Wednesday, September 26, 2012

ಕಟ್ಟಿ ಮ್ಯಾಲೆ ಹೊಟ್ಟಿ ಡ್ಯಾನ್ಸ್

ಅಲ್ಲೇ ಭೀಮ್ಯಾನ ಚುಟ್ಟಾ ಅಂಗಡಿ ಮುಂದ ನನ್ನ ರೆಗ್ಯುಲರ್ ಸಂಜಿ ಮಾವಾಕ್ಕ ಆರ್ಡರ್ ಮಾಡಿ ನಿಂತಿದ್ದೆ. ಭೀಮು ತಿಕ್ಕಲಿಕತ್ತಿದ್ದ. ಅದ ಮಾವಾ ತಿಕ್ಕಲಿಕತ್ತಿದ್ದ. ನೋಡಿದ್ರ ಕರೀಮ ಬರ್ಲಿಕತ್ತಿದ್ದ.

ಬಾರೋ.....ದೋಸ್ತ.....ಕರೀಂ.....ಏನಪಾ.....ಭಾಳ ಅಪರೂಪ? ಏನೋ ಅದು ಕೈಯಾಗ? ತೋರ್ಸೋ - ಅಂದೆ.

ಯಾಕೋ ಕರೀಂ ತೋರಿಸಲಿಕ್ಕೆ ಸ್ವಲ್ಪ ಹಿಂದ ಮುಂದ ನೋಡಿದ. ಸ್ವಲ್ಪ ನಾಚಿಗಿನೂ ಮಾಡ್ಕೊಂಡ ಅನ್ನಸ್ತದ.

ಲೇ...ಮಂಗ್ಯಾನ್ ಕೆ. ನನ್ನ ಜೋಡಿ ಏನೋ ನಾಚಗಿ? ತೋರ್ಸೋ ನಮ್ಮಪ್ಪಾ - ಅಂದೆ.

ಮಿಜಿ ಮಿಜಿ ಮಾಡಕೋತ್ತನಾ ತೋರ್ಸೀದ. ಮಸ್ತ ಘಮ ಘಮ ಅನ್ನು ಮಲ್ಲಿಗಿ ಹೂವಿನ ಮಾಲಿ. ಮಸ್ತ್ ಇತ್ತು. ಫ್ರೆಶ್.

ಏನು ಸಾಬ್ರಾ? ಮಲ್ಲಿಗಿ ಹೂವಿನ ಮಾಲಿ ಖರೀದಿ ಮಾಡಿಕೊಂಡು ಹೊಂಟೀರಿ. ಜೊತಿಗೆ ಸ್ವೀಟ್ಸ್, ಎಲಿ ಅಡಿಕಿ ಎಲ್ಲೇ? ಏನೋ ಬೇಗಂ ಪಟಾವೋ ಪ್ಲಾನ್ ಇದ್ದಂಗ ಅದ. ಏನು ಲಫಡಾ ಮಾಡಿಕೊಂಡಿರೀ? ಏ.....ನಿಮ್ಮ ಹಾಪ್ ಬೇಗಂ ಇದಕೆಲ್ಲ ಕರಗೋ ಪೈಕಿ ಅಲ್ಲ ಬಿಡ್ರೀ. ಅಕಿ ಮೊದಲ ಹಾಪ್. ಆದರೂ ಟ್ರೈ  ಮಾಡ್ರಿ. ನೀವು ನಂಬಿದ ದೇವರು ನಿಮಗೆ ಒಳ್ಳೇದು ಮಾಡಲಿ - ಅಂದೆ.

ಛೋಡೋಜೀ ಸಾಬ್!!! ಅಕಿ ಹಾಪ್ ಗೆ ಯಾರು ಮಲ್ಲಿಗಿ ಹೂವಾ ಕೊಡ್ತಾರೆ. ಕತ್ತಿ  ಮುಂದೆ ಕಸ್ತೂರಿ ತೊಗೊಂಡು ಹೋದ್ರೆ ಏನು ಉಪಯೋಗ ಸಾಬ್? ಇದು ಬ್ಯಾರೆ ಯಾರಿಗೋ ಸಾಬ್ - ಅಂತ ನಿಗೂಢ ಲುಕ್ ಕೊಡುತ್ತ ಏನೋ ಅದ ಅನ್ನೋವರಾಂಗ ಕಣ್ಣ ಹೊಡೆದ.

ಹೋಗ್ಗೋ ಸಾಬ್ರಾ...ಗೊತ್ತಾತ ತೊಗೊರೀ. ಇನ್ನೊಂದು ಹೊಸ ಡೌ ಏನ್ರೀ? ಹಳೇವು ಎರಡು ಸ್ಟೆಪ್ನೀ ಇನ್ನೂ ಇಟ್ಟೀರೋ ಅಥವಾ ಓಲ್ಡ್ ಮಾಡೆಲ್ ಅಂತ ಜಂಕ್ ಯಾರ್ಡಿಗೆ ಬಿಟ್ಟು ಬಂದರೋ? ಎಲ್ಲಿಂದ ಪಟಾಯಿಸ್ತೀರಿ ಆ ಪರಿ? ಬೇಗಂಗೆ ಗೊತ್ತಾದ್ರಾ, ಮತ್ತೊಮ್ಮೆ ಅಕಿ ಕಲ್ಲೂ ಮಾಮಾ ಬಂದು ಕಾಲು ಮತ್ತೊಂದು ಮುರ್ದು ಹೋದಾನು ನೋಡಕೊಳ್ಳರೀ ಮತ್ತ - ಅಂತ ವಾರ್ನಿಂಗ್ ಕೊಟ್ಟೆ.

