Wednesday, June 26, 2013

ಪಟಾಕ್ಷಿ


ಸಾಬ್....ಒಂದು ಭಾಳ ದೊಡ್ಡ ಪ್ರಶ್ನೆ ಇದೆ ಸಾಬ್, ಅಂದ ಕರೀಂ.

ಇವಾ ಕರೀಂ ಹೀಂಗ ದೊಡ್ಡದು, ಉದ್ದಂದು ಹಾಂಗ ಹೀಂಗ ಅಂತ ಪೀಠಿಕೆ ಹಾಕ್ಕೋತ್ತ ಬಂದಾ ಅಂದ್ರ ಏನೋ ಕಾದದ ಅನ್ನೋ ಹಾಂಗ ನನ್ನ ಎಡಗಣ್ಣು ಪಟ್ ಪಟ್ ಅಂತ ಹೊಡಕೊಳ್ಳಲಿಕ್ಕೆ ಶುರು ಮಾಡಿಬಿಡ್ತದ.

ಏನೋ ಪುಣ್ಯಾತ್ಮಾ ನಿನ್ನ ಅಂತಹ ದೊಡ್ಡ ಪ್ರಶ್ನೆ? ಕೇಳುವಂತಹನಾಗು, ಅಂತ ಹೇಳಿದೆ.

'ಅಕ್ಷಿಪಕ್ಷಿ' ಅಂದ್ರೆ ಏನು ಸಾಬ್? - ಅಂತ ಕರೀಂ ಕೇಳಿದ.

ಅಕ್ಷಿಪಕ್ಷಿ!!!

ಹಾಂ!!

ಅಕ್ಷಿಪಕ್ಷಿ ಅಂತ ಒಂದೇ ಶಬ್ದ ಇಲ್ಲ. ಅಕ್ಷಿ ಅಂತ ಅದ, ಪಕ್ಷಿ ಅಂತ ಅದ. ಎರಡೂ ಬ್ಯಾರೆ ಬ್ಯಾರೆ. ಅದರ ಅರ್ಥ ಬೇಕೇನು ನಿನಗ? - ಅಂತ ಕೇಳಿದೆ.

ಓಹೋ...ಹಾಗೆ ಕ್ಯಾ? ಹೇಳಿ ಹೇಳಿ ಅರ್ಥ, ಅಂದ ಕರೀಂ.

ಪಕ್ಷಿ ಅಂದ್ರ ಹಕ್ಕಿ. ಅಕ್ಷಿ ಅಂದ್ರ ಕಣ್ಣು. ಸಾಕೋ? ಮತ್ತೇನರ ಜಾಸ್ತಿ ಮಾಹಿತಿ ಬೇಕೋ? - ಅಂತ ಕೇಳಿದೆ.

ಪಕ್ಷಿ ಅಂದ್ರೆ ಅಕ್ಕಿ ಕ್ಯಾ? ಮತ್ಲಬ್ ಚಾವಲ್. ಯಾವ ಚಾವಲ್? ದಿನಾ ಅನ್ನಾಗೆ ಮಾಡೋ ಚಾವಲ್ಲೋ ಅಥವಾ ಬಿರ್ಯಾನಿ ಮಾಡೋ ಸ್ಪೆಷಲ್ ಬಾಸ್ಮತಿ ಚಾವಲ್ಲೋ? - ಅಂತ ಕೇಳಿಬಿಟ್ಟ ಕರೀಂ.

ಯಪ್ಪಾ...!!!! ನಾ ಹೇಳಿದ್ದು ಹಕ್ಕಿ ಮಾರಾಯಾ. ಹಕ್ಕಿ ಅಂದ್ರ...ಅಂದ್ರ....ಪಂಛೀ...ಕಬೂತರ್, ಚಿಡಿಯಾ ಅಂತಹ ಹಕ್ಕಿ ಮಾರಾಯಾ. ಅಕ್ಕಿ ಅಲ್ಲ. ನೀವು ಅಕ್ಕಿ ಮತ್ತ ಹಕ್ಕಿ ಕೂಡಿಸಿಯೇ ಬಿರ್ಯಾನಿ ಮಾಡ್ತೀರೀ. ಹೌದಿಲ್ಲೋ? - ಅಂತ ಕೇಳಿದೆ.

ವೋ ಕೈಸಾ ಜೀ? ಹಕ್ಕಿಗೂ ಅಕ್ಕಿಗೂ ಮಿಲಾಕೆ ಕೈಸಾ ಬಿರ್ಯಾನಿ ಮಾಡ್ತಾರೆ ಸಾಬ್? - ಅಂತ ಕೇಳಿದ ಕರೀಂ.

ಚಿಕನ್ ಬಿರ್ಯಾನಿ! ನೆನಪಾತ? ಅದರಾಗ ಚಿಕನ್ ಅಂದ್ರ ಕೋಳಿ. ಅದೂ ಒಂದು ತರದ್ದು ಹಕ್ಕಿನೇ ಅಲ್ಲಾ? ಹಕ್ಕಿ ಅಕ್ಕಿ ಕೂಡಿಸಿ, ಮಸ್ತ ಗರಂ ಮಸಾಲಾ ಹಾಕಿ ಬಿರ್ಯಾನಿ ಮಾಡಿಬಿಟ್ಟಿ ಅಂದ್ರ ಅವನೌನ್ ನಾಕು ದಿನ ಇಡೀ ಓಣಿ ತುಂಬ ಅದ ವಾಸನೀ, ಅಂತ ಹಕ್ಕಿ ಬಿರ್ಯಾನಿ ನೆನಪು ಮಾಡಿಕೊಟ್ಟೆ.

ಓ ಐಸಾ ಬೋಲಾ ಕ್ಯಾ? ಅದು ರೈಟ್. ಅಕ್ಷಿ ಅಂದ್ರೆ ಕಣ್ಣು ಅಂತಾ ಆಯಿತು. ಈಗ ಇದು ಮೀನಾಕ್ಷಿ, ಕಮಲಾಕ್ಷಿ ಅಂತೆಲ್ಲ ಅಂತಾರೆ, ನಿಮ್ಮದು ಮಂದಿ ಒಳಗೆ ಹೆಸರು ಇಡ್ತಾರೆ. ಅವೆಲ್ಲ ಕ್ಯಾ? ಬತಾವೋ ಜೀ, ಅಂದ ಕರೀಂ.

ಕಮಲಾಕ್ಷಿ ಅಂದ್ರ ಕಮಲದಂತಹ ಕಣ್ಣು ಇರಾಕಿ. ಹರಿಣಾಕ್ಷಿ ಅಂದ್ರ ಚಿಗರಿ ಗತೆ ಕಣ್ಣು ಇರಾಕಿ. ವಿಶಾಲಾಕ್ಷಿ ಅಂದ್ರ ದೊಡ್ಡ ಕಣ್ಣು ಇರಾಕಿ. ವಿರೂಪಾಕ್ಷಿ ಅಂದ್ರ ಅಕರಾಳ ವಿಕರಾಳ ವಿರೂಪ  ಕಣ್ಣು ಇರಾಕಿ. ಮೀನಾಕ್ಷಿ ಅಂದ್ರ ಮೀನದಂತಹ ಕಣ್ಣು ಇರಾಕಿ. ಇದು ಬರೆ ಹುಡುಗ್ಯಾರಿಗೆ ಮಾತ್ರ ಅಲ್ಲ, ಹುಡುಗುರಿಗೂ ಇಡಬಹುದು. ಕಮಲಾಕ್ಷ, ವಿರೂಪಾಕ್ಷ ಅಂತೆಲ್ಲ. ಅದರೂ ಹುಡುಗ್ಯಾರಿಗೆ ಇಡೋದೇ ಜಾಸ್ತಿ ಏನಪಾ. ಮತ್ತೇನರ ಡೌಟ್? - ಅಂತ ಕೇಳಿದೆ.

ವಜನಾಕ್ಷಿ ಅಂದ್ರೆ? - ಅಂತ ಕೇಳಿದ ಕರೀಂ.

ಹಾಂ?! ವಜನಾಕ್ಷಿ?! ಅಂದ್ರೇನು? - ಅಂತ ಘಾಬ್ರಿಂದ ಕೇಳಿದೆ. ತಿಳಿಲಿಲ್ಲ ನನಗ.

ನಮಗೆ ಗೊತ್ತಿದ್ರೆ ನಿಮಗೆ ಕೇಳ್ತಿದ್ದಿವಿ ಕ್ಯಾ? ಆದರೂ ವಿಚಾರ ಕರ್ತಾ ಮೈ.ಟೈಮ್ ಪ್ಲೀಸ್. ವಜನ್ ಅಂದ್ರೆ ಮೈ weight ಜಾಸ್ತಿ ಆಗಿ, ಫಿಗರ್ ಫುಲ್ ಖರಾಬ್ ಆಗಿ, ಕಣ್ಣು ಮೇಲೆ ಕೆಳಗೆ ಆಗಾಕಿಗೆ ವಜನಾಕ್ಷಿ ಅನ್ನಬೋದು ಕ್ಯಾ? ಕ್ಯಾ ಬೋಲ್ತಾ ಆಪ್? - ಅಂತ ಕೇಳಿದ ಕರೀಂ.

ಹುಚ್ಚಗ ಗೊತ್ತಿಲ್ಲ ಗಿತ್ತಿಲ್ಲ. ಏನೋ ಛೋಡಲಿಕತ್ತಿಬಿಟ್ಟಾನ.

ಲೇ! ಅದು ವನಜಾಕ್ಷಿ ಇರಬೇಕು ನೋಡೋ ಮಾರಾಯ. ವಜನಾಕ್ಷಿ ಅಂತ ವಜನಾಕ್ಷಿ! - ಅಂತ ಹೇಳಿದೆ.

ಇರಲಿ....ಈಗ ವನಜಾಕ್ಷಿ ಅಂದ್ರೆ ಏನು? - ಅಂತ ಮತ್ತ ಕೇಳಿದ.

ವನೇ ಜಾಯತೆ ಇತಿ ವನಜಾ ಅಂತ ಇರಬಹುದು. ಅಂದ್ರ ಅಡವಿಯೊಳಗ ಹುಟ್ಟಿದ್ದು ಅಂತ. ಏನು? ಆದಿವಾಸಿ ಪೈಕಿ ಜನ ಇರಬಹುದು. ಅಂದ್ರ ಅಡವಿ ಹುಡುಗಿ. ಕಾಡು ಮನುಷ್ಯಾರಾಕಿ. ಅವರಂಗ ಕಣ್ಣು ಇರಾಕಿ ವನಜಾಕ್ಷಿ. ಇದರ ಬಗ್ಗೆ ನನಗೂ ಖಾತ್ರಿ ಇಲ್ಲ. ಯಾವದಾರ ಸಂಸ್ಕೃತ ಪಂಡಿತರ ಕಡೆ ಕೇಳಿ ಖಾತ್ರಿ ಮಾಡ್ಕೋ, ಅಂತ ಹೇಳಿದೆ.

ತೇಲಾಕ್ಷಿ ಅಂದ್ರೆ ಕ್ಯಾ? - ಅಂತ ಕೇಳಿದ.

ಇವತ್ತು ಏನೋ ಅಕ್ಷಿ ಪಕ್ಷಿ ಹುಚ್ಚು ಹಿಡದಂಗ ಕಾಣ್ತದ.

ಹೋಗಲೇ....ತೇಲಾಕ್ಷಿ ಮೇಲಾಕ್ಷಿ ಅಂತ ಏನೂ ಇಲ್ಲ, ಅಂತ ಹೇಳಿದೆ.

ಅಲ್ಲೇ ಇದೆ ನೋಡಿ ಸಾಬ್! ನೀವೇ ಹೇಳಿದ್ರೀ ನೋಡಿ. ತೇಲಗಣ್ಣು ಮೇಲಗಣ್ಣು ಮಾಡಿಕೊಂಡು ಎಚ್ಚರ ತಪ್ಪಿ ಬೀಳಾಕಿಗೆ ತೇಲಾಕ್ಷಿ ಮೇಲಾಕ್ಷಿ ಅನ್ನಬಹುದಲ್ಲಾ? ಕ್ಯಾ ಬೋಲ್ತಾ? - ಅಂತ ಪೀಜೆ ಹೊಡದಾ.

ಜೋಕ್!? ಇದು!? ಇದಕ್ಕ ನಗಬೇಕಾ? ಥತ್ ನಿನ್ನ. ನೀನು ಮಂಗ್ಯಾಕ್ಷ್. ಮಂಗ್ಯಾನ್ ಕಣ್ಣಿನವ. ಬರೇ ಇಂತಾದ್ದ ಕಣ್ಣಿಗೆ ಬೀಳ್ತಾವ ನಿನಗ - ಅಂತ ಝಾಡಿಸಿದೆ.

ಅದೆಲ್ಲಾ ಓಕೆ ಸಾಬ್. ಈಗ ಹೇಳಿ ಪಟಾಕ್ಷಿ ಅಂದ್ರೆ ಯಾವ ತರಹದ ಕಣ್ಣು ಇರಾಕಿ? ನಮಗೆ ಅದೇ ಡೌಟ್ ಈಗ, ಅಂತ ಹೇಳಿ ಒಂದು ಬಾಂಬ್ ಒಗದೇ ಬಿಟ್ಟ.

ಪಟಾಕ್ಷಿ!!!ಪಟಾಕ್ಷಿ!!!

ತಲಿ ಕೆರ್ಕೊಂಡೆ. ಏನೂ ಹೊಳಿಲಿಲ್ಲ. ಏನರ ಒಂದು ತಂದು ಇಡ್ತಾನ ಮಂಗ್ಯಾನ್ ಕೆ!

ಪಟಾಕ್ಷಿ ಅಂದ್ರ ಪಟಾಕ್ಷಿ ಮಾರಾಯಾ. ದೀಪಾವಳ್ಯಾಗ ಹೊಡೆಯೋ ಬಾಣ ಬಿರುಸು ಇತ್ಯಾದಿ. ಕನ್ನಡ ಶಬ್ದ ಖರೆ ಅಂದ್ರ ಪಟಾಕಿ. ಅದು ಯಾಕೋ ನಾವು ಧಾರವಾಡ ಮಂದಿ ಪಟಾಕಿ ತುದಿಗೊಂದು ಷೀ ಹಚ್ಚಿ ಪಟಾಕ್ಷಿ ಅಂತ ಮಾಡಿಕೊಂಡು ಬಿಟ್ಟೇವಿ. ಯಾಕೋ ಗೊತ್ತಿಲ್ಲ, ಅಂತ ಹೇಳಿದೆ.

ಪಟಾಕಿ ಪಟಾಕಿನೇ ಇರಲಿ ಬಿಡಿ ಸಾಬ್. ಈಗ ಪಟಾಕ್ಷಿ ಅಂತ ಹುಡುಗಿಗೆ ಹೆಸರು ಇಟ್ಟರೆ ಅದರ ಅರ್ಥ ಕ್ಯಾ? - ಮತ್ತ ಅದೇ ಕೇಳಿದ.

ಗೊತ್ತಿಲ್ಲೋ ಮಾರಾಯಾ. ನೀನss ಸಂಸ್ಕೃತ ದೀಡ ಪಂಡಿತ. ಏನೇನೋ ಸಮಾಸಾ ಬಿಡಸ್ತೀ. ನೀನ ಹೇಳಿಬಿಡು, ಅಂತ ಹೇಳಿದೆ.

ಪಟ್ ಪಟ್ ಅಂತ ಕಣ್ಣು ಹೊಡಿಯಾಕಿ ಅಂದ್ರ ಪಟಾಕ್ಷಿ ಅನ್ನಬಹುದು!! ಕ್ಯಾ ಬೋಲ್ತಾ ಆಪ್?- ಅಂತ ಒಗೆದಾ ಒಂದು ಬಾಂಬ್.

ವಾಹ್!!!ವಾಹ್!!! ಪಟ್ ಪಟ್ ಕಣ್ಣು ಹೊಡಿಯಾಕಿ ಪಟಾಕ್ಷಿ. ಮಸ್ತ ಅದ ಬಿಡ್ರೀ ಸಾಬ್ರಾ. ಆದರೂ ಪಟಾಕ್ಷ ಅಂತ ಹುಡುಗುರಿಗೆ ಅದ್ರಾಗೂ ನಿಮ್ಮಂತಹ ಮಂದಿಗೆ ಇಟ್ಟರ ಸರಿ ನೋಡ್ರೀ. ಕಣ್ಣು ಹೊಡಿಯವರು ನೀವು ಮಂದಿ. ಪಾಪ ಹುಡುಗ್ಯಾರಿಗೆ ಯಾಕ ಪಟಾಕ್ಷಿ ಮತ್ತೊಂದು ಅಂತ ಹೆಸರು ಇಡ್ತೀರಿ. ಹಾಂ? ಹಾಂ? - ಅಂತ ಕೇಳಿದೆ.

ಅದೂ ಸರಿ ಅನ್ನಿ. ಹುಡಿಗ್ಯಾರು ಕಣ್ಣು ಹೊಡೆಯೋದು ಕಮ್ಮಿ. ಆದ್ರೆ ಆಂಟಿ ಮಂದಿ ಭಾಳಾ ಜಾಬಾದ್. ಕ್ಯಾ ಬೋಲ್ತಾ? ಅವರೇ ಮಸ್ತ ಕಣ್ಣು ಹೊಡಿತಾರೆ. ಗೊತ್ತು ಕ್ಯಾ? ನಿಮಗೆ ಯಾರೂ ಹೊಡೆದಿಲ್ಲ ಕ್ಯಾ? ಮುಂಜಾನೆ ವಾಕಿಂಗ್ ಹೋಗಿ ಗೊತ್ತಾಗ್ತದೆ - ಅಂದ ಕರೀಂ.

ಹಾಂಗೇನು? ಮಹಾ ಡೇಂಜರ್. ಹುಷಾರಾಗಿ ಇರಬೇಕು. ಕಮಲಾಕ್ಷಿ, ಮೀನಾಕ್ಷಿ, ಹರಿಣಾಕ್ಷಿ ಇತ್ಯಾದಿ ಕನ್ಯಾಮಣಿಗಳೆಲ್ಲಾ ಆಂಟಿ ಆದ ಮ್ಯಾಲೆ ಪಟಾಕ್ಷಿ ಆಗಿ ಬಿಡ್ತಾರ ಅಂತ ನಿನ್ನ ಥಿಯರಿ. ಯಾರಿಗೆ ಗೊತ್ತು? ಶಿವನೇ ಶಂಭುಲಿಂಗ, ಅಂತ ಹೇಳಿದೆ.

ಕ್ಯಾ ಲಿಂಗಾ? ಬಂಬುಲಿಂಗಾ? ಕ್ಯಾ ಬೋಲ್ತಾ ಆಪ್? -ಅಂದೇ ಬಿಟ್ಟ ಕರೀಂ.

ಬಂಬುಲಿಂಗನೂ ಅಲ್ಲ ಲಂಬೂಲಿಂಗನೂ ಅಲ್ಲ. ಹೋಗಲೇ! ನಾ ನಿನ್ನ ಪಟಾಕ್ಷಿ ಥಿಯರಿ ಕೇಳಿ ಹೈರಾಣ ಆಗಿ ಶಿವನೇ ಶಂಭುಲಿಂಗ ಅಂದ್ರ ಬಂಬುಲಿಂಗ ಯಾರು? ಏನು? ಎತ್ತ? ಅಂತ ಹಾಪರ ಗತೆ ಕೇಳ್ತೀ.... ಅಂತ ಹೇಳಿ ಹೊಂಟೆ.

ಆಯ್ತು.... ಆಯ್ತು..... ಹೊಂಡೀ ನೀವು. ನಾವು ಶಾಮ್ ಕೀ ಪಟಾಕ್ಷಿ ಪಟಾಕಾ ಫಿಗರ್ ಕಾ ಇಂತಜಾರ್ ಕರ್ತಾ ಯಹಾನ್ ಪೆ, ಅಂತ ಅಂದ ಕರೀಂ ಅವನ ಸಂಜಿ ಮುಂದಿನ ಕಾರ್ಯಕ್ರಮ ಮುಂದುವರಿಸಿದ.

No comments: