Saturday, February 10, 2018

ಹನುಮನಿಗೆ ಶರಣಾದ ಶನಿ

ಶನಿಯ ದುಷ್ಪರಿಣಾಮಗಳು ದೂರವಾಗಲು ಹನುಮಂತನನ್ನು ಆರಾಧಿಸುವಂತೆ ಸಲಹೆ ಕೊಡುತ್ತಾರೆ. ವಾರದ ದಿನಗಳಲ್ಲಿ ಒಂದಾದ 'ಶನಿ'ವಾರದಲ್ಲಿ ಶನಿಯ ಹೆಸರಿದ್ದರೂ ಶನಿವಾರ ಹನುಮಂತನ ಪೂಜೆಯ ದಿನವೆಂದೇ ಹೆಚ್ಚು ಚಾಲ್ತಿಯಲ್ಲಿದೆ. ಶನಿವಾರಗಳಂದು ಹನುಮಪ್ಪನ ಗುಡಿಗಳಲ್ಲಿ ವಿಪರೀತ ರಶ್. ಅಲ್ಲವೇ? ಪರೀಕ್ಷೆ ಹತ್ತಿರವಿದ್ದರಂತೂ ಕೇಳಲೇಬೇಡಿ. ಹನುಮಂತ ಸಿಕ್ಕಾಪಟ್ಟೆ ಬ್ಯುಸಿ. :)

ಶನಿಗೂ ಹನುಮಂತನಿಗೂ ಎಲ್ಲಿಂದೆಲ್ಲಿಯ ಸಂಬಂಧ? ಕಾಟ ಶನಿ ಕೊಟ್ಟರೆ ಹನುಮಂತ ಹೇಗೆ ಪರಿಹರಿಸುತ್ತಾನೆ?

ಅದರ ಹಿಂದೊಂದು ಕಥೆ ಇದೆ.

ರಾಮಾಯಣದ ಕಾಲದಲ್ಲಿ ರಾಮಸೇತು ಕಟ್ಟುವ ಸಮಯ. ಅದೇ ಸಮಯದಲ್ಲಿ ಶನಿ ಮಹಾರಾಜ ಹನುಮಂತನ ಹೆಗಲೇರಿದ. ಹನುಮಂತನ ಜಾತಕದ ಪ್ರಕಾರ ಶನಿ ವಕ್ಕರಿಸಿಕೊಂಡಿತ್ತು. ಹಾಗಾಗಿ ಶನಿ ಹನುಮಂತನ ಬೆನ್ನೇರಿದ್ದ.

ರಾಮಸೇತು ಕಟ್ಟುವ ಕಾರ್ಯದಲ್ಲಿ ಹನುಮಂತ ಎರ್ರಾಬಿರ್ರಿ ಬ್ಯುಸಿ. ದೊಡ್ಡ ದೊಡ್ಡ ಬಂಡೆಗಲ್ಲುಗಳನ್ನು ಬೆನ್ನ ಮೇಲೆ ಹೊತ್ತುಕೊಂಡು ಬಂದು ಸಮುದ್ರಕ್ಕೆ ಎಸೆಯುತ್ತಿದ್ದ. ಸಿಕ್ಕಾಪಟ್ಟೆ ಉತ್ಸಾಹ ರಾಮಬಂಟನಿಗೆ. ಬೆನ್ನ ಮೇಲಿದ್ದ ಶನಿಯ ಪಾಡನ್ನು ಮಾತ್ರ ಕೇಳಬೇಡಿ. ಹನುಮಂತ ಹೊತ್ತು ತರುತ್ತಿದ್ದ ದೊಡ್ಡ ದೊಡ್ಡ ಬಂಡೆಕಲ್ಲುಗಳ ಕೆಳಗೆ ಸಿಕ್ಕು ನುಜ್ಜುಗುಜ್ಜಾಗಿ ಹೋಗುತ್ತಿದ್ದ. ಪಡಬಾರದ ಪಾಡು ಶನಿ ಮಹಾರಾಜನದು. ಏರಬಾರದ ಸಮಯದಲ್ಲಿ ಬೆನ್ನೇರಿಬಿಟ್ಟಿದ್ದ.

ಸ್ವಲ್ಪ ಹೊತ್ತಿನ ನಂತರ ಶನಿ ಮಹಾರಾಜ ಬಂಡೆಗಳ ಕೆಳಗೆ ಸಿಕ್ಕು ಫುಲ್ ಸ್ಕ್ರಾಪ್ ಆಗಿಬಿಟ್ಟ.

'ಯೋ, ಹನುಮ! ನಿನ್ನ ಹೆಗಲಿನಿಂದ ಕೆಳಗೆ ಇಳಿಯಬೇಕು ಮಾರಾಯ. ಒಂದು ನಿಮಿಷ ಸಮಯ ಕೊಡು. ಬಂಡೆಗಳನ್ನು ತರುವದನ್ನು ನಿಲ್ಲಿಸು ಮಾರಾಯಾ. ನನ್ನ ಮೈಯೆಲ್ಲಾ ಮುರಿದುಹೋಯಿತು ನಿನ್ನ ಬಂಡೆಗಳ ಕೆಳಗೆ ಸಿಕ್ಕು,' ಎಂದು ಅಂಬೋ ಅಂದ.

ಹನುಮಂತ ಖಡಕ್ಕಾಗಿ ಒಂದೇ ಮಾತು ಹೇಳಿದ, 'ನೀನು ನನ್ನ ಒಂದು ಮಾತಿಗೆ ಒಪ್ಪಿದರೆ ಮಾತ್ರ ನನ್ನ ಹೆಗಲಿನಿಂದ ಕೆಳಗೆ ಇಳಿಯಲು ಅನುವು ಮಾಡಿಕೊಡುತ್ತೇನೆ. ಇಲ್ಲವಾದರೆ ಅಲ್ಲೇ ಕೂತಿರು. ಏನು ಫಲ ಕೊಡಬೇಕೋ ಕೊಡು.'

ಎಲ್ಲರಿಗೂ ಪೀಡೆ ಕೊಡುವ ಶನಿಗೆ ಕೆಳಗಿಳಿದು ಎಸ್ಕೇಪ್ ಆದರೆ ಸಾಕಾಗಿತ್ತು. ಹನುಮಂತ ಏನೇ ಕೇಳಿದರೂ ಒಪ್ಪಿಕೊಳ್ಳುತ್ತೇನೆ ಅಂದ. ಹನುಮನ ಕರಾರು ಏನೆಂದು ಕೇಳಿದ ಶನಿ.

'ನನ್ನ ಭಕ್ತರಿಗೆ ನೀನು ಬಿಲ್ಕುಲ್ ತೊಂದರೆ ಕೊಡಬಾರದು,' ಎಂದು ಕೇಳಿಕೊಂಡ ಹನುಮಂತ. ಅದಕ್ಕೆ ದೂಸರಾ ಮಾತಿಲ್ಲದೆ ಒಪ್ಪಿಕೊಂಡ ಶನಿ.

ಹಾಗೆ ಭಾಷೆ ತೆಗೆದುಕೊಂಡ ಮೇಲೆಯೇ ಹನುಮಂತ ಶನಿಗೆ ತನ್ನ ಬೆನ್ನು ಬಿಟ್ಟು ಇಳಿಯಲು ಅನುವು ಮಾಡಿಕೊಟ್ಟ. ಬದುಕಿದೆಯಾ ಬಡಜೀವವೇ ಅನ್ನುವ ಮಾದರಿಯಲ್ಲಿ ಶನಿ ಹನುಮನ ಹೆಗಲಿನಿಂದ ಕೆಳಗಿಳಿದ.

ಅಂದು ಹಾಗೆ ಕೊಟ್ಟ ಮಾತಿನ ಪ್ರಕಾರ ಶನಿದೇವ ಹನುಮಂತನ ಭಕ್ತರಿಗೆ ಆದಷ್ಟು ಕಮ್ಮಿ ಕಷ್ಟ ಕೊಡುತ್ತಾನೆ ಅಂತ ನಂಬಿಕೆ.

ಇದನ್ನು ಪುರಾಣದ ಅಡುಗೂಲಜ್ಜಿ ಕಥೆ ಅಂತ ನಗಣ್ಯ ಮಾಡಿದರೂ ಇದರಲ್ಲಿ ಒಂದು ಒಳ್ಳೆ ನೀತಿ ಅಡಗಿದೆ. ಸದಾ ಒಂದಿಲ್ಲೊಂದು ಕೆಲಸ (ಒಳ್ಳೆಯ ಕೆಲಸ) ಮೈಮೇಲೆ ಎಳೆದುಕೊಂಡು, ಅದರಲ್ಲೇ ಮಗ್ನರಾಗಿರುವ ಜನರಿಗೆ ಮನೋಕ್ಲೇಶಗಳು ಕಮ್ಮಿ. ಅವರು ತಮ್ಮ ಅಚ್ಚುಮೆಚ್ಚಿನ ಕೆಲಸದಲ್ಲಿ ಅದೆಷ್ಟು ಕಳೆದುಹೋಗಿರುತ್ತಾರೆ ಅಂದರೆ ಯಾವ ಶನಿ ಬಂದು, ಎಷ್ಟೇ ವರ್ಷ ಇದ್ದು, ಏನೇ ಕಷ್ಟ ಕೊಟ್ಟು ಹೋದರೂ ಅವರಿಗೆ ಜಾಸ್ತಿ ಏನೂ ಅನ್ನಿಸುವದಿಲ್ಲ. ಹಾಗಂತ ಅವರ ಪಾಲಿನ ಕರ್ಮಫಲ ಪ್ರಾಪ್ತಿಯಾಗದೇ ಹೋಗಿರುತ್ತದೆ ಅಂತಲ್ಲ. ಆದರೆ ಅವರಿಗೆ ಒಂದು overriding ಧ್ಯೇಯ, ಗುರಿ ಇರುವದರಿಂದ ಶನಿಯಿಂದ ಬರುವ so called ಕಷ್ಟಗಳು ಅವರನ್ನು ಧೃತಿಗೆಡಿಸುವದಿಲ್ಲ. ರಾಮಸೇತು ಕಟ್ಟುವದು ಅಂದರೆ ಒಂದು ಒಳ್ಳೆ ಕೆಲಸಕ್ಕೆ ಶ್ರದ್ಧೆಯಿಂದ ಕಮಿಟ್ ಆಗುವದು. ಬಂಡೆಗಲ್ಲುಗಳನ್ನು ಎತ್ತಿಕೊಂಡು ಬರುವದು ಅಂದರೆ ಇಲ್ಲ ಸಲ್ಲದ ವಿಚಾರ ಮಾಡದೇ ಏಕಾಗ್ರತೆಯಿಂದ ಕಠಿಣ ಪರಿಶ್ರಮ ಪಡುವದು.

ಖಿನ್ನತೆಯನ್ನು ದೂರಮಾಡಲು work therapy ಅಂತೇನೋ ಇದೆ ಅಂತ ನೆನಪು. ಅದರ ಹಿಂದಿನ ಐಡಿಯಾ ಇದೇ. ಕೆಲಸವಿಲ್ಲದೇ ಕೂತರೆ ಶನಿ ಸೀದಾ ಮನಸ್ಸಿಗೇ ಬಂದು ಒಂದು ಹುಳ ಬಿಡುತ್ತಾನೆ. ಆ ಹುಳವೇ ಇಡೀ ಮನಸ್ಸನ್ನು ಆವರಿಸಿಕೊಂಡು ಮನುಷ್ಯ ಪಡಬಾರದ ಪಾಡು ಪಡುತ್ತಾನೆ. ಅದೇ ಒಂದು ಗುರಿಯಿರುವ ಮನುಷ್ಯನಿಗೆ ಅದರ ಹತ್ತು ಪಟ್ಟು ಹೆಚ್ಚು ಕಷ್ಟ ಬಂದರೂ ಅವನ ಗುರಿ ಅಷ್ಟು ಖಡಕ್ ಆಗಿರುವದರಿಂದ ಅವನಿಗೆ ಅವೆಲ್ಲ ಸಣ್ಣ ಕಿರಿಕಿರಿ ಅನ್ನಿಸಬಹುದೇ ವಿನಃ  debilitating blockers ಆಗುವದಿಲ್ಲ.

Most of our so called problems are self inflicted and due to wrong thinking. A change in perspective is what is required to address most of the problems. Sometimes addressing a problem means simply making peace with the problem. Some problems just can't be solved! No use fretting about such problems.

ನೋಡುವ ದೃಷ್ಟಿ ಬದಲಾದರೆ ಸೃಷ್ಟಿ ತಂತಾನೇ ಬದಲಾಗುತ್ತದೆ ಅನ್ನುವ ಮಾತು ನಿಜ. 

ಸೃಜನಶೀಲ, ಕ್ರಿಯಾಶೀಲ ಜೀವನ ಜಾರಿಯಲ್ಲಿರಲಿ!

ರಾಮಾಯಣದಲ್ಲಿ ಬರುವ ಅನೇಕ ಕಥೆಗಳು ಗೊತ್ತಿದ್ದರೂ ಈ ಶನಿ versus ಹನುಮಂತನ ಕಥೆ ಗೊತ್ತಿರಲಿಲ್ಲ. ಗೊತ್ತಾಗಿದ್ದಕ್ಕೆ ಸಂತಸ.

ಶನಿವಾರವೇ ಇದನ್ನು ಬರೆಯುವಂತಾದದ್ದು ಶನ್ಮಂತನ (ಶನಿ+ಹನುಮಂತ) ಜಾಯಿಂಟ್ ಕೃಪೆ ಅನ್ನಲೇ!? :)

ಹ್ಯಾಪಿ ಶನಿವಾರ! :)

Saturday, February 03, 2018

'ಭಜಿ' ಗೋವಿಂದಂ

ಮೊನ್ನೆ ಮೋದಿ ಸಾಹೇಬರು casual ಆಗಿ ಹೇಳಿದ ಮಾತೊಂದು ದೊಡ್ಡ ವಿವಾದಕ್ಕೆ ಕಾರಣವಾಯಿತು.

'ನಿಮ್ಮ ಆಫೀಸಿನ ಎದುರಲ್ಲಿ ಪಕೋಡಾ ಕರಿದು ಮಾರುವವ ಕೂಡ ದಿನಕ್ಕೆ ೨೦೦ ರೂಪಾಯಿ ಗಳಿಸುತ್ತಾನೆ. ಅದು ಉದ್ಯೋಗವಲ್ಲವೇ?' ಅಂತ ಟೀವಿ ಸಂದರ್ಶನದಲ್ಲಿ ಕೇಳಿದರು. ಸಂದರ್ಶಕ ಉದ್ಯೋಗಸೃಷ್ಟಿಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕೊಟ್ಟ ಉತ್ತರ.

ಪಕೋಡಾ ಅಥವಾ ಭಜಿ (ಬಜೆ) ಕರಿದು ಮಾರುವದೇ ಬೆಸ್ಟ್ ಉದ್ಯೋಗ ಅಂತ ಹೇಳಿದವರಲ್ಲಿ ಮೋದಿ ಸಾಹೇಬರು ಮೊದಲನೆಯವರಲ್ಲ.

ನಮ್ಮ ಆದಿ ಶಂಕರಾಚಾರ್ಯರು ಅದನ್ನೇ ಅಲ್ಲವೇನ್ರಿ ಹೇಳಿದ್ದು? 'ಮೋಹ ಮುದ್ಗರಂ'ನಲ್ಲಿ ಏನಂತ ಹೇಳಿದರು?

ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೆ
ಸಂಪ್ರಾಪ್ತೆ ಸನ್ನಿಹಿತೆ ಕಾಲೇ ನಹಿ ನಹಿ ರಕ್ಷತಿ ಡುಕೃಮ್ಕರಣೆ
ಭಜ ಗೋವಿಂದಂ ಭಜ ಗೋವಿಂದಂ

ಅರ್ಥ ಏನಪ್ಪಾ ಅಂದರೆ... ನಮ್ಮ ಹೈಸ್ಕೂಲ್ ಸಂಸ್ಕೃತ ಮಾಸ್ತರ್ ಎಸ್.ಎಸ್. ಹೆಗಡೆ ಸರ್ ಹೇಗೆ ಸಂಸ್ಕೃತ ಹೇಳಿ ಕೊಡುತ್ತಿದ್ದರೋ ಅದೇ ಮಾದರಿಯಲ್ಲಿ ವಿವರಿಸುತ್ತೇನೆ.
 
ಭಜ ಗೋವಿಂದಂ ಭಜ ಗೋವಿಂದಂ = ಗೋವಿಂದನೆಂಬ ಭಜಿ ಗೋವಿಂದನೆಂಬ ಭಜಿ

**ಭಜ ಇದರ ತತ್ಸಮ ತದ್ಭವ ಭಜಿ ಅಂದ್ರೆ ಪಕೋಡಾ, ಬಜೆ, ಬುರ್ಬುರಿ, ವಡೆ, ಗೋಳಿಬಜೆ ಇತ್ಯಾದಿ. 

ಮೂಢಮತೆ = ದಡ್ಡ ಮಂಗ್ಯಾನ್ಮಗ

ಸಂಪ್ರಾಪ್ತೆ ಸನ್ನಿಹಿತೆ ಕಾಲೇ = ಪ್ರಾಯ ಬಂದು, ಪ್ರಾಯ ಮುಗಿಯುವ ಕಾಲ ಬಂದರೂ ನೌಕರಿ ಸಿಗಲಿಲ್ಲ ಅಂದರೆ. ನೌಕರಿ ಸಿಗದೇ ಹಿತವಲ್ಲದ ಸನ್ನಿ ಹಿಡಿದರೆ.

ನಹಿ ನಹಿ ರಕ್ಷತಿ ಡುಕೃಮ್ಕರಣೆ = ನೀ ಕಲಿತ ವ್ಯಾಕರಣ (ಡುಕೃಮ್ಕರಣೆ) ನಿನ್ನನ್ನು ರಕ್ಷಿಸುವದಿಲ್ಲ. ಅರ್ಥಾತ್ ಪುಸ್ತಕದ ವಿದ್ಯೆ ವೇಸ್ಟ್.

ಹಾಂಗಾಗಿ.....

ಗೋವಿಂದನೆಂಬ ಭಜಿ ಕರಿದು ಜೀವನೋಪಾಯ ಹುಡುಕಿಕೋ....

ವಾಕ್ಯಾರ್ಥ ನೋಡಿಯಾಯಿತು. ಈಗ ಭಾವಾರ್ಥ.

ಪುಸ್ತಕದ ವಿದ್ಯೆ, ಗಳಿಸಿದ ಡಿಗ್ರಿ ಯಾವದೂ ಉಪಯೋಗಕ್ಕೆ ಬರುವದಿಲ್ಲ.
ಗೋವಿಂದ ಭಜಿ (ಪಕೋಡಾ) ಕರಿದು ಜೀವನ ಸಾಗಿಸು!

ಆದಿ ಶಂಕರರ ಪರಮೋನ್ನತ ಕೃತಿ 'ಮೋಹ ಮುದ್ಗರಂ' ಶ್ಲೋಕವನ್ನು ಹೀಗೂ ಅರ್ಥೈಸಲು ಕೇವಲ ನಮ್ಮಂತ ಯಬಡ ಹಾದಿ ಶಂಕರನಿಗೆ ಮಾತ್ರ ಸಾಧ್ಯ!

ಆದಿ ಶಂಕರಾ! ಹಾದಿ ಶಂಕರಾ! ಬೀದಿ ಶಂಕರಾ! ಗಲ್ಲಿ ಶಂಕರಾ!

***

ಜಗತ್ತಿನಲ್ಲಿ ಎಲ್ಲೂ ಮೊದಲಿನ ಅನುಪಾತದಲ್ಲಿ ಉದ್ಯೋಗಸೃಷ್ಟಿ ಆಗುವದಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ automation ಬಂದು ಬೇಕಾಗುವ ಕೆಲಸಗಾರರ ಸಂಖ್ಯೆ ಕಮ್ಮಿಯಾಗುತ್ತಲೇ ಹೋಗುತ್ತದೆ. ಬೇರೆ ಬೇರೆ ಸ್ಕಿಲ್ ಇರುವ ಕೆಲಸಗಾರರು ಬೇಕಾಗುತ್ತಾರೆ. ಅದೂ ಕಮ್ಮಿ ಸಂಖ್ಯೆಯಲ್ಲಿ. ಹಾಗಾಗಿ ೧೦೦ ಕೋಟಿಯ ಪ್ರಾಜೆಕ್ಟಿಗೆ ಮೊದಲು ೧೦೦೦ ಜನ ಬೇಕಾಗಿದ್ದರೆ ಈಗ ೭೦೦ ಜನ ಸಾಕು.

ಮತ್ತೆ ಸರ್ಕಾರದ ಕೆಲಸ ಉದ್ಯೋಗಸೃಷ್ಟಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಿಕೊಡುವದೇ ವಿನಃ ತಾವೇ ಉದ್ದಿಮೆಗಳನ್ನು ಸ್ಥಾಪಿಸಿ ಕೆಲಸ ಕೊಡುವದಲ್ಲ. ಆ ಮಾಡೆಲ್ ವಿಫಲವಾಗಿದ್ದನ್ನು ಭಾರತವೂ ಸೇರಿ ಎಲ್ಲ ಕಡೆ ನೋಡಿದ್ದೇವೆ. ಈಗ disinvestment ಅಂತ ಸರ್ಕಾರಿ ಸ್ವಾಮ್ಯದ ನಷ್ಟದ ಕಂಪನಿಗಳನ್ನು ಖಾಸಗೀಕರಣ ಮಾಡುತ್ತಿರುವದು ಯಾವ ಕಾರಣಕ್ಕೆ? ಮೊದಲು ಸೋಪಿನಿಂದ ಹಿಡಿದು ಬಿಸ್ಕೀಟಿನವರೆಗೆ ಎಲ್ಲವನ್ನೂ ಸರ್ಕಾರಿ ಕಂಪನಿಗಳೇ ಉತ್ಪಾದಿಸಿ ಸಿಕ್ಕಾಪಟ್ಟೆ 'ಲಾಭ' ಗಳಿಸಿದ್ದನ್ನು ನೋಡಿದ್ದೇವೆ! ಸಾಕು. :)

ಪಕೋಡಾ ಮಾರಿ ದಿನಕ್ಕೆ ೨೦೦ ರೂಪಾಯಿ ಗಳಿಸುವದು ಅಂದರೆ ತಿಂಗಳಿಗೆ ಕೇವಲ ೬,೦೦೦ ರೂಪಾಯಿ ಮಾತ್ರ. ಅಷ್ಟರಲ್ಲಿ ಜೀವನ ಹೇಗೆ ಸಾಧ್ಯ ಅಂತ ಕೇಳಿದರೆ ಅದಕ್ಕೆ ಉತ್ತರ - ಸ್ವಾಮೀ, ಒಬ್ಬನ ಸಂಪಾದನೆಯಲ್ಲಿ ನಾಲ್ಕು ಜನರ ಸಂಸಾರ ನಡೆಯುವ ಕಾಲ ಎಂದೋ ಹೋಗಿದೆ. ಈಗ ಎಲ್ಲರೂ ದುಡಿಯಬೇಕು. ಇದು ಹೊಸದೇನೂ ಅಲ್ಲ. ವಿಶ್ವದ ಎಲ್ಲ ಕಡೆ ಹಾಗೇ ಇದೆ. ಇಲ್ಲಿ ಅಮೇರಿಕಾದಲ್ಲಿ ಶಾಲಾ ಮಕ್ಕಳೂ ಸಹ ಪೇಪರ್ ಹಾಕಿ, ಅಂಗಡಿಯಲ್ಲಿ ಸಾಮಾನು ಕಟ್ಟಿ ಕಾಸು ಸಂಪಾದಿಸುತ್ತಾರೆ. ರಜೆಯಲ್ಲಿ ಕಂಪೆನಿಗಳಲ್ಲಿ internship ಮಾಡಿ ಅಮೂಲ್ಯ ಅನುಭವದ ಜೊತೆ ಕಾಸು ಸಂಪಾದಿಸುತ್ತಾರೆ. ಪಕೋಡಾ ಮಾರಲಿ ಅಥವಾ ಮತ್ತೇನೋ ಮಾಡಲಿ, ವೃತ್ತಿಗೆ ಮಾರ್ಯಾದೆ ಸಿಗಬೇಕು. Dignity of labor. Dignity for any productive work.

ಕೃಷಿ ಪ್ರಾಧಾನ್ಯ ದೇಶಗಳಲ್ಲಿ ಸಹ ಮೊದಲೆಲ್ಲ (ಈಗಲೂ ಸಹ) ಮನೆಯ ಎಲ್ಲ ಸದಸ್ಯರೂ ಅವರವರ ತಾಕತ್ತಿಗೆ ತಕ್ಕಂತೆ ಕೃಷಿ ಚಟುವಟಿಕೆಗಳಲ್ಲಿ  ತೊಡಗಿಸಿಕೊಳ್ಳುತ್ತಿದ್ದರು. ಮನೆಯಲ್ಲಿ ಅಡುಗೆ ಕೆಲಸ ಮುಗಿಸಿದ ಮಹಿಳೆಯರು ತೋಟ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. ಮಕ್ಕಳೂ ಅಷ್ಟೇ. ಸಣ್ಣ ಪುಟ್ಟ ಕೆಲಸ ಮಾಡಿ ಪಾಲಕರಿಗೆ ಸಹಾಯ ಮಾಡುತ್ತಿದ್ದರು. ಅಷ್ಟೂ ಜನ ಕೂಡಿ ದುಡಿದಾಗ ಮಾತ್ರ ಜೀವನರಥ ಸಾಗುತ್ತಿತ್ತು.

ಎಲ್ಲರೂ ಪಕೋಡಾ ಮಾರಿಯೇ ಜೀವನ ಸಾಗಿಸಬೇಕು ಅಂತಲ್ಲ. ಸಾಗಿಸಿದರೂ ತಪ್ಪೇನಿಲ್ಲ. ನಮ್ಮ ಧಾರವಾಡದಲ್ಲಿ ದೊಡ್ಡ ದೊಡ್ಡ ಹೋಟೆಲ್, ಬಾರ್ ಇತ್ಯಾದಿಗಳನ್ನು ನಡೆಸುವ ಶೆಟ್ಟಿ ಸಮುದಾಯದವರಲ್ಲಿ ನಮ್ಮ ವಯಸ್ಸಿನ ಸುಮಾರು ಜನ ಇಂಜಿನಿಯರಿಂಗ್, MBA, ಹೀಗೆ ಬೇರೆ ಬೇರೆ ಡಿಗ್ರಿ ಮಾಡಿಕೊಂಡಿದ್ದಾರೆ. ಬೇಕೆಂದಿದ್ದರೆ ಅವರಿಗೆ ನೌಕರಿ ಜರೂರ್ ಸಿಗುತ್ತಿತ್ತು. ಆದರೂ ಅವರು ನೌಕರಿ ಹುಡುಕಿಕೊಂಡು ಹೋಗಿಲ್ಲ. ತಲೆತಲಾಂತರಗಳಿಂದ ಹೋಟೆಲ್ ಉದ್ಯಮ ಅವರ ಕೈ ಹಿಡಿದಿದೆ. ಅದರಲ್ಲೇ ಉನ್ನತಿ ಸಾಧಿಸುತ್ತ ಸಾಗಿದ್ದಾರೆ.

ತಪ್ಪೇನಿದೆ?

Wednesday, January 31, 2018

ರಾಮನಂತಹ ಮಗನಿದ್ದಾಗಲೇ ದುಃಖ ತಪ್ಪಲಿಲ್ಲ...

ಸ್ವಾಮಿ ಅನುಭವಾನಂದ ಸರಸ್ವತಿಗಳು ಆಗಾಗ ಹೇಳುತ್ತಿರುತ್ತಾರೆ. ಅವರ ಪ್ರವಚನಗಳನ್ನು ಕೇಳಲು ಬರುವ ಜನ ಸದಾ ಹೇಳಿಕೊಳ್ಳುವ ಕಿರಿಕಿರಿ, ತೋಡಿಕೊಳ್ಳುವ ದುಃಖ ಯಾರ ಬಗ್ಗೆ ಅಂದರೆ - ಮಕ್ಕಳ ಬಗ್ಗೆ! ಮಕ್ಕಳು ಅಂದರೆ ಮಗ, ಮಗಳು, ಸೊಸೆ, ಅಳಿಯ, ಮೊಮ್ಮಕ್ಕಳು ಎಲ್ಲರೂ ಬಂದರು ಅದರೊಳಗೆ.

ಮಕ್ಕಳು ಅದೆಷ್ಟೇ ವಯಸ್ಸಿನವರಿರಲಿ, ಅದೆಷ್ಟೇ ಒಳ್ಳೆಯವರಿರಲಿ ಅಥವಾ ಕೆಟ್ಟವರಿರಲಿ, ತಂದೆತಾಯಿಗಳ ಆಕ್ಷೇಪಣೆಗಳೇ ಮುಗಿಯುವದಿಲ್ಲ. ಮಕ್ಕಳ ಬಗ್ಗೆ ಹೇಳಿಕೊಂಡು, ‘ಸ್ವಾಮೀಜಿ, ಮಕ್ಕಳು ಹೀಗಿದ್ದಾರೆ. ಹಾಗಿದ್ದಾರೆ. ಹಾಗೆ ಮಾಡುತ್ತಾರೆ. ಹೀಗೆ ಮಾಡುತ್ತಾರೆ. ಮನಸ್ಸಿಗೆ ನೆಮ್ಮದಿಯಿಲ್ಲ. ಪರಿಹಾರ ಸೂಚಿಸಿ,’ ಎಂದು ದುಃಖಿಸಿ, ಪರಿಹಾರ ಬಯಸುತ್ತಾರಂತೆ.

ಸ್ವಾಮೀಜಿ ಅಂತಹ ಭಕ್ತಾದಿಗಳಿಗೆ ಒಂದು ಕಥೆ ಹೇಳುತ್ತಾರೆ. ಅದರ ಮೂಲಕ ನೀತಿಪಾಠ ಮಾಡುತ್ತಾರೆ.

ರಾಮಾಯಣದ ದಶರಥ ಮಹಾರಾಜನಿಗೆ ಮಕ್ಕಳಿರಲಿಲ್ಲ. ಆದರೆ ಆತ ಸುಮ್ಮನೆ ಕೂಡಲಿಲ್ಲ. ಇಲ್ಲದ ಇರುವೆ ಬಿಟ್ಟುಕೊಂಡ. ಕಂಡಕಂಡ ಋಷಿಮುನಿಗಳನ್ನು ನೋಡಿದ. ಅವರನ್ನು ಕಾಡಿದ, ಬೇಡಿದ. ಅವರು ಹೇಳಿದರು - 'ಹೋಗಿ ಪುತ್ರಕಾಮೇಷ್ಟಿ ಯಾಗ ಮಾಡು. ಮಕ್ಕಳಾಗುತ್ತವೆ.' ಏನೇನೋ ತೊಂದರೆ ತೆಗೆದುಕೊಂಡು ಪುತ್ರಕಾಮೇಷ್ಟಿ ಯಾಗ ಮಾಡಿದ. ಅದರಂತೆ ಮೂವರು ಪತ್ನಿಯರಿಗೂ ಮಕ್ಕಳಾದವು. ಅವೂ ಎಂತಹ ಮಕ್ಕಳು ಅಂತೀರಿ? ದೈವಸ್ವರೂಪಿ ಮಕ್ಕಳು. ಹಿರಿಯ ಮಗನಾದ ರಾಮನಂತೂ ದೇವರ ಅವತಾರ. ಅದು ದಶರಥನಿಗೆ ಆಗ ಗೊತ್ತಿರಲಿಕ್ಕಿಲ್ಲ. ಆದರೆ ಭಗವಾನ್ ವಿಷ್ಣು ಖುದ್ದಾಗಿ ರಾಮನ ಅವತಾರದಲ್ಲಿ ಧರೆಗಿಳಿದಿದ್ದ. ದಶರಥನ ಮಗನಾಗಿ ಜನಿಸಿದ್ದ.

ಮುಂದೇನಾಯಿತು ಅಂತ ಗೊತ್ತೇ ಇದೆ. ರಾಮನಿಗೆ ಪಟ್ಟಾಭಿಷೇಕ ಮಾಡಬೇಕೆಂದು ದಶರಥ ನಿರ್ಧರಿಸಿದ. ಪಟ್ಟಾಭಿಷೇಕದ ಹಿಂದಿನ ದಿನ ಕಿರಿಯ ಪತ್ನಿ ಕೈಕೇಯಿ ರಗಳೆ ತೆಗೆದಳು. ಅವಳ ಮಗನಾದ ಭರತನಿಗೆ ಪಟ್ಟ ಕಟ್ಟುವಂತೆ ಮತ್ತು ರಾಮನನ್ನು ಕಾಡಿಗೆ ಅಟ್ಟುವಂತೆ ದಶರಥನಿಗೆ ಗಂಟು ಬಿದ್ದಳು. ದಶರಥ ಹಿಂದೊಮ್ಮೆ ಆಕೆಗೆ ಒಂದು ಭಾಷೆ ಕೊಟ್ಟಿದ್ದ. ಅದನ್ನು ನೆನಪು ಮಾಡಿಕೊಟ್ಟಳು. ದಶರಥ ಮಾನಸಿಕವಾಗಿ ಜರ್ಜರಿತನಾಗಿಹೋದ. ಹಾಸಿಗೆ ಹಿಡಿದುಬಿಟ್ಟ. ಒಂದು ಕಡೆ ಹಿರಿಯ ಮತ್ತು ಪ್ರೀತಿಪಾತ್ರನಾದ ಮಗನಿಗೆ ಪಟ್ಟಕಟ್ಟುವಾಸೆ. ಇನ್ನೊಂದು ಕಡೆ ಕೈಕೇಯಿಗೆ ವಚನ ಕೊಟ್ಟಿದ್ದಾನೆ. ವಚನ ಪಾಲಿಸಲಿಲ್ಲ ಅಂದರೆ ವಚನಭ್ರಷ್ಟನಾಗುವ ಆತಂಕ. ಅನಾರೋಗ್ಯಕ್ಕೆ ಮತ್ತೇನು ಕಾರಣಬೇಕು?

ರಾಮನಿಗೆ ವಿಷಯ ತಿಳಿಯಿತು. ತಂದೆ ಚಿಕ್ಕಮ್ಮನಿಗೆ ಕೊಟ್ಟಿದ್ದ ವಚನವನ್ನು ಈಡೇರಿಸಲು ಮುಂದಾದ. ಪಟ್ಟವನ್ನು ತ್ಯಜಿಸಿದ. ಕಾಡಿಗೆ ಹೋಗಲು ಸಿದ್ಧನಾದ. ದಶರಥ ಮಹಾರಾಜ ಮತ್ತೂ ದುಃಖಿತನಾದ. ತಾನು ವಚನಭ್ರಷ್ಟನಾದರೂ ಚಿಂತೆಯಿಲ್ಲ, ರಾಮ ಮಾತ್ರ ಕಾಡಿಗೆ ಹೋಗಬಾರದು ಎಂದು ಪರಿಪರಿಯಾಗಿ ರಾಮನನ್ನು ವಿನಂತಿಸಿಕೊಂಡ. ರಾಮ ತಂದೆಗೆ ಏನೋ ಒಂದು ರೀತಿ ಸಮಾಧಾನ ಹೇಳಿ ವನವಾಸಕ್ಕೆ ಹೋಗೇಬಿಟ್ಟ. ಪುತ್ರನ ಅಗಲುವಿಕೆಯಿಂದ ಮತ್ತೂ ದುಃಖಿತನಾದ ದಶರಥನ ಆರೋಗ್ಯ ಜಾಸ್ತಿ ಹಾಳಾಗಿ ಆತ ದೇವರಪಾದ ಸೇರಿಕೊಂಡ.

ಹೀಗೆ ಕೊನೆಗೆ ಪುತ್ರನ ಮೇಲಿನ ಅತಿಯಾದ ಪಾಶದಿಂದಲೇ ದಶರಥ ಮರಣ ಹೊಂದಿದ. ಅದೆಷ್ಟು ಹಂಬಲಿಸಿ, ಅದೆಷ್ಟು ಕಷ್ಟಪಟ್ಟು, ಅದೇನೇನೋ ಯಾಗ ಮಾಡಿ ರಾಮನಂತಹ ಮಗನನ್ನು ದಶರಥ ಪಡೆದಿದ್ದ. ಆದರೆ ಕೊನೆಗೆ ಅತ್ಯಂತ ಹೆಚ್ಚಿನ ದುಃಖ ರಾಮನ ಮೂಲಕವೇ ಬಂದಿದ್ದು ವಿಪರ್ಯಾಸ. ರಾಮ ಬೇಕಂತಲೇ ದುಃಖ ಕೊಟ್ಟ ಅಂತಲ್ಲ. ದಶರಥನ ಭಾಗ್ಯದಲ್ಲಿರುವ ದುಃಖ ರಾಮನ ಮೂಲಕ ಬಂತು. ರಾಮ ಕಾರಣನಿಮಿತ್ತ ಮಾತ್ರ.

ದಶರಥ ಹೇಳಿದಂತೆ ಕೇಳಿ ರಾಮ ವನವಾಸಕ್ಕೆ ಹೋಗುವ ನಿರ್ಧಾರ ಬದಲಿಸಿ ರಾಜ್ಯದಲ್ಲೇ ಉಳಿದಿದ್ದರೆ ಏನಾಗುತ್ತಿತ್ತು? ತಾತ್ಕಾಲಿಕವಾಗಿ ದಶರಥನ ಸಂಕಟ ಕಮ್ಮಿಯಾಗುತ್ತಿತ್ತು. ಮಗ ಕಣ್ಣೆದುರೇ ಇದ್ದಾನೆ ಅಂತ ಸಮಾಧಾನ ಪಟ್ಟುಕೊಳ್ಳುತ್ತಿದ್ದನೇನೋ. ಆದರೆ ಕೈಕೇಯಿಗೆ ಕೊಟ್ಟ ವಚನಕ್ಕೆ ಕೈಯೆತ್ತಿ ವಚನಭ್ರಷ್ಟನಾದ ಪಾಪಪ್ರಜ್ಞೆ ಕಾಡುತ್ತಿತ್ತು. ಅದರ ಕೊರಗು ಹೆಚ್ಚಾಗಿ ಮತ್ತೇನೋ ಆಗುತ್ತಿತ್ತು. ತಂದೆ ದಶರಥ ವಚನಭ್ರಷ್ಟನಾಗುವ ಮಹಾಪಾಪದಿಂದ ಪಾರಾಗಲಿ ಎಂದು ಆಶಿಸಿ ವನವಾಸಕ್ಕೆ ಹೋಗುವದೇ ಸರಿಯಾದ ನಿರ್ಧಾರವೆಂದುಕೊಂಡ ಪುರುಷೋತ್ತಮ ರಾಮ ತಂದೆ ಅದೆಷ್ಟೇ ಗೋಗರೆದರೂ ಹಿಂತಿರುಗಿ ನೋಡದೇ ಕಾಡಿಗೆ ಹೋಗಿಬಿಟ್ಟ.

ದೇವರಾದ ರಾಮನಂತಹ ಮಗನಿದ್ದಾಗಲೂ ತಂದೆಯಾದ ದಶರಥನಿಗೆ ಮಗನಿಂದ ದುಃಖ ತಪ್ಪಲಿಲ್ಲ. ದೇವರ ಅವತಾರವಾದ ಮಗನ ಮೂಲಕವೇ ವಿಧಿ ಕರ್ಮಫಲವನ್ನು ಉಣ್ಣಿಸಿತು.

ಇನ್ನು ನಿಮ್ಮ ಮಕ್ಕಳು. ಸಾಧಾರಣ ಹುಲುಮಾನವರು. ದೇವರಲ್ಲ. ಅವರಿಂದ ದುಃಖ ಬಂದರೆ ನೀವೇಕೆ ಕೊರಗುವಿರಿ? ನಿಮ್ಮ ಕರ್ಮದಲ್ಲಿ ಹಾಗಾಗಬೇಕೆಂದಿದ್ದರೆ ತಪ್ಪಿಸಲಾಗುವದಿಲ್ಲ. ಮಕ್ಕಳು ನಿಮಿತ್ತ ಮಾತ್ರ. ಹಾಗಾಗಿ ಮಕ್ಕಳ ಮೇಲೆ ಅದೆಷ್ಟೇ ವ್ಯಾಮೋಹವಿದ್ದರೂ, ಮುಂದೊಂದು ದಿನ ಅವರ ಕಾರಣದಿಂದ ದುಃಖ ಉಂಟಾದರೆ ದಶರಥನ ಕಥೆ ನೆನಪುಮಾಡಿಕೊಳ್ಳಿ. ಮಕ್ಕಳನ್ನು ಪಡೆಯಲು ನೀವೂ ಅಷ್ಟೇ ಕಸರತ್ತು ಮಾಡಿರಬಹುದು. ಇವತ್ತಿನ ಚಿತ್ರವಿಚಿತ್ರ ರೀತಿಯಲ್ಲಿ ಮಕ್ಕಳನ್ನು ಮಾಡಿಕೊಳ್ಳುವ ವಿಧಾನಗಳು ಯಾವ ಪುತ್ರಕಾಮೇಷ್ಟಿ ಯಾಗಕ್ಕೂ ಕಮ್ಮಿಯಿಲ್ಲ. ನಂತರ ೨೦-೨೫ ವರ್ಷಗಳ ಕಾಲ ಏನೇನೋ ತೊಂದರೆಯನ್ನು ಅನುಭವಿಸಿ ಮಕ್ಕಳನ್ನು ಪೋಷಿಸಿರಬಹುದು. ಇಷ್ಟೆಲ್ಲಾ ಆದ ಮೇಲೂ ಮಕ್ಕಳಿಂದ ದುಃಖ ಉಂಟಾದರೆ ‘ದೇವರನ್ನೇ ಮಗನಾಗಿ ಪಡೆದ ದಶರಥನ ಕೊನೆಯ ದುಃಖ ಮಗನ ಮೂಲಕವೇ ಬಂತು. ನಮ್ಮದೇನು ಮಹಾ?’ ಅಂದುಕೊಂಡು ಸಮಾಧಾನ ಮಾಡಿಕೊಳ್ಳಿ.

ಆಧಾರ: ಶ್ರೀ ಅನುಭವಾನಂದ ಸರಸ್ವತಿಗಳ ಪ್ರವಚನ.

Sunday, January 28, 2018

ಅಪಕ್ವ ಸಾತ್ವಿಕತೆಯ ಅಡ್ಡ ಪರಿಣಾಮಗಳು

'ಎಂಥ ಜನರು ಇವರೆಲ್ಲಾ!? ಹಗಲು ರಾತ್ರಿಯೆನ್ನದೆ ಕುಡಿಯುತ್ತಾರೆ! Disgusting!'

'ಹಾಗಾದ್ರೆ ನೀವು ಕುಡಿಯೋದಿಲ್ಲವೇ?'

'ಹಾಗಲ್ಲ. ಆದರೆ....'

'ಏನು ಆದರೆ???'

'ರಾತ್ರಿ ಮಾತ್ರ ಕುಡಿಯುತ್ತೇನೆ.'

ಇವರ ಉತ್ತರ ಕೇಳಿದವ ಹೊಡೆದ ಶಾಕ್ ನಿಂದ ಸುಧಾರಿಸಿಕೊಳ್ಳುತ್ತಿದ್ದರೆ, ಇವರ ಮಾತು ಮತ್ತೆ ಅದೇ....'ಎಂಥ ಜನರು ಇವರೆಲ್ಲಾ!? ಹಗಲು ರಾತ್ರಿಯೆನ್ನದೆ ಕುಡಿಯುತ್ತಾರೆ! Disgusting!'

ಮತ್ತೊಂದು ಉದಾಹರಣೆ.

'ಎಂಥ ಜನರು ಇವರೆಲ್ಲಾ!? ದಿನಾ ಮಾಂಸ ಸೇವಿಸುತ್ತಾರೆ! Disgusting!'

'ನೀವು ಮಾಂಸ ಸೇವಿಸುವದಿಲ್ಲವೇ?'

'ಹಾಗಲ್ಲ. ಆದರೆ....'

'ಏನು ಆದರೆ???'

'ದಿನ ಬಿಟ್ಟು ದಿನ ಮಾತ್ರ ಮಾಂಸ ಸೇವಿಸುತ್ತೇನೆ!'

ಇವರ ಉತ್ತರ ಕೇಳಿದವ ಹೊಡೆದ ಶಾಕಿನಿಂದ ಸುಧಾರಿಸಿಕೊಳ್ಳುತ್ತಿದ್ದರೆ, ಇವರ ಮಾತು ಮತ್ತೆ ಅದೇ....'ಎಂಥ ಜನರು ಇವರೆಲ್ಲಾ!? ದಿನಾ ಮಾಂಸ ಸೇವಿಸುತ್ತಾರೆ! Disgusting!'

ಈ ಉದಾಹರಣೆಗಳನ್ನು ಸ್ವಾಮಿ ಅನುಭವಾನಂದಜೀ ಆಗಾಗ ಕೊಡುತ್ತಿರುತ್ತಾರೆ. ಹೊಸದಾಗಿ ಅಧ್ಯಾತ್ಮದೆಡೆಗೆ ಸೆಳೆಯಲ್ಪಟ್ಟು, ಸ್ವಲ್ಪ ಸಾಧನೆ ಮಾಡಿ, ಸಾತ್ವಿಕತೆ ಸ್ವಲ್ಪ ಜಾಸ್ತಿಯಾದ ಜನ ಇವರು. ಇವರ ಸಾತ್ವಿಕತೆ ಒಂದು ಅರ್ಧ ಡಿಗ್ರಿ ಏರಿತೋ ಇಲ್ಲವೋ ಶುರು ಇವರ ಉದ್ರಿ ಉಪದೇಶ ಮತ್ತು ಬೇರೆಯವರ ಬಗ್ಗೆ ಟೀಕೆ ಟಿಪ್ಪಣಿ.

ಬೇಕೇ ಇಂತಹ ಕಿರಿಕಿರಿ ವರ್ತನೆ? ತೆಪ್ಪಗೆ ಮುಚ್ಚಿಕೊಂಡು ನಿಮ್ಮ ಸಾಧನೆ ನೀವು ಮಾಡಿಕೊಂಡು ಹೋಗೋಕೆ ಏನು ಧಾಡಿ? ನಿಮಗೆ ಒಗ್ಗಿದ ಪಥ್ಯ ಎಲ್ಲರಿಗೂ ಒಗ್ಗಬೇಕು ಅಂತೇನೂ ಇಲ್ಲವಲ್ಲ?

ಇಂತವರು ನೆನಪಿಡಬೇಕಾದ ವಿಷಯ ಅಂದರೆ, ನೀವು ಈಗಷ್ಟೇ ಸ್ವಲ್ಪ ಸಾತ್ವಿಕರಾಗಿದ್ದೀರಿ. ಎಷ್ಟೋ ಜನ ಎಂದಿನಿಂದಲೋ ನಿಮಗಿಂತ ಜಾಸ್ತಿ ಸಾತ್ವಿಕರಾಗಿಯೇ ಇದ್ದಾರೆ. ನಿಮ್ಮ ಬದಲಾವಣೆಗಳು ಸ್ವಾಗತಾರ್ಹ. ಆದರೆ ಇಷ್ಟಕ್ಕೇ ಬೇರೆಯವರನ್ನು ಟೀಕಿಸಲು ಹೋಗಬೇಡಿ. ಸಾಧನೆಯ ಹಾದಿಯಲ್ಲಿ ಕ್ರಮಿಸಬೇಕಾದ ದಾರಿ ಇನ್ನೂ ಸಾಕಷ್ಟಿದೆ.

ಇನ್ನೂ ಕೆಲವರ ಬಾಹ್ಯದ ಆಡಂಬರ ನೋಡಲು ಅಸಹನೀಯ. ಸೀದಾ ಸಾದಾ ಇದ್ದವರು ತಲೆ ಬೋಳಿಸಿ, ಜುಟ್ಟು ಬಿಟ್ಟುಕೊಂಡು ಆಫೀಸಿಗೆ ಬಂದುಬಿಡುತ್ತಾರೆ. ಅದು ತಪ್ಪಲ್ಲ. ಆದರೆ ವಿರೋಧಾಭಾಸ. ನೀವು ಅಧ್ಯಾತ್ಮದ ಹಾದಿಯಲ್ಲಿ ನಡೆದಿರುವ ಸಂಗತಿ ಇನ್ನೊಬ್ಬರಿಗೆ ಅಷ್ಟು ಢಾಳಾಗಿ ಗೊತ್ತಾಗಬೇಕು ಅಂತೇನಿದೆ? ಇದೊಳ್ಳೆ ಹೊಸ ಐಫೋನ್ ತೆಗೆದುಕೊಂಡವ ಎಲ್ಲರಿಗೂ ತೆಗೆದು ತೆಗೆದು ತೋರಿಸಿದ ಹಾಗಾಗಿಯಿತು. ಜನ್ಮದಲ್ಲೇ ನಾಮ, ವಿಭೂತಿ ಧರಿಸದವರು ಸಿಕ್ಕಾಪಟ್ಟೆ ಲಾಂಗಾಗಿ ಮೇಕ್ಅಪ್ ಮಾಡಿಕೊಂಡಂತೆ ನಾಮ, ಭಸ್ಮ ಧರಿಸಿ ಓಡಾಡುತ್ತಾರೆ. ಇನ್ನು ರುದ್ರಾಕ್ಷಿ ಮಾಲೆ, ಇತರೆ ಮಾಲೆಗಳ ಮಾತು ಬೇರೆ ಬಿಡಿ.

ಇವನ್ನೆಲ್ಲ ಮೀರಿದ್ದು ತಮ್ಮ ನಾಲ್ಕಾಣೆ ಸಾತ್ವಿಕತೆಯನ್ನು ಮಾನದಂಡವನ್ನಾಗಿ ಉಪಯೋಗಿಸಿ ಇನ್ನೊಬ್ಬರನ್ನು judge ಮಾಡುವದು.

ಇವೆಲ್ಲ ಅಪಕ್ವ ಸಾತ್ವಿಕತೆಯ ಅಡ್ಡ ಪರಿಣಾಮಗಳು ಎಂದೆನಿಸಿತು.

ಸ್ವಾಮಿ ಅನುಭವಾನಂದಜೀ ಅವರಿಗೆ ನಮೋ ನಮಃ!


Wednesday, January 17, 2018

ಬಲರಾಮ & ಎಡರಾಮ

ಶಿಷ್ಯ: ಅಣ್ಣನಿಗೆ ಬಲರಾಮ ಅಂತ ಹೆಸರಿಟ್ಟು, ತಮ್ಮನಿಗೆ ಕೃಷ್ಣ ಅಂತೇಕೆ ಹೆಸರಿಟ್ಟರು?

ಗುರು: ಎಡರಾಮ ಅಂತಿಟ್ಟಿದ್ದರೆ ತುಂಬಾ ಎಡಬಿಡಂಗಿಯಾಗಿರುತ್ತಿತ್ತು!

**

ಮನುಷ್ಯ: ದೇವರೇ, ಹುಡುಗಿಯರು ಎಷ್ಟು ಚೆನ್ನಾಗಿರುತ್ತಾರೆ. ಆದರೆ ಹೆಂಡತಿಯರು ಮಾತ್ರ ಯಾಕೆ ಹೀಗೆ? ಸದಾ ಜೀವ ತಿನ್ನುತ್ತಾರೆ.

ದೇವರು: ಭಕ್ತ, ಕೇಳು. ಹುಡುಗಿ ನನ್ನ ಸೃಷ್ಟಿ. ಹೆಂಡತಿ ನಿನ್ನ ಸೃಷ್ಟಿ!

ವಿ. ಸೂ: ಹುಡುಗರು, ಗಂಡಂದಿರು ಅಂತ ಕೂಡ ಬದಲಾಯಿಸಿಕೊಳ್ಳಬಹುದು.

ಕೇವಲ ಜೋಕ್ ಎಂದು ಕಡೆಗಣಿಸದಿರಿ. ಇದರಲ್ಲಿ ಅದ್ವೈತದ ಪರಮ ಸತ್ಯ ಅಡಗಿದೆ. ಪರಮಸತ್ಯವಾದ ಬ್ರಹ್ಮನ (brahman) ಮೇಲೆ ಮಾಯೆಯ ಪರದೆ ಬೀಳುವದೇ ಎಲ್ಲ ದುಃಖಗಳಿಗೆ ಕಾರಣ. ಹುಡುಗಿ ಸತ್ಯ. ಅಂತಹ ಸತ್ಯದ ಮೇಲೆ ಹೆಂಡತಿ ಎಂಬ ಮಾಯೆಯನ್ನು via ನಾಮ ರೂಪದ ಮೂಲಕ ಕೊಟ್ಟುಕೊಳ್ಳುವದೇ ಸಕಲ ದುಃಖಗಳಿಗೆ ಕಾರಣ.

Superimposing unreality over the reality.

**

ಶಿಷ್ಯ: ಎಲ್ಲಾ ಬಿಟ್ಟು ಅರ್ಜುನನ ಜೊತೆ ಭೀಕರ, ಭಯಾನಕ ಯುದ್ಧಭೂಮಿಗೆ ಏಕೆ ಬಂದ ಕೃಷ್ಣ ಪರಮಾತ್ಮ?

ಗುರು: ಮನೆಯಲ್ಲಿ ೧೬,೦೦೦ ಹೆಂಡತಿಯರಿರುವ ಪುಣ್ಯಾತ್ಮ ಆ ಕೃಷ್ಣ ಪರಮಾತ್ಮ. ಅಂತಹ ಮನೆ ಹೇಗಿರಬಹುದು ಅಂತ ವಿಚಾರ ಮಾಡು. ಅದಕ್ಕೆ ಹೋಲಿಸಿದರೆ ಯುದ್ಧಭೂಮಿಯೇ ಎಷ್ಟೋ ಪಾಲು ಮೇಲು, ಎಷ್ಟೋ ಶಾಂತಿಯುತ ಅಂದುಕೊಂಡು ಯುದ್ಧಭೂಮಿಗೆ ಬಂದಿರಬಹುದು.

ಟಿಪ್ಪಣಿ: ನಿಜವಾಗಿ ವಿಚಾರ ಮಾಡಬೇಕಾದ ವಿಷಯ ಏನೆಂದರೆ - ಬ್ರಹ್ಮಚಾರಿ ಹನುಮಂತ ಯಾಕೆ ಯುದ್ಧಭೂಮಿಗೆ ಬಂದ??? ಭೀಮ ಸೌಗಂಧಿಕಾ ಪುಷ್ಪ ತರಲು ಹೋದಾಗ ಭೀಮನಿಗೆ ಆಶ್ವಾಸನೆ ಕೊಟ್ಟಿದ್ದ, 'ನಾನು ಬಂದು ಅರ್ಜುನನ ರಥದ ಮೇಲಿರುವ ಧ್ವಜದಲ್ಲಿ ಸ್ಥಾಪಿತನಾಗುತ್ತೇನೆ. ಹುರಿದುಂಬಿಸುತ್ತೇನೆ.' ಅದರ ಪ್ರಕಾರ ಭಿಡೆಗೆ ಕಟ್ಟುಬಿದ್ದು ಬಂದಿದ್ದನೋ ಹೇಗೆ? ಅಥವಾ ಸಂಸಾರಿಗಳು ಹೇಗೆ ಹೊಡೆದಾಡಿಕೊಂಡು ಎಲ್ಲರೂ ನಾಶವಾಗುತ್ತಾರೆ ಎಂಬುದನ್ನು ನೋಡಲು ಬಂದಿದ್ದನೋ? :)

**

ಗಂಡನನ್ನು 'ಈ ಕಾರಣ'ಕ್ಕಾಗಿ ಸದಾ ಬಯ್ಯುವವರು ಈ ಲೇಖನ ಓದಿಬಿಡಿ. ನಾ ಮಾತ್ರ ಅದರ ಬಗ್ಗೆ ಬರೆಯಲಾರೆ! ಸಿವಾsss! ಇನ್ನೂ ಏನೇನು ಸಂಶೋಧನೆಗಳು ಬರಲಿವೆಯೋ!