Tuesday, June 26, 2012

ಸಾಬರ ದುಬೈ ಟ್ರಿಪ್ಪು


ಕರೀಂ ಸಾಬರು ಏಕದಂ ದಿಲದಾರ್ ಆಗಿ ಬರಲಿಕತ್ತಿದ್ದರು. ಏನು ಅವರ ಭಾರಿ ಸಿಲ್ಕಿನಾ ವೇಷ ಭೂಷಣ. ಕೊರಳಾಗ ನಾಯಿ ಸರಪಳಿ ಅಷ್ಟು ದಪ್ಪ ಬಂಗಾರದ ಚೈನ್. ಕೈನಲ್ಲಿ ದಪ್ಪ ದಪ್ಪ ಬಂಗಾರದ ಕಡಗ. ವಟ್ಟಿನಲ್ಲಿ ಸಾಬರು ಮಸ್ತ ಕಾಣಲಿಕ್ಕೆ ಹತ್ತಿದ್ದರು. ಲಕ ಲಕಾ. ಜಗ ಮಗ. ಮಸ್ತ ಮಿಂಚಿಂಗ್ ಸಾಬರು.

ಏನ ಸಾಬರ..... ಭಾರಿ ಮಸ್ತ ತಯಾರ್ ಆಗಿ ಬಂದೀರಿ? ಏನು ಮಸ್ತ ಖರೀದಿ ಆದಂಗಾ ಕಾಣಸ್ತದ.

ಹೌದು ಸಾಬ್.....ದುಬೈಗೆ ಹೋಗಿದ್ವಿ....ನಾನು ಬೇಗಂ ಒಂದು ವಾರ. ಮಸ್ತ ಏಷ್ ಮಾಡಿ, ಶಾಪ್ಪಿಂಗ್ ಮಾಡಿ ಬಂದ್ವಿ ಸಾಬ್. ಮಸ್ತ ಆಯಿತು ಟ್ರಿಪ್.

ಏನು ಸಡನ್ನಾಗಿ ದುಬೈಗೆ ಟ್ರಿಪ್ ಸಾಬ್ರಾ?

ಸಾಬ್....ಅದು ನಮ್ಮ ಮಾಮೂಜಾನ್ ಛೋಟಾ ವಕೀಲ್ ಇಲ್ಲ? ಅವರು ಬಾ ಅಂದ್ರು. ಅದಕ್ಕೆ ಹೋಗಿ ಬಂದ್ವಿ ಸಾಬ್.

ಏನು!!!! ಪರಮ ಕುಖ್ಯಾತ ಅಂಡರ್ವರ್ಲ್ಡ್ ಡಾನ್  ಛೋಟಾ ಶಕೀಲ್ ನಿಮ್ಮ ಮಾಮಾನಾ? ಸ್ವಾದ್ರಮಾವ ಏನು? ಅವರು ದುಬೈ ಬಿಟ್ಟು ಕರಾಚಿಗೆ ಶಿಫ್ಟ್ ಆಗಿ ಭಾಳ್ ವರ್ಷ ಆತು ಅಂತ ಕೇಳಿದ್ದೆ. ಮತ್ತ ವಾಪಸ್ ಬಂದಾರೇನು  ದುಬೈಗೆ?

ಛೆ...ಛೆ....ಇಲ್ಲಾ ಸಾಬ್...ಛೋಟಾ ಶಕೀಲ್ ಅಲ್ಲ ಸಾಬ್....ಅವರದ್ದು ಜೊತೆ ನಮ್ಮದು ಯಾವದೂ ತಾಲುಕ್ಕಾತ್ ಇಲ್ಲ ಸಾಬ್.....ಅವ್ರ ಜೊತೆ ನಮ್ಮದು ಹೆಸರು ಹಚ್ಚಿ ಬಿಟ್ಟರೆ ದುನಿಯಾ ಭರ್ಕೆ ಪೋಲಿಸ್ ನಮ್ಮದು ಹಿಂದೆ ಬಿದ್ದು ಬಿಡ್ತಾರೆ....ಅದು ಮಾತ್ರ ಬ್ಯಾಡ ಸಾಬ್. ಇವರು ಛೋಟಾ ವಕೀಲ್ ಅಂತಾ. ಒಳ್ಳೆ ಆದಮೀ.....ಅಂತ ಮಾಮಾಗೆ ಡಿಫೆಂಡ್ ಮಾಡಿಕೊಂಡ ಕರೀಂ.

ಮತ್ತಾ....ಛೋಟಾ ವಕೀಲ್ ಯಾರು?

ನಿಮಗೆ ಗೊತ್ತಿಲ್ಲ ಕ್ಯಾ? ನಮ್ಮದು ಬಡಾ ಮಾಮೂಜಾನ್ ಬಾಂಬೆನಲ್ಲಿ ಭಾಳ ದೊಡ್ಡ ವಕೀಲ್. ಅವರಿಗೆ ಎಲ್ಲರೂ ಬಡಾ ವಕೀಲ್ ಅಂತಾರೆ. ಇವರು ಅವರ ತಮ್ಮ....ವಕೀಲ್ ಅಲ್ಲ...ಆದರೂ ಅಣ್ಣ ಪೇಮಸ್ ನೋಡಿ....ಅದಕ್ಕೆ ಛೋಟಾ ವಕೀಲ್ ಅಂತ ಇವರೂ ಪೇಮಸ್ ಆಗಿದಾರೆ.....ಇಂಡಿಯಾದಲ್ಲಿ ಲೈಫ್ ಇಲ್ಲ....ಅಣ್ಣಾದು ರೊಕ್ಕಾ ಅದೇ....ದುಬೈನಲ್ಲಿ ಇನ್ವೆಸ್ಟ್ ಮಾಡ್ಲಿ ಅಂತ ಛೋಟಾ ವಕೀಲ್ ಅವರನ್ನ ಬಡಾ ವಕೀಲ್ ದುಬೈನಲ್ಲಿ ಸೆಟ್ಟಲ್ ಮಾಡ್ಸಿದಾರೆ.....ಅಂತ ಛೋಟಾ ಮಾಮಾನ ಇಂಟ್ರೋ ಕೊಟ್ಟಾ.

ಓಹೋ....ಹಾಂಗ ಅನ್ನರಿ....ಮೊದಲು ಬಡಾ ರಾಜನ್.... ಈಗ ಛೋಟಾ ರಾಜನ್ ಇದ್ದಂಗೆ....ಅಲ್ಲೇನು?

ಸಾಬ್.....ನೋಡಿ..ನೋಡಿ...ಮತ್ತೆ ಅಂಡರ್ವರ್ಲ್ಡ್ ಹೆಸರು ತರ್ತೀರಿ.....ಎಲ್ಲಾ ಕಡೆ ಪೋಲಿಸ್ ಖಬರಿ ಮಂದಿ ಇರ್ತಾರೆ. ಇದೆಲ್ಲ ಕೇಳಿಕೊಂಡು ಹೋಗಿ ನನಗೇ  ನೀನು ಛೋಟಾ ಕರೀಂ, ಧಾರವಾಡ ಡಾನ್, ಅಂತಾ ಲೇಬಲ್ ಮಾಡಿ ಅಂದರ ಮಾಡಿ ಬ್ಯಾಕ್ನಲ್ಲಿ ಖಾರಪುಡಿ ಹಾಕಿ ಬ್ಲಾಸ್ಟ್ ಮಾಡಿದ್ರೆ ಹೋಗುದು ನಮ್ಮ ಬ್ಯಾಕ್.....ಸುಮ್ಮನೆ ಇರ್ರಿ ಸಾಬ್.

ಇಲ್ಲಪಾ....ಇನ್ನ ಮುಂದೆ  ಅಂಡರ್ವರ್ಲ್ಡ್ ಬಗ್ಗೆ ಒಟ್ಟಾ ಮಾತಾಡೋದಿಲ್ಲ.

ಚೊಲೋ ಆತ ಬಿಡ್ರೀ.....ದುಬೈಗೆ ಹೋಗಿ ಬಂದಿದ್ದು....ಏನೇನ್ ಶಾಪ್ಪಿಂಗ್ ಮಾಡಿದ್ರಿ?

ಸಾಬ್.....ಸೋನಾ, ಚಾಂದಿ, ಕಪಡಾ, ಬಚ್ಚೆ ಲೋಗೊಂಕೋ ಖಿಲೋನಾ ...ರಿಷ್ತೆದಾರ್ ಮಂದಿಗೆ ಸಣ್ಣ ಪುಟ್ಟ ತೋಫಾ.

ಅಂದ್ರಾ....ಮಕ್ಕಳನ್ನು ಕರಕೊಂಡ ಹೋಗಿರಲಿಲ್ಲ ಏನು?

ಎಲ್ಲಿದು....ಸಾಬ್?.ಮೂರು ಮದ್ವಿ ಎರಡು ತಲ್ಲಾಕನಿಂದ ಒಂಬತ್ತು ಮಂದಿ ಬಚ್ಚೆ ಅವೆ ....ಎಲ್ಲಿದೂ ಸಾಬ್?

ಅದು ಹೌದ ಬಿಡ್ರಿ .

ಮತ್ತೇನು ದುಬೈ ಕಡೆ ವಿಶೇಷ?

ಸಾಬ್ ಹೇಳೂದು ಮರ್ತೆ....ಇನ್ನೊಂದ ಖರೀದಿ ಬಗ್ಗೆ.

ಏನಪಾ  ಅದು....ಮತ್ತೇನ್ ಖರೀದಿ ಮಾಡಿ ತಂದಿ?

ಸಾಬ್..... ನಮ್ಮಾ ಮಾಮುಜಾನ್ ಹೇಳಿದ್ರು, ಇಲ್ಲಿ ದುಬೈನಲ್ಲಿ ಕಾಂಡೋಮ್ ಭಾಳ ಚೊಲೋ ಚೀಪ್ ಆಗಿ ಸಿಗ್ತದೆ ತೊಗೊಂಡು ಬಿಡು ಅಂತ.

ಸಾಬರಾ......ಏನು ಅಂತೀರಿ?.....ಅಂತ ಚೀರಿದೆ. ಆಗಿದ್ದು ಶಾಕೋ, ಝಾಟಕಾನೋ ತಿಳಿದೇ ಕರೆಂಟ  ಹೊಡೆದ ಕಾಗಿ ಆಗಿದ್ದೆ.

ಯಾಕೆ ಸಾಬ್? ದುಬೈನಲ್ಲಿ  ನಾನು ನಮ್ಮ ಬೇಗಂ ಎರಡು ಕಾಂಡೋಮ್ ಖರೀದಿ ಮಾಡೇವಿ ಅಂದ್ರೆ ನಿಮಗೆ ಯಾಕೆ ಎಲ್ಲೆಲ್ಲೋ ಖಾರ್ಪುಡಿ ಕುಟ್ಟಿದಾನ್ಗೆ ಆಗ್ತದೆ?

ನಾ ಅಂತೂ ನನ್ನ ಬಾಯಿಂದ ಆ ಹೊಲಸ ಶಬ್ದ ಹೇಳಂಗಿಲ್ಲ. ಆದರೂ ನೀ ದುಬೈಕ್ಕಾ ಹೋಗಿ ಅಲ್ಲೆ  ಅದನ್ನ ಖರೀದಿ ಮಾಡೀದಿ ಅಂದ್ರಾ ಕೆಟ್ಟ ಕುತೂಹಲ......ಅಂತ ಅಂದೆ.

ತಿಳಿಲಿಲ್ಲಾ ಸಾಬ್.

ಅಲ್ಲೋ.....ಇಲ್ಲೇ ಸಿಗತಿದ್ದಿಲ್ಲಾ ಏನು ನಿನಗ ಬೇಕಂದ್ರಾ?  ಮೆಡಿಕಲ್ ಸ್ಟೋರ್ ಗೆ ಹೋಗಿ, ಆಚಾರನ್ನ ಸನ್ನಿ ಮಾಡಿ ಬಾಜೂಕೆ ಕರದು  ಕಿವಿಯೊಳಗೆ ಗುಸು ಗುಸು ಅಂತ ಹೇಳಿದ್ರೆ, ಅವರು ಒಂದು ಹಳೆ ನ್ಯೂಸ್ ಪೇಪರ್ ನಲ್ಲಿ ಕಟ್ಟಿ ಕೊಡ್ತಾರ್ಪಾ. ಅದು ಬಿಟ್ಟು ದುಬೈಯಕ್ಕ ಹೋಗಿ ಆ ಹೊಲಸ್ ವಸ್ತು ತರೋ ಅಗತ್ಯಾ ಏನಿತ್ತು ಅಂತ?

ಕ್ಯಾ ಸಾಬ್? ನಾವು ದುಬೈನಲ್ಲಿ ಕಾಂಡೋಮ್ ತೊಗೊಂಡು ಬಿಟ್ಟಿವಿ ಅಂದ್ರೆ ಆಚಾರ್ರು ಹತ್ರಾ ತೊಗೊಬೇಕಿತ್ತು ಅಂತೀರಿ. ಆಚಾರ್ರು ಕಾಂಡೋಮ್ ಮಾರೋ ದಂಧಾ ಬ್ಯಾರೆ ಚಾಲೂ ಮಾಡ್ಯಾರೆ ಕ್ಯಾ?

ಶಾಂತಂ.....ಪಾಪಂ....ಅಂತಾ ಕಿವಿ ಮುಚ್ಚಿಗೊಂಡೆ. ಆಚಾರ್ರು ಕೇವಲ ಪ್ಹಾರ್ಮಾಸಿಸ್ಟ್ ಅನ್ನೋದಕ್ಕೆ ಮಾತ್ರಾ ಅದನ್ನು ಕಯ್ಯಿಂದ ಹಿಡಿತಿದ್ರೆ ವಿನಹಾ ಬ್ಯಾರೆ ಯಾವ ಕಾರಣಕ್ಕೂ ಅಲ್ಲ. ಇಲ್ಲಾ ಅಂದ್ರ ಅದೆಲ್ಲಾ ಅಮೇದ್ಯಕ್ಕ ಸಮಾನ ಆಚಾರ್ರಿಗೆ.

ಹ್ಞೂ....ಹೋಗ್ಲಿ ಬಿಡು.....ದುಬೈದಾಗಾ ಯಾಕ ತೊಗೊಂಡಿ?

ಸಾಬ್.....ನೋಡಿ....ನಮ್ಮದು ಫ್ಯಾಮಿಲಿ ಎಲ್ಲ ಭಾಳ ದೊಡ್ಡದು. ಹಾಂಗಾಗಿ ನಮ್ಮ ಫ್ಯಾಮಿಲಿ ಸೈಜ್ ಗೆ ಸರಿ ಆಗೋ ಸೈಜಿನದ್ದು ನೋಡಿ ನೋಡಿ ತಗೊಂಡ್ವಿ ಸಾಬ್.

ನಾ ಅಂತೂ ಫುಲ್ ಕನಫೂಸ್.

ಅಲ್ಲರೀ ಸಾಬ್ರಾ....ಫ್ಯಾಮಿಲಿ ಸೈಜ್ ದೊಡ್ಡದು ಆಗಬಾರದು ಅಂತ ಹೇಳಿ ಎಲ್ಲರೂ ಆ ವಸ್ತು ತೊಗೊಂಡು ಉಪಯೋಗ ಮಾಡ್ತಾರ್. ನೀವು ಏನೇನೋ ಅಂತೀರಲ್ಲಾ ?

ಅಲ್ಲ ನೀವು ತೊಗೊಂಡ್ರಿ,ಓಕೆ. ನಿಮ್ಮ ಹೆಂಡತಿಗೂ ಒಂದು ಕೊಡಸಿದಿರಿ ಅಂದ್ರಿ ನೋಡಿ,  ಅದು ಮಾತ್ರ ಭಾಳ್ ಆಶ್ಚರ್ಯ ಉಂಟು ಮಾಡ್ತು ನೋಡ್ರೀ.

ಯಾಕೆ ಸಾಬ್ ಝಾನಾನಾ ಲೋಗ್ ಕಾಂಡೋಮ್  ಖರೀದಿ ಮಾಡಬಾರದು ಕ್ಯಾ?

ಮಾಡಬಾರದು ಅಂತ ಏನೂ ಇಲ್ಲ....ಈಗ ಮೆಡಿಕಲ್ ಸೈನ್ಸ್ ಎಲ್ಲ ಮುಂದುವರೆದು ಅವರಿಗೇ ಬ್ಯಾರೆ ತರಹದ equivalent ವಸ್ತು ಬಂದದ  ಅಂತ...ಆ ತರಹದ್ದು ಏನರ ಖರೀದಿ ಮಾಡ್ಸಿ ಕೊಟ್ಟಿರಬೇಕು ನಿಮ್ಮ ಬೇಗಂಗೆ....ಅಲ್ಲ?

ಇಲ್ಲ....ಸಾಬ್...ಎರಡೂ ವಂದೇ ತರಹ ಕಾಂಡೋಮ್ ಇವೆ. ಎರಡೂ ಬಾಜೂ ಬಾಜೂ ಅವೇ. ಅವರ ಹೆಸರಲ್ಲಿ ಖರೀದಿ ಮಾಡಿದರೆ ಟ್ಯಾಕ್ಸ್ ಕಮ್ಮಿ. ಅದಕ್ಕೆ ಬೇಗಂ ಹೆಸರಲ್ಲಿ ತೊಗೊಂಡೆ ಸಾಬ್.

ಏನು?????!!!!! ದುಬೈ ನಲ್ಲಿ ಆ ವಸ್ತುವಿಗೂ ಸ್ಪೆಷಲ್ ಟ್ಯಾಕ್ಸ್ ಬೆನಿಫಿಟ್ ಅದ ಏನು?.....ಭಾರಿ ಆತ ಬಿಡ್ರಿ......ಅಂದೆ.

ಯಾಕೋ ಎಲ್ಲೋ ಏನೋ ಮಿಸ್ಟಿಕ್ ಅದ ಅಂತ ಅನ್ನಿಸಲಿಕ್ಕೆ ಹತ್ತಿತ್ತು. ಆದ್ರ ತಿಳಿವಲ್ಲದದು  ಆಗಿತ್ತು.

ಅಷ್ಟರಲ್ಲಿ ಕರೀಂ ಇನ್ನೊಂದು ಬಾಂಬ್ ಹಾಕಿದ. ಆ ಬಾಂಬ್ ಮಾತ್ರ ನನ್ನನು ಫುಲ್ ತಲಿಯಿಂದ ಬುಡದ ತನಕ ಹಿಡದು ಅಲುಗಾಡ್ಸಿ ನನಗ ತಲಿಗೆ ಚಕ್ರ ಬಂತು.

ಏಕದಂ ಆಲಮೋಸ್ಟ್ ಹೊಸಾದು ಸಾಬ್....ಒಬ್ಬನು ಗೋರಾ ಆದ್ಮಿ ಮೊದಲು ಅದನ್ನ ತೊಗೊಂಡಿ,  ಸ್ವಲ್ಪ ದಿವಸ ಯೂಸ್ ಮಾಡಿ ಮಾರಿ ಹೋದಾ ಸಾಬ್....ನಮಗೆ ಭಾಳ್  ಚೀಪ್ನಲ್ಲಿ ಸಿಕ್ಕತು.

ಶಾಂತಂ.....ಪಾಪಂ....ಸಾಬರ ಏನಂತ ಮಾತಾಡಲಿಕ್ಕೆ ಹತೀರಿ? ಇಂತಾ ಹೊಲಸ್ ಹೊಲಸ್ ವಸ್ತುವನ್ನ ಅದೂ  ಯೂಸ್ ಮಾಡಿ ಬಿಟ್ಟಾ ವಸ್ತು ಖರೀದಿ ಮಾಡಿ ಬಂದು ಏನು ಭಾಳ  ಹೆಮ್ಮೆಯಿಂದ ಹೇಳ್ತಿರಲ್ಲಾ.....? ನಿಮಗೆ ನಾಚಿಗಿ, ಮಾನಾ, ಮರ್ಯಾದಿ ಏನಾರಾ ಅದನೋ ಇಲ್ಲ?....ಅಂತ ಸಿಟ್ಟಿನಿಂದ ಭಾಳ ಅಸಹ್ಯ ಲುಕ್ ಕೊಟ್ಟಗೊತ್ತ ಹೇಳಿದೆ.

ಯಾಕೆ ಸಾಬ್ ಅಪ್ಸೆಟ್ ಆದ್ರಿ? ಅಲ್ಲ ದುಬೈನಲ್ಲಿ ಗೋರಾ ಆದ್ಮಿ ಕಮ್ಮಿ ದರದಾಗೆ ಕಾಂಡೋಮ್ ಮಾರ್ತಾ ಇದ್ದಾ....ಎರಡೇ ತಿಂಗಳು ಯೂಸ್ ಮಾಡಿದ್ದು....ಹೊಸಾದು ಇದ್ದಾಗೆ ಇದೆ. 50% ಗೆ ಕೊಡತೇನಿ ತಗೊಳ್ಳಿ ಅಂದ. ವಳ್ಳೆ ಇನ್ವೆಸ್ಟಮೆಂಟ್ ಅಂತ ಮಾಮುಜಾನ್ ಸಹಿತ ಹೇಳಿದ್ರು. ಅದಕ್ಕೆ ಎರಡು ಸೀ ಪೇಸಿಂಗ್ ಕಾಂಡೋಮ್ ತೊಗೊಂಡು ಬಿಟ್ಟಿವಿ ......ಕರೀಂ ತನ್ನ ಯೂಸುವಲ್ ಬೋಳೆತನದಿಂದ ಹೇಳಿ ಸರ್ಪ್ರೈಸ್ ಲುಕ್ ಕೊಟ್ಟಾ.

ಯಪ್ಪಾ....ಆ ವಸ್ತುಗಳನ್ನಾ  ಇನ್ವೆಸ್ಟಮೆಂಟ್ ಅಂತಾ ಮಂದಿ ಯಾವಾಗಿಂದ ತೊಗೊಳ್ಳೋಕೆ ಶುರು ಮಾಡಿದ್ರು!!!!? ಶಿವ....ಶಿವ....ಏನು ಕಾಲ ಬಂತಪಾ?

ಸಾಬ್....ನಾನು ಈಗ ಹೋಗಿ ಕೆಲೋ ಕಾಗದ ಪತ್ರಾ ತಯಾರಿ ಮಾಡ್ಬೇಕು. ಮಾಮೂಜಾನ್ ಗೆ ಪಾರ್ಸೆಲ್ ಮಾಡಿ ಅರ್ಜೆಂಟ್ ಆಗಿ ದುಬೈಗೆ ಕಳಿಸಬೇಕು. ಯಾಕೆ ಅಂದ್ರೆ ಅದು ಕಾಂಡೋಮ್ ನಮ್ಮ ಹೆಸರಿಗೆ ಇನ್ನೂ ರೆಜಿಸ್ಟರ್ ಆಗಿಲ್ಲ.

ಏನು ಅಂತ.....ಇಂತಹ ಸಣ್ಣ, ಹೊಲಸ್, ಯೂಸ್ ಮಾಡಿ ವಗಿಬೇಕಾಗಿದ್ದನ್ನ ಖರೀದಿ ಮಾಡಿದ್ದು ಅಲ್ಲದ ಅದನ್ನ ರೆಜಿಸ್ಟರ್ ಸಹ ಮಾಡ್ತಾನ್ ಅಂತ.....ಹೊಲಸ್ ಮಂಗ್ಯಾನ್ ಕೆ.

ಆದ್ರ ಈಗ ಫ್ಲಾಶ್ ಆತು ಏನೋ....ಇನ್ವೆಸ್ಟಮೆಂಟ್, ಬಾಜೂಕ ಬಾಜೂಕ್, ದುಬೈ, ಗೋರಾ ಮಂದಿ, 50% ರೇಟಿಗೆ....ಎಲ್ಲಾ ಸೇರಿ ಏನೋ ಒಂದು ಕಂಪ್ಲೀಟ್ ಪಿಕ್ಚರ್ ಬರಲಿಕ್ಕೆ ಹತ್ತಿತು.

ಸಾಬರ....ನೀವು ದುಬೈದಾಗಾ ಮನಿ ಅಂತೂ ಖರೀದಿ ಮಾಡಿಲ್ಲ ಅಲ್ಲಾ? ಅಥವಾ......?.....ಅಂತಾ ರಾಗಾ ಎಳದೆ.

ಯಾ ಅಲ್ಲಾ.....ಯಾ ಖುದಾ.....ನಾನು ಇಷ್ಟು ಹೊತ್ತು ಹೇಳಿದ್ದು ಏನು ಮತ್ತೆ? ಕಾಂಡೋಮ್ ಅಂದ್ರೆ ಏನು ಅಂತ ಮಾಡಿದ್ರಿ?

ಏನು ನೀನಾ ಹೇಳಪಾ ?

ಅದೇ ಸಾಬ್....ನಾವು ಇಲ್ಲಿ  ಫ್ಲಾಟ್, ಅಪಾರ್ಟಮೆಂಟ್  ಅನ್ನೋದಿಲ್ಲಾ ಕ್ಯಾ? ಅದನ್ನ ಅಲ್ಲೆ ದುಬೈನಲ್ಲಿ  ಪಾಶ್ ಆಗಿ ಕಾಂಡೋಮ್ ಅಂತಾರೆ ಸಾಬ್.....

ಹೋಗ್ಗೋ ಸಾಬರಾ....ಅದು ಕಾಂಡೋಮ್ ಅಲ್ಲರೀಪಾ.....ನಿಮ್ಮ ಕರ್ಮ....ಕಾಂಡೋಮಿನಿಯಂ (condominium) ಅಂತ ಇರಬೇಕು ನೋಡ್ರಿ.

ನೋಡಿ ಸಾಬ್....ಎಲ್ಲರೂ ಅದಕ್ಕೆ ಕಾಂಡೋಮ್ ಕಾಂಡೋಮ್ ಅಂತಾರೆ....ನಾವು ಅದನ್ನೇ ಹೇಳಿದ್ದು....ನಿಮ್ಮ ಕಿವಿ ಚೆಕ್ ಮಾಡ್ಸಿ.

ಆತರೀಪಾ ...ಮಾಡಿಸೋಣ ಚೆಕ್ ನಮ್ಮ ಕಿವಿದು ಮತ್ತ ನಿಮ್ಮ ತಲೀದು ....ಖುದಾ ಹಾಫಿಜ್ ಸಾಬರ.

ಆಯ್ತು ಸಾಬ್....ದುಬೈಗೆ ಹೋದ್ರ ನಮ್ಮ ಕೊಂಡೊದಲ್ಲೇ ಇರಬಹುದು ನೀವು....ಓಕೆ?

ಈಗ ತಿಳೀತು.....ದುಬೈನಲ್ಲಿ ರಿಯಲ್ ಇಸ್ಟೆಟ್ ಮಾರ್ಕೆಟ್ ಬಿದ್ದು, ಎಲ್ಲಾ ರೇಟ್ ಡ್ರಾಪ್ ಆಗಿ, ಮೊದಲು ಸಿಕ್ಕಾಪಟ್ಟೆ ರೊಕ್ಕಾ ಕೊಟ್ಟು ತಗೊಂಡ ಮಂದಿ ಎಲ್ಲ, ಸಿಕ್ಕ ಸಿಕ್ಕ ರೇಟಿಗೆ ಮಾರಿ ಮಾರಿ ಹೊಂಟಾರ. ಅಂತಾ ಮಂದಿ ಕಡೆ ನಮ್ಮ ಸಾಬರು ಎರಡು sea facing ಕಾಂಡೊ ತೊಗೊಂಡಾರ ಅಂತ.

ಅವರು  ಕಾಂಡೊ ಅಂತನಾ ಅಂದಿದ್ದು ನಮಗ ಕಾಂಡೋಮ್ ಅಂತ ಕೆಳಿಸ್ತೋ ಅಥವಾ ಸಾಬರು ಕಾಂಡೋಮ್ ಅಂತ ಅಂದ್ರೋ..............????.....ಇದು ಬಗಿಹರಿಲಾಗದ ಚಿದಂಬರ ರಹಸ್ಯ ಆಗಿ ಉಳಿತು.

ಈ ಇಂಗ್ಲೀಶ್ ಲಾಂಗ್ವೇಜ್ ಯಾಕಪ್ಪಾ ಇಷ್ಟ ಕನಫುಸಿಂಗ್, ಶಿವನೇ?

No comments: