Wednesday, September 26, 2012

ಕಟ್ಟಿ ಮ್ಯಾಲೆ ಹೊಟ್ಟಿ ಡ್ಯಾನ್ಸ್

ಅಲ್ಲೇ ಭೀಮ್ಯಾನ ಚುಟ್ಟಾ ಅಂಗಡಿ ಮುಂದ ನನ್ನ ರೆಗ್ಯುಲರ್ ಸಂಜಿ ಮಾವಾಕ್ಕ ಆರ್ಡರ್ ಮಾಡಿ ನಿಂತಿದ್ದೆ. ಭೀಮು ತಿಕ್ಕಲಿಕತ್ತಿದ್ದ. ಅದ ಮಾವಾ ತಿಕ್ಕಲಿಕತ್ತಿದ್ದ. ನೋಡಿದ್ರ ಕರೀಮ ಬರ್ಲಿಕತ್ತಿದ್ದ.

ಬಾರೋ.....ದೋಸ್ತ.....ಕರೀಂ.....ಏನಪಾ.....ಭಾಳ ಅಪರೂಪ? ಏನೋ ಅದು ಕೈಯಾಗ? ತೋರ್ಸೋ - ಅಂದೆ.

ಯಾಕೋ ಕರೀಂ ತೋರಿಸಲಿಕ್ಕೆ ಸ್ವಲ್ಪ ಹಿಂದ ಮುಂದ ನೋಡಿದ. ಸ್ವಲ್ಪ ನಾಚಿಗಿನೂ ಮಾಡ್ಕೊಂಡ ಅನ್ನಸ್ತದ.

ಲೇ...ಮಂಗ್ಯಾನ್ ಕೆ. ನನ್ನ ಜೋಡಿ ಏನೋ ನಾಚಗಿ? ತೋರ್ಸೋ ನಮ್ಮಪ್ಪಾ - ಅಂದೆ.

ಮಿಜಿ ಮಿಜಿ ಮಾಡಕೋತ್ತನಾ ತೋರ್ಸೀದ. ಮಸ್ತ ಘಮ ಘಮ ಅನ್ನು ಮಲ್ಲಿಗಿ ಹೂವಿನ ಮಾಲಿ. ಮಸ್ತ್ ಇತ್ತು. ಫ್ರೆಶ್.

ಏನು ಸಾಬ್ರಾ? ಮಲ್ಲಿಗಿ ಹೂವಿನ ಮಾಲಿ ಖರೀದಿ ಮಾಡಿಕೊಂಡು ಹೊಂಟೀರಿ. ಜೊತಿಗೆ ಸ್ವೀಟ್ಸ್, ಎಲಿ ಅಡಿಕಿ ಎಲ್ಲೇ? ಏನೋ ಬೇಗಂ ಪಟಾವೋ ಪ್ಲಾನ್ ಇದ್ದಂಗ ಅದ. ಏನು ಲಫಡಾ ಮಾಡಿಕೊಂಡಿರೀ? ಏ.....ನಿಮ್ಮ ಹಾಪ್ ಬೇಗಂ ಇದಕೆಲ್ಲ ಕರಗೋ ಪೈಕಿ ಅಲ್ಲ ಬಿಡ್ರೀ. ಅಕಿ ಮೊದಲ ಹಾಪ್. ಆದರೂ ಟ್ರೈ  ಮಾಡ್ರಿ. ನೀವು ನಂಬಿದ ದೇವರು ನಿಮಗೆ ಒಳ್ಳೇದು ಮಾಡಲಿ - ಅಂದೆ.

ಛೋಡೋಜೀ ಸಾಬ್!!! ಅಕಿ ಹಾಪ್ ಗೆ ಯಾರು ಮಲ್ಲಿಗಿ ಹೂವಾ ಕೊಡ್ತಾರೆ. ಕತ್ತಿ  ಮುಂದೆ ಕಸ್ತೂರಿ ತೊಗೊಂಡು ಹೋದ್ರೆ ಏನು ಉಪಯೋಗ ಸಾಬ್? ಇದು ಬ್ಯಾರೆ ಯಾರಿಗೋ ಸಾಬ್ - ಅಂತ ನಿಗೂಢ ಲುಕ್ ಕೊಡುತ್ತ ಏನೋ ಅದ ಅನ್ನೋವರಾಂಗ ಕಣ್ಣ ಹೊಡೆದ.

ಹೋಗ್ಗೋ ಸಾಬ್ರಾ...ಗೊತ್ತಾತ ತೊಗೊರೀ. ಇನ್ನೊಂದು ಹೊಸ ಡೌ ಏನ್ರೀ? ಹಳೇವು ಎರಡು ಸ್ಟೆಪ್ನೀ ಇನ್ನೂ ಇಟ್ಟೀರೋ ಅಥವಾ ಓಲ್ಡ್ ಮಾಡೆಲ್ ಅಂತ ಜಂಕ್ ಯಾರ್ಡಿಗೆ ಬಿಟ್ಟು ಬಂದರೋ? ಎಲ್ಲಿಂದ ಪಟಾಯಿಸ್ತೀರಿ ಆ ಪರಿ? ಬೇಗಂಗೆ ಗೊತ್ತಾದ್ರಾ, ಮತ್ತೊಮ್ಮೆ ಅಕಿ ಕಲ್ಲೂ ಮಾಮಾ ಬಂದು ಕಾಲು ಮತ್ತೊಂದು ಮುರ್ದು ಹೋದಾನು ನೋಡಕೊಳ್ಳರೀ ಮತ್ತ - ಅಂತ ವಾರ್ನಿಂಗ್ ಕೊಟ್ಟೆ.

ಕ್ಯಾ ಸಮಜಾ ಸಾಬ್? ನಾವೇನು ಹಾಪ್ ಮಂದಿ ಕ್ಯಾ? ಈಗ ಹೊಸ ಮಾಲ್ ನಾವು ಇಂಟರ್ನೆಟ್ ಮ್ಯಾಲೆ ಪಟಾಯಿಸೇವಿ. ಅದೂ ವಿಲಾಯತಿ ಮಾಲ್. ಗೊತ್ತು ಕ್ಯಾ? - ಅಂದ ಕರೀಂ.

ಹೋಗ್ಗೋ...ಮಸ್ತ ಆತಲ್ಲರೀ.....ಇಂಟರ್ನೆಟ್ ಮ್ಯಾಲೆ. ಯಾವ ದೇಶದವರು? ಏನು ಮಾಡ್ತಾರ? - ಅಂತ ಕೇಳಿದೆ.

ಸಾಬ್ ಒಬ್ಬಾಕಿ "ಅಜ್ಜಿ ಏರಿಯ" ದೇಶದಾಕಿ. ಇನ್ನೊಬ್ಬಾಕಿ, ಇನ್ನೊಬ್ಬಾಕಿ ಯಾವ ದೇಶ ಅಂದ್ರೆ....ತಡೀರಿ. ನೆನಪ ಆಗ್ತಾ ಇಲ್ಲ- ಅಂತ ನೆನಪ ಮಾಡಕೊಳ್ಳಲಿಕ್ಕೆ ಹತ್ತಿದ್ದ.

ಹೋಗ್ಗೋ ಸಾಬ್ರಾ....."ಅಜ್ಜಿ ಏರಿಯ" ಅಂದ್ರ ಯಾವ ದೇಶರೀ? ಹಾಂಗ ಯಾವ ದೇಶ ಇಲ್ಲರೀಪಾ. ಎಲ್ಲದ ಈ ದೇಶ? - ಅಂತ ಕೇಳಿದೆ. ಯಾವದೋ ದೇಶದ ಹೆಸರು ರಾಡಿ ಎಬ್ಬಿಸಿಯೇ "ಅಜ್ಜಿ ಏರಿಯ" ಅಂದಿದ್ದು ಖಾತ್ರಿ ಇತ್ತು.

ಸಾಬ್ ನೋಡಿ. ಅದು ಎಲ್ಲೋ ಉತ್ತರ ಆಫ್ರಿಕಾದಲ್ಲಿ ಇದೆ ಅಂತೆ. ಅಲ್ಲೂ ಬರೇ ನಮ್ಮದು ಮಂದೀನೇ ಇದ್ದಾರೆ ಅಂತೆ. ಅಕಿನೂ ನಮ್ಮ ಮಂದೀನೇ - ಅಂತ ಅಂದ ಕರೀಂ ಏನೋ ಹಿಂಟ ಕೊಟ್ಟ.

"ಅಜ್ಜಿ ಏರಿಯ" ಅಂತ ಉತ್ತರ ಆಫ್ರಿಕಾದಲ್ಲಿ ಯಾವ ದೇಶ ಅದ, ಅಂತ ತಲಿ ಕೆಡಿಸ್ಕೊಂಡೆ.

ಏನೋ ಹೊಳಿತು.

ಸಾಬ್ರಾ.......ಅದು ಅಲ್ಜೀರಿಯಾ ಅಂತ ಏನು? ಅದ ಇರಬೇಕು. ಅದಕ್ಕ "ಅಜ್ಜಿ ಏರಿಯ" ಅಂತೀರಿಲ್ಲರಿ. ನಿಮ್ಮ ತಲಿ. ಸ್ವಲ್ಪ ಅಟ್ಲಾಸ್ ಗಿಟ್ಲಾಸ್ ನೋಡಿ ಸರೀತ್ನಾಗೆ ಕಲೀರಿ - ಅಂತ ಬೈದೆ.

ಹ್ಮ....ಹ್ಞೂ......ಮುಂದ ಹೇಳ್ರೀ....ಇನ್ನೊಬ್ಬಾಕಿ ಯಾವ ದೇಶದಾಕಿ? -ಅಂತ ಕೇಳಿದೆ.

ಸಾಬ್...ಅಕಿ ಯಾವ ದೇಶದಾಕಿ ಅಂದ್ರೆ....ಅಂದ್ರೆ....ಅಂದವನೇ ಒಂದು ಅಸಡ್ಡಾಳ ಹೆಸರು ಹೇಳಿಯೇ ಬಿಟ್ಟ. ಒಂದು ಕ್ಷಣ ನಡುಗಿ ಹೋದೆ.

ಸಾಬ್ರಾ!!!!ಏನಂತ ಹೀಂಗ ಹೊಲಸ್ ಹೊಲಸ ಹೆಸರು ಹೇಳ್ತೀರಿ. ಅಂತ ಹೆಸರಿನ ಯಾವದೂ ದೇಶ ಇಲ್ಲ. ಆ ಶಬ್ದ ಮತ್ತೊಮ್ಮೆ ಹೇಳಬ್ಯಾಡ. ಏನು ಸ್ಪೆಲ್ಲಿಂಗ್ ಅಂತ ಹೇಳು - ಅಂತ ಝಾಡಿಸಿದೆ.

ತಡೀರಿ ಸಾಬ್...........ಅಂದವನೇ, ಹೊಚ್ಚ ಹೊಸಾ ಲೇಟೆಸ್ಟ್ ಮಾಡೆಲ್ ಸ್ಮಾರ್ಟ್ ಫೋನ್ ತೆಗೆದದವನ, ಏನೇನೋ ಚಕ್ ಚಕ್ ಅಂತ ಚೆಕ್ ಮಾಡಿ....T..U..N..I..S..I..A....ಅಂತ ಸ್ಪೆಲ್ಲಿಂಗ್ ಹೇಳಿ....ಮತ್ತ ಅವಂಗ ಬಂದಾಂಗ ಉಚ್ಚಾರ ಮಾಡಿದ.

ಶಿವಾ.....ಶಿವಾ.....ಕಿವಿ ಮುಚಗೊಂಡೆ. ಅಷ್ಟು ಖರಾಬಾಗಿ ಕೇಳಿಸಿತ್ತು ಅವನ ಉಚ್ಚಾರ.

ಸಾಬ್ರಾ....ಅದನ್ನ ಟ್ಯೂನಿಸಿಯಾ ಅಂತ ಉಚ್ಚಾರ ಮಾಡ್ತಾರ. 'ಟ'ಕಾರ....'ಟ'ಕಾರ. ನೀವು ಹೇಳಿದಂಗ 'ತ'ಕಾರ ಅಲ್ಲ. 'ತ'ಕಾರ ಹಾಕಿಬಿಟ್ಟರ, ಹೆಂಗಸೂರು ಹೋಗಲೀ, ಗಂಡಸೂರು ಬೆಚ್ಚಿ ಬಿದ್ದು ಓಡಿ ಹೋಗು ಹಾಂಗ ಅದ ಹೆಸರು. ಮತ್ತ ಅದು 'ನ'ಕಾರ. ನವಿಲು ಇದ್ದಂಗ. 'ಣ'ಕಾರ ಅಲ್ಲ. ಬೆಣ್ಣಿ, ಉಣ್ಣಿ ಉಚ್ಚಾರ ಮಾಡಿದಂಗ 'ಣ'ಕಾರ ಹಾಕಬ್ಯಾಡರೀ. ತಿಳಿತ? - ಅಂತ ಹೇಳಿ ತಿದ್ದಿದೆ.

ಯಾವ ಮಂಗ್ಯಾನ್ ಕೆ  ಟ್ಯೂನಿಸಿಯಾ ಅಂತ ಹೆಸರು ಇಟ್ಟಾನೋ? ದೇವರಿಗೆ ಗೊತ್ತು. ಕರೀಮನಂತಾ ಹಾಪ್ರು ಅವರಿಗೆ ಬಂದಂಗ ಹೇಳಿ ಕನ್ನಡದಾಗ ಮಹಾ ಅಸಡ್ಡಾಳ ಆಗಿ ಕೇಳಿಸ್ತದ.

ಅಂತೂ ಒಟ್ಟಿನಲ್ಲಿ ಅಲ್ಜೀರಿಯಾ, ಟ್ಯೂನಿಸಿಯಾ ದೇಶದ ಎರಡು ರಿಮೋಟ್ ಮಾಲ್ ಇಂಟರ್ನೆಟ್ ಮ್ಯಾಲೆ ಪಟಾಯಿಸೀರಿ ಅಂತ ಆತು. ಎಲ್ಲೆ ಸಿಕ್ಕರು? ಫೇಸ್ಬುಕ್ ಮ್ಯಾಲೆ ಏನು? ಹೊಸ ಸ್ಮಾರ್ಟ್ ಫೋನ್ ಅದಕ್ಕ ತೊಗೊಂಡಿ ಏನು? ಅವರು ಯಾಕ ನಿನ್ನಂತ ಇಂಡಿಯಾದ ಮನುಷ್ಯಾನ ಜೊತಿ ಇಂಟರ್ನೆಟ್ ಮ್ಯಾಲೆ ಮಂಗ್ಯಾತನ ಮಾಡ್ಲಿಕತ್ತಾರ? - ಅಂತ ಕೇಳಿದೆ.

ಸಾಬ್....ನೋಡಿ....ಅವರು ಅರಬ್ ಔರತ್ "ಫ್ರೀ ಸ್ಟೇಶನ್" ಗೆ ಬಂದು ನಮ್ಮಂತ ಮಂದಿ ಹಿಡ್ಕೊತ್ತಾರೆ. ನಮಗೂ ಟೈಮ್ ಪಾಸ್. ಯಾಕೆ ಬೇಡ ಅನ್ನಬೇಕು? - ಅಂದ ಕರೀಂ.

ಏನು ಇದು ಫ್ರೀ ಸ್ಟೇಶನ್? ಅವರ ಊರಿನ ರೇಲ್ವೆ ಸ್ಟೇಶನ್ ಹೆಸರು ಫ್ರೀ ಸ್ಟೇಶನ್ ಏನು? ಆ ರೇಲ್ವೆ ಸ್ಟೇಶನ್ ಕಟ್ಟಿ ಮ್ಯಾಲೆ ಕೂತು ನಿಮ್ಮ ಜೊತಿ ಫೇಸ್ಬುಕ್ ಮ್ಯಾಲೆ ಹರಟಿ ಮತ್ತೊಂದು ಹೊಡಿತಾರೇನು? ಹಾಂ? ಹಾಂ? - ಅಂತ ಕೇಳಿದೆ.

ಅಯ್ಯೋ.....ಇಲ್ಲ ಸಾರ್.....ಏನು ಬಡ್ಡ ತಲಿ ಮಂದಿ ನೀವು? ಫ್ರೀ ಸ್ಟೇಶನ್ ಅಂದ್ರೆ ರೇಲ್ವೆ ಸ್ಟೇಶನ್ ಅಂತೆ. ಹಾಪ್ ಸಾಬ್. ಫ್ರೀ ಸ್ಟೇಶನ್ ಅಂದ್ರೆ ತಲಿ ಕೆಡೋದು ಸಾಬ್. ನಿಮ್ಮದೂಕಿ ಬೀವಿ ನಿಮಗೆ ಅಥವಾ ಬೀವಿಕೋ ನೀವು ಖಾತಿರ್ ಖಿದ್ಮತ್ ಮಾಡೋದು ಬಿಟ್ಟು ಬಿಟ್ಟರೆ ಅವರಿಗೆ ಫೀಲಿಂಗ್ ಬರೋದಿಲ್ಲ ಕ್ಯಾ? ಆ ಫೀಲಿಂಗ್ ಗೆ ಫ್ರೀ ಸ್ಟೇಶನ್ ಅಂತಾರೆ - ಅಂದು ಒಂದು ಬಾಂಬ್ ಹಾಕಿಯೇ ಬಿಟ್ಟ.

ಈಗ ಗೊತ್ತಾತು ಇವ ಹಾಪ ಮಂಗ್ಯಾನ್ ಕೆ  ಫ್ರಸ್ಟ್ರೇಶನ್ (frustration) ಗೆ ಫ್ರೀ ಸ್ಟೇಶನ್ ಅಂತ ಹೇಳಿಬಿಟ್ಟಿದ್ದ.

ಸ್ವಲ್ಪ ಫೋಟೋ ತೋರ್ಸು, ನೋಡೋಣ ಹ್ಯಾಂಗ ಇದ್ದಾರ ಅಂತ ನಿನ್ನ ವಿಲಾಯತಿ ಮಾಲ್ - ಅಂತ ಕೇಳಿದೆ.

ಕರೀಂ ಮತ್ತ ತನ್ನ ಹೊಸ ಸ್ಮಾರ್ಟ್ ಫೋನ್ ತೆಗದ. ಪಟಾ ಪಟಾ ಅಂತ ಒತ್ತಿದ ಏನೋ. ನನ್ನ ಮಸಡಿ  ಮುಂದ ತಂದು ಹಿಡದ. ಎರಡೂ ಒಂದ ತರಾ ಇರೊ, ಬರೆ ಕಣ್ಣ ಮಾತ್ರ ಕಾಣೋ, ಬಾಕಿ ಎಲ್ಲಾ ಫುಲ್ ಕವರ್ ಆದ ಇಬ್ಬರು ಅರಬ್ ಮಹಿಳಾಮಣಿಗಳ ಫೋಟೋ ಬಂದವು.

ಏನ್ರೀ ಸಾಬ್ರಾ? ಇಬ್ಬರೂ ಒಂದ ತರಹ ಇದ್ದಾರ. ಫುಲ್ ಕವರ್ ಇದ್ದಿದ್ದಕ್ಕ ಏನೂ ತಿಳಿಯಂಗಿಲ್ಲ. ಇಬ್ಬರೂ ಬ್ಯಾರೆ ಬ್ಯಾರೆ ಅಂತ ಹಾಂಗ ಹೇಳತಿಯೋ? - ಅಂತ ಕೇಳಿದೆ.

ನೋಡಿ ಸಾಬ್. ಕಣ್ಣು ನೋಡಿ. ಒಬ್ಬಾಕಿದು ನೀಲಿ. ಇನ್ನೊಬ್ಬಾಕಿದು ನಿಮ್ಮ ಗತೆ ಇದೆ. ಅದೇ ವ್ಯತ್ಯಾಸ. ಮತ್ತೆ ಹೊಟ್ಟಿ ಡ್ಯಾನ್ಸ್ ಮಾಡೋವಾಗ ಬ್ಯಾರೆ ಬ್ಯಾರೆ ಅಂತ ಗೊತ್ತಾಗ್ತದೆ - ಅಂತ ಹೇಳಿ ತಲಿ ಬಗ್ಗಡ ಮಾಡಿಬಿಟ್ಟ.

ಹೊಟ್ಟಿ ಡ್ಯಾನ್ಸ್!!!!!!!!!!!!!!

ಏನಿದು? 

ಬ್ಯಾರೆ ಎಲ್ಲಾ ತರಹದ ಡ್ಯಾನ್ಸ್ ಗೊತ್ತಿತ್ತು. ಹಾವಿನ ಡ್ಯಾನ್ಸ್, ಮುಂಗುಸಿ ಡ್ಯಾನ್ಸ್, ಮಂಗ್ಯಾ ಡ್ಯಾನ್ಸ್, ಕತ್ತಿ ಡ್ಯಾನ್ಸ್. ಇದ್ಯಾವದು ಹೊಟ್ಟಿ ಡ್ಯಾನ್ಸ್?

ಕರೀಮನ ಮುಂದುವರ್ದು  ಹೇಳಿದ.

ಸಾಬ್ ನೋಡಿ. ಇವರಿಬ್ಬರೂ ಅರಬ್ ಬೇಗಂ ಇದ್ದಾರೆ ನೋಡಿ, ಇಬ್ಬರೂ ಒಬ್ಬರಕಿಂತ ಒಬ್ಬರು ಮಸ್ತ ಹೊಟ್ಟಿ ಡ್ಯಾನ್ಸ್ ಮಾಡ್ತಾರೆ. ಕಟ್ಟಿ ಮ್ಯಾಲೆ ಮಾಡ್ತಾರೆ. ಎಲ್ಲರೂ ಹರಟಿ ಕಟ್ಟಿ ಮ್ಯಾಲೆ ಹರಟಿ ಹೊಡೆದರೆ ನಾವು ಹೊಟ್ಟಿ ಡ್ಯಾನ್ಸ್ ನೋಡತೇವಿ. ತಿಳೀತು ಕ್ಯಾ? ಯಾರಿಗೆ ಐತೆ ಆ ಅದೃಷ್ಟ. ನೀವೂ ಬರ್ತೀರಿ ಕ್ಯಾ? ಅದಕ್ಕೆ ಈ ಮಲ್ಲಿಗಿ ಹೂವಾದು ಮಾಲಿ - ಅಂತ ಹೇಳಿದ ಕರೀಂ, ಮಲ್ಲಿಗಿ ಮಾಲಿ ಕಟ್ಟಿದ್ದ ಪಾಕೀಟ ಮೂಗಿನ ಹತ್ತಿರ ತಂದು ಘಮ್ಮಂತ ವಾಸನಿ ಎಳಕೊಂಡು, ಯಾ ಖುದಾ, ಯಾ ರಬ್ಬಾ, ಅಂತ ಹೇಳಿ ಒಂದು ತರಹದ ಸಂತೋಷದಿಂದ ಮುಲುಗಿದ.

ಹೋಗ್ಗೋ ನಿಮ್ಮ ಸಾಬ್ರಾ. ಹೊಟ್ಟಿ ಡ್ಯಾನ್ಸ್ ಅಂದ್ರ ಇನ್ನೂ ತಿಳಿದಿಲ್ಲ. ಅದನ್ನ ಆ ಮ್ಯಾಲೆ ನೋಡೋಣ. ಅದೆಂತರ  ಡ್ಯಾನ್ಸ್ ಇರಲಿ. ಇಷ್ಟ ಚೊಲೋ ಡ್ಯಾನ್ಸ್ ಮಾಡೋರು ಅಲ್ಲೇ ಡ್ಯಾನ್ಸ್ ಮಾಡದ ನಿನ್ನ ಮುಂದ ಇಂಟರ್ನೆಟ್ ನ್ಯಾಗಾ ಯಾಕ್ ಡ್ಯಾನ್ಸ್ ಮಾಡಿ ತೋರಸ್ತಾರ?- ಅಂತ ಕೇಳಿದೆ.

ನೋಡಿ ಸಾಬ್....ಆ ದೇಶಾ ಒಳಗೆ ಎಲ್ಲ ಭಾಳ್ ಕಟ್ಟರ್.....ಹಾಗೆ ಎಲ್ಲಾ ಔರತ್ ಮಂದಿ ಡ್ಯಾನ್ಸ್ ಮಾಡ್ಲಿಕ್ಕೆ ಆಗೋದಿಲ್ಲ. ಮತ್ತೆ ಗಂಡಾ ಮುಂದೆ ಮಾಡೋಣ ಅಂದ್ರೆ, ಅವನು, ಜಾ ಬೇ ಜಾ. ಪುರಾನಿ ಹೋ ಗಯೀ. ಕಿತನಾ ದೇಖೂ ತುಜ್ಕೋ. ತಂಗ ಮತ್ ಕರೋ, ಅಂತ ಹೇಳ್ಬಿಟ್ಟು, ಅಲ್ಲಿಂದ 2-3 ತಾಸಿನ ದೂರ ಇರುವ ದುಬೈಗೋ, ಶಾರ್ಜಾಕ್ಕೋ ಹೋಗಿ ಒಳ್ಳೆ ಒಳ್ಳೆ ಹೊಟ್ಟಿ ಡ್ಯಾನ್ಸ್ ನೋಡಿ ಬರ್ತಾರೆ. ಅದಕ್ಕೇ ಅಲ್ಲಿ ಬೇಗಂ ಮಂದಿ frustration ಗೆ ಬಂದ್ಬಿಟ್ಟಿ, ಇಂಟರ್ನೆಟ್ ಮ್ಯಾಲೆ ಯಾರಾರು ಹಂದರ್ದ್ ಆದ್ಮಿ ಸಿಗ್ತಾರೋ ಅಂತ ನೋಡ್ತಾ ಇರ್ತಾರೆ. ನಮ್ಮಂತವರು ಸಿಕ್ಕರೆ ದೋಸ್ತಿ ಮಾಡಿಕೊಂಡು, ಫಾರ್ಟಿಂಗ್ ಮಾಡ್ತಾರೆ. ತಿಳೀತು ಕ್ಯಾ? - ಅಂತ ಕೇಳಿದ ಕರೀಂ.

ಓಹೋ.....ಇವರು AA ಮಂದಿ ಅನ್ನು. ಅದು ಫಾರ್ಟಿಂಗ್(farting) ಅಲ್ಲ. ಫ್ಲರ್ಟಿಂಗ್ (flirting). ಅವತ್ತ ಹೇಳಿಕೊಟ್ಟೇನಲ್ಲೋ. ಸರೀತ್ನಾಗಿ ಅನ್ನು. - ಅಂದೆ.

AA ಅಂದ್ರೆ ಸಾಬ್? - ಅಂತ ಕೇಳಿದ ಕರೀಂ.

AA ಅಂದ್ರೆ 'ಅತೃಪ್ತ ಆಂಟಿಯರು' ಅಂತ. AAA ಅಂತ ಕೂಡ ಅದ. ಗೊತ್ತೇನು? - ಅಂತ ಹೇಳಿದೆ.

AAA ಅಂದ್ರೆ ಸಾಬ್? - ಅಂತ ಕೇಳಿದ ಕರೀಂ.

AAA ಅಂದ್ರ 'ಅತೃಪ್ತ ಆಂಟಿಯರ ಆರ್ತನಾದ'...ಹೀ.....ಹೀ.....ಹೀ.......- ಅಂತ ನಕ್ಕೋತ್ತ ಹೇಳಿದೆ.

ಕರೀಂ ಸಹಿತ ನಕ್ಕ. ಗಹಗಹಿಸಿ ನಕ್ಕ.

AAA.....ಏನು ಮಸ್ತ ಹೆಸರು ಇಟ್ಟೀರಿ ಸಾಬ್. ಹೀ.....ಹೀ.....ಹೀ.......ಅದು ಒಂದು ಕನ್ನಡಿ (ಕನ್ನಡ) ಗಾನಾ ಇತ್ತು ನೋಡಿ. ನಾದಮಯ.....ನಾದಮಯ......ಹಾಗೆ ಇದು ಆಂಟಿಯರ ಆರ್ತನಾದಮಯ......ಹೀ.....ಹೀ......- ಅಂತ ತಂದೂ ಒಂದಿಷ್ಟು ಕೂಡಿಸಿದ. ಮಸ್ತ ನಕ್ಕವೀ.

ಸಾಬ್....ಅವರು ಯಾರೋ ನಿಮ್ಮದು ಕನ್ನಡಿ ಶಾಯರ್ ಇದ್ದರು ನೋಡಿ......ಅವರೇ ನರ್ಸಿಂಗ್ ಸಾಮಿ....ಅವರ ಗಾನಾ ಇತ್ತು ನೋಡಿ. "ಬೀವಿ ಒಬ್ಬಾಕಿ ಮನ್ಯಾಗ ಇದ್ದರೆ ನಮ್ಮದೂಕೆ ಅದೇ ಕರೋಡ್ ರೂಪಾಯಿ" ಅಂತ. ಹಾಗೆ ಈಗ ನೋಡಿ ಹೊಸಾ ಗಾನಾ, "ಅಂಟಿ ಇಬ್ಬರು ಫೇಸ್ಬುಕ್ ಮ್ಯಾಲೆ ಸಿಕ್ಕರೆ ಅದೇ ದೋ ಕರೋಡ್ ರೂಪಾಯಿ" ಅಂತ. ಕಟ್ಟಿ ಮ್ಯಾಲೆ ಹೊಟ್ಟಿ ಡ್ಯಾನ್ಸ್ ಮಾಡಿದ್ರೆ, ಇನ್ನೊಂದು ಎರಡು ಕರೋಡ್ ರೂಪಾಯಿ - ಅಂತ ಹೇಳಿದ ಕರೀಂ. ಮಸ್ತ ಸೆನ್ಸ್ ಆಫ್ ಹ್ಯೂಮರ್ ಮಗಂದು.

ಅಯ್ಯೋ....ಅವರು ನರ್ಸಿಂಗ್ ಸಾಮಿ ಅಲ್ಲಪಾ. ಅದ್ನಾನ್ ಸಾಮಿ ಇದ್ದಂಗ ನರ್ಸಿಂಗ್ ಸಾಮಿ ಅಂತ ತಿಳ್ಕೊಂಡಿ ಏನು? ಅವರು ದಿವಂಗತ ಕೆ.ಎಸ್. ನರಸಿಂಹಸ್ವಾಮಿ ಅಂತಪಾ. ಅವರು "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ" ಅಂತ ಬರೆದಿದ್ದು ಹೌದು. ನೀ ಅದನ್ನ ನಿನ್ನ ಸ್ಟೈಲಿನ್ಯಾಗ ಭಾಳ ಚಂದಾಗಿ ಹೇಳಿದಿ. ಆದ್ರಾ, "ಅಂಟಿ ಇಬ್ಬರು ಫೇಸ್ಬುಕ್ ಮ್ಯಾಲೆ ಸಿಕ್ಕರೆ ಅದೇ ದೋ ಕರೋಡ್ ರೂಪಾಯಿ" ಅಂದಿ ನೋಡು, ಅದನ್ನ ಕೇಳಿದ್ರ ಮಾತ್ರ ಅವರ ಆತ್ಮ ವಿಲಿವಿಲಿ ಒದ್ದಾಡ್ತದ ನೋಡು - ಅಂದೆ.

ಓಹೋ.....ನರ್ಸಿಂಹಾದು ಸ್ವಾಮಿ ಕ್ಯಾ? ನಾವು ಸುಮಾರು ಕರೆಕ್ಟ್ ಹೇಳಿದ್ವಿ ಹಾಂಗಾದ್ರೆ? - ಅಂದ ಕರೀಂ.

ಆದ್ರ ನೋಡಪಾ, ಫೇಸ್ಬುಕ್ ಮ್ಯಾಲೆ ಅಂಟಿ ಮಂದಿ ದೋಸ್ತಿ ಮಾಡಿ ಮಂಗ್ಯಾ ಆದವರು ಭಾಳ್ ಮಂದಿ ಇದ್ದಾರ. ಅವರನ್ನ ಕೇಳಿದ್ರ, ಎಲ್ಲಿ ಕರೋಡ್ ರೂಪಾಯಿ? ಫೇಸ್ಬುಕ್ ಆಂಟೀಸ್ ಎಲ್ಲಾ ಎಂದೂ ಹೊಡೆಯದ ನಾಗಾಲ್ಯಾಂಡ್ ಲಾಟರೀ ಟಿಕೆಟ್ ಅಂತಾರ. ನೋಡ್ಕೋ ಮತ್ತ. ನಿನ್ನ ಅರೇಬೀ ಆಂಟಿ ಮಂದಿ ಹೊಟ್ಟಿ ಡ್ಯಾನ್ಸ್ ಮಾಡ್ತಾರ, ಮತ್ತೊಂದು ಮಾಡ್ತಾರ ಅಂತ ಮಂಗ್ಯಾ ಆಗಬ್ಯಾಡ. ಅವೆಲ್ಲಾ ನೀರ ಮೇಲಿನ ಗುಳ್ಳೆ. ಯಾವಾಗ ಒಡಿತದ ಅಂತ ಹೇಳಲಿಕ್ಕೆ ಬರೋದಿಲ್ಲ - ಅಂದೆ.