ಕ್ಯಾ ಸಮಜಾ ಸಾಬ್? ನಾವೇನು ಹಾಪ್ ಮಂದಿ ಕ್ಯಾ? ಈಗ ಹೊಸ ಮಾಲ್ ನಾವು ಇಂಟರ್ನೆಟ್ ಮ್ಯಾಲೆ ಪಟಾಯಿಸೇವಿ. ಅದೂ ವಿಲಾಯತಿ ಮಾಲ್. ಗೊತ್ತು ಕ್ಯಾ? - ಅಂದ ಕರೀಂ.

ಹೋಗ್ಗೋ...ಮಸ್ತ ಆತಲ್ಲರೀ.....ಇಂಟರ್ನೆಟ್ ಮ್ಯಾಲೆ. ಯಾವ ದೇಶದವರು? ಏನು ಮಾಡ್ತಾರ? - ಅಂತ ಕೇಳಿದೆ.

ಸಾಬ್ ಒಬ್ಬಾಕಿ "ಅಜ್ಜಿ ಏರಿಯ" ದೇಶದಾಕಿ. ಇನ್ನೊಬ್ಬಾಕಿ, ಇನ್ನೊಬ್ಬಾಕಿ ಯಾವ ದೇಶ ಅಂದ್ರೆ....ತಡೀರಿ. ನೆನಪ ಆಗ್ತಾ ಇಲ್ಲ- ಅಂತ ನೆನಪ ಮಾಡಕೊಳ್ಳಲಿಕ್ಕೆ ಹತ್ತಿದ್ದ.

ಹೋಗ್ಗೋ ಸಾಬ್ರಾ....."ಅಜ್ಜಿ ಏರಿಯ" ಅಂದ್ರ ಯಾವ ದೇಶರೀ? ಹಾಂಗ ಯಾವ ದೇಶ ಇಲ್ಲರೀಪಾ. ಎಲ್ಲದ ಈ ದೇಶ? - ಅಂತ ಕೇಳಿದೆ. ಯಾವದೋ ದೇಶದ ಹೆಸರು ರಾಡಿ ಎಬ್ಬಿಸಿಯೇ "ಅಜ್ಜಿ ಏರಿಯ" ಅಂದಿದ್ದು ಖಾತ್ರಿ ಇತ್ತು.

ಸಾಬ್ ನೋಡಿ. ಅದು ಎಲ್ಲೋ ಉತ್ತರ ಆಫ್ರಿಕಾದಲ್ಲಿ ಇದೆ ಅಂತೆ. ಅಲ್ಲೂ ಬರೇ ನಮ್ಮದು ಮಂದೀನೇ ಇದ್ದಾರೆ ಅಂತೆ. ಅಕಿನೂ ನಮ್ಮ ಮಂದೀನೇ - ಅಂತ ಅಂದ ಕರೀಂ ಏನೋ ಹಿಂಟ ಕೊಟ್ಟ.

"ಅಜ್ಜಿ ಏರಿಯ" ಅಂತ ಉತ್ತರ ಆಫ್ರಿಕಾದಲ್ಲಿ ಯಾವ ದೇಶ ಅದ, ಅಂತ ತಲಿ ಕೆಡಿಸ್ಕೊಂಡೆ.

ಏನೋ ಹೊಳಿತು.

ಸಾಬ್ರಾ.......ಅದು ಅಲ್ಜೀರಿಯಾ ಅಂತ ಏನು? ಅದ ಇರಬೇಕು. ಅದಕ್ಕ "ಅಜ್ಜಿ ಏರಿಯ" ಅಂತೀರಿಲ್ಲರಿ. ನಿಮ್ಮ ತಲಿ. ಸ್ವಲ್ಪ ಅಟ್ಲಾಸ್ ಗಿಟ್ಲಾಸ್ ನೋಡಿ ಸರೀತ್ನಾಗೆ ಕಲೀರಿ - ಅಂತ ಬೈದೆ.

ಹ್ಮ....ಹ್ಞೂ......ಮುಂದ ಹೇಳ್ರೀ....ಇನ್ನೊಬ್ಬಾಕಿ ಯಾವ ದೇಶದಾಕಿ? -ಅಂತ ಕೇಳಿದೆ.

ಸಾಬ್...ಅಕಿ ಯಾವ ದೇಶದಾಕಿ ಅಂದ್ರೆ....ಅಂದ್ರೆ....ಅಂದವನೇ ಒಂದು ಅಸಡ್ಡಾಳ ಹೆಸರು ಹೇಳಿಯೇ ಬಿಟ್ಟ. ಒಂದು ಕ್ಷಣ ನಡುಗಿ ಹೋದೆ.

ಸಾಬ್ರಾ!!!!ಏನಂತ ಹೀಂಗ ಹೊಲಸ್ ಹೊಲಸ ಹೆಸರು ಹೇಳ್ತೀರಿ. ಅಂತ ಹೆಸರಿನ ಯಾವದೂ ದೇಶ ಇಲ್ಲ. ಆ ಶಬ್ದ ಮತ್ತೊಮ್ಮೆ ಹೇಳಬ್ಯಾಡ. ಏನು ಸ್ಪೆಲ್ಲಿಂಗ್ ಅಂತ ಹೇಳು - ಅಂತ ಝಾಡಿಸಿದೆ.

ತಡೀರಿ ಸಾಬ್...........ಅಂದವನೇ, ಹೊಚ್ಚ ಹೊಸಾ ಲೇಟೆಸ್ಟ್ ಮಾಡೆಲ್ ಸ್ಮಾರ್ಟ್ ಫೋನ್ ತೆಗೆದದವನ, ಏನೇನೋ ಚಕ್ ಚಕ್ ಅಂತ ಚೆಕ್ ಮಾಡಿ....T..U..N..I..S..I..A....ಅಂತ ಸ್ಪೆಲ್ಲಿಂಗ್ ಹೇಳಿ....ಮತ್ತ ಅವಂಗ ಬಂದಾಂಗ ಉಚ್ಚಾರ ಮಾಡಿದ.

ಶಿವಾ.....ಶಿವಾ.....ಕಿವಿ ಮುಚಗೊಂಡೆ. ಅಷ್ಟು ಖರಾಬಾಗಿ ಕೇಳಿಸಿತ್ತು ಅವನ ಉಚ್ಚಾರ.

ಸಾಬ್ರಾ....ಅದನ್ನ ಟ್ಯೂನಿಸಿಯಾ ಅಂತ ಉಚ್ಚಾರ ಮಾಡ್ತಾರ. 'ಟ'ಕಾರ....'ಟ'ಕಾರ. ನೀವು ಹೇಳಿದಂಗ 'ತ'ಕಾರ ಅಲ್ಲ. 'ತ'ಕಾರ ಹಾಕಿಬಿಟ್ಟರ, ಹೆಂಗಸೂರು ಹೋಗಲೀ, ಗಂಡಸೂರು ಬೆಚ್ಚಿ ಬಿದ್ದು ಓಡಿ ಹೋಗು ಹಾಂಗ ಅದ ಹೆಸರು. ಮತ್ತ ಅದು 'ನ'ಕಾರ. ನವಿಲು ಇದ್ದಂಗ. 'ಣ'ಕಾರ ಅಲ್ಲ. ಬೆಣ್ಣಿ, ಉಣ್ಣಿ ಉಚ್ಚಾರ ಮಾಡಿದಂಗ 'ಣ'ಕಾರ ಹಾಕಬ್ಯಾಡರೀ. ತಿಳಿತ? - ಅಂತ ಹೇಳಿ ತಿದ್ದಿದೆ.

ಯಾವ ಮಂಗ್ಯಾನ್ ಕೆ  ಟ್ಯೂನಿಸಿಯಾ ಅಂತ ಹೆಸರು ಇಟ್ಟಾನೋ? ದೇವರಿಗೆ ಗೊತ್ತು. ಕರೀಮನಂತಾ ಹಾಪ್ರು ಅವರಿಗೆ ಬಂದಂಗ ಹೇಳಿ ಕನ್ನಡದಾಗ ಮಹಾ ಅಸಡ್ಡಾಳ ಆಗಿ ಕೇಳಿಸ್ತದ.

ಅಂತೂ ಒಟ್ಟಿನಲ್ಲಿ ಅಲ್ಜೀರಿಯಾ, ಟ್ಯೂನಿಸಿಯಾ ದೇಶದ ಎರಡು ರಿಮೋಟ್ ಮಾಲ್ ಇಂಟರ್ನೆಟ್ ಮ್ಯಾಲೆ ಪಟಾಯಿಸೀರಿ ಅಂತ ಆತು. ಎಲ್ಲೆ ಸಿಕ್ಕರು? ಫೇಸ್ಬುಕ್ ಮ್ಯಾಲೆ ಏನು? ಹೊಸ ಸ್ಮಾರ್ಟ್ ಫೋನ್ ಅದಕ್ಕ ತೊಗೊಂಡಿ ಏನು? ಅವರು ಯಾಕ ನಿನ್ನಂತ ಇಂಡಿಯಾದ ಮನುಷ್ಯಾನ ಜೊತಿ ಇಂಟರ್ನೆಟ್ ಮ್ಯಾಲೆ ಮಂಗ್ಯಾತನ ಮಾಡ್ಲಿಕತ್ತಾರ? - ಅಂತ ಕೇಳಿದೆ.

ಸಾಬ್....ನೋಡಿ....ಅವರು ಅರಬ್ ಔರತ್ "ಫ್ರೀ ಸ್ಟೇಶನ್" ಗೆ ಬಂದು ನಮ್ಮಂತ ಮಂದಿ ಹಿಡ್ಕೊತ್ತಾರೆ. ನಮಗೂ ಟೈಮ್ ಪಾಸ್. ಯಾಕೆ ಬೇಡ ಅನ್ನಬೇಕು? - ಅಂದ ಕರೀಂ.

ಏನು ಇದು ಫ್ರೀ ಸ್ಟೇಶನ್? ಅವರ ಊರಿನ ರೇಲ್ವೆ ಸ್ಟೇಶನ್ ಹೆಸರು ಫ್ರೀ ಸ್ಟೇಶನ್ ಏನು? ಆ ರೇಲ್ವೆ ಸ್ಟೇಶನ್ ಕಟ್ಟಿ ಮ್ಯಾಲೆ ಕೂತು ನಿಮ್ಮ ಜೊತಿ ಫೇಸ್ಬುಕ್ ಮ್ಯಾಲೆ ಹರಟಿ ಮತ್ತೊಂದು ಹೊಡಿತಾರೇನು? ಹಾಂ? ಹಾಂ? - ಅಂತ ಕೇಳಿದೆ.

ಅಯ್ಯೋ.....ಇಲ್ಲ ಸಾರ್.....ಏನು ಬಡ್ಡ ತಲಿ ಮಂದಿ ನೀವು? ಫ್ರೀ ಸ್ಟೇಶನ್ ಅಂದ್ರೆ ರೇಲ್ವೆ ಸ್ಟೇಶನ್ ಅಂತೆ. ಹಾಪ್ ಸಾಬ್. ಫ್ರೀ ಸ್ಟೇಶನ್ ಅಂದ್ರೆ ತಲಿ ಕೆಡೋದು ಸಾಬ್. ನಿಮ್ಮದೂಕಿ ಬೀವಿ ನಿಮಗೆ ಅಥವಾ ಬೀವಿಕೋ ನೀವು ಖಾತಿರ್ ಖಿದ್ಮತ್ ಮಾಡೋದು ಬಿಟ್ಟು ಬಿಟ್ಟರೆ ಅವರಿಗೆ ಫೀಲಿಂಗ್ ಬರೋದಿಲ್ಲ ಕ್ಯಾ? ಆ ಫೀಲಿಂಗ್ ಗೆ ಫ್ರೀ ಸ್ಟೇಶನ್ ಅಂತಾರೆ - ಅಂದು ಒಂದು ಬಾಂಬ್ ಹಾಕಿಯೇ ಬಿಟ್ಟ.

ಈಗ ಗೊತ್ತಾತು ಇವ ಹಾಪ ಮಂಗ್ಯಾನ್ ಕೆ  ಫ್ರಸ್ಟ್ರೇಶನ್ (frustration) ಗೆ ಫ್ರೀ ಸ್ಟೇಶನ್ ಅಂತ ಹೇಳಿಬಿಟ್ಟಿದ್ದ.

ಸ್ವಲ್ಪ ಫೋಟೋ ತೋರ್ಸು, ನೋಡೋಣ ಹ್ಯಾಂಗ ಇದ್ದಾರ ಅಂತ ನಿನ್ನ ವಿಲಾಯತಿ ಮಾಲ್ - ಅಂತ ಕೇಳಿದೆ.

ಕರೀಂ ಮತ್ತ ತನ್ನ ಹೊಸ ಸ್ಮಾರ್ಟ್ ಫೋನ್ ತೆಗದ. ಪಟಾ ಪಟಾ ಅಂತ ಒತ್ತಿದ ಏನೋ. ನನ್ನ ಮಸಡಿ  ಮುಂದ ತಂದು ಹಿಡದ. ಎರಡೂ ಒಂದ ತರಾ ಇರೊ, ಬರೆ ಕಣ್ಣ ಮಾತ್ರ ಕಾಣೋ, ಬಾಕಿ ಎಲ್ಲಾ ಫುಲ್ ಕವರ್ ಆದ ಇಬ್ಬರು ಅರಬ್ ಮಹಿಳಾಮಣಿಗಳ ಫೋಟೋ ಬಂದವು.

ಏನ್ರೀ ಸಾಬ್ರಾ? ಇಬ್ಬರೂ ಒಂದ ತರಹ ಇದ್ದಾರ. ಫುಲ್ ಕವರ್ ಇದ್ದಿದ್ದಕ್ಕ ಏನೂ ತಿಳಿಯಂಗಿಲ್ಲ. ಇಬ್ಬರೂ ಬ್ಯಾರೆ ಬ್ಯಾರೆ ಅಂತ ಹಾಂಗ ಹೇಳತಿಯೋ? - ಅಂತ ಕೇಳಿದೆ.

ನೋಡಿ ಸಾಬ್. ಕಣ್ಣು ನೋಡಿ. ಒಬ್ಬಾಕಿದು ನೀಲಿ. ಇನ್ನೊಬ್ಬಾಕಿದು ನಿಮ್ಮ ಗತೆ ಇದೆ. ಅದೇ ವ್ಯತ್ಯಾಸ. ಮತ್ತೆ ಹೊಟ್ಟಿ ಡ್ಯಾನ್ಸ್ ಮಾಡೋವಾಗ ಬ್ಯಾರೆ ಬ್ಯಾರೆ ಅಂತ ಗೊತ್ತಾಗ್ತದೆ - ಅಂತ ಹೇಳಿ ತಲಿ ಬಗ್ಗಡ ಮಾಡಿಬಿಟ್ಟ.

ಹೊಟ್ಟಿ ಡ್ಯಾನ್ಸ್!!!!!!!!!!!!!!

ಏನಿದು? 

ಬ್ಯಾರೆ ಎಲ್ಲಾ ತರಹದ ಡ್ಯಾನ್ಸ್ ಗೊತ್ತಿತ್ತು. ಹಾವಿನ ಡ್ಯಾನ್ಸ್, ಮುಂಗುಸಿ ಡ್ಯಾನ್ಸ್, ಮಂಗ್ಯಾ ಡ್ಯಾನ್ಸ್, ಕತ್ತಿ ಡ್ಯಾನ್ಸ್. ಇದ್ಯಾವದು ಹೊಟ್ಟಿ ಡ್ಯಾನ್ಸ್?

ಕರೀಮನ ಮುಂದುವರ್ದು  ಹೇಳಿದ.

ಸಾಬ್ ನೋಡಿ. ಇವರಿಬ್ಬರೂ ಅರಬ್ ಬೇಗಂ ಇದ್ದಾರೆ ನೋಡಿ, ಇಬ್ಬರೂ ಒಬ್ಬರಕಿಂತ ಒಬ್ಬರು ಮಸ್ತ ಹೊಟ್ಟಿ ಡ್ಯಾನ್ಸ್ ಮಾಡ್ತಾರೆ. ಕಟ್ಟಿ ಮ್ಯಾಲೆ ಮಾಡ್ತಾರೆ. ಎಲ್ಲರೂ ಹರಟಿ ಕಟ್ಟಿ ಮ್ಯಾಲೆ ಹರಟಿ ಹೊಡೆದರೆ ನಾವು ಹೊಟ್ಟಿ ಡ್ಯಾನ್ಸ್ ನೋಡತೇವಿ. ತಿಳೀತು ಕ್ಯಾ? ಯಾರಿಗೆ ಐತೆ ಆ ಅದೃಷ್ಟ. ನೀವೂ ಬರ್ತೀರಿ ಕ್ಯಾ? ಅದಕ್ಕೆ ಈ ಮಲ್ಲಿಗಿ ಹೂವಾದು ಮಾಲಿ - ಅಂತ ಹೇಳಿದ ಕರೀಂ, ಮಲ್ಲಿಗಿ ಮಾಲಿ ಕಟ್ಟಿದ್ದ ಪಾಕೀಟ ಮೂಗಿನ ಹತ್ತಿರ ತಂದು ಘಮ್ಮಂತ ವಾಸನಿ ಎಳಕೊಂಡು, ಯಾ ಖುದಾ, ಯಾ ರಬ್ಬಾ, ಅಂತ ಹೇಳಿ ಒಂದು ತರಹದ ಸಂತೋಷದಿಂದ ಮುಲುಗಿದ.

ಹೋಗ್ಗೋ ನಿಮ್ಮ ಸಾಬ್ರಾ. ಹೊಟ್ಟಿ ಡ್ಯಾನ್ಸ್ ಅಂದ್ರ ಇನ್ನೂ ತಿಳಿದಿಲ್ಲ. ಅದನ್ನ ಆ ಮ್ಯಾಲೆ ನೋಡೋಣ. ಅದೆಂತರ  ಡ್ಯಾನ್ಸ್ ಇರಲಿ. ಇಷ್ಟ ಚೊಲೋ ಡ್ಯಾನ್ಸ್ ಮಾಡೋರು ಅಲ್ಲೇ ಡ್ಯಾನ್ಸ್ ಮಾಡದ ನಿನ್ನ ಮುಂದ ಇಂಟರ್ನೆಟ್ ನ್ಯಾಗಾ ಯಾಕ್ ಡ್ಯಾನ್ಸ್ ಮಾಡಿ ತೋರಸ್ತಾರ?- ಅಂತ ಕೇಳಿದೆ.

ನೋಡಿ ಸಾಬ್....ಆ ದೇಶಾ ಒಳಗೆ ಎಲ್ಲ ಭಾಳ್ ಕಟ್ಟರ್.....ಹಾಗೆ ಎಲ್ಲಾ ಔರತ್ ಮಂದಿ ಡ್ಯಾನ್ಸ್ ಮಾಡ್ಲಿಕ್ಕೆ ಆಗೋದಿಲ್ಲ. ಮತ್ತೆ ಗಂಡಾ ಮುಂದೆ ಮಾಡೋಣ ಅಂದ್ರೆ, ಅವನು, ಜಾ ಬೇ ಜಾ. ಪುರಾನಿ ಹೋ ಗಯೀ. ಕಿತನಾ ದೇಖೂ ತುಜ್ಕೋ. ತಂಗ ಮತ್ ಕರೋ, ಅಂತ ಹೇಳ್ಬಿಟ್ಟು, ಅಲ್ಲಿಂದ 2-3 ತಾಸಿನ ದೂರ ಇರುವ ದುಬೈಗೋ, ಶಾರ್ಜಾಕ್ಕೋ ಹೋಗಿ ಒಳ್ಳೆ ಒಳ್ಳೆ ಹೊಟ್ಟಿ ಡ್ಯಾನ್ಸ್ ನೋಡಿ ಬರ್ತಾರೆ. ಅದಕ್ಕೇ ಅಲ್ಲಿ ಬೇಗಂ ಮಂದಿ frustration ಗೆ ಬಂದ್ಬಿಟ್ಟಿ, ಇಂಟರ್ನೆಟ್ ಮ್ಯಾಲೆ ಯಾರಾರು ಹಂದರ್ದ್ ಆದ್ಮಿ ಸಿಗ್ತಾರೋ ಅಂತ ನೋಡ್ತಾ ಇರ್ತಾರೆ. ನಮ್ಮಂತವರು ಸಿಕ್ಕರೆ ದೋಸ್ತಿ ಮಾಡಿಕೊಂಡು, ಫಾರ್ಟಿಂಗ್ ಮಾಡ್ತಾರೆ. ತಿಳೀತು ಕ್ಯಾ? - ಅಂತ ಕೇಳಿದ ಕರೀಂ.

ಓಹೋ.....ಇವರು AA ಮಂದಿ ಅನ್ನು. ಅದು ಫಾರ್ಟಿಂಗ್(farting) ಅಲ್ಲ. ಫ್ಲರ್ಟಿಂಗ್ (flirting). ಅವತ್ತ ಹೇಳಿಕೊಟ್ಟೇನಲ್ಲೋ. ಸರೀತ್ನಾಗಿ ಅನ್ನು. - ಅಂದೆ.

AA ಅಂದ್ರೆ ಸಾಬ್? - ಅಂತ ಕೇಳಿದ ಕರೀಂ.

AA ಅಂದ್ರೆ 'ಅತೃಪ್ತ ಆಂಟಿಯರು' ಅಂತ. AAA ಅಂತ ಕೂಡ ಅದ. ಗೊತ್ತೇನು? - ಅಂತ ಹೇಳಿದೆ.

AAA ಅಂದ್ರೆ ಸಾಬ್? - ಅಂತ ಕೇಳಿದ ಕರೀಂ.

AAA ಅಂದ್ರ 'ಅತೃಪ್ತ ಆಂಟಿಯರ ಆರ್ತನಾದ'...ಹೀ.....ಹೀ.....ಹೀ.......- ಅಂತ ನಕ್ಕೋತ್ತ ಹೇಳಿದೆ.

ಕರೀಂ ಸಹಿತ ನಕ್ಕ. ಗಹಗಹಿಸಿ ನಕ್ಕ.

AAA.....ಏನು ಮಸ್ತ ಹೆಸರು ಇಟ್ಟೀರಿ ಸಾಬ್. ಹೀ.....ಹೀ.....ಹೀ.......ಅದು ಒಂದು ಕನ್ನಡಿ (ಕನ್ನಡ) ಗಾನಾ ಇತ್ತು ನೋಡಿ. ನಾದಮಯ.....ನಾದಮಯ......ಹಾಗೆ ಇದು ಆಂಟಿಯರ ಆರ್ತನಾದಮಯ......ಹೀ.....ಹೀ......- ಅಂತ ತಂದೂ ಒಂದಿಷ್ಟು ಕೂಡಿಸಿದ. ಮಸ್ತ ನಕ್ಕವೀ.

ಸಾಬ್....ಅವರು ಯಾರೋ ನಿಮ್ಮದು ಕನ್ನಡಿ ಶಾಯರ್ ಇದ್ದರು ನೋಡಿ......ಅವರೇ ನರ್ಸಿಂಗ್ ಸಾಮಿ....ಅವರ ಗಾನಾ ಇತ್ತು ನೋಡಿ. "ಬೀವಿ ಒಬ್ಬಾಕಿ ಮನ್ಯಾಗ ಇದ್ದರೆ ನಮ್ಮದೂಕೆ ಅದೇ ಕರೋಡ್ ರೂಪಾಯಿ" ಅಂತ. ಹಾಗೆ ಈಗ ನೋಡಿ ಹೊಸಾ ಗಾನಾ, "ಅಂಟಿ ಇಬ್ಬರು ಫೇಸ್ಬುಕ್ ಮ್ಯಾಲೆ ಸಿಕ್ಕರೆ ಅದೇ ದೋ ಕರೋಡ್ ರೂಪಾಯಿ" ಅಂತ. ಕಟ್ಟಿ ಮ್ಯಾಲೆ ಹೊಟ್ಟಿ ಡ್ಯಾನ್ಸ್ ಮಾಡಿದ್ರೆ, ಇನ್ನೊಂದು ಎರಡು ಕರೋಡ್ ರೂಪಾಯಿ - ಅಂತ ಹೇಳಿದ ಕರೀಂ. ಮಸ್ತ ಸೆನ್ಸ್ ಆಫ್ ಹ್ಯೂಮರ್ ಮಗಂದು.

ಅಯ್ಯೋ....ಅವರು ನರ್ಸಿಂಗ್ ಸಾಮಿ ಅಲ್ಲಪಾ. ಅದ್ನಾನ್ ಸಾಮಿ ಇದ್ದಂಗ ನರ್ಸಿಂಗ್ ಸಾಮಿ ಅಂತ ತಿಳ್ಕೊಂಡಿ ಏನು? ಅವರು ದಿವಂಗತ ಕೆ.ಎಸ್. ನರಸಿಂಹಸ್ವಾಮಿ ಅಂತಪಾ. ಅವರು "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ" ಅಂತ ಬರೆದಿದ್ದು ಹೌದು. ನೀ ಅದನ್ನ ನಿನ್ನ ಸ್ಟೈಲಿನ್ಯಾಗ ಭಾಳ ಚಂದಾಗಿ ಹೇಳಿದಿ. ಆದ್ರಾ, "ಅಂಟಿ ಇಬ್ಬರು ಫೇಸ್ಬುಕ್ ಮ್ಯಾಲೆ ಸಿಕ್ಕರೆ ಅದೇ ದೋ ಕರೋಡ್ ರೂಪಾಯಿ" ಅಂದಿ ನೋಡು, ಅದನ್ನ ಕೇಳಿದ್ರ ಮಾತ್ರ ಅವರ ಆತ್ಮ ವಿಲಿವಿಲಿ ಒದ್ದಾಡ್ತದ ನೋಡು - ಅಂದೆ.

ಓಹೋ.....ನರ್ಸಿಂಹಾದು ಸ್ವಾಮಿ ಕ್ಯಾ? ನಾವು ಸುಮಾರು ಕರೆಕ್ಟ್ ಹೇಳಿದ್ವಿ ಹಾಂಗಾದ್ರೆ? - ಅಂದ ಕರೀಂ.

ಆದ್ರ ನೋಡಪಾ, ಫೇಸ್ಬುಕ್ ಮ್ಯಾಲೆ ಅಂಟಿ ಮಂದಿ ದೋಸ್ತಿ ಮಾಡಿ ಮಂಗ್ಯಾ ಆದವರು ಭಾಳ್ ಮಂದಿ ಇದ್ದಾರ. ಅವರನ್ನ ಕೇಳಿದ್ರ, ಎಲ್ಲಿ ಕರೋಡ್ ರೂಪಾಯಿ? ಫೇಸ್ಬುಕ್ ಆಂಟೀಸ್ ಎಲ್ಲಾ ಎಂದೂ ಹೊಡೆಯದ ನಾಗಾಲ್ಯಾಂಡ್ ಲಾಟರೀ ಟಿಕೆಟ್ ಅಂತಾರ. ನೋಡ್ಕೋ ಮತ್ತ. ನಿನ್ನ ಅರೇಬೀ ಆಂಟಿ ಮಂದಿ ಹೊಟ್ಟಿ ಡ್ಯಾನ್ಸ್ ಮಾಡ್ತಾರ, ಮತ್ತೊಂದು ಮಾಡ್ತಾರ ಅಂತ ಮಂಗ್ಯಾ ಆಗಬ್ಯಾಡ. ಅವೆಲ್ಲಾ ನೀರ ಮೇಲಿನ ಗುಳ್ಳೆ. ಯಾವಾಗ ಒಡಿತದ ಅಂತ ಹೇಳಲಿಕ್ಕೆ ಬರೋದಿಲ್ಲ - ಅಂದೆ.

ಹೌದು ಸಾಬ್....ಕರೆಕ್ಟ್ ಬೋಲ್ಯಾ - ಅಂಡ್ ಕರೀಂ ತನ್ನ ಒಪ್ಪಿಗಿ ಕೊಟ್ಟ.

ಈಗ ಹೇಳಪಾ.....ಹೊಟ್ಟಿ  ಡ್ಯಾನ್ಸ್ ಅಂದ್ರೆ ಏನು ಅಂತ - ಅಂದೆ. ಕೆಟ್ಟ ಕುತೂಹಲ ತಿಳ್ಕೊಬೇಕು ಅಂತ.

ಸಾಬ್...ಅದಕ್ಕೆ ಇಂಗ್ಲಿಷ್ನಲ್ಲಿ "ಬಲಿ ಡ್ಯಾನ್ಸ್" ಅಂತಾರೆ. ಹೊಟ್ಟಿ ಕುಣಿಸಿ, ಕುಣಿಸಿ, ಸೊಂಟ ತಿರುಗಿಸಿ, ತಿರುಗಿಸಿ, ಕೊಯ್ಯಾ ಕೊಯ್ಯಾ ಅನ್ನೋ ಅರಬಿ ಮ್ಯೂಸಿಕ್ ಗೆ ಮಾಡೋ ಡ್ಯಾನ್ಸ್. ಬಲಿ ಡ್ಯಾನ್ಸ್.....ಬಲಿ ಡ್ಯಾನ್ಸ್ - ಅಂತ ಹೇಳಿ, ಅಲ್ಲೇ ಸಣ್ಣ ಪ್ರಮಾಣದ ಹೊಟ್ಟಿ ಡ್ಯಾನ್ಸ್ ಮಾಡಿ ತೋರ್ಸಿದ. ಭಾಳ ನಗಿ ಬಂತು.

ಸಾಬ್ರಾ....ಅದು ಬೆಲ್ಲಿ ಡ್ಯಾನ್ಸ್ ಅಂತ ಇರಬೇಕು ನೋಡ್ರೀ. ಕನ್ನಡದಾಗ ಹೊಟ್ಟಿ ಡ್ಯಾನ್ಸ್ ಅಂದ್ರ ಕರೆಕ್ಟ್ ಅದ ತೊಗೋರಿ. ಆದ್ರಾ ಬಲಿ ಡ್ಯಾನ್ಸ್ ಅಂತ ಮಾತ್ರ ಅನಬ್ಯಾಡ್ರೀ. ಅದು ಭಾಳ ಗಲತ್ ಅರ್ಥ ಕೊಡ್ತದ - ಅಂದೆ.

ಬಲಿ ಡ್ಯಾನ್ಸ್ ಅಂದ್ರೆ ಸಾಬ್? - ಅಂತ ಕೇಳಿದ.

ನೋಡಪಾ.....ಈ ಕಾಡ ಮಂದಿ, ನರಮಾಂಸ ಭಕ್ಷಕ ಮಂದಿ ನರಬಲಿ ಕೊಡೋಕಿಂತ ಮೊದಲು ಅವರ ಹೆಂಗಸೂರ ಕಡೆ ಮಾಡಿಸೋ ಡ್ಯಾನ್ಸ್ ಗೆ 'ಬಲಿ ಡ್ಯಾನ್ಸ್' ಅಂತಾರ ನೋಡಪಾ. 'ಕಾಡಿನ ರಾಜ' ಪಿಚ್ಚರ್ ನ್ಯಾಗ ಬಾಂಬಿ ಅನುರಾಧ ಮಾಡಿದ್ದಳು. ನೆನಪಿಲ್ಲ ನಿನಗ?  ಹಾಂ....ಹಾಂ- ಅಂತ ಕೇಳಿದೆ.

ಯಾರು ಸಾಬ್ ಬಾಂಬಿ ಅನುರಾಧಾ? ನಮ್ಮ ಕ್ಲಾಸ್ಮೇಟ್ ಲಡ್ಕಿ ಕ್ಯಾ? ನಿಮ್ಮದೂಕೆ ಡೌ ಕ್ಯಾ? - ಅಂತ ಮಂಗ್ಯಾನ್ ಕೆ ಪ್ರಶ್ನೆ ಕೇಳಿದ.

ಲೇ....ಹುಸ್ಸೊಳೆ ಮಗನ.....ನಮ್ಮ ಕ್ಲಾಸಿನ್ಯಾಗ ಹಾಂಗೆಲ್ಲ ಅಸಡ್ಡಾಳ ಡ್ಯಾನ್ಸ್ ಮಾಡೋರು ಯಾರೂ ಇರಲಿಲ್ಲ. ಸಿನೆಮಾದಾಗ ಡ್ಯಾನ್ಸ್ ಅನ್ನಲಿಕತ್ತೇನಿ, ನಮ್ಮ ಕ್ಲಾಸ್ ಹುಡುಗಿ ಏನು ಅಂತ ಕೇಳಲಿಕತ್ತಿ. ಬುಧ್ಧಿ ಇಲ್ಲದವನ. ಅಕಿ ಕ್ಯಾಬರೆ ಡ್ಯಾನ್ಸರ ಅನುರಾಧಾ. ಹಳೆ ಕಾಲದಾಕಿ. ಈಗ ಅಕಿ ಮಗಳು ಭಾರಿ ಫೇಮಸ್ ಅಂತ - ಅಂತ ಫುಲ್ ವಿವರಣೆ ಕೊಟ್ಟೆ.

ಓಹೋ...ಅದು ಕ್ಯಾ? ಕಾಡಿಂದು ರಾಜಾ....ಕ್ಯಾ ಮೂವಿ ಸಾಬ್. ಕನ್ನಡಾ ಒಳಗೆ ಟಾರ್ಜನ್ ಟೈಪಿಂದು ಮೂವಿ ಅಂದ್ರೆ ಅದೇ ನೋಡಿ. ಟೈಗರ್ ಭಾಯಿಸಾಬ್ ಪ್ರಭಾಕರ್ ಏನು ಮಸ್ತ್ ಮಾಡಿದಾರೆ ಆ ಮೂವಿ ಒಳಗೆ. ಆ ಮ್ಯಾಲೆ ದೀಪಾ ಕೂಡ ಮಸ್ತ ಮಸ್ತ - ಅಂತ ಹೇಳಿ ವಿಕಾರವಾಗಿ ನಕ್ಕ ಕರೀಂ. ಒಪ್ಪಿದೆ.

ಕಾಡಿನ ರಾಜ - ಮಸ್ತ ಮೂವಿ ಇತ್ತು. ಅವೆಲ್ಲ ನಮ್ಮ 'ಜವಾನಿ ಕಿ ಕಹಾನಿ'. ಸಿಕ್ಕರ ನೋಡ್ರೀ ಇಂಟರ್ನೆಟ್ ಮ್ಯಾಲೆ.

ಒಟ್ಟಿನ್ಯಾಗ ಅರಬ್ ಅತೃಪ್ತ ಆಂಟಿಯರು ತಮ್ಮ ಬೆಲ್ಲಿ ಡ್ಯಾನ್ಸ್ ಕಲೆಯನ್ನು ನಿನ್ನ ಫೇಸ್ಬುಕ್ ಚಾಟ್ ನ್ಯಾಗ ಬಂದು ಮಾಡಿ ತೋರ್ಸತಾರ ಅಂತ ಆತು. ಅದು ನಿನಗ ಮುಜರಾ ಇದ್ದಂಗ. ಕೈಯಾಗ ಮಲ್ಲಿಗಿ ಮಾಲಿ ಹಾಕ್ಕೊಂಡು, ಶೆರೆ ಕುಡ್ಕೊತ್ತ, ಆಗಾಗ ಮಲ್ಲಿಗಿ ವಾಸನಿ ಕುಡ್ಕೊತ್ತ , ತೊಡಿ ತಟ್ಟಿಗೋತ್ತ, ಮುಜರಾ ಗತೆ ಎಂಜಾಯ್ ಮಾಡ್ತಿ ಅಂತಾತು. ಭಾರಿ ಆತ ಬಿಡಪಾ. ಯಾರಿಗೆ ಅದ ಈ ಭಾಗ್ಯ? ನೀನ ಲಕಿ - ಅಂದೆ.

ಅದಕ್ಕೆ ನೋಡೀ ಸಾಬ್....ನಾವು ಸಂಜಿ ಆತು ಅಂದ್ರೆ, ಫೇಸ್ಬುಕ್ ಮ್ಯಾಲೆ ಹತ್ತಿ ಕೂತು ಬಿಡ್ತೇವಿ. ಅಲ್ಲಿ 'ಹರಟಿ ಕಟ್ಟಿ ಮ್ಯಾಲೆ ಹೊಟ್ಟಿ ಡ್ಯಾನ್ಸ್' ನೋಡೋಕೆ. ನೀವು ಬನ್ನಿ ಸಾಬ್. ನಿಮಗೂ ಬೇಕಾದ್ರೆ ಅರಬ್ ಆಂಟಿ ಗುರ್ತು ಮಾಡ್ಸಿ ಕೊಡ್ತೇವಿ - ಅಂತ ಆತ್ಮೀಯ ಆಹ್ವಾನ ಕೊಟ್ಟ ಕರೀಂ.

ಥತ್ ನಿನ್ನ....ಆ ಅತೃಪ್ತ ಆಂಟೀಸ್ ಮಾಡೋ ಮಂಗ್ಯಾನ್ ಆಟ ನಾ ನೋಡೋದ? ಬ್ಯಾರೆ ಕೆಲಸ ಇಲ್ಲೇನು? ಮಂಗ್ಯಾನ್ ಕೆ....ನಡಿ......ನಡಿ ......ಖುದಾ ಹಾಫಿಜ್......- ಅಂತ ಹೇಳಿ ಹೊರಟು ಬಂದೆ.

ಫೇಸ್ಬುಕ್ ಎಂಬ ಮಾಯೆ. ಏನೇನೋ ಸಂಬಂಧಗಳನ್ನು ತಳಕು ಹಾಕಿ ಬಿಡುತ್ತದೆ. ಇಲ್ಲಂದ್ರೆ, ಎಲ್ಲಿಯ ಅವಕಾಶವಂಚಿತ, ಅತೃಪ್ತ ಅರಬ್ ಆಂಟಿಯರು, ಎಲ್ಲಿಯ ಕರೀಮಾ, ಎಲ್ಲಿಯ ಬೆಲ್ಲಿ ಡ್ಯಾನ್ಸ್ ಹುಚ್ಚು, ಏನು ಕಥೆ? ಏನೇನೋ ವಿಚಿತ್ರ.

No comments: