Friday, July 26, 2013

'ಝೇಂಡಾ ಮಂಗ್ಯಾನ್ ಕೆ' ಎಂಬ ಕಪಿಧ್ವಜ ಉರ್ಫ್ ಅರ್ಜುನ

ಕರೀಂ ಏನೋ ಹಾಡು ಗುಣುಗುಣು ಅನಕೋತ್ತ ಬರ್ಲೀಕತ್ತಿದ್ದ. ಅವಾ ಹಾಡು ಮತ್ತೊಂದು ಗುಣುಗುಣಿಸೋದು ಭಾಳ ಕಮ್ಮಿ.

ಸಲಾಂ ರೀ ಸಾಬ್ರಾ! ಯಾವ ಹಾಡು ಕೊಯ್ಯಾ ಕೊಯ್ಯಾ ಅಂತ ಮೂಗಿನ್ಯಾಗ ಗುಣುಗುಣಿಸಲಿಕತ್ತೀರಿ? 'ಖೋಯಾ ಖೋಯಾ ಚಾಂದ್, ಖುಲಾ ಆಸಮಾ, ತುಮಕೋ ಭೀ ಕೈಸೆ ನೀಂದ ಆಯೇಗಿ', ಅನ್ನೋ ಹಾಡೆನ್ರೀ? ಹಾಂ? ಹಾಂ? - ಅಂತ ಕೇಳಿದೆ.

ಈ 'ಖುಲಾ ಆಸಮಾ' (ಬಿಚ್ಚಿಟ್ಟ ಆಕಾಶ) ಅಂದ ಕೂಡಲೇ ಈ ಗಂಡಸೂರು ಯಾಕ ಪ್ಯಾಂಟಿನ ಜಿಪ್ಪರ್ ಚೆಕ್ ಮಾಡಿಕೊಳ್ಳತಾರೋ ಗೊತ್ತಿಲ್ಲ. ಕರೀಮಾ ಪಠಾಣಿ ಸೂಟ್ ಹಾಕ್ಕೊಂಡಿದ್ದ. ಆದರೂ ರೂಢಿಯಿಂದ ಕೈ ಆಟೋಮ್ಯಾಟಿಕ್ ಆಗಿ ಅಲ್ಲೇ ಕೆಳಗೇ ಹೋತು. ಜಿಪ್ ಸಿಗದೇ ವಾಪಸ್ ಬಂತು. ಕೆಳ ತನಕ ಕೈ ತೊಗೊಂಡು ಹೋದ ಮ್ಯಾಲೆ ಸುಮ್ಮನೆ ಯಾಕ ಹಾಂಗೆ ಮ್ಯಾಲೆ ತರೋದು ಅಂತ ಪೈಜಾಮಾ ಲಾಡಿ ಟೈಟ್ ಮಾಡಿಕೊಂಡು ಬಂತು ಕೈ. ಪೈಜಾಮಾ ಘಟ್ಟೆ ಕಟ್ಟಿಗೊಂಡು ಕಚ್ಚೆಭದ್ರನಾದ ನಮ್ಮ ಕರೀಂ. ಇನ್ನು ಎಲ್ಲರೆ ಕಚ್ಚೆಭದ್ರ ಅಂದ್ರ, ವೀರಭದ್ರ ಇದ್ದ ಹಾಗೆ ಕಚ್ಚೆಭದ್ರ ಕ್ಯಾ? ಅಂತ ಕ್ಯಾ ಕ್ಯಾ ಅಂದಾನು ಅಂತ ಏನೂ ಹೇಳದೇ ಸುಮ್ಮನೆ ತಲಿ ಕುಣಿಸಿದೆ.

ಅದಲ್ಲಾ ಸಾಬ್! ಇವತ್ತು ಭಾಳ ದಿವಸ ಆದ ಮ್ಯಾಲೆ ಒಂದು ಒಳ್ಳೆ ಸುಂದರ ಕನ್ನಡಿ ಗಾನಾ ಕೇಳಿದೆ. ಅದನ್ನೇ ಗುನಗುನಾ ರಹಾ ಥಾ ಮೈ, ಅಂದ ಕರೀಂ.

ವಾಹ್!!! ವಾಹ್!!! ಕನ್ನಡ ಹಾಡಾ?!!! ಕನ್ನಡದ ಕುಲ ಪುತ್ರ ಕರೀಂ! ಯಾವ ಹಾಡೋ? ಇನ್ನೊಮ್ಮೆ ಹೇಳೋ. ನಾವೂ ಕೇಳಿ ಸಂತೋಷ ಪಡೋಣ, ಅಂತ ಅಂದೆ.

ಅದೇ ಸಾಬ್! ನೀರಿನ್ಯಾಗೆ ಅಲೆಯ ಉಂಗುರ. ಎಲ್ಲೆಲ್ಲೋ ಗುಂಗುರು ಕೂದಲ. ಕೊಟ್ಟನಲ್ಲ ಇಟ್ಟನಲ್ಲ....... ಆ ಹಾಡು ಸಾಬ್!!! ಬ್ಲಾಕ್ ಅಂಡ್ ವೈಟ್ ಆದರೂ ಎಷ್ಟು ಮಸ್ತ ಅದೇ ಆ ಹಾಡು, ಅಂತ ತನ್ನ ಸ್ಟೈಲ್ ಒಳಗಾ  ಹೇಳಿದ.

ಸಾಬ್ರಾ!!!! ಅದು, ನೀರಿನಲ್ಲಿ ಅಲೆಯ ಉಂಗುರಾ!!!! ಅನ್ನೋ ಹಾಡ್ರೀಪಾ.....ಅದರಾಗ ಗುಂಗುರು ಕೂದಲಾ, ಕೊಡೋದು ಇಡೋದು ಎಲ್ಲಾ ಸೇರಿಸಿ ರಾಡಿ ಎಬ್ಬಿಸಬ್ಯಾಡ್ರೀ. ಅಷ್ಟು ಚಂದ ಹಾಡಿನ ಸಾಯ ಬಡಿ ಬ್ಯಾಡ್ರೀ!!! - ಅಂತ ಅಂದೆ.



ನಮಗೇನು ಗೊತ್ತು ಸಾಬ್? ಟ್ಯೂನ್ ಮಸ್ತ ಇತ್ತು. ಅದಕ್ಕೇ ನಮಗೆ ಬಂದ ಸಾಹಿತ್ಯ ನಾವು ಹಾಕಿಕೊಂಡು ಹಾಡ್ತಾ ಇದ್ದರೆ, ಹಾಡು ಕೇಳೋದು ಬಿಟ್ಟು ತಪ್ಪು ತಿದ್ದತೀರಿ ಕ್ಯಾ? ಹಾಂ? ಹಾಂ? ಆಮ್ ಖಾವೋ ಜೀ!! ಪೇಡ ಮತ್ ಗಿನೋ, ಅಂತ ನನಗs ಉಪದೇಶ ಸಹಿತ ಮಾಡಿಬಿಟ್ಟ. ಮಾವಿನಹಣ್ಣು ತಿನ್ನರೀ ಗಿಡಾ ಎಣಿಸಬ್ಯಾಡ್ರೀ ಅಂತ ನನಗೇ ಉಪದೇಶ ಬ್ಯಾರೆ.

ಏನ್ ಆಮ್ ರೀ? ಎಲ್ಲಿ ಮಾವಿನ ಹಣ್ಣು ಹಚ್ಚಿಯೋ ಮಾರಾಯಾ?! ಅವನೌನ ಮಾವಿನಹಣ್ಣಿನ  ಗೊರಟ ಸಹಿತ ಸಿಕ್ಕಿಲ್ಲ.  ಅಷ್ಟು ತುಟ್ಟಿ. ಮಂಗ್ಯಾನ್ ಕೆ!!! ಹಾಳಾಗಿ ಹೋಗು ಮಂಗ್ಯಾನ್ ಕೆ!!! - ಅಂತ ಸಣ್ಣಾಗಿ ಬೈದೆ.

