದ್ ಇದ್ದಾನ ಬಿಡ್ರೀ ನಿಮ್ಮ ಬ್ರದರ್ ಇನ್ ಲಾ! - ಅಂತ ಹೇಳಿದೆ.

ಹೌದು ನೋಡು! ಎಲ್ಲಾರ ಮುಂದ ನನ್ನ ಮಂಗ್ಯಾ ಮಾಡಿದ ನಾಗ್ಯಾ, ರೇಷ್ಮೆ ಧೋತ್ರ ಅನ್ನೋದನ್ನ ಕಾಟು ಹೊಡೆಸಿ, ಅದನ್ನ ಕಾಟನ್ ಧೋತ್ರ ಅಂತ ಚೇಂಜ್ ಮಾಡಿಸಿಬಿಟ್ಟ. ನಮ್ಮ ಮಾವ ಕೂಡ ನನ್ನ ತಲಿ ಮ್ಯಾಲೆಯೇ ಸಂಶಯ ವ್ಯಕ್ತ ಪಡಿಸಿ, ನಮ್ಮ ಅಳಿಯಾ ಆಗವಾ ಮದ್ವಿಗಿಂತ ಮೊದಲೇ ಫಸ್ಟ್ ನೈಟು, ಪಾಪುಗೋಳು ಬಗ್ಗೆ ಕನಸು ಕಾಣಲಿಕತ್ತು ಬಿಟ್ಟಾನ. ಇದಕೆಲ್ಲ ಆವ ಈಗ ಹಾಕಿಕೊಂಡು ಬಂದ ಸಿಲ್ಕಿನ ಅಂಗಿಯೇ ಕಾರಣ. ಬರೇ ಸಿಲ್ಕಿನ ಅಂಗಿ ಹಾಕಿಕೊಂಡಿದ್ದಕ್ಕ ಇವನ ತಲಿ ಈ ಪರಿ ಕೆಟ್ಟು ಬಿಟ್ಟದ. ಇನ್ನು ಸಿಲ್ಕಿನ ಧೋತ್ರಾ ಬ್ಯಾರೆ ಕೊಡಿಸಿಬಿಟ್ಟರ ಮಗಳ ಜೊತಿ ಏನೇನು ಮಾಡವ ಇದ್ದಾನೋ ಈ ಮಂಗ್ಯಾನಿಕೆ, ಅಂತ ಹೆದರಿದ ಮಾವಾಜಿ, ಅಳಿಯಂದ್ರ, ಈಗ ಸದ್ಯಾ ಕಾಟನ್ ಗೆ ಅಡ್ಜಸ್ಟ್ ಮಾಡಿಕೊಂಡು ಬಿಡ್ರೀ. ಓಕೆ? - ಅಂತ ಕೇಳಿ ಕಾಟನ್ ಧೋತ್ರ ಅಂತ ಆಖ್ರೀ ಫೈಸಲಾ ಮಾಡಿ ಬಿಟ್ಟರಂತ.

ಹೋಗ್ಗೋ!!!! ಚೀಪ್ಯಾ!!! ತೂತ ನಾಗ್ಯಾ ಇಟ್ಟ ಬತ್ತಿಯಿಂದ ನಿನಗ ಲಗ್ನದಾಗ ಕಾಟನ್ ಧೋತ್ರ ಹಾಕ್ಕೋಳೋ ಪರಿಸ್ಥಿತಿ ಬಂತು ಅಂತ ಆತು. ಕಾಟನ್ ಆದ್ರ ಏನಾತು? ರಾಜಸಿಕ ಮನಸ್ಥಿತಿ ಕಡಿಮಿ ಆಗಿ ಸಾತ್ವಿಕ ವಿಚಾರಗಳೇ ತಲಿಯೊಳಗ ಬಂದಿರಬೇಕಲ್ಲ ಲಗ್ನದ ಟೈಮ್ ನ್ಯಾಗ? ಸಾತ್ವಿಕ ಗುಣ ಹತ್ತಿಯಿಂದ ಬರ್ತದ ಅಂತಾರಪಾ ದೊಡ್ಡವರು - ಅಂತ ಕೇಳಿದೆ.

ಕಾಟನ್ ಧೋತ್ರ ಅಂದ್ರ ಏನು ಮಹಾ ಅಂತ ಕೇಳ್ತೀ? ಮಂಗ್ಯಾನಿಕೆ.....ಒಳ್ಳೆ ಕ್ವಾಲಿಟಿ ಕಾಟನ್ ಧೋತ್ರ ಕೊಟ್ಟಿದ್ದರ ಮಾತು ಬ್ಯಾರೆ. ಹೋಗಿ ಹೋಗಿ ತೆಳ್ಳನೆ ಕಾಟನ್ ಧೋತ್ರ ತಂದು ಬಿಟ್ಟಿದ್ದರು. ಹಾಕ್ಕೊಂಡ್ರ ಕಾಟನ್ ಧೋತ್ರದಾಗ ಒಳಗಿನ ಕಾಚಾ ಚಡ್ಡಿ ಕಾಣಬೇಕು ಅಷ್ಟು ತೆಳ್ಳಗ ಇತ್ತು ಹತ್ತಿ ಧೋತ್ರಾ. ಸೂಡ್ಲಿ. ಮತ್ತ ನನ್ನ ಕಡೆನೋ, ಎಲ್ಲಾ ರಬ್ ರಬ್ ಢಾಳ್ ಢಾಳ್ ಬಣ್ಣದ ಚಡ್ಡಿ ಏನಪಾ. ಆ ಪರಿ ಕೆಟ್ಟ ತೆಳ್ಳನೆ ಬಿಳಿ ಕಾಟನ್ ಧೋತ್ರದೊಳಗ ಕೆಂಪ ಬಣ್ಣದ ಕಾಚಾ ಹಾಕ್ಕೊಂಡು ಹೋಮಾ ಹವನಕ್ಕ ಕೂಡೋ ಪರಿಸ್ಥಿತಿ ಬಂತಪಾ ನನಗ. ಮದ್ವಿ ಮಾಡಿಸಲಿಕ್ಕೆ ಬಂದ ಆಚಾರ್ರಿಂದ ಹಿಡದು, ನನ್ನ ಹೆಂಡ್ತೀ ಗೆಳತ್ಯಾರೆಲ್ಲರೂ ಕೂಡಿ ನನಗ ರೆಡ್ ಅಂಡ್ ವೈಟ್ ಅಂತ ಹೆಸರಿಟ್ಟು ಜೋಕ್ ಮಾಡಿ ಬಿಟ್ಟರು. ಕೆಟ್ಟ ಅಪಮಾನ ಆಗಿ ಹೋತು. ಎಲ್ಲಾರೂ ಅವರವರ ಮದ್ವಿ ಫೋಟೋ ಆಗಾಗ ನೋಡಿಕೋತ್ತ ಇರತಾರ. ನನ್ನುವು ನೋಡಿದರ ನನಗ ರೆಡ್ ಅಂಡ್ ವೈಟ್ ನೆನಪಾಗಿ ತೂತ ನಾಗ್ಯಾನ ಮರ್ಡರ್ ಮಾಡಿ ಬಿಡಬೇಕು ಅನ್ನಸ್ತದ, ಅಂತ ಹೇಳಿದ ಚೀಪ್ಯಾ.

ಅಲ್ಲಲೇ ಚೀಪ್ಯಾ!!! ಧೋತ್ರ ಹೀಂಗ ಭಾಳ ತೆಳ್ಳನೆದು ತಂದು ಬಿಟ್ಟಾರ, ನನ್ನ ಕಡೆ ಬರೆ ಕೆಂಪ ಚಡ್ಡಿ ಅವ, ಏನು ಮಾಡ್ಲೀ? ಅಂತ ಒಂದು ಮಾತು ನನ್ನ ಕಡೆ ಕೇಳಿದ್ದರ ಮಸ್ತ ಐಡಿಯಾ ಕೊಡ್ತಿದ್ದೆ ಏನಪಾ. ನನ್ನ ಕಡೆ ಕೇಳೋದು ಬಿಟ್ಟು ಕೆಂಪ ಅಂಡರ್ವೇರ್ ಮ್ಯಾಲೆ ಬಿಳೇದು ಅದೂ ತೆಳ್ಳನೆ ಬಿಳೆ ಧೋತ್ರಾ ಉಟ್ಟುಗೊಂಡು ರೆಡ್ & ವೈಟ್ ಅಂತ ಫೇಮಸ್ ಆಗಿ ಬಿಟ್ಟಿಯಲ್ಲಪಾ? ಹಾ!!! ಹಾ!!! - ಅಂತ ನಕ್ಕೆ.

ಏನ ಮಹಾ ಐಡಿಯಾ ಕೊಡ್ತಿದ್ದಿ? ಬಿಳೆ ಚಡ್ಡಿ ತಂದು ಹಾಕ್ಕೋ ಅಂತಿದ್ದಿ. ಹೌದಿಲ್ಲೋ? ಅಲ್ಲಲೇ ಆ ಸಣ್ಣ ಹಳ್ಳಿಯೊಳಗ  ಆ ಐತಾ ವೇಳ್ಯಾದಾಗ ಎಲ್ಲಿಂದ ಹೋಗಿ ಬಿಳೆ ಚಡ್ಡಿ ತಗೊಂಡು ಬರಲೀ? ಐಡಿಯಾ ಕೊಡ್ತಾನಂತ ಐಡಿಯಾ. ಸುಮ್ಮನಿರಪಾ. ಇಲ್ಲದ್ದು ಹೇಳಬ್ಯಾಡ, ಅಂದ ಚೀಪ್ಯಾ.

ಇಲ್ಲೇ ನೀ ನನ್ನ ತಪ್ಪು ತಿಳಕೊಂಡಿ ನೋಡಲೇ! ನಾವು ಯಾವಾಗಲೂ ಪ್ರಾಕ್ಟಿಕಲ್ ಐಡಿಯಾ ಕೊಡ್ತೇವಿ. ಹೊತ್ತಿಲ್ಲದ ಹೊತ್ತಿನ್ಯಾಗ ಅರ್ಜೆಂಟ್ ಒಳಗ ಬಿಳೆ ಕಾಚಾ ತೊಗೊಂಡು ಬರಲಿಕ್ಕೆ ಆಗೋದಿಲ್ಲ ಅಂತ ನಮಗೂ ಗೊತ್ತದ. ನಾ ಏನು ಐಡಿಯಾ ಕೊಡ್ತಿದ್ದೆ ಅಂದ್ರ....ಅಂದ್ರ....ಹೇಳಲಿ? ನೋಡ್ಕೋ ಮತ್ತ. ನಾ ಹೇಳಿದ ಮ್ಯಾಲೆ ಐಡಿಯಾ ಸೇರಲಿಲ್ಲ ಅಂತ ಬೈಬ್ಯಾಡ, ಅಂತ ಕೇಳಿದೆ.

ಏನು ಅದು ಅಂತ ಹೇಳಿ ಸಾಯೋ. ಈಗ ಎಂತಾ ಐಡಿಯಾ ಕೊಟ್ಟರ ಏನು? ಮತ್ತೊಂದು ಮದ್ವೀ ಮಾಡ್ಕೊಳ್ಳೋವಾಗ ಉಪಯೋಗಿಸಲಿ ಏನು? ಆ ನಸೀಬಾ ತೂತ ನಾಗ್ಯಾ ಮತ್ತ ಅವನ ತಂಗಿ TNT ನನಗ ಕೊಟ್ಟಿಲ್ಲ. ಹೇಳು ಹೇಳು, ಅಂತ ಹೇಳಿದ ಚೀಪ್ಯಾ.

ಅಲ್ಲಲೇ. ಸಿಂಪಲ್ ಐಡಿಯಾ. ಸುಮ್ಮನ ಕೆಂಪ ಚಡ್ಡಿ ಕಳದು ತಿಪ್ಯಾಗ  ಒಗೆದು  ಬರೆ ಧೋತ್ರ ಉಟ್ಟುಗೊಂಡು ಹೋಗಿ ಕೂತು ಬಿಟ್ಟಿದ್ದರ ಆಗಿತ್ತಪಾ. ಯಾರೂ ರೆಡ್ & ವೈಟ್ ಅಂತಿರಲಿಲ್ಲ. ಹ್ಯಾಂಗ ಅದ ಐಡಿಯಾ? ಲಗ್ನದಾಗ ಅಂಡರ್ವೇರ್ ಚಡ್ಡಿ  ಕಂಪಲ್ಸರಿ ಏನು? ಆ ಮ್ಯಾಲೆ ಹ್ಯಾಂಗೂ ಎಲ್ಲಾ ಬಿಚ್ಚವರು ಮೊದಲೇ ಬಿಚ್ಚಿಬಿಟ್ಟಿದ್ದರ ರೆಡ್ & ವೈಟ್ ಅಂತ ಬ್ರಾಂಡ್ ಆಗ್ತಿದ್ದಿಲ್ಲ ನೋಡು - ಅಂತ ಕೇಳಿದೆ.

ನಾ ಏನು ಭಯಂಕರ ಐಡಿಯಾ ಕೊಡ್ತೇನೋ, ಅಂತ ಸಿಕ್ಕಾಪಟ್ಟೆ ಕ್ಯೂರಿಯಸ್ ಆಗಿ ಕೇಳಿಕೋತ್ತ ನಿಂತಿದ್ದ ಕರೀಮ ಅಂಡು ತಟ್ಟಿಕೊಂಡು ವಿಪರೀತ ನಕ್ಕ.