ಹೌದು ಸಾಬ್....ಕರೆಕ್ಟ್ ಬೋಲ್ಯಾ - ಅಂಡ್ ಕರೀಂ ತನ್ನ ಒಪ್ಪಿಗಿ ಕೊಟ್ಟ.

ಈಗ ಹೇಳಪಾ.....ಹೊಟ್ಟಿ  ಡ್ಯಾನ್ಸ್ ಅಂದ್ರೆ ಏನು ಅಂತ - ಅಂದೆ. ಕೆಟ್ಟ ಕುತೂಹಲ ತಿಳ್ಕೊಬೇಕು ಅಂತ.

ಸಾಬ್...ಅದಕ್ಕೆ ಇಂಗ್ಲಿಷ್ನಲ್ಲಿ "ಬಲಿ ಡ್ಯಾನ್ಸ್" ಅಂತಾರೆ. ಹೊಟ್ಟಿ ಕುಣಿಸಿ, ಕುಣಿಸಿ, ಸೊಂಟ ತಿರುಗಿಸಿ, ತಿರುಗಿಸಿ, ಕೊಯ್ಯಾ ಕೊಯ್ಯಾ ಅನ್ನೋ ಅರಬಿ ಮ್ಯೂಸಿಕ್ ಗೆ ಮಾಡೋ ಡ್ಯಾನ್ಸ್. ಬಲಿ ಡ್ಯಾನ್ಸ್.....ಬಲಿ ಡ್ಯಾನ್ಸ್ - ಅಂತ ಹೇಳಿ, ಅಲ್ಲೇ ಸಣ್ಣ ಪ್ರಮಾಣದ ಹೊಟ್ಟಿ ಡ್ಯಾನ್ಸ್ ಮಾಡಿ ತೋರ್ಸಿದ. ಭಾಳ ನಗಿ ಬಂತು.

ಸಾಬ್ರಾ....ಅದು ಬೆಲ್ಲಿ ಡ್ಯಾನ್ಸ್ ಅಂತ ಇರಬೇಕು ನೋಡ್ರೀ. ಕನ್ನಡದಾಗ ಹೊಟ್ಟಿ ಡ್ಯಾನ್ಸ್ ಅಂದ್ರ ಕರೆಕ್ಟ್ ಅದ ತೊಗೋರಿ. ಆದ್ರಾ ಬಲಿ ಡ್ಯಾನ್ಸ್ ಅಂತ ಮಾತ್ರ ಅನಬ್ಯಾಡ್ರೀ. ಅದು ಭಾಳ ಗಲತ್ ಅರ್ಥ ಕೊಡ್ತದ - ಅಂದೆ.

ಬಲಿ ಡ್ಯಾನ್ಸ್ ಅಂದ್ರೆ ಸಾಬ್? - ಅಂತ ಕೇಳಿದ.

ನೋಡಪಾ.....ಈ ಕಾಡ ಮಂದಿ, ನರಮಾಂಸ ಭಕ್ಷಕ ಮಂದಿ ನರಬಲಿ ಕೊಡೋಕಿಂತ ಮೊದಲು ಅವರ ಹೆಂಗಸೂರ ಕಡೆ ಮಾಡಿಸೋ ಡ್ಯಾನ್ಸ್ ಗೆ 'ಬಲಿ ಡ್ಯಾನ್ಸ್' ಅಂತಾರ ನೋಡಪಾ. 'ಕಾಡಿನ ರಾಜ' ಪಿಚ್ಚರ್ ನ್ಯಾಗ ಬಾಂಬಿ ಅನುರಾಧ ಮಾಡಿದ್ದಳು. ನೆನಪಿಲ್ಲ ನಿನಗ?  ಹಾಂ....ಹಾಂ- ಅಂತ ಕೇಳಿದೆ.

ಯಾರು ಸಾಬ್ ಬಾಂಬಿ ಅನುರಾಧಾ? ನಮ್ಮ ಕ್ಲಾಸ್ಮೇಟ್ ಲಡ್ಕಿ ಕ್ಯಾ? ನಿಮ್ಮದೂಕೆ ಡೌ ಕ್ಯಾ? - ಅಂತ ಮಂಗ್ಯಾನ್ ಕೆ ಪ್ರಶ್ನೆ ಕೇಳಿದ.

ಲೇ....ಹುಸ್ಸೊಳೆ ಮಗನ.....ನಮ್ಮ ಕ್ಲಾಸಿನ್ಯಾಗ ಹಾಂಗೆಲ್ಲ ಅಸಡ್ಡಾಳ ಡ್ಯಾನ್ಸ್ ಮಾಡೋರು ಯಾರೂ ಇರಲಿಲ್ಲ. ಸಿನೆಮಾದಾಗ ಡ್ಯಾನ್ಸ್ ಅನ್ನಲಿಕತ್ತೇನಿ, ನಮ್ಮ ಕ್ಲಾಸ್ ಹುಡುಗಿ ಏನು ಅಂತ ಕೇಳಲಿಕತ್ತಿ. ಬುಧ್ಧಿ ಇಲ್ಲದವನ. ಅಕಿ ಕ್ಯಾಬರೆ ಡ್ಯಾನ್ಸರ ಅನುರಾಧಾ. ಹಳೆ ಕಾಲದಾಕಿ. ಈಗ ಅಕಿ ಮಗಳು ಭಾರಿ ಫೇಮಸ್ ಅಂತ - ಅಂತ ಫುಲ್ ವಿವರಣೆ ಕೊಟ್ಟೆ.

ಓಹೋ...ಅದು ಕ್ಯಾ? ಕಾಡಿಂದು ರಾಜಾ....ಕ್ಯಾ ಮೂವಿ ಸಾಬ್. ಕನ್ನಡಾ ಒಳಗೆ ಟಾರ್ಜನ್ ಟೈಪಿಂದು ಮೂವಿ ಅಂದ್ರೆ ಅದೇ ನೋಡಿ. ಟೈಗರ್ ಭಾಯಿಸಾಬ್ ಪ್ರಭಾಕರ್ ಏನು ಮಸ್ತ್ ಮಾಡಿದಾರೆ ಆ ಮೂವಿ ಒಳಗೆ. ಆ ಮ್ಯಾಲೆ ದೀಪಾ ಕೂಡ ಮಸ್ತ ಮಸ್ತ - ಅಂತ ಹೇಳಿ ವಿಕಾರವಾಗಿ ನಕ್ಕ ಕರೀಂ. ಒಪ್ಪಿದೆ.

ಕಾಡಿನ ರಾಜ - ಮಸ್ತ ಮೂವಿ ಇತ್ತು. ಅವೆಲ್ಲ ನಮ್ಮ 'ಜವಾನಿ ಕಿ ಕಹಾನಿ'. ಸಿಕ್ಕರ ನೋಡ್ರೀ ಇಂಟರ್ನೆಟ್ ಮ್ಯಾಲೆ.

ಒಟ್ಟಿನ್ಯಾಗ ಅರಬ್ ಅತೃಪ್ತ ಆಂಟಿಯರು ತಮ್ಮ ಬೆಲ್ಲಿ ಡ್ಯಾನ್ಸ್ ಕಲೆಯನ್ನು ನಿನ್ನ ಫೇಸ್ಬುಕ್ ಚಾಟ್ ನ್ಯಾಗ ಬಂದು ಮಾಡಿ ತೋರ್ಸತಾರ ಅಂತ ಆತು. ಅದು ನಿನಗ ಮುಜರಾ ಇದ್ದಂಗ. ಕೈಯಾಗ ಮಲ್ಲಿಗಿ ಮಾಲಿ ಹಾಕ್ಕೊಂಡು, ಶೆರೆ ಕುಡ್ಕೊತ್ತ, ಆಗಾಗ ಮಲ್ಲಿಗಿ ವಾಸನಿ ಕುಡ್ಕೊತ್ತ , ತೊಡಿ ತಟ್ಟಿಗೋತ್ತ, ಮುಜರಾ ಗತೆ ಎಂಜಾಯ್ ಮಾಡ್ತಿ ಅಂತಾತು. ಭಾರಿ ಆತ ಬಿಡಪಾ. ಯಾರಿಗೆ ಅದ ಈ ಭಾಗ್ಯ? ನೀನ ಲಕಿ - ಅಂದೆ.

ಅದಕ್ಕೆ ನೋಡೀ ಸಾಬ್....ನಾವು ಸಂಜಿ ಆತು ಅಂದ್ರೆ, ಫೇಸ್ಬುಕ್ ಮ್ಯಾಲೆ ಹತ್ತಿ ಕೂತು ಬಿಡ್ತೇವಿ. ಅಲ್ಲಿ 'ಹರಟಿ ಕಟ್ಟಿ ಮ್ಯಾಲೆ ಹೊಟ್ಟಿ ಡ್ಯಾನ್ಸ್' ನೋಡೋಕೆ. ನೀವು ಬನ್ನಿ ಸಾಬ್. ನಿಮಗೂ ಬೇಕಾದ್ರೆ ಅರಬ್ ಆಂಟಿ ಗುರ್ತು ಮಾಡ್ಸಿ ಕೊಡ್ತೇವಿ - ಅಂತ ಆತ್ಮೀಯ ಆಹ್ವಾನ ಕೊಟ್ಟ ಕರೀಂ.

ಥತ್ ನಿನ್ನ....ಆ ಅತೃಪ್ತ ಆಂಟೀಸ್ ಮಾಡೋ ಮಂಗ್ಯಾನ್ ಆಟ ನಾ ನೋಡೋದ? ಬ್ಯಾರೆ ಕೆಲಸ ಇಲ್ಲೇನು? ಮಂಗ್ಯಾನ್ ಕೆ....ನಡಿ......ನಡಿ ......ಖುದಾ ಹಾಫಿಜ್......- ಅಂತ ಹೇಳಿ ಹೊರಟು ಬಂದೆ.

ಫೇಸ್ಬುಕ್ ಎಂಬ ಮಾಯೆ. ಏನೇನೋ ಸಂಬಂಧಗಳನ್ನು ತಳಕು ಹಾಕಿ ಬಿಡುತ್ತದೆ. ಇಲ್ಲಂದ್ರೆ, ಎಲ್ಲಿಯ ಅವಕಾಶವಂಚಿತ, ಅತೃಪ್ತ ಅರಬ್ ಆಂಟಿಯರು, ಎಲ್ಲಿಯ ಕರೀಮಾ, ಎಲ್ಲಿಯ ಬೆಲ್ಲಿ ಡ್ಯಾನ್ಸ್ ಹುಚ್ಚು, ಏನು ಕಥೆ? ಏನೇನೋ ವಿಚಿತ್ರ.

Tuesday, September 18, 2012

ಯೋಗಃ ಚಿತ್ತ ವೃತ್ತಿ ನಿರೋಧಃ



ಕರೀಂ ಎಲ್ಲಿಂದಲೋ ಬರ್ಲಿಕತ್ತಿದ್ದ. ಯಾಕೋ ಮಾರಿ ಸ್ವಲ್ಪ ಸಣ್ಣದಾಗಿತ್ತು. ಏನೋ ಲಫಡಾ ಆಗಿರಲೇ ಬೇಕು ಅನ್ನಿಸ್ತು.

ಸಲಾಂ ಕರೀಂ ಸಾಬ್. ಏನು ಆರಾಮ್ ಏನು? ಏನು ಸುದ್ದೀಪಾ, ದೊಡ್ಡ ಮನುಷ್ಯಾ? - ಅಂತ ಕೇಳಿದೆ.

ಅಯ್ಯೋ ಸಾಬ್. ದೊಡ್ಡ ಸುದ್ದಿ ಅಂದ್ರೆ ನಾನು ಫೇಲ್ ಆಗಿ ಬಿಟ್ಟೆ. ಕ್ಲಾಸಿಂದ ಓಡಿಸಿಬಿಟ್ಟರು - ಅಂದ ಕರೀಂ.

ಯಾವ ಪರೀಕ್ಷಾದಾಗ ಫೇಲ್ ಆದ್ಯೋ? ಟೆಂತ್ ಆದ ಮ್ಯಾಲೆ ನೀನು ಸೀದಾ ದಂಧಾಕ್ಕ ಇಳಿದು ಶಾಣ್ಯಾ ಕೆಲಸ ಮಾಡಿದ್ದಿ. ಸಿಕ್ಕಾಪಟ್ಟೆ ಕಲ್ತವರು, ಕಲ್ತೇವಿ ಅಂತ ತಿಳಕೊಂಡವರು, ಎಲ್ಲಾ ಒಂದಲ್ಲ ಒಂದು ತರಹದ ಕೂಲಿ ಕೆಲಸ ಮಾಡ್ಕೊತ್ತಿದ್ದರ, ನೀನು ಏನೇನೋ ವ್ಯಾಪಾರ, ಇಂಪೋರ್ಟ್ ಎಕ್ಸ್ಪೋರ್ಟ್ ಅದು ಇದು ಅಂತ ದಿಲದಾರ್ ಆಗಿ ಇದ್ದಿ. ಏನು ಕಲಿಲಿಕ್ಕೆ ಹೋಗಿ, ಪರೀಕ್ಷಾದಾಗ ಫೇಲ್ ಆಗಿ ಬಂದ್ಯೋ? ಹೇಳೋ - ಅಂತ ಕೇಳಿದೆ.

ಅಯ್ಯೋ ಸಾಬ್. ಪರೀಕ್ಷಾ ಗೀರಿಕ್ಷಾ ಏನೂ ಇಲ್ಲ. ಯೋಗ ಕ್ಲಾಸಿನಿಂದ ನಮ್ಮದೂಕೆ ಓಡಿಸಿ ಬಿಟ್ಟರು ಸಾಬ್. ನಾವು ಒಂದೇ ಪ್ರಶ್ನೆ ಕೇಳಿದ್ವಿ ಸಾಬ್. ಅಷ್ಟಕ್ಕೇ ಆ ಯೋಗ ಮೇಡಂ, ಅಕಿ ನಾಮ ಹಾಕಿಕೊಂಡ ಗಂಡ ಚಿಟಿ ಚಿಟಿ ಚೀರಿ, ರೈಸ್ ಆಗಿ ನಮಗೆ ಓಡಿಸಿ ಬಿಟ್ಟರು ಸಾಬ್. ನಮಗೆ ಬೇಜಾರ್ ಆಯ್ತು - ಅಂದ ಕರೀಂ.

ಏನೋ ಅವಗಢ ಅನಾಹುತ ಮಾಡಿಕೊಂಡಾನ ಅಂತ ಗ್ಯಾರಂಟೀ ಆತು.

ಏನು? ನೀನು ಯೋಗ ಕ್ಲಾಸ್ ಸೇರಿಕೊಂಡಿದ್ಯಾ? ಯಾಕೋ? ಮಸ್ತ ಹೊನಗ್ಯಾ ಪರ್ಸನಾಲಿಟಿ ಇಟ್ಟಿ. ಎಷ್ಟ ಮಂದಿಗೆ ಬುಟ್ಟಿ ಒಳಗ ಹಾಕ್ಕೊಂಡಿ. ಈಗೂ ಒಬ್ಬಾಕಿ ಅಧಿಕೃತ ಬೇಗಂ, ಎರಡ ಮೂರು ಅನಧಿಕೃತ ಡೌ ಇಟ್ಟಿ. ನಲವತ್ತಾದ್ರೂ ಮಸ್ತ ಇಪ್ಪತ್ತರ ಚಿಕಣಾ ಹಾಂಗ ಇದ್ದಿ. ನಿನಗ್ಯಾಕೋ ಯೋಗಾ? ಮಸ್ತ ಲೈಫ್ ಭೋಗಿಸಿ ಭೋಗಿಯಾಗೋ. ಯೋಗಿ ಪೋಗಿ ಎಲ್ಲಾ ನಿನಗ ಮತ್ತ ನಿನ್ನ ಬಿಂದಾಸ್ ಪ್ರಕೃತಿಗೆ ಒಗ್ಗೊದಿಲ್ಲೋ - ಅಂತ ಹೇಳಿದೆ.

ಸಾಬ್....ಅದು ನಮ್ಮ ಬೇಗಂಗೆ  ಏನೋ ಯೋಗದ್ದು ಹುಚ್ಚು ಹತ್ತಿದೆ. ಅದು ಯಾವದೋ ಅರಿಷ್ಟಾಂಗ ಯೋಗ ಅಂತೆ. ಯಾವದೋ ಒಂದು ನಾಮದ ಕಪಲ್ ಬಂದು ಅಲ್ಲಿ ಕಲ್ಯಾಣ ಮಂಟಪದದಲ್ಲಿ ಕ್ಲಾಸ್ ಮಾಡ್ತದಂತೆ. ಅದಕ್ಕೆ ಅಕಿ ಮತ್ತು ಅಕಿ ಗೆಳತಿಯರು ಎಲ್ಲಾ ಹೋಗ್ತಾರಂತೆ. ಜೊತಿಗೆ ಅವರ ಅವರ ಗಂಡರೂ ಸಹ ಗತಿ ಇಲ್ಲದೆ ಹೋಗ್ತಾರೆ. ನಮ್ಮ ಬೇಗಂ ನನಗೂ ಗಂಟು ಬಿದ್ದು ಬಿಟ್ಟಳು. ನಾನೂ ಬರಲೇ ಬೇಕು ಅಂತ. ಅದಕ್ಕೆ ಹೋಗಿದ್ದೆ ಸಾಬ್ - ಅಂದ ಕರೀಂ.

ಏನು ಇದು ಎಂತಾ ಅರಿಷ್ಟ ಹೆಸರು? ಅರಿಷ್ಟಾಂಗ ಯೋಗ ಅಂತ. ಇಂತಾ ಹಾಪ್ ಹೆಸರು ಇಟ್ಟ ಯೋಗ ಹೇಳಿ ಕೊಡೊ ಅರಿಷ್ಟ ಮುಂಡೇವು ಯಾರೋ? - ಅಂದೆ.

ಸಾಬ್....ನಮಗೆ ಏನು ಗೊತ್ತು ಸಾಬ್. ಅದು ಯಾರೋ ನಿಮ್ಮ ಪೈಕಿ ಹಳೆ ಕಾಲದ ಪಕೀರ್ ಅಂತೆ. ಅವನ ಹೆಸರು ಅಂದ್ರೆ.....ಏನು....ಹಾಂ.....ಪತಲೀ ಅಲಿ ಅಂತೆ. ನಮ್ಮದು ಪೈಕಿ ಕ್ಯಾ? ಪತಲೀ ಗಲಿ ಸೆ ಓಡಿ ಹೋಗೋ ಅಲಿ ಅಂತ ಇರಬೇಕು. ಅದಕ್ಕೇ  ಪತಲೀ ಅಲಿ. ಅವನು ಏನೋ ಎಂಟೆಂಟು ಅಂಗ ಇರೋ ಯೋಗಾ ಶಾಸ್ತ್ರಾ ಬರೆದಾನಂತೆ. ಅದಕ್ಕೆ ಅರಿಷ್ಟ ಅಂಗಾದು ಯೋಗ ಅಂತಾರಂತೆ. ಅದನ್ನ ಯಾರೋ ದೊಡ್ಡ ನಾಮದ ನಿಮ್ಮ ಪೈಕಿ ಬ್ರೆಮಿನ್ ಅಜ್ಜಾರು ಎಲ್ಲಾ ಕಡೆ ಫೇಮಸ್ ಮಾಡಿದಾರಂತೆ. ಅದೇ ದೊಡ್ಡ ನಾಮದ ಬ್ರೆಮಿನ್ ಅಜ್ಜಾವರ ಕಡೆ ಕಲ್ತು ಬಂದವರೇ ಇವರು ಗಂಡ ಹೆಂಡತಿ ಯೋಗಾ ಮಾಸ್ತರ್ ಮತ್ತು ಮಾಸ್ತರ್ಣಿ - ಅಂದ ಕರೀಂ.

ಹಳೆ ದೋಸ್ತ ನೋಡ್ರೀ. ಏನೇನೋ ಅಪಭ್ರಂಶ ಮಾಡಿ ಅವ ಹೇಳಿ ಹೇಳಿ, ನಾ ಕೇಳಿ ಕೇಳಿ ಒಂದು ತರಹದ ಪ್ಯಾಟರ್ನ್ ರೆಕಗ್ನಿಶನ್ ಕಲತೇನಿ. ಏನು ಯಬಡೇಶಿ ಹಾಂಗ ಹೇಳಿದ ಅಂತ ಗೊತ್ತಾತು.

ಸಾಬ್ರಾ.....ಅಯ್ಯೋ.....ಅದು ಅಷ್ಟಾಂಗ ಯೋಗ ಅಂತರೀಪಾ. ಮತ್ತ ಅವಾ ಪತಲೀ ಗಲಿಯಿಂದ ಓಡಿ  ಹೋಗೋ ಪತಲೀ ಅಲಿ ಅಲ್ಲರೀಪಾ. ಅವ ಪತಂಜಲಿ ಅಂತ. ಮತ್ತ ಅದನ್ನ ಜಗತ್ತಿನ ತುಂಬಾ ಫೇಮಸ್ ಮಾಡಿದವರು ಅಯ್ಯಂಗಾರ್ ಅಂತ. ಅವರು ನಾಮದ ಬ್ರಾಹ್ಮಣ ಖರೆ. ಆದ್ರ ಪತಂಜಲಿಯ ಅಷ್ಟಾಂಗ ಯೋಗವನ್ನು ಅದರಲ್ಲೂ ಒಂದು ಅಂಗವಾದ ಆಸನಗಳನ್ನು ಜಗತ್ತಿಗೆ ಪರಿಚಯಿಸಿ, ಒಂದು ಶಾಸ್ತ್ರಬದ್ಧವಾದ ಸಿಲೆಬಸ್ ಅಂತ ಮಾಡಿ, ಸಾಕಷ್ಟು ಮಂದಿ ಟ್ರೇನರ್ ತಯಾರ್ ಮಾಡಿದವರು ಅಯ್ಯಂಗಾರ್ ಗುರುಗಳು. ಅವರ ಕಡೆ ಕಲ್ತು ಬಂದವರು ಇರಬೇಕು ಈ ನಿನ್ನ ಸಣ್ಣ ನಾಮದ ಯೋಗಾ ಕಪಲ್. ಹೀಂಗೇನು ಕಥಿ? - ಅಂತ ಕೇಳಿದೆ.

ಹಾಂ.....ಹೌದು ನೋಡಿ ಸಾಬ್. ಬಿಲ್ಕುಲ್ ಬರಾಬರ್. ಎಲ್ಲಾ ಕರೆಕ್ಟ್ ಅದೆ ನೀವು ಹೇಳಿದ್ದು. ಅವರೂ ಎಲ್ಲಾ ಇದನ್ನೇ ಹೇಳಿದರು. ನನಗೆ ಮರ್ತು ಹೋಗಿತ್ತು. ಒಂದೇ ಶಬ್ದಾದು ಮೇಲೆ ನಮ್ಮದೂಕಿ ಗಮನಾ ಇತ್ತು. ಅದಕ್ಕೇ ಎಲ್ಲಾ ಮರ್ತು ಹೋಯ್ತು. ನಮಗೆ ಒಂದು ಡೌಟ್ ಸಾಬ್ - ಅಂದ ಕರೀಂ.

ಏನು ಡೌಟ್? ಎಲ್ಲಾ ತಿಳಿಸಿ ಹೇಳಿದ್ನಲ್ಲೋ ಈಗ ಮಾತ್ರ - ಅಂದೆ.

ಸಾಬ್....ಅಷ್ಟಾಂಗ ಯೋಗ ಇದ್ದ ಹಾಗೆ 'ಪಂಚಾಂಗ' ಯೋಗ ಅಂತ ಐತೆ ಕ್ಯಾ? - ಅಂದ ಕರೀಂ. ಅಂದವನೇ ಖೀ.....ಖೀ.....ಹೀ.....ಹೀ......ಅಂತ ಅಂಡು ತಟ್ಟಿಕೊಂಡು ನಕ್ಕ.

ತಥ್ ನಿನ್ನ.....ಹೇಶಿ ಮಂಗ್ಯಾನ್ ಕೆ....ಆ ಟೆಂತ್ ಕ್ಲಾಸಿನ್ಯಾಗ ಸಮಾಸ ಬಿಡಿಸಿದ ಜೋಕ್ ಇನ್ನೂ ಮರ್ತಿಲ್ಲ ನೋಡು ನೀ. ಪಂಚಾಂಗ ಯೋಗ ಅಂತ. ಏನು ಮಸ್ತ ಸಮಾಸ ಬಿಡ್ಸ್ತಿದ್ಯೋ ನೀನು. ನೀ ಸಮಾಸ ಬಿಡಿಸೋ ಅಬ್ಬರಕ್ಕ ಸಂಸ್ಕೃತ ಮಾಸ್ತರ ಮಂದಿಗೆ ಸಂಸ್ಕೃತ ಮರ್ತು ಹೋಗ್ತಿತ್ತು. ಹೇಳು ನೋಡೋಣ ನೀ ಹ್ಯಾಂಗ ಸಮಾಸ ಬಿಡ್ಸಿದ್ದಿ ಪಂಚಾಂಗ ಅನ್ನೋದನ್ನ? - ಅಂತ ಅಂದೆ.

ಸಾಬ್ ಏನು ಮಸ್ಕಗಿರಿ ಮಾಡ್ತೀರಿ ನೀವು? ನಾವು ಸಂಸ್ಕೃತ ಮತ್ತು ಕನ್ನಡ ಒಳಗೆ ವೀಕ್ ಸಾಬ್. ನಾವು ನಮಗೆ ತಿಳಿದ ಹಾಂಗೆ - ಪಂಚೆಯಲ್ಲಿ ಇರುವ ಅಂಗ ಪಂಚಾಂಗ - ಅಂತ ಸಮಾಸ ಬಿಡ್ಸಿದ್ರೆ, ಅದನ್ನೇ ನೆನಪು ಇಟ್ಟುಕೊಂಡು ನಮಗೆ ಈಗೂ ಕಾಡಿಸೋದು ಕ್ಯಾ?.......... ಏನು ಮಾಡೋದು? ಉತ್ತರ ಕೊಡಲಿಲ್ಲ ಅಂದ್ರೆ ಕಡತ ಬೀಳ್ತಿತ್ತು. ಅದಕ್ಕೇ ಅಲ್ಲಾಹು ಹೇಗೆ ಬುದ್ಧಿ ಕೊಟ್ಟಾ ಹಾಗೆ ನಾವು ಸಮಾಸ ಬಿಡ್ಸಿ ಬಿಟ್ಟ್ವಿ. ಡಬಲ್ ಕಡತ ಬಿತ್ತು. ಆ ಬ್ಯಾಚಲರ್ ಲೇಡಿ ಟೀಚರ್- ಪಂಚೆಯಲ್ಲಿ ಇರುವ ಅಂಗ ಪಂಚಾಂಗ- ಅನ್ನೋದನ್ನ ಕೇಳಿ, ಫುಲ್ ಕೆಂಪಾಗಿ, ರಾಂಗಾಗಿ, ಚಿಟಿ ಚಿಟಿ ಚೀರುತ್ತಾ ಹೋಗಿ, ಆ ಕರಪ್ ಹೊನಗ್ಯಾ ಮಾಸ್ತರ್ ಗೆ ಕರ್ಕೊಂಡು ಬಂದು, ಅವರು ನನಗೆ - ಪಂಚಾಂಗ ಪಂಚಾಂಗ ಸಮಾಸಾ ಬಿಡಿಸಿ ಬದ್ಮಾಶಿ ಮಾಡ್ತಿಯೇನೋ ಮಂಗ್ಯಾನ್ ಕೆ - ಅಂತಾ ಬೈತಾ ಬೈತಾ ಪಂಚೆ ಒಳಗೆ ಹಿಂದೆ ಇರುವ ಅಂಗಕ್ಕೆ ಬಾಸುಂಡಿ ಬರೋ ಹಾಗಿ ಕಡತಾ ಹಾಕಿ ಬಿಟ್ಟಿದ್ದರು ಸಾಬ್- ಅಂತ ಹೇಳಿದ ಕರೀಂ. ಮಸ್ತ ನಕ್ಕವೀ ಇಬ್ಬರೂ.

ನಮ್ಮ ಕರೀಂ ಪಂಚಾಂಗ ಬಿಟ್ಟು ಇನ್ನೂ ಕೆಲವು ಸಮಾಸ ಬಿಡಿಸಿದ್ದ. ಅವೆಲ್ಲ ಇಲ್ಲೆ ಬ್ಯಾಡ. ಆ ಮ್ಯಾಲೆ ನಮ್ಮ ಬ್ಲಾಗ್ ಮಲಯಾಳಿ ಪಿಚ್ಚರ್ ಗತೆ A ಸರ್ಟಿಫಿಕೇಟ್ ಹಾಕ್ಕೋಬೇಕಾಗ್ತದ. ತಲಿ ಮ್ಯಾಲೆ ಬಾಲ್ ಇರುವ, ಇಲ್ಲದ ಬಾಲ್ ಬಚ್ಚೆ ಇರೋ ಸಂಸಾರಸ್ಥ  ಮಂದಿ ನಮ್ಮ ಬ್ಲಾಗ್ ಓತ್ತಾರ. ಅದಕ್ಕ ಅವೆಲ್ಲ ಇಲ್ಲೆ ಬ್ಯಾಡ.

ನೋಡು ಕರೀಂ. ಪತಂಜಲಿ ಅಷ್ಟಾಂಗ ಯೋಗದ ಮೇಲೆ ಪ್ರಭವಾನಂದರು ಒಂದು ಅದ್ಭುತ ಪುಸ್ತಕ ಬರದಾರ. ಅದನ್ನ ಮುದ್ದಾಂ ಓದು. ನನ್ನ ಕಡೆ ಅದ. ಮುಂದಿನ ಸರೆ ಮನಿಗೆ ಬಂದಾಗ ಕೊಡತೇನಿ. ಭಾಳ ಚಂದಾಗಿ ಸರಳ ಇಂಗ್ಲಿಶ್ ನ್ಯಾಗ ಬರದಾರ - ಅಂತ ಹೇಳಿದೆ.

ಇಲ್ಲದ ಅಧಿಕಪ್ರಸಂಗಿತನ ಮಾಡೋ ಮೂಡಿನ್ಯಾಗ ಇದ್ದ ಹಾಪ್ ಮಂಗ್ಯಾನ್ ಕೆ ಕರೀಂ.

ಸಾಬ್....ಈ ಪ್ರಭವಾನಂದ ಅಂದ್ರೆ ದಿನೇಶ್ ಆನಂದ್ ಪೈಕಿ ಕ್ಯಾ? - ಅಂತ ಕೇಳಿದ.

ಯಾವ ದಿನೇಶ್ ಆನಂದ್? ಅವರು ಸ್ವಾಮಿಗಳು ಏನು? - ಅಂತ ಸೀರಿಯಸ್ಸಾಗಿ ಕೇಳಿದೆ.

ಹೀ....ಹೀ.....ಇಲ್ಲ ಸಾಬ್....ಅದೇ ಹಿಂದಿ ಮೂವಿನಲ್ಲಿ ಕ್ಯಾರೆಕ್ಟರ್ ರೋಲ್ ಮಾಡ್ತಾ ಇದ್ದ ಸಣ್ಣ ನಟ. ಈಗ ಸ್ವಲ್ಪ ವರ್ಷದ ಹಿಂದೆ ಗ್ಯಾಂಗಸ್ಟರ್ ಅಬು ಸಲೇಂ ಕಡೆ ಮಂದಿ ಅವನ ತಲಿಗೆ ಗೋಲಿ ಹೊಡೆದು ಮುಂಬೈನಲ್ಲಿ ಕೊಂದು ಬಿಟ್ಟರು. ಅವರ ಪೈಕಿ ಕ್ಯಾ? - ಅಂತ ಹಾಪರ ಗತೆ ನಕ್ಕೊತ್ತಾ ಕೇಳಿದ.

ನಾ ಸೀರಿಯಸ್ಸಾಗಿ ಸ್ವಾಮಿ ಪ್ರಭವಾನಂದರ ಬಗ್ಗೆ ಹೇಳಲಿಕತ್ತರ ಇವಂಗ ಜೋಕ್. ಹುಸ್ಸೂಳೆಮಗ. ನಮ್ಮ ಪ್ರೀತಿಯ ದೋಸ್ತ ಕಿತಬಿ ಹುಸ್ಸೂಳೆಮಗ ಕರೀಂ.

ಸ್ವಾಮಿ ಪ್ರಭವಾನಂದ ಅವರು ದಿನೇಶ್ ಆನಂದ್ ಪೈಕಿನೂ ಅಲ್ಲ. ಬಾಬ್ಬಿ ಆನಂದ್ ಪೈಕಿನೂ ಅಲ್ಲ. ಇವರು ರಾಮಕೃಷ್ಣ ಮಿಶನ್ ಸ್ವಾಮಿಗಳು. ಅಮೇರಿಕಾದಲ್ಲಿ ಇದ್ದು ದೊಡ್ಡ ಹೆಸರು ಮಾಡಿದವರು. ಭಾಳ ಒಳ್ಳೆ ಒಳ್ಳೆ ಪುಸ್ತಕ ಬರದಾರ. ಇಲ್ಲೆ ನಾ ಪತಂಜಲಿ ಅಷ್ಟಾಂಗ ಯೋಗದ ಬಗ್ಗೆ ಹೇಳೋಣ ಅಂದ್ರ ದರಿದ್ರ ಮಾಫಿಯಾ ಮಂದಿ ಹೆಸರು ತರ್ತಿಯಲ್ಲೋ? - ಅಂತ ಬೈದೆ.

ಕರೀಂ ಮಳ್ಳ ಮಸಡಿ ಮಾಡಿ ನಕ್ಕ.

ರಗಡ ಖಬರ್ ಇಟ್ಟೀರಿ ಸಾಬ್ ನೀವೂ. ಅವನು ಬಾಬ್ಬಿ ಆನಂದಗೆ ಕೂಡ ಪೊಲೀಸರು ಹಿಡದು ಇನ್ಕೊಯರೀ ಮಾಡಿದ್ದರು. ಅವನು ಮಾಫಿಯಾಗೆ ಫ್ರಂಟ್ ಮ್ಯಾನ ಅಂತೆ. ಮಸ್ತ ಮಾಹಿತಿ ಇಟ್ಟೀರಿ ಸಾಬ್. ಮಾನ್ ಗಯೇ ಉಸ್ತಾದ್ - ಅಂದ. ಭಾಳ ಇಂಪ್ರೆಸ್ಸ್ ಆಗಿದ್ದ.

ಏನಂತ ತಿಳ್ಕೊಂಡಿ? ಒಂದ ಕಾಲದಾಗ ಇಂಡಿಯನ್ ಅಂಡರ್ವರ್ಲ್ಡ್ ಮ್ಯಾಲೆ ಭಾಳ ಮಾಹಿತಿ ಇತ್ತಪಾ ನನ್ನ ಕಡೆ. ಈಗ ಅವೆಲ್ಲ ಬಿಟ್ಟೇನಿ. ಏನೂ ಮಜಾ ಉಳದಿಲ್ಲ ಈಗ ಮುಂಬೈ ಅಂಡರ್ವರ್ಲ್ಡ್ ನ್ಯಾಗ. ಮೊದಲಿನ ಗತೆ ಗ್ಯಾಂಗ್ ವಾರ್, ಎನ್ಕೌಂಟರ್ ಎಲ್ಲಾ ಬಂದಾಗಿ, ಫುಲ್ ಥಂಡಾ ಆಗಿ ಬಿಟ್ಟದ - ಅಂದೆ.

ಅವರು ಯೋಗಾ ಕಲಸೋ ನಾಮದ ಗಂಡಾ ಹೆಂಡತಿ ಹೆಸರು ಏನು? ಹೇಳೋ. ನಮಗ ಗೊತ್ತಿರವರು ಏನೋ ಅಂತ ನೋಡೋಣ - ಅಂತ ಕೇಳಿದೆ.

ನೋಡಿ ಸಾಬ್. ಆ ಮೇಡಂ ಹೆಸರು 'ಆಲಮೇಲ್ ಅಂಡಾಹಾಳ್' ಅಂತೆ. ಅವ ಆದ್ಮಿ ಹೆಸರು 'ದೇಸಿ ಕಾ ಅಚಾರ್'. ಇಬ್ಬರೂ ನಿಮ್ಮದು ಪೈಕಿ ಬ್ರೆಮಿನ್ ಲೋಗ್. ಆದ್ರೆ ನಿಮ್ಮದು ಗತೆ ಅವರು ಅಡ್ಡಡ್ಡ ಬೂದಿ ರಾಖ್ ಹಚ್ಚಿಗೋಳ್ಳೋದಿಲ್ಲ ಸಾಬ್. ಉದ್ದಾಗಿ ಲಾಂಗಾಗಿ ಎರಡು ವೈಟ್ ಒಂದು ರೆಡ್ ನಾಮಾಗೆ ಹಾಕಿಕೊಂಡು ಮಸ್ತಾಗೆ ಕಾಣ್ತಾರೆ - ಅಂದ.

ಸಾಬ್ರಾ....ಅದು ಅಲುಮೇಲು ಅಂಡಾಳ್ ಮತ್ತು ದೇಸಿಕಾಚಾರ್ ಅಂತ ಹೆಸರು ಇರಬೇಕು ನೋಡ್ರಿ. ಫುಲ್ ಫಿಮೇಲ್ ಮೇಡಂ ಹೆಸರು ಆಲಮೇಲ್ ಅಂಡಾಹಾಳ್ ಅಂತ. ಪಾಪ ಅಕಿ ಗಂಡ ದೇಸಿಕಾಚಾರ್, ದೇಸಿ ಕಾ ಅಚಾರ್ ಅಂತ. ಸಾಬ್ರಾ.....ನಾವು ಹಣಿ ಮ್ಯಾಲೆ ಅಡ್ಡಡ್ಡ ಹಚ್ಚಿಗೋಳ್ಳುದು ಪರಮ ಪವಿತ್ರ ಭಸ್ಮ. ಅದು ಅಂತಾ ಇಂತಾ  ಬೂದಿ ಅಲ್ಲ. ರಾಖ್ ಅಂತ ರಾಖ್. ಮಂಗ್ಯಾನ್ ಕೆ - ಅಂತ ತಿಳಿಸಿ ಹೇಳಿದೆ.

ಓಕೆ....ಓಕೆ...ಸಾಬ್....ಮಾಫ್ ಕರೋಜಿ.....ನಮಗೆ ಅದೆಲ್ಲ ಗೊತ್ತಿಲ್ಲ ಸಾಬ್.....ಈಗ ಒಮ್ಮೆ ಹೇಳಿಕೊಟ್ಟರೆ ಸಾಕು ನಾವು ಮತ್ತೊಮ್ಮೆ ಅಂಡಾಹಾಳ್, ಮನಿಹಾಳ್, ದೇಸಿ ಕಾ ಅಚಾರ್, ವಿದೇಶಿ ಕಾ ಅಚಾರ್ ಅಂತೆಲ್ಲ ಹೇಳೋದಿಲ್ಲ ಸಾಬ್.....- ಅಂತ ಹೇಳಿ ಕರೀಂ ಮೈಲ್ಡಾಗಿ ಮಸ್ಕಾ ಹೊಡೆದ.

ಹ್ಮಂ.....ಈಗ ಹೇಳೋ ಯಾಕ ನಿನ್ನ ಯೋಗಾ ಕ್ಲಾಸಿನಿಂದ ಒದ್ದು ಓಡಿಸಿ ಬಿಟ್ಟರು ಅಂತ? - ಅಂತ ಕೇಳಿದೆ.

ಸಾಬ್....ನೋಡಿ....ಯೋಗಾ ಹೇಳಿಕೊಡೋ ಮೇಡಂ ಮಾತಿಗೊಮ್ಮೆ 'ಯೋಗಾ ಮೀನ್ಸ್ ಚಿತ್ತಾಗಿ ಒತ್ತಿ ನಿರೋಧ', 'ಯೋಗಾ ಅಂದ್ರೆ ಚಿತ್ತಾಗಿ ಒತ್ತಿ ನಿರೋಧ' ಅಂತ ಮ್ಯಾಲಿಂದ ಮ್ಯಾಲೆ ಹೇಳಿದಳು. ಅದೇನೋ ಸಂಸ್ಕೃತ ಅಂತೆ. ಅವನೇ ಪತಲೀ ಅಲಿ ಪತಂಜಲಿನೇ ಹೇಳಿದ್ದಾನಂತೆ. ಅದರ ಅರ್ಥ ಇಂಗ್ಲೀಷಿನಲ್ಲಿ ಹೇಳಿದಳು. ನಮಗೆ ತಿಳಿಲಿಲ್ಲ. ನಗು ಬಂತು. ಕಿಸಿ ಕಿಸಿ ಅಂತೆ ನಕ್ಕೆ. ನಮ್ಮ ಭಾಂಜಾ ಮೆಹಮೂದ್ ಸಹ ಬಂದಿದ್ದ ನೋಡಿ. ಅವನೂ ನಕ್ಕ. ನಾಮದ ಯೋಗಾ ಮೇಡಂ ಕೆಟ್ಟ ಮಸಡಿ ಮಾಡಿ - ಯಾಕೆ ನಗತೀರಿ - ಅಂತ ತಮಿಳ್ ಮಿಕ್ಸ್ ಕನ್ನಡದಲ್ಲಿ ಕೇಳಿದಳು. ಏನೂ ಇಲ್ಲ ಮೇಡಂ ಅಂದ್ವಿ. ಅವಳು ಮತ್ತೆ ಮತ್ತೆ 'ಯೋಗಾ ಅಂದ್ರೆ ಚಿತ್ತಾಗಿ ಒತ್ತಿ ನಿರೋಧ' ಅಂತ ಅಂದಾಗೆ ಮಾತ್ರ ತುಂಬಾ ನಗು ಬರ್ತಿತ್ತು. ಒಟ್ಟು ಮೂವತ್ತು ನಿಮಿಷದ ಯೋಗಾ ಕ್ಲಾಸಿನಲ್ಲಿ ಕಂಸೆಕಂ ಇಪ್ಪತ್ತು ಸಾರೆ ಚಿತ್ತಾಗಿ ಒತ್ತಿ ಚಿತ್ತಾಗಿ ಒತ್ತಿ ನಿರೋಧ ನಿರೋಧ ಅಂತ ಹೊಯ್ಯ್ಕೊಂಡಳು ಆಕಿ. ಅಂತೂ ಇಂತೂ ಕ್ಲಾಸ್ ಮುಗಿತು. ನಾವು ಹೊರಗೆ ಬರಬೇಕು ಅನ್ನೋದ್ರಾಗೆ ಆ ನಾಮದ ಯೋಗಾ ಟೀಚರ್ ನಮ್ಮ ಕಡೆ ಕೈ ಮಾಡಿ, ಮಿಸ್ಟರ್ ಕರೀಂಖಾನ್.....ನೀವೇ.....ಬನ್ನಿ ಇಲ್ಲೆ. ನಿಮ್ಮ ಕಡೆ ಮಾತಾಡ್ಬೇಕು....ಅಂತ ಕರೆದಳು ಸಾಬ್. ನಾವು ಅಕಿ ಕಡೆ ಹೋದ್ವಿ ಸಾಬ್ - ಅಂತ ಹೇಳಿದ ಕರೀಂ ನಿಲ್ಲಿಸಿದ.

ಸಾಬ್ರಾ.....ಮುಂದೇನಾತು ಹೇಳ್ರೀಪಾ? - ಅಂತ ಕೇಳಿದೆ.

ಮಿಸ್ಟರ್ ಕರೀಂ.....ಯಾಕೆ ನಗ್ತಾ ಇದ್ದಿರಿ? ಯಾಕೆ? ಯಾಕೆ? ಏನು ಫನ್ನಿ ಇದೆ ?ಹಾಂ....ಹಾಂ.....ಅಂತ ನಮಗೆ ಆ ಯೋಗಾ ಮೇಡಂ ಕೇಳಿದಳು ಸಾಬ್. ನಮಗೆ 'ಯೋಗಾ ಅಂದ್ರೆ ಚಿತ್ತಾಗಿ ಒತ್ತಿ ನಿರೋಧ' ಅಂತ ಅಂದ್ರೆ ಏನು ಅಂತ ತಿಳಿದಿರಲಿಲ್ಲ. ನಿಮಗೆ ನಮ್ಮದು ನೇಚರ್ ಗೊತ್ತು ಅಲ್ಲ? ನಮಗೆ ತಿಳಿದಂಗೆ ಅರ್ಥ ಮಾಡಿಕೊಂಡು ಬಿಟ್ಟಿ, ಅದನ್ನ ಹೇಳಿ, ತಪ್ಪೋ ಸರಿಯೋ ಅಂತ ಮಾಲೂಮ್ ಮಾಡ್ಕೊತ್ತೀವಿ. ಅದು ನಮ್ಮ ರೀತಿ - ಅಂದ ಕರೀಂ.

ಹ್ಞೂ....ಮುಂದ ಏನಾತೋ?

ನೋಡಿ ಮೇಡಂ.....ನೀವು ಪದೇ ಪದೇ ಯೋಗಾ ಅಂದ್ರೆ ಚಿತ್ತಾಗಿ ಒತ್ತಿ ನಿರೋಧ ಅಂದ್ರಿ ನೋಡಿ....ಅಂತ ಹೇಳಿದೆ ಸಾಬ್ - ಅಂದ ಕರೀಂ.

ಎಸ್....ಎಸ್....ಸೋ ವಾಟ್?- ಅಂತ ಕೇಳಿದಳಂತೆ ಯೋಗಾ ಮೇಡಂ.

ನೋಡಿ ಮೇಡಂ. ನೀವು "ಯೋಗಾ ಅಂದ್ರೆ ಚಿತ್ತಾಗಿ ಒತ್ತಿ ನಿರೋಧ" ಅಂತ ಅಂದ್ರಿ. ನಮಗೆ ತಿಳಿದದ್ದು ಇಷ್ಟು. ಚಿತ್ತಾಗಿ ಅಂದ್ರೆ ಸಿಕ್ಕಾಪಟ್ಟೆ ಶೆರೆ ಕುಡಿದು ಕುಡಿದು ಚಿತ್ತಾಗೋದು. ಒತ್ತಿ ಅಂದ್ರೆ ಅಷ್ಟು ಚಿತ್ತಾದ ಮೇಲೆ ಮೈಮೇಲೆ ಖಬರೇ ಇರೋದಿಲ್ಲ. ಅಂತಾದ್ರೊಳಗೆ ಏನು ಒತ್ತತೀವೋ, ಎಲ್ಲಿ ಒತ್ತತೀವೋ, ಯಾರಿಗೆ ಒತ್ತತೀವೋ ಅಂತ ನಮಗೇ ಗೊತ್ತಿರೋದಿಲ್ಲ. ಅದರ ಮ್ಯಾಲೆ ನಿರೋಧ ಬ್ಯಾರೆ. ಇದೆಲ್ಲಾ ಗಲತ್ ಕಾಮ್ ಮಾಡೋದು, ಹೊಲಸ್ ಹೊಲಸ್ ಕೆಲಸ ಮಾಡೋದು ನಿಮ್ಮ ಅರಿಷ್ಟಾಂಗ ಯೋಗಾ ಕ್ಯಾ? ಏನು ಮೇಡಂ? - ಅಂತ ಕರೀಂ ಸಾಬರು ಯೋಗಾ ಮೇಡಂಗೆ ಕೇಳಿ ಬಿಟ್ಟರಂತ.

ಯೋಗಾ ಮೇಡಂ ಅಲುಮೇಲು ಅಂಡಾಳ್ ಫುಲ್ ಶಾಕ್.

ಮಿಸ್ಟರ್ ಕರೀಂ!!!!!!!!!!!!!ಏನು? ಏನು? ವಾಟ್ ಡು ಯು ಮೀನ್? ವಾಟ್ ಕುಡಿಯೋದು? ವಾಟ್ ಒತ್ತೋದು? ಅಂಡ್ ವಾಟ್ ಇಸ್ ನಿರೋಧ? ಹಾಂ? ಹಾಂ? - ಅಂತ ಯೋಗಾ ಮೇಡಂ ಸಾಬರಿಗೆ ತಿರುಗಿ ಕೇಳಿದ್ದಾಳೆ.

ಮೇಡಂ.....ನಿರೋಧ ಅಂದ್ರೆ...ಅದು...ಅದು...ಅದೇ ನಾಕಾಣೆಗೆ ಮೂರು ಸಿಗ್ತದೆ ಮೇಡಂ. ಗೊತ್ತಿಲ್ಲ ಕ್ಯಾ? ಎಷ್ಟು ಭೋಲಿ ಹಾಂಗೆ ಏನೂ ಗೊತ್ತಿಲ್ಲ ಅನ್ನೋ ಹಾಂಗೆ ನಾಟಕ್ ಮಾಡ್ತೀರಿ ಕ್ಯಾ? ಕಳ್ಳಿ ಮೇಡಂ. ಬದ್ಮಾಶ್ ಮೇಡಂ - ಅಂತ ನಮ್ಮ ಕರೀಂ ಆ ಮೇಡಂ ಹತ್ತಿರ ಮಜಾಕ್ ಮಾಡ್ಯಾನ.

ಆ ಯೋಗಾ ಮೇಡಂಗೆ ಮೊದಲ ಕನ್ನಡ ಸರಿ ಬರೋದಿಲ್ಲ. ಹಾಪ್ ತಮಿಳ್ ಅಕಿ. ಇವ ಬ್ಯಾರೆ ಕಣ್ಣ ಹೊಡದ ಹೊಡದ - ನಿರೋಧ ಅಂದ್ರೆ ಗೊತ್ತಿಲ್ಲ ಕ್ಯಾ? ಗೊತ್ತಿಲ್ಲ ಕ್ಯಾ? -ಅಂತ ತಲಿ ತಿಂದಾನ. ಅಕಿಗೂ ತಲಿ ಕೆಟ್ಟಿರಬೇಕು. ಅದಕ್ಕ ಕೇಳಿ ಬಿಟ್ಟಾಳ.

ಮಿಸ್ಟರ್ ಕರೀಂ....ಟೆಲ್ ಮಿ ನವ್....ಐ ಸೇ ನವ್....ವಾಟ್ ಇಸ್ ನಿರೋಧ? - ಅಂತ ಯೋಗಾ ಮೇಡಂ ಚೀರ್ಯಾಳ.

ಮೇಡಂ....ಇಲ್ಲಿ ಹತ್ತಿರ ಬನ್ನಿ. ಖುಲ್ಲಂ ಖುಲ್ಲ ಹೇಳಿದರೆ, ನಮ್ಮದು ನಿಮ್ಮದು ಇಬ್ಬರದೂ ಇಜ್ಜತ್ ಮಟ್ಟಿ ಮಟ್ಟಿ ಅಂದ್ರೆ ಮಣ್ಣಲ್ಲಿ ಹೋಗಿ ಬಿಡ್ತದೆ - ಅಂತ ಕರದಾನ ನಮ್ಮ ಕರೀಂ.

ಅಕಿ ಏನೋ ಮಹತ್ವದ ಸುದ್ದಿ ಹೇಳ್ತಾನ ಅಂತ ಮಾಡಿ ಬಂದಾಳ. ಅಕಿ ಕಿವಿಯೊಳಗ ಬಾಂಬ್ ಹಾಕೇ ಬಿಟ್ಟಾನ ಕರೀಂ. ನಿರೋಧ ಅಂದ್ರ ಏನು ಅಂತ ಕರೀಮನ ಗಾವಟಿ ಭಾಷಾದಾಗ ಕೇಳಿದ ಬೇಗಂ ಎಚ್ಚರ ತಪ್ಪಿ ಬಿದ್ದು ಬಿಟ್ಟಳಂತ.

ಹೋಗ್ಗೋ ಸಾಬ್ರಾ.....ಘಾತ ಮಾಡಿ ಹಾಕಿದ್ರಲ್ಲರಿ.....ಹೋಗ್ಗೋ ನಿಮ್ಮ......ನನಗ ಮಾತಾಡ್ಲಿಕ್ಕೆ ಆಗವಲ್ಲತು -ಅಂತ ಹೊಟ್ಟಿ ಹಿಡಕೊಂಡು ನಕ್ಕೆ. ನಕ್ಕೇ ನಕ್ಕೆ. ಸುಮಾರು ಹೊತ್ತು ನಕ್ಕೆ.

ಯಾಕೆ ಸಾಬ್? "ಯೋಗಾ ಅಂದ್ರೆ ಚಿತ್ತಾಗಿ ಒತ್ತಿ ನಿರೋಧ" ಅಂತ ನಾವು ಕೇಳಿಸಿಕೊಂಡಿದ್ದರಲ್ಲಿ ತಪ್ಪು ಐತೆ ಕ್ಯಾ? ನಾವು ಹೇಳಿದ ಅರ್ಥದಲ್ಲಿ ತಪ್ಪು ಐತೆ ಕ್ಯಾ? ಹಾಂ? ಹಾಂ? - ಅಂದ ಕರೀಂ.

ಹೌದ್ರೀ ಸಾಬ್ರಾ. ಎರಡೂ ತಪ್ಪು. ಅದು "ಯೋಗಃ ಚಿತ್ತ ವೃತ್ತಿ ನಿರೋಧಃ" ಅಂತ ಪತಂಜಲಿ ಯೋಗವನ್ನು ಡಿಫೈನ್ ಮಾಡಿದ ರೀತಿ. ಅದರ ಅರ್ಥ - ಯೋಗ ಅಂದರೆ ಮನಸ್ಸಿನಲ್ಲಿ (ಚಿತ್ತದಲ್ಲಿ) ಏಳುವ ಅಲೆಗಳನ್ನು ನಿಯಂತ್ರಿಸುವದು ಅಂತ. ಆ ಚಿತ್ತ ಅಂದ್ರ ಮನಸ್ಸು. ಶೆರೆ ಕುಡದು ಟೈಟ್ ಆಗಿ  ಚಿತ್ತ್  ಆಗೋದು ಅಲ್ಲ. ಅದು ವೃತ್ತಿ. ಒತ್ತಿ ಅಲ್ಲ. ಅಂದ್ರೆ ಕೆಲಸ. ಒತ್ತೋದು ಅಲ್ಲ. ದಬಾನಾ ಅಲ್ಲ. ಮನಸ್ಸಿನಲ್ಲಿ ಏಳುವ ಅಲೆಗಳು ಅಂತ ಇಲ್ಲಿ ಅರ್ಥ. ನಿರೋಧ ಅಂದ್ರ ನೀವು ತಿಳ್ಕೊಂಡಿದ್ದು ಅಲ್ಲವೇ ಅಲ್ಲ. ನಿರೋಧಿಸುವದು. ನಿಯಂತ್ರಿಸುವದು ಅಂತ. ಒಟ್ಟಿನಲ್ಲಿ 'ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವದೇ ಯೋಗ' ಅಂತ ಪತಂಜಲಿ ಮಹಾಮುನಿಗಳು ಹೇಳಿದ್ದಾರೆ. ಅದನ್ನ ಹ್ಯಾಂಗ ಸಾಧ್ಯ ಮಾಡಿಕೊಳ್ಳೋದು ಅನ್ನೋದನ್ನ ಕಲಿಲಿಕ್ಕೆ ಎಂಟು ಅಂಗವಿರುವ ಅಷ್ಟಾಂಗ ಯೋಗ ಅನ್ನುವದನ್ನ ವಿಸ್ತಾರವಾಗಿ ತಯಾರ ಮಾಡ್ಯಾರ. ಅದರ ಬಗ್ಗೆ ಬರದಾರ. ತಿಳೀತು? - ಅಂತ ಹೇಳಿದೆ. ತಲಿ ತಲಿ ಬಡ್ಕೊಂಡೆ. ಕರೀಂ ಬಸವಣ್ಣನ ಗತೆ ತಲಿ ಕುಣಿಸಿದ.

ಓಹೋ...ಹಾಂಗೆ ಕ್ಯಾ ಸಾಬ್? ನಾವು ಫುಲ್ ತಪ್ಪು ಕೇಳಿಸ್ಕೊಂಡು, ಫುಲ್ ತಪ್ಪು ತಪ್ಪು ಅರ್ಥ ಮಾಡಿಕೊಂಡು, ಕಿಸಿ ಕಿಸಿ ನಕ್ಕು ಬಿಟ್ಟಿವಿ. ಆ ಮ್ಯಾಲೆ ಮೇಡಂ ಕೇಳಿದಾಗ ನಮಗೆ ತಿಳಿದಾಂಗೆ, ಶೆರೆ ಕುಡಿದು ಚಿತ್ತಾಗಿ, ಎಲ್ಲೆಲ್ಲೋ ಒತ್ತಿ, ಮ್ಯಾಲೆ ನಿರೋಧ ಅಂತ ಹೇಳಿದ್ರೆ, ಆ ಮೇಡಂ ಬೇಹೋಶ್ ಆಗಿ ಬೀಳೋದ್ರಲ್ಲಿ ಏನು ಆಶ್ಚರ್ಯ ಸಾಬ್? ಛೆ....ಛೆ.....- ಅಂದ ಕರೀಂ. ಅವಂಗೂ ಮಸ್ತ ನಗಿ ಬಂದಿತ್ತು.

ಅನಾಹುತದ ಮುಂದಿನ ಭಾಗ ಏನಪಾ ಕರೀಮಾ? - ಅಂತ ಕೇಳಿದೆ.

ಸಾಬ್....ಅಕಿ ಯೋಗಾ ಮೇಡಂ ಅಂಡಾಹಾಳ್ ಆಲಮೇಲ್  ಬೇಹೋಶ್ ಆಗಿ ಬಿದ್ದ ಕೂಡಲೇ ಎಲ್ಲ ಲೇಡಿ ಸ್ಟುಡೆಂಟ್ಸ ಕಿಟಾರ್ ಅಂತ ಚೀರಿಕೊಂಡರು. ಆಗ ಮಾತ್ರ ಯೋಗಾ ಸ್ಟುಡಿಯೋ ಬಿಟ್ಟು ಒಳಗೆ ವಸ್ತ್ರ ಚೇಂಜ್ ಮಾಡಲು ಹೋಗಿದ್ದ ಆಕಿ ಗಂಡ ದೇಸಿಕಾಚಾರ್ ಓಡಿ ಬಂದ. ಕೇವಲ ಹನುಮಾನ್ ಲಂಗೋಟಿ ಹಾಕಿಕೊಂಡು ಬಂದು ಬಿಟ್ಟಿದ್ದ. ಏನು ಮಾಡ್ತಾನೆ ಪಾಪ? ಕಪಡಾ ಚೇಂಜ್ ಮಾಡ್ತಾ ಇದ್ದ ಅಂತ ಅನ್ನಿಸ್ತದೆ. ನಡುವೆಯೇ ಚೀರೋದ  ಕೇಳಿ ಓಡಿ ಬಂದಾನೆ. ಅದಕ್ಕೆ ಇರಬೇಕು ಕೇವಲ ಲಂಗೋಟಿ ಹಾಕ್ಕೊಂಡು ಬಂದಿದ್ದ. ಬಂದವನೇ ಬೇಹೋಶ್ ಹೆಂಡತಿಗೆ ನೋಡಿದವನೇ ಒಳಗೆ ಓಡಿದ. ಬರೋವಾಗ ಕೈಯಲ್ಲಿ ತಾಮ್ರದ್ದು, ನಿಮ್ಮ ಋಷಿ ಮಂದಿ ಹಿಡ್ಕೊಳೋ, ಚಂಬು ತಂದ. ಅದರಲ್ಲಿಂದ ನೀರು ತೆಗೆದು ಮೇಡಂ ಮಸಡಿಗೆ ಗೊಜ್ಜಿದ. ಆವಾಗ ಅಕಿ ಪಿಳಿ ಪಿಳಿ ಅಂತ ಕಣ್ಣು ಬಿಟ್ಟಳು ಸಾಬ್ - ಅಂತ ಹೇಳಿದ ಕರೀಂ.

ಸಾಬ್ರಾ....ಅದು ಕಮಂಡಲು. ಚಂಬು ಅಲ್ಲ. ಅಂತೂ ಕಮಂಡಲದ ನೀರು ಗೊಜ್ಜಿಸಿಕೊಂಡ ಯೋಗಾ ಮೇಡಂ ಎದ್ದರು ಅಂತ ಆತು. ಮುಂದ ಏನಾತು? - ಅಂತ ಕೇಳಿದೆ.

ಮುಂದೆ ಕ್ಯಾ ಸಾಬ್? ಆ ಅಂಡಾಹಾಳ್ ಯೋಗಾ ಮೇಡಂ ಗುಸ್ಸೇಸೆ ಸೊಯ್ ಸೊಯ್ ಅಂತ ಉಸಿರು ಬಿಟ್ಟುಗೋತ್ತ ನಾನು ಏನು ಹೇಳಿದೆ ಅಂತ ಅಕಿ ಗಂಡ ಯೋಗಾ ಟೀಚರ್ ದೇಸಿ ಕಾ ಅಚಾರ್ ಗೆ ಹೇಳಿತು. ಅವನು ಸಿಟ್ಟಿನಿಂದ ನಂಗೆ ಗೆಟ್ ಔಟ್ ಅಂತ ಕೂಗಿದ. ನಾನು ಯಾಕೆ ಗುರೂಜಿ, ಏನು ತಪ್ಪು ಆಯಿತು? ನಿರೋಧ ಅಂದಿದ್ದು ತಪ್ಪಾಗಿದ್ರೆ, ಮಾಫ್ ಮಾಡ್ಬಿಟ್ಟಿ ಹೊಟ್ಟಿಯೊಳಗೆ ಹಾಕ್ಕೊಂಡು ಬಿಡ್ರೀ ಅಂತ ಹೇಳಿದೆ. ಅದಕ್ಕೆ ಅವನು ಮತ್ತೂ ರೈಸ್ ಆಗಿ, ಮತ್ತೂ ಜೋರಾಗಿ, ನಿರೋಧ ಏನು ಹೊಟ್ಟಿಯೊಳಗೆ ಹಾಕ್ಕೋ ಬೇಕೋ.....ಬೇವಕೂಫ್.....ಗೆಟ್ ಔಟ್....ಗೆಟ್ ಔಟ್ ಅಂತ ಮತ್ತೂ ಜೋರಾಗಿ ಕೂಗಿದ. ನಾವು ಅದಕ್ಕೆ, ನಿರೋಧ ಅಲ್ಲ ಗುರೂಜಿ, ನಮ್ಮದೂಕಿ ತಪ್ಪು ಹೊಟ್ಟಿಯೊಳಗ ಹಾಕೊರೀ. ನಿರೋಧ ಹೊಟ್ಟಿಗೆ ಯಾರೂ ಹಾಕ್ಕೋಳೋದಿಲ್ಲ. ಅದು ನಮಗೂ ಮಾಲೂಮ್ ಇದೆ .....ಅಂತ ಹೇಳೋಕೆ ಹೋದ್ರೆ ಅವನು ನಿಮ್ಮ ದೇವರು ಶಿವಾಜಿ ಹಾಂಗೆ ತಾಂಡವದು ಡ್ಯಾನ್ಸ್ ಶುರು ಮಾಡಿ ಬಿಟ್ಟ. ಇನ್ನೇನು ಮಾಡೋದು ಅಂತ ವಾಪಸ್ ಬಂದ್ವಿ ಸಾಬ್ - ಅಂದ ಕರೀಂ ಕಥಿ ಮುಗಿಸಿದ.

ನಮ್ಮ ಕರೀಮನ ಮಾತು ಕೇಳಿದ ದೇಸಿಕಾಚಾರಿ ತಾಂಡವ ನೃತ್ಯ ಮಾಡಿದ್ದರೊಳಗ ಏನೂ ಆಶ್ಚರ್ಯ ಇರಲಿಲ್ಲ. ಪಾಪ ಅರ್ಥ ಆಗದೆ ಇನೋಸೆಂಟ್ ಮಿಸ್ಟೇಕ್ ಮಾಡಿ ಬಿಟ್ಟಿದ್ದ ಕರೀಂ.

ಹೋಗ್ಗೋ ಸಾಬ್ರಾ....ಒಟ್ಟಿನಲ್ಲಿ ಯೋಗಾ ಮೇಡಂ, ಯೋಗಾ ಸರ್ ಇಬ್ಬರಿಗೂ ಬೀಪಿ ರೇಸ್ ಮಾಡಿಸಿ, ಬೈಸ್ಕೊಂಡು, ಕ್ಲಾಸಿನಿಂದ ಹೊರಗ ಹಾಕಿಸ್ಕೊಂಡು ಬಂದ್ರಿ ಅಂದಂಗ ಆತು. ಹೋಗ್ಲಿ ಬಿಡ್ರೀ. ನೀವು ಪತಂಜಲಿ ಪುಸ್ತಕ ಓದ್ರಿ. ನಾ ಕೊಡತೇನಿ. ನಿಮ್ಮ ಬೇಗಂ ಬೇಕಾದ್ರೆ ಆ ನಾಮಧಾರಿ ಮಂದಿ ಕಡೆ ಯೋಗಾ ಕಲ್ತು ಬರಲಿ - ಅಂತ ಹೇಳಿದೆ. ಕರೀಂ ಓಕೆ ಓಕೆ ಅಂದ.

ಮನಿಗೆ ಬಂದ ಮೇಲೆ ನಮ್ಮ ಬೇಗಂ ನಮಗೆ ಹಾಕಿಕೊಂಡು ಬೈದರು ಸಾಬ್- ಅಂತ ಹೇಳಿ ಕರೀಂ ನಿಗೂಢ ಲುಕ್ ಕೊಟ್ಟ.

ಏನಂತ ಬೈದರು ನಿಮ್ಮ ಹಾಪ್ ಬೇಗಂ? - ಅಂತ ಕೇಳಿದೆ.

ಕ್ಯಾಜಿ ಕರೀಂಖಾನ್ ಸಾಬ್.....ಎಲ್ಲಾ ಹೋಗ್ಬಿಟ್ಟಿ ಯೋಗಾ ಮೇಡಂ ಕಡೆ ಅತಿ ಚೀಪಾದ, ಅದೂ ಸರ್ಕಾರಿ ಮಾಲ್ ಆದ ನಿರೋಧ ಅಂತ ಅನ್ನೋದು ಕ್ಯಾ? ನಿಮಗೆ ಅಕಲ್ ಇಲ್ಲ ಕ್ಯಾ? ತಲಿ ಇಲ್ಲ ಕ್ಯಾ? ಯಾರಾದ್ರೂ ನಮ್ಮ ಲೆವೆಲ್ ಮಂದಿ ಅದನ್ನ ಯೂಸ್ ಮಾಡ್ತಾರೆ ಕ್ಯಾ? ನಿಮಗೆ ಅರ್ಥ ಆಗಿಲ್ಲ ಅಂದ್ರೆ  'ಯೋಗಾ ಅಂದ್ರೆ ಚಿತ್ತಾಗಿ ಒತ್ತಿ ಕೊಹಿನೂರ್, ಡ್ಯೂರೆಕ್ಸ್, ಟ್ರೋಜನ್' ಅಂತ ಒಳ್ಳೆ ಒಳ್ಳೆ ಬ್ರಾಂಡ್ ನೆನಪ ಮಾಡಿಕೊಳ್ಳಬಾರದಾಗಿತ್ತು ಕ್ಯಾ? ಪಾಪ ಯೋಗಾ ಮೇಡಂಗೆ ನಾಕಾಣೆಗೆ ಮೂರು ಸಿಗೋ ದೇಸಿ ಬ್ರಾಂಡ್ ಹೇಳಿ ಬಿಟ್ಟಿರಿ. ಅವರಿಗೆ ಗುಸ್ಸಾ ಬಂತು. ಹಾಗೆ ಮಾಡೋದು ಕ್ಯಾ? - ಅಂತ ಕರೀಮನ ದೀಡ ಪಂಡಿತ್ ಬೇಗಂ ಹೇಳಿದಳಂತ. ಇನ್ನೂ ಶಾಣ್ಯಾ ಅಕಿ. ಇಂಪೋರ್ಟೆಡ್ ಬ್ರಾಂಡ್ ಅಂತ. ದೊಡ್ಡ ಮಂಗ್ಯಾ ಅಕಿ ಬೇಗಂ.

ಹೋಗ್ಗೋ ಸಾಬ್ರಾ.....ಪುಣ್ಯಕ್ಕ ನನ್ನ ಕಡೆ ಮೊದಲು ಅರ್ಥ ಕೇಳಿಕೊಂಡು ಒಳ್ಳೇದ ಮಾಡಿಕೊಂಡ್ರಿ. ಇಲ್ಲಾಂದ್ರ ಕೊಹಿನೂರ್, ಡ್ಯೂರೆಕ್ಸ್, ಟ್ರೋಜನ್ ಅಂತ ಇನ್ನೂ ಕೆಟ್ಟ ಕೆಟ್ಟಾಗಿ ವಿದೇಶಿ ಅಸಡ್ಡಾಳ ಹೆಸರೆಲ್ಲಾ ಹೇಳಿ ಏನೇನು ಅನಾಹುತ ಮಾಡಿಕೊಂಡು ಬರ್ತಿದ್ದರೋ ಏನೋ? ಹೌದಿಲ್ಲೋ? - ಅಂತ ಕೇಳಿದೆ.

ಹೌದು...ಸಾಬ್....ಏಕ್ದಂ ಬರೋಬ್ಬರ್ ಸಾಬ್ ನೀವು ಹೇಳಿದ್ದು. ನಿಮ್ಮ ಕಡೆ ಕೇಳಿದ್ದು ಚೊಲೋ ಆಯಿತು. ನಾನು ಬರ್ತೇನಿ ಸಾಬ್. ಖುದಾ ಹಾಫಿಜ್. ಪತಲೀ ಅಲಿ....ಅಲ್ಲಲ್ಲ....ಪತಂಜಲಿ ಪುಸ್ತಕ ತೆಗೆದು ಇಟ್ಟಿರೀ. ಓಕೆ? - ಅಂತ ಹೇಳಿ ಕರೀಂ ಹೋದ.

ನಾನೂ ವಾಪಾಸ್ ಬಂದೆ. 

ಬಂದು ಪ್ರಭವಾನಂದರು ಬರೆದ ಪುಸ್ತಕ ತೆಗೆದು ತಿರುಗಿಸಿದರ ಯಾವ ಸೂತ್ರ ಎದ್ದು ಬರಬೇಕು? ಅದ - ಯೋಗಃ ಚಿತ್ತ ವೃತ್ತಿ ನಿರೋಧಃ.

ಟೀವಿ ಹಚ್ಚಿದ್ರ.......ಯಪ್ಪಾ.......ಪೂಜಾ ಬೇಡಿ, ಮಾರ್ಕ್ ರಾಬಿನ್ಸನ್ ಇದ್ದ 'ಕಾಮಸೂತ್ರ' ದ ಜಾಹೀರಾತು. ಚಿಟ್ಟನೆ ಚೀರಿ ಟಿವಿ ಬಂದು ಮಾಡಿದೆ.

ಪುಸ್ತಕ ಘಟ್ಟಿಯಾಗಿ ಹಿಡಕೊಂಡೆ.

** ಸ್ವಾಮಿ ಪ್ರಭವಾನಂದರು ಬರೆದ ಅತ್ಯುತ್ತಮ ಪುಸ್ತಕ. ಪತಂಜಲಿಯ ಯೋಗ ಸೂತ್ರಗಳ ಇಂಗ್ಲಿಷ್ ಅನುವಾದ ಮತ್ತು ವಿವರಣೆ. How to Know God: The Yoga Aphorisms of Patanjali

** ಯೋಗಃ ಚಿತ್ತ ವೃತ್ತಿ ನಿರೋಧಃ

** ಪತಲೀ ಗಲಿ - ಮುಂಬೈ ಭಾಷೆ. ಹಿಂದಿನ ಬಾಗಿಲು, ರೋಡು. ಪತಲೀ ಗಲಿ ಸೆ ಭಾಗ್ ಗಯಾ ಸಾಲಾ.

Monday, September 10, 2012

ಸಂಕಟ ಬಂದಾಗ 'ಮಾತ್ರ' ಬರುವ ವೆಂಕಟರಮಣಗಳು

'ಸಂಕಟ ಬಂದಾಗ ವೆಂಕಟರಮಣ' ಅಂತ ಒಂದು ಮಾತಿದೆ. ಅಂದ್ರೆ ನಮಗೆ ತೊಂದರೆ ತಾಪತ್ರಯ ಬಂದಾಗ ಮಾತ್ರ ಸಹಾಯ ಮಾಡುವ ಜನರ ನೆನಪಾಗುತ್ತದೆ. ಇಲ್ಲಿ ವೆಂಕಟರಮಣ ದೇವರೇ ಆಗಬಹುದು ಅಥವಾ ನಮ್ಮನ್ನು ಸಂಕಟದಿಂದ ಪಾರು ಮಾಡುವ ಗೆಳೆಯರೋ,ಬಂಧುಗಳೋ ಕೂಡ ಆಗಬಹುದು.

ಆದ್ರೆ ಇನ್ನೊಂದು ವರೈಟಿ ಜನ ಕೂಡ ಇರುತ್ತಾರೆ. ಅವರೇ.........ಸಂಕಟ ಬಂದಾಗ 'ಮಾತ್ರ' ಬರುವ ವೆಂಕಟರಮಣಗಳು.

ನಿಮಗೆ ಏನಾದರು ಒಳ್ಳೇದಾಯಿತು ಅಂದುಕೊಳ್ಳಿ. ಪ್ರಮೋಶನ್ ಸಿಕ್ಕಿರಬಹುದು. ಯಾವದೋ ದೊಡ್ಡ ಪರೀಕ್ಷೆ ಪಾಸ್ ಮಾಡಿರಬಹುದು. ಹೀಗೆ ಏನೋ ಒಳ್ಳೆಯದು ಇರಬಹುದು. ನಿಮ್ಮ ಖುಷಿಯನ್ನು ಹಂಚಿಕೊಳ್ಳೋಣ ಅಂತ ನೋಡಿದರೆ ಇವರು ಪತ್ತೆ ಇರೋದಿಲ್ಲ. ಹಾಗಂತ ಅವರು ಕೆಟ್ಟವರಲ್ಲ. ನಿಮ್ಮ ಮೇಲೆ, ನಿಮ್ಮ ಸಾಧನೆಗಳ ಬಗ್ಗೆ ಅವರಿಗೆ ಅಸೂಯೆ ಅಂತ ಏನೂ ಇರುವದಿಲ್ಲ. ಅಸೂಯೆ ಮಂದಿ ಅವರಲ್ಲ. ಬೇರೆಯೇ ಟೈಪಿನ ಜನ ಅವರು.

ಇನ್ನು ನಿಮಗೆ ಏನಾದರು ತೊಂದರೆ ಆಯಿತೆಂದರೆ ಈ ಟೈಪಿನ ಜನ ಬಂದೇ ಬಿಡುತ್ತಾರೆ. ಅದೂ ಸಿಕ್ಕಾಪಟ್ಟೆ ಉತ್ಸಾಹದಿಂದ. 

ನಿಮಗೆ ತೊಂದರೆ ಬರುವದನ್ನೇ ಕಾಯುತ್ತಿದ್ದೆ. ನಿಮ್ಮ ತೊಂದರೆಯಲ್ಲಿ ಭಾಗಿಯಾಗಿ, ನಿಮ್ಮ ದುಃಖ ಹಂಚಿಗೊಂಡು, ನಿಮಗೆ ಸಹಾಯ ಮಾಡುವದೇ ನಮ್ಮ ಭಾಗ್ಯ - ಅನ್ನುವ ಭಾವನೆ ಕೊಡುತ್ತಾರೆ. 

ಒಳ್ಳೆಯದೇ. ಸಹಾಯ ಮಾಡುವ ಜನ ಬೇಕು. ಆದರೆ............

ಏನು ಆದರೆ?

ಆದರೆ ಇವರ ಕಾಟ ಒಂದು ಅಂದರೆ ನಿಮಗೆ ತುಂಬಾ ಸೆಲ್ಫ್ ಪಿಟಿ (self-pity) ತಂದು ಇಟ್ಟು ಬಿಡುತ್ತಾರೆ. ನಿಮಗೆ ನಿಮ್ಮ ಆ ಟೈಮ್ ನ ತೊಂದರೆಗಿಂತ ಈ ಮಂದಿಯನ್ನು ಸಹಿಸಿಕೊಳ್ಳುವದೇ ಕಷ್ಟ ಎನ್ನಿಸುತ್ತದೆ. ಬಿಸಿ ತುಪ್ಪ. ತಿನ್ನುವ ಹಾಗಿಲ್ಲ. ಉಗಳುವ ಹಾಗಿಲ್ಲ.

ಏನೇನೋ ಮಾತಾಡುತ್ತಾರೆ. ನಿಮಗೆ ಸಹಾಯ ಮಾಡುತ್ತ ಮಾಡುತ್ತಲೇ ಏನೇನೋ ಹೇಳುತ್ತಿರುತ್ತಾರೆ.

ಉದಾಹರಣೆಗೆ ಅವರ ಮಾತಿನ ಧಾಟಿ ಹೀಗೆ ಇರುತ್ತದೆ. 

ನಿಮ್ಮ ಕರ್ಮ ನೋಡಿ? ಈ ತರಹದ ಕರ್ಮ ಇಟ್ಟುಗೊಂಡು ಅದೆಂಗೆ ಜೀವನ ಮಾಡ್ತೀರೋ? ನನಗೆ ಪಾಪ ಅನ್ನಿಸುತ್ತದೆ. ನಿಮ್ಮ ಕರ್ಮದ ಫಲ ಯಾವಾಗ ಮುಗಿಯುತ್ತದೆಯೋ? ಯಾಕೆ ಬೇಕಾಗಿತ್ತು ಇದೆಲ್ಲ? ಒಳ್ಳೆ ಜಾಬ್ ಇತ್ತು. ಬೆಟರ್ ಆಫರ್ ಅಂತ ಬಿಟ್ಟು ಬಂದಿರಿ. ಈಗ ನೋಡಿ ಕೆಲಸ ಹೋಯಿತು. ಮುಂದೆ ಜಾಬ್ ಸಿಗುತ್ತದೆಯೋ ಇಲ್ಲವೋ? ಈಗ ಜ್ವರ ಬೇರೆ ಬಂದಿದೆ. ಏಳಿ. ಸ್ವಲ್ಪ ಬಿಸಿ ಬಿಸಿ ಊಟ ಮಾಡಿ. ನಿಮಗೇ ಅಂತನೇ ಫ್ರೆಶ್ ಆಗಿ ಅಡಿಗೆ ಮಾಡಿಕೊಂಡು ಬಂದಿದ್ದೇನೆ. ಏನೂ ಸಂಕೋಚ ಇಲ್ಲದೆ ಕೇಳಿ. ನಿಮ್ಮ ಕರ್ಮ. ಪ್ರಾರಬ್ಧ ಕರ್ಮ. ಏನು ಮಾಡೋದು?

ಈ ತರಹ ಅವರ ಮಾತಿನ ಧಾಟಿ. ಈ ತರಹ ಮಾತಾಡುತ್ತಿರುವವರಿಗೆ  ತಮ್ಮ ಮಾತಿನಿಂದ ನಿಮಗೆ ಯಾವ ರೀತಿ ಅನ್ನಿಸುತ್ತಿರಬಹುದು ಅನ್ನುವ ಖಬರೇ ಇರುವದಿಲ್ಲ. 

ಹೆಲ್ಪ್ ಮಾಡುತ್ತಿದ್ದೇವೆ. ಟೈಮ್ ಪಾಸ್ ಗೆ ಮಾತು - ಅನ್ನುವ ರೀತಿಯಲ್ಲಿ ಅವರ ವರ್ತನೆ.

ನಮಗೋ ಅವರನ್ನು ಕೊಲ್ಲುವಷ್ಟು ಸಿಟ್ಟು ಬರುತ್ತಿರುತ್ತದೆ. ಆದ್ರೆ ಅವರ ಸಹಾಯವೂ ಬೇಕಾಗಿರುತ್ತದೆ. ಏನು ಮಾಡುವದು?

ಸ್ವಲ್ಪ ದೂರಾಲೋಚನೆ ಇದ್ದರೆ, ಈ ತರಹದ ಜನರನ್ನು ನಿಮ್ಮ ಸರ್ಕಲ್ಲಿನಿಂದ ನಿಧಾನವಾಗಿ ಹೊರಗೆ ಹಾಕಲು ಆರಂಭಿಸಿ. ಯಾಕೆಂದ್ರೆ ಈ ತರಹದ ಜನ ಕನಸುಗಳನ್ನೇ ಕೊಂದು ಬಿಡುವ ಪೈಕಿ. 

ನೀವು ಬೇಕಾದ್ರೆ ಸೂಕ್ಷ್ಮವಾಗಿ ಗಮನಿಸಿ ನೋಡಿ. ಈ ತರಹದ ಜನ ತಮ್ಮ ಕನಸುಗಳನ್ನು ಎಂದೋ ಕೊಂದು ಒಗೆದಿರುತ್ತಾರೆ. ಅದರ ಬಗ್ಗೆ ಒಂದು ತರಹದ ಖಿನ್ನತೆ ಅವರಿಗೆ ಇರುತ್ತದೆ. ಅದಕ್ಕೇ ಇವರು ಎಂದೂ ಯಾರದ್ದೇ ಆಗಲಿ ಶ್ರೇಯಸ್ಸಿನಲ್ಲಿ ಭಾಗವಹಿಸುವದಿಲ್ಲ. ಆದ್ರೆ ಎಲ್ಲಾದರು ಒಂದು ಕನಸಿಗೆ ಚಿಕ್ಕ ಪ್ರಮಾಣದ ಹೊಡೆತ ಬಿತ್ತು ಅಂತ ಗೊತ್ತಾದರೂ ಸಾಕು. ಸ್ವಲ್ಪ ಗಾಯಗೊಂಡ ಕನಸನ್ನು ಪೂರ್ತಿಯಾಗಿ ಕೊಂದು, ತಿಥಿ ಮಾಡಲಿಲ್ಲ ಅಂದರೆ ಅವರಿಗೆ ಸಮಾಧಾನವಿಲ್ಲ. ಕನಸುಗಳ ಕೊಲೆಗಾರರು ಇವರು.

ಓಕೆ. ಈಗ ತೊಂದರೆಯಲ್ಲಿ ಇದ್ದೀರಿ. ನಿಮಗೆ ಈ ತರಹದ ಜನ ಸಹಾಯ ಮಾಡುತ್ತಿದ್ದಾರೆ. ಅವರು ಹೋದ ನಂತರ ಹೇಗೆ ಅನ್ನಿಸುತ್ತದೆ ನಿಮಗೆ? ಒಂದು ತರಹದ ಅಂತಃಸತ್ವವನ್ನೇ ಹೀರಿದ ಫೀಲಿಂಗ್ ಬಂದ್ರೆ ಆಶ್ಚರ್ಯವಿಲ್ಲ. ದೊಡ್ಡ ಪ್ರಮಾಣದ ಗಿಲ್ಟಿ ಫೀಲಿಂಗ್, ವಿಷಣ್ಣತೆ, ಖಿನ್ನತೆ ಬಿಟ್ಟು ಹೋಗಿರುತ್ತಾರೆ. ಇದು ಬೇಕಾ? ನೀವೇ ಡಿಸೈಡ್ ಮಾಡಬೇಕು.

ತೋಷಾ  ಸಿಲ್ವರ್ ಎಂಬವರು ಒಂದು ತುಂಬ ಒಳ್ಳೆಯ ಪುಸ್ತಕ ಬರೆದಿದ್ದಾರೆ. ಪುಸ್ತಕದ ಹೆಸರು - Outrageous Openness: Letting the Divine Take the Lead

ಅದರಲ್ಲಿ ಒಂದು ಚಾಪ್ಟರ್ ಈ ತರಹದ ಜನರ ಮೇಲಿದೆ. ಆ ಚಾಪ್ಟರ್ ಶುರು ಆಗುವದೇ ಒಂದು ಅತಿ ಉತ್ತಮ ಹೇಳಿಕೆಯಿಂದ -
People who have let go of their dreams are sometimes eager to help you bury your own. 

ಸತ್ಯವಾದ ಮಾತು.

ಈ ತರಹದ ಜನಗಳು ಸ್ನೇಹಿತರೋ, ದೂರದ ಬಂಧುಗಳೋ ಆದ್ರೆ ಹೇಗೋ ಮಾಡಿ ಕಳಚಿಕೊಳ್ಳಬಹುದು. ಅತಿ ಹತ್ತಿರದವರೇ ಆದರೆ ಏನು ಮಾಡುವದು? ಮಿಡಲ್ ಕ್ಲಾಸ್ ಮೆಂಟಾಲಿಟಿ ಕೂಡ ಒಂದು ತರಹದ ಕನಸುಗಳ ಕೊಲೆಗಾರನೇ. ಎಷ್ಟೋ ಸಲ ಕುಟುಂಬದವರೇ - ಸಾಕು ಬಿಡು. ಇದ್ದುದರಲ್ಲಿಯೇ ಸಂತೋಷಪಡು - ಅಂದು ಬಿಟ್ಟಿರುತ್ತಾರೆ. ಆಕಸ್ಮಾತ ಎಲ್ಲೋ ಒಂದು ಕಡೆ ಚಿಕ್ಕ ಮಟ್ಟಿನ ಸೋಲಾದರೂ ಅದನ್ನೇ ಎತ್ತಿ ಎತ್ತಿ ಮಾತಾಡುತ್ತಿರುತ್ತಾರೆ. ಕುಟುಂಬದ ಜನ ಆದ್ದರಿಂದ ಏನೂ  ಮಾಡಲು ಬರುವದಿಲ್ಲ. ಅವರ ಜೊತೆ ಹೇಗೋ ಮಾಡಿ ಹೊಂದಿಕೊಂಡು ಹೋಗಬೇಕಾಗುತ್ತದೆ. ತಿಳಿಸಿ ಹೇಳುವ ಪ್ರಯತ್ನ ಮಾಡಬಹುದು. ಎಷ್ಟು ಉಪಯೋಗವಾಗುವದೋ ಗೊತ್ತಿಲ್ಲ.

ವೈಯಕ್ತಿಕ ನೆಲೆಯಲ್ಲಿ ಈ ತರಹದ ಜನರನ್ನು  ನಯವಾಗಿ ಹೊರಗೆ ಹಾಕಿದ್ದು ತುಂಬ ಒಳ್ಳೆಯದೇ ಆಗಿದೆ. ದೋಸ್ತಿ ಉಳಿದಿದೆ. ಆದರೆ ಸಹಾಯ ಮಾಡುವ ಸೋಗಲ್ಲಿ ತಲೆತಿಂದು ಹೋಗುವದು ಬಂದಾಗಿದೆ. ಅದೇ ರೀತಿ ಅವರು ಹೋದ ನಂತರ ಆವರಿಸುವ ಒಂದು ತರಹದ ಪೂರ್ತಿ ಸುಸ್ತಾದ ಫೀಲಿಂಗ್ ಸಹಿತ ಹೋಗಿದೆ.

ಅದರ ಹಿಂದಿನ ಥೇರಿ ಗೊತ್ತಿರಲಿಲ್ಲ. ಯಾಕೆ ಹೀಗಾಗುತ್ತದೆ ಅಂತ ತಿಳಿದಿರಲಿಲ್ಲ.

ತೋಷಾ ಸಿಲ್ವರ್ ಅವರ ಪುಸ್ತಕ ಓದಿದಾಗ "ಆಹಾ! ಇದೇ ನೋಡಿ ಪಾಯಿಂಟ್ " ಅನ್ನುವ ರೀತಿಯಲ್ಲಿ ಒಮ್ಮೆಲೇ ಫ್ಲಾಶ್ ಆಯಿತು.

ತುಂಬ ಒಳ್ಳೆಯ ಪುಸ್ತಕ. ಓದಿ. ಈ ತರಹದ ಬಹಳ "help yourself" ಟಿಪ್ಸ್ ಇವೆ. ನನಗಂತೂ ತುಂಬಾ ಇಷ್ಟವಾಯಿತು.

Wednesday, September 05, 2012

ಮಂಗಾವತರಣಂ ವಸ್ತ್ರಾಪಹರಣಂ

ಕರೀಂ ಸಿಕ್ಕಿದ್ದ.

ನೋಡಿದರೂ ನೋಡದವರಾಂಗ ಮಾಡಿ ಮಾರಿ ತಿರಿಸ್ಕೊಂಡು ಓಡಿ ಹೊಂಟಿದ್ದ.

ಬಿಡ್ತೇನಿ ಏನು? ಹಿಡದೆ. ನಿಲ್ಲಿಸಿದೆ.

ಯಾಕೋ.....ಕರೀಂ? ಮಾರಿ ಆ ಕಡೆ ಹಾಕ್ಕೊಂಡು ಹೊಂಟಿ? ಯಾಕ.....ಮಾತಾಡೋ ಇಂಟರೆಸ್ಟ್ ಇಲ್ಲೇನು? ಬಿಜಿ ಇದ್ದರ ಹೇಳೋ. ನಾ ಏನ ನಿನ್ನ ಹಿಡಕೊಂಡು ಕೂಡಂಗಿಲ್ಲ. ಅರ್ಜೆಂಟ್ ಅದ ಏನು? - ಅಂತ ಕೇಳಿದೆ.

ಅಯ್ಯೋ ಇಲ್ಲಾ ಸಾಬ್. ಗೊತ್ತಿದ್ದ ಮಂದಿಗೆ ಮಾರಿ ತೋರ್ಸೋ ಹಾಗೆ ಇಲ್ಲ. ಆ ಕಂಡೀಶನ್ ಗೆ ತಂದು ನಿಲ್ಲಿಸಿದಾಳೆ ಬೇಗಂ. ಮಾರಿಗೆ ಮುಸುಕು ಹಾಕೋದು ಬಾಕಿ ಇನ್ನು. ನಿಮಗೂ ಗೊತ್ತಿರಬಹುದು ಅಂತ ತಿಳ್ದೆ. ನಿಮಗೆ ಗೊತ್ತಿಲ್ಲ ಕ್ಯಾ? ನೀವು ಇಂಟರ್ನೆಟ್, ಫೇಸ್ಬುಕ್ ಮೇಲೆ ಹೋಗೋದಿಲ್ಲ ಕ್ಯಾ? - ಅಂತ ಕೇಳಿದ.

ಏನಾತೋ? ಈ ಸಲ ಏನು ಮಾಡಿದಳು? ಹೋದ ಸಾರೆ ವಿಗ್ಗ್ ಹಾಕ್ಸಿದ್ದಳು. ಮತ್ತ ನಾನು ಬರೇ ಓದೋದು, ಬರೆಯೋದು ಮಾತ್ರ ನೋಡಪಾ. ಈ ಹಾಳುವರಿ ಇಂಟರ್ನೆಟ್, ಫೇಸ್ಬುಕ್ ಎಲ್ಲಾ ಕಡಿಮಿ ಮಾಡಿ ಬಿಟ್ಟೇನಿ. ಟೀವಿ ಅಂತೂ ಇಲ್ಲೇ ಇಲ್ಲ. ಹಾಂಗಾಗಿ ನೀನು ನಿನ್ನ ಬೇಗಂ ಏನಾರಾ ಇಂಟರ್ನೆಟ್  ಮೇಲೆ ಗುದಮುರಗಿ ಹಾಕ್ಕೊಂಡಿದ್ದರ ನನಗ ಗೊತ್ತಿರೋದಿಲ್ಲ. ತಿಳಿತ? - ಅಂದೆ.

ಹಾಗೆ ಕ್ಯಾ? ನೀವು ಭಾರಿ ಶಾಣ್ಯಾ ನೋಡಿ. ಒಳ್ಳೆ ಒಳ್ಳೆ ಪುಸ್ತಕ ಓದಿ, ಮಸ್ತ ಬರೆದು, ಒಳ್ಳೆ ರೀತಿಯಲ್ಲಿ ಟೈಮ್ ಯೂಸ್ ಮಾಡ್ತೀರಿ. ನಿಮಗೆ ಗೊತ್ತಿಲ್ಲ ಕ್ಯಾ? ನಮ್ಮದು ಒಂದು ನಂಗಾ ಪಂಗಾ ತಸ್ವೀರ್ ಇಂಟರ್ನೆಟ್ ಮೇಲೆ ಬಂದು ಬಿಟ್ಟಿದೆ. ಅದೇ ಪ್ರಾಬ್ಲೆಮ್ ಸಾಬ್. ಎಲ್ಲಾರೂ ನೋಡಿ, ಅಂಡು ತಟ್ಟಿ ನಕ್ಕು, ಬೇರೆಯವರಿಗೆ ಫಾರ್ವರ್ಡ್ ಮಾಡಿ ಮಾಡಿ, ಎಲ್ಲರೂ ನೋಡಿಬಿಟ್ಟು, ನಮಗೆ ನೋಡಿದ ಕೂಡಲೇ ಕಿಸಿಕಿಸಿ ನಗ್ತಾರೆ ಸಾಬ್. ಏನು ಮಾಡೋದು ಸಾಬ್? ಎಲ್ಲಾ ಬೇಗಂ ಕಿತಬಿ - ಅಂತ ಅತ್ತುಕೊಂಡ.

ಹೋಗ್ಗೋ....ಸಾಬ್ರಾ! ಏನ್ರೀ ಇದು? ನಿಮ್ಮ ನಗ್ನ ಚಿತ್ರ ಇಂಟರ್ನೆಟ್ ನ್ಯಾಗ ಬಂದು ಬಿಡ್ತ? ಛೆ....ಛೆ.....ಇದು ಕೆಟ್ಟ ಅಸಹ್ಯ. ಏನು ಮಾಡಲಿಕ್ಕೆ ಹೋಗಿದ್ರಿ? ಫುಲ್ ಕಥಿ ಹೇಳ್ರಿ - ಅಂದೆ.

ಅಯ್ಯೋ.....ಅದು ದೊಡ್ಡ ಕಥಿ ಸಾಬ್? ಏನು ಹೇಳೋದು? - ಅಂತ ರಾಗ ಎಳೆದ ಕರೀಂ.

ಗೊತ್ತಾತ ಬಿಡ್ರೀ. ಬೆಡ್ರೂಮ್ ನ್ಯಾಗ ಕ್ಯಾಮೆರಾ ಇಟ್ಟಗೊಂಡು, ಆನ್ ಮಾಡಿ ಮಲ್ಕೊಂಡಬಿಟ್ಟೀರಿ. ಎಲ್ಲಾ ರೆಕಾರ್ಡ್ ಆಗಿ ಬಿಟ್ಟದ. ನಂತರ ಕಂಪ್ಯೂಟರ್ ಗೆ ಕನೆಕ್ಟ್ ಮಾಡಿದಾಗ ಏನೋ ಆಗಿ ಎಲ್ಲಾ ಇಂಟರ್ನೆಟ್ ಗೆ ಅಪ್ಲೋಡ್ ಆಗಿ ಬಿಟ್ಟಿರಬೇಕು. ಅಲ್ಲ? - ಅಂತ ಕೇಳಿದೆ.

ಭಾಳ ನಂಗಾ ಪಂಗಾ ತಸ್ವೀರ್ ಇಂಟರ್ನೆಟ್ ಮ್ಯಾಲೆ ಬರೋದು ಹೀಂಗ. ಅದಕ್ಕ ಕೇಳಿದೆ. ಈಗೆಲ್ಲಾ ಚೀಪ್ ಮತ್ತು ಸಸಾರ ಡಿಜಿಟಲ್ ಕ್ಯಾಮೆರಾ, ವಿಡಿಯೋ ಎಲ್ಲಾ ಬಂದು, ಮಂದಿ ಮಾಡಬಾರದ್ದೆಲ್ಲಾ ರೆಕಾರ್ಡ್ ಮಾಡಿ, ಈರೇಸ್ ಮಾಡೇವಿ ಅಂತ ಅಂದುಕೊಂಡು, ಅದು ಈರೇಸ್ ಆಗದ, ಎಲ್ಲೆಲ್ಲೋ ಅಪ್ಲೋಡ್ ಆಗಿ, ಇಂಟರ್ನೆಟ್ ತುಂಬಾ ಪುಕ್ಕಟ ನಂಗಾ ಪಂಗಾ ತಸ್ವೀರ್.

ಇಲ್ಲಾ ಸಾಬ್..... ಅದು ಏನು ಆಯ್ತು ಅಂದ್ರೆ........ನಿಮಗೆ ಗೊತ್ತು ಅಲ್ಲಾ......? ನಮ್ಮ ಬೇಗಂಗೆ ಫೇಸ್ಬುಕ್ ಹುಚ್ಚು. ನಿಮಗೆ ಗೊತ್ತೇ ಅದೇ. ಅದೇನೋ ಅವತ್ತು ಆಕಿಗೆ ಅಕಿ ಮಾಜಿ ಡೌ ಕೃಷ್ಣಾ ಇಲ್ಲಾ, ಅವನ ಜೊತಿ ಇಂಟರ್ನೆಟ್ ಮ್ಯಾಲೆ ರಾಧಾ ಕೃಷ್ಣಾ ಸರಸ ಸಲ್ಲಾಪ ಆಡೋ ಹುಚ್ಚು ಮೂಡು ಬಂತು. ಅದರಿಂದಾಗಿ ನಮ್ಮ ನಂಗಾ ತಸ್ವೀರ್ ಇಂಟರ್ನೆಟ್ ಮೇಲೆ ಬಂತು. ಕ್ಯಾ ಮುಸೀಬತ್ ಸಾಬ್?! - ಅಂತ ಅಂದು ನಿಲ್ಲಿಸಿದ ಕರೀಂ.

ಏನ್ರೀ.....ಹೀಂಗ ಅಂದ್ರ? ರಾಧಾ ಯಾರು? ಕೃಷ್ಣ ಯಾರು? ಇಂಟರ್ನೆಟ್ ಮ್ಯಾಲೆ ಸರಸ ಸಲ್ಲಾಪ ಹ್ಯಾಂಗ? ಏನು ಕಥಿ? ಹಾಂ? ಹಾಂ? - ಅಂತ ಕೇಳಿದೆ.

ತಲಿ ಬಗ್ಗಡ ಆಗಿತ್ತು.

ನೋಡಿ ಸಾಬ್.....ಅವನು ಯಾರೋ ಹಲ್ಕಟ್ ಆಶಿಕ್ ಅಲ್ಲೆಲ್ಲೋ ದೂರ ಕೂತು ಇಂಟರ್ನೆಟ್ ಮ್ಯಾಲೆ ಬಾಸುರೀ (ಕೊಳಲು) ಬಾರಿಸ್ತಾನಂತೆ, ನಮ್ಮ ಬೇಗಂ ಇಲ್ಲಿ ಸ್ವಿಮಿಂಗ್ ಪೂಲಿನಲ್ಲಿ ಆ ಮ್ಯೂಜಿಕ್ ಗೆ ಸ್ವಿಮ್ಮಿಂಗ್ ಮಾಡ್ತಾಳಂತೆ. ಒಂದೇ ಡಿಫರನ್ಸ್ ಅಂದ್ರೆ ಕಪಡೆ ಹೋಗಿ ಗಿಡದ ಮ್ಯಾಲೆ ಕೂಡೋದಿಲ್ಲ. ಅಷ್ಟೇ. ಅಕಿ ಮತ್ತೆ ಅಕಿ ಡೌ ಇಬ್ಬರೂ ಕೂಡಿ ಡೇಟ್ ಫಿಕ್ಸ್ ಮಾಡ್ಬಿಟ್ಟಿ ರೆಡಿ ಆದ್ರು. ಮುಂದೆ ಆದದ್ದೇ ದೊಡ್ಡ ಕಿತಾಪತಿ. ಅದರಿಂದ ನಮಗೆ ನಂಗಾಪನ್ ಬಂತು ಸಾಬ್!!!! - ಅಂತ ಹೇಳಿ ನಿಲ್ಲಿಸಿದ ಕರೀಂ.

ಹಾಂ? ಏನೋ ಭಾರಿ ಸುದ್ದಿ ಅದನಲ್ಲೋ ಇದು? ಎಲ್ಲೆ ಸ್ವಿಮ್ಮಿಂಗ್ ಹೊಡಿಲಿಕ್ಕೆ ಹೋಗಿದ್ದಳು ನಿಮ್ಮ ಬೇಗಂ? ಅಲ್ಲೆ DC ಕಂಪೌಂಡ್ ಕೆಳಗ ಇರೊ ಮುನ್ಸಿಪಾಲಿಟಿ ಪೂಲಿಗೆ ಹೋಗಿದ್ದಳು ಏನು? ಏ.....ಇವನ.....ನೋಡ್ಕೋ ಮತ್ತ.....ಆ ಪೂಲಿನ್ಯಾಗ ಸ್ವಿಮ್ ಮಾಡಿ ಬಂದ್ರ ಗಜಕರ್ಣ, ಇಸಬು ಮತ್ತೊಂದು ಅಂತ ಚರ್ಮರೋಗ ಬರ್ತಾವು. ಆ ಮ್ಯಾಲೆ ಜಿಂದಗೀ ಪೂರ 'ಸಪಟ್' ಮುಲಾಮೋ, ಹರ್ಬಾಲ ಮುಲಾಮೋ ಹಚ್ಚಿಗೋತ್ತ ಕೂಡಬೇಕಾದೀತು. ನೆನಪ ಇಟ್ಟಿರು ಅಂತ ಹೇಳು ಅಕಿಗೆ - ಅಂತ ನನಗ ತಿಳಿದ ವಾರ್ನಿಂಗ್ ಕೊಟ್ಟೆ.

ಧಾರವಾಡದ ಪಬ್ಲಿಕ್ ಸ್ವಿಮಿಂಗ್ ಪೂಲ ಅಂದ್ರ......ರಾಮಾ.....ನಾ ಹೇಳಲಾರೆ!!! ಅಷ್ಟು ಕೊಳಕ್ ರಾಡಿ!

ಇಲ್ಲಾ ಸಾಬ್. ನಿಮಗೆ ಗೊತ್ತಿಲ್ಲ ಕ್ಯಾ? ನಮ್ಮದು ವಾಡೆದು ಒಳಗೆ ಒಂದು ಸ್ವಿಮಿಂಗ್ ಪೂಲ್ ಇದೆ - ಅಂತ ಹೊಸಾ ಸುದ್ದಿ ಹೇಳಿಬಿಟ್ಟ ಕರೀಂ.

ಹಾಂ!!! ಏನು? ನಿಮ್ಮ ವಾಡೆಯೊಳಗ ಸ್ವಿಮಿಂಗ್ ಪೂಲಾ? ಯಾವಾಗ ಬಂತೋ? ಮಸ್ತ ರಾಜಾ ಆದ್ಮಿ ಬಿಡಪಾ ನೀ. ಸವಣೂರ ನವಾಬರ ವಂಶದವರು ಹ್ಯಾಂಗ ಇರಬೇಕು ಹಾಂಗ ಮಸ್ತ ಲಕ್ಸುರಿ ಜೀವನ ನಿಂದು - ಅಂತ ಕಾಂಪ್ಲಿಮೆಂಟ್ ಕೊಟ್ಟೆ.

ಸಾಬ್.....ನಮ್ಮದು ವಾಡೆ ಹಿಂದೆ ಒಂದು ದೊಡ್ಡ ಭಾವಿ ಇತ್ತು. ಯಾದ್ ಹೈ ಕ್ಯಾ? ನಾವು, ನೀವು ಎಲ್ಲಾ ಕೂಡಿ ಮಸ್ತ ಜಿಗದು ಅಲ್ಲೆ ಸ್ವಿಮ್ ಮಾಡತಿದ್ವಿ. ಛೋಟಾ ಬಚ್ಚಾ ಇದ್ದಾಗ. ನೆನಪು ಆಯಿತು? - ಅಂತ ಕೇಳಿದ.

ಹೌದೋ.....ನೆನಪ ಅದ. ಆದ್ರಾ ಅದು ದೊಡ್ಡ ಭಾವಿ. ಸ್ವಲ್ಪ ಪಾಳು ಬಿದ್ದಿತ್ತು. ಅದರಾಗ ನಿಮ್ಮ ಬೇಗಂ. ಅದೂ ನಿಮ್ಮ ಡೆಲಿಕೇಟ್ ಡಾರ್ಲಿಂಗ್ ಬೇಗಂ ಈಜು ಹೊಡೆಯೋದು ಅಂದ್ರ.....ಹ್ಯಾಂಗ ಸಾಧ್ಯ ಅದನೋ? - ಅಂತ ಕೇಳಿದೆ.

ಆ ಭಾವಿಯೊಳಗ ಹಾವು, ಹರಣಿ ಮತ್ತೊಂದು ಎಲ್ಲಾ ಇದ್ದವು. ಇವನ ಹೆಂಡತಿ ಅಲ್ಲಿ ಹೋಗಿ ಸ್ವಿಮ್ ಮಾಡೋದು ಊಹಿಸಿಕೊಳ್ಳಲಿಕ್ಕೆ ಸಾಧ್ಯ ಇಲ್ಲ.

ಅಯ್ಯೋ.....ನಿಮಗೆ ಗೊತ್ತಿಲ್ಲ ಕ್ಯಾ? ನಮ್ಮ ಕಡೆ ಪಂದ್ರಾ ಲಾಖ್ ರೂಪಾಯಿ ಖರ್ಚು ಮಾಡ್ಸಿಬಿಟ್ಟಿ ಅದನ್ನ ಮಸ್ತ ನ್ಯಾಚುರಲ್ ಪೂಲ್ ಮಾಡಸಿಕೊಂಡಾಳೆ. ಏನು ಅಂತ ಮಾಡೀರಿ? ನಮ್ಮದು ಕಡೆ ರೊಕ್ಕಾ ಇರೋ ತನಕ ಅಕಿದು ಏಷ್ ಸಾಬ್. ಅದು ಯಾರೋ ಕೇರಳಾದಿಂದ ಸ್ಪೆಷಲ್ ಆದ್ಮಿ ಬಂದು, ಏನೇನೋ ಮಾಡಿ ಮಸ್ತ ಪೂಲ್ ಮಾಡಿ ಕೊಟ್ಟಾನೆ. ಒಳ್ಳೆ ಫೈವ್ ಸ್ಟಾರ್ ಹೋಟೆಲ್ ಪೂಲ್ ಆದಂಗೆ ಆಗಿದೆ. ನಮ್ಮ ಬೇಗಂ ಒಂದು ದೊಡ್ಡ ಫೂಲ್. ಅವಳಿಗೆ ಒಂದು ಸ್ವಿಮ್ಮಿಂಗ್ ಪೂಲ್. ನಮ್ಮದು ಬಾಲ್ಡೀ ತಲಿನಾ ಇನ್ನೂ ಎಷ್ಟು ಬೋಳಿಸ್ತಾಳೋ ಗೊತ್ತಿಲ್ಲ ಸಾಬ್! - ಅಂತ ಹೇಳಿದ ಕರೀಂ. ಒಂದು ದೊಡ್ಡ ಉಸಿರು ತೊಗೊಂಡ.

ಹೋಗ್ಗೋ.....ನಿಮ್ಮ....ಸಾಬ್ರಾ.....ಏನ ಕಥಿ ಇದು? ಗೊತ್ತ ಇರಲಿಲ್ಲ ನಮಗ. ಭಾರಿ ಆತ ಬಿಡ್ರೀ. ಅಲ್ಲೆ ಏನು ನಿಮ್ಮ ಬೇಗಂ ಅವರದ್ದು ಸ್ನಾನ ಮತ್ತೊಂದು? - ಅಂತ ಕೇಳಿದೆ.

ಖರೆ ಸ್ನಾನ ಅಂತ ಅಂದ್ರೆ ಕೇವಲ ಜುಮ್ಮಾಕೋ ಮಾತ್ರ. ಆದ್ರೆ ಆಗಾಗ ಹೋಗಿ ಸ್ವಿಮ್ ಹೊಡೆದು ಬರ್ತದೆ ಬೇಗಂ. ಸ್ವಿಮಿಂಗ್ ಮಾಡಿ ಸುಸ್ತಾದ ಅಕಿಗೆ ಶರಬತ್ ಸಪ್ಲೈ ಮಾಡೋ ಕೆಲಸ ನಮಗೆ. ನಮ್ಮ ಕರ್ಮ.....ಕರ್ಮ..... - ಅಂತ ಹೇಳಿ ಹಣಿ ಹಣಿ ಚಚ್ಚಿಕೊಂಡ ಕರೀಂ.

ಹ್ಮ.....ಮುಂದ ಹೇಳ್ರೀ ಕಥಿ...ಸಾಬ್ರಾ - ಅಂದೆ.

ನೋಡಿ ಸಾಬ್.....ಅಕಿ ಮತ್ತು ಅಕಿ ಮಾಜಿ ಆಶಿಕ್ ಡಿಸೈಡ್ ಮಾಡಿದ ಟೈಮ್ ಗೆ ಇಕಿ ಸ್ವಿಮಿಂಗ್ ಪೂಲ್ ಗೆ ಹೋಗಿದ್ದಾಳೆ. ನಮಗೆ ಬರಬೇಡಿ ಅಂತ ಹೇಳ್ಬಿಟ್ಟು ಹೋದಳು. ನಮಗೆ ಎಲ್ಲಾ ರೂಢಿ ಆಗಿ ಬಿಟ್ಟಿದೆ. ಅಲ್ಲಿ ಹೋದಾಗ ಏನು ಆಯ್ತು ಅಂತ ಗೊತ್ತು ಕ್ಯಾ? - ಅಂತ ಕೇಳಿ ಅರ್ಧಕ್ಕ ನಿಲ್ಲಿಸಿದವನ ಖೀ.....ಖೀ........ ಅಂತ ಮೊಣಕಾಲ ಮ್ಯಾಲೆ ಬಡಕೋತ್ತ ನಗಲಿಕ್ಕೆ ಹತ್ತಿದ ಕರೀಂ.

ಸಾಬ್....ಏನಾಯ್ತು ಅಂದ್ರೆ....ಇಕಿ ತನ್ನದು ಕಪಡಾ ಎಲ್ಲಾ ತೆಗೆದಿಟ್ಟು.....ಸ್ವಿಮ್ಮಿಂಗ್ ಶುರು ಮಾಡಿದಾಳೆ. ಅಲ್ಲಿ ಫೇಸ್ಬುಕ್ ಮೇಲೆ ಅವನು ಹರಾಮಕೋರ್ ಮಾಜಿ ಆಶಿಕ್ ಬಾಸುರೀ ಬಾರಿಸ್ತಾ ಇದಾನೆ. ಅದು ಇಕಿ ಸಾಮ್ಸಂಗ್ ಗೆಲಾಕ್ಸಿ ಫೋನ್ ಒಳಗೆ ಕೇಳಿಕೋತ್ತ ಇಕಿದು ಸ್ವಿಮ್ಮಿಂಗ್ ನೆಡದಿತ್ತು. ಇದೇ ಇವರ ರಾಧಾ ಕೃಷ್ಣ ಸರಸ ಸಲ್ಲಾಪ. ಆವಾಗ ಏನಾಯ್ತು ಗೊತ್ತು ಕ್ಯಾ? - ಅಂತ ಹೇಳಿ ಪೂರ್ತಿ ಮಾಡಲಿಕ್ಕೆ ಆಗದ ಮತ್ತ ನಗಲಿಕ್ಕೆ ಶುರು ಮಾಡಿದ.

ಏನಾತು ಅಂತ ಹೇಳೋ.....ಪುಣ್ಯಾತ್ಮಾ......ನಿಮ್ಮ ಹಾಪ್ ಬೇಗಂದು ಏನರ ಇದ್ದ ಇರ್ತದ ಖತರ್ನಾಕ್ ಸುದ್ದಿ. ಆ ಮ್ಯಾಲೆ ಇಬ್ಬರೂ ಕೂಡೆ ನಗೋಣ. ಓಕೆ? - ಅಂತ ಹೇಳಿದೆ.

ಸಾಬ್....ನಮ್ಮದು ಭಾವಿ ಹಿಂದೇನೇ ನಮ್ಮದು ಪ್ಯಾರಲ ತೋಟಾ ಐತೆ ನೋಡಿ. ಅಲ್ಲಿ ಬಂದಿದ್ದ ಮಂಗ್ಯಾ ಒಂದು ಬಂದ್ಬಿಟ್ಟಿ, ಪೂಲ್ ದಂಡಿ ಮ್ಯಾಲೆ ಇರೋ ನಮ್ಮ ಬೇಗಂ ಬಟ್ಟಿ ಎಲ್ಲ ತೊಗೊಂಡು, ಬಾಜೂಕೆ ಇರೊ ಒಂದು ಮರ ಹತ್ತಿ ಕೂತು ಬಿಟ್ಟಿತು ಸಾಬ್! ಎಲ್ಲಾ ಕಪಡಾ ಒಂದೂ ಬಿಡದೆ ತೊಗೊಂಡು ಹೋತು. ಮರದ ಮ್ಯಾಲೆ ಕೂತ್ಗೊಂಡು ಅದಕ್ಕೆ ಹ್ಯಾಂಗೆ ತಲಿಗೆ ಬಂತೋ ಹಾಗೆ ನಮ್ಮ ಬೇಗಂ ಬಟ್ಟಿ ಹಾಕೊಂಡು ಬಿಟ್ಟಿ, ಹಲ್ಲು ತೋರಿಸ್ಕೋತ್ತಾ ನಮ್ಮ ಬೇಗಂಗೆ ಅಣಿಕಿಸಲಿಕ್ಕೆ ಶುರು ಮಾಡಿತ್ತು ಸಾಬ್! ಏನು ಸೀನ್ ಅಂತೀರಿ - ಅಂತ ಮತ್ತ ಸಿಕ್ಕಾಪಟ್ಟೆ ನಕ್ಕ.

ಹೋಗ್ಗೋ ಸಾಬ್ರಾ.....ಇದು ಅತಿ ಆತ ಬಿಡ್ರಿ. ಅಷ್ಟೂ ಅರವಿ ತೊಗೊಂಡು ಹೋಗಿ ಬಿಡ್ತಾ ಮಂಗ್ಯಾ? ಏನ ಮಂಗ್ಯಾರೀ ಅದು? ನಿಮ್ಮ ಬೇಗಂ ಏನು ಸ್ವಿಮಿಂಗ್ ಅಂಡರ್ವೇರ್ ಬನಿಯನ್ ಹಾಕ್ಕೊಂಡ ಈಜು ಹೊಡಿಲಿಕತ್ತಿದ್ದರು ಏನು? ಅದಾರ ಮೈಮ್ಯಾಲೆ ಇತ್ತಲ್ಲ...........ಅದಾ ಪುಣ್ಯಾ. ಇಲ್ಲಾಂದ್ರಾ......ಅಯ್ಯೋ.....ನಾ ಹೇಳಲಾರೆ.........- ಅಂತ ಅಂದೆ.

ಇಲ್ಲಾ ಸಾಬ್. ನಿಮಗೆ ರಾಧಾ ಕೃಷ್ಣ ಸರಸ ಸಲ್ಲಾಪ ಕಥಿ ಸರಿಯಾಗಿ ಗೊತ್ತಿಲ್ಲ ಕ್ಯಾ? ಮತ್ತೆ ಏನು ಅಸದ್ಡಾಳ್ ಸ್ವಿಮಿಂಗ್ ಅಂಡರ್ವೇರ್ ಬನಿಯನ್ ಅಂತೀರಿ? ಹಾಂ? ಅದಕ್ಕೆ ಬಿಕಿನಿ.....ಬಿಕಿನಿ.....ಅಂತಾರೆ. ಒಳ್ಳೆ ಗಾವಟಿ ಮಂದಿ ಆಗ್ಲಿಕತ್ತೀರಿ ನೋಡಿ. ದ್ವಾಪರಯುಗದಲ್ಲಿ ಬಿಕಿನಿ ಪಿಕಿನಿ ಇರಲಿಲ್ಲ. ಅದಕ್ಕೆ ನಮ್ಮ ಬೇಗಂ ಕೂಡ......- ಅಂತ ನಿಲ್ಲಿಸಿದ. ಮುಂದ ನೀವ ತಿಳಕೊಳ್ಳರಿ ಅನ್ನೋ ರೀತಿಯಲಿ. ಗೊತ್ತಾತು ನಮಗ. ಬೇಗಂ ಬರ್ತ್ ಡೆ ಡ್ರೆಸ್ಸಿನ್ಯಾಗ ರಾಧಾ ಕೃಷ್ಣ ಸರಸ ಸಲ್ಲಾಪ ನೆಡಿಸಿದ್ದರು ಅಂತ.

ಹೋಗ್ಗೋ ನಿಮ್ಮ.......ಅದು ರಿಸ್ಕ್ ಅಲ್ಲೇನ್ರೀ? ಸುತ್ತ ಮುತ್ತ ಮಂದಿ ಕಂಪೌಂಡ್ ಗ್ವಾಡಿ ಹತ್ತಿ ನೋಡಿದ್ರ ಏನು ಗತಿ ರೀ? ಪರ್ದಾವಾಲಿ ಬೇಗಂ ಫುಲ್ ಖಾಲಿ ಖಾಲಿ ಆಗಿ ಸ್ವಿಮಿಂಗ್ ಅಂದ್ರ.......ಛೆ.....ಛೆ......- ಅಂತ ಅಂದೆ. ಸುತ್ತಮುತ್ತಲ ಪಡ್ಡೆ ಹುಡುಗರಿಗೆ ಫ್ರೀ ಮನೋರಂಜನೆ.

ಇಲ್ಲಾ.....ಇಲ್ಲಾ.....ಸಾಬ್! ಹಾಗೇನೂ ಇಲ್ಲ. ಪಂದ್ರಾ ಲಾಖ್ ರೂಪಾಯಿ ಸ್ವಿಮಿಂಗ್ ಪೂಲ್ ಅಂದ್ರೆ ಏನು ಅಂತ ತಿಳ್ಕೊಂಡೀರಿ? ಒಂದು ಸ್ವಿಚ್ ಒತ್ತಿ ಬಿಟ್ಟರೆ ನಾಟಕಾದು ಪರದೆ ಇದ್ದಂಗೆ ನಾಕು ಕಡೆ ಪರದೆ ಬಿದ್ದು ಫುಲ್ ಕವರ್ ಆಗಿಬಿಡ್ತದೆ. ಹಾಗೆ ಇದೆ ಸಿಸ್ಟಮ್. ಕಂಪೌಂಡ್ ಹತ್ತಿ ನೋಡಿದರೂ ಯಾರಿಗೂ ಏನೂ ಕಾಣೋದಿಲ್ಲ. ಮತ್ತೆ ನನ್ನ ಕಾಯೋಕೆ ಇಟ್ಟಿರ್ತಾಳೆ. ಬದ್ಮಾಶ್ ಮಂದಿ ಗ್ವಾಡಿ ಹತ್ತಿದರೆ ಓಡ್ಸೋದು ನನ್ನ ಕೆಲಸ - ಅಂತ ಫುಲ್ ವಿವರಣೆ ಕೊಟ್ಟ ಕರೀಂ.

ಬೇಗಂ ಭಾರಿ ಶಾಣ್ಯಾ ಇದ್ದಾಳ. ಅಕಿ ಸ್ವಿಮಿಂಗ್ ಮಾಡೋದನ್ನ ಪುಕ್ಕಟ ಧರ್ಮ ದರ್ಶನ ಮಾಡಸಂಗಿಲ್ಲ. ಎಲ್ಲದಕ್ಕೂ ಮಸ್ತ ಸಿಸ್ಟಮ್ ಇಟ್ಟಾಳ. ಭಲೇ!

ಹ್ಮ ......ಹ್ಮ ......ಮುಂದೇನಾತೋ? ಮಂಗ್ಯಾ ಎಲ್ಲಾ ವಸ್ತ್ರಾ ತೊಗೊಂಡು ಮ್ಯಾಲೆ ಹೋತು. ನೀರಾಗ ನಂಗಾ ಪಂಗಾ ನಿಮ್ಮ ಬೇಗಂ. ಮುಂದ? - ಅಂತ ಕೇಳಿದೆ.

ಮುಂದೇನು ಸಾಬ್? ನಮ್ಮ ಕೆಟ್ಟಕಾಲ ಶುರು ಆಯಿತು. ಹಾಪ್ ಬೇಗಂ ನೀರಾಗೆ ಇದ್ದುಕೊಂಡೇ ನನಗೆ ಫೋನ್ ಮಾಡಿ........ಜಲ್ದೀ ಆವೋಜೀ......ಅಂದಳು. ಯಾವಾಗಲೂ ಆವೋ, ಜಾವೋ ಅನ್ನಾಕಿ ಆವೋಜಿ ಅಂದಿದ್ದು ಕೇಳಿದಾಗ ನಮಗೆ ಡೌಟ್ ಬಂತು. ಏನೋ ಕೆಲಸ ಕೆಟ್ಟಿದೆ. ಅದಕ್ಕೇ  ಮಸ್ಕಾ ಹೊಡೆದು ಸ್ವೀಟಾಗಿ ಆವೋಜೀ ಅಂತಾ ಇದಾಳೆ. ನಾನು ತಾಪಡತೊಪ್ ಓಡಿದೆ -  ಅಂತ ಹೇಳಿದ ಕರೀಂ.

ಹ್ಞೂ.....ಏನು ಮಾಡಿದಿ? ಅಲ್ಲೆ ಹ್ಯಾಂಗ ಇತ್ತು ದೃಶ್ಯ? - ಅಂತ ಕೇಳಿದೆ.

ಅವನು ಹರಾಮಕೋರ ಪರದೇಶಿ ಕೃಷ್ಣ ಆಗಲೂ ಬಾಸುರಿ ಊದ್ತಾ ಇದ್ದ. ನಮ್ಮ ಬೇಗಮ್ಮೇ ಅವನಿಗೆ ಸಾಕು ಮಾಡು ಅಂತ ಹೇಳಿ ಕಳಿಸಿದಳು. ಅವನು ಬಾಸುರಿ ಬ್ಯಾಡ ಅಂದ್ರೆ ಪುಂಗಿ ಬಾರಿಸಲಿ ಏನು ಅಂತ ಕೇಳಿದ. ಆವಾಗ ಮಾತ್ರ ಅವನಿಗೆ...... ಜಾಬೆ....ಜಾಬೆ.....ಮೇರಾ ಯಹಾನ್ ಫಟೀ ಹೈ. ಇಸಕೋ ಪುಂಗಿ ಸೂಜತಾ ಹೈ. ಜಾ ಭಾಡ್ಕೊವ್ ಅಂತ ಬೈದಾಗ ಮಾತ್ರ ನಮಗೆ ಖುಷಿ ಆಯಿತು ಸಾಬ್. ಅವನು ಹೋದ. ಈಗ ನಮ್ಮ ಕಷ್ಟ ಶುರು ಆಯಿತು - ಅಂತ ಹೇಳಿ ಕರೀಂ ಒಂದು ಬ್ರೇಕ್ ತೊಗೊಂಡ.

ಹ್ಯಾಂಗಾರು ಮಾಡಿ ಮಂಗ್ಯಾ ಕಡೆಯಿಂದ ವಸ್ತ್ರ ಇಸ್ಕೊಂಡು ಕೊಡಿ ಅಂತ ಗಂಟು ಬಿದ್ದಳು ಸಾಬ್. ನಾನು ಹೇಳಿದೆ......ಹೋಗ್ಲೀ ಬಿಡು ಬೇಗಂ. ನಾನು ಮನಿಗೆ ಹೋಗಿ ಬ್ಯಾರೆ ಕಪಡಾ ತಂದು ಕೊಡಲಿ ಕ್ಯಾ? ಅಂತ ಕೇಳಿದೆ. ಬ್ಯಾಡ.....ಬ್ಯಾಡ....ಅದು ನನ್ನ ತವರು ಮನಿ ಅವರು ಕೊಟ್ಟ ಡ್ರೆಸ್. ಅದು ನನಗೆ ಬೇಕೇ ಬೇಕು. ಜಾಕೆ ಲಾವೊಜೀ, ಕರೀಂ ಖಾನ್ ಸಾಬ್.....ಪ್ಲೀಸ್ ಜೀ.....ಅಂತ ನಮ್ಮ ಬೇಗಂ ಹಟಾನೇ ಹಿಡಿದು ಬಿಡ್ತು ಸಾಬ್- ಅಂದ ಕರೀಂ.

ಹ್ಮ....ಹ್ಮ.....ಏನ ಹಾಪ ಇದ್ದಾಳೋ? ಮಂಗ್ಯಾ ವಾಪಸ್ ಕೊಡು ಅಂದ್ರ ಕೊಡ್ತದ ಏನು? ಏನು ಮಾಡಿದಿ? - ಅಂತ ಕೇಳಿದೆ.

ಸಾಬ್.....ನಾನು ನಮ್ಮ ಬಂದೂಕ್ ತೊಗೊಂಡು ಬಂದು ಮಂಗ್ಯಾಗೆ ಗೋಲಿ ಶೂಟ್ ಮಾಡಿಬಿಡೋಣ ಅಂತ ಗನ್ ತರೋಣ ಅಂತ ಮನಿ ಕಡೆ ಹೊಂಟೆ. ಬೇಗಂ ಚೀರಿ......ಮಂಗ್ಯಾ ಅಂದ್ರೆ ಹನುಮಾನ್ ದೇವ್ರು....ಅದನ್ನ ಹೊಡೆದರೆ ನಿಮಗೆ ಒಳ್ಳೆದಾಗೋದಿಲ್ಲ. ಅದನ್ನ ಹೊಡಿದೇ ಅದರ ಕಡೆಯಿಂದ ವಸ್ತ್ರ ಇಸಿದು ಕೊಡಿ ಅಂತ ಕೂತ ಬಿಟ್ಟಳು ಸಾಬ್.....ಅಂದ ಕರೀಂ.

ಭಾಳ ಕಷ್ಟಕ್ಕ ಬಂತಲ್ಲರೀ ಇದು ಸಾಬ್ರಾ ? ಮುಂದ ಏನು ಮಾಡಿದ್ರಿ? - ಅಂದೆ.

ನಾವು ಕ್ಯಾ ಬೇವಕೂಫ್ ಏನು ಸಾಬ್? ನಿಮಗೆ ಬಿನ್ನೆತ್ತಾ ಒಳಗೆ ಕೇಳಿದ ಕಥಿ ನೆನಪ ಐತಿ ಕ್ಯಾ? ಆ ಟೆಕ್ನಿಕ್ ಉಪಯೋಗಿಸಿದೆ ಸಾಬ್ - ಅಂದ ಕರೀಂ.

ಯಾವ ಕಥೀನೋ? - ಅಂತ ಕೇಳಿದೆ.

ಅದೇ ಸಾಬ್....ಒಬ್ಬ ಟೋಪಿ ವ್ಯಾಪಾರಿ ಇರ್ತಾನೆ. ಅವನು ಸುಸ್ತಾಗಿ ತನ್ನ ಟೊಪಿಗಿ ಎಲ್ಲಾ ಇಟ್ಟು ಬಿಟ್ಟಿ ಸ್ವಲ್ಪ ಹೊತ್ತು ಮಲ್ಕೊಂಡು ಇರ್ತಾನೆ. ಆವಾಗ ಮಂಗ್ಯಾ ಎಲ್ಲಾ ಬಂದು ಅವನ ಟೊಪಿಗಿ ತೊಂಗೊಂಡು ಹೋಗಿ ಗಿಡದ ಮ್ಯಾಲೆ ಕೂತು ಬಿಡ್ತವೆ. ಏನು ಮಾಡೋದು ಅಂತ ವಿಚಾರ ಮಾಡ್ತಾನೆ. ಒಂದು ಐಡಿಯಾ ಬರ್ತದೆ. ತನ್ನ ಟೋಪಿ ತೆಗೆದು ಹಾಕ್ಕೊತ್ತಾನೆ. ನೋಡಿದ ಮಂಗ್ಯಾ ಎಲ್ಲಾ ಕೂಡ ಟೊಪಿಗಿ ತೆಗೆದು ಹಾಕ್ಕೊತ್ತಾವೆ. ಟೋಪಿವಾಲಾ ಟೊಪಿಗಿ ತೆಗೆದು ಕೆಳಗೆ ಒಗಿತಾನೆ.ಮಂಗ್ಯಾ ಎಲ್ಲ ಕೂಡ ಟೊಪಿಗಿ ತೆಗೆದು ಕೆಳಗೆ ಒಗಿತಾವೆ. ಯಾದ್ ಆಯಾ ಕ್ಯಾ? ನೀವು ಮಂಗ್ಯಾಂದು ಪಾರ್ಟ್ ಮಾಡಿದ್ರೀ ಆ ಸ್ಕಿಟ್ ಒಳಗೆ - ಅಂದ.

ನಾ ಮಂಗ್ಯಾ ಆದ ಸಂದರ್ಭ ಎಲ್ಲಾ ಮಸ್ತ ನೆನಪ ಇಟ್ಟಾನ ಮಂಗ್ಯಾನ್ ಕೆ.

ಹ್ಞೂ.....ಹ್ಞೂ.....ನೆನಪ ಆತು? ಅದನ್ನ ಹ್ಯಾಂಗ ಉಪಯೋಗ ಮಾಡಿಕೊಂಡಿ? - ಅಂತ ಕೇಳಿದೆ.

ನೋಡಿ ಸಾಬ್....ಗಿಡದ ಮ್ಯಾಲೆ ಮಂಗ್ಯಾ ನಮ್ಮ ಬೇಗಂ ವಸ್ತ್ರ ಅಸಡಾ ಬಸಡಾ ಹಾಕ್ಕೊಂಡು ಏನೇನೋ ಮಾಡಿಕೋತ್ತ ಕೂತಿತ್ತು. ಸ್ವಿಮಿಂಗ್ ಪೂಲ್ ದಂಡಿ ಮ್ಯಾಲೆ ನಾನು ನನ್ನ ಕಪಡಾ ಎಲ್ಲ ತೆಗೆದು ತೆಗೆದು ನೆಲದ ಮ್ಯಾಲೆ ಒಗದೆ. ಮಂಗ್ಯಾ ಭಾರಿ ಶಾಣ್ಯಾ ಇತ್ತು. ಅದೂ ಕೂಡ ಕಪಡೆ ಬಿಚ್ಚಿ ಗಿಡದ ಮ್ಯಾಲೆ ಬಾಜೂಕ ಇಟ್ಟು.......ಹ್ಯಾಂಗ.....ಅನ್ನೋಹಾಂಗ ಹಲ್ಲು ಕಿರೀತು. ನೆಲಕ್ಕೆ ಒಗಿಲಿಲ್ಲ. ಭಾರಿ ಮಂಗ್ಯಾ. ಇದೆ ಟೈಮ್ ನಲ್ಲಿ ನಾವು ಪೂಲ್ ದಂಡಿ ಮ್ಯಾಲೆ ಫುಲ್ ನಂಗಾ ಆಗಿ ಮಂಗ್ಯಾಗೆ ಕೆಳಗೆ ಒಗಿ......ಹುಸ್....ಹುಸ್....ಅಂತ ಹೇಳಿಕೊತ್ತಾ ನಿಂತಿದ್ರೆ, ನಮ್ಮ ಹಾಪ್ ಬೇಗಂ ನಮ್ಮದು ನಂಗಾ ತಸ್ವೀರ್ ತೆಗೆದು ಬಿಟ್ಟಳು ಅಕಿ ಮೊಬೈಲ್ ನ್ಯಾಗೆ. ಅದರ ಮ್ಯಾಲೆ ಅಂತಾಳೆ......ಕ್ಯಾ ಕರೀಂ ಖಾನ್ ಸಾಬ್......ಏಕ್ದಂ ಸಲ್ಮಾನ್ ಖಾನ್ ದಿಖ್ತೂ.....ಅಂತೆ.....ಸಿಟ್ಟು ಬಂದಿತ್ತು. ಆದರೂ ಮಂಗ್ಯಾ ಮಿಶನ್ ಮೇಲೆ ಇದ್ದೆ ನೋಡಿ. ಸುಮ್ಮನಿದ್ದೆ. ಅದು ಫೋಟೋ ಹ್ಯಾಂಗೋ ಆಗಿ ಅಕಿ ಮೊಬೈಲಿನಿಂದ ಇಂಟರ್ನೆಟ್ ಗೆ ಹೋಗಿ ಬಿಡ್ತು. ಸ್ಮಾರ್ಟ್ ಫೋನ್ ಅಂತೆ ಸ್ಮಾರ್ಟ್ ಫೋನ್. ಗಧಾ ಕಹೀಂಕಾ ಫೋನ್ - ಅಂತ ಹೇಳಿದ ಕರೀಂ.

ಹೋಗ್ಗೋ ನಿಮ್ಮ. ನೀವು ಮಂಗ್ಯಾ ಮಿಶನ್ ಮ್ಯಾಲೆ ನಂಗ್ಯಾ ಆದಾಗ ನಿಮ್ಮ ಧರ್ಮಪತ್ನಿ ನಿಮ್ಮ ಫೋಟೋ ತೆಗೆದು ಇಂಟರ್ನೆಟ್ ಗೆ ಹಾಕಿಬಿಡ್ತಾಳ ಅಂದ್ರ.....ಏನ್ರೀ ಇದು? ಮುಂದ? - ಅಂತ ಸಂತಾಪ ತೋರಿಸಿದೆ.

ಮುಂದೆ ಏನು ಸಾಬ್? ನಮ್ಮ ಟೆಕ್ನಿಕ್ ಇಂಪ್ರೂವ್ ಮಾಡಬೇಕಾಯಿತು - ಅಂದ ಕರೀಂ.

ಏನು ಇಂಪ್ರೂವ್ ಮಾಡಿದಿ ನಿನ್ನ ಮಂಗ್ಯಾ ಟೊಪಿಗಿ ಕಥಿ ಟೆಕ್ನಿಕ್ ಸಾಬ್ರಾ? - ಅಂತ ಕೇಳಿದೆ.

ಸಾಬ್ ನೋಡಿ ನಮಗೆ ಗೊತ್ತಾಯ್ತು ಇದು ಮಂಗ್ಯಾ ಭಾಳಾ ಜಾಬಾದ್ ಅದೆ. ಇದು ಕಪಡಾ ಕೆಳಗೆ ಒಗಿಬೇಕು ಅಂದ್ರೆ ನಾನೂ ಕೂಡ ಇನ್ನೊಂದು ಗಿಡ ಹತ್ತಿ, ಅಲ್ಲಿ ಎಲ್ಲಾ ಕಪಡಾ ಬಿಚ್ಚಿ, ಮ್ಯಾಲಿಂದ ಕೆಳಗೆ ಒಗೆದ್ರೆ ಅದೂ ಕೂಡ ಕೆಳಗೆ ಒಗಿತದೆ. ಅದಕ್ಕೆ ನಾನು ಬಿಚ್ಚಿದ್ದ ಕಪಡಾ ಎಲ್ಲಾ ಮತ್ತೆ ಹಾಕ್ಕೊಂಡು ಮಂಗ್ಯಾ ಇರೋ ಮುಂದಿನ ಗಿಡಾ ಹತ್ತಿದೆ ಸಾಬ್. ಮಂಗ್ಯಾನ ಕಣ್ಣಾಗ ಕಣ್ಣಿಟ್ಟು ನೋಡಿ, ನಾನೂ ಹಲ್ಲು ಕಿರಿದು ಕಿರಿದು, ಮಂಗ್ಯಾ ಗತೆ ಬಗಲು ಕೆರಕೋತ್ತ ಮಂಗ್ಯಾ ಸೌಂಡ್ ಮಾಡಿದೆ. ಮಂಗ್ಯಾ ಕೂಡ ಹಲ್ಲು ತೋರಿಸಿ ನಕ್ಕಿತು. ನನ್ನ ನೋಡಿ ಆಣಿಕಿಸಿತು. ಸಿಟ್ಟು ಬಂತು. ಕೈಯಾಗೆ ಬಂದೂಕ್ ಇದ್ದಿದ್ದರೆ ಆ ಮಂಗ್ಯಾನ ಅಲ್ಲೇ ಡಮಾರ್ ಅನ್ನಿಸಿಬಿಡ್ತಿದ್ದೆ. ಏನು ಮಾಡೋದು? ಗಿಡದ ಮ್ಯಾಲೆ ಹ್ಯಾಂಗೋ ಬ್ಯಾಲನ್ಸ್ ಮಾಡಿಕೊಂಡು, ಹ್ಯಾಂಗೋ ಮಾಡಿ ಎಲ್ಲಾ ಬಟ್ಟಿ ಬಿಚ್ಚಿದೆ. ಬಿಚ್ಚಿ ಎಲ್ಲಾ ಕಪಡೆ ಕೈಯಾಗೆ ಹಿಡಕೊಂಡು, ಮಂಗ್ಯಾ ಕಡೆ ನೋಡುವಾಗ ನಮ್ಮ ಹಾಪ್ ಬೇಗಂ ಮತ್ತೊಮ್ಮೆ ಕ್ಲಿಕ್ ಮಾಡಿರಬೇಕು. ಮತ್ತೊಂದು ನಂಗಾ ಪಂಗಾ ತಸ್ವೀರ್ ಇಂಟರ್ನೆಟ್ ಗೆ ಹೋಗಿ ಬಿಟ್ಟಿದೆ. ಇದರಲ್ಲಿ ಆ ಮಂಗ್ಯಾ ಕೂಡ ಹಲ್ಲು ಕಿರಿದು ನನ್ನ ಅಣಕಿಸೋದೂ ಕೂಡ ಇದೆ. ಮಂಗ್ಯಾ ಮೈಮೇಲೆ ಕಪಡೆ ಅದೆ. ನನ್ನ ಮೈಮೇಲೆ ಇಲ್ಲ - ಅಂದ ಕರೀಂ ದೊಡ್ಡ ವಿವರಣೆ ಕೊಟ್ಟ.

ಹೋಗ್ಗೋ ಸಾಬ್ರಾ.....ಭಾರಿ ತಲಿ ಓಡ್ಸಿರಲ್ಲರೀ. ಮುಂದ? 

ನಾನು ಮಂಗ್ಯಾನ ನೋಡಿ, ಭಗವಾನ್ ಕೋ ಹೇಳಿ, ದುವಾ ಕೇಳಿ, ನಂದು ಕಪಡಾ ಎಲ್ಲ ಕೆಳಗೆ ಒಗದೆ. ಮಂಗ್ಯಾ ಒಂದು ಕ್ಷಣ ವಿಚಾರ ಮಾಡಿದಂಗೆ ಮಾಡಿ, ತಾನೂ ಎಲ್ಲಾ ಕಪಡಾ ಬಿಚ್ಚಿ ಬಿಚ್ಚಿ ಕೆಳಗೆ ಒಗಿತು. ಬೇಗಂ ಕೆಳಗಿಂದ ಚಪ್ಪಾಳೆ ಹೊಡೆದ ಅಬ್ಬರಕ್ಕೆ ಮಂಗ್ಯಾ ಘಾಬರಿ ಆಗಿ ಕೇವಲ ಅಕಿ ಚಡ್ಡಿ ಒಂದೇ ಹಾಕ್ಕೊಂಡು ಅಲ್ಲಿಂದ ಓಡಿ ಬಿಡ್ತು. ಚಡ್ಡಿ ಒಂದು ಬಿಟ್ಟರೆ ಬಾಕಿ ಎಲ್ಲಾ ಕಪಡಾ ರಿಕವರ್ ಆಯಿತು ಸಾಬ್. ನಾನು ಗಿಡ ಇಳಿದು ಬಂದು ಕಪಡಾ ಹಾಕಿಕೊಂಡೆ. ಬೇಗಂ ಕೂಡ ಪೂಲ ಬಿಟ್ಟು ಎದ್ದು ಬಂದು, ಮೈ ಇನ್ನೊಂದು ವರೆಸಿಕೊಂಡು ಸಿಕ್ಕ 'ಮಂಗ್ಯಾ ರಿಟರ್ನ್ಡ್ ವಸ್ತ್ರಾ' ಹಾಕಿಕೊಂಡು....ನಂದು ವಿಕ್ಟರೀ ಸಿಗರೇಟ್ (Victoria secret) ಚಡ್ಡಿ ಲೇಕೆ ಗಯಾ ರೆ....ಬಂದರ್ ಭಾಡ್ಕೊವ್....ಬಂದರ್ ಕಹೀಂಕಾ ಅಂತ ಫೋನ್ ನಲ್ಲಿ ಯಾರಿಗೋ ಹೇಳುತ್ತಾ ಮನಿಗೆ ಬಂದಳು - ಅಂತ ಕಥಿ ಮುಗಿಸಿದ ಕರೀಂ.

ದೊಡ್ಡ ಕಥಿ ಬಿಡ್ರೀ ಸಾಬ್ರಾ. ನಿಮ್ಮ ನಂಗಾ ತಸ್ವೀರ್ ಇಂಟರ್ನೆಟ್ ನ್ಯಾಗ್ ಬಂದಿದ್ದು ನಿಮಗ ಹ್ಯಾಂಗ ಗೊತ್ತಾತು? -ಅಂತ ಕೇಳಿದೆ.

ಸಾಬ್....ಅದು ದೊಡ್ಡ ದರ್ದಭರಿ ಕಹಾನಿ ಸಾಬ್ - ಅಂತ ಹೇಳಿ ಕಣ್ಣು ಒರೆಸಿಕೊಂಡ ಕರೀಂ.

ಸಾಬ್.....ಯಾರೋ.....ಹೆಚ್ಚಾಗಿ ಪರದೇಶಿ ಕೃಷ್ಣಾನೇ ಇರಬೇಕು. ನನ್ನ ಫೋಟೋ ಫೇಸ್ಬುಕ್ ನಲ್ಲಿ ಹಾಕ್ಬಿಟ್ಟಿ, ಅದರ ಮ್ಯಾಲೆ ನಮ್ಮ ಬೇಗಂ ಟ್ಯಾಗ್ ಮಾಡಿ ROTFL ಅಂತ ಕಾಮೆಂಟ್ ಮಾಡಿದ. ಹಾಗಾಗಿ ಅದು ನಮ್ಮ ವಾಲ್ ಮ್ಯಾಲೆ ಬಂತು ಸಾಬ್. ಆ ಮ್ಯಾಲೆ ಎಲ್ಲೆಲ್ಲೋ ಹೋಗಿ, ಏನೇನೋ ಆಗಿ, ಎಲ್ಲರಿಗೂ ಸಿಕ್ಕಿಬಿಡ್ತು. ಮತ್ತೆ ಎರಡನೇ ನಂಗಾ ಪಂಗಾ ಫೋಟೋ.....ಗಿಡದ ಮೇಲೆ ಬಂದರ್ ಜೊತೆ....ಅದನ್ನು ಹಾಕಿ, ನಮ್ಮ ಬೇಗಮ್ಗೆ ಟ್ಯಾಗ್ ಮಾಡಿ......ಇದರಲ್ಲಿ ನಿನ್ನ ಕರೀಂ ಯಾರು ಅಂತ ಕೇಳಿ ಮತ್ತೆ ಅದೇನೋ ROTFL ಅಂತ ಹಾಕ್ಕೊಂಡಾನೆ.....ಏನು ಮಾಡೋದು ಸಾಬ್? ROTFL ಅಂದ್ರೆ ಏನು ಸಾಬ್? - ಅಂತ ಇನ್ನೋಸೆಂಟ್ ಆಗಿ ಕೇಳಿದ ಕರೀಂ.

ಸಾಬ್ರಾ ಅದೆಲ್ಲ ಇರಲಿ. ಆ ಹರಾಮಕೋರ, ನಿಮ್ಮ ಬೇಗಂ ಮಾಜಿ ಡೌ ಗೆ ಮಾಡೋಣ ಇರ್ರಿ. ಅವಂದು ಫೋಟೋ ಡೌನ್ಲೋಡ್ ಮಾಡಿ, ಫೋಟೋಶಾಪ್ ಮಾಡಿ, ಅವನೂ ನಂಗಾ ಮತ್ತ ಅವನ ಜೊತಿ ಕಪಡಾ ಹಾಕ್ಕೊಂಡ ಒಂದು ಗೊರಿಲ್ಲಾ ಇಟ್ಟು ನಾವೂ ಕೂಡ ಅದನ್ನ ಫೇಸ್ಬುಕ್ ಗೆ ಹಾಕಿ, ನಿಮ್ಮ ಬೇಗಂ ಟ್ಯಾಗ್ ಮಾಡೋಣ. ಆವಾಗ ಅವನಿಗೆ ಕಾಣ್ತದೆ. ಮತ್ತು ಗೊತ್ತಾಗ್ತದೆ ಕರೀಂ ಏನು ಆರ್ಡಿನರಿ ಅಲ್ಲಂತ. ಚಿಂತಿ ಮಾಡಬ್ಯಾಡ್ರೀ ನೀವು - ಅಂತ ಮಸ್ತ ಸ್ಕೀಮ್ ಹಾಕಿ ಕೊಟ್ಟೆ. 

ಇನ್ನ ಇಡ್ತೇವಿ ನೋಡ್ರೀ ಆವಂಗ ಬತ್ತಿ.

ಸಾಬ್ರಾ......ಅವ ನಿಮ್ಮ ಬೇಗಂ ಮಾಜಿ ಆಶಿಕ್ ತನ್ನ ಕೊಳಲಿನ್ಯಾಗ ದ.ರಾ. ಬೇಂದ್ರೆ ಅವರ "ಗಂಗಾವತರಣಂ" ಒಳಗಿನ "ಇಳಿದು ಬಾ ತಾಯೇ" ಹಾಡು ಬಾರ್ಸಿದ ಏನು? ಅದ ಕೇಳಿ ಗಿಡದ ಮ್ಯಾಲಿನ ಮಂಗ್ಯಾ ಕೆಳಗ ಇಳಿದು ಬಂದು ವಸ್ತ್ರಾ ತೊಗೊಂಡು ಮ್ಯಾಲೆ ಓಡಿ ಹೋಗಿತ್ತೇನು? - ಅಂತ ಕೇಳಿದೆ.

"ಮಂಗಾವತರಣಂ"!!!!? ಅಂದ್ರೆ ಕ್ಯಾ ಸಾಬ್? - ಅಂತ ಕೇಳಿದ ಕರೀಂ.

ಸಾಬ್ರಾ....ನೀವು ಒಮ್ಮೊಮ್ಮೆ ತಪ್ಪ ತಪ್ಪ ಹೇಳಿದ್ರೂ,  ಸಂದರ್ಭಕ್ಕ ಸರಿ ಇರೋ ಹಾಂಗ ಹೇಳ್ತೀರಿ ನೋಡ್ರೀ. ನಾ ಗಂಗಾವತರಣಂ ಅಂದೆ. ಮಂಗ್ಯಾನ ಗುಂಗಿನ್ಯಾಗ ಇದ್ದ ನಿಮಗ ಅದು ಮಂಗಾವತರಣಂ ಅಂತ ಕೇಳಿದ್ರ ತಪ್ಪಿಲ್ಲ. ಮತ್ತ ಈ ಸಂದರ್ಭಕ್ಕೂ ಹೊಂದ್ತದ. ಮಂಗಾವತರಣಂ ಆತು. ಹಾಂಗಾ ವಸ್ತ್ರಾಪಹರಣಂ ಕೂಡ ಆತು - ಅಂತ ಹೇಳಿದೆ.

ಹೌದು ಸಾಬ್.....ಹೌದು....ಆ ಬಡ್ಡಿದು ಮಗನಿಗೆ ಬತ್ತಿ ಯಾವಾಗ ಇಡೋದು ಸಾಬ್ - ಅಂತ ಕೇಳಿದ ಕರೀಂ.

ಅದರ ಚಿಂತಿ ಬಿಡ್ರೀ. ಅವನೌನ ಆ ಬದ್ಮಾಶನ FB ಪ್ರೊಫೈಲ್ ಫಾರ್ವರ್ಡ್ ಮಾಡ್ರೀ. ಹ್ಯಾಂಗ ಫೋಟೋಶಾಪ್ ಮಾಡಸ್ತೇನಿ ಅಂತ ನೋಡೀರಿ ಅಂತ - ಅಂತ ಹೇಳಿ ಫುಲ್ ಆಶ್ವಾಸನೆ ಕೊಟ್ಟೆ.

ಆಯ್ತು ಸಾಬ್....ಖುದಾ ಹಾಫಿಜ್.ಬರ್ತೀನಿ - ಅಂತ ಟಾವೆಲ್ ನಿಂದ ಮುಖ ಮುಚ್ಚಿಗೊಂಡು ಹೋದ ಕರೀಂ.

ಪಾಪ..... ಮಂಗಾವತರಣಂ ವಸ್ತ್ರಾಪಹರಣಂ. ಮಂಗ್ಯಾ ಇಳಿದು ಬಂದು, ಸಾಬ್ರು ನಂಗ್ಯಾ ಆಗಿ, ಫೋಟೋ ಅಪ್ಲೋಡ್ ಆಗಿ.....ರಾಮಾ....ರಾಮಾ.

** ಈ ಲೇಖನದ ಐಡಿಯಾ ಬಂದಿದ್ದು ಈ ಹಾಡು ನೋಡಿದಾಗ. ಸಾಬರ ಮನೆ ಭಾವಿ ಸ್ವಿಮಿಂಗ್ ಪೂಲ್ ಹೀಗೇ ಇರಬಹುದೇನೋ? ಬೇಗಂ ಮಾತ್ರಾ ಹೀಗೆ ಇದ್ದಾರೆ......:) :)  ಮೂವತ್ತು ವರ್ಷದ ಹಿಂದಿನ ಈ ಹಾಡು ಇವತ್ತಿಗೂ ಮಸ್ತ ಇದೆ.

Monday, September 03, 2012

ಹತ್ತಿಮಬ್ಬೆಯ ಹತ್ತಿ ಹುಚ್ಚು

ಸಾಬ್.....ನಿಮಗೆ ಕಾಟನ್ ಪೇಟೆ ಪುಷ್ಪ ಅನ್ನೋರು ಗೊತ್ತು ಕ್ಯಾ? - ಅಂತ ಕೇಳಿದ ಕರೀಂ.

ನನ್ನ ಮಟ್ಟಿಗೆ ಅದು ಸಣ್ಣ ಬಾಂಬ್. ಫುಲ್ ಥಂಡಾ ಹೊಡೆದ ಬಿಟ್ಟೆ ನಾನು.

ಏ ಕರೀಂ....ಸಾವಕಾಶ ಮಾತಾಡೋ. ಅವರ ಪೈಕಿ ಮಂದಿ ಯಾರರ ಕೇಳಿಸ್ಕೊಂಡ್ರಾ ನಾಳೆ ನಮಗ ರೇಜರ್ ಬಿದ್ದಾವು. ಖತರ್ನಾಕ್ ಮಂದಿ ಅವರೆಲ್ಲ - ಅಂದೆ. ಅಂಜ್ಕಿ ಭಾಳ ನಮಗ.

ಯಾರು ಸಾಬ್ ಕಾಟನ್ ಪೇಟೆ ಪುಷ್ಪಾ ಅಂದ್ರೆ? - ಕೇಳಿದ ಕರೀಂ.

ಅಯ್ಯೋ....ಅವರು ಒಂದು ಕಾಲದ ಬೆಂಗಳೂರಿನ ದೊಡ್ಡ ಅಂಡರ್ವರ್ಲ್ಡ್ ಡಾನ್ ಮಾರಾಯಾ. ಮತ್ತ ಇಲ್ಲೂ ಎಲ್ಲರ ಅವರ ಚೇಲಾ ಚಪೇಲಾಗಳು ಇದ್ದರೂ ಇದ್ದಾರು. ಸುಮ್ಮನಿರಪಾ. ಯಾರಿಗೆ ಬೇಕು ಪುಷ್ಪರಾಜ್ ಅವರ ಸಹವಾಸ - ಅಂತ ಹೇಳಿ ಇವನ್ನ ಸುಮ್ಮಾ ಮಾಡೋ ಪ್ರಯತ್ನ ಮಾಡಿದೆ.

ಅದಿರಲಿ ಕರೀಂ....ಯಾಕ್ ಏಕ್ದಂ ಅವರ ಹೆಸರು ಕೇಳಿದಿ? ಅದೂ ಬೆಂಗಳೂರಿನ ಮಾಜಿ ಡಾನ್ ಸುದ್ದಿ? ಹಾಂ? ಹಾಂ? - ಅಂತ ಕೇಳಿದೆ.

ಸಾಬ್....ನಮ್ಮ ಬೇಗಂ ಗೆ "ಕಾಟನ್ ಹುಚ್ಚು" ಹತ್ತಿ ಬಿಟ್ಟಿದೆ. ಯಾರೋ ಹೋಗಿ ಕಾಟನ್ ಪೇಟೆ ಪುಷ್ಪಾಗೆ ನೋಡಿ ಅಂದ್ರು. ನೀವು ಹೇಳೋದ ಕೇಳಿದ್ರೆ ನಮ್ಮ ಜೊತೆ ಆ ಹರಾಮಿಗಳು ಮಜಾಕ್ ಮಾಡಿದ್ರು ಅನ್ನಿಸ್ತದೆ. ನಮ್ಮದು ದುಃಖ ನಮಗೆ. ಅದರಲ್ಲಿ ಮಜಾಕ್ ಮಾಡೋ ಹಲ್ಕಟ್ ಮಂದಿ ಬ್ಯಾರೆ - ಅಂತ ಅಲವತ್ತುಕೊಂಡ ಕರೀಂ.

ಏನು? ಕಾಟನ್ ಹುಚ್ಚಾ ನಿಮ್ಮ ಬೇಗಂಗೆ? ಅಂದ್ರ ಕಾಟ್ ಅಂದ್ರ ಮಂಚ. ಮಂಚದ ಹುಚ್ಚಾ? ಯಾಕ.....ನಿಮ್ಮ ಬೇಗಂ ಮಂಚದಾಗ ದೆವ್ವ ಸೇರಿಕೊಂಡು ಕಾಟ ಕೊಡಲಿಕತ್ತದೇನು? ಅದಕ್ಕ ಕಾಟನ್ ಹುಚ್ಚು ಅನ್ನಲಿಕತ್ತಿಯೇನು? - ಅಂತ ಕೇಳಿದೆ.

ಇದೆಂತಾ ಕಾಟಿನ ಹುಚ್ಚು. ಕಾಟಿನ ಕಾಟ ಅನ್ನಿಸ್ತು.

ಅಯ್ಯೋ ಸಾಬ್. ಕಾಟ್, ಪಲ್ಲಂಗ, ದಿವಾನ್ ಅಂತಾ ಮಲ್ಕೊಳೋ ಹಾಸ್ಗಿ ಅಲ್ಲ ಸಾಬ್. ಕಾಟನ್. ಕಾಟನ್. ಮತ್ಲಬ್ ರೂಯಿ. ನಿಮ್ಮದು ಭಾಷೇಲಿ ಅಂದ್ರೆ ಹತ್ತಿ. ಹತ್ತಿ. ಕಾಟನ್ - ಅಂತ ವಿವರಣೆ ಕೊಟ್ಟ.

ಏನು? ಹುಚ್ಚಿ ಹತ್ತು ಹತ್ತಿ ಬಿಟ್ಟದ? ಅಲ್ಲ....ಅಲ್ಲ.....ನಾಲಗಿ ಹೊಳ್ಳಲಿಲ್ಲ. ಹತ್ತಿ ಹುಚ್ಚು ಹತ್ತಿ ಬಿಟ್ಟದ? ನಿಮ್ಮ ಬೇಗಂಗೆ? ಯಾಕ? ಅವರು ಹತ್ತಿಮತ್ತೂರ ಕಡೆಯವರು ಏನು? - ಅಂತ ಕೇಳಿದೆ.

ಕ್ಯಾ ಸಾಬ್? ಹತ್ತಿಮತ್ತೂರ ಅಂದ್ರೆ ನಿಮ್ಮದೂಕಿ ಜಾತಿ ಮಂದಿ. ನಮ್ಮ ಬೇಗಂ ನಮ್ಮ ಜಾತಿಯವರು. ಅಕಿ ಹ್ಯಾಂಗೆ ಹತ್ತಿಮತ್ತೂರ ಕಡೆಯವರು ಆಗ್ತಾರೆ? ತಲಿಗಿಲಿ ಸರಿ ಐತೆ ಕ್ಯಾ? - ಅಂತ ಹೇಳಿದ.

ತಪ್ಪು ತಿಳ್ಕೊಂಡಿದ್ದ ಕರೀಂ.

ಲೇ....ಮಂಗ್ಯಾನ್ ಕೆ.....ಹತ್ತಿಮತ್ತೂರ ಕಡೆಯವರು ಅಂದ್ರ ಅವರ ಪೈಕಿ ಅಂತಲ್ಲ. ಆ ಊರ ಕಡೆಯವರು ಏನು ಅಂತ ಕೇಳಿದೆ. ಅದಕ್ಕ ನನಗ ಚೀರ್ಲಿಕತ್ತಿ. ನೀ ಒಬ್ಬವ ಮಂಗ್ಯಾ - ಅಂತ ಅವನ ಹುಚ್ಚಾಟಾನ ಅಷ್ಟಕ್ಕ ಸ್ಕ್ವಾಶ್ ಮಾಡಿದೆ.

ಇಲ್ಲಾ ಸಾಬ್. ನಮ್ಮದು ಬೇಗಂ ಆ ಕಡೆಯಾಕಿ ಅಲ್ಲ. ಬೆಳಗಾಂ ಕಡೆಯಾಕಿ. ಈಗ ನೋಡಿದ್ರೆ ಬೆಳಗಾಂ ರೋಡ ಕಡೆಯಾಕಿ ಅಂತ ಹೇಳಬಹುದು. ಆ ಪರಿ ಹುಚ್ಚ ಆಗಿದಾಳೆ. ಒಮ್ಮೆ ಫೇಸ್ಬುಕ್ ಹುಚ್ಚು, ಮ್ಯಾಲೆ ಪುಂಗಿ ಹುಚ್ಚು, ಆ ಮೇಲೆ ಈಗ ಕಾಟನ್ ಹುಚ್ಚು - ಅಂತ ಕೊಯ್ಯಾ ಕೊಯ್ಯಾ ಅಂತ ಕೊರೆದ ಕರೀಂ.

ಹೋಗಿ ಹೋಗಿ ಬೆಳಗಾಂ ಹುಡುಗಿನ ಕಟ್ಟಗೊಂಡು ಬಂದ್ರಿ ನೋಡ್ರಿ, ಅದಕ್ಕ ಹೀಂಗ. ಧಾರವಾಡದಾಗ ಸಿಗ್ತಿದ್ದಿಲ್ಲ ನಿಮಗ ಬೀವಿ? - ಅಂದೆ.

ಸಾಬ್....ಮೊದಲಿಂದು ಎರಡು ಬೇಗಂ ಇಲ್ಲಿದೇ ಇತ್ತು ಸಾಬ್. ಯಾವದೂ ಬರಕತ್ತಾಗಲಿಲ್ಲ ನೋಡ್ರಿ. ಅದಕ್ಕೆ ನಾವು ಧಾರವಾಡ ಪೇಡಾ ರುಚಿ ನೋಡಿ ಆಯಿತು, ಬೆಳಗಾವಿ ಕುಂದಾ ನೋಡೋಣ ಅಂತ ಅಲ್ಲಿಂದ ಸ್ವೀಟ್ ಸಿಕ್ಸ್ಟೀನ್ ಲಡ್ಕಿ ತಂದರೆ ಹೀಗೆ ಆಗಿ ಹೋಯಿತು. ದಸ್ ಲಾಖ್ ರೂಪಾಯಿ ಪಾನಿ ಮೇ - ಅಂದ ಕರೀಂ.

ಹೋಗ್ಲಿ ಬಿಡ್ರಿ....ಏನು ನಿಮ್ಮ ಬೇಗಂ ಹತ್ತಿ ಹುಚ್ಚು? ಏನು ಒಂದರೆಡು ಎಕರೆ ಹೊಲ ತೊಗೊಂಡು ಹತ್ತಿ ಬೆಳಿಬೇಕಂತೇನು? - ಅಂತ ಕೇಳಿದೆ.

ಅಯ್ಯೋ....ಇಲ್ಲ ಸಾಬ್. ಅಕಿಗೆ ಈಗ ಕಾಚಾ ಸೆ  ಕರ್ಚೀಫ್ ತಕ್, ಪೋಲ್ಕಾ ಸೆ ಪರ್ಕಾರ್ ತಕ್  ಎಲ್ಲದೂ ಪ್ಯೂರ್ ಕಾಟನ್ ನೇ ಬೇಕಂತೆ. ಏನು ಕೇಳ್ತೀರಿ ಸಾಬ್? - ಅಂದ ಕರೀಂ.

ಅಷ್ಟನ...........? ಚೊಲೋ ಆತ ತೊಗೋರಿ. ಗಾಂಧಿವಾದಿ ಆಗಿ ಫುಲ್ ಖಾದಿ ಅಂತಾಳೇನು? ತಪ್ಪೇನದ ಎಲ್ಲಾ ಕಾಟನ್ ಹಾಕ್ಕೊಂಡ್ರಾ? - ಅಂತ ಕೇಳಿದೆ.

ಅಯ್ಯೋ ಸಾಬ್! ಇಕೀದು ಎಲ್ಲಾ ಅತಿರೇಕ ನೋಡಿ. ಮಚ್ಚರದಾನಿ (mosquito curtain) ಕೂಡ ಕಾಟನ್ ದು ಬೇಕಂತೆ - ಅಂದ ಕರೀಂ.

ತಪ್ಪೇನದ ಅದರಾಗ? - ಅಂತ ಕೇಳಿದೆ.

ಸಾಬ್! ಕಾಟನ್ ಮಚ್ಚರದಾನಿ ಅಂದ್ರೆ ಮಚ್ಚರದಾನಿ ಹಾಗೆ ತೂತ ತೂತ ಇರೋ ಜಾಳಗಿ ಅಂತಾ ವಸ್ತ್ರದ್ದು ನೈಟಿ ಹಾಕ್ಕೊಂಡು ಮಲ್ಕೋತ್ತಾಳಂತೆ. ನಾನು ಅದೇ ಟೈಪ್ ಪೈಜಾಮ ಜುಬ್ಬಾ ಹಾಕ್ಕೊಬೇಕಂತೆ. ಇದು ಹುಚ್ಚು ಅಲ್ಲಾ ಕ್ಯಾ ಸಾಬ್? - ಅಂದ ಕರೀಂ.

ಹೋಗ್ಗೋ ಸಾಬ್ರಾ! ಇದು ವಿಪರೀತ ಆತಲ್ಲರೀ. ಇಕಿ ಏನು ಹತ್ತಿಮಬ್ಬೆ ಅವರ ಪೈಕಿ ಏನು? ಅಕಿ ಒಬ್ಬಾಕಿ ಇದ್ದಳು ಅತ್ತಿಮಬ್ಬೆ ಅಂತ. ಇಕಿ ಇದ್ದಾಳ ಹತ್ತಿಮಬ್ಬೆ. ಹತ್ತಿಮಬ್ಬೆ...ಹೀ.....ಹೀ.....ಹತ್ತಿಮಬ್ಬೆ.....ಮಸ್ತ ಅದ ತೊಗೋರಿ ನಿಮ್ಮ ಬೇಗಂ ನಾಮಧೇಯ - ಅಂದೇ.

ಅತ್ತಿಮಬ್ಬೆ ಕೌನ್ ಸಾಬ್? ಅಕಿಗೆ ಕ್ಯಾ ಅತ್ತಿ ಹಣ್ಣಿನದು ಹುಚ್ಚು ಕ್ಯಾ? - ಅಂತ ಕೇಳಿದ ಕರೀಂ.

ಏ ಇಲ್ಲೋ......ಅತ್ತಿಮಬ್ಬೆ, ಹತ್ತಿಮಬ್ಬೆ ಮಸ್ತ ಪ್ರಾಸ ಕೂಡತದ ನೋಡು ಅದಕ್ಕ ಹೆಸರ ಕೊಟ್ಟೆ ಅಷ್ಟ. ಅತ್ತಿಮಬ್ಬೆ ಯಾರೋ ಹಳೆ ಕಾಲದ ರಾಣಿ. ಕವಿ ರನ್ನಗ ಆಶ್ರಯ ಕೊಟ್ಟಿದ್ದಳಂತ. ಈಗ ಅಕಿ ಹೆಸರಿನ್ಯಾಗ ಅತ್ತಿಮಬ್ಬೆ ಪ್ರಶಸ್ತಿ ಅಂತ ಏನೋ ಕೊಡ್ತಾರ ನೋಡಪಾ. ನಿನ್ನ ಹೆಂಡ್ತಿ ಹತ್ತಿ ಹುಚ್ಚಿನ ಹೆಸರಾಗ ಹತ್ತಿಮಬ್ಬೆ ಪ್ರಶಸ್ತಿ ಅಂತ ಕೊಡಬೇಕಾಗಾಬಹುದು. ಕೊಡ್ತಿ ಏನು? - ಅಂತ ಹೇಳಿದೆ.

ಓಹೋ...ಹಾಗೆ ಕ್ಯಾ? ಇಕಿ ಒಳ್ಳೆ ಹತ್ತಿಮಬ್ಬೆ. ನಮಗೆ ಮಚ್ಚರದಾನಿ ಕಪಾಡಾದು ಪೈಜಾಮ ಜುಬ್ಬಾ ಹಾಕಿಕೊಂಡು ಮಲಕೊಂಡ್ರೆ ನಿದ್ದೇನೇ ಬರೋದಿಲ್ಲ ಸಾಬ್. ಭಾಳ ತ್ರಾಸ್ ಆಗಿದೆ - ಅಂದ ಕರೀಂ.

ಯಾಕೋ? ಮಚ್ಚರದಾನಿ ಕಟ್ಟಿಗೋಂಡರೇನು, ಅದರದ್ದು ವಸ್ತ್ರಾ ಹಾಕಿಕೊಂಡರೇನು? ಎಲ್ಲಾ ಒಂದ ಅಲ್ಲೇನು? ಗುಂಗಾಡು (ಸೊಳ್ಳೆ) ಹ್ಯಾಂಗ ಕಡಿತಾವ? ಹಾಂ? ಹಾಂ? - ಅಂದೆ.

ಇದಕ್ಕೇ ನಿಮಗೆ ಅಕಲ್ ಇಲ್ಲಾ ಅನ್ನೋದು. ಮಚ್ಚರದಾನಿ ಕಟ್ಟಿಕೊಂಡು ಮಲಗೋದು ಮತ್ತೆ ಅದರದ್ದು ವಸ್ತ್ರಾ ಹಾಕಿಕೊಂಡು ಮಲಗೋದು ಒಂದೇ ಕ್ಯಾ? ಮೈಮ್ಯಾಲೆ ಹಾಕ್ಕೊಂಡು ಮಲಗಿದರೆ ಜಾಳಿ ಒಳಗೆ ನೀಟಾಗಿ ತಮ್ಮ ಸೂಜಿ ಬಿಟ್ಟಿ ಮಚ್ಚರ್ ಮಸ್ತ ಕೋಲ್ಡ್ ಡ್ರಿಂಕ್  ಸ್ಟ್ರಾನಿಂದ ಕುಡಿದ ಹಾಗೆ ನಮ್ಮದೂಕಿ ಖೂನ ಕುಡಿತಾವೆ. ಗೊತ್ತು  ಕ್ಯಾ.....? ಅಷ್ಟೂ ತಿಳಿಯೋದಿಲ್ಲ ನಿಮಗೆ ಕ್ಯಾ? - ಅಂದ ಕರೀಂ.

ಹೌದು ನೋಡು. ಕರೆಕ್ಟ್ ಅದ ನೀ ಹೇಳುದು. ಮತ್ತ ನಿಮ್ಮ ಹೇಣ್ತಿ ಮಚ್ಚರದಾನಿ ಅರವೀದು ನೈಟಿ ಹಾಕ್ಕೊಂಡ ಮಲಕೊಂಡ್ರಾ ಅವರಿಗೆ ಕಡಿಯಂಗಿಲ್ಲಾ  ಗುಂಗಾಡು?  - ಅಂತ ಕೇಳಿದೆ.

ಅಯ್ಯೋ....ಅಕಿಗೆ ಬಿಡಿ. ಮೈಯಾಗೆ ಖೂನ್ ಕಮ್ಮಿ ಜೆಹೆರ್ ಜಾಸ್ತಿ ತುಂಬಿದೆ. ಅಕಿಗೆ ಕಡಿದು ಮಚ್ಚರ್ ಯಾಕೆ ಸಾಯ್ತಾವೆ? ಅವು ಭಾಳ ಸ್ಮಾರ್ಟ್ ಇದ್ದಾವೆ. ಬರೇ ನಮ್ಮದು ಖೂನ ಕುಡಿತಾವೆ. ಜೋಕ್ ಅತ್ಲಾಗೆ ಇರ್ಲಿ. ಅಕಿದು ಭಾಳ ಲೇಯರ್ ಕಪಡಾ ಇರ್ತಾವೆ ನೋಡ್ರೀ, ಆದಕ್ಕೇ ಅಕಿಗೆ ಏನೂ ಆಗೋದಿಲ್ಲ. ನಮಗೆ ಒಂದೇ ಲೇಯರ್. ಅದಕ್ಕೆ ಕಚ್ ಕಚ್ ಅಂತ ರಾತ್ರಿ ಎಲ್ಲಾ ಮಚ್ಚರ್ ಕಡಿತಾವೆ. ನಾವು ಪಟ್ ಪಟ್ ಅಂತ ಮಚ್ಚರ್ ಹೊಡ್ಕೊತ್ತಾ ನಿದ್ದೇನೇ ಇಲ್ಲಾ ಸಾಬ್....ಈಗ ಹೋಗಿ ಸ್ವಲ್ಪ ಮಲಗಿ ಬರಲಿ ಕ್ಯಾ? - ಅಂತ ಹೇಳಿ ಕೇಳಿದ ಕರೀಂ.

ಆದರೂ ಕರೀಂ....ಮಸಡಿಗೆ? ಅಲ್ಲೇನು ಮಾಡ್ಯಾಳ? ಅಲ್ಲೆ  ಅಕಿಗೆ ಗುಂಗಾಡ ಕಡಿಯೆಂಗಿಲ್ಲಾ? - ಅಂತ ಕೇಳಿದೆ.

ಸಾಬ್.....ನೀವು ಸ್ಪೈಡರ್ ಮ್ಯಾನ್ ಗೆ ನೋಡೀರಿ ಅಲ್ಲಾ? ಅವನು ಒಂದು ಜಾಳಿಗಿ ನಕಾಬ್ (ಮುಖವಾಡ) ಹಾಕ್ಕೊಂಡು ಇರ್ತಾನೆ ನೋಡಿ. ಅದೇ ತರಹ ನಮ್ಮ ಹಾಪ್ ಬೇಗಂ ಮಚ್ಚರದಾನಿ ಬಟ್ಟಿ ಒಳಗೆ ಒಂದು ಮಂಕಿ ಕ್ಯಾಪ್ ಹೊಲ್ಸಿಕೊಂಡು ಬಿಟ್ಟಿದ್ದಾರೆ. ಮೈತುಂಬಾ ಜಾಳಗಿ  ಜಾಳಗಿ ಬಟ್ಟಿ ಹಾಕ್ಕೊಂಬಿಟ್ಟಿ, ಜಾಳಗಿ ಮಂಗ್ಯಾನ ಟೊಪ್ಪಿಗಿ ಹಾಕ್ಕೊಂಡು ವಾಡೇದಾಗ ಅಡ್ಡಾಡುದ ನೋಡಿದ್ರೆ, ಸ್ಪೈಡರ್ ಮ್ಯಾನ್, ಸ್ಪೈಡರ್ ಮ್ಯಾನ್ ಅಂತ ಹಾಡಬೇಕು ನೋಡಿ.....ಹಾಗೆ. ಅದೂ ಬಿಳಿ ಬಣ್ಣದ ಜಾಳ್ಗಿ ಜಾಳ್ಗಿ ಡ್ರೆಸ್. ಒಳ್ಳೆ ದೆವ್ವಾ - ಅಂದಾ ಕರೀಂ.

ಸಾಬ್ರಾ....ಸ್ಪೈಡರ್ ಉಮನ್....ಸ್ಪೈಡರ್ ಉಮನ್.....ಮಚ್ಚರದಾನಿ ವಸ್ತ್ರದ ಕುರ್ತಾ ಪೈಜಾಮ ಹಾಕ್ಕೊಂಡ ನೀವು ಸ್ಪೈಡರ್ ಮ್ಯಾನ್....- ಅಂತ ಸಣ್ಣದಾಗಿ ಕರೆಕ್ಟ್ ಮಾಡಿ ಕಾಡಿಸಿದೆ.

ಓಹೋ.....ಹಾಂಗ ಅನ್ನು? ಭಾಳ ಗಹನವಾದ ವಿಚಾರ. ಅಕಿಗೆ ಯಾರು ಮಚ್ಚರ್ದಾನಿ ಅರವೀದು ವಸ್ತ್ರಾ ಮಾಡಿ ಹೊಲಿಸ್ಕೊಂಡು, ಅದನ್ನ ಹಾಕ್ಕೊಂಡು ಅಡ್ಡಾಡು ಅಂತ ಮನಿಹಾಳ ಐಡಿಯಾ ಕೊಟ್ಟಾರೋ? - ಅಂತ ಕೇಳಿದೆ.

ಅದೇ ಸಾಬ್. ಮತ್ಯಾರು? ಅವನೇ ಡಾ. ಎಸ್. ಎಸ್. ಉಳ್ಳಾಗಡ್ಡಿ. ಮಸ್ತ ಪುಂಗಿ ಟ್ರೀಟ್ಮೆಂಟ್ ಕೊಟ್ಟು ಇಕಿದು ಸಾಂಪ್ ಸಪ್ನಾ ಬರೊ ಬೀಮಾರಿ ಗುಣಾ ಮಾಡಿದ. ಈಗ ಹೋಗಿ ಅವನಕಡೆ ಮಚ್ಚರ್ ಭಾಳ ಅವೇ ಅಂತೆ ಹೇಳಿದ್ದಕ್ಕೆ, ಇದನ್ನ ಹೇಳಿ, ನಮ್ಮ ಹಾಪ್ ಬೇಗಂ ಕಡೆ ಮತ್ತೊಂದು ಹತ್ತು ಸಾವಿರ ಇಸ್ಕೊಂಡು ಈ ಮನಿಹಾಳ ಐಡಿಯಾ ಕೊಟ್ಟಾನೆ. ಪುಂಗಿ ಊದಿ ಹಾವನ್ನು ಓಡಿಸಿದ್ದ ನಮ್ಮ ಬೇಗಂ ಅವನಿಂದ ಭಾಳಾ  ಇಂಪ್ರೆಸ್ ಆಗ್ಬಿಟ್ಟಿ ಅವನು ಹೇಳಿದಾ ಹಾಗೆ ಮಚ್ಚರದಾನಿ ಕಪಡೇದು ಕಾಚಾ ಸೆ ಕರ್ಚೀಫ್ ತಕ್, ಚಡ್ಡಿ ಸೆ ಚೂಡಿದಾರ್ ತಕ್  ಮತ್ತು ಪೋಲ್ಕಾ ಸೆ ಪರ್ಕಾರ್ ತಕ್ ಹೊಲಿಸ್ಕೊಂಡು ಬಿಟ್ಟಿದೆ. ಕರ್ಮ......ಕರ್ಮ......- ಅಂತ ಉಳ್ಳಾಗಡ್ಡಿ ಡಾಕ್ಟರನ ಪ್ರತಾಪ ಹೇಳಿ ಮುಗಿಸಿದ.

ಹೋಗ್ಗೋ......ಇವನ.....ಇಲ್ಲೂ ಬಂದನಾ ಉಳ್ಳಾಗಡ್ಡಿ ಡಾಕ್ಟರ? ಅವನ್ನ ಓಡಸ್ರೀ. ನಿಮ್ಮ ಗ್ಯಾಂಗ ಅದ, ಮತ್ತೊಂದ ಅದ ಅಂತ ಅನ್ನಕೋತ್ತ ಇರ್ತೀರಿ - ಅಂತ ಸಾಬರಿಗೆ ಐಡಿಯಾ ಕೊಟ್ಟೆ.

ಸಾಬ್ ನಿಮಗೆ ಇನ್ನೊಂದು ಖಬರ್ ಗೊತ್ತು ಕ್ಯಾ? - ಅಂದ ಕರೀಂ.

ಏನಪಾ? ಹೇಳು - ಅಂದೆ.

ಬಹುತ್ ಖರಾಬ್ ಖಬರ್ ಸಾಬ್.......ನಮ್ಮ ಬೇಗಂ ನಾವು ಕೊಡಸಿದ್ದ ರೇಶಂ ದು ಸೀರೀಗೆ ಎಲ್ಲಾ ತೊಗೊಂಡು ಹೋಗಿ, ಅದರಿಂದ ಕಿಡಕಿಗೆ ಹಾಕೋ ಕರ್ಟನ್ ಹೋಲಿಸಿ ಬಿಟ್ಟಿದ್ದಾರೆ ಸಾಬ್.....ಇದಕ್ಕೆ ಏನಂತೀರಿ? -ಅಂದ ಕರೀಂ.

ಇದು ದೊಡ್ಡ ಘಾತ ಆತಲ್ಲರೀ ಸಾಬ್ರಾ. ರೆಶಮೀ ಸೀರೀ ಕರ್ಟನ್. ವಾಹ! ವಾಹ! ಕ್ಯಾ ಬಾತ್ ಹೈ? ವಿಚಿತ್ರ. ಆದರೂ ಸತ್ಯ. ಇದು ಆ ಉಳ್ಳಾಗಡ್ಡಿ ಐಡಿಯಾ ಏನು? ಅಥವಾ ಇದನ್ನ ಯಾವದರ ಬಳ್ಳೊಳ್ಳಿ ಡಾಕ್ಟರ್ ಐಡಿಯಾ ಕೊಟ್ಟಾನೋ? - ಅಂತ ಕೇಳಿದೆ.

ಇಲ್ಲಾ ಸಾಬ್....ಇದು ಇಕಿದೇ ಸ್ವಂತ ಐಡಿಯಾ. ಹ್ಯಾಗೂ ಈಗ ಕಾಟನ್ ಹುಚ್ಚು ಹತ್ತಿದೆ. ರೇಷ್ಮೆ ಸೀರೆ ಯಾಕೆ ಅಂತ ಹೇಳಿ, ಪರಪರಾ ಅಂತಾ ಕತ್ತರಿಸಿ ಕತ್ತರಿಸಿ ಕರ್ಟನ್, ಕಾಲು ಒರೆಸೋ ಬಟ್ಟೆ, ಟಾವೆಲ್ ಎಲ್ಲ ಮಾಡಿ ಮಾಡಿ ಹಾಕ್ತಿದಾಳೆ ನಮ್ಮ ಬೇಗಂ. ಎಲ್ಲಾ 10-15-20 ಸಾವಿರ ರುಪೈದು ಸೀರೆ ಸಾಬ್! ನಮ್ಮದು ಹೊಟ್ಟಿ ಉರಿದು......ಉರಿದು.....ಏನು ಮಾಡೋದು ಸಾಬ್? - ಅಂತ ತಲಿ ಮ್ಯಾಲೆ ಕೈ ಇಟ್ಟಗೊಂಡ ಕರೀಂ.

ಹೋಗ್ಗೋ....ಸಾಬ್ರಾ! ಇದು ವಿಚಿತ್ರ ಆತಲ್ಲರಿ. ನಿಮ್ಮದ ಲಕ್ ಬಿಡ್ರಿ. ಅವನೌನ ಮೈ ವರೆಸಿಕೊಳ್ಳಲಿಕ್ಕೂ ರೇಶ್ಮಿ ಟಾವೆಲ್. ಕೈ ವರೆಸಿಕೊಳ್ಳಲಿಕ್ಕೂ ರೇಶ್ಮಿ ನ್ಯಾಪಕಿನ್. ಏನ ಕಥಿ? ನವಾಬರ ಕಾಲ ವಾಪಸ್ ಬಂದ ಹಾಂಗ ಅನ್ನಸ್ತದ ನೋಡ್ರೀ! - ಅಂದೆ.

ಹೌದು! ಹೌದು! ನಿಮಗೆ ಎಲ್ಲಾ ಹಾಗೆ ಅನ್ನಿಸ್ತದೆ. ಈ ಕಾಟನ್ ಹುಚ್ಚ ಬಿಟ್ಟ ಮ್ಯಾಲೆ ಮತ್ತೆ ರೇಶ್ಮಿ ವಸ್ತ್ರಾ ಕೊಡಸು ಅಂದ್ರು ನಂದು ಮತ್ತೆ 5-6 ಲಾಖ್ ಫುಲ್ ಮುಂಡಾಯಿಸ್ಕೊಂಡು ಹೋಗಿ ಬಿಡ್ತದೆ. ಗೊತ್ತು ಕ್ಯಾ? - ಅಂದ ಕರೀಂ.

ಸಾಬ್! ಲಾಸ್ಟ್ ಒಂದು ಬಾರಿ confirm ಮಾಡಿ. ಅದು ಆ ಕಾಟನ್ ಪೇಟೆದು ಪುಷ್ಪಾಜಿ ಕಾಟನ್ ಬಿಸಿನೆಸ್ಸ್ ಮಾಡೋದಿಲ್ಲ ಅಲ್ಲಾ? ಯಾಕೆಂದ್ರೆ ನಮಗೆ ಕಾಟನ್ ಹೋಲ್ ಸೇಲ್ ನಲ್ಲಿ ಚೀಪಾಗಿ ಕೊಡೋರು ಬೇಕು - ಅಂದ ಕರೀಂ.

ಏ.....ಇಲ್ಲೋ....ಅವರದ್ದು ಕಾಟನ್ ಗೀಟನ್ ಬಿಸಿನೆಸ್ಸ್ ಇಲ್ಲ. ಅವರ ಹೆಸರಾ ಎತ್ತಬ್ಯಾಡ ನೀ. ತಿಳಿತಲ್ಲ? - ಅಂದೆ.

ಓಕೆ ಸಾಬ್.....ಇನ್ನು ನಮ್ಮದೇ ಹೊಲದಲ್ಲಿ ಕಾಟನ್ ಬೆಳೆಯೋದು ಬೆಟರ್ ಅನ್ನಿಸ್ತದೆ. ವಿಚಾರ ಮಾಡ್ತೇನಿ. ಈಗ ಬರ್ತೇನಿ. ಖುಧಾ ಹಾಫಿಜ್ - ಅಂತ ಹೇಳಿ ಕರೀಂ ರೈಟ್ ಅಂದ.

ಏನೋಪ್ಪಾ.....ಇದು ಹುಚ್ಚು ಮುಖದ ಎಷ್ಟನೇ ಮುಖವೋ ಏನೋ? ದೇವರಿಗೇ ಗೊತ್ತು.

Saturday, September 01, 2012

ಮದರಂಗಿ ಮಂಗಿ. ತಿರಂಗಿ ತುಂಗಿ. ಸಾತರಂಗಿ ಸಂಗಿ.

ಕರೀಂ ಮತ್ತ ಸಿಕ್ಕಿದ್ದ.

ಈಗಿತ್ತಲಾಗ ಯಾಕೋ ಡಲ್ ಆಗ್ಯಾನ. ಬೇಗಂ ಹೆಚ್ಚಗಿ ಹಾಪ್ ಆದಂಗ ಇವ ಜಾಸ್ತಿ ಡಲ್. ಅಕಿನ ಹೋಗಿ ದರ್ಗಾಕ್ಕ ಬಿಟ್ಟು ಬಾರೋ, ಅಲ್ಲೆ ದಿನಾ ಮೂರ ಸರೆ ಬೇವಿನ ತೊಪ್ಪಲದಿಂದ ಝಾಡಿಸ್ತಾರ, ಒಂದೆರಡು ವರ್ಷ ಆದ ಮ್ಯಾಲೆ ಸರಿ ಆದರೂ ಆದಳು....ಅಂತ ಹೇಳಿದ್ರ ಕೇಳಂಗಿಲ್ಲ. 

ಮದುವಿಯಾದ ಮ್ಯಾಲ ಹುಚ್ಚು ಬಿಡ್ತದ ಅಂದ್ರ ಇವಂಗ ಮತ್ತ ಇವನ ಹೆಂಡತಿಗೆ ಇಬ್ಬರಿಗೂ ಮದುವಿಯಾದ ಮ್ಯಾಲ ಹುಚ್ಚು ಹಿಡದ ಬಿಟ್ಟದ. ಎಲ್ಲಾ ವಿಚಿತ್ರ.

ಯಾಕೋ ಕರೀಂ? ಏನ ಸುದ್ದಿ ಮತ್ತ? ಎಲ್ಲಾ ಆರಾಮ ಏನಪಾ? - ಅಂದೆ.

ಎಲ್ಲಿದು ಆರಾಮ ಸಾಬ್? ಬೇಗಂ ಫುಲ್ "ಹೆಡ್ ಲೈಟಿಂಗ್" ಮಾಡಿಕೊಂಡುಬಿಟ್ಟಿದೆ. ಅಕಿ ಬುರ್ಕಾ ಹಾಕದೆ ಹೊರಗೆ ಹೊಂಟಳು ಅಂದ್ರೆ ನೋಡಿದವರು ಬೆಚ್ಚಿ ಬೀಳಬೇಕು ಹಾಂಗೆ ಅವತಾರ ಮಾಡಿಕೊಂಡಿದೆ ಯಬಡಿ ಬೇಗಂ. ಅಕಿ ಜೊತಿ ಹೋಗಬೇಕು ಅಂದ್ರೆ ನಾನು ಬುರ್ಕಾ ಹಾಕಿಕೊಂಡು ಹೋಗಬೇಕು. ಅಷ್ಟು ಶರಮ್ ಬರೋ ಹಾಗೆ ಆಗಿ ಬಿಟ್ಟಿದೆ. ಎಲ್ಲಾ ನಮ್ಮದು ನಸೀಬ್. ಯಾ ಖುದಾ. ಯಾಕೆ ಇಷ್ಟು ತೊಂದ್ರೆ ನಮಗೆ ಪರ್ವರ್ದಿಗಾರ್? - ಅಂತ ಹೇಳಿ ಕೂತ ಬಿಟ್ಟ.

ಏನಂದ್ರೀ? "ಹೆಡ್ ಲೈಟಿಂಗ್"? ಅಂದ್ರ? ನಿಮ್ಮ ಬೇಗಂ ತಲಿಗೆ ಹೆಡ್ ಲೈಟ್ ಫಿಕ್ಸ್ ಮಾಡಿಕೊಂಡಾರ ಏನು? ಅಲ್ಲಾ...ರಾತ್ರಿ ಎದ್ದು ಸಂಡಾಸಕ್ಕ ಹೋಗು ಮುಂದ ಬ್ಯಾಟರೀ ಕೈಯಾಗ ಯಾಕ ಹಿಡಕೊಂಡು ಹೋಗುದು? ತಲಿಗೇ ಫಿಕ್ಸ್ ಮಾಡಿಕೊಂಡುಬಿಟ್ಟರ, ಒಂದ ಕೈಯಾಗ ಚಂಬು, ಇನ್ನೊಂದು ಕೈಯಾಗ ಸ್ಯಾಮ್ಸಂಗ್ ಗೆಲಾಕ್ಸಿ ಫೋನ್ ಹಿಡಕೊಂಡು, ಫೇಸ್ಬುಕ್ ಮ್ಯಾಲೆ ಮಂಗ್ಯಾತನ ಮಾಡಿಕೋತ್ತ ಹೋಗಬಹುದು ಅಂತ ಅವರ ಐಡಿಯಾ ಇರಬೇಕು. ಅಲ್ಲ? ಶಿಕಾರಿ ಮಾಡಲಿಕ್ಕೆ ಹೋಗೋ ಮಂದಿ ತಲಿಗೆ ಹೆಡ್ ಲೈಟ್ ಹಾಕ್ಕೊಂಡಿರ್ತಾರ ನೋಡು. ಅಂತಾ ಹೆಡ್ ಲೈಟ್ ಏನಪಾ? - ಅಂತ ಕೇಳಿದೆ.

ಕರೀಮಂದು ಹೇಳಿ ಕೇಳಿ ಸವಣೂರ ನವಾಬರ ವಂಶ. ದೊಡ್ಡ ವಾಡೆ ಅದ. ಸಂಡಾಸ್ ಮನಿ ಹಿಂದ ದೂರ ಅದ. ರಾತ್ರಿ ಕತ್ತಲು ಬ್ಯಾರೆ. ಬ್ಯಾಟರೀ ಬೇಕು. ಬ್ಯಾಟರೀ ಕೈಯಾಗ ಬ್ಯಾಡ ಅಂತ ಹೇಳಿ ತಲಿಗೇ ಹೆಡ್ ಲೈಟ್ ಫಿಕ್ಸ್ ಮಾಡ್ಸಿಕೊಂಡಾಳ ಅಂತ ಅನ್ನಸ್ತದ.

ಅಯ್ಯೋ.....ಅಲ್ಲ ಸಾಬ್. ತಲಿಗೆ ಎಲ್ಲಿದು ಬ್ಯಾಟರೀ? ಹಾಂಗೇನೂ ಇಲ್ಲ. ಈಗ ಮತ್ತ ನಮ್ಮದೂಕಿ ವಾಡೆನಲ್ಲಿ ಅಷ್ಟು ದೂರ ಸಂಡಾಸ್ ಗೆ ಹೋಗುದು ಬೇಕಾಗಿಲ್ಲ. ಈ ಹೊಸ ಬೇಗಂ ಬಂದ ಕೂಡಲೇ ಮನಿ ಒಳಗೇ ಒಂದು ಕಮೋಡ್ ಸ್ಟೈಲಿನಲ್ಲಿ 5-6 ಲಕ್ಷ ರೂಪಾಯಿ ಖರ್ಚ ಮಾಡಿ, ನಮ್ಮದು ತಲಿ ಬೋಳ್ಸಿ ಹೊಚ್ಚ ಹೊಸ ಅಂಗ್ರೇಜಿ ಪಾಯಖಾನಾ ಕಟ್ಟಿಸಿಬಿಟ್ಟಿದ್ದಾಳೆ. ಅದು ಅಕಿ ಒಬ್ಬಾಕಿ ಉಪಯೋಗಕ್ಕೆ ಮಾತ್ರ. ಬಾಕಿ ಯಾರೂ ಅಲ್ಲಿ ಹೋಗೋ ಹಾಗಿಲ್ಲ. ಅದು ಯಾವಾಗಲೂ ಘಂ ಘಂ ಅನ್ನುವ ಹಾಗೆ ಏನೇನೋ ಪರ್ರ್  ಪರ್ರ್ ಅಂತಾ ಸ್ಪ್ರೆ ಮಾಡ್ತಾಳೆ. ಒಟ್ಟಿನಲ್ಲಿ ಪಾಯಖಾನಿ ಕಟ್ಟೋಕೆ ನಮ್ಮದೂಕಿ ರೊಕ್ಕಾ. ರಾತ್ರಿ ಎದ್ದು ನಾವು ಮಾತ್ರ ಮನಿ ಹಿಂದೆ ಒಂದು ಫರ್ಲಾಂಗ್ ದೂರ ಇರೊ ಸಂಡಾಸ್ ಗೆ ಹೋಗಬೇಕು. ಅಲ್ಲಿ ಹಾವು ಹರಣಿ ಬೇರೆ ಅವೇ. ಇಲ್ಲಿ ಈ ಹಾವರಾಣಿ ಬೇಗಂಗೆ ಮಾತ್ರ ಮನಿ ಒಳಗೇ ಇರುವ ಅಂಗ್ರೇಜಿ ಸಂಡಾಸ್. ಥತ್! ಜಿಂದಗೀನೆ ಹಾಳಾಗ್ ಬುಟ್ಟೈತೆ. ಈ ಮಂಗ್ಯಾ ಬೇಗಂ ಜೊತೆ ಶಾದಿ ಆಗಿ ಬಿಟ್ಟೈತೆ - ಅಂತ ಊದ್ದ ಕಥಿ ಹೇಳಿದ ಕರೀಂ.

ದೊಡ್ಡ ಸುದ್ದಿ ಆತಲ್ಲರೀ ಸಾಬ್ರಾ? ಎಲ್ಲಿ ಕಟ್ಟಿಸಿಕೊಂಡಾಳ ಹೊಸಾ ಪಾಯಖಾನಿ? - ಅಂತ ಕೇಳಿದೆ.

ಅದೇ ಸಾಬ್. ನಿಮಗೆ ಯಾದ್ ಐತೆ ಕ್ಯಾ? ನಮ್ಮದು ವಾಡೆಯೊಳಗೆ ದೋಸ್ತ ಮಂದಿ ಜೊತೆ ಶರಾಬ್ ಕುಡೀತಾ, ಮುಜರಾ ನೋಡೋ ಒಂದು ದೊಡ್ಡ ಹಾಲು ಇತ್ತು ನೋಡಿ. ಅದರಲ್ಲಿ ಒಂದಿಷ್ಟು ಜಾಗ ತೊಗೊಂಡು ಬಿಟ್ಟಿ ಅಲ್ಲೇ ಅಕಿದು ಅಂಗ್ರೇಜಿ ಪಾಯಖಾನಾ. ಈಗ ಅಲ್ಲಿ ನಮಗೆ ಪಾರ್ಟಿ ಮಾಡೋ ಹಾಗೇ ಇಲ್ಲ. ಮಾಡಲಿಕ್ಕೆ ಇಕಿ ಬಿಡೋದೂ ಇಲ್ಲ. ಪಾಯಖಾನಿ ಮುಂದೆ ಕ್ಯಾ ಪಾರ್ಟಿ ಸಾಬ್? ಒಟ್ಟಿನಲ್ಲಿ ನಮ್ಮದು ಒಂದು ಬೆಸ್ಟ್ "ಮೆಹಖಾನಾ" (ದೊಡ್ಡ ಹಾಲ್) ಹೋಗ್ಬಿಟ್ಟಿದೆ - ಅಂತ ಹೇಳಿದ ಕರೀಂ.

ಹೋಗ್ಗೋ ಸಾಬ್ರಾ. ನಿಮ್ಮ ಮೆಹಖಾನಾ ಹೋಗಿ ಇಕಿ ಪಾಯಖಾನಾ ಆಗಿ ಹೋತಲ್ಲರೀ. ಏನೋ ಒಂದು ಖಾನಾ. ದುಷ್ಟ ಬುದ್ಧಿ. ಎಂತಾ ಚಂದ ಇತ್ತು ನಿಮ್ಮ ಮೆಹಖಾನಾ ಹಾಲ್. ಅಲ್ಲೆ ನಿಮ್ಮ ಮಾಮೂಜಾನ್ ಬಂದಾಗ ಎಂತೆಂತಾ ಪಾರ್ಟಿ ಕೊಡ್ತಿದ್ದರು? ಏನು ಕಥಿ?ಏನ ಮಸ್ತ ಮುಜರಾ ಡ್ಯಾನ್ಸರ್ ಕರ್ಕಕೊಂಡು ಬರ್ತಿದ್ದರು. ಎಲ್ಲಾ ಬಂದ ಏನು ಈಗ? ಈಗ ನೋಡಿದ್ರ ನೀವ ಇಕಿ ಹೇಳಿದಾಂಗ ಮುಜರಾ ಮಾಡೋ ಬಂದರ್ ಆದಂಗ ಕಾಣಿಸ್ತದ. ಎಲ್ಲಾ ಹೋಗಿಬಿಟ್ಟಿತಲ್ಲರೀ ಸಾಬ್ರಾ? ಹಾಂ? ಹಾಂ? - ಅಂತ ನಂದೂ ಒಂದಿಷ್ಟು ದುಃಖ ವ್ಯಕ್ತಪಡಿಸಿದೆ. ಮಸ್ತ ಪಾರ್ಟಿ ಮಾಡ್ತಿದ್ದಿವಿ ನಾವು ಅಲ್ಲೆ ಜವಾನಿ ಇದ್ದಾಗ.

ಸಚ್ಚ್ ಬಾತ್ ಸಾಬ್. ಮೆಹಖಾನಾ ಸಚ್ಚಿ ಮೇ ಪಾಯಖಾನಾ ಹೋಗಯಾ ಸಾಬ್ - ಅಂತ ಕರೀಮನೂ ಒಪ್ಪಿಕೊಂಡ.

ಅದೆಲ್ಲಾ ಇರಲಿ. ಈಗ ಹೆಡ್ ಲೈಟಿಂಗ್ ಅಂದ್ರ ಏನು? ಅದನ್ನ ಹೇಳ್ರೀ. ಟಾಪಿಕ್ ಚೇಂಜ್ ಆಗಿ ಬಿಡ್ತು - ಅಂತ ಕೇಳಿದೆ.

ಅಯ್ಯೋ!!!! ತಲಿ ಇರೋದಿಲ್ಲ ಕ್ಯಾ? ಅದರ ಮ್ಯಾಲೆ ಬಾಲ್ ಅಂದ್ರೆ ಕೂದಲು ಇರೋದಿಲ್ಲ ಕ್ಯಾ? ಅವು ಕೂದಲಕ್ಕೆ ಬ್ಯಾರೆ ಬ್ಯಾರೆ ಬಣ್ಣದ ರಂಗ ಹಚ್ಚಿಕೊಂಡು ಒಂದು ಈಸ್ಟಮನ್ ಕಲರ್ ತಲಿ ಮಾಡಿಕೊಳ್ಳೋದಕ್ಕೆ ಹೆಡ್ ಲೈಟಿಂಗ್ ಅಂತಾರಂತೆ. ನಮ್ಮ ಯಬಡ ಬೇಗಂ ಅತಿ ಕೆಟ್ಟ ರೀತಿಯಲ್ಲಿ ತಲಿಗೆ ಬಣ್ಣ ಬಣ್ಣದ  ಪೇಂಟ್ ಹೊಡೆಸಿಕೊಂಡು ಬಂದು ಬಿಟ್ಟಿದೆ. ಯಾಕೆ ಅಂದ್ರೆ? ಅದು ಫ್ಯಾಶನ್. ದೇಶಭಕ್ತಿ ಅಂತದೆ ಸಾಬ್. ಅಕಿ ರೂಪ ನೋಡೋ ಹಾಗೆ ಇಲ್ಲ - ಅಂದ ಕರೀಂ.

ಓಹೋ....ಸಾಬ್ರಾ. ಅದು ಹೈಲೈಟಿಂಗ್ ಅಂತ ಇರ್ಬೇಕು ನೋಡ್ರೀ. ನಿಮ್ಮದು ಒಂದು ರೀತಿಲೇ ಕರೆಕ್ಟ್ ಅದ ಬಿಡ್ರೀ. ಹೆಡ್ ಅಂದ್ರ ತಲಿ. ಲೈಟ್ ಅಂದ್ರ ಬೆಳಕು. ತಲಿ ಪೂರ ಜಗಮಗ ಅನ್ನೋ ಹಾಂಗ ಪೇಂಟ್ ಹೊಡಕೊಂಡು ಬಂದ್ರ ಹೆಡ್ ಲೈಟಿಂಗ್ ಅಂದ್ರ ತಪ್ಪಿಲ್ಲ ತೊಗೋರಿ - ಅಂದೆ.

ಹೆಂಗ ಮಾಡ್ಸಿಯಾಳ ನಿಮ್ಮ ಬೇಗಂ ಹೆಡ್ ಲೈಟಿಂಗ್? ಅಲ್ಲಲ್ಲ ಹೈಲೈಟಿಂಗ್. ಅಷ್ಟು ಅಸಡ್ಡಾಳ ಮಾಡ್ಸಿಯಾಳ ಅಂತೀರಿ. ದೇಶಭಕ್ತಿ ಅಂತೀರಿ. ಭಾಳ ಗೊಂದಲ ಅದ - ಅಂತ ವಿವರಣೆ ಕೇಳಿದೆ.

ತಲಿ ಮ್ಯಾಲೆ ನಮ್ಮ ಇಂಡಿಯಾದ ಫ್ಲಾಗ್ ಅಂದ್ರೆ ಝೇಂಡಾ ಪೇಯಿಂಟ್ ಹೊಡ್ಸಿದಾಳೆ ಸಾಬ್. ಮತ್ತೆ ನಿಮ್ಮದು ಮಂದಿ ಗತೆ ನಟ್ಟ ನಡು ಚಂಡ್ಕಿ (ಜುಟ್ಟ) ಬೇರೆ. ಅದು ಅಶೋಕ ಚಕ್ರ ಅಂತೆ. ಈಗ ಅಕಿ ಎದ್ರಿಗೆ ಬಂದಳು ಅಂದ್ರೆ, ನೀವು ಸಾವಧಾನ್ ಪೋಷಿಶನ್ ಗೆ ಹೋಗಿ ಸೆಲ್ಯೂಟ್ ಹೊಡಿ ಬೇಕು. ಯಾಕಂದ್ರೆ ನಿಮ್ಮ ಮುಂದೆ ಇಂಡಿಯಾದ ಗೌರವ ಗೂಳವ್ವನ ಗತೆ ನಿಂತಿರ್ತದೆ - ಅಂತ ಅವನ ಹೆಂಡ್ತಿ ಹ್ಯಾಂಗ ತಲಿಗೆ ಪೇಂಟ್ ಹೊಡಿಸ್ಯಾಳ ಅಂತ ಹೇಳಿದ.

ಯಾಕೋ ಗೊಂದಲ ಆತು. ಹೈಲೈಟಿಂಗ್ ಅಂತಾನ. ನಡು ಚಂಡ್ಕಿ ಗತೆ ಅಶೋಕ ಚಕ್ರ ಬೇರೆ ಮಾಡಿಸ್ಯಾಳ ಅಂತಾನ. ಎಲ್ಲೆ ಫುಲ್ ತಲಿ ಬೋಡಿ ಹೊಡೆಸಿ, ಚಂಡ್ಕಿ ಒಂದಾ ಬಿಟ್ಟು, ಬೋಳಿಸಿದ ತಲಿಗೆ ಕೇಸರಿ, ಬಿಳಿ, ಹಸಿರು ಪೇಂಟ್ ಹೊಡಿಸಿಕೊಂಡು ಬಂದು ಬಿಟ್ಟಾಳೋ ಅಂತ ಸಂಶಯ ಬಂತು. ಕೇಳೇ ಬಿಡೋಣ ಅಂತ ಮಾಡಿದೆ.

ಅಂದ್ರಾ....ತಲಿ ಸ್ವಚ್ಚ ಬೋಳಿಸ್ಕೊಂಡು, ನಟ್ಟ ನಡು ಅಶೋಕ ಚಕ್ರದ ಗತೆ ಒಂದು ಡಿಸೈನರ್ ಚಂಡ್ಕಿ ಬಿಟ್ಟು, ಬೋಳ ತಲಿಗೆ ಕರೆಕ್ಟಾಗಿ 33.33%, 33.33%, 33.33% ಲೆಕ್ಕದೊಳಗ ಕೇಸರಿ, ಬಿಳಿ, ಹಸಿರು ಪೇಂಟ್ ಹೊಡಿಸ್ಕೊಂಡು ಬಂದು ಬಿಟ್ಟಾಳ ಏನು? - ಅಂತ ಕೇಳಿದೆ.

ಇಲ್ಲ ಸಾಬ್. ನಿಮಗೆ ಖರೇನೇ ಅಕಲ್ ಇಲ್ಲ. ಇದು ಬೋಳಿಸಿ ಪೇಂಟ್ ಹೊಡೆಯೋದು ಅಲ್ಲ. ಕೂದಲ ಹಾಗೇ ಇರ್ತಾವೆ. ಅದರ ಮೇಲೆ ಪೇಂಟ್ ಹೊಡಿತಾರೆ. ಬೇರೆ ಬೇರೆ ಕಲರದ್ದು. ಗೊತ್ತಾಯ್ತು ಕ್ಯಾ? ಮುಂದೆ ಕೇಸರಿ, ನಡು ಬಿಳಿ, ಹಿಂದೆ ಹಸಿರು. ನಡು ಚಂಡ್ಕಿ ಹಾಂಗೆ ಅಶೋಕ ಚಕ್ರ ಪೇಂಟ್ ಮಾಡ್ತಾರೆ. ತಿಳೀತು ಕ್ಯಾ? - ಅಂತ ಸಮಾಧಾನದಿಂದನ ಫುಲ್ ವಿವರಣೆ ಕೊಟ್ಟ.

ಹಾಂಗೆನು? ನಮಗೇನ ಗೊತ್ತಪಾ? ನಮ್ಮ ಪೈಕಿ ಯಾರೂ ಹಾಂಗ ಮಾಡಿಸಿಕೊಂಡಿಲ್ಲ. ಅದಕ್ಕ ನಮಗ ಇದೆಲ್ಲದರ ಹವಾ ಇಲ್ಲ ನೋಡಪಾ. ನಮಗ ಈ ಹೆಂಗಸೂರು ಚಡ್ಡಿದಾರ ಮತ್ತೊಂದು ಡ್ರೆಸ್ ಹಾಕಿದ್ದು ನೋಡೇ ಆಶ್ಚರ್ಯ ಆಗ್ತದ. ಇನ್ನು ಇಂತಾ ವಿಚಿತ್ರ ಎಲ್ಲ ಕೇಳಿಬಿಟ್ಟರ.....ರಾಮಾ....ಕೃಷ್ಣಾ......ಮುರಾರೆ......- ಅಂತ ಕಾಲ ಕೆಟ್ಟು ಹೋತು ಅನ್ನೋ ಲುಕ್ ಕೊಟ್ಟೆ.

ಸಾಬ್....ಅದು ಚಡ್ಡಿದಾರ ಅಲ್ಲ. ಚೂಡಿದಾರ್ ಕುರ್ತಾ ಅಂತ. ಚಡ್ಡಿದಾರ ನಿಮ್ಮದು ಪಟ್ಟಾಪಟ್ಟಿ ಅಂಡರವೇರದು ಇರಬೇಕು ನೋಡ್ರೀ - ಅಂತ ಕರೆಕ್ಟ್ ಮಾಡಿದ. ಹೊಸಾ ಜನರಲ್ ನಾಲೇಜ್ ಕೊಟ್ಟ. ಧನ್ಯ. ಧನ್ಯ.

ಸಾಬ್ರಾ....ಈ ತಲಿ ಮ್ಯಾಲೆ ತಿರಂಗಾ ಝೇಂಡಾ ಎಲ್ಲೆ ಪೇಂಟ್ ಮಾಡ್ಸಿದ್ರು ನಿಮ್ಮ ಬೇಗಂ? ಧಾರವಾಡದಾಗ ಹಜಾಮತಿ ಅಂಗಡಿ ಅವರು ಇದನ್ನ ಮಾಡಲಿಕ್ಕೆ ಚಾಲೂ ಮಾಡ್ಯಾರ ಏನು? ಎಲ್ಲೆ ಅಲ್ಲೇ ಮಾಳಮಡ್ಡಿ ರಾಯಲ್ ಹೇರಕಟಿಂಗ್ ಅಂಗಡಿಗೆ ಹೋಗಿ ಪಾಂಡ್ಯಾನ ಕಡೆ ಪೇಯಿಂಟ್ ಹೊಡೆಸಿಕೊಂಡು ಬಂದಳು ಏನು? - ಕೇಳಿದೆ. 

ನಮಗ ಗೊತ್ತಿದ್ದ ಹಜಾಮತಿ ಅಂಗಡಿ ಅಂದ್ರ ಅದು ಒಂದ.

ಸಾಬ್....ಏನು ಆಗಿದೆ ನಿಮಗೆ? ಸ್ಟೈಲಿಶ್ ಸುಂದರ್ ಔರತ್ ಮಂದಿ ಎಲ್ಲಾ ನಿಮ್ಮ ಹಜಾಮ ಪಾಂಡು ಕಡೆ ಹೋಗ್ತಾರೆ ಕ್ಯಾ? ಅದು ಕೇವಲ ಜೆಂಟ್ಸ್ ಗೆ ಮಾತ್ರ. ಪಾಂಡ್ಯಾ ಕಟಿಂಗ್ ಮಾಡೋ ಔರತ್ ಮಂದಿ ಅಂದ್ರೆ ನಿಮ್ಮದು ಒಳಗೆ ಲಾಲ್ ಸೀರಿ ಹಾಕ್ಕೊಂಡ ಅಮ್ಮಾ ಲೋಗ್, ಅದೇ ಗಂಡನ್ನ ಕಳೆದುಕೊಂಡಿರೋ ಮಂದಿ....ಅವರಿಗೆ ಮಾತ್ರ ಮಾಡ್ತಾನೆ. ತಿಳೀತು ಕ್ಯಾ? ಇಕಿ ಬೆಂಗಳೂರಗೆ ಹೋಗಿ ಹೈಲೈಟಿಂಗ್ ಮಾಡಿಸಿಕೊಂಡು ಬಂದಾಳೆ ಸಾಬ್. ಎಲ್ಲಾ ಕೂಡಿ ಬೀಸ್ ಹಜಾರ್ ಖರ್ಚು ಆಯಿತು. ನಮ್ಮದು ತಲಿ ಮತ್ತೆ ಬೋಳಿಸಿ ಬಿಡ್ತು ನಮ್ಮ ಬೇಗಂ - ಅಂತ ಹೇಳಿದ ಕರೀಂ.

ಓಹೋ....ಅಂದ್ರ ಭಾರಿ ದೊಡ್ಡ ಮಟ್ಟದ ಕಾಮಗಾರಿ ಅಂತ ಆತು ಈ ಹೈಲೈಟಿಂಗ್ ಹಜಾಮತಿ. ಇದನ್ನ ಇಲ್ಲೆ ಹುಬ್ಬಳ್ಳಿ ಧಾರವಾಡದಲ್ಲಿ ಯಾರೂ ಮಾಡೋದಿಲ್ಲ ಏನು? - ಅಂತ ಕೇಳಿದೆ.

ಸಾಬ್....ಏನು ಕೇಳ್ತೀರಿ? ನಮ್ಮ ಹಾಪ್ ಬೇಗಂ ತಲಿಗೆ ಪೇಂಟ್ ಹೊಡಿಸ್ಕೋಬೇಕು ಅಂತ ದುಬೈಗೆ ಹೊಗಾಕಿ ಇದ್ದಳು. ಪುಣ್ಯಕ್ಕೆ ಅಲ್ಲಿ ಹೋಗದೇ ಬೆಂಗಳೂರಿಗೆ ಹೋಗಿ ಬಂದಳು. ದುಬೈಗೆ ಹೋಗಿ ಬಂದಿದ್ದರೆ ಕಂಸೆಕಂ ಏಕ ದೋ ಲಾಕ್ ರೂಪಾಯಿದು ನಾಮ ನಮಗೆ ಬೀಳ್ತಿತ್ತು ಸಾಬ್ - ಅಂತ ಹೇಳಿದ ಕರೀಂ.

ದುಬೈಗೆ ಯಾಕ ಹೋಗಲಿಲ್ಲ ನಿಮ್ಮ ಬೇಗಂ? ಅಕಿಗೆ ದುಬೈ ಅಂದ್ರ ಭಾಳ ಸೇರ್ತದ ಅಲ್ಲ? - ಅಂತ ಕೇಳಿದೆ.

ಸಾಬ್....ಅಕಿ ದುಬೈಗೆ ಫೋನ್ ಮಾಡಿ ಎಲ್ಲ ಮಾಹಿತಿ ತೆಗೆದಳು ಸಾಬ್. ಅಲ್ಲಿ ಅವರು ನಾವು ಹೈಲೈಟಿಂಗ್ ಮಾಡ್ತೀವಿ ಆದ್ರೆ ಇಂಡಿಯಾದು ತಿರಂಗಾ ಝೇಂಡಾ ಮಾತ್ರಾ ಹರ್ಗೀಸ್ ಮಾಡೋದಿಲ್ಲ. ಬೇಕಾದ್ರೆ ಪಾಕಿಸ್ತಾನದ ಝೇಂಡಾ ತಲಿ ಮ್ಯಾಲೆ ಪೇಂಟ್ ಹೊಡೆದು ಕೊಡ್ತೀವಿ ಅಂದರಂತೆ ಸಾಬ್. ಇಕಿ ಏನೇ ಅಂದ್ರೂ ಇಂಡಿಯಾದಾಕಿ ನೋಡ್ರೀ. ಇಂಡಿಯಾ ಮೇಲೆ ಅಷ್ಟು ಪ್ರೀತಿ. ಅದೂ ಪಂದ್ರಾ ಅಗಸ್ಟ್ ಗೆ ತಲಿ ಮ್ಯಾಲೆ ತಿರಂಗಾ ಇಲ್ಲದೆ ಪಾಕಿಸ್ತಾನದ ಫ್ಲಾಗ್ ಬಂದ್ರೆ ಇಲ್ಲಿ ಮಂದಿ ಇಕಿ ಕುಂಡಿ ಮ್ಯಾಲೆ ಒದ್ದು ಬಿಡ್ತಾರೆ. ನಾನೇ ಒದ್ದು ಬಿಡ್ತೀನಿ. ಅದಕ್ಕೆ ದುಬೈ ಬೇಡ, ಇಲ್ಲೇ ಬೆಂಗಳೂರಿಗೆ ಹೋಗಿ ತಲಿ ಮ್ಯಾಲೆ ತಿರಂಗಾ ಪೇಂಟ್ ಹೊಡಿಸ್ಕೊಂಡು ಬಂದು ಪಂದ್ರಾ ಅಗಸ್ಟ್ ಸೆಲೆಬ್ರೇಟ್ ಮಾಡಿದಳು ಸಾಬ್....ಇದೇ ಕಥಿ - ಅಂತ ಹೇಳಿದ ಕರೀಂ.

ಏನ ಇರಲಿ. ತಲಿ ಮ್ಯಾಲೆ ತಿರಂಗಾ ಮೂಡಿಸಿಕೊಂಡಾಳ. ದೇಶಭಕ್ತಿ ನೋಡಿ ಖುಷಿ ಆತು.

ಸಾಬ್ರಾ.....ನಿಮ್ಮ ಬೇಗಂ ಮೊದಲು ತಲಿ ತುಂಬಾ ಮದರಂಗೀ ಹಚ್ಚಿಕೊಂಡು ಕೆಂಚ ಕೂದಲಾ ಮಾಡಿಕೊಂಡಿದ್ದಳು. ಅಲ್ಲ? - ಅಂತ ಕೇಳಿದೆ.

ಹೌದು ಸಾಬ್....ನಿಮ್ಮ ಅಮ್ಮೀಜಾನ ಅವರೇ ಅಕಿಗೆ ಮದರಂಗಿ ಗಿಡ ಕೊಟ್ಟಿದ್ದರು. ನೆನಪ ಇಲ್ಲಾ ಕ್ಯಾ? ಅದು ಏನು ಬೆಸ್ಟ್ ಮದರಂಗೀ ಸಾಬ್. ಅದು ಎಷ್ಟೋ ಬೆಸ್ಟ್ ಇತ್ತು ಸಾಬ್. ಮದರಂಗೀ ತಲಿ ಸೆಹತ್ ಗೆ ಒಳ್ಳೇದು. ಅದನ್ನ ಬಿಟ್ಟು ಈಗ ಈ ಮಂಗ್ಯಾನ ಗತೆ ತಲಿ ಮ್ಯಾಲೆ ತಿರಂಗಾ ಪೇಂಟ್ ಮಾಡಿಸ್ಕೊಂಡು ಬಂದಾಳೆ ಹಾಪ್ - ಅಂತ ಹೇಳಿದ ಕರೀಂ.

ನಮ್ಮನಿ ಹಿತ್ತಲದಾಗಿನ ಮದರಂಗೀ ಫೇಮಸ್.

ಹ್ಞೂ...ಹ್ಞೂ....ಒಟ್ಟಿನ್ಯಾಗ ಮೊದಲು "ಮದರಂಗಿ ಮಂಗಿ" ಇದ್ದಳು. ಈಗ "ತಿರಂಗಿ ತುಂಗಿ" ಆಗ್ಯಾಳ ಅಂತ ಆತು. ಮುಂದಿನ ಅವತಾರ ಏನು? "ಪಂಚರಂಗಿ ಪುಂಗಿ" ಏನು? - ಅಂತ ಖೀ.....ಖೀ.....ಅಂತ ನಕ್ಕೆ. ಅವನೂ ನಕ್ಕ.

ಎಲ್ಲಿ....ತುಂಗಿ, ಪುಂಗಿ ಸಾಬ್? ಅಕಿ ಯಾವಾಗಲೂ ಮಂಗೀನೆ - ಅಂತ ಅವನೂ ನಕ್ಕ.

ಸಾಬ್ರಾ.....ಮುಂದಿನ ಸರೆ  "ಸಾತರಂಗಿ ಸಂಗಿ" ಆಗ ಅಂತ ಹೇಳ್ರೀ ನಿಮ್ಮ ಬೇಗಂಗ - ಅಂತ ಅಂದೆ.

ಕ್ಯಾ ಸಾಬ್? "ಸಾತರಂಗಿ ಸಂಗಿ" ಅಂದ್ರೆ? ಅಂದ್ರೆ ಏನು ಸಾಬ್? ಅಕಿ 'ನಾಮ'ಧೇಯ ಸಂಗದಿಲ್ ಸನಂ ಉರ್ಫ್ ಸಂಗಿ ಹೌದು. ಆದ್ರೆ ಸಾತರಂಗಿ ಅಂದ್ರೆ? - ಅಂತ ಕೇಳಿದ ಕರೀಂ. 

ಕರೀಂ ಹೆಂಡ್ತಿ ಹೆಸರು ಮೆಹರುನ್ನೀಸಾ ಉರ್ಫ್ ಸಂಗದಿಲ್ ಸನಂ ಉರ್ಫ್ ಸಂಗೀ. ಅದು ಕರೀಮನ ಇಟ್ಟ ಹೆಸರುಗಳು.

ಅಲ್ಲಾ ಸಾಬ್ರಾ.....ಬರೆ ತಿರಂಗಾಕ್ಕ ಯಾಕ ನಿಲ್ಲಿಸಬೇಕು ಅಂತ? ಫುಲ್ VIBGYOR ಕಲರ್ ಹೊಡೆಸಿಕೊಳ್ಳಲಿಕ್ಕೆ ಹೇಳ್ರೀ ಅಕಿಗೆ. ತಲಿ ನೋಡಿದ್ರ ಕಾಮನಬಿಲ್ಲು ನೋಡಿದಾಂಗ ಆಗಬೇಕು. ಏಳೂ ಬಣ್ಣ ಇರಬೇಕು. ತಲಿ ಏಳು ಭಾಗ ಮಾಡಿ ಏಕ್ದಂ ಕಾಮನಬಿಲ್ಲಿನಾಂಗ ಪೇಂಟ್ ಹೊಡಿಸ್ಕೋ ಅಂತ ಹೇಳ್ರೀ. ಎಲ್ಲಾ ಚಂದ ಹೆಂಗಸೂರ ಹುಬ್ಬಿಗೆ ಕಾಮನಬಿಲ್ಲು ಮತ್ತೊಂದು ಅಂತ ಕವಿಗಳು ಉಪಮೆ ಹೇಳ್ತಾರ. ಇಕಿ ತಲಿಗೇ ಕಾಮನಬಿಲ್ಲಿನಂತಹ ರಂಗು ರಂಗಿನ ತಲಿಯ "ಸಾತರಂಗಿ ಸಂಗಿ" ಅಂತ ಹೊಸಾ ಜಮಾನಾದ ಕವಿಗಳು ಹೇಳಿದರೂ ಹೇಳಬಹುದು - ಅಂತ ಜೋಕ್ ಹೊಡದೆ.

ಕ್ಯಾ ಮಸ್ತ ಜೋಕ್ ಸಾಬ್? ನಿಮ್ಮ ಪ್ರಕಾರ ತಲಿಗೆ ಫುಲ್ ಇಂದ್ರಧನುಷ ಹಾಗೆ ಎಲ್ಲಾ ಸಾತ್ ರಂಗ ಹೊಡೆಸಿಬಿಡು ಅಂತಾ ಕ್ಯಾ ನಿಮ್ಮದು ಐಡಿಯಾ? ಮಸ್ತ ಐಡಿಯಾ ಅದೆ. ನೀವೇ ಹೇಳಿ ಅಕಿಗೆ. ನೀವು ಹೇಳಿದ್ರೆ ಹೋಗಿ ತಲಿಗೆ ಕಾಮನಬಿಲ್ಲಿನ ಬಣ್ಣದ ಹೈಲೈಟ್ ಮಾಡಿಸಲಿಕ್ಕೆ ಅಂತ ಮತ್ತೆ ಬೆಂಗಳೂರಿಗೆ ಓಡ್ತಾಳೆ. ಒಂದೆರಡು ವಾರ ನೆಮ್ಮದಿ. ಪಾರ್ಟಿ ಮಾಡೋಣ. ಕ್ಯಾ? - ಅಂದ ಕರೀಂ.

ಬ್ಯಾಡಪಾ ಬ್ಯಾಡ ಅಕಿ ಸಹವಾಸ. ನೀನಾ ಬೇಕಾದ್ರ ಹೇಳ್ಕೋ. ಅಕಿ ಕಾಮನಬಿಲ್ಲಿನ ಹೈಲೈಟಿಂಗ್ ಮಾಡಿಸ್ಕೊಂಡು "ಸಾತರಂಗಿ ಸಂಗಿ" ಆಗಿ ಬಂದ್ರ, ಪೇಪರ್ ನ್ಯಾಗ್ ಫೋಟೋ ಬಂದು ಏಕ್ದಂ ಫೇಮಸ್ ಆಗಿ ಬಿಡ್ತಾಳ ನೋಡು. - ಅಂದೆ.

ಸಾಬ್ರಾ....ಅಕಿ ಸಾತರಂಗಿ ಸಂಗಿ ಆಗಿ ಬಂದು ಯಾವ ಹಾಡು ಹಾಡಬಹುದು ಅಂತೀರೀ? ಗೆಸ್ ಕರೋಜೀ - ಅಂದೆ.

ಕರೀಂ ಬಿದ್ದು ಬಿದ್ದು ನಕ್ಕ. ನಕ್ಕು ಹೊಟ್ಟಿ ಹಿಡಕೋತ್ತನ ಹೇಳಿದ ಹಾಡು.

ಹೈಲೈಟಿಂಗ್, ಹಾಪ್  ಹೈಲೈಟಿಂಗ್

ಮತ್ತ ಇಬ್ಬರೂ ಬಿದ್ದು ಬಿದ್ದು ನಕ್ಕವೀ. ಯಪ್ಪಾ.....ಎಂತಾ ನಗು ಅಂದ್ರ. ಮಸ್ತ ಮಜಾ ಬಂತು.

ನೋಡಿ ಸಾಬ್....ಈ ಮಂಗಿ ಮಂದಿ ಇರ್ತಾರೆ ನೋಡಿ, ಅವರ ತಲಿ ಒಳಗೇ ಭೇಜಾ ಖರಾಬ್ ಇರ್ತದೆ ನೋಡಿ. ಕೂದಲಕ್ಕೆ ಏನೇ ಪೇಂಟ್ ಹೊಡಕೊಂಡರೂ ಮಂಗೀನೇ ಇರ್ತಾರೆ. ತುಂಗಿ, ಪುಂಗಿ, ಸಂಗೀ ಏನೂ ಆಗೋದಿಲ್ಲ ಸಾಬ್. ನಾಮುನ್ಕಿನ್ ಹೈ. ನಾನು ಬರ್ತೀನಿ ಸಾಬ್. ಖುದಾ ಹಾಫಿಜ್ - ಅಂತ ಹೇಳಿ ಹೋದ ಕರೀಂ.

ಹ್ಮ್.....ಒಟ್ಟಿನಲ್ಲಿ ಅಕಿ ಖರ್ಚಿನ ಬಿಲ್ಲು ಕೊಟ್ಟು ಕೊಟ್ಟು ಬಿಲ್ಲು ಕೊಡೊ ಕಾಮಣ್ಣ ಆದ ಕರೀಮ. ಮತ್ತ ಸಾತರಂಗಿ ಪೇಂಟ್ ಹೊಡಿಸ್ಕೊಂಡರ ಕಾಮನಬಿಲ್ಲಿನ ಕರೀಮಿ ಅವನ ಬೇಗಂ. 

ಒಳ್ಳೆ ಕಥಿ ಇವರದ್ದು.