ನೀವು ಹಾಗಿದ್ರೆ 'ಝೇಂಡಾ ಮಂಗ್ಯಾನ್ ಕೆ'!!!! - ಅಂದುಬಿಟ್ಟ ಕರೀಂ. ಸೂಡ್ಲೀ !!!

ಏನ್ರೀ???? ಏನು ಹಾಂಗಂದ್ರಾ? ಯಾಕ, ಮನಿಯೊಳಗ ಬಳಗದವರು ಬಂದು ಝೇಂಡಾ ಹೊಡೆದು ಬಿಟ್ಟಾರೇನು? ಅದಕ್ಕs ಅವರಿಗೆ 'ಝೇಂಡಾ ಮಂಗ್ಯಾನ್ ಕೆ' ಅಂತ ಬೈಲಿಕತ್ತೀರಿ ಏನು? ಬಂಧು ಬಳಗದವರು ಬಂದು ನಾಕು ದಿನ ಝೇಂಡಾ ಹೊಡಿಲಿಲ್ಲ ಅಂದ್ರ ಹ್ಯಾಂಗ್ರೀ? ಯಾರ ಕಡೆ ಬಳಗಾ? ನಿಮ್ಮ ಕಡೆಯವರೋ ಅಥವಾ ನಿಮ್ಮ ಬೇಗಂ ಕಡೆಯವರೋ? ಹಾಂ? ಹಾಂ? - ಅಂತ ಕೇಳಿದೆ.

ಅಯ್ಯೋ.....ಮನಿಗೆ ಯಾರೂ ಬಂದು ಝೇಂಡಾ ಮತ್ತೊಂದು ಹೊಡೆದಿಲ್ಲ ಸಾಬ್. ನೀವು ನಮಗೆ ಮಂಗ್ಯಾನ್ ಕೆ ಅಂದ್ರೀ ಅಲ್ಲಾ, ಅದಕ್ಕೇ ನಿಮಗೆ ತಿರುಗಿ 'ಝೇಂಡಾ ಮಂಗ್ಯಾನ್ ಕೆ' ಅಂತ ಬಾರಿಸಿದೆ. ಅದೂ ಪ್ರೀತಿಯಿಂದ ಹೇಳಿದ್ದು ಮತ್ತೆ. ತಿಳೀತು ಕ್ಯಾ? - ಅಂತ ಹೇಳಿ ಕರೀಂ ಮತ್ತೂ confuse ಮಾಡಿ ಬಿಟ್ಟ.

ಏನ್ರೀಪಾ ಮತ್ತ? ಇದು ಯಾವ ರೀತಿ ಪ್ರೀತಿಯ ಬೈಗುಳ ಮಾರಾಯಾ? ಝೇಂಡಾ ಮಂಗ್ಯಾನ್ ಕೆ!!! ಎಲ್ಲಿಂದ ಹುಡುಕಿರೀ ಇದನ್ನ? - ಅಂತ ಕೇಳಿದೆ.

ಸಾಬ್!!! ಖರೆ ಹೇಳಬೇಕು ಅಂದ್ರೆ ಝೇಂಡಾ ಮಂಗ್ಯಾನ್ ಕೆ ಅಂದ್ರೆ ನಿಮ್ಮದೂಕಿ ಅರ್ಜುನ ಇಲ್ಲ ಕ್ಯಾ, ಅವರದ್ದು ಹೆಸರು ಸಾಬ್!!!! ನಿಮಗೆ ಗೊತ್ತು ಕ್ಯಾ? - ಅಂತ ಏನೇನೋ ಹೇಳಿಬಿಟ್ಟ ಕರೀಂ.

ಯಾವ ಅರ್ಜುನರೀ? ಸಿನಿಮಾ ನಟ ಅರ್ಜುನ ರಾಮಪಾಲ ಏನು? ಮೊನ್ನೆ ಅವಂದು D-Day ಮೂವಿ ನೋಡಿದಾಗ ಅನ್ನಿಸಿತ್ತು, ಇದು ಎಂತಾ ತಗಡು ಮೂವಿ, ಅಂತ. ಖರೇನಾ ಮಂಗ್ಯಾನ್ ಕೆ ಮೂವಿ. ಆದ್ರಾ ಆವಾ ಹೀರೋ ಅರ್ಜುನ್ ರಾಮಪಾಲಗ ಯಾಕ ಬೈತೀರಿ? ಹೋಗಿ ಡೈರೆಕ್ಟರ್, ಸ್ಕ್ರಿಪ್ಟ್ ರೈಟರ್ ಗೆ ಬೈರೀ. ಪಾಪ ಅರ್ಜುನ ರಾಮಪಾಲಗ 'ಝೇಂಡಾ ಮಂಗ್ಯಾನ್ ಕೆ' ಅದು ಇದು ಅಂದ್ರ ಏನ್ರೀ ಮಾತು? - ಅಂತ ಕೇಳಿದೆ.

ಅಯ್ಯೋ!!!! ಮೂವಿ ಆಕ್ಟರ್ ಅರ್ಜುನ್ ಅಲ್ಲಾ ಸಾಬ್! ಅರ್ಜುನ ರಾಮಪಾಲನೂ ಅಲ್ಲಾ. ಅರ್ಜುನ ಸರ್ಜಾನೂ ಅಲ್ಲ. ನಿಮ್ಮ ಮಹಾಭಾರತದ ಅರ್ಜುನನ ಹೆಸರು 'ಝೇಂಡಾ ಮಂಗ್ಯಾನ್ ಕೆ' ಅಂತ. ನಿಮಗೆ ಗೊತ್ತು ಕ್ಯಾ? ಮೊದಲು ಕೇಳಿರೀ ಕ್ಯಾ? - ಅಂತ ವಿಚಿತ್ರ ಪ್ರಶ್ನೆ ಒಗದು ಕೂತ.

ಸಾಬ್ರಾ!!!! ಮಹಾಭಾರತದ ಅರ್ಜುನಂಗ ಭಾಳ ಹೆಸರು ಅವ. ಪಾರ್ಥ, ಧನಂಜಯ, ಕೌಂತೇಯ, ಗಾಂಡೀವಿ, ಶ್ರೀಂಜಯ ಮತ್ತೊಂದು ಮಗದೊಂದು. ಆದ್ರ 'ಝೇಂಡಾ ಮಂಗ್ಯಾನ್ ಕೆ' ಅನ್ನೋ ಹೆಸರು ಮಾತ್ರ ಕೇಳಿಲ್ಲ ಬಿಡ್ರೀ. ಮತ್ತ ಅವೆಲ್ಲಾ ಸಂಸ್ಕೃತ ಹೆಸರು. ನಿಮ್ಮ 'ಝೇಂಡಾ ಮಂಗ್ಯಾನ್ ಕೆ' ಯಾವ ಭಾಷಾ? ಹೀಂಗ ಇದ್ದಾಗ ಅರ್ಜುನಂಗ 'ಝೇಂಡಾ ಮಂಗ್ಯಾನ್ ಕೆ' ಅಂದ್ರ ಹ್ಯಾಂಗ್ರೀ? ಎಲ್ಲಿಂದ ಕೇಳಿಕೊಂಡು ಬಂದೀರಿ? ನಿಮಗ ಇದನ್ನು ಹೇಳಿದ ಮಹಾನುಭಾವ ಯಾರು? - ಅಂತ ಕೇಳಿದೆ.

ಅಯ್ಯೋ.....ಹೊಲಸ್ ಹೊಲಸ್ ಹೆಸರು ಎಲ್ಲಾ ಇಟ್ಟು ಬಿಟ್ಟೀರಿ ಕ್ಯಾ? ಪಾಪ ಅರ್ಜುನ್ ಸಾಹೇಬರಿಗೆ ಅದೇನೋ ಅಂದ್ರೀ. ಸಂಸ್ಕೃತ ಒಳಗೂ ಏನೇನೋ ಅಸಹ್ಯ ಅಸಹ್ಯ ಹೆಸರು. ಛೀ!!!ಛೀ!!! -ಅಂತ ಅಸಹ್ಯಪಟ್ಟುಗೊಂಡ ಕರೀಂ.

ಯಾವದರೀ ಹೊಲಸು ಹೆಸರು? ಪಾರ್ಥ, ಧನಂಜಯ, ಕೌಂತೇಯ, ಗಾಂಡೀವಿ, ಶ್ರೀಂಜಯ. ಎಷ್ಟು ಮಸ್ತ ಮಸ್ತ ಹೆಸರು ಹೇಳಿದರ ಹೊಲಸ್ ಹೆಸರು ಅಂತೀರಲ್ಲಾ!!!......ಏ.....ಹಾಪ್ ಮಂಗ್ಯಾನ್ ಕೆ.....ಅಂತ ಮೈಲ್ಡ್ ಆಗಿ ಝಾಡಿಸಿದೆ.

ಅದೇನೋ ಗಾಂಡುವೀ ಅಂದ್ರೀ? ಗಂಡುಗಳಲ್ಲೇ ಅಂಥಾ ಸಿಡಿಗುಂಡಿನಂತಹ ಅರ್ಜುನ್ ಅವರಿಗೆ ಅದೂ ಮಹಾಭಾರತದ ಮಹಾ ರಸಿಕ ಅರ್ಜುನ್ ಅವರಿಗೆ ಗಾಂಡು ಅನ್ನೋದು ಕ್ಯಾ?  ಛೀ!!!ಛೀ!!! - ಅಂತ ಮತ್ತ ಅಸಹ್ಯಪಟ್ಟುಗೊಂಡ ಕರೀಂ.

ಸಾಬ್ರಾ!!!! ಏನೇನರ ಅಂದು ಅನಾಹುತ ಮಾಡ ಬ್ಯಾಡ್ರೀ. ಗಾಂಡೀವ ಅನ್ನೋ ಬಿಲ್ಲು ಹಿಡಕೊಂಡಿದ್ದ ಅನ್ನೋದಕ್ಕ ಅರ್ಜುನಂಗ ಗಾಂಡೀವಿ ಅಂತಾರೀ. ಅದರಾಗ ನಿಮ್ಮ ಭಾಷಾದಾಗಿನ ಗಂಡು, ಗಾಂಡು ಮತ್ತೊಂದು ತಂದು ಸೇರಿಸಿ ರಾಡಿ ಎಬ್ಬಿಸಬ್ಯಾಡ್ರೀ. ಪ್ಲೀಸ್. ಕೇಳಿದವರು ಹಿಂದ ಮುಂದ ಕೂಡೆ ಹಿಡದು ಒದ್ದು ಬಿಟ್ಟಾರು! ಅಂತ ಕಳಕಳಿಯಿಂದ ಕೇಳಿಕೊಂಡೆ.

ಅರ್ಜುನಂಗ 'ಝೇಂಡಾ ಮಂಗ್ಯಾನ್ ಕೆ' ಅಂದ್ರ ಸುಮ್ಮನೆ ಇದ್ದಾರು. ಯಾರಿಗೂ ತಿಳಿಳಿಕ್ಕಿಲ್ಲ. ಹೋಗಿ ಹೋಗಿ, ಕ್ಯಾ ಬಾ?!!! ಮಾಲೂಮ್ ಕ್ಯಾ!!!! ಅರ್ಜುನ್ ಸಾಬ್ ಕೊ ವೋ ಲೋಗ್ ಗಾಂಡು ಬುಲಾತೆ!!! ಅಂತ ಎಲ್ಲರೆ ಟಂ ಟಂ ಹೊಡೆದು ಬಿಟ್ಟ ಅಂದ್ರ ಮುಗೀತು ಕಥಿ. ಯಾಕರೆ ಗಾಂಡೀವಿ ಅನ್ನೋದನ್ನ ಇವನ ಮುಂದ ಹೇಳಿದೆನೋ! ನನಗೂ ತಲಿ ಇಲ್ಲ!

ಸಾಬ್ರಾ!!! ಈಗ ಹೇಳ್ರೀ ಅರ್ಜುನಂಗ 'ಝೇಂಡಾ ಮಂಗ್ಯಾನ್ ಕೆ' ಅಂದಿದ್ದು ಎಲ್ಲೇ ಅಂತ? ಅದಕ್ಕ ಪ್ರೂಫ್ ಏನು? ಸುಮ್ಮ ಸುಮ್ಮನ ಹೆಸರು ಇಟ್ಟಂಗ ಅಲ್ಲ. ಪುರಾಣ ಪುರುಷರು ಅವರೆಲ್ಲ. ಅವರಿಗೆ ಅದು ಇದು ಹೆಸರು ಇಡಬೇಕು ಅಂದ್ರೆ ಅದಕ್ಕ ವೇದ ಪುರಾಣ ಇತ್ಯಾದಿಗಳ ಫುಲ್ ಸಪೋರ್ಟ್ ಬೇಕಾಗ್ತದ. ಎಲ್ಲೆ ಅದ ಸಪೋರ್ಟ್? ಫುಲ್ ಡೀಟೇಲ್ಸ್ ಕೊಡ್ರೀ, ಅಂತ ಕೇಳಿದೆ.

ಅಯ್ಯೋ!!!! ನಿಮ್ಮದೂಕಿ  ಭಗವದ್ಗೀತಾ ಒಳಗೇ ಅರ್ಜುನ್ ಸಾಹೇಬರಿಗೆ 'ಝೇಂಡಾ ಮಂಗ್ಯಾನ್ ಕೆ' ಅಂತ ಹೆಸರು ಅದೆ. ಗೊತ್ತಿಲ್ಲ ಕ್ಯಾ? ಮಾತು ಎತ್ತಿದರೆ ಆ ಪುಸ್ತಕ ಓದೇನಿ, ಈ ಪುಸ್ತಕ ಓದೇನಿ ಅಂತ ಛೋಡ್ತೀರಿ. ಈಗ ನೋಡಿದ್ರೆ ಭಗವದ್ಗೀತಾ ಒಳಗೆ ಇದ್ದ  'ಝೇಂಡಾ ಮಂಗ್ಯಾನ್ ಕೆ' ಉರ್ಫ್ ಅರ್ಜುನ್ ಗೊತ್ತಿಲ್ಲ ಅಂತೀರಿ. ಏನು ಹಾಪ್ ಇದ್ದೀರಿ? ಹಾಂ? ಹಾಂ? - ಅಂತ ನನಗs ರಿವರ್ಸ್ ಬಾರಿಸಿದ.

ಸ್ವಾಮೀ ಚಿನ್ಮಯಾನಂದರು ಬೈದಂಗ ಆತು. ಒಮ್ಮೆ ಯಾರೋ ಒಬ್ಬವ ಬಂದು ಚಿನ್ಮಯಾನಂದರಿಗೆ ಹೇಳಿದಾ ಅಂತ, swamijee, I have gone through Bhagavadgeeta many many times, ಅಂತ ಹೇಳಿದ. ಹೇಳೋ ಟೋನ್ ಒಳಗ ಸ್ವಲ್ಪ ಗರ್ವ ತುಂಬಿತ್ತಂತ. ಅದಕ್ಕs ಸ್ವಾಮೀ ಚಿನ್ಮಯಾನಂದ ತಿರುಗಿ ಕೇಳಿದರಂತ, That's very good. But, how many times Bhagavadgeeta has gone through you? ಹಾಕ್ಕ!!! ನೀ ಎಷ್ಟ ಸರೆ ಬೇಕಾದರೂ ಭಗವದ್ಗೀತಾ ಓದಿರಬಹುದು. ಆದ್ರಾ ಅರ್ಥ ತಿಳದದ ಏನು? ಅಂತ ಅರ್ಥ. ಅವಾ ಮಂಗ್ಯಾ ಆಗಿ ಹೋಗಿರಬೇಕು. ಸ್ವಾಮಿ ಚಿನ್ಮಯಾನಂದರ ಶಿಷ್ಯ ಸ್ವಾಮಿ ತೇಜೋಮಯಾನಂದ ಹೋದ ಸಲ ವೇದಾಂತ ೨೦೧೨ ಕ್ಯಾಂಪ್ ಒಳಗ ಹೇಳಿದ ಜೋಕ್ ನೆನಪಾತು.

ಕರೀಮನ ಮಾತು ಕೇಳಿ ನನಗೂ ಹಾಂಗ ಅನ್ನಿಸ್ತು. ಭಗವದ್ಗೀತಾ ಓದಿದ್ದೆಲ್ಲ ವೇಸ್ಟ್ ಅಂತ.

ಎಲ್ಲೆ ಭಗವದ್ಗೀತಾ ಒಳಗೆ ಅರ್ಜುನಂಗ 'ಝೇಂಡಾ ಮಂಗ್ಯಾನ್ ಕೆ' ಅಂದಾರ? ಅಂತ ತಲಿ ಕೆಡಿಸಿಕೊಂಡೆ. 'ಝೇಂಡಾ ಮಂಗ್ಯಾನ್ ಕೆ' ಅಂತ ಡೈರೆಕ್ಟ್ ಅಂದಿರಲಿಕ್ಕೆ ಇಲ್ಲ. ಇವಾ ಕರೀಂ ಹಾಪಾ ಏನೋ ಕೇಳಿಕೊಂಡು ಬಂದು, ತಂದೇ ಆದ ರೀತಿಯೊಳಗ ಅದನ್ನ ವಿಶ್ಲೇಶಿಸಿ 'ಝೇಂಡಾ ಮಂಗ್ಯಾನ್ ಕೆ' ಮತ್ತೊಂದು ಅಂದಿರ್ತಾನ. ಆದರೂ ಏನು ಇರಬಹುದು? ದೊಡ್ಡ ರಹಸ್ಯ ಆಗಿ ಹೋತಲ್ಲ?!

ಸಾಬ್ರಾ!!! ಭಗವದ್ಗೀತಾ ಒಳಗ ಯಾವ ಶ್ಲೋಕದಾಗ ಅರ್ಜುನಂಗ 'ಝೇಂಡಾ ಮಂಗ್ಯಾನ್ ಕೆ' ಅಂದಾರ? - ಅಂತ ಕೇಳಿದೆ.

ಅಯ್ಯೋ ಸಾಬ್!!!! ಗೀತಾ ಒಳಗೆ ಸುಮಾರು ಏಳನೂರೂ ಚಿಲ್ಲರೆ ಶ್ಲೋಕ ಇವೆ. ಅದರಲ್ಲಿ ಎಲ್ಲಿ ಅಂತ ನಮಗೆ ಏನು ಗೊತ್ತು? - ಅಂತ ಅಂದು ಸುಮ್ಮನಾಗಿಬಿಟ್ಟ ಕರೀಂ.

ಶ್ಲೋಕಾ  ನೆನಪಿಲ್ಲ ಅಂದ್ರ ಸ್ವಲ್ಪ context ಹೇಳ್ರೀಪಾ, ಅಂತ ಇನ್ನೊಂದು ದಾರಿ ಟ್ರೈ ಮಾಡಿದೆ.

ಕ್ಯಾ ಸಾಬ್????!!!! ಅರ್ಜುನ್ ಸಾಬ್ ದು ಗಾಡಿ ಇರಲಿಲ್ಲ ಕ್ಯಾ? ಮತ್ಲಬ್ ರಥಾ. ಘೋಡೆವಾಲಾ ಗಾಡಿ. ಮುಂದೆ ಡ್ರೈವರ್ ಆಗಿ ಕೃಷ್ಣಾಜಿ ಕೂತಿದ್ದರು. ಆ ರಥಾದು ಮೇಲೆ ಒಂದು ಝೇಂಡಾ ಮತ್ಲಬ್ flag ಮತ್ಲಬ್ ಧ್ವಜಾ ಇತ್ತು ನೋಡಿ. ಆ ಝೇಂಡಾ ಮೇಲೆ ನಿಮ್ಮದೂಕಿ ದೇವರು ಹನುಮಾನ್ ಜೀ ದು ಚಿತ್ರ ಇರಲಿಲ್ಲ ಕ್ಯಾ? ಅದಕ್ಕೇ ಅರ್ಜುನ್ ಸಾಹೇಬರಿಗೆ 'ಝೇಂಡಾ ಮಂಗ್ಯಾನ್ ಕೆ' ಅನ್ನೋದು. ಸಂಸ್ಕೃತ ಒಳಗೆ ಏನೋ ಬೇರೇನೆ ಇದೆ. ಆದ್ರೆ ನಮ್ಮದು ಭಾಷಾಗೆ ತರ್ಜುಮಾ  ಮಾಡಿದ್ರೆ  'ಝೇಂಡಾ ಮಂಗ್ಯಾನ್ ಕೆ', ಅಂತ  ಹೇಳಿದ ಕರೀಂ.

ಈಗ tube-light ಹತ್ತಿತು. ಹೌದು!!!! ಕೃಷ್ಣ ಸಾರಥ್ಯದ ಅರ್ಜುನನ ರಥದ ಮ್ಯಾಲೆ ಒಂದು ಧ್ವಜ ಇತ್ತು. ಅದರ ಮ್ಯಾಲೆ ಹನುಮಂತನ ಚಿತ್ರ ಇತ್ತು. ಆದ್ರ ಇವಾ ಕರೀಂ ಯಾಕ 'ಝೇಂಡಾ ಮಂಗ್ಯಾನ್ ಕೆ' ಅನ್ನಲಿಕತ್ತಾನ ಅಂತ ಮಾತ್ರ ತಿಳಿಲಿಲ್ಲ.

ನಮ್ಮ ಜುಬ್ಬಾ ಒಳಗ ಇದ್ದ ಸಣ್ಣ ಪಾಕೆಟ್ ಎಡಿಷನ್ ಭಗವದ್ಗೀತಾ ತೆಗೆದು ಲಗು ಲಗು ಪುಟ ತಿರುವಿದೆ. ಎಲ್ಲೆ ಮಂಗ್ಯಾಕ್ಕ ಅಲ್ಲಲ್ಲ ಹನುಮಂತಂಗ reference ಸಿಗ್ತದ ಅಂತ ನೋಡಲಿಕ್ಕೆ. ನಮ್ಮ ನಸೀಬ್ ಚೊಲೋ ಇತ್ತು. ಬರೇ ಒಂದು ಎಂಟತ್ತು ಪುಟ ತಿರುವುದೊಳಗ ಸಿಕ್ಕಿಬಿಡ್ತು. ಖುಷಿಂದ ಕುಪ್ಪಳಿಸಿಬಿಟ್ಟೆ. ಸೇಮ್ ಮಂಗ್ಯಾನ ಗತೆ ಜಿಗದೆ.

ಕ್ಯಾ ಸಾಬ್!!!??? ಮಂಗ್ಯಾನ್ ಕೆ ಗತೆ ಜಿಗೀತಾ ಇದ್ದೀರಿ? ಕ್ಯಾ ಹೋಗಯಾ? ಗೀತಾ ಮೇ 'ಝೇಂಡಾ ಮಂಗ್ಯಾನ್ ಕೆ' ಮಿಲ್ ಗಯಾ ಕ್ಯಾ? ನಾವೇನು ಹೇಳಿದ್ದು ನಿಮಗೆ? ಹಾಂ? ಹಾಂ? - ಅಂತ ಕಾಲರ್ ಹಾರಿಸಿಕೊಂಡ ಕರೀಂ. ಸೊಕ್ಕು ಮಂಗ್ಯಾನ್ ಕೆ ಗೆ.

ಸಿಕ್ತಪಾ!!! ಸಿಕ್ಕಿತು!!!! ಅಧ್ಯಾಯ ಒಂದು, ಶ್ಲೋಕ ಇಪ್ಪತ್ತು ನೋಡಪಾ. ಅಲ್ಲೆ ಏನದ ಅಂದರ, ಅಂತ ಶ್ಲೋಕಾ ತೋರ್ಸಿದೆ.

ಅಥ ವ್ಯವಸ್ಥಿತಾನ್ ದೃಷ್ಟ್ವಾ ಧಾರ್ತರಾಷ್ಟ್ರಾನ್ ಕಪಿಧ್ವಜಃ 
ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ  ೨೦

ರಥದ ಮೇಲಿನ ಧ್ವಜದಲ್ಲಿ ಹನುಮಂತನಿದ್ದಾನೆ
ಹೋಗ್ಗೋ  ಸಾಬ್ರಾ!!!!! ಈ ಶ್ಲೋಕದ ಒಳಗ ಅರ್ಜುನಂಗ ಕಪಿಧ್ವಜ ಅಂತ ಸಂಭೋಧಿಸಿದರೆ  ಅದನ್ನ ನಿಮ್ಮ ಭಾಷಾ ಒಳಗ 'ಝೇಂಡಾ ಮಂಗ್ಯಾನ್ ಕೆ' ಅಂತೀರಲ್ಲರಿ??! ಏನು ಹೇಳೋಣ ನಿಮ್ಮ ಬುದ್ಧಿಗೆ??!! ಒಂದು ರೀತಿಯೊಳಗ ಸರಿ ಅದ ಬಿಡ್ರೀ ನಿಮ್ಮ translation. ಕಪಿ ಅಂದ್ರ ಮಂಗ್ಯಾ. ಧ್ವಜ ಅಂದ್ರ ಝೇಂಡಾ. ಕಪಿಧ್ವಜ ಅಂದ್ರ ಮಂಗ್ಯಾನ್ ಕೆ ಝೇಂಡಾ. ಹಿಂದಿ ಉರ್ದು ಒಳಗ ಪದ ಹಿಂದ ಮುಂದ ಮಾಡಿದ್ರ ಓಕೆ ನೋಡ್ರೀ. ಅರ್ಥದ ಮ್ಯಾಲೆ ಏನೂ ಪರಿಣಾಮ ಇಲ್ಲ. ಅದಕ್ಕs ನೀವು 'ಝೇಂಡಾ ಮಂಗ್ಯಾನ್ ಕೆ' ಅನಕೋತ್ತ ಕೂತೀರಿ. ವಾಹ್!!! ವಾಹ್!!!! - ಅಂತ ಸಾಬರನ್ನ ಅವರ ಗೀತಾ ಜ್ಞಾನವನ್ನ appreciate ಮಾಡಿದೆ. 

ನಮ್ಮ ಮಂದಿನೇ ಎಲ್ಲಾ ಬಿಟ್ಟು ಕೂತಂತಹ ಟೈಮ್ ನಲ್ಲಿ ನಮ್ಮ ಸಾಬ್ರು, ಕ್ಲೋಸ್ ಫ್ರೆಂಡ್ ಕರೀಂ ಸಾಬರು, ನಮ್ಮ ಭಗವದ್ಗೀತಾ ಅವರಿಗೆ ತಿಳಿದ ಮಟ್ಟಿಗೆ ಓದಿ ಅರ್ಥ ಮಾಡಿಕೊಳ್ಳೋದು ಅಂದ್ರ ಕಮ್ಮಿ ಅಲ್ಲ ಬಿಡ್ರೀ. ರಿಯಲಿ ಹಾಟ್ಸ್ ಆಫ್!!!! ನಮ್ಮ ತಲಿ ಮ್ಯಾಲೆ ಅವತ್ತು ಟೊಪ್ಪಿಗಿ ಇರಲಿಲ್ಲ. ಇದ್ದಿದ್ದರ ಟೊಪ್ಪಿಗಿ ಟಿಪ್ ಮಾಡಿ ಹಾಟ್ಸ್ ಆಫ್ ಮಾಡೇ ಬಿಡ್ತಿದ್ದೆ.

ಸಾಬ್!!!! ಅಂತ ಕರೀಂ ತಲಿ ಕೆರಕೊಂಡ.

ಏನೋ?? ಅಂತ ಕೇಳಿದೆ.

ಅದೇನೋ ಅರ್ಜುನಾ ಗೆ ಸಂಭೋಗಿಸಿದರೆ ಅಂದ್ರಿ? ಉಸಕಾ ಮತ್ಲಬ್ ಕ್ಯಾ? - ಅಂತ ಕೇಳಿಬಿಟ್ಟ. ಅನಾಹುತ!!!!!!!

ಶಿವ ಶಿವಾ!!!!

ಸಾಬ್ರಾ!!!!! ಅಂತ ಕಿವಿ ಮುಚ್ಚಿಗೊಂಡೆ.

ಏನಾಯ್ತು ಸಾಬ್???? ನೀವೇ ಹೇಳಿದ್ರಿ. ಅದೂ ಈಗ ಮಾತ್ರ. ಅರ್ಜುನಾಗೆ  ಗೀತಾದಲ್ಲಿ ಅದೇನೋ ಕಪಿದು ಝೇಂಡಾ ಅಂತ ಸಂಭೋಗಿಸಿದರು ಅಂತ. ಏನು ಅಂತ ಕೇಳಿದರೆ ಚಿಟಿ ಚಿಟಿ ಚೀರ್ತಿರಿ. ಯಾಕೆ? ಕ್ಯೂ ಬಾ? ಗಲತಿ ಹುವಾ ಕ್ಯಾ? - ಅಂತ ಕೇಳಿದ ಕರೀಂ. innocent ಆಗಿ ಕೇಳಿದ.

ಸಾಬ್ರಾ!!!! ಅದು ಸಂಭೋಧಿಸಿದರು ಅಂತ. ಅಂದ್ರ ಹೇಳಿದರು ಅಂತ. ಯಾರಿಗಾರ ಹೋಗಿ ಗೀತಾ ಒಳಗ ಅರ್ಜುನನ್ನ ಕಪಿಧ್ವಜ ಅಂತ ಸಂಭೋಗಿಸಿದ್ದಾರೆ ಅಂತ ಹೇಳಿ ಗೀಳೀರಿ ಮತ್ತ!!! ಮಂದಿ ಮೊದಲು ಅವರ ಅಂಡು ತಟ್ಟಿಕೊಂಡು ನಗತಾರ. ಆ ಮ್ಯಾಲೆ ನಿಮ್ಮ ಅಂಡಿನ ನಾಮಾಷೇಶ ಮಾಡಿ ಬಿಡ್ತಾರ. ಹುಷಾರ್!!!! - ಅಂತ ವಾರ್ನಿಂಗ್ ಕೊಟ್ಟೆ. ಭಾಳ ನಗು ಮಾತ್ರ ಬಂತು.

ಹಾಗೆ ಕ್ಯಾ? ಹಾಗಿದ್ದಾಗ ಸುಮ್ಮನೆ ಸಿಂಪಲ್ ಶಬ್ದ ಹೇಳೋದು ಬಿಟ್ಟು ಸಂಭೋಧಿಸು, ಸಂಭೋಗಿಸು ಅಂತ ಸಂಬಂಧ ಇಲ್ಲದ ಶಬ್ದ ಹೇಳಿ ನಮ್ಮನ್ನು ಮಂಗ್ಯಾ ಮಾಡೋದು ಯಾಕೆ? - ಅಂತ ಕೇಳಿದ ಕರೀಂ. ಪಾಯಿಂಟ್ ಇತ್ತು ಆವಾ ಹೇಳಿದ್ರೋಳಗ. simple is always better.

ಸಾಬ್!!!! ಅದೆಲ್ಲ ಇರಲಿ.....ಅರ್ಜುನ್ ಸಾಬ್ ಅವರಿಗೆ 'ಝೇಂಡಾ ಮಂಗ್ಯಾನ್ ಕೆ ' ಅಂತ ಹೆಸರು ಹ್ಯಾಂಗೆ ಬಂತು? - ಅಂತ ಕೇಳಿದ ಕರೀಂ.

ಅದು ಒಂದು ದೊಡ್ಡ ಕಥಿ ಮಾರಾಯಾ. ಶಾರ್ಟ್ ಮಾಡಿ ಹೇಳಿ ಬಿಡ್ತೇನಿ.  ಓಕೆ? 

ಒಮ್ಮೆ ಕೃಷ್ಣ ಅರ್ಜುನ ಕೂಡಿ ಸೌತ್ ಇಂಡಿಯಾ ಕಡೆ ಬಂದಿದ್ದರು ಅಂತ ಆತು. ಅಲ್ಲೇ ಮದ್ರಾಸ್ ಕೆಳಗ ಇಳಿದು ಕನ್ಯಾಕುಮಾರಿ ಬೀಚ್ ಮಸ್ತ ಅದ ನೋಡಿ ಬರೋಣ ಅಂತ ಫುಲ್ ಕೆಳಗ ಶ್ರೀಲಂಕಾ ಹತ್ತಿರ ಹೋಗಿ ಬಿಟ್ಟರು. ಅಲ್ಲೇ ಕನ್ಯಾಕುಮಾರಿ ಬೀಚ್ ಮ್ಯಾಲೆ ಭೇಲಪುರಿ ಪಾನಿಪುರಿ ತಿಂದುಕೋತ್ತ ನಿಂತ ಅರ್ಜುನಂಗ ಕಪಿಗಳು ರಾಮನಿಗೆ ಅಂತ ಕಟ್ಟಿದ ರಾಮ ಸೇತು ಕಂಡದ. ಅರ್ಜುನ ಕೃಷ್ಣನ್ನ ಕೇಳಿದ. ಅಲ್ಲಪಾ ಕೃಷ್ಣ, ರಾಮಾ ತಾನೇ ಅಷ್ಟು ದೊಡ್ಡ ದೇವರು. ಬಿಲ್ಲು ಬಾಣ ಪಂಡಿತ ಇದ್ದ. ಹಾಂಗಿದ್ದಾಗ ಮಂಗ್ಯಾಗಳ ಕಡೆ ಯಾಕ ಬ್ರಿಜ್ ಕಟ್ಟಿಸಿದ? ತಾನೇ ಬಾಣ ಬಿಟ್ಟು ಒಂದು ಮಸ್ತ ಬ್ರಿಜ್ ಮಾಡಿಕೊಂಡು ಲಂಕಾಕ್ಕ ಹೋಗಬಹುದಿತ್ತಲ್ಲ. ಯಾಕ ಹೋಗಲಿಲ್ಲ? ಹಾಂ? ಹಾಂ?  ನಾ ಏನರೆ ಇದ್ದರ ಬಾಣಾ ಬಿಟ್ಟು ಬಿಟ್ಟು ಮಸ್ತ ಬ್ರಿಜ್ ಮಾಡಿಕೊಂಡು ಹೋಗಿ ಬಿಡ್ತಿದ್ದೆ. ಈ ಅಡ್ನಾಡಿ ಮಂಗ್ಯಾಗಳ ಹಂಗ್ಯಾಕೋ? ಏನಂತೀ ಕೃಷ್ಣಾ? - ಅಂತ ಕೇಳಿದ ಅರ್ಜುನ.

ಕೃಷ್ಣಂಗ ಅನ್ನಿಸ್ತು. ಅರ್ಜುನ ಸಾಹೇಬರಿಗೆ ಸೊಕ್ಕು ತಲಿಗೆ ಹತ್ಯದ. ಇದನ್ನ ಇಳಿಸಳಿಕ್ಕೆ ದೊಡ್ಡ ಮಂಗ್ಯಾ ಉರ್ಫ್ ಹನುಮಂತನೇ ಬರಬೇಕು ಅಂತ.

ಹೂನಪಾ ಅರ್ಜುನ! ನೀ ಎಲ್ಲೆ ಆ ರಾಮಾ ಎಲ್ಲೆ? ಮತ್ತ ಆ ಬ್ರಿಜ್ ಕಟ್ಟಿದ ಮಂಗ್ಯಾಗಳು ಎಲ್ಲೇ?!!! ಬಾಣಾ ಬಿಟ್ಟು ಒಂದು ಬ್ರಿಜ್ ಮಾಡಿಬಿಡಪಾ. ಇಲ್ಲಿ ತನಕಾ ಬಂದೇವಿ. ಹಂಗಾs ಲಂಕಾಕ್ಕೂ ಹೋಗಿ ಬಂದು ಬಿಡೋಣ, ಅಂತ ಹೇಳಿ ಅರ್ಜುನಂಗ ಫುಲ್ ಹವಾ ಹಾಕಿ ಬಿಟ್ಟ ಕೃಷ್ಣ.

ಅಷ್ಟು ಹೇಳೊದs ತಡಾ, ಅರ್ಜುನ ಬಾಣದ ಮ್ಯಾಲೆ ಬಾಣ ಬಿಟ್ಟು ಒಂದು ಬ್ರಿಜ್ ತಯಾರ ಮಾಡೇ ಬಿಟ್ಟ!

ನಡೀಪಾ ಕೃಷ್ಣ..... ಬ್ರಿಜ್ ತಯಾರ ಆಗ್ಯದ. ಲಂಕಾಕ್ಕೂ ಒಂದು ವಿಸಿಟ್ ಕೊಟ್ಟು ಬಂದು ಬಿಡೋಣ ನಡಿ. ನಡಿ ನಡಿ, ಅಂತ ಗಡಿಬಿಡಿ ಮಾಡಿದ ಅರ್ಜುನ.

ತಡೀಪಾ ಅರ್ಜುನ. ಅಲ್ಲೆ ನೋಡು, ಯಾರೋ ಬರ್ಲೀಕತ್ತಾರ. ನೋಡಿದರ ನಮ್ಮ ಹನುಮಪ್ಪ ಕಂಡಂಗ ಕಾಣ್ತಾನ. ಅವಗಂತೂ ಯುಗ ಗಿಗ ಏನೂ ಫರಕ್ ಇಲ್ಲ. ಎಲ್ಲಾ ಕಾಲದಾಗೂ ಇರ್ತಾನ, ಅಂತ ಕೃಷ್ಣ ಅನ್ನೋ ತನಕಾ ಹನುಮಂತ ಬಂದೇ ಬಿಟ್ಟ.

ಹನುಮಂತಂಗ ಕೃಷ್ಣಾ ಅರ್ಜುನ ನಮಸ್ಕಾರ ಮಾಡಿದರು. ಅವನೂ ನಮಸ್ಕಾರ ತೊಗೊಂಡು ಪ್ರತಿ ನಮಸ್ಕಾರ ಮಾಡಿದ.

ವಾಹ್!!!ವಾಹ್!!! ಏನು ಮಸ್ತ ಬಾಣದ ಬ್ರಿಜ್ ಮಾಡಿಯೋ ಅರ್ಜುನ. ಭೇಷ್! ನಾವು ಹಾಪ್ ಮಂಗ್ಯಾಗೋಳು ಕಲ್ಲು ಮಣ್ಣು ಹಾಕಿ ಆ ಕಾಲದಾಗ ಬ್ರಿಜ್ ಮಾಡಿದ್ದಿವಿ ನೋಡಪಾ. ತಲಿನೇ ಇಲ್ಲ ನಮಗ. ನಾ ಒಂದು ಸಲೆ ನಿನ್ನ ಬ್ರಿಜ್ ಮ್ಯಾಲೆ ಅಡ್ಡಾಡಿ ಬರ್ಲೇನೋ ಅರ್ಜುನಾ? ಕೃಷ್ಣಾ ನೀವು ಬರ್ತೀರಿ ಏನು? - ಅಂತ ಕೇಳಿದ ಹನುಮಪ್ಪ.

ನೀವು ಹೋಗಿ ಬರ್ರಿ ಹನುಮಪ್ಪಾ. ನಾ ಇಲ್ಲೇ ಬೀಚ್ ಮ್ಯಾಲೆ ಕೂತು ಎಳೆನೀರು ಕುಡಿತೇನಿ, ಅಂದ್ರು ಕೃಷ್ಣ.

ಹನುಮಂತ ಹೋಗಿ ಅರ್ಜುನ ಮಾಡಿದ ಬ್ರಿಜ್ ಮ್ಯಾಲೆ ಕಾಲಿಡೋದೇ ತಡ, ಬ್ರಿಜ್ ಅವನೌನ್ ಪೂರ್ತಿ ಮುರಕೊಂಡು ಬಿದ್ದು ಸಮುದ್ರಾದಾಗ ಸೇರಿಕೊಂಡು ಗೋವಿಂದಾ ಗೋವಿಂದಾ ಆಗಿ ಬಿಡ್ತು. ಫುಲ್ ಖಲಾಸ್!! ಫುಲ್ ಮಟಾಶ್!!! ಹನುಮಪ್ಪನ ಪವರ್ ಅಂದ್ರ ಅದು!! ಅದರ ಮುಂದ ಅರ್ಜುನನ ಬಿಂಗಲಾಟಿ ಬಾಣದ ಬ್ರಿಜ್ ಏನು ಸಮಾ?!

ಅದನ್ನ ನೋಡಿದ ಅರ್ಜುನ ಪಾಠ ಕಲಿತ. ಹನುಮಂತನಿಗೆ ಮತ್ತ ಅವನ ವಾನರ ಸೇನಾಕ್ಕ ಅವಮಾನ ಮಾಡೋ ರೀತಿ ಮಾತಾಡಿದ್ದು ತಪ್ಪು ಅಂತ ಗೊತ್ತಾತು. ಸೀದಾ ಹೋದವನೇ ಹನುಮಪ್ಪನ ಕಾಲಿಗೆ ಬಿದ್ದು, ತಪ್ಪಾತೋ ಹನುಮಪ್ಪಾ!ನೀವೆಲ್ಲಾ ಕೂಡಿ ಕಟ್ಟಿದ ರಾಮ ಸೇತು ಮುಂದ ನಾ ಕಟ್ಟಿದ ಬಾಣದ ಬ್ರಿಜ್ ಏನೂ ಅಲ್ಲಪಾ. ಕ್ಷಮಾ ಮಾಡಿ ಬಿಡೋ!!! ಅಂತ ಗೊಳೋ ಅಂದಾ.

ಹನುಮಪ್ಪಾ ಬೆಸ್ಟ್ ದೇವರು. ಇರಲೀ ಬಿಡಪಾ!!! ಇನ್ನೂ ಸಣ್ಣವ ಇದ್ದಿ. ತಪ್ಪು ತಿದ್ದಿಕೋತ್ತಿ. ಕ್ಷಮಾ ಕೇಳಿದ್ದು ಭಾಳ ಸಂತೋಷ. ಏನು ವರ ಕೊಡಲೀ ನಿನಗ? - ಅಂತ ಕೇಳಿದ ಹನುಮಂತ.

ರೀ....ಹನುಮಂತ! ಮುಂದ ಮಹಾಭಾರತ ಯುದ್ಧ ಶುರು ಆಗೋದು ಅದ. ನಾನು ಈ ಅರ್ಜುನನ ಡ್ರೈವರ್ ಅಂತ ಹೊಂಟೀನಿ. ನೀವು ಕ್ಲೀನರ್ ಅಂತ ಬರ್ರಲಾ. ಬರ್ತೀರಿ? ನನ್ನಂತ ಡ್ರೈವರ್ ನಿಮ್ಮಂತ ಕ್ಲೀನರ್ ಬೇಕ್ರೀಪಾ ಈ ಪಾಂಡವರಿಗೆ, ಅಂತ ಕೇಳಿದ ಕೃಷ್ಣ.

ನನಗ ಈಗ ಭಾಳ ವಯಸ್ಸು ಆಗ್ಯದ. ನಾನು ಸನ್ಯಾಸ ತೊಗೊಂಡು ಕೇವಲ ರಾಮನಾಮ ಸ್ಮರಣೆ ಒಂದೇ ಮಾಡವ ಇದ್ದೇನಿ. ಆದರೂ ನಮ್ಮ ಹುಡುಗ ಅರ್ಜುನನ ರಥದ ಮೇಲಿನ ಬಾವುಟದ ಮ್ಯಾಲೆ ಇರೋ ಚಿತ್ರದಾಗ ಬಂದು ಕೂಡತೇನಿ. ಮತ್ತ ಎಲ್ಲಾ ಛೋಲೋ ಆಗೋ ಹಾಂಗ ನೋಡಿಕೋತ್ತೇನಿ, ಅಂತ ಹೇಳಿ ವರಾ ಕೊಟ್ಟು ಹನುಮಪ್ಪಾ ಜಿಗದು ಹಾರಿ ಹೋಗಿ ಬಿಟ್ಟ.

ಕಪಿಧ್ವಜ
ಗೊತ್ತಾತೇನೋ ಕರೀಂ ಭಾಯಿ? ಹೀಂಗ ವರಾ ಕೊಟ್ಟಿದ್ದೆ ಅಂತ ಹನುಮಪ್ಪಾ ಅರ್ಜುನನ ರಥದ ಬಾವುಟದ ಮ್ಯಾಲೆ ಬಂದು ಕೂತರು. ಅದಕ್ಕs ಅರ್ಜುನಂಗ ಕಪಿಧ್ವಜ ಅನ್ನೋದು. ನೀ ಅದನ್ನ 'ಝೇಂಡಾ ಮಂಗ್ಯಾನ್  ಕೆ' ಮಾಡಿದಿ. ತಿಳೀತಾ? - ಅಂತ ಫುಲ್ ವಿವರಣೆ ಕೊಟ್ಟೆ.

ಎರಡು ಡೌಟ್ ಇವೆ ಸಾಬ್, ಅಂದ ಕರೀಂ.

ಏನೋ? - ಅಂತ ಕೇಳಿದೆ.

ಹನುಮಪ್ಪಾ ಅವರು ಅರ್ಜುನ್ ಅವರಿಗೆ ವರಾ ಯಾಕೆ ಕೊಟ್ಟರು? ಕನ್ಯಾ ಕೊಡಬೇಕು ತಾನೇ? ಅರ್ಜುನ್ ಸಾಹೇಬರಿಗೆ ವರಾ ಯಾಕೆ? ಅವರು ಎಷ್ಟೋ ಮಂದಿ ಹೆಂಗಸೂರಿಗೆ ಕಂಡ ಕಂಡಲ್ಲಿ ಶಾದಿ ಮಾಡಿಕೊಂಡು ಬಂದು ಬಿಡ್ತಿದ್ದರು. ಹನುಮಪ್ಪಾಜಿ ಅವರಿಗೆ ಮುದುಕಾ ಆಗಿಬಿಟ್ಟು ತಲಿ ಅರಳು ಮರಳು ಆಗಿತ್ತು ಕ್ಯಾ? - ಅಂತ ಕೇಳಿಬಿಟ್ಟ ಕರೀಂ.

ಹೋಗ್ಗೋ ಇವನಾ!!!! ಹನುಮಂತ ಅರ್ಜುನಗ ವರಾ ಕೊಟ್ಟಾ ಅಂದ್ರ ಕನ್ಯಾ ಯಾಕ ಕೊಡಲಿಲ್ಲ ಅಂತ!!!!

ಸಾಬ್ರಾ!!! ಇದು ವರ ಅಂದ್ರ ಬ್ಯಾರೇ!!!! ದೇವರು ಕೊಡೊ boon ಅಂತಾರ ನೋಡ್ರೀ. ಅದರೀಪಾ. ಮುಂದಿನ ಡೌಟ್ ಏನು ನಿಮ್ಮದು? - ಅಂತ ಕೇಳಿದೆ.

ಓಹೋ!!! ಇದು ಹಾಗೆ!!! ಭಗವಾನ ಕೊಡೊ ವರ ಮತ್ಲಬ್ ಬೂನ್. ಅದೇನೋ ಹನುಮಾನ್ ಜೀ ಅರ್ಜುನಾ ಅವರಾ ಬಾವುಗಾ ಮ್ಯಾಲೆ ಹೋಗಿ ಕೂತರು ಅಂತಾ ಅಂದ್ರೀ. ವೋ ಕ್ಯಾ? ಅರ್ಜುನ್ ಅವರ ಕಡೆ ಗಂಡು ಬೆಕ್ಕು ಅಂದ್ರೆ ಬಾವುಗ ಇತ್ತು ಕ್ಯಾ? ಹನುಮಾನ್ ಜೀ ಹೋಗಿ ಸಣ್ಣ ಬೆಕ್ಕಿನ ಮ್ಯಾಲೆ ಕೂತರೆ ಬೆಕ್ಕು ಫುಲ್ ಪಡ್ಚಾ ಅಲ್ಲಾ???!!!! - ಅಂತ ಕೇಳಿಬಿಟ್ಟ ಕರೀಂ.

ನಾ ಬಾವುಟ ಅಂತ ಹೇಳಿದರ ಇವಂಗ ಬಾವುಗ ಅಂತ ಕೇಳಿಬಿಟ್ಟದ!!! ಹೋಗ್ಗೋ!!!!

ಸಾಬ್ರಾ!!!! ಅದು ಬಾವುಟ ಅಂತ. ಅಂದ್ರ ಝೇಂಡಾ ಉರ್ಫ್ ಫ್ಲಾಗ್. ಬಾವುಗ ಅಲ್ಲ. ಬಾವುಗ ನಿಮ್ಮ ಬೇಗಂ ಕಡೆ ಇರೋದು. ಎಂತಾ ಬಾವುಗಾ ಸಾಕ್ಯಾಳ್ರೀ ಅಕಿ. ಒಮ್ಮೆ ಹೀಂಗ ಪರಚಿತ್ತು ಅಂದ್ರ, ಕೇಳಬ್ಯಾಡರೀ, ಅಂತ ಬಾವುಟ ಮತ್ತ ಬಾವುಗದ ನಡುವಿನ ಸಂದೇಹ ಬಗೆ ಹರಿಸಿದೆ.

ಐಸಾ ಕ್ಯಾ? ಈಗ ಫುಲ್ ತಿಳೀತು ನೋಡಿ ಅರ್ಜುನ್ ಅವರಿಗೆ 'ಕಪಿ ಝೇಂಡಾ' ಉರ್ಫ್ 'ಝೇಂಡಾ ಮಂಗ್ಯಾನ್ ಕೆ' ಅಂತ ಯಾಕೆ ಹೆಸರು ಬಂತು ಅಂತ. ಬಹುತ್ ಶುಕ್ರಿಯಾ. ಬಡಿ ಮೆಹೆರ್ಬಾನಿ. ಭಾಳ ಚಂದಾಗಿ ತಿಳಿಸಿ ಹೇಳಿದ್ರೀ. ಖುದಾ ಹಾಫಿಜ್, ಅಂತ  ಹೇಳಿ ಕರೀಂ ಮನಿ ಹಾದಿ ಹಿಡದ.

ನಾನೂ ವಾಪಸ್ ಬಂದೆ. ಆದ್ರ ಭಗವದ್ಗೀತಾ ಓದಲಿಕತ್ತು ಹತ್ತು ವರ್ಷದ ಮ್ಯಾಲೆ ಆಗಿ ಹೋತು, ಇಷ್ಟು ವರ್ಷ ಹ್ಯಾಂಗ ಈ ಕಪಿಧ್ವಜ ನಮ್ಮ ಕಣ್ಣಿಗೆ ಬಿದ್ದಿರಲಿಲ್ಲ???? ಇರ್ಲಿ ಆವಾಗ ನಾವು ಇಷ್ಟು ದೊಡ್ಡ ಮಂಗ್ಯಾ ಇರಲಿಲ್ಲ ಅಂತ ಅನ್ನಸ್ತದ. ಈಗರೆ ಕಣ್ಣಿಗೆ ಬಿತ್ತಲ್ಲ, ಅಷ್ಟಾ ಸಾಕು!

** ಮಂಗ್ಯಾನ್ ಕೆ, ಮಂಗ್ಯಾನ ಮಗನ, ಮಂಗ್ಯಾ - ಧಾರವಾಡ ಕಡೆಯ ಪ್ರೀತಿಯ (?) ಬೈಗುಳ.

** ಮೇಲೆ ಉದ್ಧರಿಸಿದ ಮೊದಲ ಅಧ್ಯಾಯದ ಇಪ್ಪತ್ತನೆ ಶ್ಲೋಕದ ಅರ್ಥ ತಿಳಿಯಲು ಬಯಸುವವರು ಇಲ್ಲಿ ನೋಡಬಹುದು

** ಕಪಿಧ್ವಜದ ಹಿಂದಿನ ಕಥೆ ಸ್ವಲ್ಪ ಸ್ವಲ್ಪ ಗೊತ್ತಿತ್ತಾದರೂ ಪೂರ್ತಿ ತಿಳಿದಿದ್ದು ಈಗ. ಸ್ವಾಮಿ ಮುಕುಂದಾನಂದರು ಭಗವದ್ಗೀತೆಯ ಮೇಲೆ Bhagavad Gita - The Song of God ಅಂತ ಒಂದು ತುಂಬ ಒಳ್ಳೆಯ ಪುಸ್ತಕ ಬರೆದಿದ್ದಾರೆ. ಇದರಲ್ಲಿ ಕಪಿಧ್ವಜದ ಪೂರ್ತಿ ಕತೆ ಸರಳವಾಗಿ ಸಿಕ್ಕಿತು. ಹಾಕಿದ ಮಸಾಲೆ ನಮ್ಮದು. IIT, IIM ಪದವೀಧರಾದ ಸ್ವಾಮಿ ಮುಕುಂದಾನಂದರ ಮನಮುಟ್ಟುವ ಪ್ರವಚನಗಳು youtube ಮೇಲೂ ಇವೆ.

4 comments:

Unknown said...

very innovative...
Nice one.

Mahesh Hegade said...

Thank you. ಭಾರಿ ಬೆಗ್ಗನೆ ಓದಿಬಿಟ್ಟೆ!!!!

Kotresh T A M said...

ಚೆನ್ನಾಗಿದೆ ಸರ್

Mahesh Hegade said...

Thnak you, Kotresh.