ಹಲ್ಕಟ್ ಸೂಳೇಮಕ್ಕಳಾ, ಚ್ಯಾಸ್ಟಿ ಮಾಡ್ತೀರಿ? ಮಾಡ್ರೀ, ಮಾಡ್ರೀ! ಅಂತ ಚೀಪ್ಯಾ  ಇಲ್ಲದ ಸಿಟ್ಟು ತೋರಿಸುತ್ತ ಹೊಡಿಯೋ ನಾಟಕ ಮಾಡಿದ.

ಸಾಬ್! ಈ ಚೀಪ್ಯಾ ಸಾಬ್ ನಿಮ್ಮ ಐಡಿಯಾ ಫಾಲೋ ಮಾಡಿ ಬಿಟ್ಟಿದ್ದರೆ ರೆಡ್ & ವೈಟ್ ಬದಲೀ ಮಂದಿ ಇವರಿಗೆ ಬ್ಲಾಕ್ & ವೈಟ್ ಅಂತ ಜೋಕ್ ಮಾಡ್ತಿದ್ದರು ಬಿಡ್ರೀ, ಅಂತ ಚೀಪ್ಯಾನ ಮತ್ತೊಂದಿಷ್ಟು ಹಾಸ್ಯ ಮಾಡಿದ.

ಅಲ್ಲಲೇ ಹೋಗಿ ಹೋಗಿ ಕೆಂಪ ಚಡ್ಡಿ ಯಾಕ ತೊಗೊಂಡು ಬಿಟ್ಟಿದ್ದಿ? ಬಿಳೇದು ಇಲ್ಲಂದ್ರ ಇಲ್ಲ. ಲೈಟ್ ಕಲರ್ ಯಾವದೂ ಇರಲಿಲ್ಲ? ಹಾಂ? ಹಾಂ - ಅಂತ ಕೇಳಿದೆ.

ಇರಲಿಲ್ಲ ಮಾರಾಯ. ಮಾನ್ಸೂನ್ ಸೇಲ್ ಒಳಗ ಒಂದು ತೊಗೊಂಡ್ರ ಇನ್ನೊಂದು ಫ್ರೀ ಮತ್ತ ಚೀಪ್ ಇತ್ತು ಅಂತ ಹೇಳಿ ಇಪ್ಪತ್ತು ಒಂದೇ ಬಣ್ಣದ ಕೆಂಪ್ಚಡ್ಡಿ ತೊಗೊಂಡು ಬಿಟ್ಟೆ ಮಾರಾಯಾ. ಈಗೂ ಅವಾ ನೆಡದಾವ ನೋಡಪಾ. ಅಂದ ಚೀಪ್ಯಾ

ಅಲ್ಲಲೇ ಕೆಂಪ ಚಡ್ಡಿ ಯಾಕ? ಒಳಗಿರೋದು ಡೇಂಜರ್ ಅಂತ ಎಲ್ಲಾರಿಗೂ ಗೊತ್ತs ಇರ್ತದ. ಅದರ ಮ್ಯಾಲೆ ಕೆಂಪ ಬ್ಯಾರೆ ಹಾಕ್ಕೊಳ್ಳೋದು ಯಾಕ? ಮದ್ವಿ ಗಂಡು ಎಕ್ಸಟ್ರಾ ಡೇಂಜರ್ ಅಂತ ಏನು? ಲೇ....ಮಂಗ್ಯಾನಿಕೆ....ರೂಪಾ ವೈನಿ ಏನೋ ಘಟ್ಟೆ ಇದ್ದಾರ. ಅದಕ್ಕ ಬಚಾವ ಆದರು. ಇಲ್ಲಂದ್ರ ಕೆಂಪ ಚಡ್ಡಿ ಹಾಕ್ಕೊಂಡು ಮದ್ವಿ ಮಂಟಪಕ್ಕ ಬಂದ ಗೂಳಿ ಟೈಪಿನ ವರನ್ನ ನೋಡಿದರ ಸಾಧಾರಣ ಮಂದಿ ಕನ್ಯಾ ಆಗಿದ್ದರ ಅಲ್ಲೇ ಎಚ್ಚರ ತಪ್ಪಿ ಬಿದ್ದು ನಿನ್ನ ಲಗ್ನ ಹರೋಹರಾ ಅಂದು ಹೋಗ್ತಿತ್ತು, ಅಂತ ಹೇಳಿದೆ.

ಅಲ್ಲಲೇ ಚೀಪ್ಯಾ....ಪ್ರಾಣಿಹಿಂಸೆ ಮತ್ತೊಂದು ಅಂತ ನಿಮ್ಮ ಬ್ರದರ್ ಇನ್ ಲಾ ತೂತ್ ನಾಗ್ಯಾ ನಿನಗ ರೇಷ್ಮೆ ಧೋತ್ರಾ ಕೊಡೋದನ್ನ ತಪ್ಪಿಸಿದ ಅಂತ ಆತು. ಅವನ ತಂಗಿ ಮದಿವಿ ಸೀರಿ? ಅದೂ ಕಾಟನ್ ಏನು? ನೋಡಿ ಕೇಳಬೇಕಾಗಿತ್ತು, ಯಾಕಲೇ ಹಡಬಿಟ್ಟಿ ಮಂಗ್ಯಾನಿಕೆ, ನನಗ ಕಾಚಾ ಕಾಣೋ ಅಂತಾ ಕಾಟನ್....ನಿನ್ನ ತಂಗಿಗೆ ಧರ್ಮಾಪುರಿ ಸಿಲ್ಕ್ ಸೀರಿ! ಇದು ಧರ್ಮ ಏನಲೇ ತೂತ್ ನಾಗ್ಯಾ? ಅಂತ ಕೇಳಬೇಕಾಗಿತ್ತು. ಹಾಂ? ಹಾಂ? - ಅಂತ ಕೇಳಿದೆ.

ಎಲ್ಲಿದು ಮಾರಾಯಾ? ಬಿಳೇ ಧೋತ್ರದ ಒಳಗ ಕೆಂಪ ಚಡ್ಡಿ ಮುಚ್ಚಿಗೊಳ್ಳೋದ್ರಾಗ ನನಗ ಸಾಕಾಗಿ ಹೋಗಿತ್ತು.  ಅಂತಾ ಟೈಮ್ ನ್ಯಾಗ ಇಕಿ ರೂಪಾ ಎಂತಾ ಸೀರಿ ಉಟಗೊಂಡು ಬಂದು ಕೂತಿದ್ದಳು ಅಂತ ಎಲ್ಲಿ ವಿಚಾರ ಮಾಡ್ಲೀ? ನನ್ನ ಪರಿಸ್ಥಿತಿ ಇಷ್ಟು ಗಂಭೀರ ಇತ್ತು ಅಂದ್ರ ರೂಪಾನ ಬದಲೀ ಅಕಿ ಅಕ್ಕನ ತಂದು ಕೂಡಿಸಿದ್ದರೂ ನನಗೇನು ಗೊತ್ತಾಗತಿರಲಿಲ್ಲ ಬಿಡು, ಅಂತ ಪಾಪದ ಮಾರಿ ಮಾಡಿ ಹೇಳಿದ.

ಅಯ್ಯೋ ಪಾಪ ರೆಡ್ ಅಂಡ್ ವೈಟ್ ಮದುಮಗ ಚೀಪ್ಯಾ!

ಮತ್ತೇನು ಬತ್ತಿ ಇಟ್ಟಿದ್ದನೋ ನಿಮ್ಮ ತೂತ ನಾಗ್ಯಾ? - ಅಂತ ಕೇಳಿದೆ.

ಇನ್ನೂ ಅವ ಮಾರಾಯ.  ಭಾಳ ಅವ, ಅಂತ ಹೇಳಿದ ಚೀಪ್ಯಾ ಒಂದು ಬ್ರೇಕ್ ತೊಗೊಂಡ.

ನಾನು ಲಗ್ನದಾಗ ನನಗ ಯಾವದಾರ ಒಂದು ಒಳ್ಳೆ ಪಟಪಟಿ (ಮೋಟಾರ್ ಬೈಕ್) ಕೊಡಸ್ರೀ ಅಂತ ಡಿಮ್ಯಾಂಡ್ ಇಟ್ಟಿದ್ದೆ ಏನಪಾ. ಯಾವದು ಬೇಕ್ರೀ ಅಳಿಯಂದ್ರ? ಸ್ವಲ್ಪ ನಮ್ಮ ರೇಂಜ್ ಒಳಗ ಇರೋದು ನೋಡಿ ಹೇಳ್ರೀಪಾ. ಭಾಳ ತುಟ್ಟಿದು ಕೇಳಿದರ ನಮ್ಮ ಕಡೆ ಆಗಲಿಕ್ಕೆ ಇಲ್ಲ. ಇನ್ನೂ ಮೂರು ಮಂದಿ ಹುಡುಗ್ಯಾರು ಇದ್ದಾರ ನೋಡ್ರೀ. ಅವರ ಲಗ್ನಕ್ಕೂ ರೊಕ್ಕಾ ಎತ್ತಿ ಇಡಬೇಕಾಗ್ತದ ನೋಡ್ರೀ. ಹೆಣ್ಣು ಹೆತ್ತವರ ಸಂಕಟ ಸ್ವಲ್ಪ ಅರ್ಥ ಮಾಡಿಕೋರೀ ಪ್ಲೀಸ್, ಅಂತ ಹೇಳಿ ನಮ್ಮ ಮಾವಾ ಮಿಜಿ ಮಿಜಿ ಚೌಕಾಶಿ ಮಾಡಿದ.

ಓಕೆ, ನಮ್ಮ ಮಾವಾ ಭಾಳ ಶ್ರೀಮಂತ ಇಲ್ಲ. ಮೂರ್ನಾಕು ಮಂದಿ ಸ್ತ್ರೀಗಳನ್ನು ಹಡೆದ ಸ್ತ್ರೀಮಂತ ಇದ್ದಾನ. ಇರ್ಲಿ ಅಡ್ಜಸ್ಟ್ ಮಾಡಿಕೊಂಡರಾತು ಅಂತ ಮಾಡಿದೆ, ಅಂದ ಚೀಪ್ಯಾ.

ನನಗ ಒಂದು TVS Champ ಕೊಡಿಸಿ ಬಿಡ್ರೀ, ಅಂತ ಹೇಳಿದೆ  ಏನಪಾ. ಅಷ್ಟರಾಗ ತೂತ ನಾಗ್ಯಾ ಅಡ್ಡಬಾಯಿ ಹಾಕಿದ. ಮತ್ತ ತಂದು ಇಟ್ಟ! - ಅಂತ ಹೇಳಿದ ಚೀಪ್ಯಾ.

ಈಗ ಏನು ತಂದಿಟ್ಟ? ಮೋಟಾರ್ ಸೈಕಲ್ ಬ್ಯಾಡ. ಈ ಹುಂಬ ಸೂಳೆಮಗ ಶ್ರೀಪಾದಗ ಒಂದು ಹುಂಬರ್ (humber) ಸೈಕಲ್ ಕೊಡಿಸಿ ಒಗಿರಿ. ಸೈಕಲ್ ಹೊಡೆದು ಸ್ವಲ್ಪ ಹೊಟ್ಟಿ ಕರಗಲಿ ಇವಂದು. ಇನ್ನೂ ಲಗ್ನಾ ಆಗಿಲ್ಲ, ಹೊಟ್ಟಿ ನೋಡ್ರೀ ಹ್ಯಾಂಗ ಬೆಳಿಸ್ಯಾನ, ಅಂತ ಅಂದನೇನೋ ಚೀಪ್ಯಾ ನಿಮ್ಮ ವುಡ್ ಬೀ ಅಣ್ಣಾ ನಾಗ್ಯಾ? - ಅಂತ ಕೇಳಿದೆ.

ಇಲ್ಲಪಾ....ಇಷ್ಟು ಸೀದಾ ಸೀದಾ ಮಾತಾಡವರಿಗೆ ಬತ್ತಿ ಇಡೋರು ಅನ್ನೋದಿಲ್ಲ. ನಾಗ್ಯಾ ಅಂದಾ......ಶ್ರೀಪಾದಾ, TVS Champ ಗಾಡಿ ಬ್ಯಾಡ. ಅದೇನು ಸ್ವಲ್ಪೂ ಛೊಲೋ ಇಲ್ಲ. ಇಲ್ಲೆ ನೋಡು. ಈ ಎರಡು ಗಾಡಿ ಒಳಗ ಒಂದು ಡಿಸೈಡ್ ಮಾಡಿ ಹೇಳು. ಕೊಡಿಸಿ ಬಿಡ್ತೇವಿ, ಅಂತ ಹೇಳಿದ ನಾಗ್ಯಾ ಎರಡು ಪೋಸ್ಟರ್ ಕೊಟ್ಟಾ, ಅಂತ ಹೇಳಿದ ಚೀಪ್ಯಾ.

ಯಾವ ಎರಡು ಗಾಡಿ ಪೋಸ್ಟರ್ ಕೊಟ್ಟಾ ತೂತ ನಾಗ್ಯಾ? - ಅಂತ ಕೇಳಿದೆ.

ಒಂದು 'ಬಜಾಜ್ ಸುನ್ನಿ' ಅಂತ. ಇನ್ನೊಂದು 'ಹೀರೋ ಪೂಕು' ಅಂತ.

ಭಾಳ ನಗು ಬಂತು. ಬಜಾಜ್ ಸನ್ನಿ ಮತ್ತ ಹೀರೋ ಪುಕ್ ಅನ್ನಲಿಕ್ಕೆ ಸ್ವಲ್ಪ ಅಪಭ್ರಂಶ ಮಾಡಿ ಹೇಳಿ ಬಿಟ್ಟಿದ್ದ. ಸ್ಪೆಲ್ಲಿಂಗ್ ಪ್ರಕಾರ ಬರೋಬ್ಬರಿ ಇತ್ತು ಬಿಡ್ರೀ.

ಯಾವದನ್ನ ಕೊಡಿಸರಿ ಅಂತ ಹೇಳಿದಿ ನಿಮ್ಮ ಮಾವಂಗ? - ಅಂತ ಕೇಳಿದೆ.

ನನಗೇನು ಗೊತ್ತೋ ಬಜಾಜ್ ಸುನ್ನಿ ಚೊಲೋನೋ ಹೀರೋ ಪೂಕು ಚೊಲೋನೋ ಅಂತ. ಅದಕ್ಕ ಹೋಗಿ ನಮ್ಮ ಆಫೀಸ್ ಮಂದಿ ಕೇಳಿದೆ ಏನಪಾ. ನಮ್ಮ ಆಫೀಸ್ ಮಂದಿ ಗೊತ್ತಲ್ಲ. ಎಲ್ಲಾ ಅಂಡಾ ಬಂಡು ತಮಿಳು ತೆಲಗು ಮಂದಿ ತುಂಬ್ಯಾರ. ಅವರ ಕಡೆ ಹೋಗಿ ಬಜಾಜ್ ಸುನ್ನಿ ಛೊಲೋನೋ ಅಥವಾ ಹೀರೋ ಪೂಕು ಛೊಲೋನೋ ಅಂತ ಕೇಳಿದರ ಅವರು ಎಲ್ಲೆಲ್ಲೊ ಏನೇನೋ ಬಡಕೊಂಡ ಬಡಕೊಂಡು ಉಳ್ಳಾಡಿ ಉಳ್ಳಾಡಿ ನಕ್ಕರು. ನನಗ ಮತ್ತ ಭಾಳ ಅವಮಾನ ಆತು, ಅಂತ ಹೇಳಿದ ಚೀಪ್ಯಾ.

ಯಾಕಂತ? ಯಾಕ ಆ ಪರಿ ನಕ್ಕರು ನಿಮ್ಮ ಕಲೀಗ್ಸ್? - ಅಂತ ಕೇಳಿದೆ.

ಸುನ್ನಿ, ಪೂಕು ಅಂದ್ರ ಭಯಂಕರ ಅಶ್ಲೀಲ ಶಬ್ದ ಅಂತ ತಮಿಳ್ ತೆಲಗು ಒಳಗ. ಅದರ ಮ್ಯಾಲೆ ನಾನು ಸನ್ನಿ ಮತ್ತ ಪುಕ್ ಅಂತ ಅನ್ನೋದು ಬಿಟ್ಟು ಕೆಟ್ಟದಾಗಿ ಹೆಂಗಸೂರ ಮುಂದ ಸುನ್ನಿ ಛೊಲೋ ಅದನೋ ಪೂಕು ಛೊಲೋ ಅದನೋ ಅಂತ ಕೇಳಿ ಬಿಟ್ಟೆ. ನಮ್ಮ ಕಡೆ ಕೇಳಿದ್ರೀ ಓಕೆ ಶ್ರೀಪಾದ ರಾವ್. ಬ್ಯಾರೆ ಯಾವದಾರ ತಮಿಳ, ತೆಲಗು ಹೆಂಗಸೂರ ಕಡೆ ಹೋಗಿ ಮಾತ್ರ ಸುನ್ನಿ, ಪೂಕಿನ ಬಗ್ಗೆ ಕೇಳಬ್ಯಾಡ್ರೀ. ಏನರ ಕೇಳಿದರ ಚಪ್ಪಲಿ ಒಳಗ ತಿಂತೀರಿ ಅಂತ ವಾರ್ನಿಂಗ್ ಬ್ಯಾರೆ ಕೊಟ್ಟು ಕಳಿಸಿದರು, ಅಂತ ಹೇಳಿದ ಚೀಪ್ಯಾ.

ಸುನ್ನಿ, ಪೂಕು ಅಂದ್ರೆ ಏನು ಪ್ರಾಬ್ಲೆಮ್ ಚೀಪ್ಯಾ ಸಾಬ್? - ಅಂತ ಕರೀಂ ಇನ್ನೋಸೆಂಟ್ ಆಗಿ ಕೇಳಿದ.

ಬಜಾಜ್ ಮತ್ತು ಹೀರೋ ಗಾಡಿಗಳ ಹೆಸರಿಂದ ಭಾಳ ಹೈರಾಣ ಆಗಿದ್ದ ಚೀಪ್ಯಾ, ಸುಮ್ಮ ಕೂಡಲೇ ಮಂಗ್ಯಾನಿಕೆ ಸಾಬಾ!!! ಅಂತ ಬೈದ.

ನಾ ಆಮ್ಯಾಲೆ ನಿನಗ ಎಲ್ಲಾ ಡೀಟೇಲ್ಸ್ ಹೇಳ್ತೇನಿ. ಈಗ ಸುಮ್ಮ ಕೂಡು, ಅಂತ ಕರೀಮಗ ನಾ ಕಣ್ಣು ಹೊಡೆದು ಸನ್ನಿ ಮಾಡಿದೆ.

ಹೀಂಗಾತು ಅಂತ ಆತು. ಯಾವ ಗಾಡಿ ಕೊಡಸರಿ ಅಂತ ಹೇಳಿದಿ ನಿಮ್ಮ ಮಾವಾಜಿ ಅವರಿಗೆ? ಬಜಾಜ್ ಸನ್ನಿನೋ ಅಥವಾ ಹೀರೋ ಪುಕ್ಕೋ? - ಅಂತ ಕೇಳಿದೆ.

ಆ ಹೊಲಸ ಹೆಸರಿನ ಗಾಡಿ ತೊಗೊಳ್ಳೋಕಿಂತ ಮೊದಲೇ ನಮ್ಮ ಆಫೀಸ್ ಮಂದಿ ಇಷ್ಟು ಕಾಡಿಸಲಿಕ್ಕೆ ಹತ್ಯಾರ. ಇನ್ನು ಆ ಅಸಡ್ಡ ಹೆಸರಿನ ಗಾಡಿ ತೊಗೊಂಡು ಬಿಟ್ಟರ ಅಷ್ಟ ಮತ್ತ. ಕಾಡಿಸಿ ಕಾಡಿಸಿ ನೌಕರೀ ಬಿಟ್ಟು ಓಡಿಸಿ ಬಿಟ್ಟಾರು ಅಂತ ವಿಚಾರ ಮಾಡಿ, ನಮ್ಮ ಮಾವಂಗ, ನನಗ ಯಮಾ (Yamaha) RX 100 ಕೊಡಿಸಿ ಬಿಡ್ರೀ. ಒಂದು ಏಳೆಂಟು 90 ml ವಿಸ್ಕಿ ಪೆಗ್ಗ್ ಹಾಕಿ ಮ್ಯಾಲೆ ಇನ್ನೊಂದು 10 ml ಜಾಸ್ತಿನೇ ಕುಡದು, ಪೂರ್ತಿ 100 ಮಾಡಿಕೊಂಡು, RX ಬದಲೀ ಒಂದು XXX ಬ್ಲೂ ಫಿಲಂ ನೋಡಿ, ನೀವು ಕೊಡಿಸಿದ ಯಮಾ ಗಾಡಿ ಕಣ್ಣು ಮುಚ್ಚಿಗೊಂಡು ಸ್ಪೀಡಾಗಿ ಹೊಡೆದು, ಸೀದಾ ಯಮಲೋಕಕ್ಕ ಹೋಗಿ ಬಿಡ್ತೇನಿ. ಅದೇ ಒಂದು ದಾರಿ ನನಗ ಈಗ ಇರೋದು. ಇಲ್ಲಂದ್ರ ನಿಮ್ಮ ಪುತ್ರರತ್ನ ತೂತ್ ನಾಗ್ಯಾ ಬತ್ತಿ ಮ್ಯಾಲೆ ಬತ್ತಿ ಇಟ್ಟು ನನ್ನ ಜೀವಾ ತಿನ್ನಲಿಕತ್ತಾನ. ಹೀಂಗ ಸಾಯೋಕಿಂತ ಯಮಾ ಗಾಡಿ ಒಮ್ಮೆಲೇ ಎತ್ತರಾ ಪತ್ತರಾ ಹೊಡೆದು, ಸತ್ತು, ಸೀದಾ ಯಮನ ಕಡೆ ಹೋಗಿ, ಯಮರಾಯಾ, ನಿನ್ನ ಹೆಸರಿನ ಯಮಾ ಗಾಡಿ ರಸ್ತೆದಾಗ ಬೇಕಂತಲೇ ಹೆಟ್ಟಿ, ಆಕ್ಸಿಡೆಂಟ್ ಮಾಡಿ, ಸತ್ತು, ಇಲ್ಲೆ ಬಂದೇನಿ. ನಿನ್ನ ಹೆಸರಿನ ಗಾಡಿಲೇ ಸತ್ತೇನಿ ಅಂತಾರೆ ಏನರ ಡಿಸ್ಕೌಂಟ್ ಕೊಟ್ಟು ಸೀದಾ ಸ್ವರ್ಗಕ್ಕ ಕಳಿಸಿಬಿಡೋ, ಅಂತ ಕೇಳಿಕೊಳ್ಳತೇನಿ............... ಅಂತ ಮಾವಾಜಿಗೆ ಹೇಳಬೇಕು ಅಂತ ಮಾಡಿದ್ದೆ. ಆದ್ರ ಕುಡದು ಆಕ್ಸಿಡೆಂಟ್ ಮಾಡಿಕೊಂಡು ಸಾಯೋ ಮುಂಡೆ ಗಂಡಗ ಲಗ್ನದಾಗ ಹುಡುಗಿ ಕೊಟ್ಟು ಮ್ಯಾಲೆ ಪಟಪಟಿ ಬ್ಯಾರೆ ಕೊಡಬೇಕಾ? ಯಾಕ? ನಮ್ಮ ಹುಡುಗಿನ ಬೋಡಿ ಫಣಿಯಮ್ಮನ ಮಾಡಲಿಕ್ಕೆ ಏನು? ಹಾಂ? ಹಾಂ? ಅಂತ ಹಾಕ್ಕೊಂಡು ಬೈದಾರು ಅಂತ ಹೇಳಿ, ನನಗ ನೀವು ಕೊಡಿಸೋ ಬಜಾಜನ ಸುನ್ನಿನೂ ಬ್ಯಾಡ, ಹೀರೋನ ಪೂಕೂ ಬ್ಯಾಡ, ಅಂತ ಹೇಳಿ ವರದಕ್ಷಿಣೆ ಕಮ್ಮಿ ಮಾಡಿ ಒಳ್ಳೆ ತ್ಯಾಗರಾಜನ ಪೋಸ್ ಕೊಟ್ಟು ಬಿಟ್ಟೆ ಮಾರಾಯ. ಅದಕ್ಕs ಇವತ್ತಿಗೂ ನನ್ನ ಕಡೆ ಒಂದ ಗಾಡಿ ಇಲ್ಲ ನೋಡು, ಅಂತ ಚೀಪ್ಯಾ ದೊಡ್ಡ ಕಥಿ ಹೇಳಿ ಮುಗಿಸಿದ.

ವರದಕ್ಷಿಣೆ ಒಳಗ ಪಟಪಟಿ ಖರ್ಚು ಸಹಿತ ಉಳಿಸಿದೆ ಅಂತ ನಿಮ್ಮ ಭಾವಾ ತೂತ ನಾಗ್ಯಾ ಮೀಸಿ ತಿರುವಿರಬೇಕಲ್ಲ? - ಅಂತ ಕೇಳಿದೆ.

ನಮ್ಮ ಎಂಗೇಜ್ಮೆಂಟ್ ಟೈಮ್ ನ್ಯಾಗ ಹುಸ್ಸೂಳೆಮಗ ಧರ್ಮಸ್ಥಳಕ್ಕ ಹೋಗಿ ಮುಡಿ ಕೊಟ್ಟು, ಫುಲ್ ಬೋಳಂ ಭಟ್ಟಾ ಆಗಿ, ತಲಿ  ಮಾರಿ ಎಲ್ಲ ಸ್ವಚ್ಚ ಬೋಳಿಸಿಕೊಂಡು ಕೂತಿದ್ದ ತೂತ್ ನಾಗ್ಯಾ. ಮೀಸಿ ತಿರುವಲಿಕ್ಕೆ ಕೈ ಹಾಕಿದ. ಮೀಸಿ ಸಿಗಲಿಲ್ಲ. ಅದ ರೊಚ್ಚಿನ್ಯಾಗ ಲಗ್ನದ ಟೈಮ್ ತನಕಾ ಮೀಸಿ ಬೆಳೆಸಿ, ಒಳ್ಳೆ ವೀರಪ್ಪನ್ ಮೀಸಿ ಸೈಜಿಗೆ ತಂದು, ಮದ್ವಿ ಮಂಟಪದ ಮುಂದ ನಿಂತು, ನಾನು ರೆಡ್ & ವೈಟ್ ಆಗಿದ್ದಾಗ ಮೀಸಿ ತಿರುವೇ ತಿರುವಿದ ತೂತ್ ನಾಗ್ಯಾ. ನೆನೆಸಿಕೊಂಡರ ಮರ್ಡರ್...ಮರ್ಡರ್ ಮಾಡಿ ಒಗಿಬೇಕು ಅಂತ ಅನ್ನಸ್ತದ, ಅಂತ ಚೀಪ್ಯಾ ರೋಷ ವ್ಯಕ್ತಪಡಿಸಿದ.

ಮತ್ತೇನು? ಮತ್ತೇನು ಬತ್ತಿ ಇಟ್ಟಾನ ನಿಮ್ಮ ಭಾವಾಜಿ ಉರ್ಫ್ ತೂತ್ ನಾಗ್ಯಾ? - ಅಂತ ಕೇಳಿದೆ.

ಹೇಳಲಿಕ್ಕೆ ಕೂತರ ಅದು ಒಂದು ದೊಡ್ಡ ದರ್ದ್ ಭರೀ ಕಹಾನಿ ಮಾರಾಯ. ಮೆಗಾ ಸೀರಿಯಲ್ ಆಗಿ ಬಿಡ್ತದ. ಈ ತೂತ್ ನಾಗ್ಯಾನ ತಂಗಿ TNT ಜೊತಿ ಲಗ್ನಾ ಮಾಡಿಕೊಂಡಾಗಿಂದ ಒಂದೇ ಹಿಂದಿ ಹಾಡು ನೆನಪದ ನೋಡು. ಬಾಕಿ ಎಲ್ಲ ಮರೆತು ಹೋಗ್ಯಾವ, ಅಂತ ಚೀಪ್ಯಾ ದುಃಖ ಪಟ್ಟ.

ಯಾವ ಹಾಡಲೇ? - ಅಂತ ಕೇಳಿದೆ.


ಅಂತ 'ಜಂಜೀರ' ಚಿತ್ರದ ಹಾಡು ಭಾಳ ಸ್ಯಾಡ್ ಫೀಲಿಂಗ ಒಳಗ ಹಾಡಿದ ಚೀಪ್ಯಾ ತನ್ನ ಬಿಗಡಾ ಹುವಾ ನಸೀಬಕ್ಕ ಶಾಪಾ ಹಾಕಿದ.

ಅಲ್ಲಲೇ ಚೀಪ್ಯಾ ಈ ನಾಗ್ಯಾ ಅನ್ನೋ ಮಂದಿಗೆ ಯಾವಾಗಲೂ ತೂತ್ ಅಂತ prefix ಯಾಕಲೇ? ಏನು ಅದರ ಹಿಂದಿನ ಹಕೀಕತ್ತು? - ಅಂತ ಕೇಳಿದೆ.

ಬಾಕಿ ಎಲ್ಲಾ ನಾಗ್ಯಾಗಳ ಬಗ್ಗೆ ಗೊತ್ತಿಲ್ಲ. ಎಷ್ಟೋ ಮಂದಿ ನಾಗರಾಜ, ನಾಗೇಂದ್ರ, ನಾಗೇಶ ಅಂತ ಭಾಳ ಮಂದಿ ದೋಸ್ತರು ಇದ್ದಾರ. ಅವರಿಗೂ ಸಹಿತ ತೂತ್ ಅಂದ್ರೂ, ಅದು ಸುಮ್ಮನ ಚ್ಯಾಸ್ಟಿಗೆ. ಆದ್ರ ಈ ನಮ್ಮ ಹೆಂಡ್ತಿ ಅಣ್ಣ ಏನು ಇದ್ದಾನ ನೋಡು, ಇವಾ ಖರೇ ತೂತ್ ನಾಗ್ಯಾ. ಬತ್ತಿ ಹೀಂಗ ಇಡ್ತಾನ ಅಂದ್ರ, ಇಟ್ಟು ಪುಸಕ್ ಅಂತ ಸಿಕ್ಕ ಸಂದಿ ಗೊಂದಿ ತೂತಿನೊಳಗ ಹೊಕ್ಕೊಂಡು ಬಿಡ್ತಾನ. ಮೊದಲೇ ತೂತು ರೆಡಿ ಮಾಡಿ ಇಟ್ಟುಗೊಂಡು ಇರ್ತಾನೋ ಅಥವಾ ಆಮ್ಯಾಲೆ on the fly ತೂತು ಹೊಡಿತಾನೋ ಗೊತ್ತಿಲ್ಲ. ಆದ್ರ ಬತ್ತಿ ಇಟ್ಟ ಮ್ಯಾಲೆ ಅವನ್ನ ಹಿಡಿಬೇಕು ಅಂದ್ರ ಸಾಧ್ಯ ಇಲ್ಲ ನೋಡಪಾ. ಅದಕ್ಕ ಇವಂಗ ಮಾತ್ರ ತೂತ್ ನಾಗ್ಯಾ ಅನ್ನೋದು ಏಕದಂ ಬರೋಬ್ಬರ, ಅಂತ ಹೇಳಿದ ಚೀಪ್ಯಾ.

ಇರ್ಲಿ ಬಿಡಪಾ ದೋಸ್ತ. ಇನ್ನೊಮ್ಮೆ ಕೂತು ಮಾತಾಡಬೇಕು ನೋಡು. ಈ ನಿಮ್ಮ ಜಾಬಾದ್ ಭಾವಾಜಿ ತೂತ್ ನಾಗ್ಯಾಗ ನಾವೂ ಏನರೆ ಮಾಡಿ ರಿವರ್ಸ್ ಬತ್ತಿ ಇಟ್ಟು ಅವನ ಬ್ಯಾಕ್ ಢಂ ಅನ್ನೋ ಹಾಂಗ ಮಾಡಬೇಕು ನೋಡಲೇ. ತೂತ್ ನಾಗ್ಯಾನೆಂಬ ಹಾವಿನ ಹಲ್ಲು ಕಿತ್ತಿ, ನಿನ್ನ ಕೈಯಾಗ ಪುಂಗಿ ಹಿಡಿಸಿ, ನೀ ಲುಂಗಿ ಎತ್ತಿ, ಪುಂಗಿ ಬಾರಿಸಿದರ, ನಿಮ್ಮ ತೂತ್ ನಾಗ್ಯಾ ನಾಗಿನ್ ಫಿಲಂ ಒಳಗ ಮಾಡಿದ 'ಮನ ಡೋಲೆ, ಮೇರಾ ತನ ಡೋಲೇ' ಅಂತ ಹಾವಿನ ಡಾನ್ಸ್ ಮಾಡಬೇಕು. ಹಾಂಗ ಮಾಡೋಣ ತಗೋ. ನೀನೂ ಫುಲ್ ರಿವೆಂಜ್ ತಗೊಂಡಿ ಅಂತ. ಅತ್ತಿಗೊಂದು ಕಾಲ ಸೊಸಿಗೊಂದು ಕಾಲ ಅಂತ ಇದ್ದಂಗ ತೂತ್ ನಾಗ್ಯಾಗೊಂದು ಕಾಲ ನಮ್ಮ ಚೀಪ್ಯಾಗೊಂದು ಕಾಲ ಅಂತ ಬಂದೇ ಬರ್ತದ. ಚಿಂತಿ ಬ್ಯಾಡ, ಅಂತ ಹೇಳಿದೆ.

ಮುಂದ ಇಡ್ತೇವಿ ನೋಡ್ರೀ ಈ ತೂತ್ ನಾಗ್ಯಾಗ ಬತ್ತಿ. ಆವಾ ಯಾವದೇ ತೂತು ಹೊಕ್ಕಲಿ, ಬೇಕ್ಕಾದ್ದ ಗುದ್ದಿನೊಳಗ ಹೋಗಿ ಅಡಗಿಕೊಳ್ಳಲಿ, ಸ್ಮೋಕ್ ಹೊಗಿ.. ಹೊಗಿ ಹಾಕಿ ಹೊರಗ ತಂದು, ಹಲ್ಲು ಕಿತ್ತು ಬಿಡ್ತೇವಿ. ಅಮೇರಿಕಾದ ಜಾರ್ಜ್ ಬುಶ್ ಸಾಹೇಬರು, we will smoke them out, ಅಂತ ತಾಲಿಬಾನ್ ಮಂದಿ ಮ್ಯಾಲೆ ಭುಸ್ ಭುಸ್ ಅಂದು, ಆಫ್ಘಾನಿಸ್ತಾನದ ಮ್ಯಾಲೆ ಬಾಂಬ್ ಹಾಕಿ ಹಾಕಿ ಪೂರ್ತಿ ಹೊಗಿ ಹಾಕಿದ್ದರು. ಹಾಂಗ ಮಾಡಿ ಬಿಡ್ತೇವಿ ಈ ತೂತ್ ನಾಗ್ಯಾಗೂ. ಸಾಧು ಸ್ವಭಾವದ ಚೀಪ್ಯಾ ಸಿಕ್ಕಾನ ಅಂತ ಹೇಳಿ ಹೀಂಗೆಲ್ಲ ಮಾಡ್ಯಾರ ಅಂದ ಮ್ಯಾಲೆ ನಾವು ಹೊಗಿ ಹಾಕಿ ಹೊರಗ ತೆಗಿಯಲೇ ಬೇಕು ತೂತ್ ನಾಗ್ಯಾನ.

ಏನಂತೀ ಕರೀಂ? - ಅಂತ ಕೇಳಿದರ, ಕರೀಂ ಪ್ಯಾ ಪ್ಯಾ ಕ್ಯಾ ಕ್ಯಾ, ಅಂತ ಹಲುಬಿದ. ಯಾವ ಲೋಕದಾಗ ಯಾವ ಮಾಲಿನ ಗುಂಗಿನ್ಯಾಗ ಇದ್ದನೋ ಸಾಬ್! ದೇವರಿಗೇ ಗೊತ್ತು. ಟೋಟಲ್ ವೇಸ್ಟ್ ಬಾಡಿ!

ಇರಲೀ ಚೀಪ್ಯಾ!! ಹೋಗಿ ಬಾ!! ಎಲ್ಲರಿಗೂ ತಂಬಿಟ್ಟು ಪಳಾರ ಹಂಚುವ ತಂಬಿ ಶ್ರಿಪಾದನಿಗೆ ಶುಭವಾಗಲಿ. ಹಾಂಗs  ಇನ್ನೊಂದು ಡಬ್ಬಿ ನನಗ ಕೊಟ್ಟು ಹೋಗಿಬಿಡು. ನನ್ನ ಇವತ್ತಿನ ರಾತ್ರಿ ಊಟಕ್ಕ ಆಗ್ತದ, ಅಂತ ಹೇಳಿ ಇನ್ನೊಂದು ಡಬ್ಬಿ ತೊಗೊಂಡು ಬಿಟ್ಟೆ. ನಾಚಿಗಿ ಬಿಟ್ಟು ತೊಗೊಂಡೆ. ಬಿಡಲಿಕ್ಕೆ ನಾವು 'ನಾಮಾಮ' ಹಿಡಕೊಂಡಿದ್ದರ ಅಲ್ಲ. ನಾಮಾಮ ಅಂದ್ರ ನಾಚಿಗಿ, ಮಾನ, ಮರ್ಯಾದೆ.

ಚೀಪ್ಯಾ ತಲಿ ಕುಣಿಸಿಗೋತ್ತ ಚೀಲಾನೂ ಕುಣಿಸಿಗೋತ್ತ ಹೋದ.

ನಾವು ತೂತ್ ನಾಗ್ಯಾ ಮಾಡಿದ ಅವಗಢಗಳನ್ನು ಮತ್ತ ಮತ್ತ ನೆನಪು ಮಾಡಿಕೊಂಡು, ಈ ಚೀಪ್ಯಾ ತಪಸ್ಸು ಮಾಡಿ, ವರಾ ಪಡಕೊಂಡು ಬಂದು ಇಂತಾ ಮಂದಿ ಸಂಬಂಧ ಮಾಡ್ಯಾನ ನೋಡಲೇ, ಅಂತ ಜೋಕ್ ಹೊಡದ್ವಿ.

** ಆಗಸ್ಟ್ ೧೧, ೨೦೧೩ ನಾಗರ ಪಂಚಮಿ. ಎಲ್ಲರಿಗೂ ನಾಗಪ್ಪನ ಪೂಜೆಯ ಶುಭಾಶಯಗಳು!

** ಕಾಚಾ ಕಾಣೋ ಕಾಟನ್ ಪಂಚೆ - ಈ ಡೈಲಾಗ್ ಜಗ್ಗೇಶ್ ಅವರದ್ದು. ಚಿತ್ರ - ಎದ್ದೇಳು ಮಂಜುನಾಥ.

No comments: