Tuesday, August 14, 2012

ವೃತ್ತಿಯಿಂದ ಬೇಹುಗಾರ, ಪ್ರವೃತ್ತಿಯಿಂದ ಬರಹಗಾರ - ಮಲಯ ಕೃಷ್ಣ ಧಾರ

ಶ್ರೀ ಮಲಯ ಕೃಷ್ಣ ಧಾರ್. ವೃತ್ತಿಯಿಂದ ಭಾರತದ ಇಂಟೆಲಿಜೆನ್ಸ್ ಬ್ಯೂರೋ (IB) ಎಂಬ ರಾಷ್ಟ್ರ ಮಟ್ಟದ ಬೇಹುಗಾರಿಕೆ ಸಂಸ್ಥೆಯ ನಿವೃತ್ತ ಅಧಿಕಾರಿ. ಜಾಯಿಂಟ್ ಡೈರೆಕ್ಟರ್ ಮಟ್ಟದಲ್ಲಿ ರಿಟೈರ್ ಆದ ಹಿರಿಯ ಅಧಿಕಾರಿ. ಪ್ರವೃತ್ತಿಯಿಂದ ಲೇಖಕರು.

ಭಾರತದಲ್ಲಿ IB, R&AW (Research & Analysis Wing) ಎಂಬ ಎರಡು ದೊಡ್ಡ ಬೇಹುಗಾರಿಕೆ ಸಂಸ್ಥೆಗಳಿದ್ದರೂ, ಅವುಗಳಲ್ಲಿ ಕೆಲಸ ಮಾಡಿದ ಜನ ಪುಸ್ತಕ ಬರೆದಿದ್ದು ಬಹಳ ಕಮ್ಮಿ. ಅದೇ CIA, KGB, MI -6, ಮೊಸ್ಸಾದ್ ಮುತಾದ ಬೇರೆ ದೇಶಗಳ ಸುಮಾರು ಜನ ಹಿರಿಯ ಅಧಿಕಾರಿಗಳು ಬಹಳ ಪುಸ್ತಕ ಬರೆದಿದ್ದಾರೆ. ಬರೆಯುತ್ತಲೇ ಇದ್ದಾರೆ.

ಭಾರತದ ಮಟ್ಟಿಗೆ ಮಲಯ ಕೃಷ್ಣ  ಧಾರ್ ಎನ್ನುವ ನಿವೃತ್ತ IB ಅಧಿಕಾರಿ ಮತ್ತು ಬಿ. ರಾಮನ್ ಎಂಬ ನಿವೃತ್ತ R&AW  ಅಧಿಕಾರಿ ಸುಮಾರು ಪುಸ್ತಕ ಬರೆದಿದ್ದಾರೆ. ಧಾರ್ ಸುಮಾರು ದೊಡ್ಡ ಪ್ರಮಾಣದಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಅವರು ಬರೆದ, ನಾನು ಓದಿದ ಅವರ ಪುಸ್ತಕವೊಂದರ  ಒಂದು ಸಣ್ಣ ಝಳಕ್.

Open Secrets: India's Intelligence Unveiled - ಧಾರ್ ಅವರ ಮ್ಯಾಗ್ನಂ ಓಪಸ್ ಅನ್ನಬಹುದಾದಂತಹ ಬೃಹತ ಪುಸ್ತಕ. ಒಂದು ತರದಲ್ಲಿ ಅವರ ಪ್ರೊಫೆಶನಲ್ ಬಯೋಗ್ರಾಫಿ ಪುಸ್ತಕ. ಧಾರ್ ಅವರ ಬಾಲ್ಯ, ಪಾಕಿಸ್ತಾನ್ ವಿಭಜನೆಯ ಆತಂಕದ ದಿನಗಳು, ಆ ಕಾಲದ ಪೂರ್ವ ಪಾಕಿಸ್ತಾನ್ (ಈಗಿನ ಬಾಂಗ್ಲಾದೇಶ) ಬಿಟ್ಟು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕಲ್ಕತ್ತಾಕ್ಕೆ ಬಂದಿದ್ದು, ಮುಂದೆ ಕಷ್ಟಪಟ್ಟು ಓದಿ, IPS ಮಾಡಿ, ಮೊದಲು ಪಶ್ಚಿಮ ಬಂಗಾಳದ ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡಿ ನಂತರ ರಾಷ್ಟ್ರೀಯ ಸೇವೆ IB ಗೆ ಬಂದಿದ್ದರ ಬಗ್ಗೆ ಬರೆದುಕೊಂಡಿದ್ದಾರೆ ಧಾರ್.

ಹೆಚ್ಚಿನ ಮಾಹಿತಿ ಅವರ IB ದಿನಗಳದ್ದು. ಅದು ಇಂದಿರಾ ಗಾಂಧಿ ಕಾಲ. ಇಂದಿರಾ ಗಾಂಧಿಯ ಆಪ್ತ ಸಹಾಯಕ ಸತೀಶ್ ಧವನ್ ಧಾರ್ ಅವರನ್ನು ತುಂಬಾ ಹಚ್ಚಿಕೊಂಡಿದ್ದರಂತೆ. ಒಮ್ಮೆ ಇಂದಿರಾ ಗಾಂಧಿ ಪೂರ್ವದ ರಾಜ್ಯಗಳಿಗೆ ಭೇಟಿ ಕೊಟ್ಟಾಗ, ಅಲ್ಲಿ ಸಿಕ್ಕಾಪಟ್ಟೆ ಗಲಾಟೆ ಎದ್ದಾಗ, ಅತ್ಯಂತ ಚಾಕ್ಯತೆಯಿಂದ ಗಲಭೆಯಿಂದ ಇಂದಿರಾ ಗಾಂಧಿ ಮತ್ತು ಅವರ ನಿಯೋಗವನ್ನು ಧಾರ್ ಬಚಾವ್ ಮಾಡಿದ್ದರು ಎಂಬುದು ಅವರ ಹೆಮ್ಮೆ. ಅದಕ್ಕೆ ಇಂದಿರಾ ಗಾಂಧಿ ಕೂಡ ಧಾರ್ ಅವರನ್ನು ಗುರುತಿಸಿದ್ದರು. ಹಾಂಗಂತ ಈ ಸಂಬಂಧಗಳನ್ನು ವಶೀಲಿ ಬಾಜಿಗೆ ಧಾರ್ ಉಪಯೋಗಿಸಿಕೊಳ್ಳಲಿಲ್ಲ.

ಪುಸ್ತಕದ ತುಂಬಾ ಅನೇಕ ಅಪರೂಪದ ಘಟನೆಗಳಿವೆ. ಧಾರ್ ಸುಮಾರು ಟೈಮ್ ಪೂರ್ವದ ರಾಜ್ಯಗಳಲ್ಲಿ ಕಳೆದರು. 1965-80 ರ ಟೈಮ್. ಮಿಜೊರಾಮ್, ತ್ರಿಪುರ, ಅಸ್ಸಾಂ, ನಾಗಾಲ್ಯಾಂಡ್ ಎಲ್ಲ ಕಡೆ ಉಗ್ರರು. ಅವರ ಜೊತೆ ಸಂಧಾನ ಮಾಡಲು, ರಹಸ್ಯ ಮಾಹಿತಿ ಸಂಗ್ರಹಿಸುವದು ಎಲ್ಲ ಇವರ ಕೆಲಸ. ಇದು ಒಂದು ರೀತಿಯ ಡಬಲ್ ಅಲುಗಿನ ಕತ್ತಿ ಅನ್ನುತ್ತಾರೆ ಧಾರ್. ಯಾಕೆಂದರೆ ಉಗ್ರರಿಗೂ ಇವರು ಬೇಕು - ಸರ್ಕಾರದೊಡನೆ ಸಂಧಾನಕ್ಕೆ. ಆದರೆ ಸಂಧಾನ ಮಾಡಲಿಕ್ಕೆ ಹೋದ ಸಂದರ್ಭದಲ್ಲಿ ಗದ್ದಾರಿ ಮಾಡಿದರೆ ಮಟಾಶ್. ಹೆಣ ಕೂಡ ಸಿಗಲಿಕ್ಕಿಲ್ಲ. ಧಾರ್ ಎಷ್ಟೋ ಸಲ ಆ ಕಾಲದ ಮಹಾನ್ ಹೆಸರು ಮಾಡಿದ್ದ ಸಿಖ್ ಉಗ್ರವಾದಿಗಳನ್ನು ಭೆಟ್ಟಿ ಮಾಡಿದ್ದರು. ಒಂದು ಕಡೆ ರಾಜ್ಯ ಪೊಲೀಸರು ಅದೇ ಉಗ್ರವಾದಿಗಳೊಂದಿಗೆ ಗುದ್ದಾಡುತ್ತಿದ್ದರೆ, ಕೇಂದ್ರ ಸರ್ಕಾರ ಸ್ಪೆಷಲ್ ವಿಮಾನ ಕೊಟ್ಟು ಕೆಲವು ಸಿಖ್ ಉಗ್ರಗಾಮಿಗಳನ್ನು ಸೀದಾ ರಾಜೀವ್ ಗಾಂಧಿ ಅವರ ಕಡೆ ಕರೆದುಕೊಂಡು ಬಂದಿತ್ತು - ಸಂಧಾನಕ್ಕೆ. ಅದನ್ನು ಸಾಧಿಸಿದವರು ಧಾರ್. ಎಲ್ಲಿ ಪಂಜಾಬಿನಲ್ಲಿ ಶಾಂತಿ ನೆಲೆಸಿಬಿಟ್ಟೀತೋ  ಅಂತ "ಚಿಂತಾಕ್ರಾಂತ"ರಾಗಿ ಅದಕ್ಕೆ ವಿರುದ್ಧ ಕೆಲಸ ಮಾಡಿ ಬೇರೆ ಉಗ್ರರನ್ನು ಎತ್ತಿ ಕಟ್ಟಿದವರು ಬೇರೆ ಬಣದ ಅಧಿಕಾರಿಗಳು ಮತ್ತು ರಾಜೀವ್ ಸಂಪುಟದ ಕೆಲ ಪಂಜಾಬ್, ಹರ್ಯಾಣ ಮೂಲದ ಸಚಿವರು. ವಿರ್ಪಯಾಸ  ನೋಡಿ. ಈ ದುರುಳರ ಯಾವದೋ ಆಟಕ್ಕೆ ಪಂಜಾಬಿನಲ್ಲಿ ಉಗ್ರವಾದ. ಸಾವು ನೋವು. ನಡುವೆ ಗಳ ಹಿರಿಯುತ್ತಿದ್ದ ಪಾಕಿಸ್ತಾನ್. ಪರಮ ದ್ರೋಹದ ಕೆಲಸ. ಧಾರ್ ಕೊಡುವ ಭೂತಗನ್ನಡಿ, ಮಸೂರದಿಂದ ನೋಡಿದರೆ  ನಮ್ಮ ಭೊಂಗು ಬಿಡುವ ನಾಯಕರ ಕಾರ್ನಾಮೆಗಳು ಸರಿಯಾಗಿ ತಿಳಿಯುತ್ತವೆ. ವಿಧ್ವಂಸಕ ಕೃತ್ಯಗಳ ಹಿಂದೆ ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ತಿಳಿಯುತ್ತದೆ. ಅಧಿಕಾರಶಾಹಿಯ ಕುಟಿಲ ಕಾರಸ್ತಾನ ತಿಳಿಯುತ್ತದೆ.

ನಂತರ ಧಾರ್ IB ಯ ಕೌಂಟರ್ ಇಂಟೆಲಿಜೆನ್ಸ್ ಗೆ ಬಂದರು. ನಮ್ಮ ದೇಶದ ರಹಸ್ಯ ಮಾಹಿತಿ ನಮ್ಮ ದೇಶದವರಿಂದಲೇ ಬೇರೆಯವರಿಗೆ ಸೋರಿ ಹೋಗುವದನ್ನು ತಡೆಗಟ್ಟುವದು ಕೌಂಟರ್ ಇಂಟೆಲಿಜೆನ್ಸ್ ಕೆಲಸ. ದಿಲ್ಲಿಯಲ್ಲಿ ಸುಮಾರು ಸೆನ್ಸಿಟಿವ್ ಕಾರ್ಯಾಚರಣೆಗಳನ್ನು ಮಾಡಲಾಯಿತು. ರಾಜತಾಂತ್ರಿಕರ  ರೂಪದಲ್ಲಿದ್ದ ಹಲವಾರು ಜನ ಪಾಕಿ ಬೇಹುಗಾರರನ್ನು, ಅವರ ಭಾರತೀಯ ಗದ್ದಾರರನ್ನು  ಮುಳ್ಳಿನಿಂದಲೇ ಮುಳ್ಳನ್ನು ತೆಗೆ ಅನ್ನುವ ರೀತಿಯಲ್ಲಿ ಕೆಲವೊಂದು ವಿಪರೀತ, ವಿಚಿತ್ರ  ಅನ್ನುವಂತಹ ಕಾರ್ಯಚರಣೆಗಳಲ್ಲಿ ಬಂಧಿಸಲಾಯಿತು. ಒಂದು ಕಾರ್ಯಾಚರಣೆ ತುಂಬ ವಿಶಿಷ್ಟವಾಗಿತ್ತು. ಒಬ್ಬ ದೊಡ್ಡ ಮಟ್ಟದ ಶಸ್ತ್ರಾಸ್ತ್ರ ವ್ಯಾಪಾರಿಯ ಪತ್ನಿಯನ್ನು ಪಾಕಿಸ್ತಾನದ ಒಬ್ಬ ರಾಜತಾಂತ್ರಿಕ ಪಟಾಯಿಸಿಬಿಟ್ಟಿದ್ದ. ಸುಮಾರು ಮಾಹಿತಿ ಮಂಚದ ಮೇಲಿನ ಸಂಭಾಷಣೆಯಲ್ಲಿಯೇ  ವಸೂಲಿ ಮಾಡಿದ್ದ. ಗಂಡನಿಗೆ ಇದರ ಖಬರ್ ಇರಲಿಲ್ಲ. IB ಅವರ ಕೇಳಿಯ ಫುಲ್ ವೀಡಿಯೊ ಮಾಡಿತು. ಮಾಡಿದ ವಿಡಿಯೋವನ್ನು ಆ ಮಹಿಳೆಗೆ ತೋರಿಸಿ ಹೊರಗೆ ರಿಲೀಸ್ ಮಾಡಿ ಬಿಡುವದಾಗಿ ಮೈಲ್ಡ್ ಆಗಿ ಆವಾಜ್ ಹಾಕಿ ಆಕೆಯನ್ನು ಆ  ಪಾಕಿಯ ಸಂಗದಿಂದ ತಪ್ಪಿಸಲಾಯಿತು. ಪಾಕಿಯನ್ನು persona-non-Grata ಅಂತ ಹೇಳಿ ದೇಶ ಬಿಟ್ಟು ಓಡಿಸಲಾಯಿತು. ಈ ರೀತಿ ಸುಮಾರು ರೋಚಕ ಕಹಾನಿಗಳನ್ನು ತಮ್ಮ ಇತಿ ಮಿತಿಯಲ್ಲಿ ರಸವತ್ತಾಗಿ ಹೇಳುತ್ತ ಹೋಗಿದ್ದಾರೆ ಧಾರ್. ರಾಷ್ಟ್ರೀಯ ಭದ್ರತೆಯನ್ನು ಹೊರಗೆ ಹಾಕುವದಿಲ್ಲ ಅಂತ ಶಪಥ ಮಾಡಿರುವದರಿಂದ, ಅದರ ಇತಿ ಮಿತಿಗಳಲ್ಲಿಯೇ ಕಥೆ ಹೇಳಬೇಕಾಗುವದು ಒಂದು ನಿರ್ಬಂಧ. ಆದರೂ ಸಾಕಷ್ಟು ಸುದ್ದಿ ಹೇಳಿದ್ದಾರೆ ಧಾರ್.

ಸಂಜಯ್ ಗಾಂಧಿ ಮತ್ತು ಅವರ ಆ ಕಾಲದ ಗಂಡಾತರಗಳ ಬಗ್ಗೆ ಸುಮಾರು ಸುದ್ದಿ ಇದೆ.

ಪಾಕಿಸ್ತಾನದ ಜೊತೆ ಆದ ಯುದ್ಧಗಳು ಮತ್ತು ಅವುಗಳಲ್ಲಿ ಬೇಹುಗಾರಿಕೆಯ ಗೆಲುವು, ಸೋಲುಗಳ ಬಗ್ಗೆಯೂ ಮಾಹಿತಿ ಇದೆ.

IB, R&AW ಸಂಸ್ಥೆಗಳ ನಡುವೆ ಇರುವ ಈರ್ಷೆ, ಮತ್ಸರಗಳ ಬಗ್ಗೆಯೂ ಒಂದು ರೀತಿಯ ದುಃಖ, ಕಳಕಳಿ ತೋರಿದ್ದಾರೆ ಧಾರ್.

ಹೀಗೆ ಹಲವಾರು ಚಿತ್ರ ವಿಚಿತ್ರ ಬೇಹುಗಾರಿಕೆ ಘಟನೆಗಳ ಬಗ್ಗೆ ಬರೆಯುತ್ತ ಹೋಗಿದ್ದಾರೆ ಧಾರ್. ಸುಮಾರು ಕಡೆ ಜನರ ನಿಜವಾದ ಹೆಸರನ್ನೇ ಬಳಸಿದ್ದಾರೆ. ಸುಮಾರು ದೊಡ್ಡ ದೊಡ್ಡ ರಾಜಕಾರಣಿಗಳ, ರಾಜಕೀಯ ವೀಲರ್-ಡೀಲರ್ಗಳ ಹೆಸರುಗಳು, ಅವರ ಕಾರ್ನಾಮೆಗಳು ತಿಳಿದು ಒಂದು ರೀತಿಯ ರೋಚಕವಾದ ಆಶ್ಚರ್ಯ ಓದುಗನಿಗೆ.

ಕೆಲವೊಂದು ಕಡೆ ತಮಗೆ ಆದ ಅನ್ಯಾಯಗಳ ಬಗ್ಗೆ ಬರೆದುಕೊಂಡರೂ ಎಲ್ಲಿಯೂ ದ್ವೇಷ ಕಾಣಿಸುವದಿಲ್ಲ. ಚನ್ನಾಗಿ ಅಧ್ಯಾತ್ಮ ಓದಿಕೊಂಡಿರುವಂತೆ ಕಾಣುವ ಧಾರ್ ಕೆಲವೊಂದು ಕಡೆ ಅದನ್ನು ಚೆನ್ನಾಗಿ ಉಪಯೋಗಿಸಿದ್ದಾರೆ.

ಬೇಹುಗಾರಿಕೆ, ರಹಸ್ಯ ಕಾರ್ಯಾಚರಣೆ ಇತ್ಯಾದಿಗಳ ಬಗ್ಗೆ ಆಸಕ್ತಿ ಇರುವವರಿಗೆ ಹಿಡಿಸಬಹುದಾದಂತಹ ಒಂದು ಒಳ್ಳೆ ಪುಸ್ತಕ.

ಅವರು ಸುಮಾರು 10-12 ಪುಸ್ತಕ ಬರೆದಿದ್ದಾರೆ. ನಾನು 1-2 ಬಿಟ್ಟು ಎಲ್ಲ ಓದಿದೆ. ಚಿಕ್ಕದಾಗಿ ಪ್ರತಿ ಪುಸ್ತಕದ  ಬಗ್ಗೆ ಒಂದೊಂದೇ ಪ್ಯಾರಗ್ರಾಫನಲ್ಲಿ  ಪರಿಚಯ ಮಾಡಿಕೊಡೋಣ ಅಂತ ಶುರು ಮಾಡಿದ್ದೆ ಈ ಲೇಖನ. ಒಂದು ಪುಸ್ತಕ ಪರಿಚಯವೇ ಇಷ್ಟುದ್ದವಾಗಿ ಹೋಯಿತು. ಉಳಿದ ಪುಸ್ತಕಗಳ ಬಗ್ಗೆ ಮತ್ತೆ ಯಾವಾಗಲಾದರೂ ಬರಿಯೋಣ. ಆದ್ರೆ ತುಂಬಾ ಒಳ್ಳೆ ಒಳ್ಳೆ ಪುಸ್ತಕಗಳಿವೆ. ಆಸಕ್ತರು ಮುದ್ದಾಂ ಓದಬಹುದು. ಅಷ್ಟು ಒಳ್ಳೆ ಲೇಖಕರು ಧಾರ್.

ಈ ಲೇಖನ ಬರೆಯುವ ಮೊದಲು "ಮಲಯ ಕೃಷ್ಣ ಧಾರ್" ಅಂತ ಗೂಗಲ್ ಮಾಡಲಿಲ್ಲ. ಈಗ ಮಾತ್ರ ಮಾಡಿದೆ. ಮೊನ್ನೆ ಮೊನ್ನೆ ಮೇ 19 ರಂದು ಅವರು ತೀರಿ ಹೋದರಂತೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಅವರ ವೆಬ್ಸೈಟ್ ಇಲ್ಲಿದೆ ನೋಡಿ. ಪುಸ್ತಕ ಅಲ್ಲದೆ ಸುಮಾರು ಲೇಖನಗಳನ್ನೂ ಬರೆದು ಹಾಕಿಕೊಂಡಿದ್ದಾರೆ. http://maloykrishnadhar.com/

No comments: